ಸುಮಾರು ನಲುವತ್ತು ಸಾವಿರ ಜನಸಂಖ್ಯೆ ಇರುವ, ತಾಲೂಕಾ ಪಟ್ಟಣವಾದ ಮೂಡಲಗಿ ನಗರಕ್ಕೆ ಸುಧಾ ವಾರಪತ್ರಿಕೆಯ ಸಂಚಿಕೆಗಳು ಕೇವಲ ಎರಡು ಬರುತ್ತವೆ, ಮಯೂರ ಒಂದು, ಕೆಲವೇ ಕೆಲವು ತರಂಗ ಹಾಗೂ ತುಷಾರ ಪತ್ರಿಕೆಗಳು ಬರುತ್ತವೆ ಎಂಬುದನ್ನು ಕೇಳಿ ವಿಷಾದವೆನಿಸಿತು. ಇದು ಒಂದು ನಗರದ್ದೇ ಅಲ್ಲ ಎಲ್ಲ ನಗರಗಳಲ್ಲೂ ಪತ್ರಿಕೆಗಳ ಸಂಖ್ಯೆ ಕುಸಿದು ಹೋಗಿದೆ.
ಜಾಗತಿಕ ಲೋಕದ ಅದ್ಭುತಗಳನ್ನು ಕಣ್ಣ ಮುಂದೆ ಬಿಡಿಸಿ ಇಡುವುದರ ಜೊತೆಗೇ ಸಾಹಿತ್ಯದ ರುಚಿಯನ್ನು ಉಣಬಡಿಸುವ ಈ ಪತ್ರಿಕೆಗಳ ಓದುವಿಕೆಯೇ ಒಂದು ರೋಚಕ ಅನುಭವವನ್ನು ನೀಡುತ್ತಿದ್ದ ದಿನಗಳ ಬಗ್ಗೆ ನೆನಪುಗಳ ಮಾಲೆಯೇ ಹರಿದು ಬಂದಿತು.
೮೦ ರ ದಶಕದಲ್ಲಿ ಪ್ರತಿ ಬುಧವಾರ ಬರುತ್ತಿದ್ದ ತರಂಗ ಪತ್ರಿಕೆಯನ್ನು ಸ್ವಾಗತಿಸಲು ಬಸ್ಸಿನ ದಾರಿ ಕಾಯುತ್ತಿದ್ದೆವು. ಅದು ಬಂದರೆ ಮನೆಯಲ್ಲಿ ಕೂಡ ನಾ ಮೊದಲು, ನೀ ಮೊದಲು ಎಂದು ಓದುವ ಸಲುವಾಗಿ ಪೈಪೋಟಿ ಇರುತ್ತಿತ್ತು. ಕೆಲವೊಮ್ಮೆ ಬಸ್ ಬಂದು ಹೋಗಿದ್ದರೆ ಏಜೆಂಟರ ಮನೆಗೇ ಹೋಗಿ ಪತ್ರಿಕೆಯ ೧.೫೦ ರೂ. ಕೊಟ್ಟು ತಂದು ದಾರಿಯಲ್ಲಿ ನಡೆಯುತ್ತಲೇ ಓದುತ್ತ ಮನೆಗೆ ಬರುತ್ತಿದ್ದ ನೆನಪು! (ಈಗ ಯುವಕರು ನಡೆಯುತ್ತಲೇ ಮೊಬೈಲ್ ನಲ್ಲಿ ಮುಳುಗಿರುತ್ತಾರೆ) ಅದೊಂಥರ ಸುಖ. ತೆಲುಗಿನ ಕಾದಂಬರಿಕಾರ ಯಂಡಮೂರಿ ವೀರೇಂದ್ರನಾಥ ಅವರ ಥ್ರಿಲ್ಲರ್ ಕಾದಂಬರಿ, ಅಷ್ಟೇ ಯಾಕೆ ಅವರ ಎಲ್ಲಾ ಕಾದಂಬರಿಗಳೂ ಥ್ರಿಲ್ಲನ್ನೇ ಹೆಚ್ಚು ಮಾಡುತ್ತಿದ್ದವು. ಕನ್ನಡದವರಾದ ಕೆ ಟಿ ಗಟ್ಟಿ, ನಾ.ಡಿಸೋಜ, ಮನು, ಅನುಪಮಾ ನಿರಂಜನ, ಬಿ ಎಲ್ ವೇಣು…ಇಂಥ ಅನೇಕರ ಕಾದಂಬರಿಗಳ ಲೋಕದಲ್ಲಿ ಆಳವಾಗಿ ಇಳಿದು ಈಜಾಡುತ್ತಿದ್ದೆವು. ಸ್ನೇಹಿತರು ಭೇಟಿಯಾದರೆ ಈ ಕಾದಂಬರಿಗಳದೇ ಚರ್ಚೆ !
ತರಂಗದ ಸಂಪಾದಕರಾಗಿದ್ದ ಸಂತೋಷಕುಮಾರ ಗುಲ್ವಾಡಿಯವರು ಬಂದ ಮೇಲೆ ಓದುವಿಕೆಗೊಂದು ಹೊಸ ಹುರುಪು ಸಿಕ್ಕಿತೆನ್ನಬಹುದು. ನಮ್ಮ ಓದುವಿಕೆ ಹೆಚ್ಚಿಸುವಲ್ಲಿ ಸುಧಾ ವಾರಪತ್ರಿಕೆಯದೂ ಕೂಡ ಮಹತ್ತರ ಪಾತ್ರ. ನಿರಂಜನ, ಎಚ್ಚೆಸ್ಕೆ, ಎನ್. ವಾಸುದೇವ ಮುಂತಾದವರು ಅದರಲ್ಲಿ ಖಾಯಂ ಬರಹಗಾರರು. ಸುಧಾ ಪತ್ರಿಕೆಯ ಸಾಹಿತ್ಯದ ರಸದೌತಣವೂ ಮರೆಯಲಾಗದ್ದು.
ಉತ್ಥಾನ, ತುಷಾರ, ಕಸ್ತೂರಿ, ಮಯೂರ ಮಾಸ ಪತ್ರಿಕೆಗಳ ವೈಭವ ನೆನೆಸಿಕೊಂಡರೆ ರೋಮಾಂಚನವಾಗುತ್ತದೆ. ಇವೆಲ್ಲ ಈಗಲೂ ಇವೆ ಆದರೆ ಅಂದಿನ ರೋಮಾಂಚನ, ಓದುವ ಸುಖ ಇಂದಿಲ್ಲ. ಯಾಕೋ ಏನೋ. ಈಗಿನ ಯುವ ಪೀಳಿಗೆಯಂತೂ ಓದುವುದೆಂದರೆ ಮೈಯಲ್ಲಿ ಮುಳ್ಳು ಎದ್ದಂತೆ ಮಾಡುತ್ತದೆ.
ಕನ್ನಡವೆಂದರೇನೆ ಅವರಿಗೆ ಅಲರ್ಜಿ. ಇಂಗ್ಲಿಷ್ ಮಾತನಾಡುವುದೆಂದರೆ ಹೆಮ್ಮೆಯಾಗಿಬಿಟ್ಟಿದೆ. ಎದ್ದರೂ ಬಿದ್ದರೂ ಮೊಬೈಲ್ ಹಿಡಿದುಕೊಂಡು ಯಾವುದೋ ಲೋಕಕ್ಕೆ ಜಾರಿ ಬಿಡುತ್ತವೆ. ಕನ್ನಡ ಸಾಹಿತ್ಯ, ಕಥೆ, ಕವನ ಕಾದಂಬರಿ ಎಂದರೆ ಯಾರಿಗೂ ಬೇಡವಾಗಿದೆ. ಮೋಬೈಲ್ ನಲ್ಲಿನ ಚುಟುಕು ಸಾಹಿತ್ಯ ಹೀಗೆ ಬಂದು ಹಾಗೆ ಹೋಗುತ್ತದೆ. ಸಂವೇದನೆಯನ್ನು ಕಳೆದುಕೊಂಡಿರುವ ಇಂದಿನ ಯುವ ಪೀಳಿಗೆಗೆ ಹಿಂದಿನ ಸಾಹಿತ್ಯ ವೈಭವ ತಿಳಿಸಿದರೆ ಅವರ ತಲೆಯಲ್ಲೂ ಹೋಗುವುದಿಲ್ಲ. ಪತ್ರಿಕೆಗಳ ಓದುವಿಕೆ ನಿಂತು ಹೋಗಿದೆಯೆಂದರೆ ತಪ್ಪಲ್ಲ.
ಒಂದು ವಿಚಿತ್ರ ಏನೆಂದರೆ, ಓದುವಿಕೆ ಕಡಿಮೆಯಾಗಿದೆ ಆದರೆ ಪತ್ರಿಕೆಗಳ ಸಂಖ್ಯೆ ಜಾಸ್ತಿಯಾಗಿದೆ ! ಕಚೇರಿಗಳಿಗೆ ಹೋದ ಪತ್ರಿಕೆಗಳ ಇಸ್ತ್ರೀ ಕೂಡ ಮಾಸಿರುವುದಿಲ್ಲ. ಅಂಗಡಿಗಳಲ್ಲಿ ಚೀಟು ಕಟ್ಟಲು ಮಾತ್ರ ಬಳಕೆಯಾಗುತ್ತಿದೆ ಪತ್ರಿಕೆ. ದಿನಪತ್ರಿಕೆಗಳ ಜೊತೆಯಲ್ಲಿ ವಾರಪತ್ರಿಕೆ, ಪಾಕ್ಷಿಕ, ಮಾಸಪತ್ರಿಕೆ ಎಂದೆಲ್ಲ ಟಾಬ್ಲಾಯ್ಡ್ ಪತ್ರಿಕೆಗಳು ಹೆಚ್ಚಾಗಿವೆ. ಅವುಗಳಲ್ಲಿನ ಬರಹಗಳೋ ದೇವರಿಗೇ ಪ್ರೀತಿ ! ಯಾರನ್ನೋ ಟೀಕಿಸಲು, ಹಗರಣಗಳ ಹೂರಣ ಹೊರಹಾಕಲು, ರಾಜಕಾರಣಿಗಳ ನಿಜ ಬಣ್ಣ ಬಯಲು ಮಾಡುವ ಈ ಪತ್ರಿಕೆಗಳಿಂದ ಸಮಾಜೋದ್ಧಾರವೆಂಬ ಕಾರ್ಯ ಆಗುತ್ತಿದೆಯೋ ಇಲ್ಲವೋ ಗೊತ್ತಿಲ್ಲ ಆದರೆ ಕನ್ನಡದ ಕೊಲೆಯಂತೂ ಖಂಡಿತ ಆಗುತ್ತಿದೆ. ರಾಜಕಾರಣಿಗಳ, ಭ್ರಷ್ಟ ಅಧಿಕಾರಿಗಳ ಹೂರಣ ಹೊರ ಹಾಕುವ ಧಾವಂತದಲ್ಲಿ ಕನ್ನಡ ಭಾಷೆಯನ್ನು ಯದ್ವಾ ತದ್ವಾ ಬಳಸಿಕೊಂಡು ಅವಮಾನ ಮಾಡಲಾಗುತ್ತಿದೆ. ಇದು ಸುಧಾರಿಸಬೇಕಾದ ಅಗತ್ಯವಿದೆ.
ಮುಖ್ಯವಾಗಿ ಪ್ರಾಥಮಿಕ, ಪ್ರೌಢ ಶಾಲೆ, ಕಾಲೇಜುಗಳಲ್ಲಿಯೇ ಕನ್ನಡ ಸರಿಯಾಗಿ ಕಲಿಸಲಾಗುತ್ತಿಲ್ಲ. ಓದುವಿಕೆ ಹೆಚ್ಚಿಸುವ ಕೆಲಸ ಆಗುತ್ತಿಲ್ಲ. ಕನ್ನಡ ಹೋರಾಟಗಾರರೇ ಈಗ ತಮಗೆ ಕನ್ನಡ ಸರಿಯಾಗಿ ಬರುತ್ತದೆಯೇ ಎಂದು ಆತ್ಮ ವಿಮರ್ಶೆ ಮಾಡಿಕೊಳ್ಳಬೇಕಾದ ಕಾಲ ಬಂದಿದೆ. ಮತ್ತೆ ಆ ದಿನಗಳು ಮರುಕಳಿಸುತ್ತವೆಯಾ? ಇದು ಉತ್ತರವಿಲ್ಲದ ಪ್ರಶ್ನೆ.
ಉಮೇಶ ಬೆಳಕೂಡ, ಮೂಡಲಗಿ