spot_img
spot_img

ದಾನದ ಮಹಿಮೆ ಸಾರುವ ಈದ್ ಉಲ್ ಫಿತರ್

Must Read

- Advertisement -

ಇದು ದುಬಾರಿ ಕಾಲ ಎನ್ನುವ ಮಾತು ಎಲ್ಲರ ಬಾಯಲ್ಲೂ ಕೇಳಿ ಬರುತ್ತದೆ.. ಹಿಂಗ ದುನಿಯಾ ದುಬಾರಿ ಅದ ಅಂತ ದುನಿಯಾದೊಳಗಿನ ಜನ ಯಾವ ಹಬ್ಬವನ್ನೂ ನಿರ್ಲಕ್ಷಿಸುವುದಿಲ್ಲ. ಎಷ್ಟು ದುಬಾರಿಯಿದರೂ ಭಾರೀ ಹಬ್ಬ ಮಾಡಿ ಖುಷಿ ಪಡುವ ಜನ ನಮ್ಮವರು. ಸಾಲ ಮಾಡಿಯಾದ್ರೂ ತುಪ್ಪ ತಿನ್ನು ಅನ್ನುವ ಹಾಡಿನಂಗ ಹಬ್ಬ ಜೋರ್ ಮಾಡಲು ಸಾಲ ಮಾಡುವ ರೂಢಿ ಬಹಳ ದಿನದ ಹಿಂದಿನಿಂದ ಬಂದಿದ್ದು.

ಸಂಭ್ರಮಿಸುವ ದಿನ ನಾನು ಬಡವ ಅಂತ ನರಳುವ ಹಾಗಿಲ್ಲ. ಜೀವನ ದುಃಖದ ಕಡಲಲ್ಲಿ ತೇಲುತ್ತಿದ್ದರೂ ಹಬ್ಬದ ದಿನ ಮಾತ್ರ ಸಂತೋಷ ಹಂಚಿಕೊಂಡೇ ತೀರುತ್ತಾರೆ ನಮ್ಮ ಬಂಧು ಬಾಂಧವರು. ಬರೀ ನೋವುಗಳನ್ನೇ ಉಂಡವರ ಬಾಳಿಗೆ ಹಬ್ಬದ ದಿನ ನಲಿವು. ಒಲವು ಹುಡುಕಿಕೊಂಡು ಬರುತ್ತವೆ. ಹಬ್ಬದ ಹೆಸರಿನಲ್ಲಿ ಬಡವ ಬಲ್ಲಿದ ಎಂಬ ಭೇದ ಭಾವ ಮರೆಸಿ ನಾವೆಲ್ಲ ಒಂದೇ ತಾಯಿಯ ಮಕ್ಕಳು ಎನ್ನುವ ಭಾವ ಮೂಡಿಸಿ ಒಂದುಗೂಡಿ ಬಾಳುವ ಕನಸಿನ ಬೀಜ ಬಿತ್ತುತ್ತವೆ  ಈ ಹಬ್ಬಗಳು.

ಹದಿನೈದು ದಿನಗಳಿಗೊಮ್ಮೆ ಅಮವಾಸ್ಯೆ ಹುಣ್ಣಿಮೆಯ ಹೆಸರಲ್ಲಿ ಸಾಲು ಸಾಲಾಗಿ ಹಬ್ಬಗಳನ್ನು ಆಚರಿಸುವ ಹಿಂದೂಗಳು ಕೆಲವೇ ಕೆಲವು ಹಬ್ಬಗಳನ್ನಾಚರಿಸುವ ಮುಸ್ಲಿಂ ಬಾಂಧವರ ಹಬ್ಬದಲ್ಲಿ ಪಾಲ್ಗೊಳ್ಳದೇ ಇರುವುದಿಲ್ಲ. ಹಿಂದೂಗಳ ಹಬ್ಬದಲ್ಲಿ ಸಂಭ್ರಮಿಸಿದ ಮುಸ್ಲಿಮರು ಹಿಂದೂ ಬಂಧುಗಳನ್ನು ಬಿಟ್ಟು ಹಬ್ಬ ಮಾಡುವುದಿಲ್ಲ. ಹಿಂದೂ ಮುಸ್ಲಿಮ್ ಭಾಯೀ ಭಾಯೀ ಎನ್ನುವುದಕ್ಕೆ ಈ ಹಬ್ಬಗಳೇ ಜೀವಂತ ಪುರಾವೆಗಳು.

- Advertisement -

ರಮ್ಝಾನ್ ಪವಿತ್ರ ಮಾಸದ ಆಚರಣೆ

ಒಂದು ತಿಂಗಳಿನಿಂದ ರಮ್ಝಾನ್ ಪವಿತ್ರ ಮಾಸದ ಉಪವಾಸವನ್ನಾಚರಿಸಿ ಅದರ ಸಮಾರೋಪವೆನ್ನುವಂತೆ ಶವ್ವಾಲ್ ತಿಂಗಳ ಒಂದರಂದು ಈದ್ ಉಲ್ ಫಿತರ್ ಹಬ್ಬ ಆಚರಿಸುತ್ತಾರೆ. ಈ ದಿನದಂದು ಅಲ್ಲಾನಿಗೆ ಧನ್ಯವಾದ ಹೇಳುವ ಸೂಕ್ತ ಅವಕಾಶ. ಸಿಹಿ ಭಕ್ಷಣೆ ಉಡುಗೊರೆಗಳ ವಿತರಣೆ ದಾನ ಧರ್ಮ ನಡೆಯುವುದು. ಹಬ್ಬಕ್ಕೆ  ಎಲ್ಲವೂ ಹೊಸದನ್ನು ಖರೀದಿಸುವರು. ಅದರಲ್ಲೂ ಹೊಸ ಬಟ್ಟೆ ಅಂತಲೂ ಕಡ್ಡಾಯ. ಪವಿತ್ರ ಮಾಸವೆಂದೇ ಕರೆಯಲಾಗುವ ರಮ್ಝಾನ್ ತಿಂಗಳಲ್ಲಿ ಸೂರ್ಯೋದಯಕ್ಕಿಂತ ಮೊದಲಿನಿಂದ ಹಿಡಿದು ಸೂರ್ಯಾಸ್ತವಾಗುವವರಿಗೂ ಉಪವಾಸ ವ್ರತವನ್ನಾಚರಿಸುವದರ ಮೂಲಕ ಅನ್ನದ ಮಹತ್ವ ಹಾಗೂ ಬಡವರ ಹಸಿವಿನ ನೋವನ್ನು ಅರಿಯುತ್ತಾರೆ. ಜೊತೆಗೆ ಕರುಣೆ ಸ್ವಯಂ ನಿಯಂತ್ರಣ ಸಮಾಜಕ್ಕೆ ಸ್ಪಂದಿಸುವುದನ್ನು ಕಲಿಯುತ್ತಾರೆ. ಕೆಡುಕಗಳನ್ನುಂಟು ಮಾಡುವ ಅನ್ಯಾಯ ಅಕ್ರಮಗಳಿರುವಂಥ ಯಾವ ಕೆಲಸದಲ್ಲೂ ಭಾಗಿಯಾಗುವುದಿಲ್ಲ. ಖುರ್ ಆನ್ ಪಠಣದಿಂದ ಆತ್ಮ ಸಂಸ್ಕರಣೆ ಮಾಡಿಕೊಳ್ಳುತ್ತಾರೆ 

ಈದ್ ಉಲ್ ಫಿತರ್ ಆಚರಣೆ 

ಹಬ್ಬದ ದಿನ ಬೇಗನೇ ಎದ್ದು ಸ್ನಾನ ಮಾಡಿ ಹೊಸ ಬಟ್ಟೆಯನ್ನು ಸಡಗರದಿಂದ ಧರಿಸಿ ಮಸೀದಿಗೆ ಮನೆಯ ಹಿರಿಯರೊಂದಿಗೆ ಕಿರಿಯ ಬಾಲಕರೆಲ್ಲ  ನಮಾಜ್‍ಗೆ ಹೋಗುವಾಗ ಶಕಬೀರ್ ಹೇಳುವುದು ನಮಾಜ್ ನಿರ್ವಹಿಸುವ ಭಕ್ತಿ ಭಾವದ ಉತ್ಕಟತೆಯನ್ನು ವಿಶೇಷ ಸಾಮೂಹಿಕ ಪ್ರಾಥರ್ನೆಯನ್ನು  ಪರಸ್ಪರ ಹಸ್ತ ಲಾಘವ, ಆಲಿಂಗನದ ಮೂಲಕ ಹಬ್ಬದ ಶುಭಾಶಯಗಳನ್ನು ಹಂಚಿಕೊಳ್ಳುವ ಪರಿಯನ್ನು ನೋಡಲು ಎರಡು ಕಣ್ಣು ಸಾಲದು. ಸರ್ವರ ಶಾಂತಿ ಸಮಾಧಾನಕ್ಕಾಗಿ .ಪ್ರಾರ್ಥನೆ, ಪ್ರವಚನ ಮುಗಿದ ಮೇಲೆ ಬಂಧು ಬಾಂಧವರ ಮನೆಗೆ ತೆರಳಿ ಪರಸ್ಪರ ಕ್ಷೇಮ ಸಮಾಚಾರ ವಿಚಾರಿಸುವುದು ಮತ್ತು ಹಬ್ಬದ ಶುಭಾಶಯಗಳನ್ನು ವಿನಿಮಯಿಸಿಕೊಳ್ಳುವುದು ನಡೆಯುತ್ತದೆ. 

ಹೆಂಗಳೆಯರೆಲ್ಲ ವಿಶೇಷ ಖಾದ್ಯಗಳ ತಯಾರಿಯಲ್ಲಿ ಲವಲವಿಕೆಯಿಂದ ತೊಡಗಿಸಿಕೊಂಡಿರುತ್ತಾರೆ. ಹಬ್ಬದ ಹಿಂದಿನ ದಿನ ಮೆಹಂದಿಯ ಕಂಪು ಮನೆಯಂಗಳದಲ್ಲಿ ಸೂಸುತ್ತದೆ. ಮರುದಿನ ಮೆಹಂದಿಯ ವಿವಿಧ ತೆರನಾದ ಚಿತ್ತಾರಗಳು ಹೆಂಗಳೆಯರ ಅಂಗೈಯಲ್ಲಿ ಕೆಂಪು ರಂಗು ಪಡೆದು ಕಂಗೊಳಿಸುತ್ತವೆ. ಹಬ್ಬದ ಆಚರಣೆಗೆಂದು ತವರಿಗೆ ಬಂದ ಮಹಿಳೆಯರಿಗೆ ಮತ್ತು ಮಕ್ಕಳಿಗೆ ಈದ್ ಹೆಸರಿನಲ್ಲಿ ಹಣದ ಉಡುಗೊರೆಯನ್ನು ಮನೆಯ ಹಿರಿಯರು  ನೀಡುವ ಪದ್ದತಿಯಿದೆ. 

- Advertisement -

ಫಿತ್ರ್ ಝಕಾಶ್ 

ಈದ್ ಉಲ್ ಫಿತರ್‍ನ ವೈಶಿಷ್ಟ್ಯವೆಂದರೆ ಫಿತ್ರ್ ಝಕಾಶ್. ಹಬ್ಬ ಉಳ್ಳವರಿಗಷ್ಟೇ ಸಂತಸ ನೀಡದಿರಲಿ ಬಡವರೂ ಅಶಕ್ತರೂ  ಹಬ್ಬದ ಸಂಭ್ರಮದಲ್ಲಿ ಪಾಲ್ಗೊಳ್ಳಲಿ ಎನ್ನುವ ಉದ್ದೇಶದಿಂದಲೇ ಈದ್ ಉಲ್ ಫಿತರ್ ಹಬ್ಬದ ಸಂದರ್ಭದಲ್ಲಿ ಫಿತ್ರ್ ಝಕಾಶ್ ಎಂಬ ದಾನ ವಿತರಿಸಲಾಗುವುದು ಮಸೀದಿಗೆ ತೆರಳುವ ಮುನ್ನವೇ ಕುಟುಂಬದ ಪ್ರತಿ ಸದಸ್ಯನ ಹೆಸರಿನಲ್ಲಿ ಬಡಬಗ್ಗರಿಗೆ ನಿರ್ದಿಷ್ಟ ಪ್ರಮಾಣದಲ್ಲಿ ಅಕ್ಕಿಯನ್ನಾಗಲಿ ಅಥವಾ ಹಣವನ್ನಾಗಲಿ ನೀಡಲಾಗುವುದು.

ಹಬ್ಬದ ದಿನದಂದು ಯಾವ ಬಡವರೂ ಅರೆ ಹೊಟ್ಟೆಯಿಂದಿರಬಾರದು ಅವರ ಮನೆಯಲ್ಲೂ ಅಂದು ಸಂಭ್ರಮ ಮನೆ ಮಾಡಬೇಕೆಂಬ ಉದ್ದೇಶದಿಂದಲೇ ಈ ದಾನ ನಡೆಯುವುದು. ಉಪವಾಸ ವ್ರತ ಪೂರ್ಣಗೊಂಡಾಗ ಕೊಡುವ ದಾನ(ಫಿತ್ರ್ ಝಕಾಶ್) ವನ್ನು ಪ್ರವಾದಿ ಮಹಮ್ಮದ್ ಫೈಗಂಬರ್ ತಮ್ಮ ಅನುಯಾಯಿಗಳಿಗೆ ಕಡ್ಡಾಯಗೊಳಿಸಿದ್ದಾರೆ. ಆ ದಾನವನ್ನು ಅಂದಿನಿಂದ ಇಂದಿನವರೆಗೂ ಚಾಚೂ ತಪ್ಪದೇ ಪಾಲಿಸಲಾಗುತ್ತಿದೆ.

ಹಲವು ಕಡೆ ಕೆಲವು ಸಂಘಟನೆಗಳು ತಾವಾಗಿಯೇ ಮುಂದೆ ಬಂದು ಫಿತ್ರ್ ಝಕಾಶ್ ಸಂಗ್ರಹಿಸಿ ಬಡವರ ಅಶಕ್ತರ ಮನೆ ಬಾಗಿಲಿಗೆ ತಲುಪಿಸುವ ವ್ಯವಸ್ಥೆ ಕಲ್ಪಿಸಿದ್ದಾರೆ ಇದು ನಿಜಕ್ಕೂ ಶ್ಲ್ಯಾಘನೀಯ ವ್ಯವಸ್ಥೆಯೇ ಸರಿ. ಫಿತ್ರ್ ಎಂಬ ಪದದ ಮೂಲ ಹುಡುಕಿದಾಗ ಇಫ್ತಾರ್ ಎಂಬ ಪದದಿಂದ ಹುಟ್ಟಿಕೊಂಡಿದೆ ಎಂದು ತಿಳಿದು ಬರುತ್ತದೆ. ಇಫ್ತಾರ್ ಎಂದರೆ ಉಪವಾಸ ಪಾರಣೆ (ಬಿಡುವುದು-ತ್ಯಜಿಸುವುದು) ಸುಖ ದುಃಖಗಳ ಸಂಗಮವೇ ಜೀವನ.

ಸಂತಸ ಹಂಚಿಕೊಂಡರೆ ದ್ವಿಗುಣಗೊಳ್ಳುತ್ತದೆ ಎಂಬ ಮಾತೊಂದಿದೆ. ನೊವಿನಲ್ಲಿದ್ದವರಿಗೆ ಹೆದರದಿರಿ ನಾವೂ ನಿಮ್ಮೊಂದಿಗೆ ಇದ್ದೇವೆ ಎನ್ನುವ ಸಾಂತ್ವನದ ಮಾತುಗಳು ಕಣ್ಣೊರೆಸುವ ಬೆರಳುಗಳು ಸಾಕು ಪ್ರಸಕ್ತ ಅಷ್ಟೇ ಅಲ್ಲ ಎಂದೆಂದಿಗೂ ಅಗತ್ಯವಾದ ದಾನದ ಮಹಿಮೆಯನ್ನು ಸಾರುವ ಈದ್ ಉಲ್ ಫಿತರ್. ಮನೋ ಮತ್ತು ದೈಹಿಕ ಆರೋಗ್ಯದ ಗುಟ್ಟನ್ನು ಅತ್ಯಂತ ಸರಳವಾಗಿ ಧಾರ್ಮಿಕ ಆಚರಣೆಯ ನೆಲೆಗಟ್ಟಿನಲ್ಲಿ ಪ್ರತಿಪಾದಿಸುವ,ಸ್ನೇಹ ಸೌಹಾರ್ಧ ಭಾವನೆಗಳನ್ನು ಹೊತ್ತು ತಂದ ರಮ್ಝಾನ್ ಮಾಸದ ಕೊನೆಯ ದಿನದ ಈದ್ ಉಲ್ ಫಿತರ್ ಸಂಭ್ರಮದ ಹೆಜ್ಜೆಯೊಂದಿಗೆ ಹೃದಯಕ್ಕೆ ತಂಪನ್ನು ತರಲಿ.


ಜಯಶ್ರೀ.ಜೆ. ಅಬ್ಬಿಗೇರಿ

- Advertisement -

3 COMMENTS

Comments are closed.

- Advertisement -

Latest News

ಎಲ್ಲರಂತೆ ವಿಕಲಚೇತನರು ಬಾಳ್ವೆ ನಡೆಸುವಂತಾಗಬೇಕು- ಸಲೀಂ ನದಾಫ

ಬೆಳಗಾವಿ: "ಎಲ್ಲರಂತೆ ವಿಕಲಚೇತನರು ಬಾಳ್ವೆ ನಡೆಸುವಂತಾಗಬೇಕು.ವಿಕಚೇತನರಿಗೆ ಅನುಕಂಪದ ಬದಲು ಅವಕಾಶ ನೀಡುವ ಅಗತ್ಯವಿದೆ. ಶಾಲಾ ಸಿದ್ಧತಾ ಕೇಂದ್ರಗಳ ಬಲವರ್ಧನೆ ಕೂಡ ಅವಶ್ಯಕ. ಈ ತರಬೇತಿ ಸದುಪಯೋಗ...
- Advertisement -

More Articles Like This

- Advertisement -
close
error: Content is protected !!
Join WhatsApp Group