ಬಚ್ಚೆ ಮನ್ ಕೇ ಸಚ್ಚೆ ಅನ್ನುವದನ್ನೊಮ್ಮೆ ನೆನಪಿಸಿಕೊಂಡು ಸಾಧ್ಯವಾದರೆ ಇದೊಂದು ಉಪಕಾರ ಮಾಡಿ ಪ್ರತಿಫಲ ನಿಮ್ಮದೆ ಆಗಿರುತ್ತದೆ
ಬೀರ‌್ಯಾ ಏ ಬೀರ‌್ಯಾ ಲಗೂನ ಬಾ ಇಲ್ಲಿ ಯಾಕೋ ಮಗನ ಎಷ್ಟ ಹೇಳುದ್ ನಿನಗ….ಘಡಾನ ಎದ್ದು ಹೆಂಡಕಸ ಮುಗಿಸಿ ಮೆವ್ವ ಹಾಕು ದನಗೋಳಿಗಿ ಅಂತ ದೊಡ್ಡ ಗೌಡ್ರು ಒದರುತ್ತಿದ್ದಂತೆಯೇ ತಟ್ಟಿನ ಚೀಲ ಹೊದ್ದುಕೊಂಡು ಜ್ವಾಳದ ಒಣ ದಂಟಿನ ನಡುವೆ ಇನ್ನೂ ಮಲಗಿದ್ದ ಹತ್ತು ವರ್ಷದ ಹುಡುಗ ಬೀರ‌್ಯಾ ಗಡಿಬಿಡಿಯಿಂದ ಎದ್ದು ಕುಂತಿದ್ದ…
ಏ ಅಲಿ ಕಂಹಾ ಹೈ ಬೇ ಕಾಮಚೋರ್ ಕಹೀ…ಕೇ ಅನ್ನುತ್ತಿದ್ದಂತೆಯೇ ಅಮ್ಮಿಜಾನ್ ಳ ನೆನಪಾಗಿ ಗ್ಯಾರೇಜು ಹಿಂದೆ ಬಿಕ್ಕುತ್ತ ನಿಂತಿದ್ದ ಅಲಿ ಅನ್ನುವ ಹನ್ನೆರಡು ವರ್ಷದ ಹುಡುಗ ಆಯಾ ಮೇಸ್ತ್ರಿ ಅಬ್ಬೀ ಪಿಸ್ಯಾಬ್ ಗಯಾ ಥಾ ಜಿ ಅನ್ನುತ್ತ ಕೈ ತೊಳೆದುಕೊಂಡು ಓಡಿ ಬಂದವನೆ ಕ್ಯಾ ಬೋಲೋ ಅಂತ ನಡುಗುತ್ತ ನಿಂತಿದ್ದ…
ಕಮಲೀ ಏ ಕಮಲೀ ಎಲ್ಲಿ ಹಾಳಾಗಿ ಹೋದಳ ಇಕಿ…ಏ ನಿನ್ನ ಮಾರಿ ಮಣ್ಣಾಗ ಅಡಗಲಿ ಲಗೂನ ಎರಡ ಬುಟ್ಟಿ ಉಸಕ ಚಾನಸಕೊಂಡ ಬಾ ಅಂತ ಈರಣ್ಣ ಒದರುತ್ತಿದ್ದಂತೆಯೇ ಕಮಲವ್ವ ಅನ್ನುವ ಹುಡುಗಿ ಕೈಯ್ಯಲ್ಲಿ ಎಣ್ಣೆ ಖಾರ ಹಚ್ಚಿ ಸುತ್ತಿ ಹಿಡಿದುಕೊಂಡಿದ್ದ ರೊಟ್ಟಿಯನ್ನ ಮತ್ತೆ ಬುತ್ತಿ ಅರಿವೆಯಲ್ಲಿ ತುರುಕುತ್ತ ಬನ್ನಿ ರೀ ಕಾಕಾ ಅಂದಳು…
ಹೀಗೆ ನಿತ್ಯವೂ ನೋಡುವ ಅದೆಷ್ಟೋ ಕೆಲಸದ ಸ್ಥಳಗಳಲ್ಲಿ, ಕಟ್ಟಡ,ಕಚೇರಿ ಮತ್ತು ಮಾರುಕಟ್ಟೆಯ ಅಂಗಡಿಗಳಲ್ಲಿ ರಸ್ತೆ ಪಕ್ಕದ ಗ್ಯಾರೇಜುಗಳಲ್ಲಿ ಆಟವಾಡುತ್ತ ಓದಬೇಕಾದ ವಯಸ್ಸಿನಲ್ಲಿ ಹೊರ ಬಾರದ ಭಾರ ಹೊರುತ್ತ ಜೀವ ತೇಯುವ ಅದೆಷ್ಟೋ ಮಕ್ಕಳು ನಮಗೆ ಅಲ್ಲಲ್ಲಿ ಕಾಣ ಸಿಗುತ್ತಾರೆ.
ಸರ್ವ ಶಿಕ್ಷಣ ಅಭಿಯಾನದ ಅಡಿಯಲ್ಲಿ, ಕಡ್ಡಾಯ ಶಿಕ್ಷಣ ಯೋಜನೆ ಚಾಲ್ತಿಯಲ್ಲಿರುವ ನಮ್ಮದೇ ರಾಜ್ಯದಲ್ಲಿ ಕೇವಲ ಶಾಲಾ ದಾಖಲಾತಿಯ ಪುಸ್ತಕಗಳಲ್ಲಿ ಹೆಸರಿದ್ದರೂ ಶಾಲೆಯ ಮೆಟ್ಟಿಲು ಹತ್ತದೆ, ಗೌಡರ ಮನೆಯಲ್ಲಿಯೋ, ಸಂತೆ ಪೇಟೆಯ ಚುನ ಮುರಿ ಭಟ್ಟಿ,ಅಥವಾ ಬೇಕರಿಯ ಅಡುಗೆ ಕೋಣೆಯಲ್ಲಿಯೋ ಅಥವಾ ಇಟ್ಟಿಗೆ ಭಟ್ಟಿಗಳಲ್ಲಿಯೋ, ಕೆಲಸ ಮಾಡುತ್ತಿರುವ ಇಂತಹ ಪುಟಾಣಿ ಕಂದಮ್ಮಗಳನ್ನೊಮ್ಮೆ ಗಮನಿಸಿ ನೋಡಿ.
ಅದಕ್ಕಿಂತಲೂ ಮನಸ್ಸು ಕಲಕುವ ಘಟನೆಗಳೆಂದರೆ ಅಣ್ಣಾ…ಅಂತಲೋ, ಅಕ್ಕಾ ಅಂತಲೋ, ನಮ್ಮನ್ನು ಎದುರುಗೊಂಡು ನಾವು ನೆಲದ ಕಡೆ ಇಣುಕಿ ನೋಡುವಂತೆ ಅಡ್ಡ ನಿಂತು ಕೈಚಾಚುವ ಮತ್ತು ಊಟದ ಸನ್ನೆ ಮಾಡಿ ಭಿಕ್ಷೆ ಬೇಡುವ ಪುಟಾಣಿ ಕಂದಮ್ಮಗಳು.
ಕೈಯ್ಯಲ್ಲೊಂದು ಜರ್ಮನಿಯ ತಟ್ಟೆಯಲ್ಲಿ ಲಕ್ಷ್ಮೀ, ಅಥವಾ ಎಲ್ಲಮ್ಮ ಇಲ್ಲವೇ ಧತ್ತರಗಿ ಭಾಗಮ್ಮನ ಪುಟ್ಟದೊಂದು ಭಾವಚಿತ್ರ ಅಥವಾ ಮೂರ್ತಿ ಇಟ್ಟುಕೊಂಡು ಧರ್ಮಾ ಮಾಡು ಸಾಹುಕಾರಾ ಅನ್ನುತ್ತ ಬರುವ ಮಕ್ಕಳನ್ನೊಮ್ಮೆ ಮಾತನಾಡಿಸಿ ನೋಡಿ “ಸಾಲಿಗಿ ಹೋಗುದಿಲ್ಲ ಎನ್” ಅಂತ ಒಮ್ಮೆ ಕೇಳಿ ನೋಡಿ “ಹೊಟ್ಟಿ ತುಂಬಬೇಕಲ್ಲ ಸಾವಕಾರ್” ಅನ್ನುವ ಮಕ್ಕಳಿಗೆ ಶಾಲೆಯ ಬಿಸಿ ಊಟದ ಬಗ್ಗೆ ಹೇಳಿ ನೋಡಿ “ಒಂದ್ ಹೊತ್ತು ಕೊಡ್ತಾರ ಅಣ್ಣಾ ಮೂರ ಹೊತ್ ಉಣ್ಬೇಕಲ್ಲ” ಅನ್ನುತ್ತ ನಿಮ್ಮನ್ನು ದಾಟಿಕೊಂಡು ಹೊರಟು ಬಿಡುತ್ತಾರೆ.
ಪರ ರಾಜ್ಯಗಳಿಂದ ಇನ್ನೂ ಮೀಸೆ ಕುಡಿ ಒಡೆಯುವ ಮೊದಲೇ ಮನೆಯವರಿಗೆ ಅಡ್ವಾನ್ಸ್ ದುಡ್ಡು ಇಸಿದು ಕೊಟ್ಟು ಬರುವ ಬಿಹಾರೀ ಹುಡುಗರಿಂದ ಹಿಡಿದು, ನಮ್ಮದೆ ರಾಜ್ಯದ ಉಡುಪಿ, ಕುಂದಾಪುರ, ಭಟ್ಕಳ,ಮಂಗಳೂರಿನಂತಹ ಊರುಗಳಿಂದ ಶಿವಮೊಗ್ಗ,ಸೊರಬದ ಸುತ್ತಲಿನ ಹಳ್ಳಿಗಳಿಂದ ಉಡುಪಿ ಹೋಟೆಲ್ ಳಲ್ಲಿ ಕೆಲಸಕ್ಕೆ ಬಂದು ಗಿರಾಕಿಗಳು ತಿಂದು ಬಿಟ್ಟ ತಟ್ಟೆ,ಲೋಟ ತೆಗೆಯುವ, ಟೇಬಲ್ ಕ್ಲೀನ್ ಮಾಡುವ ಹುಡುಗರ ಕಣ್ಣುಗಳನ್ನೊಮ್ಮೆ ದಿಟ್ಟಿಸಿ ನೋಡಿ.
ಬಾಲ ಕಾರ್ಮಿಕ ನಿಷೇಧದ ಕಾನೂನಿನ ಬಗ್ಗೆ ಮಾತನಾಡುವ ಅದೆಷ್ಟೋ ಎಜುಕೆಟೆಡ್ ಮತ್ತು ಡಬಲ್ ಡಿಗ್ರಿ ಹುಡುಗ-ಹುಡುಗಿಯರು ತಮ್ಮದೇ ಅಪಾರ್ಟ್ಮೆಂಟಿನ ಸೆಕ್ಯೂರಿಟಿ ಗಾರ್ಡ ಮಕ್ಕಳು ಶಾಲೆಗೆ ಹೋಗದೆ ಇರುವದನ್ನ ಮತ್ತು ಮನೆ ಕೆಲಸದ ಹೆಂಗಸೊಬ್ಬಳ ಸೆರಗು ಹಿಡಿದು ಅವ್ವ…ಅವ್ವ… ಅನ್ನುತ್ತ ಅವಳ ಕೆಲಸದಲ್ಲಿ ಕೈ ಜೋಡಿಸಲು ಬರುವ ಮತ್ತೊಂದು ಹುಡುಗಿ ಶಾಲೆಗೆ ಹೋಗದೆ ಇರುವದನ್ನ ನೋಡಿಯೂ ನೋಡದವಂತೆ ಮೌನವಾಗಿ ಇರುತ್ತಾರೆ.
“ಯಾರ್ರಿ ಇಂವ ಹುಡುಗಾ?? ಭಾರೀ ಚಾಲಾಕ್ ಅದಾನ ಅಲ್ರಿ?? ಏ ತಮ್ಮ ಎಷ್ಟನೆತೆನೋ” ಅಂತ ಯಾವುದಾದರೂ ಮಗುವನ್ನ ಕೇಳಿ ನೋಡಿ ಎಂಟನೆತೆ ಅನ್ನುವ ಬಾಯಿ ಪಾಠದ ಉತ್ತರ ಅಥವಾ ವಯಸ್ಸು ಕೇಳಿದರೆ ಹದಿನೈದು ಅಂತ ಠಕ್ಕನೆ ಉತ್ತರ ಬಂದು ಬಿಟ್ಟಿರುತ್ತದೆ.
ಆ ಕ್ಷಣಕ್ಕೆ ಪಬ್ಲಿಕ್ ಪ್ಲೇಸ್ ಅಂತಲೂ ಲೆಕ್ಕಿಸದೆ ಸಿಗರೇಟು ಹೊತ್ತಿಸುವ ಅಥವಾ ಬಾರಿನ ಟೇಬಲ್ಲಿನಲ್ಲಿ ಗೆಳೆಯನೊಂದಿಗೆ ಕುಳಿತುಕೊಂಡೇ ಮತ್ತೊಂದು ಬಿಯರ್ ತಗೋ ಅಪ್ಪಿ ಅನ್ನುವ ನಾವು ನೀವೂ ಕೂಡ ಅಂತಹ ಹತ ಭಾಗ್ಯ ಮಕ್ಕಳ ಬಗ್ಗೆ ಯೋಚಿಸುವದೇ ಇಲ್ಲ.ಚಿಕ್ಕ ವಯಸ್ಸಿನಲ್ಲಿ ದುಡಿಯುತ್ತ ವಾರದ ರಜೆಯಲ್ಲಿ ಯಾವದೋ ಮೆಚ್ಚಿನ ನಟನ ಸಿನೆಮಾ ನೋಡುತ್ತ ಕಿಕ್ ಕೊಡುತ್ತೆ ಮಗಾ ಅಂತ ಮಾಲೀಕರ ಕಣ್ಣು ತಪ್ಪಿಸಿ ಸಿಗರೇಟು ಸೇದುವ,ಗಿರಾಕಿಯೊಬ್ಬ ಅರ್ಧಕ್ಕೆ ಬಿಟ್ಟ ವಿಸ್ಕಿಯನ್ನೇ ಬಚ್ಚಲು ಮನೆಯಲ್ಲಿ ಅತ್ತಿತ್ತ ನೋಡಿ ಗುಟುಕರಿಸುವ ದಾರಿ ಬಿಡುತ್ತಿರುವ ಮಕ್ಕಳು ಇಂದಲ್ಲ ನಾಳೆ ಸಮಾಜ ಘಾತುಕರಾಗದಿರಲಿ ಅಲ್ಲವಾ??
ಅವರ ದುಡಿಮೆ ಅವರ ಮಾತು ಅನ್ನುವ ಅಯ್ಯೋ ಪಾಪ ಯಾರ್ ಮಗಾನೋ ಎನ್ ಕಥೆಯೋ ಅಂತ ಹಾರಿಕೆಯ ಸಂತಾಪ ಸೂಚಿಸುವ ಬೆಂಗಳೂರಿನ ಮೆಜೆಸ್ಟಿಕ್ ಅಥವಾ ನಮ್ಮದೇ ಊರಿನ ಬಸ್ ನಿಲ್ದಾಣ, ಖಾಲಿ ಸೆಡ್ಡುಗಳಲ್ಲಿ ಪೋಟುಗಳಾಗಿ ಬಿದ್ದುಕೊಂಡ ಯುವಕರನ್ನ ನೋಡಿ ವಟಗುಡುವ ಮುನ್ನ
ಇಂದಿನ ಯುವಕರೇ ನಾಳಿನ ಪ್ರಜೆಗಳು ಅಂತ ತೌಡು ಕುಟ್ಟುವ ಬಹಳಷ್ಟು ಜನರು ರಾಜಾರೋಷವಾಗಿಯೇ ನಡೆಯುವ ಬಾಲ ಕಾರ್ಮಿಕ ಪದ್ಧತಿಯನ್ನು ಪ್ರಶ್ನೆ ಮಾಡುವದೇ ಇಲ್ಲ.
ಇನ್ನುಳಿದಂತೆ ಸಮಾಜ ಸೇವಕರು ಅಂತ ಹೇಳಿಕೊಂಡು ಒಂದಷ್ಟು ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡವರು, ಅಷ್ಟೇ ಯಾಕೆ ತಮ್ಮ ಮಡದಿ ಮಕ್ಕಳ ಜೊತೆಗೆ ಇಂತಹುದೆ ಹೋಟೆಲ್ ಅಥವಾ ರೆಸ್ಟೋರೆಂಟ್ ಗಳಿಗೆ ಊಟಕ್ಕೆ ಬಂದ ಸರ್ಕಾರಿ ಸಂಬಳ ಪಡೆಯುವ ನೌಕರರು, ಶಾಲೆಯ ಶಿಕ್ಷಕರು ಕೂಡ ಇಂತಹ ಪದ್ದತಿಯನ್ನು ಪ್ರಶ್ನಿಸುವದಿರಲಿ ಅಂತಹ ಮಕ್ಕಳ ಕಡೆಗೆ ಕನಿಷ್ಠ ಕಾಳಜಿಯನ್ನೂ ತೋರುವದಿಲ್ಲ.
ಬಹಳಷ್ಟು ಸಲ ಕಂಡೋರ್ ವಿಷಯ ನಮಗ್ಯಾಕೆ ಅನ್ನುವ ಅಸಡ್ಡೆ, ಮತ್ತು ನಮ್ಮ ಮಕ್ಕಳು ಚೆನ್ನಾಗಿದ್ದರೆ ಸಾಕು ಅಂದುಕೊಳ್ಳುವ ಜನರ ಮನಸ್ಥಿತಿ ಬದಲಾಗದ ಹೊರತು ಬಾಲ ಕಾರ್ಮಿಕ ಪದ್ಧತಿ ಮಾತ್ರ ಖಂಡಿತ ಅಸ್ತಿತ್ವದಲ್ಲಿ ಇರುತ್ತದೆ.
ಸರ್ಕಾರಿ ಶಾಲೆಯಲ್ಲಿ ಉಚಿತ ಸಮವಸ್ತ್ರ, ಶೂಜ್,ಹೆಣ್ಣು ಮಕ್ಕಳ
ಹಾಜರಾತಿಗೆ ಹಣ ಸಂದಾಯ, ಹಾಲು, ಬಾಳೆಹಣ್ಣು, ಮೊಟ್ಟೆ, ಶೇಂಗಾ ಚಕ್ಕಿ, ಬಿಸಿ ಊಟ ಎಲ್ಲ ಕೊಟ್ಟರೂ ಇಂತಹ ಮಕ್ಕಳನ್ನು ಕಡ್ಡಾಯ ಶಿಕ್ಷಣ ಅಥವಾ ಸರ್ವ ಶಿಕ್ಷಣ ಅಭಿಯಾನದ ಅಡಿಯಲ್ಲಿ ಶಾಲೆಗೆ ಸೇರಿಸುವ ಕೆಲಸವನ್ನ ಮಾಡುವದರ ಜೊತೆಗೆ ಮಕ್ಕಳನ್ನು ಕೆಲಸಕ್ಕೆ ಸೇರಿಸುವ ಬಡ ತಂದೆ ತಾಯಿಗಳಿಗೆ ಅಥವಾ ಪೋಷಕರಿಲ್ಲದ ಮಕ್ಕಳಿಗೆ ಉಚಿತ ಊಟ ವಸತಿ ಸಿಗುವ ಸಮಾಜ ಸೇವಾ ಸಂಸ್ಥೆಗಳಿಗೆ ಸೇರಲು ಮನವೊಲಿಸುವ ಕೆಲಸವನ್ನು ನಾವು ನೀವೆಲ್ಲ ತುರ್ತಾಗಿ ಮಾಡಬೇಕಾಗಿದೆ.
ಭಿಕ್ಷೆ ಬೇಡುವ ಮಕ್ಕಳನ್ನ ನೋಡಿ ಜೇಬು ತಡಕಾಡಿದಂತೆ ಮಾಡಿ ಎರಡೂ ತುಟಿಗಳನ್ನು ಪರಸ್ಪರ ಒತ್ತಿಕೊಂಡು ಖಾಲಿ ಕೈ ಅಲ್ಲಾಡಿಸಿ ಹೊರಟು ಹೋಗುವ, ಏ ನಡಿ ಆ ಕಡಿಗಿ ಅಂತ ಗದರುವ ಮತ್ತು ಹೆಂಡತಿ ಮಕ್ಕಳ ಎದುರಲ್ಲಿ ಬಿಲ್ ಪೇ ಆದ ಬಳಿಕ ಮೆನು ಕಾರ್ಡಿನ ಜೊತೆಗೆ ಟಿಪ್ಸ್ ಇಟ್ಟು ಬರುವ ಬದಲು ಮನೆಯಲ್ಲಿ ಬಡತನ ಅನ್ನುವ ಕಾರಣಕ್ಕೋ ಅಥವಾ ತಾನು ದುಡಿಯದೇ ವಿಧಿಯಿಲ್ಲ ಅನ್ನುವ ಕಾರಣಕ್ಕೋ ಇನ್ನೂ ಗಲ್ಲದ ಮೇಲಿನ ಮುಗ್ಧತನ ಆರುವ ಮೊದಲೇ ಕೈಗಳನ್ನು ಒರಟು ಮಾಡಿಕೊಳ್ಳುತ್ತಿರುವ ಮಕ್ಕಳು ಸ್ಲೇಟು, ಬಳಪವನ್ನೋ, ಪುಸ್ತಕವನ್ನೋ ಹಿಡಿದು ಓದುವ ಹಾಗೆ ಮಾಡುವ ಪುಟ್ಟ ಪ್ರಯತ್ನವನ್ನ ಮಾಡೋಣ ಅಲ್ಲವಾ??
ಇಂದಲ್ಲ ನಾಳೆ ನಿಮಗೆ ವಯಸ್ಸಾಗಿ ನೀವು ರಸ್ತೆ ದಾಟಲು ಪರದಾಡುವಾಗ ಟ್ರಾಫಿಕ್ ಪೋಲಿಸ್ ಒಬ್ಬ ನಿಮ್ಮನ್ನು ಗುರುತಿಸಿ ವಾಹನಗಳನ್ನು ವಿಷಲ್ ಹಾಕಿ ಕೈ ಸನ್ನೆಯಲ್ಲಿ ನಿಲ್ಲಿಸಿ ನಿಮ್ಮನ್ನು ರಸ್ತೆ ದಾಟಿಸಬಹುದು, ಯಾರೋ ನಿಮ್ಮ ಪರ್ಸು ಕದ್ದು ಓಡುವಾಗಲೇ ಆ ಕಳ್ಳನನ್ನು ಚೇಜ್ ಮಾಡಿ ಹಿಡಿದು ಅರೇ ಸರ್ ನೀವಾ? ಅಂತ ನಿಮ್ಮನ್ನ ಗುರುತಿಸಿ ತಾನು ಈಗ ಪ್ರಾಯಮರೀ ಶಾಲೆಯ ಮೇಷ್ಟ್ರು ಅಂತಲೋ, ನಿಮ್ಮ ಬೈಕು ಮಳೆಯಲ್ಲಿ ಕೆಟ್ಟು ನಿಂತಾಗ ಕಿಕ್ ಹೊಡೆದು ಶುರು ಮಾಡಿ ಕೊಡುವಾಗ ಸರ್ ನನ್ನ ನೆನಪಿದೆಯಾ?? ನಾನೀಗ ಲಾಯರ್ ಅಂತಲೋ ಅಥವಾ ನಿಮಗೆ ಹುಷಾರು ತಪ್ಪಿ ನೀವು ಯಾವದೋ ಆಸ್ಪತ್ರೆಯ ಬೆಡ್ಡಿನ ಮೇಲೆ ಮಲಗಿರುವಾಗಲೇ ಪರ್ಸನಲ್ ಕೇರ್ ತಗೋಳಿ ಇವ್ರು ನಮ್ಮವರು ಅಂತ ಯಾರೋ ಒಬ್ಬರು ವೈದ್ಯರೋ ನಿಮ್ಮನ್ನು ಗುರುತಿಸಿ ಗೌರವಿಸಬೇಕಾದರೆ ಇಂತಹ ದುಡಿಯುವ ಮಕ್ಕಳಲ್ಲಿ ಓದುವ ಹಂಬಲ ಬೆಳೆಯುವಂತೆ,ಅವರು ಸಮಾಜದ ಗಣ್ಯ ನಾಗರೀಕರಾಗುವಂತೆ ಒಮ್ಮೆ ಅಂತಹ ಮಕ್ಕಳ ಬೆನ್ನು ತಟ್ಟಿ ನೋಡಿ.
ನೀವು ವರ್ಷಕ್ಕೊಮ್ಮೆ ಬಾಲ ಕಾರ್ಮಿಕ ವಿರೋಧಿ ದಿನದ ನೆಪದಲ್ಲಿ ಮಾಡುವ ಒಂದು ನಿಷ್ಕಲ್ಮಷವಾದ ಸಮಾಜ ಸೇವೆ, ಇಂದಲ್ಲ ನಾಳೆಗೆ ನಿಮ್ಮ ಒಳ್ಳೆಯತನಕ್ಕೆ ಒಂದು ಮರೆಯಲಾಗದ ಅನುಭೂತಿಯೊಂದನ್ನ ನಿಮಗೆ ನೀಡಿದರೂ ನೀಡಬಹುದು.
ಏನಂತೀರಿ??
ದೀಪಕ ಶಿಂಧೇ
9482766018