ಮೂಡಲಗಿ: “ಭಾರತೀಯ ಸಂಸ್ಕೃತಿಯ ಹೆಗ್ಗುರುತುಗಳಲ್ಲಿ ಒಂದಾದ ಯೋಗವು ಸಾವಿರಾರು ವರ್ಷಗಳ ಪುರಾತನ ವಿದ್ಯೆಯಾಗಿದೆ. ಇಡೀ ವಿಶ್ವವೇ ಅದನ್ನು ಅನುಸರಿಸುತ್ತಿದ್ದು ಆಧ್ಯಾತ್ಮಿಕ, ದೈಹಿಕ ಹಾಗೂ ಮಾನಸಿಕ ಶಾಂತಿ-ಸಂಯಮಗಳನ್ನು ಕಾಪಾಡಿಕೊಳ್ಳಲು ಸಹಕಾರಿಯಾಗಿದೆ. ಪ್ರತಿದಿನ ಕನಿಷ್ಠ ಐದರಿಂದ ಹತ್ತು ನಿಮಿಷ ಯೋಗಾಭ್ಯಾಸವನ್ನು ರೂಢಿಸಿಕೊಂಡು ಸದೃಢ ಆರೋಗ್ಯ ನಿಮ್ಮದಾಗಿಸಿಕೊಳ್ಳಿ” ಎಂದು ಶಿವಕುಮಾರ ಕನ್ನಡ ಪ್ರಾಧ್ಯಾಪಕರು ಕರೆ ನೀಡಿದರು.
ಅವರು ಸ್ಥಳೀಯ ಶ್ರೀ ಶ್ರೀ ಪಾದಬೋಧ ಸ್ವಾಮೀಜಿ ಸರಕಾರಿ ಪದವಿ ಕಾಲೇಜು ಮೂಡಲಗಿ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡ 2023 ನೇ ಸಾಲಿನ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತಾ, ಈ ವರ್ಷದ ಯೋಗ ದಿನಾಚರಣೆಯ ಥೀಮ್ ವಸುಧೈವ ಕುಟುಂಬಕಂ ಎಂಬುದಾಗಿದ್ದು ಇಡೀ ವಿಶ್ವದ ಎಲ್ಲಾ ಜನಗಳು ಒಂದೇ ಕುಟುಂಬದ ಸದಸ್ಯರಿದ್ದಂತೆ ಪರಸ್ಪರ ಪ್ರೀತಿ ವಿಶ್ವಾಸಗಳಿಂದ ನಾವೆಲ್ಲ ಬದುಕಬೇಕಾಗಿದೆ.
ಇಂದಿನ ಒತ್ತಡದ ಬದುಕಿನಲ್ಲಿ ಯೋಗವು ಪ್ರತಿಯೊಬ್ಬ ಮನುಷ್ಯನಿಗೂ ಅವಶ್ಯಕವಾಗಿದೆ ಸುಖೀ ಜೀವನಕ್ಕಾಗಿ ನಾವೆಲ್ಲಾ ಯೋಗವನ್ನು ಅಳವಡಿಸಿಕೊಳ್ಳೋಣ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲರಾದ ಎಸ್.ಡಿ. ಗಾಣಿಗೇರ ಅವರು ತಮ್ಮ ಅಧ್ಯಕ್ಷೀಯ ನುಡಿಯಲ್ಲಿ, ಇಂದು ವಿಶ್ವಕ್ಕೆ ನಮ್ಮ ದೇಶ ನೀಡಿದ ಕೊಡುಗೆ ಎಂದರೆ ಯೋಗ ಅದರ ಅಳವಡಿಕೆಯಿಂದ ಸರ್ವಾಂಗೀಣ ಅಭಿವೃದ್ಧಿ ಸಾಧ್ಯವಾಗುತ್ತದೆ. ಎಲ್ಲರೂ ಯೋಗವನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ದೈಹಿಕ ಶಿಕ್ಷಣ ನಿರ್ದೇಶಕರಾದ ಡಾ. ರವಿ ಗಡದನ್ನವರ ಅವರು ವಿದ್ಯಾರ್ಥಿಗಳೊಂದಿಗೆ ವಿವಿಧ ಯೋಗದ ಆಸನಗಳನ್ನು ಪ್ರದರ್ಶಿಸಿ ಮಾರ್ಗದರ್ಶನ ನೀಡಿದರು.
ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ಐಕ್ಯೂಎಸಿ ಸಂಯೋಜಕರಾದ ಹನುಮಂತ ಕಾಂಬಳೆ, ಸಾಂಸ್ಕೃತಿಕ ಸಂಯೋಜಕರಾದ ಸಂಜೀವಕುಮಾರ ಗಾಣಿಗೇರ, ಸಿಬ್ಬಂದಿ ಕಾರ್ಯದರ್ಶಿಯಾದ ಬಿ.ಎಸ್. ಕೆಸರಗೊಪ್ಪ, ರೆಡ್ ಕ್ರಾಸ್ ಸಂಯೋಜಕರಾದ ಭೀಮರಾವ್ ನಾಯಕ, ಶಿವಾನಂದ ಚಂಡಕೆ, ಬಸವರಾಜ ಪಡದಲ್ಲಿ, ಅಶ್ವಿನಿ ಎಸ್, ಜಿ.ಎ. ಸಾಳೋಕೆ, ಶೀತಲ ತಳವಾರ ಹಾಗೂ ಕಾಲೇಜಿನ ಎಲ್ಲಾ ಉಪನ್ಯಾಸಕರು ಭಾಗವಹಿಸಿದ್ದರು. ಕುಮಾರಿ ದೀಪಾ ಹೊಸಟ್ಟಿ ಪ್ರಾರ್ಥಿಸಿದರು. ಕುಮಾರಿ ಲಕ್ಷ್ಮೀ ಪೂಜಾರಿ ನಿರೂಪಿಸಿದರು.