spot_img
spot_img

ದಿನಕ್ಕೊಬ್ಬ ಶರಣ ಮಾಲಿಕೆ

Must Read

- Advertisement -

ಬಸವಣ್ಣನ ನೆರಳು,ಶಿವಶರಣ, ನಿಜಸುಖಿ ಹಡಪದ ಅಪ್ಪಣ್ಣ

ಹನ್ನೆರಡನೆಯ ಶತಮಾನದಲ್ಲಿ ಕಲ್ಯಾಣ ರಾಜ್ಯ ನಿರ್ಮಿಸಿದ ಕೀರ್ತಿ ಶಿವ ಶರಣರಿಗೆ ಸಲ್ಲುತ್ತದೆ. ಎಲ್ಲ ಸಮಾಜದ ಆರ್ಥಿಕ,ಸಾಮಾಜಿಕ, ಅಸಮಾನತೆ ಹೋಗಲಾಡಿಸಲು, ಕಾಯಕ ತತ್ವದಡಿ ಶರಣರು ಶ್ರಮಿಸಿದ್ದಾರೆ ಹಾಗೂ ಬದುಕಿನ ಸಾರ್ಥಕತೆ ಯನ್ನು ಕಂಡು ಕೊಂಡಿದ್ದಾರೆ..

ಹನ್ನೆರಡನೆಯ ಶತಮಾನ ಮೌಢ್ಯತೆಯ ಕಾರ್ಮೋಡದಿಂದ ಸರಿದ ಸುಜ್ಞಾನ ಯುಗ, ಭಕ್ತಿ ಯುಗ,ವೈಚಾರಿಕತೆಯ ಯುಗ,ಸಮಾನತೆ,ಭ್ರಾತೃತ್ವ,ಸೌಹಾರ್ದತೆಯ ಕಂಡ ಯುಗ,ಅದುವೇ ಬಸವ ಮಹಾಯುಗ.

- Advertisement -

ಅನ್ನ ಹಸಿದ ಹೊಟ್ಟೆಯನ್ನು ತುಂಬಿಸಿದರೆ.,
ಜ್ಞಾನವು ಅರಿವಿನ ಹಸಿವನ್ನು ಹಿಂಗಿಸುತ್ತದೆ..ಅಂತೆಯೇ ಶರಣರು,ಅನ್ನದಾಸೋಹ ಮತ್ತು ಜ್ಞಾನದಾಸೋಹಕ್ಕೆ ಅತೀ ಮಹತ್ವದ ಸ್ಥಾನ ವನ್ನು ನೀಡಿದ್ದಾರೆ. ಕಾಯಕ,ದಾಸೋಹ ತತ್ವಗಳಿಂದ ಸಾಮಾಜಿಕ ಸಮಾನತೆ ತರಲು ಅವರು ಮಾಡಿದ ನಿಸ್ವಾರ್ಥ ಕಾರ್ಯ ಶ್ಲಾಘನೀಯ. ಶರಣರು ತಮ್ಮ ಕಾಯಕದ ಜೊತೆಗೆ ವಚನಗಳ ಮೂಲಕ ಸಮಾಜ ಸುಧಾರಣೆಗೆ ಶ್ರಮಿಸಿದ್ದಾರೆ. ಬಸವಣ್ಣ ನವರ ಕಾಯಕ ತತ್ವವನ್ನು ಪಾಲಿಸಿ,ಅವರ ಅನುಯಾಯಿಯಾಗಿ ಶರಣ ತತ್ವದಲಿ ಬದುಕಿ ಅಭಿಮಾನದ ಸಂಕೇತರಾಗಿದ್ದಾರೆ, ಹಡಪದ ಅಪ್ಪಣ್ಣ.

ಅಪ್ಪಣ್ಣ ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ಯ ಮಸಬಿನಾಳ ಗ್ರಾಮದಲ್ಲಿ ಜನಿಸಿದರು, ಇವರ ತಂದೆ ಚೆನ್ನವೀರ ,ಮತ್ತು ತಾಯಿ ದೇವಕ್ಕ ಇವರು 1134 ರಲ್ಲಿ ಜನಿಸಿದರು ಎಂದು ಆಕರಗಳ ಮೂಲಕ ತಿಳಿದು ಬರುತ್ತದೆ.

ಬಾಲಕ ಅಪ್ಪಣ್ಣ ಶಿವಶಂಕರಯ್ಯ ಸ್ವಾಮಿ ಹಿರೇಮಠ ಅವರಲ್ಲಿ ಪ್ರಪ್ರಥಮವಾಗಿ ವಿದ್ಯಾಭ್ಯಾಸ ಪಡೆದರು..ಇವರು ಬಸವಪ್ರಿಯ ಕೂಡಲ ಚೆನ್ನ ಬಸವಣ್ಣ ಎಂಬ ಅಂಕಿತನಾಮದಲ್ಲಿ ಸುಮಾರು 256 ವಚನಗಳನ್ನು ರಚಿಸಿದ್ದಾರೆ.

- Advertisement -

ಇವರ ಹೆಚ್ಚು ಹೆಚ್ಚು ವಚನಗಳಲ್ಲಿ , ಷಟ ಸ್ಥಲ ತತ್ವ ನಿರೂಪಣೆಗಳಿಗೆ ಮೀಸಲಾಗಿವೆ. ಕೆಲವು ಬೆಡಗಿನ ವಚನಗಳಾಗಿವೆ..ಶಿವಶರಣರ ಜೊತೆ ಲೌಕಿಕ ಮಾತ್ರವಲ್ಲ,, ಪಾರಮಾರ್ಥದಲ್ಲಿ ಯೂ ಬಸವಣ್ಣನವರಿಗೆ ತುಂಬಾ ಆಪ್ತ ಸಹಾಯಕ ರಾಗಿದ್ದರು,ಎಂದು ತಿಳಿದುಬರುತ್ತದೆ.
ಸದಾ ಬಸವಣ್ಣನವರ ಆಪ್ತ ಅವರ ಒಡನಾಡಿಗಳಾಗಿ, ಅನುದಿನ,ಅನುಕ್ಷಣವೂ, ಅವರೊಂದಿಗೆ ಇರುತ್ತಿದ್ದರು.
ಆದ್ದರಿಂದ ಆಗಿನ ಶರಣರು ಅಪ್ಪಣ್ಣ ಅವರನ್ನು,, ನಿಜಸುಖಿ ಅಪ್ಪಣ್ಣ ಎಂದು ಕರೆಯುತ್ತಿದ್ದರು ಹಾಗೂ ಅವರ ಧರ್ಮ ಪತ್ನಿ ಲಿಂಗಮ್ಮಳಿಗೆ ನಿಜಮುಕ್ತೆ ಲಿಂಗಮ್ಮ ಎಂದು ಶಿವಶರಣರು ಹೇಳುತ್ತಿದ್ದರು..

ಅಪ್ಪಣ್ಣ ಬಸವಣ್ಣ ವರ ಆಪ್ತ ಸಹಾಯಕರಾಗಿ ಮಹಾಮನೆ ಮತ್ತು ಅನುಭವ ಮಂಟಪದಲ್ಲಿ ಪ್ರಧಾನ ಕಾರ್ಯದರ್ಶಿಯಾಗಿ ಸ್ವಾಮಿಯ ಸೇವೆಯನ್ನು ನಿಷ್ಠೆ ಯಿಂದ ಮಾಡುತ್ತಿದ್ದರು. ಬಸವಣ್ಣ ಕೂಡಲ ಸಂಗಮಕ್ಕೆ ಬಂದಾಗ ನೀಲಾಂಬಿಕೆಯನ್ನು ಕರೆತರಲು ಹೇಳುವುದು ಅಪ್ಪಣ್ಣನಿಗೆ ಮಾತ್ರ.

ಅಲ್ಲಮರು ಒಮ್ಮೆ ಮಹಾಮನೆಗೆ ಬಂದಾಗ ‘ ಮನೆಯ ಒಡೆಯ ಬಂದು ಕರೆಯುವವರೆಗೂ ಒಂದು ಹೆಜ್ಜೆಯನ್ನೂ ಕೂಡ ಒಳಗೆ ಇಡುವುದಿಲ್ಲ ಎಂದು ಹೇಳುತ್ತಾರೆ, ನಂತರ ಅಪ್ಪಣ್ಣ ವ್ಯೋಮಕಾಯ ಎನಿಸಿದ ಅಲ್ಲಮ ಹಾಗೂ ಬಸವಣ್ಣ ಇಬ್ಬರ ಬಾಂಧವ್ಯದ ನಡುವೆ ಸ್ವಲ್ಪವೂ ಬಿರುಕು ಉಂಟಾಗದಂತೆ, ಅತೀ ಸೂಕ್ಷ್ಮವಾಗಿ ಚರ್ಚೆ ನಡೆಸಿ ಕಲ್ಯಾಣದ ಕೀರ್ತಿಗೆ ಪಾತ್ರ ರಾಗುತ್ತಾರೆ.
ಹಡಪದ ಅಪ್ಪಣ್ಣ, ಹಡಪದ ರೇಚಣ್ಣ ಇವರು ಕ್ಷೌರಿಕ ವೃತ್ತಿಯವ ರಾಗಿರಲಿಲ್ಲ., ಎಂಬುದಕ್ಕೆ ಅನೇಕ ಆಧಾರಗಳಿವೆ. ಪ್ರಾರಂಭದ ಶಾಸನಗಳಿಂದ ‘ ಹಡಪದ ‘ ಎಂಬ ಪದಕ್ಕೆ ‘ಪಡೆವಳ’ ಎಂಬ ಪರ್ಯಾಯ ಪದವಾಗಿದೆ. ಪಡೆವಳ ಎಂದರೆ ಶೂರರು, ಸೈನಿಕರು ಎಂದರ್ಥ. ಪಡೆ ಎಂದರೆ ಸೈನ್ಯ ಪಡೆ ಎಂದು ಅರ್ಥ.ಶರಣರ ಕ್ರಾಂತಿಯ ಸಂದರ್ಭದಲ್ಲಿ ಅಪ್ಪಣ್ಣ, ಬಸವಣ್ಣನಿಗೆ ಒಬ್ಬ ಪಡೆವಳನ ರೀತಿಯಲ್ಲಿ ಇದ್ದರು.
ಬಸವಣ್ಣನವರ ಜೀವನದ ಕೊನೆಯವರೆಗೂ ಅವರ ಪ್ರೀತಿಗೆ ಪಾತ್ರರಾದ ಅವರ ಭಕ್ತ ಅಪ್ಪಣ್ಣ., ತಂಗಡಗಿಯಲ್ಲಿ ಲಿಂಗೈಕ್ಯರಾಗುತ್ತಾರೆ.

ಅಯ್ಯಾ ಎನಗೆ ಬಸವಪ್ರಿಯ ನೆಂದರೂ ನೀನೆ,
ಕೂಡಲ ಚೆನ್ನ ಬಸವಣ್ಣನೆಂದರೂ ನೀನೆ,
ಗುರುವೆಂದರೂ ನೀನೆ,ಲಿಂಗ ವೆಂದರೂ ನೀನೆ ,
ಜಂಗಮ ವೆಂದರೂ ನೀನೆ,ಪ್ರಸಾದ ವೆಂದ ರೂ ನೀನೆ,
ಅದೇನು ಕಾರಣ ವೆಂದರೆ
ನೀ ಮಾಡಲಾಗಿ ಅವೆಲ್ಲವೂ ನಾಮರೂಪಿಗೆ ಬಂದವು .
ಅದು ಕಾರಣ, ನಾನೆಂದರೆ ಅಂಗ, ನೀನೆoದರೆ,ಪ್ರಾಣ.
ಈ ಉಭಯವನು ನೀವೇ ಅರುಹಿದಿರಾಗಿ, ಇನ್ನು ಭಿನ್ನವಿಟ್ಟು ನೋಡಿದೆನಾದರೆ, ಚೆನ್ನ ಮಲ್ಲೇಶ್ವರ ನೀವೇ ಬಲ್ಲಿರಿ.
ಎಮ್ಮ ಬಸವಪ್ರಿಯ ಕೂಡಲ ಚೆನ್ನ ಬಸವಣ್ಣ ನಲ್ಲಿ ಏಕವಾದ ಕಾರಣ,ಎನಗೆ ಭವ ವಿಲ್ಲ,ಬಂಧನವಿಲ್ಲ,ಅದಕ್ಕೆ ನೀವೇ ಸಾಕ್ಷಿ. 

ಗುರುವಿನ ವಿರಾಟ ಶಕ್ತಿಯ ಅನಂತತೆಯನ್ನು ಸ್ಮರಿಸುವುದನ್ನು ಈ ವಚನದಲ್ಲಿ ಕಾಣಬಹುದು. ಗುರುವಿನಿಂದ ದೀಕ್ಷೆ, ಹಾಗು ಮೋಕ್ಷ ಉಂಟಾಗುತ್ತದೆ. ಗುರುವಿನಿಂದಾಗಿ ಲಿಂಗ,ಜಂಗಮ ಹಾಗು ಪ್ರಸಾದ.,ನಾಮರೂಪಿಗೆ ಬಂದವು .ಇವುಗಳಲ್ಲಿ ಭೇದ,ಭಿನ್ನತೆ ಕಾಣಬಾರದು. ನಾನು ಲಿಂಗ,ನೀವು ಪ್ರಾಣ ಎಂಬ ಅರಿವನ್ನು ನನಗೆ ಜಾಗೃತಿ ಗೊಳಿಸಿದ ಚೆನ್ನ ಮಲ್ಲೇಶ್ವರರು ನೀವು. ಸಸ್ವರೂಪದ ಅರಿವಿನ ಸಾಕರವೇ ಇಷ್ಟ ಲಿಂಗ ಎಂಬ ನಿಜವನ್ನು ಅರಿತ ಬಳಿಕ ಎನಗೆ ಭವ ವಿಲ್ಲ, ಬಡತನವಿಲ್ಲ ಎಂಬುದೇ ಈ ವಚನದ ತಾತ್ಪರ್ಯ..

ತನುವಿ ನಿಚ್ಛೆಗೆ ಶೀಲವ ಕಟ್ಟಿಕೊಂಬರು ಲಕ್ಷೋಪ ಲಕ್ಷ ಉಂಟು.
ಮನ ದಿಚ್ಚೆಗೆ ಶೀಲವ ಕಟ್ಟಿಕೊಂಬವರು ಅಪೂರ್ವ ನೋಡಾ..
ತನುಮನ ವೆರಡು ಏಕವಾಗಿ, ಧನದಾಸೆಯಂ ಬಿಟ್ಟು
ಮನಮಹದಲ್ಲಿ ನಿಂದುದೇ ಶೀಲಸಂಬಂಧ
ಇನಿತಲ್ಲದ ದುಶ್ಶೀಲರ ಎನಗೊಮ್ಮೆ ತೊರದಿರು,
ಬಸವಪ್ರಿಯ ಕೂಡಲ ಚೆನ್ನಬಸವಣ್ಣ

ತನುವನ್ನು ಜಲದಿಂದ ತೊಳೆದು, ಶುದ್ಧಿಮಾಡಿಕೊಂಡು, ತಾವು ಶೀಲವಂತರು ಎಂದು ಲಕ್ಷೂಪ ಲಕ್ಷ ಜನ ಹೇಳುವರು, ಮನದಲ್ಲಿನ ಅವಗುಣಗಳನ್ನು ಅಳಿದು,ಮನಃಶುದ್ಧ ಮಾಡಿಕೊಂಡು ಜೀವಿಸುವ ಶೀಲವಂತರು,ಬಲು ವಿರಳ,ತನುವಿನಲ್ಲಿ ಆಚಾರ ,ಮನದಲ್ಲಿ ಆಚರದ ಚೇತನವಾದ ಅರಿವನ್ನು ರೂಢಿಸಿಕೊಂಡು, ಅದರಿಂದ ಸಂತೃಪ್ತನಾಗಿ, ನಶ್ವರ ವಾದ ಘನದಾಸೆಯನ್ನು ಬಿಟ್ಟು,ಆಸೆಯನ್ನು ಕಳೆದುಕೊಂಡು, ಮಹಾಘನ ಲಿಂಗದಲ್ಲಿ ಏಕಗ್ರತೆಯಾಗಿ ಪರಮ ಶಾಂತಿಯನ್ನು ಅನುಭವಿಸುವುದೇ ದಿವ್ಯ ಭಾವ.ನಿಜ ಶುದ್ಧ ಶೀಲ ವಿಲ್ಲದವರ ನನಗೆ ಯಾವಾಗಲೂ ತೂರದಿರು ಎಂದು ನಮ್ರತೆಯಿಂದ ಕೇಳಿಕೊಳ್ಳುತ್ತಾರೆ ಅಪ್ಪಣ್ಣ.

ವಚನ –
ಭಕ್ತನಾದರೆ ಎಂತಿರ ಬೇಕೆಂದರೆ,
ಉಲ ಹಡಗಿದ ವೃಕ್ಷ ದಂತಿರಬೇಕು .
ಶಿಶುಕಂಡ ಕನಸಿನಂತಿರಬೇಕು.
ಗಲಭೆಗೆ ನಿಲ್ಲದ ಮೃಗದಂತಿರಬೇಕು.
ತಾಯ ಹೊಲಬುದಪ್ಪಿದ ಎಳೆಗರುವಿನಂತೆ
ತ್ರಿಕಾಲದಲ್ಲಿಯೂ ಲಿಂಗವನೆ ನೆನೆವ
ಶರಣರ ಎನಗೊಮ್ಮೆ ತೋರಯ್ಯ ಶಿವನೇ.
ಬಸವಪ್ರಿಯ ಕೂಡಲ ಸಂಗನ ಬಸವಣ್ಣ

ಶಿವಶರಣ ಅಪ್ಪಣ್ಣ ನಿಜಭಕ್ತನ ಲಕ್ಷಣಗಳನ್ನು ಹೇಳುತ್ತಾ,ಭಕ್ತ ಶಬ್ದ ಮಾಡದ,ಮರದಂತೆ.. ಶಾಂತ ಚಿತ್ತ ದಿಂದಿರಬೇಕು.. ಕಂದ ಕಂಡ ಕನಸಿನಂತೆ ಇರಬೇಕು, ಆ ಕೂಸಿಗೆ ಕನಸ್ಸು ಬಿದ್ದರೂ ಅದು ಮಾತುಗಳಲ್ಲಿ ಹೇಳಲಾಗದೆ, ತನ್ನಷ್ಟಕ್ಕೆ ಹೇಗೆ ತಾನೇ ಆನಂದಿಸುತ್ತಿರುತ್ತದೆ.. ಹಾಗೇ ಭಕ್ತ ತನ್ನ ಸಾಧನೆಯನ್ನು ಮಾತುಗಳಲ್ಲಿ ನುಡಿಯದಂತಹ ಮೌನಿಯಾಗಿರಬೇಕು..
ಭಕ್ತನು ಯವುದೇ ಭಿನ್ನಾಭಿಪ್ರಾಯಕ್ಕೆ ಎಡೆ ಮಾಡಿ ಕೊಳ್ಳದೆ.. ಸಿಂಹದಂತೆ,ಅಂದರೆ ತನ್ನಲ್ಲಿ ವಿಶಾಲ, ಮಹಾ ಬಲವಿದ್ದರೂ,ಅದನ್ನು ಪ್ರದರ್ಶನಕ್ಕೆ ಈಡು ಮಾಡದೇ ಸೌಮ್ಯವಾಗಿರಬೇಕು.. ತಾಯಿಯನ್ನು ತಪ್ಪಿಸಿಕೊಂಡ ಎಳೆ ಕರು ಒಂದೇ ಸಮನೆ ಅಮ್ಮನ ಒಡಲನ್ನು ಕಾಣಲು ಹಾತೊರೆಯುವಂತೆ, ತ್ರಿಕಾಲವೂ ನಿಷ್ಠೆ ಇಂದ, ಸದಾ ಲಿಂಗ ಧ್ಯಾನದಲ್ಲೇ ನಿರತನಿರುವ ಭಕ್ತನನ್ನು ತೂರಯ್ಯ ಎಂದು ತನ್ನ ಭಗವಂತನಲ್ಲಿ ಪ್ರಾರ್ಥಿಸುವನು..

ವಚನ –
ನಿಷ್ಠೆಯ ಮರೆದ ರೇನಯ್ಯ ?                                  ಲೋಕದ ಮನುಜರ ದೃಷ್ಟಿಗೆ ಸಿಲ್ಕಿ
ಭ್ರಷ್ಟೆದ್ದು ಹೋದರು.
ತನು ಕಷ್ಟ ಮಾಡಿದರೆನಯ್ಯ
ಮನ ನಷ್ಟ ವಾಗದನ್ನಕ್ಕ?
ತನು ಮನ ವೆರಡು ನಷ್ಟವಾಗಿ,
ಘನವ ನೆಮ್ಮಿ
ನಿಮ್ಮ ನೆನಹು ನಿಷ್ಪತ್ತಿ ಯಾದ ಶರಣರ
ಎನಗೊಮ್ಮೆ ತೂರಯ್ಯಾ,ನಿಮ್ಮ ಧರ್ಮ.
ಬಸವಪ್ರಿಯ ಕೂಡಲ ಚೆನ್ನಬಸವಣ್ಣ..

ಮಹೇಶನು ನಿಷ್ಟಾ ಭಕ್ತಿಯುಳ್ಳವನಾಗಿರುತ್ತಾನೆ. ನಿಷ್ಠೆ,ಭಕ್ತಿಯನ್ನು ಹೊಂದದವನು, ಲೋಕದ ಜನರ ದೃಷ್ಟಿಯಲ್ಲಿ ಭ್ರಷ್ಟ ನೆನಿಸಿ ಕೊಳ್ಳುತ್ತಾನೆ. ದೇಹದ ದಂಡನೆ ಮಾಡುವುದರಿಂದ ಲಿಂಗ ನಿಷ್ಠೆಯ ನೆಲೆಗೊಳ್ಳಲಾಗದು. ಮನದಲ್ಲಿ ನೆಲೆಗೊಳ್ಳಬೇಕು. ತನುವಿನ ದುರ್ಗುಣಗಳು ಅಳಿದು ಹೋಗಿ, ಅಹಿತನುವು ಕಳೆದು ಹೋಗಬೇಕು. ಪ್ರಾಕೃತ ವಾದ ಮನವು ತನ್ನ ಅವಗುಣಗಳನ್ನು ಕಳೆದುಕೊಂಡು,ಲಿಂಗ ನಿಷ್ಠೆಯನ್ನು ನಿಷ್ಠೆ ಇಂದ ಅಶ್ರಯಿಸಬೇಕು.ಇದೆ ತನು ಮನಗಳ ನಾಶದ ಪರಿಯಾಗಿದೆ. ಈ ಸಾಧನೆಯನ್ನು ಸಾಧಿಸಿದವರು ಶರಣರು.ಶರಣರ ಮನದಲ್ಲಿ ಲಿಂಗದ ನೆನಹವು ಪರಿಪಕ್ವ ವಾಗಿರುತ್ತದೆ.ಅಂತಹ ಶಿವಶರಣರನ್ನು ಕಾಣಲು ಅಪ್ಪಣ್ಣ ಹಂಬಲಿಸುತ್ತಾರೆ.

ಹೀಗೆ ಪರಮಾರ್ಥ ಪ್ರೇಮಿಯಾದ ತನಗೆ ಭಕ್ತಿಭಂಡಾರಿಯ ದಿವ್ಯಸನ್ನಿಧಿಯ ಸದಾವಕಾಶವು ದೊರೆತುದು ತನ್ನ ಪೂರ್ವ ಪುಣ್ಯ ಪರಿಪಾಕ ವೆಂದು, ಅವರು ಮನವರಿಕೆ ಮಾಡಿಕೊಂಡರು. ಆದ್ದರಿಂದಲೇ,ಅವರು ತಮ್ಮ ಸ್ವಾಮಿಯ ಸೇವೆ ಸದಾ ನಿಷ್ಠೆ,ಭಕ್ತಿ, ಪ್ರೇಮದಿಂದ ಎಡಬಿಡದೆ,ಕೊನೆಯವರೆಗೂ ಸಲ್ಲಿಸಿದರು. ತಮ್ಮ ಸೇವೆ ಕುರಿತು ಹಾಡಿದ ಅವರ ಈ ಎರಡು ವಚನಗಳು..

ಎನ್ನ ತನು ನಿಮ್ಮ ಸೇವೆಯಲ್ಲಿ ಸವೆದು.,
🌺ಎನ್ನ ಮನ ನಿಮ್ಮ ನನಹಿನಲ್ಲಿ ಸವೆದು,
ನಿಶ್ಚಲ ನಿಜೈಕ್ಯವಾಗಿ ಬಸವಪ್ರಿಯ ಕೂಡಲಸಂಗಯ್ಯ
ನಾನೀನೆಂಬುದು ಏನಾಯಿತ್ತೆಂದರಿಯೇ.

🌺ಎನ್ನ ಆಚಾರ -ವಿಚಾರ ಬಸವಣ್ಣ ಗರ್ಪಿತವಾದುವು.
ಎನ್ನ ಅವಧಾನ- ಅನುಭಾವ ಬಸವಣ್ಣ ಗರ್ಪಿತವಾದವು.
ಎನ್ನ ಸರ್ವಾ ಚಾರ ಸಂಪತ್ತು ಬಸವಣ್ಣನಲ್ಲಿ ವೇದ್ಯ ವಾಯಿತ್ತು.
ಬಸವಪ್ರಿಯ ಕೂಡಲ ಚೆನ್ನ ಸಂಗನದೇವರಲ್ಲಿ    ನಿಜನಿವಾಸಿಯಾಗಿದೆನು.

ಹೀಗೆ ಅವರ ವಚನಗಳಿಂದ ಅಪ್ಪಣ್ಣ ವರಿಗೆ ಬಸವಣ್ಣ ಅವರಲ್ಲಿದ್ದ ಭಕ್ತಿ, ಪ್ರೇಮ,ನಿಷ್ಟೆಗಳ ಆಳವು ವ್ಯಕ್ತ ವಾಗುತ್ತದೆ.
ಹಾಗು ಇಲ್ಲಿ ಬಸವಪ್ರಿಯ ಎಂಬ ವಚನಮುದ್ರಿಕೆಯೂ ನಿಜನಿವಾಸಿ ಎಂಬ ಆತ್ಮವಿಶ್ವಾಸದ ನುಡಿಯು ಗಮನಾರ್ಹವಾದವುಗಳಾಗಿವೆ..

ಆಧಾರ ಗ್ರಂಥಗಳು :1. ಲಿಂಗಜ್ಯೋತಿ ಹಡಪದ ಲಿಂಗಮ್ಮ.ಎಚ್.ಜಿ. ಹಂಪಣ್ಣ. ಅಪ್ಪಣ್ಣ ಗುರುಪೀಠ, ತಂಗಡಗಿ. 2.ಶರಣಾಮೃತ. ಡಾ.ಫ .ಗು.ಹಳಕಟ್ಟಿ ಸಂಶೋಧನಾ ಕೇಂದ್ರ,ವಿಜಯಪುರ.
3 ಟಿ. ಏ.ಚೆನ್ನಪ್ಪ, ಬೆಂಗಳೂರು. 4.ಬಸವ ಕಿರಣ ಮಾಸ ಪತ್ರಿಕೆ.ಫೆಬ್ರುವರಿ 2024. 5. ಮಹಾಮನೆ ಕನ್ನಡ ಮಾಸ ಪತ್ರಿಕೆ.ಸಂಪುಟ 25

ಡಾ.ಶಾರದಾಮಣಿ. ಎಸ್. ಹುನಶಾಳ
ವಿಜಯಪುರ

- Advertisement -

LEAVE A REPLY

Please enter your comment!
Please enter your name here

- Advertisement -

Latest News

ವೇದವ್ಯಾಸರ ಸ್ಮರಣಾರ್ಥ ಗುರು ಪೂರ್ಣಿಮಾ

ಗುರುಪೂರ್ಣಿಮಾ ವಿಶೇಷ ಅರಿವಿಗೆ ಅನಂತ ಶಯನನಾಗಿ ಜ್ಞಾನ ಜ್ಯೋತಿ ಬೆಳಗುತ್ತಿರುವ ಗುರಿತೋರುವ ನೇತಾರ ಬದುಕು ಭವಿಷ್ಯದ ಹಾದಿಯ ದಿಟ್ಟ ಹೆಜ್ಜೆಯಿಡಲು ಗುರಿ ತೋರುವ ದೈವದ ಗುರಿಕಾರ ಜ್ಞಾನದ ತೃಷೆಯನ್ನು ತಣಿಸಿದ ಬದುಕನ್ನು ಹದಗೊಳಿಸುವ ಗುರುಬಲದ ಶಿಲ್ಪಿಗಾರ ಸಕಲ ಜ್ಞಾನವಾಹಿನಿ ಜಾಗೃತಿ ಜಗಕೆ...
- Advertisement -

More Articles Like This

- Advertisement -
close
error: Content is protected !!
Join WhatsApp Group