ಸಿಂದಗಿ: ಸಂವಿಧಾನ ನಮ್ಮ ಜೀವ, ಸಂವಿಧಾನ ನಮ್ಮ ಉಸಿರು, ಸಂವಿಧಾನ ರಚನೆಗೆ ಎರಡು ವರ್ಷ ಹನ್ನೊಂದು ತಿಂಗಳು ಹದಿನೆಂಟು ದಿನ ಬೇಕಾಗಿದೆ. ಮೊದಲು ಈ ದಿನವನ್ನು ರಾಷ್ಟ್ರೀಯ ಕಾನೂನು ದಿನವೆಂದು ಕರೆಯುತ್ತಿದ್ದರು. ಭಾರತದ ಸಂವಿಧಾನದ ಆಧಾರದ ಮೇಲೆ ದೇಶದ ಸಂಸತ್ತಿನ ಕಾನೂನುಗಳನ್ನು ಮಾಡಲಾಗಿದೆ. ಸಂವಿಧಾನವು ನಮ್ಮ ದೇಶದ ಬೆನ್ನೆಲುಬು, ಅದು ದೇಶವನ್ನು ಒಟ್ಟಿಗೆ ಇರಿಸಲು ಸಹಕರಿಸುತ್ತದೆ. ದೇಶದ ಸಾರ್ವಭೌಮತೆ ಹಾಗೂ ಪ್ರಜೆಗಳ ಹಕ್ಕುಗಳ ರಕ್ಷಣೆ ಸಂವಿಧಾನದಿಂದ ಮಾತ್ರ ಸಾಧ್ಯವಾಗಿದೆ ಎಂದು ನ್ಯಾಯವಾದಿ ಎ.ಎಂ ಅಂಗಡಿ ಹೇಳಿದರು.
ನಗರದ ಸಂಗಮ ಸಮಗ್ರ ಗ್ರಾಮೀಣ ಅಭಿವೃದ್ಧಿ ಕೇಂದ್ರದಲ್ಲಿ ಹಮ್ಮಿಕೊಂಡ ಸಂವಿಧಾನ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿ, ಸಂವಿಧಾನ ಜನರ ಜೀವನಾಡಿಯಾಗಿದೆ. ಪ್ರತಿಯೊಬ್ಬ ಮನುಷ್ಯನಿಗೆ ಸಂವಿಧಾನದಿಂದ ಗೌರವ ಸಿಕ್ಕಿದೆ. ಭಾರತ ಸರ್ಕಾರವು 19 ನವೆಂಬರ್ 2015 ರಂದು ಗೆಜೆಟ್ ಅಧಿಸೂಚನೆಯ ಮೂಲಕ 26 ನವೆಂಬರ್ ಅನ್ನು ಸಂವಿಧಾನ ದಿನವೆಂದು ಘೋಷಿಸಿತು.
ಈ ದಿನ ಸಂವಿಧಾನದ ಮಹತ್ವವನ್ನು ಹರಡಲು ಮತ್ತು ಅಂಬೇಡ್ಕರ್ ಅವರ ಆಲೋಚನೆಗಳು ಮತ್ತು ವಿಚಾರಗಳನ್ನು ಹರಡಲು ಆಯ್ಕೆ ಮಾಡಲಾಗಿದೆ. ನಮ್ಮ ಸಂವಿಧಾನ ಜಗತ್ತಿನ ಅನೇಕ ದೇಶಗಳಿಗೆ ಮಾದರಿಯಾಗಿದೆ. ನಮ್ಮ ಸಂವಿಧಾನವು ಕೇವಲ ಒಂದು ವರ್ಗ, ಜಾತಿ, ಜನಾಂಗ ಅಥವಾ ಪ್ರದೇಶಕ್ಕೆ ಅನ್ವಯವಾಗುವಂತಹುದಲ್ಲ. ಈ ದೇಶದ ಕಟ್ಟ ಕಡೆಯ ವ್ಯಕ್ತಿ ಕೂಡ ಅದರಿಂದ ರಕ್ಷಣೆ ಪಡೆಯುವಂತೆ ಮತ್ತು ಅವರನ್ನು ಶೋಷಣೆಯಿಂದ ಹೊರತರಲು ಬೇಕಾದಂತಹ ಕಾನೂನಿನ ಆಳ್ವಿಕೆಯನ್ನು ಸಂವಿಧಾನವು ನಿರ್ದೇಶಿಸುತ್ತದೆ. ಸಂವಿಧಾನದ ಪೀಠಿಕೆಯು ವಿಶಿಷ್ಟ ಉದಾತ್ತ ಮತ್ತು ಎಲ್ಲರನ್ನು ಒಳಗೊಳ್ಳುವ ತಿರುಳು, ಭಾಷೆ ಹಾಗೂ ಅದ್ಬುತವಾದ ಮಿಡಿಯುವ ಹೃದಯವನ್ನು ಹೊಂದಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಸಂಗಮ ಸಂಸ್ಥೆಯ ಸಹನಿರ್ದೇಶಕಿ ಸಿಸ್ಟರ್ ಸಿಂತಿಯಾ ಡಿಮೆಲ್ಲೊ ಮಾತನಾಡಿ, ಪ್ರಜಾಪ್ರಭುತ್ವ ಎನ್ನುವುದು ಕಾಲದಿಂದ ಕಾಲಕ್ಕೆ ಪ್ರಗತಿಯಾಗುತ್ತಲೇ ಇರುತ್ತದೆ. ಪ್ರಜೆಗಳು ಅಸಡ್ಡೆ ಮಾಡಿದರೆ, ನಿರಾಸಕ್ತಿ ಹೊಂದಿದರೆ ಪ್ರಜಾಪ್ರಭುತ್ವದ ಅವನತಿ ಆರಂಭವಾಗುತ್ತದೆ. ಭಾರತದ ಜನತೆಯಾದ ನಾವು ಈ ಸಂವಿಧಾನವನ್ನು ನಮಗೆ ನಾವೇ ಅರ್ಪಿಸಿಕೊಂಡು ಅಂಗೀಕರಿಸಿ ಶಾಸನವಾಗಿ ವಿಧಿಸಿಕೊಂಡಿದ್ದೇವೆ ಎಂಬುದು ಬಹುತ್ವದ ಸಮಾನತೆಯ, ದೇಶದ ಏಕತೆ ಮತ್ತು ಸಮಗ್ರತೆಯ ಒಟ್ಟಾರೆ ಭಾಷೆ, ಭಾವ, ಮನಸ್ಸು ಕೃತಿಯ ಮೂಲಕ ಮೇಳೈಸಿದೆ. ಎಂದು ವಿವರಿಸಿದರು.
ಈ ಸಂದರ್ಭದಲ್ಲಿ ಕಟ್ಟಡ ಕಾರ್ಮಿಕರಿಗೆ ನೊಂದಣಿಯಾದ ಕಾರ್ಡ್‍ಗಳು ವಿತರಣೆ ಮಾಡಿದರು. ಸ್ಪೂರ್ತಿ ತಾಲೂಕಾ ಒಕ್ಕೂಟದ ಅಧ್ಯಕ್ಷೆ ರೇವತಿ ಮೇತ್ರಿ ಹಾಗೂ ಕಟ್ಟಡ ಕಾರ್ಮಿಕ ಸಂಘದ ಅಧ್ಯಕ್ಷ ಚೇತನಕುಮಾರ ಹೊಟಗಾರ ಇವರು ಹಾಜರಿದ್ದರು. ಕಾರ್ಯಕ್ರಮದಲ್ಲಿ ಕಟ್ಟಡ ಕಾರ್ಮಿಕರು ಮತ್ತು ಮಹಿಳಾ ಸಂಘದ ಸದಸ್ಯರು ಭಾಗವಹಿಸಿದರು.
ವಿಜಯ ವಿ ಬಂಟನೂರ ನಿರೂಪಿಸಿದರು. ತೇಜಸ್ವಿನಿ ಸ್ವಾಗತಿಸಿದರು, ಮಲಕಪ್ಪ ವಂದಿಸಿದರು ಮತ್ತು ಕುಮಾರಿ ಬಸಲಿಂಗಮ್ಮ ಅಲ್ಲಾಪೂರ ಸಂವಿಧಾನದ ಪ್ರಸ್ಥಾವನೆಯನ್ನು ಓದಿದರು.