spot_img
spot_img

ಕನ್ನಡದ ವೈಜಾರಿಕ ಪ್ರಜ್ಞೆಯನ್ನು ವಿಸ್ತರಿಸಿದ್ದ ಡಾ.ಗಿರೀಶ ಕಾರ್ನಾಡ್ – ನಾಡೋಜ ಡಾ. ಮಹೇಶ ಜೋಶಿ

Must Read

- Advertisement -

ಬೆಂಗಳೂರು: ಜ್ಞಾನಪೀಠ ಪುರಸ್ಕೃತ ಡಾ.ಗಿರೀಶ ಕಾರ್ನಾಡ್ ಅವರು  ನಾಡಿನ ಮಹಾನ್ ಪ್ರತಿಭೆ. ಖ್ಯಾತ ಉದ್ಯಮಿ ಹಾಗೂ ಚಲನಚಿತ್ರ ನಿರ್ಮಾಪಕ ಶ್ರೀಹರಿ ಖೋಡೆ ಅವರು ನಿರ್ಮಿಸಿದ ʻಸಂತ ಶಿಶುನಾಳ ಶರೀಫʼ ಚಲನಚಿತ್ರದಲ್ಲಿ ಗುರು ಗೋವಿಂದ ಭಟ್ಟರ ಪಾತ್ರದಲ್ಲಿ ಅತ್ಯುತ್ತಮವಾಗಿ ನಟಿಸಿದ್ದರು. ಚಿತ್ರೀಕರಣ ಸಂದರ್ಭದಲ್ಲಿ ಗುರು ಗೋವಿಂದ ಭಟ್ಟರ ವಂಶಸ್ಥನಾಗಿದ್ದ ತಮ್ಮೊಂದಿಗೆ ಸೂಕ್ಷ್ಮಾತಿ ಸೂಕ್ಷ್ಮ ವಿಷಯಗಳನ್ನು ಚರ್ಚಿಸಿದ್ದರು. ಆ ಮೂಲಕ ಗೋವಿಂದ  ಭಟ್ಟರ ಪಾತ್ರವನ್ನು ಸಮರ್ಥವಾಗಿ ನಿರ್ವಹಿಸಿದ್ದರು. ದೂರದರ್ಶನದಲ್ಲಿ ʻಈಶ್ವರ ಅಲ್ಲಾ ನೀನೇ ಎಲ್ಲಾʼ ಧಾರಾವಾಹಿಯಲ್ಲಿಯೂ ಗಿರೀಶ ಕಾರ್ನಾಡ್ ಅವರೇ ಗುರು ಗೋವಿಂದ ಭಟ್ಟರ ಪಾತ್ರ ನಿರ್ವಹಿಸಬೇಕು ಬೇಡಿಕೆಯು ನಾಡಿನಾದ್ಯಂತ ಕೇಳಿ ಬಂದಿತ್ತು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ ಅವರು ಗಿರೀಶ ಕಾರ್ನಾಡರ ಕುರಿತ ನೆನಪಿನ ಬುತ್ತಿಯನ್ನು ಬಿಚ್ಚಿಟ್ಟರು.

ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಹಮ್ಮಿಕೊಂಡ ಗಿರೀಶ್ ಕಾರ್ನಾಡರ ೮೯ನೆಯ ಜನ್ಮದಿನಾಚರಣೆಯ ಹಿನ್ನೆಲೆಯಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡುತ್ತಿದ್ದರು. 

ರಘುನಾಥ್ ಕಾರ್ನಾಡ್ ಹಾಗೂ ಶ್ರೀಮತಿ ಕೃಷ್ಣಾಬಾಯಿ ಕಾರ್ನಾಡ್  ದಂಪತಿಗಳಿಗೆ 1934 ಮೇ 19ರಂದು ಮಹಾರಾಷ್ಟ್ರದ ಮಾಥೇರದಲ್ಲಿ ಜನಿಸಿದ ಕಾರ್ನಾಡರು ಪ್ರಾಥಮಿಕ ಶಿಕ್ಷಣ ಉತ್ತರಕನ್ನಡದ ಶಿರಸಿಯಲ್ಲಿ, ಪ್ರೌಢ ಶಿಕ್ಷಣ ಧಾರವಾಡದ ಬಾಸೆಲ್ ಮಿಷನ್ ಹೈಸ್ಕೂಲಿನಲ್ಲಿ,  ಹಾಗೂ ಪದವಿ ಶಿಕ್ಷಣ ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಆಯಿತು. ಆ ಬಳಿಕ ಪ್ರತಿಷ್ಠಿತ ರೋಡ್ಸ್ ಸ್ಕಾಲರ್ಶಿಪ್ ಪಡೆದುಕೊಂಡು ಆಕ್ಸ್‌ಫರ್ಡಿನಲ್ಲಿ ಹೆಚ್ಚಿನ ವ್ಯಾಸಂಗ ಮಾಡಿದವರು. 

- Advertisement -

ಆಕ್ಸ್‌ಫರ್ಡಿನ ಡಿಬೇಟ್ ಕ್ಲಬ್ಬಿಗೆ ಅಧ್ಯಕ್ಷರಾಗಿ ಆಯ್ಕೆಯಾದ ಮೊದಲ ಏಷಿಯನ್ ಪ್ರಜೆ ಇವರು. ಶಿಕಾಗೋ ವಿಶ್ವವಿದ್ಯಾಲಯದಲ್ಲಿ ಸಂದರ್ಶನ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ. ಇಂಗ್ಲೆಂಡಿನಲ್ಲಿ ನೆಹರೂ ಸೆಂಟರಿನ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದಾರೆ. ಪೂನಾ ಫಿಲ್ಮ್ ಇನ್ಸ್ಟಿಟ್ಯೂಟಿನ ನಿರ್ದೇಶಕರಾಗಿ, ಕೇಂದ್ರ ಸಂಗೀತ ನಾಟಕ ಅಕಾಡೆಮಿಯ ಅಧ್ಯಕ್ಷರಾಗಿ, ರಾಜ್ಯ ನಾಟಕ ಅಕಾಡಮಿ ಅಧ್ಯಕ್ಷರಾಗಿಕೂಡಾ ಅವರು ಕಾರ್ಯನಿರ್ವಹಿಸಿರುವರು.

ಕನ್ನಡದಲ್ಲಿ ನಾಟಕ ಸಾಹಿತ್ಯಕಾರರಾಗಿ, ಪ್ರಸಿದ್ಧ ರಂಗಭೂಮಿ ತಜ್ಞರಾಗಿ, ನಾಟಕಕಾರರಾಗಿ, ಚಲನಚಿತ್ರರಂಗದ ನಟರಾಗಿ, ನಿರ್ದೇಶಕರಾಗಿ, ಸಂಗೀತ ನಾಟಕ ಅಕಾಡೆಮಿಗಳ ಅಧ್ಯಕ್ಷರಾಗಿ ಹೀಗೆ ಅವರು ಹಲವು ರಂಗಗಳಲ್ಲಿ ರಾಜ್ಯ, ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧರಾಗಿದ್ದರು ಎಂದು ಡಾ. ಮಹೇಶ ಜೋಶಿ ನೆನಪಿಸಿಕೊಂಡರು.

ಕಾರ್ನಾಡರು ಪಾಶ್ಚಾತ್ಯ ಸಾಹಿತ್ಯದ ಪುನರುಜ್ಜೀವನದಿಂದ ಆಳವಾಗಿ ಪ್ರಭಾವಿತರಾದರು. ಸ್ಥಳೀಯ ಜನರಿಗೆ ಸಂಪೂರ್ಣವಾಗಿ ಹೊಸದನ್ನು ಬರೆಯಲು ಬರಹಗಾರರ ನಡುವೆ ಪೈಪೋಟಿ ಇದ್ದ ಕಾಲದಲ್ಲಿ ಆಗಿನ ವ್ಯವಸ್ಥೆಯನ್ನು ಐತಿಹಾಸಿಕ ಮತ್ತು ಪೌರಾಣಿಕ ಪಾತ್ರಗಳೊಂದಿಗೆ ಚಿತ್ರಿಸುವ ವಿಧಾನವನ್ನು ಅಳವಡಿಸಿಕೊಂಡು ಕೃತಿಗಳನ್ನು ರಚಿಸುವ ಮೂಲಕ ಜನಪ್ರಿಯರಾದರು. ಪುರಾಣವನ್ನು ಆಧಾರವಾಗಿರಿಸಿಕೊಂಡು ಕಾರ್ನಾಡರು ʻಯಯಾತಿʼ  ʼಅಗ್ನಿ ಮತ್ತು ಮಳೆʼ ನಾಟಕ ಬರೆದರು. 

- Advertisement -

ಇತಿಹಾಸ ಬಳಸಿ ʻತುಘಲಖ್ʼ ನಾಟಕ ಬರೆದರು. ಜನಪದ ಕಥೆಯನ್ನು  ಆಧರಿಸಿ ʼನಾಗಮಂಡಲʼ ನಾಟಕವನ್ನು ರಚಿಸಿದರು. ಸ್ವಾತಂತ್ರ್ಯಾನಂತರದ ದಿನಗಳಲ್ಲಿ ಕೆಲವು ಗಣ್ಯರು ಭಾರತೀಯ ರಂಗಭೂಮಿಯನ್ನು ಪಾಶ್ಚಾತ್ಯ ಪ್ರಭಾವದಿಂದ ಬಿಡಿಸಿ ಕಟ್ಟಬೇಕೆಂದು ಮಾಡಿದ ಆಲೋಚನೆ, ತೋರಿದ ಕಾಳಜಿಗೆ ಸ್ಪಂದಿಸಿದ ಕಾರ್ನಾಡರು ಜಾನಪದ ತಂತ್ರಗಳನ್ನು ಬಳಸಿ ‘ಹಯವದನ’ ನಾಟಕ ಸೇರಿದಂತೆ ಅನೇಕ ಕೃತಿಗಳನ್ನು ರಚಿಸಿಸುವ ಮೂಲಕ ಕನ್ನಡ ಸಾರಸ್ವತ ಲೋಕವನ್ನು ಪ್ರಪಂಚಕ್ಕೆ ಪರಿಚಯಿಸುವ ಮೂಲಕ ಕನ್ನಡದ ವೈಚಾರಿಕ ಪ್ರಜ್ಞೆಯನ್ನು ಹೆಚ್ಚಿಸಿದ್ದರು ಎಂದು ಕಾರ್ನಾಡರ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದರು.   

ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಕಟಣಾ ವಿಭಾಗದ ಸಂಚಾಲಕರಾದ ಪ್ರೊ.ಎನ್‌.ಎಸ್‌. ಶ್ರೀಧರ ಮೂರ್ತಿ ಅವರು ಮಾತನಾಡಿ, ಅವರೊಂದಿಗೆ ನಿಕಟ ಸಂಬಂಧ ಹೊಂದಿದ್ದ ಬಗ್ಗೆ ಪ್ರಸ್ತಾಪಿಸಿ ಕನ್ನಡ ರಂಗ ಭೂಮಿಯನ್ನು ಜಾಗತಿಕ ಮಟ್ಟದಲ್ಲಿ ಗುರುತಿಸಿದ ಗಿರೀಶ್ ಕಾರ್ನಾಡರು ಯಶಸ್ವಿ ಚಿತ್ರಕಥೆಗಾರು ಮಾತ್ರವಲ್ಲದೆ ಉತ್ತಮ  ಚಲನಚಿತ್ರ ನಿರ್ದೇಶಕರೂ ಆಗಿದ್ದರು. ಅವರು ೧೯೭೦ ರಲ್ಲಿ ಕನ್ನಡ ಚಲನಚಿತ್ರ ‘ಸಂಸ್ಕಾರ’ದ ಮೂಲಕ ತಮ್ಮ ಸಿನಿ ವೃತ್ತಿಜೀವನವನ್ನು ಪ್ರಾರಂಭಿಸಿದರು. ಈ ಚಿತ್ರಕ್ಕೆ ಅವರೇ ಚಿತ್ರಕಥೆ ಬರೆದಿದ್ದರು.

ಈ ಚಿತ್ರ ಹಲವು ಪ್ರಶಸ್ತಿಗಳನ್ನು ಬಾಚಿಕೊಂಡಿತ್ತು. ಇದಾದ ನಂತರ ಅನೇಕ ಚಿತ್ರಗಳನ್ನು ಮಾಡಿದ ಅವರು ಎಸ್‌ಎಲ್ ಭೈರಪ್ಪ ಅವರ ʻವಂಶವೃಕ್ಷʼ ಹಾಗೂ ʻತಬ್ಬಲಿ ನಿನಾದೆ ಮಗನೆʼ ಕಾದಂಬರಿಗಳನ್ನು ಚಲನಚಿತ್ರಕ್ಕಾಗಿ  ಹಿರಿಯ ರಂಗಕರ್ಮಿ ಡಾ.ಬಿ.ವಿ. ಕಾರಂತರ ಜೊತೆ ಸೇರಿ ನಿರ್ದೇಶನ ಮಾಡಿದ್ದರು.

ಕಾರ್ನಾಡರು ಸ್ವಯಂ ನಿರ್ದೇಶಿಸಿದ ಚಿತ್ರಗಳಾದ  ʻಒಂದಾನೊಂದು ಕಾಲದಲ್ಲಿʼ, ʻಕಾಡುʼ, ʻಕಾನೂರು ಹೆಗ್ಗಡತಿʼ, ಹಿಂದಿಯಲ್ಲಿ ʻಉತ್ಸವ್ʼ, ʻಚೆಲ್ವಿʼ, ಮುಂತಾದ ಪ್ರಮುಖ  ಚಲನ ಚಿತ್ರಗಳನ್ನು ನಿರ್ದೇಶಿಸಿದ್ದರು.  ಸ್ವತಃ ನಟರಾಗಿ ಶ್ಯಾಂ ಬೆನೆಗಲ್ ಅವರ ʻನಿಶಾಂತ್ʼ, ʻಮಂಥನ್ʼ, ʻಭೂಮಿಕಾʼ, ಶಂಕರನಾಗ್ರ ಜೊತೆ ʻಮಾಲ್ಗುಡಿ ಡೇಸ್ʼ, ಕನ್ನಡ ಮತ್ತು ತೆಲುಗಿನ ʻಆನಂದ ಭೈರವಿʼ,  ʻಮೈಸೂರು ಮಲ್ಲಿಗೆʼ ಸೇರಿದಂತೆ ಅನೇಕ ಚಲನಚಿತ್ರಗಳಲ್ಲಿ ಮಾಡಿದ್ದರು.

ಕನ್ನಡ ರಂಗಭೂಮಿಗೆ ಪ್ರಯೋಗಶೀಲತೆಯನ್ನು ನೀಡುವುದರ ಜೊತೆಗೆ ಜಾಗತಿಕ ಮನ್ನಣೆಯನ್ನೂ ದೊರಕಿಸಿ ಕೊಟ್ಟಿದ್ದರು ಸರಾಗವಾಗಿ ಕನ್ನಡ, ತಮಿಳು, ಹಿಂದಿ, ಮಲಯಾಳ, ಮರಾಠಿ ಹೀಗೆ  ವಿವಿದ ಭಾಷೆಗಳ ಕಲಾತ್ಮಕ ಮತ್ತು ವಾಣಿಜ್ಯ ಚಿತ್ರಗಳೆಡರಲ್ಲೂ ನೈಜವಾಗಿ ನಟಿಸಿ ಎಲ್ಲಾ ಕ್ಷೇತ್ರದಲ್ಲಿಯೂ ಗುರುತಿಸಿಕೊಂಡಿದ್ದರು ಎಂದು ಹೇಳಿದರು.

ಜ್ಞಾನಪೀಠ ಪುರಸ್ಕೃತ ಡಾ.ಗಿರೀಶ್ ಕಾರ್ನಾಡ್   ಅವರ ಜನ್ಮದಿನ ಹಿನ್ನೆಲೆಯಲ್ಲಿ ಪರಿಷತ್ತಿನಲ್ಲಿ ಹಮ್ಮಿಕೊಂಡ ಪುಷ್ಪನಮನ ಕಾರ್ಯಕ್ರಮದಲ್ಲಿ ಪರಿಷತ್ತಿನ ಗೌರವ ಕಾರ್ಯದರ್ಶಿಗಳಾದ ನೇ.ಭ.ರಾಮಲಿಂಗ ಶೆಟ್ಟಿ, ಡಾ. ಪದ್ಮಿನಿ ನಾಗರಾಜು, ಗೌರವ ಕೋಶಾಧ್ಯಕ್ಷರಾದ ಡಾ. ಬಿ.ಎಮ್‌. ಪಟೇಲ್‌ ಪಾಂಡು ಸೇರಿದಂತೆ ಇತರ ಪದಾಧಿಕಾರಿಗಳು ಹಾಗೂ ಪರಿಷತ್ತಿನ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.


ಶ್ರೀನಾಥ್ ಜೆ

- Advertisement -
- Advertisement -

Latest News

ಕ್ಷುಲ್ಲಕ ಕಾರಣಕ್ಕೆ ಪತ್ನಿಯ ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡ !

ಮೂಡಲಗಿ - ಎಮ್ಮೆ ಮಾರಿ ಬಂದ ಹಣ ಕೇಳಿದ್ದಕ್ಕೆ ಕುಪಿತಗೊಂಡ ವ್ಯಕ್ತಿಯೊಬ್ಬ ಕುಡಿತದ ನಶೆಯಲ್ಲಿ ಹೆಂಡತಿಯನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡ ಘಟನೆ ಜರುಗಿದೆ. ತಾಲೂಕಿನ ಫುಲಗಡ್ಡಿ...
- Advertisement -

More Articles Like This

- Advertisement -
close
error: Content is protected !!
Join WhatsApp Group