spot_img
spot_img

ಭಕ್ತರ ಪಾಲಿನ ಭಾಗ್ಯದೇವತೆ ಗುಡ್ಡಾಪೂರ ದಾನಮ್ಮ ದೇವಿ

Must Read

- Advertisement -

ಗುಡ್ಡಾಪುರದಲ್ಲಿ ಪ್ರತಿ ವರ್ಷ ಕಾರ್ತಿಕ ಮಾಸದ ಕೊನೆಗೆ ಛಟ್ಟಿ ಅಮವಾಸೆಯಂದು (ಡಿಸೆಂಬರ್ ೪)ಜರಗುವ ಜಾತ್ರೆ ವಾರದ ಮೊದಲು ಜನರ ಸಂಭ್ರಮ ಹೇಳತೀರದ್ದು ಚಕ್ಕಡಿಗಳಲ್ಲಿ ವಿವಿಧ ವಾಹನಗಳಲ್ಲಿ ಬಂದು ಇಲ್ಲಿ ತಂಗುವ ಮೂಲಕ ದೇವಿಗೆ ಪೂಜೆ ಸಲ್ಲಿಸುವರು ಇಲ್ಲಿ ಭಕ್ತರು ಮತ್ತು ದೇವಾಲಯದವರು ನಿರ್ಮಿಸಿದ ವಸತಿಗೃಹಗಳಿವೆ ಜೊತೆಗೆ ಪ್ರತಿ ದಿನ ದೇವಾಲಯದಿಂದ ಪ್ರಸಾದ ವ್ಯವಸ್ಥೆಯಿದ್ದು ಬಂದು ಹೋಗುವ ಭಕ್ತರಿಗೆ ಎಲ್ಲ ರೀತಿಯ ಅನುಕೂಲವಿರುವ ಸ್ಥಳವಿದಾಗಿದೆ.

ಶಿವಯೋಗ ಸಾಧನೆ.ದಾಸೋಹ.ಕಾಯಕ ನಿಷ್ಠೆ, ಸತ್ಯ ಧರ್ಮ, ನ್ಯಾಯ ಮೊದಲಾದ ಅಷ್ಟಗುಣಗಳನ್ನು ಅಳವಡಿಸಿಕೊಂಡು ಬದುಕಿದ ಶರಣೆ ಗುಡ್ಡಾಪೂರ ದಾನಮ್ಮ. ೧೨ ನೇ ಶತಮಾನದಲ್ಲಿ ಧರ್ಮಜಾಗೃತಿಗಾಗಿ ದೇಶಸಂಚಾರ ಮಾಡುತ್ತ ಲೋಕಕಲ್ಯಾಣಕ್ಕಾಗಿ ಪಾರಮಾರ್ಥದ ಹಾದಿ ಹಿಡಿದು ಗುಡ್ಡಾಪುರದಲ್ಲಿ ನೆಲೆಸಿದ ದಾನಮ್ಮ ಭಕ್ತರ ಪಾಲಿನ ವರದಾನಿ.

“ಲಿಂಗಮ್ಮ“ ಎಂದು ಕರೆಯಲ್ಪಡುತ್ತಿದ್ದ ಮಹಾಮಹಿಮೆ ದಾನಮ್ಮದೇವಿ ಹುಟ್ಟಿದ್ದು ಮಹಾರಾಷ್ಟ್ರ ರಾಜ್ಯದ ಸಾಂಗ್ಲಿ ಜಿಲ್ಲೆಯ ಜತ್ ತಾಲೂಕಿನ ಉಮರಾಣಿ ಎಂಬ ಗ್ರಾಮದಲ್ಲಿ. ಉಮರಾಣಿಯ ಅಕ್ಕಸಾಲಿಗ ಮನೆತನದ ಅನಂತರಾಯ ಮತ್ತು ಶಿರಸಮ್ಮ ದಂಪತಿಗಳಿಗೆ ಬಹಳ ಕಾಲ ಮಕ್ಕಳಾಗಿರಲಿಲ್ಲ. ಈ ಕುರಿತಾಗಿ ದಂಪತಿಗಳು ವೀರಮಲ್ಲಯ್ಯನ ದೇವಸ್ಥಾನಕ್ಕೆ ಹೋಗಿ ಶೃದ್ಧಾಭಕ್ತಿಗಳಿಂದ ಬೇಡಿಕೊಳ್ಳುವರು.

- Advertisement -

ಅವರ ಕನಸಿನಲ್ಲಿ ಬಂದ ಮಲ್ಲಯ್ಯ “ನಿಮಗೆ ಸಾಕ್ಷಾತ್ ಪಾರ್ವತಿಯಂಥ ಮಗು ಜನಿಸುವುದು.ಅವಳು ಸಾಮಾನ್ಯ ಮಕ್ಕಳಂತೆ ಅಳುವುದಿಲ್ಲ ಹಾಗೂ ಲಿಂಗಧಾರಣೆಯಾಗುವವರೆಗೂ ಹಾಲನ್ನಾಗಲಿ ನೀರನ್ನಾಗಲಿ ಸೇವಿಸುವುದಿಲ್ಲ” ಎಂದು ಹೇಳಿದಂತೆ ಕನಸು ಕಾಣಲು ಮುಂದೆ ಕ್ರಿ.ಶ.೧೧೪೬ ರಲ್ಲಿ ತಮಗೆ ಜನಿಸಿದ ಹೆಣ್ಣುಮಗು ವೀರಮಲ್ಲಯ್ಯನ ಮಾತಿನಂತೆ ನಡೆಯತೊಡಗಿತು. ಆಗ ಆ ಮಗುವಿಗೆ ಲಿಂಗಧಾರಣೆ ಮಾಡಿಸುವರು. ಸಂಗಮೇಶ ಗುರುಗಳಿಂದ “ಲಿಂಗಮ್ಮ”ಎಂದು ಹೆಸರು ಪಡೆದ ಈಕೆ ಉಳಿದ ಬಾಲಕಿಯರಂತೆ ಆಟವಾಡದೇ ದೇವರ ಪ್ರಾರ್ಥನೆ ಮತ್ತು ಪೂಜೆಯಲ್ಲಿ ಕಾಲಕಳೆಯತೊಡಗಿದಳು.

ದೃಷ್ಟಿಯೋಗವನ್ನು ಕಲಿಯುವ ಇಚ್ಛೆಯಿಂದ ಗುರು ಸಿದ್ದರಾಮರರನ್ನು ಭೇಟಿಯಾಗುವ ಲಿಂಗಮ್ಮ ಸಿದ್ದರಾಮರು ಈ ವಿದ್ಯೆಯನ್ನು ಒಳ್ಳೆಯ ಕಾರ್ಯಕ್ಕೆ ವಿನಿಯೋಗಿಸುವ ಕುರಿತು ವಚನ ಪಡೆದು ವಿದ್ಯೆಯನ್ನು ಕಲಿಸುತ್ತಾರೆ. ಸಿದ್ದರಾಮರಿಗೂ ಬಸವಣ್ಣನವರಿಗೂ ಇರುವ ಪರಿಚಯದ ಮೂಲಕ ಲಿಂಗಮ್ಮ ಕೂಡ ಅನುಭವ ಮಂಟಪಕ್ಕೆ ಹೊರಡುವ ವಿಚಾರ ಮಾಡುತ್ತಾಳೆ.ತನ್ನ ಸ್ವಗ್ರಾಮ ಉಮರಾಣಿಯಿಂದ ಕಲ್ಯಾಣಕ್ಕೆ ಹೊರಡಲುನುವಾದ “ಲಿಂಗಮ್ಮ”ಳಿಗೆ ಮಾರ್ಗಮಧ್ಯದಲ್ಲಿ ಗುಡಿಸಲೊಂದರಲ್ಲಿ ತಂಗುವಳು ಆ ಗುಡಿಸಲಿಲ್ಲಿ ರೋಗಗ್ರಸ್ಥ ಮಹಿಳೆಯನ್ನು ಕಂಡು ಮುಂದೆ ಸಂಚಾರ ಸ್ಥಗಿತಗೊಳಿಸಿ ಅವಳ ಸೇವೆ ಮಾಡುತ್ತ ಅವಳ ಪರಿಸ್ಥಿತಿ ತಿಳಿದುಕೊಳ್ಳುವ ಮೂಲಕ ಆ ಮಹಿಳೆಯ ಗಂಡ ಅವಳನ್ನು ತೊರೆದ ಸಂಗತಿ ಅರಿತು ಆ ವ್ಯಕ್ತಿಯನ್ನು ಕರೆತಂದು ದಂಪತಿಗಳನ್ನು ಒಟ್ಟಿಗೆ ಮಾಡುವ ಮೂಲಕ ರೋಗಗ್ರಸ್ಥ ಮಹಿಳೆಯ ರೋಗವನ್ನು ಕೂಡ ಗುಣಮುಖ ಮಾಡುವಳು.ಇವಳ ಈ ಸೇವೆಯನ್ನು ಕಂಡ ಆ ದಂಪತಿಗಳು ಕೆಲವು ದಿನ ತಮ್ಮ ಜೊತೆ ಇರುವಂತೆ ಲಿಂಗಮ್ಮಳನ್ನು ಕೋರಿದಾಗ ಅವರ ಜೊತೆ ಉಳಿದು ಅಲ್ಲಿನ ಜನರ ಸೇವೆ ಮಾಡುವಳು.

- Advertisement -

ಲಿಂಗಮ್ಮನ ಸೇವೆ ಗಮನಿಸಿದ್ದ ಮೋಳಿಗೆ ಮಾರಯ್ಯನವರು ತಮ್ಮ ಸೌದೆ ಕಾಯಕವನ್ನು ಮಾಡುತ್ತ ಲಿಂಗಮ್ಮ ಇಲ್ಲದ ಸಮಯದಲ್ಲಿ ಅವರ ಮನೆಗೂ ಸೌದೆ ಇಟ್ಟು ಹೋಗುವುದನ್ನು ಮಾಡುವರು.ತಮ್ಮ ಮನೆಯಲ್ಲಿ ಸೌದೆ ಇರುವುದನ್ನು ಕಂಡ ಲಿಂಗಮ್ಮ ಇದನ್ನು ಯಾರು ಇಡುತ್ತಿರಬಹುದು ಎಂದು ಸೂಕ್ಷ್ಮವಾಗಿ ಪರಿಶೀಲಿಸಿ ಮೋರಯ್ಯನವರನ್ನು ಕಂಡು ಮಾತನಾಡುವಳು. ಅವರು ಜನಸೇವೆ ಮಾಡುವ ನಿಮಗೆ ನನ್ನಿಂದಲೂ ಕೂಡ ಸ್ವಲ್ಪವಾದರೂ ಸೇವೆ ಈ ರೀತಿಯಾಗಲಿ ಎಂದು ಮಾಡುತ್ತಿರುವುದಾಗಿ ತಿಳಿಸಿದರು. ಅಷ್ಟೇ ಅಲ್ಲ ಈ ವಿಚಾರವನ್ನು ಮೋಳಿಗೆ ಮಾರಯ್ಯನವರು ಅನುಭವ ಮಂಟಪದಲ್ಲಿ ಖುದ್ದಾಗಿ ಬಸವಣ್ಣನವರಿಗೆ ತಿಳಿಸಿದಾಗ ಸ್ವತಃ ಲಿಂಗಮ್ಮಳ ಸೇವಾ ಮನೋಭಾವನೆಯನ್ನು ನೋಡಲು ಬರುವರು. ಅಲ್ಲಿ ಇವಳ ದಾನ ಪರಂಪರೆ ಕಂಡು ಸಾಮಾನ್ಯ ಹಳ್ಳಿಗಾಡಿನ ರೈತಾಪಿ ಹೆಣ್ಣು ಮಗಳೊಬ್ಬಳು ಸಿರಿವಂತರು,ರಾಜಾಧಿರಾಜರು,ಮಾಡದಂತಹ ನಿಸ್ವಾರ್ಥ ಮನೋಭಾವ. ಜನರು ಅವಳಿಗೆ ಕೊಟ್ಟ ವಸ್ತುಗಳನ್ನು ದಾನ ರೂಪದಲ್ಲಿ ಇತರರಿಗೆ ಕೊಡುವ ಮೂಲಕ ತನ್ನಲ್ಲಿ ಏನನ್ನೂ ಉಳಿಸಿಕೊಳ್ಳದೇ ಬದುಕುತ್ತಿರುವ ಪರಿ ಕಂಡು ಮೂಕವಿಸ್ಮಿತರಾಗಿ “ದಾನಮ್ಮ” ಎಂಬ ಬಿರುದು ಕೊಟ್ಟು ಆಶೀರ್ವದಿಸುತ್ತಾರೆ. ಅಂದಿನಿಂದ “ದಾನಮ್ಮ”ಹೆಸರಿನಿಂದ ಸೇವೆ ಮಾಡತೊಡಗಿದ “ಲಿಂಗಮ್ಮ”ನಿಗೆ ಬಸವಣ್ಣನವರು ಕಲ್ಯಾಣಕ್ಕೆ ಬರುವಂತೆ ತಿಳಿಸಿ ಹೊರಟು ಹೋದರು.

ಯಾವ ಅನುಭವ ಮಂಟಪಕ್ಕೆ ಹೋಗಿ ಬಸವಣ್ಣನವರನ್ನು ಕಾಣಬೇಕೆಂದು ಉಮರಾಣಿಯಿಂದ ಹೊರಟು ಬಂದಿದ್ದಳೋ ಲಿಂಗಮ್ಮ ಅವಳಿಗೆ ಸ್ವತಃ ಬಸವಣ್ಣನವರೇ ಇವಳಿದ್ದ ಸ್ಥಳಕ್ಕೆ ಬಂದು ಇವಳ ಸೇವಾ ಮನೋಭಾವನೆಯನ್ನು ಕಂಡು “ದಾನಮ್ಮ” ಎಂದು ಕರೆದು ಕಲ್ಯಾಣಕ್ಕೆ ಬರುವಂತೆ ಕೇಳುವಂತಾದ ಘಟನೆ ದಾನಮ್ಮನವರ ಸಂತಸಕ್ಕೆ ಪಾರವೇ ಇಲ್ಲದಂತೆ ಮಾಡಿತು. ಆ ಪ್ರಕಾರ ದಾನಮ್ಮ ಕಲ್ಯಾಣಕ್ಕೆ ಪ್ರಯಾಣ ಬೆಳೆಸಿ ಅಲ್ಲಿಯೂ ಕೂಡ ಶರಣರ ಸೇವೆಗೈಯುತ್ತ ಅನುಭವ ಮಂಟಪದಲ್ಲಿ ತನಗಿದ್ದ ಸಂದೇಹಗಳನ್ನು ಶರಣರಲ್ಲಿ ಪ್ರಶ್ನಿಸುತ್ತ ಸೂಕ್ತ ಉತ್ತರಗಳನ್ನು ಪಡೆಯುತ್ತಾಳೆ.

ಇಂಥ ಸಂದರ್ಭ ಅಲ್ಲಮಪ್ರಭುಗಳು ದಾನಮ್ಮನಿಗೂ ವಚನ ರಚನೆಯಲ್ಲಿ ತೊಡಗುವಂತೆ ಸಲಹೆ ನೀಡುವರು. ಆಗ ದಾನಮ್ಮ “ಎಲ್ಲ ಶರಣರೂ ವಚನ ರಚನೆಯಲ್ಲಿ ತೊಡಗಿದರೆ ವಚನಗಳ ಕಂಪನ್ನು ದೇಶದಾದ್ಯಂತ ಹರಡುವ ಕಾರ್ಯ ನನಗಿರಲಿ” ಎಂದು ನಯವಾಗಿ ಉತ್ತರಿಸುವಳು. ಅಲ್ಲಿಯೇ ಅಕ್ಕಮಹಾದೇವಿಯನ್ನು ಸಂಪರ್ಕಿಸುವಳು. ತನ್ನ ವಿವಾಹದ ಬಗೆಗಿದ್ದ ಅನುಮಾನಗಳನ್ನು ದಾನಮ್ಮ “ಅಕ್ಕ”ನಲ್ಲಿ ಪರಿಹರಿಸಿಕೊಳ್ಳುವಳು. ಸಾಂಸಾರಿಕ ಜೀವನವನ್ನು ಅನುಭವ ಮುಖೇನ ಅರ್ಥ ಮಾಡಿಕೊಳ್ಳುವ ಹಾಗೂ ಅದರಲ್ಲಿರುವ ಲೋಪದೋಷಗಳನ್ನು ತಿಳಿಯುವುದು ಸ್ವತಃ ವಿವಾಹವಾದಾಗ ಎಂಬ ವಿಚಾರಕ್ಕೆ ಬಂದು ಕಲ್ಯಾಣದಿಂದ ಮರಳಿ ಉಮರಾಣಿಗೆ ಮರಳುವ ದಾನಮ್ಮ ತನ್ನ ಪೋಷಕರಲ್ಲಿ ವಿವಾಹವಾಗುವ ವಿಚಾರವನ್ನು ವ್ಯಕ್ತಪಡಿಸುವಳು.

ಆಗ ಉಮರಾಣಿಯಿಂದ ೧೨ ಮೈಲು ದೂರದಲ್ಲಿರುವ ಪರಮ ಶಿವಭಕ್ತ ಸಂಗಮನಾಥ ಎಂಬುವರೊಂದಿಗೆ ದಾನಮ್ಮಳ ವಿವಾಹ ಕ್ರಿ.ಶ ೧೧೬೪ ರಲ್ಲಿ ಶರಣರ ಸನ್ನಿಧಿಯಲ್ಲಿ ಜರುಗಿತು. ಸತಿಪತಿಗಳೊಂದಾದ ಭಕ್ತಿ ಹಿತವಪ್ಪುದು ಶರಣಂಗೆ ಎಂಬಂತೆ ದಾನಮ್ಮ ಮತ್ತು ಸಂಗಮೇಶ್ವರ ಇಬರೂ ಜಂಗಮಸೇವೆಗೈಯುತ್ತ ಜೀವನ ನಡೆಸತೊಡಗಿದರು.

ಮುಂದೆ ಕಲ್ಯಾಣದಲ್ಲಿ ಕ್ರಾಂತಿಯಾಗಿ ಬಸವೇಶ್ವರರು ಕೂಡಲಸಂಗಮದಲ್ಲಿ ಐಕ್ಯರಾದ ನಂತರದ ದಿನಗಳಲ್ಲಿ ದಾನಮ್ಮ ಶರಣ ಕುಲಕ್ಕೆ ಬಂದೊದಗಿದ ಆಪತ್ತನ್ನು ಕಂಡು ದಿಗ್ಬ್ರಾಂತಳಾಗುತ್ತಾಳೆ. ತಾನು ಕೂಡ ಮನೆ-ಮಠ ತೊರೆದು ವಚನ ಸಾಹಿತ್ಯದ ಕಂಪನ್ನು ಹರಡಲು ಹಾಗೂ ಶಿವಭಕ್ತಿ ಪ್ರಸಾರ ಕಾರ್ಯದಲ್ಲಿ ತೊಡಗಲು ಟೊಂಕಕಟ್ಟಿ ನಿಲ್ಲುತ್ತಾಳೆ. ಈ ಎಲ್ಲ ಕಾರ್ಯಗಳಲ್ಲಿಯೂ ಪತಿ ಸಂಗಮನಾಥರೂ ಕೂಡ ದಾನಮ್ಮಳಿಗೆ ಬೆನ್ನೆಲುಬಾಗಿ ನಿಲ್ಲುತ್ತಾರೆ. ನಂತರ ಮನೆಮಠ ತೊರೆಯುವ ನಿರ್ಧಾರ ಪ್ರಕಟಿಸಿದಾಗ ಮೊದಲು ಅತ್ತೆ-ಮಾವ ಬೇಡವೆನ್ನುವರು. ನಂತರ ದಾನಮ್ಮ ತನ್ನ ಉದ್ದೇಶ ತಿಳಿಸಿದಾಗ ಅವಳ ದೂರದೃಷ್ಟಿ ಕಂಡು ಒಪ್ಪಿಗೆ ಸೂಚಿಸುವರು. ಹೀಗೆ ದೇಶ ಸಂಚಾರ ಪತಿಯೊಡನೆ ಕೈಗೊಂಡ ದಾನಮ್ಮ ತಾನು ಹೋದ ಕಡೆಯಲ್ಲೆಲ್ಲ ಶರಣ ಸಂದೇಶ ಸಾರುತ್ತ ದಾಸೋಹ ನಡೆಸುತ್ತ ಗುಡ್ಡಾಪುರಕ್ಕೆ ಬರುತ್ತಾಳೆ.

ಗುಡ್ಡಾಪುರಕ್ಕೆ ಬಂದ ದಾನಮ್ಮ ಗುಡ್ಡಾಪುರದ ಶ್ರೀ ಸೋಮೇಶ್ವರನಾಥ ದೇವಸ್ಥಾನದಲ್ಲಿ ತನ್ನ ದಿನ ನಿತ್ಯದ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸುತ್ತ ಅಲ್ಲಿ ಬಂದ ಭಕ್ತರಿಗೆ ದಾನ ಮಾಡುತ್ತ ಸಹಾಯಹಸ್ತ ನೀಡುತ್ತ ಜನಸೇವೆಯಲ್ಲಿ ತೊಡಗಿದಳು. ಜೀವಿತ ಕಾಲದಲ್ಲಿ ಸಾವಿರಾರು ಪವಾಡಗಳನ್ನು ಮಾಡಿ ಭಕ್ತರ ಪಾಲಿನ ಕಾಮಧೇನುವಾಗಿ ದಾಸೋಹದ ಪ್ರತಿರೂಪವಾಗಿ ಜನಸೇವೆಗೈದಳು. ಹೀಗೆ ದಿನಗಳು ಸಾಗುತ್ತಿರಲು ಒಮ್ಮೆ ತನ್ನ ಶಿವಪೂಜೆ ಮುಗಿದ ನಂತರ ಯಾವುದೋ ಒಂದು ಅಂತರ್ಶಕ್ತಿಯ ಕರೆಯನ್ನು ಆಲಿಸಿ ತಾನು ಇಲ್ಲಿಗೆ ಬಂದ ಕಾರ್ಯ ಮುಗಿಯಿತು ಎಂದು ಹೇಳಿ ಸಮಾಧಿ ಸಿದ್ಧಪಡಿಸುವಂತೆ ಸೂಚಿಸುತ್ತಾಳೆ. ತನ್ನ ಅಪಾರ ಭಕ್ತ ಸಂಕುಲವನ್ನು ಬಿಟ್ಟು ದಾನಮ್ಮ ಅಂದೇ ಸಮಾಧಿಯಾಗುತ್ತಾಳೆ ೭೫ ವರ್ಷ ಬಾಳಿ ಕ್ರಿ.ಶ.೧೨೨೧ ರಲ್ಲಿ ಗುಡ್ಡಾಪುರದಲ್ಲಿ ಲಿಂಗೈಕ್ಯಳಾದ ದಾನಮ್ಮಳ ಸಮಾಧಿಯನ್ನು ಯಾದವ ವಂಶದ ಮಹಾದೇವರಾಜ ಅರಸು ಸಾಯಿನಾಥ ಮಾಂಡಲೀಕ ದಾನಮ್ಮ ದೇವಿಯ ಸಮಾಧಿ ಮಂದಿರಕ್ಕೆ ದೇವಸ್ಥಾನ ನಿರ್ಮಿಸಿದ. ಮುಂದೆ ಟ್ರಸ್ಟ ರಚನೆಯಾಗುವ ಮೂಲಕ ದೇವಸ್ಥಾನದ ಅಭಿವೃದ್ಧಿ ಹಾಗೂ ಭಕ್ತ ಜನರ ಸಹಕಾರದಿಂದ ವಸತಿಗೃಹಗಳ ನಿರ್ಮಾಣಗೊಂಡು ಈಗ ಇದೊಂದು ಸುಪ್ರಸಿದ್ಧ ಯಾತ್ರಾ ಸ್ಥಳವಾಗಿ ಪರಿಣಮಿಸಿದೆ.

ಪ್ರತಿ ವರ್ಷ ಛಟ್ಟಿ ಅಮವಾಸೆಯಂದು ದೇವಿಯ ಜಾತ್ರೆ ಜರುಗುತ್ತಿದ್ದು ಮಹಾರಾಷ್ಟ್ರ ಕರ್ನಾಟಕ ಆಂಧ್ರಪ್ರದೇಶಗಳಿಂದ ಲಕ್ಷಾಂತರ ಭಕ್ತರು ದಾನಮ್ಮಳ ದರ್ಶನಕ್ಕೆ ಬರುವ ಮೂಲಕ ಜಾತ್ರೆಯ ವಿಶೇಷ ಸೇವೆಗಳಲ್ಲಿ ಪಾಲ್ಗೊಳ್ಳುವರು. ಇಲ್ಲಿ ಭಕ್ತರು ಸಲ್ಲಿಸುವ ವಿಶೇಷ ಸೇವೆಯೆಂದರೆ “ಹೋಳಿಗೆ”ಸೇವೆ. ಇಲ್ಲಿ ವಿವಿಧ ರೀತಿಯ ಹೋಳಿಗೆಯನ್ನು ನೈವೇದ್ಯ ಮಾಡಿ ಅನಂತರ ತಾವು ಹಂಚಿ ತಿನ್ನುವ ಸಂಪ್ರದಾಯವಿದೆ. ಅಷ್ಟೇ ಅಲ್ಲದೇ ನಿರಂತರ ದಾಸೋಹ ಇಲ್ಲಿ ಜರುಗುತ್ತಿದ್ದು ಇಲ್ಲಿ ಬರುವ ಭಕ್ತರಿಗೆ ವಸತಿಗಾಗಿ ಅನೇಕ ವಸತಿಗೃಹಗಳ ಸೌಕರ್ಯ ಕೂಡ ಉಂಟು.

ಭಕ್ತರ ಪಾಲಿನ ವರದಾನಿ ಎಂದೇ ಕರೆಯುವ ದಾನಮ್ಮಳಿಗೆ ಭಕ್ತರು ಮಕ್ಕಳಾಗದವರಿಗೆ ಮಕ್ಕಳಭಾಗ್ಯ, ಮದುವೆಯಾಗದ ಕನ್ಯೆಯರಿಗೆ ಕಂಕಣ ಭಾಗ್ಯ, ಜೀವನದಲ್ಲಿ ಜಿಗುಪ್ಸೆ ಹೊಂದಿದವರಿಗೆ ಮಾನಸಿಕ ಶಾಂತಿ ದೊರೆಯುವದೆಂಬ ಪ್ರತೀತಿಯಿಂದ ಎಲ್ಲ ವಿಧದ ಭಕ್ತ ಜನತೆ ಇಲ್ಲಿಗೆ ಬರುವ ಮೂಲಕ ದೇವಿಯಲ್ಲಿ ಅರ್ಚನೆ ಸಲ್ಲಿಸಿ ಇಷ್ಟಾರ್ಥ ಸಿದ್ಧಿಗಾಗಿ ಕೋರುವರು. ಛಟ್ಟಿ ಅಮವಾಸೆಯಂದು ಸಂಜೆ ಜರಗುವ ರಥೋತ್ಸವವು ಹಾಗೂ ಜಾತ್ರೆಗೆ ಮುಂಚಿತ ಒಂದು ವಾರಗಳ ಕಾಲ ವಿವಿಧ ರೀತಿಯ ಪೂಜೆಯ ಕಾರ್ಯಗಳು ಜರುಗುತ್ತವೆ.

ವೈಶಿಷ್ಟ್ಯಪೂರ್ಣ ಪೂಜೆ

ಬೆಳಿಗ್ಗೆ ಬಾಲಕಿಯಂತೆ. ಮಧ್ಯಾಹ್ನ ಯುವತಿಯಂತೆ. ಸಂಜೆಯಲ್ಲಿ ವೃದ್ಧೆಯಂತೆ ಅಲಂಕಾರಗೊಳ್ಳುವ ಮೂಲಕ ಮೂರು ಹೊತ್ತು ಅಲಂಕಾರ ಪೂಜೆ ದಾನಮ್ಮ ದೇವಿಗೆ ಜರಗುತ್ತದೆ. ಈ ರೀತಿಯ ಅಲಂಕಾರಗೊಳ್ಳುವ ದಾನಮ್ಮ ದೇವಿಯ ವಿಗ್ರಹವನ್ನು ನೋಡುವುದೇ ಒಂದು ಪುಣ್ಯ. ಇದು ನಿರಂತರವಾಗಿ ಜರಗುತ್ತ ಬರುತ್ತಿದೆ.

ಹೋಗುವುದು ಹೇಗೆ…?

ದಾನಮ್ಮ ದೇವಿಯ ಕ್ಷೇತ್ರವು ಬೆಂಗಳೂರಿನಿಂದ ೮೦೦ ಕಿ.ಮೀ ವಿಜಯಪುರದಿಂದ ೧೦೦ ಕಿ.ಮೀ ಅಂತರವಿದ್ದು.ಬೆಳಗಾವಿಯ ಮೂಲಕ ಹೊರಡುವವರು ಚಿಕ್ಕೋಡಿ, ಕಾಗವಾಡ, ಅಥಣಿ, ಕೊಟ್ಟಲಗಿ, ಮುಚ್ಚಂಡಿ, ದಾರಿಕೊಣ್ಣೂರ, ಸೊರಡಿ ಮೂಲಕ ಗುಡ್ಡಾಪುರ ತಲುಪಬಹುದು. ಸೊಲ್ಲಾಪುರದಿಂದ ಬರುವವರು ಝಳಕಿ ಚಡಚಣ ಉಮದಿ ಮದಗ್ಯಾಳ ಮೂಲಕ ವಿಜಯಪುರದಿಂದ ಬರುವವರು ತಿಕೋಟ, ಬಾಬಾನಗರ, ಕಲ್ಲಕವಟಗಿ, ಗೊನಸಗಿ, ದರಿಬಾದಚಿ ಮೂಲಕ ತಲುಪಬಹುದು. ಹುಬ್ಬಳ್ಳಿ,ಧಾರವಾಡದಿಂದ ಬರುವವರು ಸವದತ್ತಿ ಮೂಲಕ ಸೊಲ್ಲಾಪೂರ, ವಿಜಯಪುರ, ಮಾರ್ಗದಿಂದ ತಲುಪಬಹುದು.


ವೈ.ಬಿ.ಕಡಕೋಳ
(ಶಿಕ್ಷಕರು)
ಮಾರುತಿ ಬಡಾವಣೆ.ಸಿಂದೋಗಿ ಕ್ರಾಸ್.ಮುನವಳ್ಳಿ
ತಾಲೂಕಃಸವದತ್ತಿ ಜಿಲ್ಲೆಃಬೆಳಗಾವಿ
೮೯೭೧೧೧೭೪೪೨ ೭೯೭೫೫೪೭೨೯೮

- Advertisement -
- Advertisement -

Latest News

ಇದು ಇಂದಿನ ಹಾಸ್ಟೆಲ್ ಹುಡುಗ ಹುಡುಗಿಯರಿಗೆ ನಾವೆಲ್ಲ ಹೇಳಬೇಕಾದ ಖಾಸ್ ಬಾತ್

ಸರ್... ಓ ಸರ್...ಕಾಂಬಳೆ ಸರ್  ... ಸರ್ ನಮಸ್ಕಾರ್ರಿ ಆರಾಮ ಅದೀರಿ?? ನಾ ಯಾರ್ ಹೇಳ್ರಿ ಅನ್ನುತ್ತಿದ್ದಂತೆಯೇ ನಿವೃತ್ತಿ ಹೊಂದಿ ಐದಾರು ವರ್ಷ ಆಗಿದ್ದ ಬಿಸಿಎಮ್...
- Advertisement -

More Articles Like This

- Advertisement -
close
error: Content is protected !!
Join WhatsApp Group