ಬಸವ ಬೆಳಕು
ಅಂದು ಒಬ್ಬರೇ
ಹೊರಟರು
ಹಗಲು ಇರುಳು
ಕಾಡು ಕತ್ತಲೆ
ಒಂಟಿ ಸಲಗ
ಬಿಡದ ಛಲ
ಶರಣರ ಸೂಳ್ನುಡಿ
ಅನುಭಾವ ದರ್ಶನ
ಕಲ್ಯಾಣ ಕೂಡಲ
ಬಯಲು ಧಾಮ
ಹುಡುಕಾಟ ಅನ್ವೇಷಣೆ
ಆರು ದಶಕದ ಪಯಣ
ಬೇಡಿದರು ಮಠ ಮನೆಗಳಲಿ
ತಾಡೋಲೆಗಳ ಸಂಗ್ರಹ
ಇದ್ದುದೆಲ್ಲವ ಕೊಟ್ಟು
ಪದವಿ ವಕಾಲತ್ತು ಬಿಟ್ಟು
ಹಿಡಿದರು ವಚನಗಳ ಕಟ್ಟು
ಅಕ್ಷರ ಶಬ್ದಗಳ ಜಾಲ
ಪರಿಷ್ಕರಣೆ ಸಂಪಾದನೆ
ಹರಕು ರುಮಾಲು
ಕನ್ನಡಕ ಒಡೆದಿತ್ತು
ಹರಿದ ಕೋಟು
ಮಾಸಿದ ದೋತುರ
ಹೆಂಡತಿ ಮಗ
ಇಹಲೋಕ ಬಿಟ್ಟರು .
ಗಟ್ಟಿ ಕುಳ ಘನ ಫಕೀರ
ಡಾ.ಫ ಗು ಹಳಕಟ್ಟಿ
ನಾಮಧೇಯ
ವಚನ ಗುಮ್ಮಟದ
ಪಿತಾಮಹ
ಮರೆಯಲಾದು ನಿಮ್ಮನು
ಬಸವ ಭೂಮಿಯ ಬೆಳಕನು
———————————–
ಹಳಕಟ್ಟಿ ಅವರ ನೆನೆದು.
————————
ಹುಟ್ಟುತ್ತಲೇ ಇಲ್ಲವಾದಳು
ಹೆತ್ತ ಕರುಳಿನ ಅವ್ವ
ಮಾವನ ಪ್ರೀತಿ .
ಅಪ್ಪನ ಕರುಣೆ ನೀತಿ
ಓದು ಆಟ ಪಾಠ
ವಿಜ್ಞಾನ ಕಾನೂನು ಪದವಿ
ವೃತ್ತಿ ವಕಾಲತ್ತು
ಅದೇಕೋ ವಚನಗಳ
ಅಧ್ಯಯನ ಆಸಕ್ತಿ .
ಹುಡುಕಿದರು ತಾಡೋಲೆ
ಮನೆ ಮಠಗಳ ಹೊಕ್ಕು
ಕಳೆದು ಕೊಂಡರು ದುಡ್ಡು
ವಾಚು ಬಂಗಾರದ ಚೈನು
ಬೆರಳು ಕಾಣುವ ಬೂಟು
ಹರಿದ ಕೋಟು
ಮಾಸಿತ್ತು ಧೋತುರ
ಚಿಂದಿಯಾದ ಅಂಗಿ
ತಲೆಗೆ ಹಳೆಯ ರುಮಾಲು
ಸೈಕಲ್ಲಿನ ಹಿಂದೆ
ವಚನಗಳ ಕಟ್ಟು
ಒಡೆದ ಕನ್ನಡಕದ ದೃಷ್ಟಿ
ಪ್ರೀತಿ ಜಂಗಮ ಸಮಷ್ಟಿ.
ಸತ್ತರೂ ಮಗ ಮಡದಿ
ಬಿಡದ ಸಂಕಲನ
ಕನ್ನಡಕೆ ಒಬ್ಬನೇ
ವಚನ ಘನ ಫಕೀರ .
ಬೇಡಲಿಲ್ಲ ಕೈಯೊಡ್ಡಿ
ತುಂಬಿದ ಜೋಳಿಗೆಗೆ
ಅನುಭಾವದ ನುಡಿಗಳನ್ನು.
ನಿಮ್ಮ ನೆನಹೆ ಮಾನ
ನಿಮ್ಮ ನೆರಳೆ ಪ್ರಾಣ.
————————-
ಡಾ.ಶಶಿಕಾಂತ.ಪಟ್ಟಣ ಪುಣೆ