ಕವಿಗಳಿಲ್ಲದಿದ್ದರೆ ಜಗತ್ತಿನ ಸೌಂದರ್ಯ ಗೊತ್ತಾಗುತ್ತಿರಲಿಲ್ಲ
ಮೂಡಲಗಿ: ‘ಲೋಕಾನುಭವ ಮತ್ತು ಜೀವನಾನುಭವದೊಂದಿಗೆ ಓದು ಇದ್ದರೆ ಉತ್ತಮ ಕಾವ್ಯಗಳು ಹೊರಹೊಮ್ಮುತ್ತವೆ’ ಎಂದು ಸಾಹಿತಿ, ಪತ್ರಕರ್ತ ಬಾಲಶೇಖರ ಬಂದಿ ಹೇಳಿದರು.
ತಾಲ್ಲೂಕಿನ ಶಿವಾಪುರ (ಹ) ಗ್ರಾಮದ ಶ್ರೀ ಬಸವ ಆಶ್ರಮ ಹೂಲಿಕಟ್ಟಿ ಆಶ್ರಯದಲ್ಲಿ ಏರ್ಪಡಿಸಿದ್ದ ದಸರಾ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕವಿ ಇರದಿದ್ದರೆ ಈ ಜಗತ್ತಿನ ಸೌಂದರ್ಯ ಗೊತ್ತಾಗುತ್ತಿರಲಿಲ್ಲ ಎಂದರು.
ಕಾವ್ಯ ಕಟ್ಟುವವವರಿಗೆ ಕೊರತೆ ಇಲ್ಲ ಆದರೆ ಕಾವ್ಯವನ್ನು ಕುಳಿತು ಕೇಳುವವರು, ಓದುವರರ ಸಂಖ್ಯೆ ಕಡಿಮೆಯಾಗುತ್ತಲಿದೆ. ಮೊಬೈಲ್‍ಗಳ ಅಧಿಕ ಬಳಕೆಯಿಂದ ಯುವ ಕವಿಗಳಲ್ಲಿ ಭಾವಗಳ ಮತ್ತು ಸೃಜನಶೀಲತೆಯ ಕೊರತೆ ಎದ್ದುಕಾಣುತ್ತಲಿದೆ. ಯುವ ಕವಿಗಳು ಧ್ಯಾನಾಸಕ್ತಿಯ ಮೂಲಕ ಗಟ್ಟಿ ಕವಿತೆಗಳನ್ನು ಸಮಾಜಕ್ಕೆ ನೀಡಬೇಕು ಎಂದರು.
ಮುಖ್ಯ ಅತಿಥಿ ಕಸಾಪ ನಿಕಟಪೂರ್ವ ಅಧ್ಯಕ್ಷ ಸಿದ್ರಾಮ ದ್ಯಾಗಾನಟ್ಟಿ, ಗಾಯಕ ಶಬ್ಬಿರ ಡಾಂಗೆ ಮಾತನಾಡಿದರು.
ಅತಿಥಿಗಳಾಗಿ ಘಟಾಪ್ರಭಾದ ಜಿಜಿ ಸಹಕಾರಿ ಆಸ್ಪತ್ರೆ ನಿರ್ದೇಶಕ ಶಿವನಗೌಡ ಪಾಟೀಲ, ಕಡಕೋಳದ ಬಿ.ಎಂ. ಸ್ವರಮಂಡಲ ಭಾಗವಹಿಸಿದ್ದರು.
ಬಸಪ್ಪ ಇಟ್ಟನ್ನವರ, ಡಾ. ಮಹಾದೇವ ಪೋತರಾಜ, ಅನಿಲ ಮಡಿವಾಳರ, ಸದಾಶಿವ ಯಕ್ಸಂಬಿ, ಶಿವಕುಮಾರ ಕೋಡಿಹಾಳ, ಸಿದ್ದು ಮಹಾರಾಜ, ಶಿವಾರಾಜ ಕಾಂಬಳೆ, ದುರ್ಗಪ್ಪ ದಾಸನ್ನವರ, ಪರಸಪ್ಪ ಮಾದರ, ಸಿದ್ದಪ್ಪ ಆಡಿನ, ಶಿವಲಿಂಗಯ್ಯ ಗುರುಸ್ವಾಮಿ, ಶೈಲಜಾ ಬಡಿಗೇರ, ಶಶಿರೇಖಾ ಬೆಳ್ಳಕ್ಕಿ, ಸರಸ್ವತಿ ಶೆಕ್ಕಿ, ಬಾಳೇಶ ಕೊಚ್ಚರಗಿ, ಸಾಗರ ಹುನಗುಂದ ನಾಡು, ನುಡಿ, ಪರಂಪರೆ ಮತ್ತು ಪರಿಸರ ಕುರಿತು ತಮ್ಮ ಸ್ವರಚಿತ ಕವನ ವಾಚಿಸಿದರು.
ಚಿದಾನಂದ ಹೂಗಾರ, ಜಗದೀಶ ಹೂಗಾರ, ವಿವೇಕಾನಂದ ಹೂಗಾರ, ಸಂಚಾಲಕ ಪ್ರಕಾಶ ಮೇತ್ರಿ ಇದ್ದರು, ಸಿದ್ದಪ್ಪ ನಡಗಟ್ಟಿ ಇದ್ದರು. ಬಸಯ್ಯ ಹಿರೇಮಠ ನಿರೂಪಿಸಿದರು.