spot_img
spot_img

ಕರ್ನಾಟಕದ ಮ್ಯಾಕ್ಸ್ ಮುಲ್ಲರ್, ‘ವಚನ ಪಿತಾಮಹ’ ಡಾ. ಫ. ಗು. ಹಳಕಟ್ಟಿ ಒಂದು ನೆನಪು

Must Read

- Advertisement -

(ಜುಲೈ ೨ ಅವರ ಜನ್ಮ ದಿನದ ನಿಮಿತ್ತ ಈ ಲೇಖನ)

೧೯೫೬ರಲ್ಲಿ ಕರ್ನಾಟಕ ವಿಶ್ವವಿದ್ಯಾನಿಲಯದ ಪ್ರತಿಷ್ಠಿತ ಗೌರವ ಡಾಕ್ಟರೇಟ್ ಪದವಿ ಪ್ರದಾನ ಸಮಾರಂಭ. ಡಾ.ಪಾವಟೆಯವರು ಕುಲಪತಿಗಳಾಗಿದ್ದರು. ಕರ್ನಾಟಕ ವಿಶ್ವವಿದ್ಯಾನಿಲಯದ ಘಟಿಕೋತ್ಸವದಲ್ಲಿ ‘ವಚನ ಸಾಹಿತ್ಯದ ಪಿತಾಮಹ’ನೆಂಬ ಬಿರುದಿಗೆ ಪಾತ್ರರಾಗಿದ್ದ ಫ. ಗು. ಹಳಕಟ್ಟಿಯವರಿಗೆ ಗೌರವ ಡಾಕ್ಟರೇಟ್ ನೀಡಲಾಯಿತು. ಘಟಿಕೋತ್ಸವ ಕಾರ್ಯಕ್ರಮದ ನಂತರ ಅತಿಥಿಗಳಿಗೆ ವಿಶ್ವವಿದ್ಯಾನಿಲಯದ ಅತಿಥಿಗೃಹದಲ್ಲಿ ಭೋಜನಕೂಟ ಏರ್ಪಡಿಸಲಾಗಿತ್ತು. ಡಾಕ್ಟರೇಟ್ ಪದವಿ ಸ್ವೀಕರಿಸಲು ಕೋಟು, ಕಚ್ಚೆ, ಪೇಟ ಧರಿಸಿ ಬಂದಿದ್ದ ಹಳಕಟ್ಟಿಯವರು ಔತಣಕೂಟದಲ್ಲಿ ಪಾಲ್ಗೊಂಡು ಊಟಕ್ಕೆ ಕುಳಿತರು. ಆಗ ಡಾ.ಪಾವಟೆಯವರು ರಿಜಿಸ್ಟ್ರಾರ್ ಆಗಿದ್ದ ಪ್ರೊ. ಎಸ್.ಎಸ್. ಒಡೆಯರ್‌ರವರನ್ನು ಕರೆದು ಡಾ. ಫ. ಗು. ಹಳಕಟ್ಟಿ ಅವರಿಗೆ ಕೋಟು ಕಳಚಿ ಊಟ ಮಾಡಲು ಸೂಚಿಸಿದರು. ಪ್ರೊ ಎಸ್. ಎಸ್. ಒಡೆಯರ್ ಅವರು ಹಳಕಟ್ಟಿಯವರನ್ನು ಉದ್ದೇಶಿಸಿ ‘‘ಸಾರ್ ಸೆಖೆ ಬಾಳಾ ಇದೆ. ಕೋಟ್ ತೆಗೆದು ಆರಾಮಾಗಿ ಊಟ ಮಾಡ್ರಲಾ’’ ಎಂದರು. ಆಗ ಹಳಕಟ್ಟಿಯವರು ಒಡೆಯರ್‌ರವರನ್ನು ಹತ್ತಿರ ಕರೆದು ‘‘ತಮ್ಮಾ ಕೋಟಿನ ಒಳಗ ಅಂಗಿ ಪೂರಾ ಹರಿದು ಹೋಗದ, ಅದಕ್ಕ ನಾ ಕೋಟ್ ಹಾಕ್ಕಂಡಿದೀನಿ. ನಾನು ಸೆಖೆ ತಡಕೋತೀನಿ ತಮ್ಮಾ, ಆದರ ಅವಮಾನ ತಡಿಯಾಕಾಗುವುದಿಲ್ಲ’’ ಎಂದಾಗ ಒಡೆಯರ್ ಮೂಕವಿಸ್ಮಿತರಾಗಿ ನಿಂತಿದ್ದರು.

ಕನ್ನಡದ ಕಣ್ವ, ಕುವೆಂಪುರವರ ವಿದ್ಯಾ ಗುರುಗಳಾದ ಶ್ರೇಷ್ಠ ಸಾಹಿತಿ ಡಾ. ಬಿ. ಎಂ. ಶ್ರೀಕಂಠಯ್ಯನವರು ೧೯೨೮ರಲ್ಲಿ ರಾಜ್ಯೋತ್ಸವ ಕಾರ್ಯಕ್ರಮದ ಅಂಗವಾಗಿ ವಿಜಯಪುರಕ್ಕೆ ಬಂದಿದ್ದರು. ಅವರನ್ನು ಅತ್ಯಂತ ಅದ್ದೂರಿಯಾಗಿ ಸ್ವಾಗತಿಸಿದ ವಿಜಯಪುರದ ಜನತೆ ಬಿ.ಎಂ.ಶ್ರೀ. ಅವರಿಗೆ ವಿಜಯಪುರದ ಐತಿಹಾಸಿಕ ಜಾಗತಿಕ ಮಟ್ಟದ ಹೆಸರು ವಾಸಿಯಾದ ಗೋಳ ಗುಮ್ಮಟ ತೋರಿಸುವುದಾಗಿ ಕರೆದರು. ಆಗ ಬಿ.ಎಂ.ಶ್ರೀ. ಅವರು ‘‘ಅದಕ್ಕಿಂತಲೂ ಇನ್ನೊಂದು ದೊಡ್ಡ ಗುಮ್ಮಟವು ವಿಜಯಪುರದಲ್ಲಿದೆ ಅದನ್ನು ನೋಡಬೇಕು’’ ಎಂದು ಆಶಯ ವ್ಯಕ್ತ ಪಡಿಸಿದರು.

- Advertisement -

ಆಗ ಜನತೆ ಗೋಳಗುಮ್ಮಟಕ್ಕಿಂತಲೂ ದೊಡ್ಡದಾದ ಗುಮ್ಮಟದ ಬಗ್ಗೆ ತಬ್ಬಿಬ್ಬಾದರು. ಆಗ ನಸು ನಕ್ಕು ಬಿ.ಎಂ.ಶ್ರೀ. ‘‘ನನಗೆ ವಚನ ಪಿತಾಮಹ ಹಳಕಟ್ಟಿ ಅವರನ್ನು ಮೊದಲು ನೋಡಬೇಕು, ಅವರು ವಚನ ಗುಮ್ಮಟ’’ ಎಂದು ಹೇಳಿದರು.

ಆಗ ಅಲ್ಲಿದ್ದ ಜನರು ವಿಜಯಪುರದ ಉಪಲಿ ಬುರುಜು ಹತ್ತಿರದ ಮುರುಕು ಬಾಡಿಗೆಯ ಮನೆಯಲ್ಲಿ ಹರುಕು ಚಾಪೆಯ ಮೇಲೆ ವಚನ ತಾಡೋಲೆಗಳನ್ನು ಹರವಿಕೊಂಡು ಒಡಕು ಕನ್ನಡಕದ ಮೂಲಕ ಮೊಳೆ ಜೋಡಿಸಿ ವಚನ ಸಂಪಾದನೆ ಮಾಡುತ್ತಿದ್ದ ಹಳಕಟ್ಟಿ ಅವರಲ್ಲಿಗೆ ಸಂಘಟಿಕರು ಬಿ.ಎಂ.ಶ್ರೀ. ಅವರನ್ನು ಕರೆದುಕೊಂಡು ಹೋದರು. ಬಿ.ಎಂ.ಶ್ರೀ. ಅವರನ್ನು ಕಂಡ ಫ. ಗು. ಹಳಕಟ್ಟಿ ಅವರ ಆನಂದಕ್ಕೆ ಪರಿಮಿತಿಯಿರಲಿಲ್ಲ. ಇಬ್ಬರು ಮಹನೀಯರು ಅದೆಷ್ಟು ಹೊತ್ತು ಅನೇಕ ವಿಷಯ ಚರ್ಚಿಸಿ ಒಬ್ಬರಿಗೊಬ್ಬರು ಬೀಳ್ಕೊಟ್ಟರು.

೧೨ನೇ ಶತಮಾನದಲ್ಲಿ ಶರಣರು ಸಮಾಜಕ್ಕೆ ನೀಡಿದ ವಚನಗಳನ್ನು ಈ ವಚನ ಪಿತಾಮಹ ಫ.ಗು.ಹಳಕಟ್ಟಿಯವರು ಸಂಗ್ರಹಿಸಿ ನೀಡದಿದ್ದರೆ ಇಂದು ಕನ್ನಡಿಗರಿಗೆ ಅವುಗಳ ಮಾಹಿತಿಯೇ ಇರುತ್ತಿರಲಿಲ್ಲ.

- Advertisement -

*ಫ.ಗು.ಹಳಕಟ್ಟಿ ಅವರು ಹುಟ್ಟಿದ್ದು ೧೮೮೦ರ ಜುಲೈ ೨ರಂದು* ಧಾರವಾಡದಲ್ಲಿ. ತಂದೆ ಗುರುಬಸಪ್ಪಹಳಕಟ್ಟಿ ತಾಯಿ ದಾನಮ್ಮದೇವಿ. ಫಕೀರಪ್ಪನವರದು ಲಿಂಗಾಯತ ನೇಕಾರ ಕುಟುಂಬದ ಹಳಕಟ್ಟಿ ಮನೆತನ. ಈಗಿನ ಸವದತ್ತಿ (ಪರಾಸಗಡ) ತಾಲೂಕಿನಲ್ಲಿರುವ ಹಳಕಟ್ಟಿಯಿಂದ ಇವರ ಪೂರ್ವಜರು ಬಂದರೆಂದು ತಿಳಿದುಬರುತ್ತದೆ. ಕ್ರಮೇಣ ಇವರ ಪೂರ್ವಜರು ಧಾರವಾಡಕ್ಕೆ ಬಂದರು. ಹುಟ್ಟಿದ ಮೂರು ವರ್ಷ ಕಳೆಯುವುದರಲ್ಲೇ ಪ್ರೀತಿಯ ತಾಯಿ ಮಗನನ್ನು ತಬ್ಬಲಿ ಮಾಡಿ ಅಗಲಿದರು. ಆಗ ಬಾಲಕನ ರಕ್ಷಣೆ ಇವರ ಅಜ್ಜಿಯಾದ ಬಸಮ್ಮನವರ ಪಾಲಿಗೆ ಬಂದಿತು. ತಂದೆ ಗುರುಬಸಪ್ಪ ವೃತ್ತಿಯಲ್ಲಿ ಶಿಕ್ಷಕರಾಗಿದ್ದರೂ ಪ್ರವೃತ್ತಿಯಲ್ಲಿ ಸಾಹಿತಿಯಾಗಿದ್ದರು. ಇಂಗ್ಲೆಂಡ್‌ನ ಇತಿಹಾಸ, ಏಕನಾಥ ಸಾಧುಗಳ ಚರಿತೆ, ಫ್ರಾನ್ಸ್ ದೇಶದ ರಾಜ್ಯಕ್ರಾಂತಿ, ಸಿಕಂದರ ಬಾದಶಹನ ಚರಿತ್ರೆ ಮುಂತಾದ ಕೃತಿಗಳನ್ನು ರಚಿಸಿ ಆ ಕಾಲಕ್ಕೆ ಸಾಹಿತಿಗಳಾಗಿ ಸಾಕಷ್ಟು ಹೆಸರುಗಳಿಸಿದ್ದರು. ಜೊತೆಗೆ ಆಗಿನ ಪ್ರಮುಖ ಪತ್ರಿಕೆಯಾದ ‘ವಾಗ್ಭೂಷಣ’ದಲ್ಲಿ ಹಲವಾರು ಲೇಖನಗಳನ್ನು ಬರೆದು ನಾಡಿನ ಗಮನ ಸೆಳೆದಿದ್ದರು. ಹೀಗಾಗಿ ಹಳಕಟ್ಟಿಯವರಿಗೆ ಸಾಹಿತ್ಯವೆಂಬುದು ರಕ್ತಗತವಾಗಿ ಒಲಿದು ಬಂದಿತ್ತು.

ಹಳಕಟ್ಟಿಯವರು ತಮ್ಮ ಹುಟ್ಟೂರು ಧಾರವಾಡದಲ್ಲಿ ಪ್ರಾಥಮಿಕ ಶಿಕ್ಷಣವನ್ನು ಪ್ರಾರಂಭಿಸಿ ೧೮೯೬ ರಲ್ಲಿ ಮೆಟ್ರಿಕ್ ಮುಗಿಸಿದರು. ಅನಂತರ ಮುಂದಿನ ಉನ್ನತ ಶಿಕ್ಷಣಕ್ಕಾಗಿ ಮುಂಬೈಗೆ ತೆರಳಿ ಅಲ್ಲಿನ ಸೈಂಟ್ ಝೇವಿಯರ್ ಕಾಲೇಜು ಸೇರಿದರು. ಅಲ್ಲಿ ಕನ್ನಡ ಪುರೋಹಿತ ಆಲೂರು ವೆಂಕಟರಾಯರು ಇವರ ಸಹಪಾಠಿಗಳಾಗಿದ್ದರು. ಆ ಸಂದರ್ಭದಲ್ಲಿ ಮುಂಬೈಯ ವಿದ್ಯಾರ್ಥಿಗಳು ಮತ್ತು ಅಲ್ಲಿನ ಜನರಲ್ಲಿದ್ದ ಗುಜರಾತಿ ಮತ್ತು ಮರಾಠಿ ಭಾಷಾಭಿಮಾನ, ಕನ್ನಡದವರಲ್ಲಿ ತಮ್ಮ ಭಾಷೆಯ ಬಗ್ಗೆ ಇದ್ದ ನಿರಭಿಮಾನ ಇವರ ಮನಸ್ಸಿನ ಮೇಲೆ ತುಂಬಾ ಪರಿಣಾಮ ಬೀರಿತು. ಕನ್ನಡಿಗರು ಎಚ್ಚರಗೊಳ್ಳದಿದ್ದರೆ ಕನ್ನಡ ಉದ್ಧಾರವಾಗದೆಂದು ಆ ಕ್ಷಣವೇ ಕನ್ನಡ ನಾಡು, ನುಡಿ, ನೆಲ, ಜಲ, ಸಾಹಿತ್ಯ, ಸಂಸ್ಕೃತಿಗಾಗಿ ದುಡಿಯಲು ವಿದ್ಯಾರ್ಥಿ ದಿಸೆಯಲ್ಲೇ ದೃಢಸಂಕಲ್ಪಮಾಡಿದರು. ಕರ್ನಾಟಕ ಏಕೀಕರಣಕ್ಕಾಗಿ ಆಗಲೇ ಹೋರಾಟದಲ್ಲಿ ನಿರತರಾಗಿದ್ದ ಆಲೂರು ಇವರಿಗಾಗ ಸ್ಫೂರ್ತಿಯಾಗಿದ್ದರು.

೧೮೯೬ರಲ್ಲಿ ಅಂದರೆ ಫ. ಗು. ಹಳಕಟ್ಟಿ ಅವರ ೧೬ನೇ ವಯಸ್ಸಿನಲ್ಲಿ ಅವರ ಸೊದರ ಮಾವ ತಮ್ಮಣಪ್ಪ ಚಿಕ್ಕೋಡಿ ಅವರ ಮಗಳು ಭಾಗೀರಥಿ ಅವರನ್ನು ಮದುವೆಯಾದರು. ತಮ್ಮಣಪ್ಪಚಿಕ್ಕೋಡಿ ಅಂದಿನ ಕನ್ನಡದ ಕಟ್ಟಾಳು. ಎಲ್‌ಎಲ್‌ಬಿ ಪದವಿ ಪೂರೈಸಿ ಮೊದಲು ತಮ್ಮ ವಕಾಲತ್ತನ್ನು ಬೆಳಗಾವಿಯಲ್ಲಿ ಆರಂಭಿಸಿದವರು. ತಮ್ಮಣಪ್ಪಚಿಕ್ಕೋಡಿ ಅವರ ಆದೇಶದ ಮೇರೆಗೆ ಅವರು ೧೯೦೪ರಲ್ಲಿ ವಿಜಯಪುರಕ್ಕೆ ಆಗಮಿಸಿದ್ದರು. ವಕೀಲ ವೃತ್ತಿಯ ಜೊತೆ ಸಾರ್ವಜನಿಕರ ಸೇವೆಯೂ ಇವರ ಪ್ರಮುಖ ಕಾಯಕವಾಗಿತ್ತು. ವಕೀಲ ವೃತ್ತಿಗಾಗಿ ೧೯೦೪ರಲ್ಲಿ ವಿಜಯಪುರಕ್ಕೆ ಬಂದ ಫ.ಗು. ಹಳಕಟ್ಟಿಯವರು ತಮ್ಮ ಕಡೆಯ ಉಸಿರಿರುವ ತನಕ ವಿಜಯಪುರವನ್ನು ಕಾಯಕ ಭೂಮಿಯನ್ನಾಗಿಸಿಕೊಂಡರು.

ಒಂದು ದಿನ ರಬಕವಿಯ ಮಂಚಾಲೆಯವರ ಮನೆಯಲ್ಲಿ ತಾಡೋಲೆಗಳ ಕಟ್ಟನ್ನು ಕಂಡು ಆಕರ್ಷಿತರಾದ ಫ.ಗು. ಹಳಕಟ್ಟಿ ಅವರು ಅವುಗಳನ್ನು ಸಂಗ್ರಹಿಸುವ ಸಂಪಾದಿಸುವ ಕಾರ್ಯಕ್ಕೆ ಮುಂದಾದರು.

೧೯೦೪ ರಿಂದ ೧೯೬೪ರವರೆಗೆ ೬೦ ವರ್ಷಗಳ ಕಾಲ ನಾನಾ ಮಠ-ಮಂದಿರಗಳನ್ನು ಸುತ್ತಿ, ಭಕ್ತರ ಮನೆಗಳಿಗೆ ಅಲೆದಾಡಿ, ತಾಳೆ ಗರಿ, ಹಸ್ತಪ್ರತಿ ಸೇರಿದಂತೆ ನಾನಾ ರೂಪದಲ್ಲಿದ್ದ ವಚನಗಳನ್ನು ಸಂಗ್ರಹಿಸಿದರು. ಇವುಗಳ ಮುದ್ರಣಕ್ಕಾಗಿ ಮಂಗಳೂರಿನ ಬಾಶೆಲ್ ಮಿಷನ್ ಪ್ರಕಾಶನಕ್ಕೆ ೫೦೦ ರೂಪಾಯಿ ಮುಂಗಡ ಹಣವನ್ನೂ ಕಳುಹಿಸಿದ್ದರು. ಆದರೆ ಆರು ತಿಂಗಳ ಕಾಲ ಪ್ರಕಾಶಕರು ಇವುಗಳನ್ನು ಇಟ್ಟುಕೊಂಡರೂ ಮುದ್ರಿಸದೆ ಹಿಂದಿರುಗಿಸಿದರು. ಕಷ್ಟಪಟ್ಟು ೧೯೨೪ರಲ್ಲಿ ಬೆಳಗಾವಿಯ ಮಹಾವೀರ ಚೌಗುಲೆ ಅವರ ಪ್ರಿಂಟಿಂಗ್ ಪ್ರೆಸ್‌ನಲ್ಲಿ ವಚನ ಶಾಸ್ತ್ರ ಭಾಗ -೧ ಪ್ರಕಟಗೊಳಿಸಿದರು. ಆದರೆ ಮುದ್ರಣ ಒಂದು ಸವಾಲಾಗಿತ್ತು. ಧೈರ್ಯಗೆಡದ ಹಳಕಟ್ಟಿ ಅವರು ಮುದ್ರಣಕ್ಕೆ ಹಣ ಸಿಗದಿದ್ದಾಗ ಆಸ್ತಿ-ಪಾಸ್ತಿ ಸೇರಿದಂತೆ ಕೊನೆಗೆ ಇರುವ ಮನೆಯನ್ನೂ ಮಾರಿ ಮುದ್ರಣ ಯಂತ್ರ ಖರೀದಿಸಿ ‘ಹಿತ ಚಿಂತಕ’ ಮುದ್ರಣಾಲಯ ಸ್ಥಾಪಿಸಿ ಸತತ ೩೪ ವರ್ಷಗಳ ಕಾಲ ವಚನಗಳನ್ನು ಸಂಪಾದಿಸಿ ಮುದ್ರಿಸಿದ್ದರು. ಅದುವರೆಗೆ ಕೇವಲ ೫೦ ವಚನಕಾರರ ವಚನಗಳು ಮತ್ತು ಹೆಸರು ಪ್ರಚಲಿತದಲ್ಲಿದ್ದವು. ಇವರ ಕಾರ್ಯದ ಬಳಿಕ ೨೫೦ ವಚನಕಾರರ ಸಹಸ್ರಾರು ವಚನಗಳು ಬೆಳಕಿಗೆ ಬಂದವು.

ಅಷ್ಟಕ್ಕೆ ತೃಪ್ತರಾಗದ ಹಳಕಟ್ಟಿ ಅವರು, ವಚನಗಳ ಪ್ರಸಾರಕ್ಕಾಗಿ ‘ಶಿವಾನುಭವ ಪತ್ರಿಕೆ’ ಆರಂಭಿಸಿ ೩೪ ವರ್ಷಗಳ ಕಾಲ ಅದನ್ನು ಪ್ರಕಟಗೊಳಿಸಿ ಪ್ರಸಾರಗೊಳಿಸಿದರು. ಹಳಕಟ್ಟಿಯವರಿಗೆ ಮೂರು ಸಮಸ್ಯೆಗಳು ನಿರಂತರವಾಗಿದ್ದವು. ಬಡತನ, ಮನೆಯಲ್ಲಿ ಆಗಾಗ ಸಂಭವಿಸುತ್ತಿದ್ದ ಸಾವುಗಳು ಮತ್ತು ಅನಾರೋಗ್ಯ. ಹಾಕಿದ ಅಂಗಿ ಹರಿದಿರುತ್ತಿದ್ದ ಕಾರಣ ಇತರರಿಗೆ ಕಾಣದಂತೆ ಸದಾ ಕರಿ ಬಣ್ಣದ ಕೋಟ್ ಹಾಕಿಕೊಂಡಿರುತ್ತಿದ್ದರು. ಇಪ್ಪತ್ತನೇ ಶತಮಾನದ ಪ್ರಾರಂಭದ ಆ ದಿನಗಳಲ್ಲಿ ಆಂಗ್ಲರ ಆಡಳಿತ ಹಾಗೂ ಅವರು ತಂದಿತ್ತ ಶಿಕ್ಷಣದ ಸುಧಾರಣೆಗಳಿಂದ ಸಮಾಜದಲ್ಲಿ ಎಚ್ಚರಿಕೆ ಮೂಡುತ್ತಿದ್ದ ಕಾಲವಾಗಿತ್ತು. ಆಧುನಿಕ ಶಿಕ್ಷಣ ಪಡೆದಿದ್ದ ಹಳಕಟ್ಟಿ ಮನಸ್ಸು ಮಾಡಿದ್ದರೆ ಸರಕಾರದಲ್ಲಿ ಘನತರವಾದ ಹುದ್ದೆ ಪಡೆಯಬಹುದಿತ್ತು. ಇಲ್ಲವೇ ತಮ್ಮ ವಕೀಲಿ ವೃತ್ತಿಯಿಂದ ಶ್ರೀಮಂತಿಕೆ ದಕ್ಕಿಸಿಕೊಳ್ಳಬಹುದಿತ್ತು. ಆದರೆ ವಿಜಾಪುರಕ್ಕೆ ಬಂದ ಅವರು ಅಲ್ಲಿ ತಾಂಡವವಾಡುತ್ತಿದ್ದ ಬಡತನ, ಅನಕ್ಷರತೆ, ರೈತರು ಕೃಷಿ ಉತ್ಪನ್ನ ಮಾರಾಟಕ್ಕೆ ಪರದಾಡುತ್ತಿದ್ದ ಪರಿ ಇವೆಲ್ಲವನ್ನು ಮನಗಂಡು ಸಮಾಜ ಸೇವೆಗೆ ತಮ್ಮ ಬದುಕನ್ನು ಮೀಸಲಾಗಿಸಿದರು.

ತಮ್ಮ ತಂದೆಯಂತೆ ವಿಜಯಪುರದಲ್ಲಿ, *ಬಿಜಾಪುರ ಲಿಂಗಾಯತ ವಿದ್ಯಾಭಿವೃದ್ಧಿ ಸಂಸ್ಥೆ* ಹುಟ್ಟುಹಾಕಿದರಲ್ಲದೆ, ರೈತರಿಗೆ ನೆರವಾಗುವ ನಿಟ್ಟಿನಲ್ಲಿ *ಸಿದ್ದೇಶ್ವರ ಸಹಕಾರಿ ಬ್ಯಾಂಕ್* ಸ್ಥಾಪಿಸಿದರು. ಸಮಾಜ ಸೇವೆಯ ಜೊತೆ ಜೊತೆಗೆ ಸಾಹಿತ್ಯದಲ್ಲಿ ಆಸಕ್ತಿ ಇದ್ದ ಹಳಕಟ್ಟಿ ಮೊದಲಿಗೆ ಬಸವಣ್ಣನವರ ವಚನಗಳನ್ನು ಇಂಗ್ಲಿಷ್‌ಗೆ ಅನುವಾದ ಮಾಡುವುದರ ಮೂಲಕ (೧೯೨೨) ವಚನ ಸಾಹಿತ್ಯ ಸಂಗ್ರಹಣೆ, ಪ್ರಕಟನೆಗೆ ಕೈಹಾಕಿದರು. ಮುಂದೆ ಈ ಪ್ರವೃತ್ತಿಯೇ ಅವರಿಗೆ ಧ್ಯಾನವಾಯಿತು. ಹನ್ನೆರಡನೇ ಶತಮಾನದ ಶಿವಶರಣರ ವಚನಗಳನ್ನು ಸಂಗ್ರಹಿಸುವುದು ಅವುಗಳಲ್ಲಿ ಇರಬಹುದಾದ ಧಾರ್ಮಿಕ ಹಾಗೂ ವೈಚಾರಿಕ ಮಹತ್ವದ ಚಿಂತನೆಗಳನ್ನು ಸಾದರಪಡಿಸುವುದು ಇದು ಫ.ಗು. ಹಳಕಟ್ಟಿಯವರ ಜೀವನ ಮಂತ್ರವಾಯಿತು.

೧೯೧೦ ರಲ್ಲಿ ಬಿ.ಎಲ್.ಡಿ.ಇ. ಸಂಸ್ಥೆ, ೧೯೧೨ರಲ್ಲಿ ಸಿದ್ದೇಶ್ವರ ಸಂಸ್ಥೆ, ೧೯೧೩ರಲ್ಲಿ ಸಹಕಾರಿ ಸಂಘ, ೧೯೧೪ರಲ್ಲಿ ಸಿದ್ದೇಶ್ವರ ಹೈಸ್ಕೂಲು ಸ್ಥಾಪಿಸಿ, ೧೯೧೯ರಲ್ಲಿ ವಿಜಯಪುರದ ನಗರಸಭಾ ಸದಸ್ಯರಾಗಿ, ೧೯೨೦ರಲ್ಲಿ ಮುಂಬೈ ವಿಧಾನಸಭಾ ಸದಸ್ಯರಾಗಿ ಹಳಕಟ್ಟಿಯವರು ಕಾರ್ಯ ನಿರ್ವಹಿಸಿದ್ದರೂ ಸಹ ಎಲ್ಲೆಡೆ ತಮ್ಮ ಶುದ್ಧ ಹಸ್ತ ಮತ್ತು ಪ್ರಾಮಾಣಿಕ ಹಾಗೂ ಪಾರದರ್ಶಕ ಬದುಕಿನೊಂದಿಗೆ ಗುರುತಿಸಿಕೊಂಡರು.

೧೯೨೩ರಲ್ಲಿ ‘ವಚನಶಾಸ್ತ್ರಸಾರ’ ಎಂಬ ಬೃಹತ್ ವಚನ ಸಂಕಲನವನ್ನು ಹೊರತರುವ ಮೂಲಕ ವಚನಗಳ ಸಂಗ್ರಹಕ್ಕೆ ಕೈಹಾಕಿದ ಹಳಕಟ್ಟಿಯವರು ಇವುಗಳ ಪ್ರಕಟನೆಗಾಗಿ ೧೯೨೬ರಲ್ಲಿ ‘ಹಿತಚಿಂತಕ’ ಎಂಬ ಮುದ್ರಣಾಲಯ ಪ್ರಾರಂಭಿಸಿ ‘ಶಿವಾನುಭಾವ’ ಎಂಬ ಪತ್ರಿಕೆಯನ್ನೂ ಆರಂಭಿಸಿದರು.

೧೯೨೬ರಲ್ಲಿ ಬಳ್ಳಾರಿಯಲ್ಲಿ ಜರುಗಿದ ಅಖಿಲ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯಲ್ಲಿ ಕನ್ನಡ ಸಾಹಿತ್ಯದ ಹೊಸ ದಿಕ್ಸೂಚಿಯಾದ ವಚನ ಸಾಹಿತ್ಯದ ಪರಿಚಯಗೊಳಿಸಿ ಕನ್ನಡ ಸಾರಸ್ವತ ಲೋಕಕ್ಕೆ ಅಚ್ಚರಿ ಮೂಡಿಸಿದರು.

೧೯೨೬ರಿಂದ ೧೯೬೧ರವರೆಗೆ ನಿರಂತರವಾಗಿ ಈ ಪತ್ರಿಕೆಯಲ್ಲಿ ವಚನಗಳ ಬಗ್ಗೆ, ಶಿವಶರಣರ ಬಗ್ಗೆ ಹಳಕಟ್ಟಿಯವರು ಬರೆದ ಲೇಖನಗಳ ಸಂಗ್ರಹಗಳು ಒಟ್ಟು ೭೨ ಕೃತಿಗಳಾಗಿ ಹೊರಹೊಮ್ಮಿವೆ. ಇವುಗಳ ಜೊತೆ ಅನ್ಯರ ಕೃತಿಗಳು ಸೇರಿ ೧೦೫ ಕೃತಿಗಳನ್ನು ಪ್ರಕಟಿಸಿದ್ದಾರೆ. ಎಂದೂ ವ್ಯವಸ್ಥೆಯೊಂದಿಗೆ ರಾಜಿಯಾಗದೆ ವಚನಗಳಲ್ಲಿ ಅಡಗಿರುವ ಶಿವಶರಣರ ತತ್ವ ಮತ್ತು ಚಿಂತನೆಗಳನ್ನು ಜನತೆಗೆ ತಿಳಿಸುವುದೇ ಜೀವನದ ಪರಮ ಗುರಿ ಎಂದು ನಂಬಿಕೊಂಡಿದ್ದ ಹಳಕಟ್ಟಿಯವರು ತಮ್ಮ ಜೀವಿತದ ಕೊನೆಯವರೆಗೂ ವಿಜಯಪುರದಲ್ಲಿ ಸ್ವಂತ ಮನೆ ಮಾಡಿಕೊಳ್ಳದೆ ಫಕೀರನಂತೆ ಬದುಕಿದರು. ತುಂಬ ಕಷ್ಟದಲ್ಲಿ ನಡೆಯುತ್ತಿದ್ದ ಪತ್ರಿಕೆಗೆ ಯಾರಾದರು ೨ರೂ. ಸಹಾಯಧನ ನೀಡಿದರೆ ಅದನ್ನು ಅವರ ಹೆಸರಿನೊಂದಿಗೆ ಪ್ರಕಟಿಸಿ ಕೃತಜ್ಞತೆ ಅರ್ಪಿಸುತ್ತಿದ್ದರು.

ತಾವು ಈ ರೀತಿ ಕಷ್ಟಗಳ ಸರಮಾಲೆಯ ನಡುವೆ ಬದುಕಿದ್ದರ ಬಗ್ಗೆ ಅವರು ಎಂದೂ ವಿಷಾದ ಪಡಲಿಲ್ಲ. ತಮ್ಮ ‘ನನ್ನ ೭೫ ವರ್ಷಗಳು’ ಎಂಬ ಕೃತಿಯಲ್ಲಿ ತನ್ನ ಸಾಧನೆಯ ಹಿಂದೆ ಬೆನ್ನೆಲುಬಾಗಿ ನಿಂತ ತಂದೆ ಗುರುಬಸಪ್ಪ ಹಾಗೂ ಹೆಣ್ಣು ಕೊಟ್ಟ ಮಾವ ತಮ್ಮಣ್ಣಪ್ಪ ಇವರನ್ನು ಹಳಕಟ್ಟಿಯವರು ತುಂಬು ಹೃದಯದಿಂದ ಸ್ಮರಿಸಿದ್ದಾರೆ.

ಇವತ್ತಿನ ಆಧುನಿಕ ಕನ್ನಡ ಸಾಹಿತ್ಯದಲ್ಲಿ ಲಭ್ಯವಾಗುತ್ತಿರುವ ಸಮಗ್ರ ವಚನ ಸಾಹಿತ್ಯದ ಹಿಂದೆ ಫ.ಗು. ಹಳಕಟ್ಟಯವರ ಅರ್ಧ ಶತಮಾನದ ಶ್ರಮವಿದೆ. ಈ ಕಾರಣಕ್ಕಾಗಿ ಕನ್ನಡ ನಾಡು ಅವರನ್ನು ‘ವಚನ ಪಿತಾಮಹ’ ಎಂಬ ಬಿರುದು ನೀಡಿ ಗೌರವಿಸಿದೆ.

ಕರ್ನಾಟಕದ ಮ್ಯಾಕ್ಸ ಮುಲ್ಲರ್, ವಚನ ಪಿತಾಮಹ ಡಾ. ಫ. ಗು. ಹಳಕಟ್ಟಿ ಅವರು ೧೯೬೪ ಜೂನ್ ೨೯ ರಂದು ಅನಾರೋಗ್ಯಕ್ಕೆ ತುತ್ತಾಗಿ ವಿಧಿವಶರಾದರು. *ಹಳಕಟ್ಟಿಯವರು ಸ್ಥಾಪಿಸಿದ ಬಿ.ಎಲ್.ಡಿ.ಇ. ಸಂಸ್ಥೆ ಇಂದು ವೈದ್ಯಕೀಯ, ಇಂಜಿನಿಯರಿಂಗ್ ಕಾಲೇಜು, ಆಸ್ಪತ್ರೆ ಸೇರಿದಂತೆ ೧೦೮ ಶಿಕ್ಷಣ ಸಂಸ್ಥೆಗಳೊಂದಿಗೆ ಹೆಮ್ಮರವಾಗಿ ಬೆಳೆದು ನಿಂತಿದೆ*.

ಪ್ರೊ.ಜಿ.ಆರ್ ಅಂಬಲಿ

- Advertisement -
- Advertisement -

Latest News

ಇದು ಇಂದಿನ ಹಾಸ್ಟೆಲ್ ಹುಡುಗ ಹುಡುಗಿಯರಿಗೆ ನಾವೆಲ್ಲ ಹೇಳಬೇಕಾದ ಖಾಸ್ ಬಾತ್

ಸರ್... ಓ ಸರ್...ಕಾಂಬಳೆ ಸರ್  ... ಸರ್ ನಮಸ್ಕಾರ್ರಿ ಆರಾಮ ಅದೀರಿ?? ನಾ ಯಾರ್ ಹೇಳ್ರಿ ಅನ್ನುತ್ತಿದ್ದಂತೆಯೇ ನಿವೃತ್ತಿ ಹೊಂದಿ ಐದಾರು ವರ್ಷ ಆಗಿದ್ದ ಬಿಸಿಎಮ್...
- Advertisement -

More Articles Like This

- Advertisement -
close
error: Content is protected !!
Join WhatsApp Group