ನೀವು ಯಾರನ್ನೋ ನಿಮ್ಮವರು ಎಂದು ಪೂರ್ಣವಾಗಿ ನಂಬುತ್ತೀರಿ. ನಿಮ್ಮ ಕಥೆಗಳನ್ನೆಲ್ಲ ಹೇಳಿಕೊಳ್ಳುತ್ತೀರಿ. ಅವರಿಂದ ಸಲಹೆ, ಸಹಾಯ, ಸಾಂತ್ವನ ಪಡೆದಿರುತ್ತೀರಿ. ನೀವೂ ಅವರಿಗಾಗಿ ಸಮಯ ಕೊಟ್ಟಿರುತ್ತೀರಿ, ಅವರ ಕಷ್ಟಕ್ಕೆ ಜೊತೆಯಾಗಿ ನಿಲ್ಲುತ್ತೀರಿ, ನಿಮ್ಮಿಂದಾದ ಸಹಾಯ ಮಾಡಿರುತ್ತೀರಿ.
One fine day – ನಿನಗೂ, ನನಗೂ ಸಂಬಂಧವೇ ಇಲ್ಲ ಎಂದು ಅವರು ಎದ್ದು ಹೊರಟುಬಿಡುತ್ತಾರೆ. ಏಕೆ, ಏನು ಎಂದು ಯೋಚಿಸುವ ಮೊದಲು ಗಟ್ಟಿ ಗೋಡೆಯೊಂದು ನಡುವೆ ಎದ್ದು ನಿಂತಿರುತ್ತದೆ. ಅತ್ತಲಿನದು ಇತ್ತ, ಇತ್ತಲಿನದು ಅತ್ತ ಕಾಣುವುದೇ ಇಲ್ಲ. ಆದರೂ ಗೋಡೆಯಲ್ಲಿನ ಸಣ್ಣ ಬಿರುಕಿನಲ್ಲಿ ಇಬ್ಬರೂ ಇಣುಕುತ್ತೀರಿ. ಸರಿಯಾದೀತು ಎಂಬ ಹಂಬಲದಲ್ಲಿ ಸಮಯ ದೂಡುತ್ತೀರಿ. ನಿಮ್ಮನ್ನೇ ಶಪಿಸಿಕೊಳ್ಳುತ್ತೀರಿ. ದುಃಖಿಸುತ್ತೀರಿ. ಸ್ವಲ್ಪ ಸಮಯದ ನಂತರ ಪರಸ್ಪರ ದೂರು ಹೇಳಿಕೊಂಡು ಓಡಾಡುತ್ತೀರಿ. ಅವರು ನನಗೆ ನೋವುಂಟು ಮಾಡಿದರು ಎಂಬುದು ನಿಮ್ಮ ದೂರು. ಅನುಮಾನವೇ ಇಲ್ಲ, ಅವರದೂ ಅದೇ ರಾಗ. ಹೀಗೆ ದೂರು ಹೇಳಲು ಇಬ್ಬರಿಗೂ ನಿಮ್ಮದೇ ಆದ ಗಟ್ಟಿ ಕಾರಣಗಳು ಇರುತ್ತವೆ. ಹೊರಗಿನಿಂದ ನಿಂತು ನಿಮ್ಮ ತಪ್ಪಿದೆಯಾ ಎಂದು ಪ್ರಾಮಾಣಿಕವಾಗಿ ನೋಡಿ. ಇಲ್ಲ ಎನಿಸಿದರೆ ನಿರಾಳವಾಗಿ.
ಅವರಿಲ್ಲದೆ ಬದುಕು ಅಪೂರ್ಣ ಎನಿಸಿದರೆ ಹಿಂಜರಿಯಬೇಡಿ. ಕುಳಿತು ಮಾತಾಡಿ, ತಪ್ಪು ಒಪ್ಪುಗಳ ಚರ್ಚೆ ನಡೆದು ಒಂದು ತೀರ್ಮಾನವಾಗಲಿ. ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿಕೊಳ್ಳಿ. ಅದಕ್ಕೂ ಅವರು ಸಮ್ಮತಿಸುವುದಿಲ್ಲವೇ,
ಬಿಟ್ಟುಬಿಡಿ. ಅವರನ್ನು ಅವರಪಾಡಿಗೆ. ನಿಮ್ಮ ಪಾಡು ನಿಮಗೆ. ಹಾಗೆ ಬಿಡುವುದಾದರೆ ಪೂರ್ಣ ಮನಸಿಂದ ಬಿಡಿ. ಅವರನ್ನು ತಲೆಯೊಳಗೆ, ಮನದೊಳಗೆ ಹೊತ್ತು ತಿರುಗಬೇಡಿ. ಅದು ತುಂಬಾ ಭಾರ. ನಿಮ್ಮ ಮೈ ಮನಸುಗಳನ್ನು ಹಣ್ಣು ಮಾಡಿಬಿಡುತ್ತದೆ. ನಿಮ್ಮ ಉತ್ಸಾಹವನ್ನು, ನೆಮ್ಮದಿಯನ್ನು ಕೊಲ್ಲುತ್ತದೆ. ಅದರ ಪರಿಣಾಮವನ್ನು ಮನೆಮಂದಿಯೆಲ್ಲ ಎದುರಿಸುವ ಹಾಗಾಗುತ್ತದೆ. ಹಾಗಾಗಿ ಮೊದಲು ಅವರನ್ನು ಮನಸಿನಿಂದ ಹೊರಹಾಕಿ.
ಪ್ರಪಂಚ ವಿಶಾಲವಾಗಿದೆ. ಅದನ್ನು ಹೊಸ ದೃಷ್ಟಿಯಲ್ಲಿ ನೋಡಲು ಆರಂಭಿಸಿ. ಅರ್ಧಕ್ಕೆ ನಿಲ್ಲಿಸಿದ್ದ ಯಾವುದೋ ಕೆಲಸವನ್ನು ಕೈಗೆತ್ತಿಕೊಳ್ಳಿ, ಸಮಾಜಮುಖಿಯಾಗಿ, ಓದಿ, ನಿಮ್ಮಿಷ್ಟದ ಯಾವುದೋ ಹವ್ಯಾಸದಲ್ಲಿ ಕಳೆದುಹೋಗಿ … ಹೇಗೆಂದರೆ ಅವರು ನಿಮ್ಮ ಜೀವನದಲ್ಲಿ ಇದ್ದರು ಎಂಬುದೇ ಮರೆತು ಹೋಗಬೇಕು.
ಆದರೆ ಎಚ್ಚರ! ನಿಮ್ಮ ಈ ಕ್ರಿಯೆಗಳು ಹಳೆಯ ನೋವಿಂದ ತಪ್ಪಿಸಿಕೊಳ್ಳುವ ದಾರಿ ಆಗದಿರಲಿ. ಮನದಲ್ಲಿ ಸೇಡಿನ ಭಾವಕ್ಕೆ ಸ್ಥಳ ನೀಡಬೇಡಿ. ಹೊಸ ಹವ್ಯಾಸಗಳು ನಿಮ್ಮ ಬದುಕಿಗೆ ಹೊಸತನವನ್ನು ತುಂಬಲಿ. ಮುಖ್ಯವಾಗಿ ಬದುಕಲ್ಲಿ ಏನೋ ಕಳೆದುಕೊಂಡೆ ಎಂಬ ಭಾವ ನಿಮ್ಮತ್ತ ಸುಳಿಯದಂತೆ ಎಚ್ಚರ ವಹಿಸಿ. ನಿಜ. ಇವೆಲ್ಲಾ ಹೇಳಿದಷ್ಟು ಸುಲಭವಲ್ಲ. ಆದರೆ, ಖಂಡಿತಾ ಅಸಾಧ್ಯವಲ್ಲ.
ಗೊತ್ತಿಲ್ಲ. ಇನ್ನೊಂದು fine day ಅವರೇ ತಿರುಗಿ ಬರಬಹುದು. ತಮ್ಮ ತಪ್ಪಿನ ಕುರಿತು ಕ್ಷಮೆ ಕೇಳಬಹುದು. ಆಗ ವಿಷ ಕಾರದೇ ಮನ್ನಿಸಿಬಿಡಿ. ಕೆಲವೊಮ್ಮೆ ಯಾವುದೋ ಕೆಟ್ಟ ಸಮಯ ಮಾಡಬಾರದ್ದನ್ನು ಮಾಡಿಸಿರುತ್ತದೆ. ಒಂದೊಮ್ಮೆ ಅವರು ತಿರುಗಿ ಬರದಿದ್ದರೂ ಚಿಂತೆ ಬೇಡ. ನಿಮ್ಮ ಹೊಸದಾರಿಯಲ್ಲಿ ನೀವು ಮುಂದೆ ಸಾಗಿರುತ್ತೀರಿ. ಆ ಹೊಸ ಪಯಣದಲ್ಲಿ ಹಳೆಯ ಕಹಿ ನೆನಪುಗಳನ್ನು ಒಯ್ದು ಆ ಪಯಣದ ಸುಖವನ್ನು ಹಾಳುಮಾಡಿಕೊಳ್ಳಬೇಡಿ.
ಸರಿಯಾಗಿ ಒಮ್ಮೆ ಯೋಚಿಸಿನೋಡಿ. ಯಾರೋ ನಮಗೆ ನೋವು ಕೊಟ್ಟರು ಎಂದು ಕೊರಗುತ್ತೇವಲ್ಲ, ನಾವಾಗಿ ಅವಕಾಶ ಕೊಡುವವರೆಗೆ ನಿಜವಾಗಿಯೂ ಯಾರಾದರೂ ನಮಗೆ ನೋವು ಕೊಡಲು ಸಾಧ್ಯವೇ?
ಅಲ್ಲಿಗೆ ತಪ್ಪು ನಮ್ಮದೇ. ನಮ್ಮ ಮನಸನ್ನು, ಭಾವನೆಗಳನ್ನು ಕೊನೆಗೆ ಬದುಕನ್ನು ನಿಯಂತ್ರಿಸಲು ಬೇರೆಯವರಿಗೆ ಅವಕಾಶ ಮಾಡಿಕೊಟ್ಟದ್ದು, ನಮ್ಮತನವನ್ನು ಬಿಟ್ಟು ಯಾರಿಗೋ ಆತುಕೊಂಡದ್ದು, ಅವರು ಕಾರಣವನ್ನೇ ಹೇಳದೆ ಎದ್ದು ಹೋದಾಗ ನಮ್ಮನ್ನೇ ಶಪಿಸಿಕೊಂಡಿದ್ದು.
ಒಂದು ವಿಷಯ ಮರೆಯದಿರಿ. ನೀವು ಹುಟ್ಟಿದ್ದು ಒಬ್ಬರೇ. ಸಾಯುವಾಗಲೂ ಯಾರೂ ಜೊತೆಗೆ ಬರುವುದಿಲ್ಲ. ಒಂಟಿಯಾಗಿಯೇ ಬದುಕನ್ನು ಎದುರಿಸುವುದು ಜಾಣ್ಮೆ. ಆದರೂ ನಮಗೆ ಜನ ಬೇಕು. ಅವರೇ ಬೇಕೆನ್ನುವುದು ಮೂರ್ಖತನ. ಬದುಕಿಗೆ ಯಾರೂ ಅನಿವಾರ್ಯರಲ್ಲ. ನಾವು ಹಾಗೊಂದು ಭ್ರಮೆಯಲ್ಲಿ ಬದುಕುತ್ತೇವೆ ಅಷ್ಟೇ. ಹಾಗೆಂದು ಸನ್ಯಾಸ ತೆಗೆದುಕೊಳ್ಳಬೇಕಿಲ್ಲ. ಎಲ್ಲರೊಂದಿಗೆ ಬೆರೆಯಿರಿ. ಸುಖ ದುಃಖಗಳನ್ನು ಹಂಚಿಕೊಳ್ಳಿ. ಆದರೆ ಕಲಿತ ಪಾಠವನ್ನು ಮರೆಯಬೇಡಿ. ಅಂತರಂಗ ನಿಮಗೆ ಮಾತ್ರ ಸೀಮಿತವಾಗಿರಲಿ. ಅಲ್ಲಿ ನಿಮ್ಮೊಂದಿಗೆ ನೀವು ಭರಪೂರ ಹರಟೆ ಹೊಡೆಯಿರಿ. ಸಾಂತ್ವನ ಹೇಳಿಕೊಳ್ಳಿ. ಉತ್ಸಾಹವೂ, ಜೀವನ ಪ್ರೀತಿಯೂ ಅಲ್ಲಿಂದಲೇ ಮೊಳೆಯಲಿ. ಬದುಕು ಸುಂದರವಾಗುತ್ತದೆ.
ಕೊನೆಯದಾಗಿ: ಇದೆಲ್ಲ ಮನೆಯ ಹೊರಗಿನವರ ಜೊತೆ ಮಾತ್ರ. ಒಂದೇ ಸೂರಿನಡಿಯಲ್ಲಿ ಬದುಕುವವರೊಡನೆ ಈ ಮಾರ್ಗ ಖಂಡಿತಾ ಅಪಾಯಕಾರಿ. ಭಿನ್ನಾಭಿಪ್ರಾಯ ಬಂದೊಡನೆ ಅಹಂ ಬಿಟ್ಟು ಮಾತಾಡಿ. ಎದುರಿನವರ ಮನಸ್ಥಿತಿಯನ್ನು ಗಮನಿಸಿ, ಸಂದರ್ಭ ನೋಡಿಕೊಂಡು ಪರಿಸ್ಥಿತಿ ಮತ್ತು ಮನಸ್ಥಿತಿಯನ್ನು ಸರಿಮಾಡಿಕೊಳ್ಳುವುದೇ ಅತ್ಯುತ್ತಮ ಮಾರ್ಗ.
ನೆನಪಿಡಿ. ಮನುಷ್ಯ ಸಂಘಜೀವಿ.
~ ಮಾನಸಾ ಕೀಳಂಬಿ
ಕರ್ನಾಟಕ ಶಿಕ್ಷಕರ ಬಳಗ