spot_img
spot_img

ಅರಭಾವಿ ದುರದುಂಡೀಶ್ವರ ಪುಣ್ಯಾರಣ್ಯ ಮಠದ ಪೀಠಾಧಿಪತಿಯಾಗಿ ಗುರುಬಸವಲಿಂಗ ಮಹಾಸ್ವಾಮಿಗಳ ಪೀಠಾರೋಹಣ

Must Read

- Advertisement -

ಶ್ರೀಮಠದ ಅಭಿವೃದ್ಧಿಗೆ ಲಿಂ. ಸಿದ್ಧಲಿಂಗ ಮಹಾಸ್ವಾಮಿಗಳ ಕನಸಿನಂತೆ ಗುರುಬಸವಲಿಂಗ ಮಹಾಸ್ವಾಮಿಗಳು ಶ್ರಮಿಸಲಿ: ನಿಡಸೋಶಿ ಶ್ರೀಗಳು

ಮೂಡಲಗಿ: ದುರದುಂಡೀಶ್ವರರ ಆಶೀರ್ವಾದ ಫಲವಾಗಿ ಅರಭಾವಿ ದುರದುಂಡೀಶ್ವರ ಪುಣ್ಯಾರಣ್ಯ ಮಠವು ಧಾರ್ಮಿಕವಾಗಿ, ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಬೆಳೆದಿದ್ದು, ಹಿಂದಿನ ಪೀಠಾಧಿಪತಿಯಾಗಿದ್ದ ಲಿಂ. ಸಿದ್ಧಲಿಂಗ ಮಹಾಸ್ವಾಮಿಗಳ ಕನಸಿನಂತೆ ಶ್ರೀಮಠದ ಅಭಿವೃದ್ಧಿಗಾಗಿ ಮಠದ ನೂತನ ಪೀಠಾಧಿಪತಿಯಾಗಿ ಪೀಠಾರೋಹಣಗೈದಿರುವ ಗುರುಬಸವಲಿಂಗ ಮಹಾಸ್ವಾಮಿಗಳು ಶ್ರಮಿಸಲಿ. ಶ್ರೀಮಠವು ಹೊಸ ಆಯಾಮದತ್ತ ಮುನ್ನಡೆಯಲಿ ಎಂದು ನಿಡಸೋಶಿ ಸಿದ್ಧಸಂಸ್ಥಾನ ಮಠದ ಜಗದ್ಗುರು ಪಂಚಮ ಶಿವಲಿಂಗೇಶ್ವರ ಮಹಾಸ್ವಾಮಿಗಳು ಆಶಿಸಿದರು.

ಸೋಮವಾರದಂದು ಜಗದ್ಗುರು ದುರದುಂಡೀಶ್ವರ ಸಿದ್ಧಸಂಸ್ಥಾನ ಅರಭಾವಿ ಮಠದಲ್ಲಿ ಜರುಗಿದ ಗುರುಬಸವಲಿಂಗ ಮಹಾಸ್ವಾಮಿಗಳವರ ಪೀಠಾರೋಹಣ ಸಮಾರಂಭದ ದಿವ್ಯ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದ ಅವರು, ದುರದುಂಡೀಶ್ವರ ಮಠ ಮತ್ತು ನಿಡಸೋಶಿ ಮಠಗಳಿಗೆ ತಮ್ಮದೆಯಾದ ಹಲವು ಇತಿಹಾಸಗಳಿವೆ ಎಂದು ಹೇಳಿದರು.

- Advertisement -

ಲಿಂ. ಸಿದ್ಧಲಿಂಗ ಮಹಾಸ್ವಾಮಿಗಳು ಶ್ರೀಮಠದ ಪ್ರಗತಿಗಾಗಿ ಕಳೆದ ನಾಲ್ಕೈದು ದಶಕದಿಂದ ಅವಿರತವಾಗಿ ಶ್ರಮಿಸಿದ್ದರು. ಸರಳ, ಶಿಸ್ತಿನ ವ್ಯಕ್ತಿಯಾಗಿದ್ದ ಅವರು ಕಳೆದ ತಿಂಗಳಲ್ಲಿ ಲಿಂಗೈಕ್ಯರಾದರು. ಅವರು ಬಿಟ್ಟು ಹೋದ ಆಚಾರ, ವಿಚಾರ ಹಾಗೂ ಸಂಸ್ಕೃತಿಗಳನ್ನು ಈಗಿರುವ ಹೊಸ ಪೀಠಾಧಿಪತಿಗಳು ಅಳವಡಿಸಿಕೊಂಡು ಶ್ರೀಮಠವನ್ನು ಯಶಸ್ವಿಯಾಗಿ ಮುನ್ನಡೆಸಿಕೊಂಡು ಹೋಗಬೇಕು. ಸಿದ್ಧಲಿಂಗ ಮಹಾಸ್ವಾಮಿಗಳಿಗೆ ನೀಡಿರುವ ತನು, ಮನ, ಧನ ಸೇವೆಯನ್ನು ಗುರುಬಸವಲಿಂಗ ಮಹಾಸ್ವಾಮಿಗಳಿಗೆ ಸಕಲ ಸದ್ಭಕ್ತರು ನೀಡುವ ಮೂಲಕ ಶ್ರೀಮಠದ ಭವ್ಯ ಪರಂಪರೆಗೆ ಮುಂದಾಗಬೇಕು. ಮಠಗಳ ಬೆಳವಣಿಗೆಗಳಲ್ಲಿ ಭಕ್ತರ ಜೊತೆಗೆ ರಾಜಕಾರಣಿಗಳ ಪಾತ್ರವೂ ಕೂಡ ದೊಡ್ಡದಿದೆ. ಮಠಗಳನ್ನು ಉಳಿಸಿ ಬೆಳೆಸುವ ಶಕ್ತಿ ಭಕ್ತರಿಗಿದೆ ಎಂದು ಹೇಳಿದರು.

ಲಿಂ. ಸಿದ್ಧಲಿಂಗ ಮಹಾಸ್ವಾಮಿಗಳ ಸದಿಚ್ಛೆಯಂತೆ ಈ ಭಾಗದ ಜನಪ್ರಿಯ ಶಾಸಕರಾಗಿರುವ ಬಾಲಚಂದ್ರ ಜಾರಕಿಹೊಳಿ ಅವರು ತಮ್ಮ ತಾಯಿ-ತಂದೆಯವರ ಸ್ಮರಣಾರ್ಥವಾಗಿ ಶ್ರೀಮಠದಲ್ಲಿ ಸುಸಜ್ಜಿತವಾದ ಸಭಾ ಭವನವನ್ನು ನಿರ್ಮಿಸಿ ಕೊಟ್ಟಿದ್ದಾರೆ. ಬಾಲಚಂದ್ರ ಜಾರಕಿಹೊಳಿ ಅವರು ಶ್ರೀಮಠದ ಅಭಿವೃದ್ಧಿಯ ಜೊತೆಗೆ ಇಡೀ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಬಾಲಚಂದ್ರ ಅವರಿಗೆ ದುರದುಂಡೀಶ್ವರನು ಸದಾ ಒಳ್ಳೆಯದನ್ನು ಮಾಡಲಿ ಎಂದು ಅವರು ಆಶಿಸಿದರು.

ಗುರುಬಸವಲಿಂಗ ಮಹಾಸ್ವಾಮಿಗಳವರ ಪೀಠಾರೋಹಣಕ್ಕಿಂತ ಮುಂಚೆ ಶ್ರೀಮಠದಲ್ಲಿ ಹನ್ನೊಂದು ದಿನಗಳ ಕಾಲ ಶೂನ್ಯ ಸಂಪಾದನೆ ಪ್ರವಚನವನ್ನು ಹಮ್ಮಿಕೊಂಡು ಭಕ್ತರಿಗೆ ಧಾರ್ಮಿಕ ವಾತಾವರಣವನ್ನು ನಿರ್ಮಿಸಿದ್ದಾರೆ. ಶೂನ್ಯದಿಂದ ಕನ್ನಡ ಅಕ್ಷರದಲ್ಲಿ ಒಂಬತ್ತೂ ಅಕ್ಷರಗಳು ಹುಟ್ಟಿಕೊಳ್ಳುತ್ತಿವೆ. ಶೂನ್ಯದಿಂದ ಅಧಿಕವಾಗಿ ಸಂಪಾದನೆ ಮಾಡುವುದೇ ಶೂನ್ಯ ಸಂಪಾದನೆ ಅನ್ನುತ್ತಾರೆ. ಮಠದ ಭಕ್ತರ ಆಶಯದಂತೆ ಹೊಸ ಪೀಠಾಧಿಪತಿಗಳು ಸೇವೆ ಸಲ್ಲಿಸಲಿ. ಆ ದುರದುಂಡೀಶ್ವರನ ಆಶೀರ್ವಾದ ಗುರುಬಸವಲಿಂಗ ಮಹಾಸ್ವಾಮಿಗಳಿಗೆ ಸದಾ ಇರುತ್ತದೆ ಎಂದು ಆಶಿಸಿದರು.

- Advertisement -

ಅರಭಾವಿ ಶ್ರೀಮಠದ ಅಭಿವೃದ್ಧಿಗೆ ಎಲ್ಲ ರೀತಿಯ ಸಹಕಾರ : ಶಾಸಕ ಬಾಲಚಂದ್ರ ಜಾರಕಿಹೊಳಿ

ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಮಾತನಾಡಿ, ಲಿಂ. ಸಿದ್ಧಲಿಂಗ ಮಹಾಸ್ವಾಮಿಗಳು ಲಿಂಗೈಕ್ಯರಾದ ನಂತರ ಈ ಭಾಗದ ಸಕಲ ಭಕ್ತರಿಗೆ ಅಪಾರ ದುಃಖವಾಗಿದೆ. ಅತೀ ಸರಳತೆಯಿಂದ ಜೀವನ ಸಾಗಿಸಿರುವ ಹಿಂದಿನ ಶ್ರೀಗಳ ಸೇವೆಯನ್ನು ಎಷ್ಟು ಹೊಗಳಿದರು ಸಾಲದು. ಅವರು ಎಂದಿಗೂ ಆಡಂಬರದ ಜೀವನ ಸಾಗಿಸಲಿಲ್ಲ. ಎಂದಿಗೂ ಲಿಂಗಪೂಜೆಯನ್ನು ತಪ್ಪಿಸಲಿಲ್ಲ. ಅದಕ್ಕೆಂದೇ ಅವರು ಈ ಭಾಗದ ನಡೆದಾಡುವ ದೇವರು ಎಂದು ನಾವೆಲ್ಲರೂ ವ್ಯಾಖ್ಯಾನಿಸುತ್ತೇವೆ. ಈ ದಿನದ ಶುಭ ಘಳಿಗೆಯನ್ನು ನೋಡಿದಾಗ ಲಿಂ. ಸಿದ್ಧಲಿಂಗ ಮಹಾಸ್ವಾಮಿಗಳು ನಮ್ಮ ಮಧ್ಯೆಯೇ ಇದ್ದಾರೆ. ಸ್ವರ್ಗದಿಂದ ನಮಗೆ ಆಶೀರ್ವಾದ ಮಾಡುತ್ತಿದ್ದಾರೆ ಎಂದು ಭಾವವಾಗುತ್ತದೆ ಎಂದು ಸ್ಮರಿಸಿಕೊಂಡರು.

ಶ್ರೀಮಠದ ಅಭಿವೃದ್ಧಿಗೆ ನಾವು ಸದಾ ಬದ್ಧರಿದ್ದೇವೆ. ಗುರುಬಸವಲಿಂಗ ಮಹಾಸ್ವಾಮಿಗಳಿಗೆ ಶ್ರೀಮಠವನ್ನು ಮುಂದುವರೆಸಿಕೊಂಡು ಹೋಗಲು ಎಲ್ಲ ರೀತಿಯ ಸಹಾಯ ಸಹಕಾರ ನೀಡುತ್ತೇವೆ. ಹಿಂದಿನ ಮಹಾಸ್ವಾಮಿಗಳಂತೆ ಶ್ರೀಮಠದ ಪ್ರಗತಿಗೆ ಶ್ರಮಿಸಿ ಅರಭಾವಿ ಮಠವನ್ನು ಅಭಿವೃದ್ಧಿಗೊಳಿಸಲಿ. ಲಿಂ. ಸಿದ್ಧಲಿಂಗ ಮಹಾಸ್ವಾಮಿಗಳ ಕನಸುಗಳನ್ನು ಇಡೇರಿಸುವ ಶಕ್ತಿಯನ್ನು ದೇವರು ದಯಪಾಲಿಸಲಿ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಆಶಿಸಿದರು.

ಅರಭಾವಿ ಮಠದ ನೂತನ ಪೂಜ್ಯರಾಗಿ ಪೀಠಾರೋಹಣ ಮಾಡಿದ ಗುರುಬಸವಲಿಂಗ ಮಹಾಸ್ವಾಮಿಗಳು ತಮ್ಮ ಭಾಷಣದುದ್ದಕ್ಕೂ ಲಿಂ. ಸಿದ್ಧಲಿಂಗ ಮಹಾಸ್ವಾಮಿಗಳನ್ನು ನೆನೆದು ಭಾವುಕರಾದರು. ಹಲವು ಸಂದರ್ಭಗಳಲ್ಲಿ ಕಣ್ಣೀರು ಹಾಕುತ್ತ ತಮ್ಮ ಭಾಷಣವನ್ನು ಮುಂದುವರೆಸಿದರು. ಇದೊಂದು ವಿಶೇಷ ಘಳಿಗೆ. ನನ್ನ ಜೀವನದಲ್ಲಿ ಎಂದೂ ಮರೆಯದ ಸ್ಮರಣೀಯ ಘಟನೆ. ಈ ಘಳಿಗೆಯನ್ನು ನಾನೆಂದಿಗೂ ಊಹಿಸಿರಲಿಲ್ಲ. ಶ್ರೀಮಠದ ಪೀಠಾರೋಹಣ ಮಾಡುತ್ತೇನೆ ಎಂದು ಕನಸು ಮನಸಿನಲ್ಲಿಯೂ ಊಹಿಸಿರಲಿಲ್ಲ ಎಂದು ಪೂಜ್ಯರನ್ನು ನೆನೆದು ಭಾವುಕರಾದರು.

ದುರದುಂಡೀಶ್ವರ ಪಾವನ ಸಾನಿಧ್ಯದಲ್ಲಿ ಅರಭಾವಿ ಶ್ರೀಮಠವು ಹೆಮ್ಮರವಾಗಿ ಬೆಳೆದಿದೆ. ಈ ಮಠವು ಶೂನ್ಯ ಸಿಂಹಾಸನ ಮಠವಾಗಿದ್ದು, ಭಕ್ತರ ಪಾಲಿನ ಕಾಮಧೇನು, ಕಲ್ಪವೃಕ್ಷವಾಗಿದೆ. ತಮ್ಮ ಹಾಗೂ ಸಿದ್ಧಲಿಂಗ ಮಹಾಸ್ವಾಮಿಗಳ ಜೊತೆಗಿನ ಸಂಬಂಧಗಳನ್ನು ಮೆಲುಕು ಹಾಕಿದ ಅವರು ಸಿದ್ಧಲಿಂಗ ಮಹಾಸ್ವಾಮಿಗಳು ತಮ್ಮ ಪಾಲಿನ ಗುರುಗಳು ಅಷ್ಟೇ ಅಲ್ಲ. ಅವರೊಬ್ಬ ದೇವರು ಎಂದು ಹೇಳಿದರು.

ಈ ಭಾಗದ ಸದ್ಭಕ್ತರ ಭಾವನೆಗಳನ್ನು ಅರ್ಥ ಮಾಡಿಕೊಂಡು ಹಿಂದಿನ ಜಗದ್ಗುರುಗಳ ಆಶಯದಂತೆ ಪೀಠಾಧಿಪತಿಯಾಗಿ ಸೇವೆ ಸಲ್ಲಿಸುವ ಸೌಭಾಗ್ಯ ಒದಗಿಬಂದಿದೆ. ಇದನ್ನು ಯಶಸ್ವಿಯಾಗಿ ನಿಭಾಯಿಸಿಕೊಂಡು ಮಠದ ಉಳಿವಿಗಾಗಿ ಶ್ರಮಿಸುತ್ತೇನೆ. ದುರದುಂಡೀಶ್ವರನು ಹಾಕಿಕೊಟ್ಟ ಮಾರ್ಗದಲ್ಲಿ ಮುನ್ನಡೆಯುತ್ತೇನೆ. ನಾನೂ ಕೂಡ ಅರಭಾವಿ ಸಮೀಪದ ದುರದುಂಡಿ ಗ್ರಾಮದವನಾಗಿದ್ದರಿಂದ ಎಲ್ಲರ ಪರಿಚಯ ನನಗಿದೆ.

ಹೀಗಾಗಿ ಶ್ರೀಮಠದ ಅಭಿವೃದ್ಧಿಯೊಂದೇ ನನ್ನ ಗುರಿಯಾಗಿದೆ. ನಿಡಸೋಶಿ ಜಗದ್ಗುರು ಪಂಚಮ ಶಿವಲಿಂಗೇಶ್ವರ ಹಾಗೂ ಗದಗ-ಢಂಬಳ ಪೀಠದ ಜಗದ್ಗುರು ಡಾ.ಸಿದ್ಧರಾಮ ಮಹಾಸ್ವಾಮಿಗಳ ಮಾರ್ಗದರ್ಶನದಲ್ಲಿ ಭಕ್ತರ ಸೇವೆಯನ್ನು ಮಾಡುವುದಾಗಿ ತಿಳಿಸಿದರು.

ಅಧ್ಯಕ್ಷತೆಯನ್ನು ವಹಿಸಿದ್ದ ಹಂದಿಗುಂದ-ಆಡಿ ಸಿದ್ಧೇಶ್ವರ ಮಠದ ಶಿವಾನಂದ ಮಹಾಸ್ವಾಮಿಗಳು ಮಾತನಾಡಿ, ನೋಡೋಕೆ ಸಿಂಹಾಸನ, ವೈಭವ ಆದರೆ ಇದರ ಹಿಂದೆ ಸಾಕಷ್ಟು ಸಮಸ್ಯೆಗಳು ಎದುರಾಗುತ್ತಿವೆ. ಈ ಪೀಠದ ಹಾಸಿಗೆ ಹೂವಿನ ಹಾಸಿಗೆಯಲ್ಲ. ಇದೊಂದು ಮುಳ್ಳಿನ ಹಾಸಿಗೆ. ಶ್ರೀಮಠದ ಸಿಂಹಾಸನ ಅಲಂಕರಿಸಿರುವ ಗುರುಬಸವಲಿಂಗ ಮಹಾಸ್ವಾಮಿಗಳು ಭಕ್ತರ ಆಶಯದಂತೆ ಸೇವೆ ಸಲ್ಲಿಸಲಿ. ಅರಭಾವಿ ದುರದುಂಡೀಶ್ವರ ಮಠಕ್ಕೆ ತನ್ನದೇಯಾದ ಇತಿಹಾಸವಿದೆ.    ದುರದುಂಡೀಶ್ವರನು ತನ್ನನ್ನು ತಾನು ಕಾಪಾಡಿಕೊಳ್ಳದೇ ಇಡೀ ಭಕ್ತರನ್ನು ಕಾಪಾಡಿಕೊಂಡಿರುವ ಉದಾಹರಣೆಗಳು ಸಾಕಷ್ಟಿವೆ. ಪೀಠಾಧಿಪತಿಗಳಾದವರು ಭಕ್ತರ ಭಾವನೆಗಳಿಗೆ ಸ್ಪಂದಿಸಬೇಕೇ ಹೊರತು ಐಶಾರಾಮಿ ಜೀವನ ಮಾಡುವುದಕ್ಕಲ್ಲ. ಇದಕ್ಕೆ ಲಿಂ. ಸಿದ್ಧಲಿಂಗ ಮಹಾಸ್ವಾಮಿಗಳು ತಕ್ಕ ಉದಾಹರಣೆಯಾಗಿದ್ದಾರೆ. ಅತೀ ಸರಳವಾಗಿ ಜೀವನ ಸಾಗಿಸಿ ಸಮಾಜಕ್ಕೆ ಮಾದರಿಯಾಗಿದ್ದರು ಎಂದು ಹೇಳಿದರು.

ಬೈಲಹೊಂಗಲ ಶಾಸಕ ಮಹಾಂತೇಶ ಕೌಜಲಗಿ, ಪೃಥ್ವಿ ಕತ್ತಿ, ನಿವೃತ್ತ ಪ್ರಾದೇಶಿಕ ಆಯುಕ್ತ ಡಾ. ಮಹಾಂತೇಶ ಹಿರೇಮಠ, ಅಶೋಕ ಪೂಜಾರಿ ಮುಂತಾದವರು ಮಾತನಾಡಿ, ಶ್ರೀಮಠದ ಪರಂಪರೆಯನ್ನು ಶ್ಲಾಘಿಸಿದರು. ಶ್ರೀಮಠದ ಏಳ್ಗೆಗೆ ಎಲ್ಲ ರೀತಿಯ ಸಹಕಾರ ನೀಡುವುದಾಗಿ ತಿಳಿಸಿದರು.

ಅಥಣಿ ಮೋಠಗಿಮಠದ ಪ್ರಭು ಚನ್ನಬಸವ ಮಹಾಸ್ವಾಮಿಗಳು ನುಡಿ ನೈವೈದ್ಯಗೈದರು. 

   ನೇತೃತ್ವವನ್ನು ನಾಗನೂರು ರುದ್ರಾಕ್ಷಿ ಮಠದ ಡಾ. ಅಲ್ಲಮಪ್ರಭು ಮಹಾಸ್ವಾಮಿಗಳು, ಹುಬ್ಬಳ್ಳಿಯ ಅಭಿನವ ಸಿದ್ಧಾರೂಢ ಮಹಾಸ್ವಾಮಿಗಳು, ಬೆಳಗಾವಿ ಕಾರಂಜಿ ಮಠದ ಗುರುಸಿದ್ಧ ಮಹಾಸ್ವಾಮಿಗಳು, ಹುಬ್ಬಳ್ಳಿ ರುದ್ರಾಕ್ಷಿ ಮಠದ ಬಸವಲಿಂಗ ಮಹಾಸ್ವಾಮಿಗಳು, ಗುಬ್ಬಲಗುಡ್ಡದ ಡಾ. ಮಲ್ಲಿಕಾರ್ಜುನ ಮಹಾಸ್ವಾಮಿಗಳು, ಯಮಕನಮರಡಿಯ ರಾಚೋಟೇಶ್ವರ ಮಹಾಸ್ವಾಮಿಗಳು, ರಾಮದುರ್ಗದ ಶಾಂತವೀರ ಮಹಾಸ್ವಾಮಿಗಳು, ನಿಚ್ಚಳಿಕೆ ಪಂಚಾಕ್ಷರಿ ಮಹಾಸ್ವಾಮಿಗಳು, ಬಬಲಾದಿ ಮಠದ ಕರಿಗಿರೇಶ್ವರ ಸಂಗಮ ಶಿವಲಿಂಗೇಶ್ವರ ಮಹಾಸ್ವಾಮಿಗಳು, ವಿರುಪಾಕ್ಷ ಮಹಾಸ್ವಾಮಿಗಳು, ಮಲ್ಲಿಕಾರ್ಜುನ ಮಹಾಸ್ವಾಮಿಗಳು, ಮಹಾಂತ ರುದ್ರೇಶ್ವರ ಮಹಾಸ್ವಾಮಿಗಳು, ಸದಾನಂದ ಶಿವಾಚಾರ್ಯರು, ಗುರುಪಾದ ಶಿವಾಚಾರ್ಯ ಸ್ವಾಮಿಗಳು, ಶಿವಮೂರ್ತಿ ಮಹಾಸ್ವಾಮಿಗಳು, ಗುರುದೇವ ದೇವರು, ಸದಾನಂದ ಮಹಾಸ್ವಾಮಿಗಳು, ಸಚ್ಚಿದಾನಂದ ಮಹಾಸ್ವಾಮಿಗಳು, ಚನ್ನಮ್ಮ ಕಿತ್ತೂರಿನ ಮಡಿವಾಳ ರಾಜಯೋಗಿಂದ್ರ ಮಹಾಸ್ವಾಮಿಗಳು, ನಾಗಭೂಷನ ಮಹಾಸ್ವಾಮಿಗಳು, ಸೇಗುಣಸಿಯ ಡಾ. ಮಹಾಂತಪ್ರಭು ಮಹಾಸ್ವಾಮಿಗಳು ಸೇರಿದಂತೆ ನಾಡಿನ ಹಲವಾರು ಮಹಾಸ್ವಾಮಿಗಳು ಉಪಸ್ಥಿತರಿದ್ದರು.

ಶಾಸಕ ಬಾಲಚಂದ್ರ ಜಾರಕಿಹೊಳಿ ಅವರನ್ನು ಇದೇ ಸಂದರ್ಭದಲ್ಲಿ ನಿಡಸೋಶಿ ಅರಭಾವಿ ಮಠದ ಮಹಾಸ್ವಾಮಿಗಳು ಜಂಟಿಯಾಗಿ ಸತ್ಕರಿಸಿದರು. ಎಸ್.ಕೆ. ಮಠ ಕಾರ್ಯಕ್ರಮ ನಿರೂಪಿಸಿದರು.

- Advertisement -
- Advertisement -

Latest News

ಮನುಷ್ಯನಿಗೆ ಹಣ, ಆಸ್ತಿ ಬೇಕಾಗಿಲ್ಲ, ಬದುಕುವ ಛಲ ಇರಬೇಕು – ಬಸವರಾಜ ಮಡಿವಾಳ

ಮೂಡಲಗಿ: ಪಟ್ಟಣದ ಪತ್ರಿಕಾ ಕಾರ್ಯಾಲಯದಲ್ಲಿ ಮಡಿವಾಳ ಸಮಾಜ ಬಾಂಧವರಿಂದ ಎಸ್ ಎಸ್ ಎಲ್ ಸಿ ಹಾಗೂ ಪಿ ಯು ಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ...
- Advertisement -

More Articles Like This

- Advertisement -
close
error: Content is protected !!
Join WhatsApp Group