spot_img
spot_img

ಹೊಸ ಪುಸ್ತಕ ಓದು

Must Read

- Advertisement -

ಬೆನ್ನುಡಿ ಬರೆದ ಭಾಗ್ಯ ನನ್ನದು

ಪುಸ್ತಕದ ಹೆಸರು : ಶೂನ್ಯಲಿಂಗ ವಿವೇಚನೆ ಸಂಪುಟ 3
ಲೇಖಕರು :  ಶ್ರೀ ಬಸವರಾಜ ವೆಂಕಟಾಪುರ ಶರಣರು
ಪ್ರಕಾಶಕರು : ಬಸವ ಬಳಗ ಪ್ರಕಾಶನ, ಸಿರಗುಪ್ಪಾ, ೨೦೨೪

ವಚನ ಸಾಹಿತ್ಯ ೧೨ನೇ ಶತಮಾನದಲ್ಲಿ ಹುಟ್ಟಿತು, ೧೫ನೇ ಶತಮಾನದಲ್ಲಿ ಪುನರುಜ್ಜೀವನಗೊಂಡಿತು. ನಂತರ ಮತ್ತೆ ಗುಪ್ತಗಾಮಿನಿಯಾಯಿತು. ಆಂಗ್ಲರ ಆಡಳಿತ ಕಾರಣವಾಗಿ ನಾಡಿನ ತುಂಬ ಶೈಕ್ಷಣಿಕ ಚಟುವಟಿಕೆಗಳು ವಿಸ್ತಾರಗೊಂಡ ಕಾರಣವಾಗಿ ವಚನಗಳು ಮತ್ತೆ ಪುಸ್ತಕರೂಪದಲ್ಲಿ ಪ್ರಕಟವಾಗುವ ಭಾಗ್ಯ ಕಂಡವು. ಆದರೆ ಮತಾಂತರದ ಉದ್ದೇಶ ಇಟ್ಟುಕೊಂಡು ಬಂದ ಕ್ರೈಸ್ತ ಪಾದ್ರಿಗಳು ನಿಜಗುಣರ ವೇದಾಂತ ಕೃತಿಗಳನ್ನು ಪ್ರಕಟಿಸಿದಂತೆ, ಒಂದೂ ವಚನ ಸಂಕಲನ ಪ್ರಕಟಿಸಲಿಲ್ಲವೆಂಬುದು ಆಶ್ಚರ್ಯದ ಸಂಗತಿಯಾಗಿದೆ. ಆದರೂ ಬಳ್ಳಾರಿಯ ಶಿವಲಿಂಗಶೆಟ್ರ ಮುದ್ರಣಾಲಯದಲ್ಲಿ ‘ಶಿಖಾರತ್ನ ಪ್ರಕಾಶ’ ಎಂಬ ಮೊದಲ ವಚನ ಸಂಕಲನ ಪುಸ್ತಕರೂಪದಲ್ಲಿ ಪ್ರಕಟಗೊಂಡಿತು. ಬಳ್ಳಾರಿ ಶೆಟ್ಟರ ಪ್ರಯತ್ನವಾಗಿ ಅಂಬಿಗರ ಚೌಡಯ್ಯನ ವಚನಗಳು, ಉರಿಲಿಂಗಪೆದ್ದಿ ವಚನಗಳು ಮೊದಲಾದ ಬೆರಳಣಿಕೆಯ ಕೃತಿಗಳು ಮಾತ್ರ ಪ್ರಕಟಗೊಂಡವು.

- Advertisement -

ವಚನ ಸಾಹಿತ್ಯ ಪ್ರಕಟನೆಯ ಇತಿಹಾಸದ ಘಟ್ಟಗಳನ್ನು ಗುರುತಿಸಿದ ಡಾ. ಕಲಬುರ್ಗಿ ಅವರು ಬಳ್ಳಾರಿ ಶೆಟ್ಟರ ಪ್ರಯತ್ನವನ್ನು ಆರಂಭದ ಘಟ್ಟವೆಂದು ಪರಿಭಾವಿಸುತ್ತಾರೆ. ಎರಡನೆಯ ಘಟ್ಟ ಡಾ. ಫ.ಗು.ಹಳಕಟ್ಟಿಯವರ ಶಿವಾನುಭವ ಗ್ರಂಥಮಾಲೆ, ಮತ್ತು ಶಿವಾನುಭವ ಪತ್ರಿಕೆಗಳ ಮೂಲಕ ೮೦ಕ್ಕೂ ಮಿಕ್ಕಿ ವಚನ ಕೃತಿಗಳನ್ನು ಪ್ರಕಟಿಸಿ ಒಂದು ದಾಖಲೆಯನ್ನೇ ನಿರ್ಮಿಸಿದರು. ಹಳಕಟ್ಟಿಯವರ ಯುಗವನ್ನು ಶತಮಾನದ ಸಾಧನೆಯೆಂದು ವಿದ್ವಜ್ಜನರು ಶ್ಲಾಘಿಸಿದರು.

ಡಾ. ಫ.ಗು.ಹಳಕಟ್ಟಿಯವರು ೧೯೨೩ರಲ್ಲಿ ಪ್ರಕಟಿಸಿದ ವಚನಶಾಸ್ತ್ರ ಸಾರ ಲಿಂಗಾಯತರ ಪಾಲಿಗೆ ಬೈಬಲ್ ಇದ್ದಂತೆ. ಶರಣ ಸಿದ್ಧಾಂತವನ್ನು ಶಾಸ್ತ್ರದ ಚೌಕಟ್ಟಿಗೆ ಅಳವಡಿಸಿ ಪ್ರಕಟಿಸಿದ ಪ್ರಪ್ರಥಮ ಕೃತಿ. ಶಿವಗಣ ಪ್ರಸಾದಿ ಮಹಾದೇವಯ್ಯನ ಶೂನ್ಯಸಂಪಾದನೆಯ ತರುವಾಯ, ಅದೇ ಮಾದರಿಯಲ್ಲಿ ಒಂದು ವಿಶಿಷ್ಟಕೃತಿಯಾಗಿ ರೂಪಗೊಂಡ ವಚನಶಾಸ್ತ್ರಸಾರದ ಮೂರು ಸಂಪುಟಗಳನ್ನು ಐದು ಭಾಗಗಳಲ್ಲಿ ಡಾ. ಹಳಕಟ್ಟಿಯವರು ಪ್ರಕಟಿಸಿದ್ದರು.

ಡಾ. ಹಳಕಟ್ಟಿಯವರು ಪ್ರಕಟಿಸಿದ ವಚನಶಾಸ್ತ್ರಸಾರ ಕೃತಿಯ ಪೂರ್ವಾರ್ಧ ಮತ್ತು ಉತ್ತರಾರ್ಧದ ಸಂಯುಕ್ತ ಸಂಪುಟವನ್ನು ಇಲ್ಲಿ ಪರಿಷ್ಕರಿಸಿ ಪ್ರಕಟಿಸಿದ್ದಾರೆ. ಡಾ. ಹಳಕಟ್ಟಿಯವರು ಅನೇಕ ವಚನ, ಉಪಶೀರ್ಷಿಕೆಗಳನ್ನು ಹೊಸದಾಗಿ ಸೇರಿಸಿಕೊಂಡು ರೂಪಾಂತರ ಪರಿಷ್ಕರಣ ಮಾಡಿದ್ದರು. ಡಾ. ಕಲಬುರ್ಗಿಯವರು ಹಳಕಟ್ಟಿಯವರ ಕೃತಿಯ ಚೌಕಟ್ಟನ್ನು ಇಟ್ಟುಕೊಂಡು ಪಾಠಾಂತರ ಪರಿಷ್ಕರಣ ಮಾಡುವ ಪ್ರಯತ್ನ ಮಾಡಿದ್ದಾರೆ. ಈ ಕುರಿತು ಡಾ. ಕಲಬುರ್ಗಿ ಅವರ ನುಡಿಗಳು ಹೀಗಿವೆ:

- Advertisement -

‘ಈವರೆಗೆ ಕನ್ನಡದಲ್ಲಿ ಹಸ್ತಪ್ರತಿಗಳನ್ನಿಟ್ಟುಕೊಂಡು ವಿದ್ವಾಂಸರು ಪರಿಷ್ಕರಣ ಕಾರ್ಯವನ್ನು ಪೂರೈಸಿದುದುಂಟು. ಆದರೆ ಒಬ್ಬರು ಸಂಪಾದಿಸಿದ ವಚನಕೃತಿಯನ್ನು, ಅದೂ ಅವರು ಬಳಸಿದ ಹಸ್ತಪ್ರತಿಗಳು ಲಭ್ಯವಿಲ್ಲದಾಗ ಇನ್ನೊಬ್ಬರು ಪರಿಷ್ಕರಿಸುವುದು ಕನ್ನಡದಲ್ಲಿಯೇ ಹೊಸ ಅನುಭವ, ಹೊಸ ಉಪಕ್ರಮ. ಎರಡನೆಯದಾಗಿ, ಈ ಕಾರ್ಯವನ್ನು ಕಾವ್ಯಸಾಹಿತ್ಯ ವಿಷಯವಾಗಿ ಮಾಡುವುದು ಸುಲಭ; ವಚನಸಾಹಿತ್ಯ ವಿಷಯವಾಗಿ ಮಾಡುವುದು ಕಠಿಣ. ಏಕೆಂದರೆ ಕಾವ್ಯಸಾಹಿತ್ಯದಲ್ಲಿ ಪಾಠಾಂತರಗಳು ವಿರಳ ಮತ್ತು ವ್ಯವಸ್ಥಿತ; ವಚನ ಪಾಠಗಳು ಲೋಪ, ಆಗಮ, ಆದೇಶ ಕಾರಣವಾಗಿ ಸಂಕ್ಷಿಪ್ತ, ವಿಸ್ತಾರ, ಪಲ್ಲಟ ಇತ್ಯಾದಿ ‘ರೂಪ’ಗಳಲ್ಲಿ ಸಿಗುತ್ತವೆ. ಹೀಗಾಗಿ ಇವುಗಳಲ್ಲಿ ಹಳಕಟ್ಟಿಯವರು ಇಟ್ಟುಕೊಂಡ ವಚನ ‘ರೂಪ’ವನ್ನು ನಾವು ಮೊದಲು ಒಪ್ಪಿಕೊಂಡು, ಅದರಲ್ಲಿಯೇ ಪಾಠಶುದ್ಧಿ ಮಾಡಬೇಕಾಗುತ್ತದೆ. ಇದನ್ನು ಮನದಂದು, ಹಳಕಟ್ಟಿಯವರು ಸ್ವೀಕರಿಸಿದ ವಚನರೂಪಕ್ಕೂ ಧಕ್ಕೆ ಬರದಂತೆ, ಜೊತೆಗೆ ಲಿಂಗಾಯತ ತತ್ವಕ್ಕೂ ಚ್ಯುತಿ ಬರದಂತೆ, ಗ್ರಂಥಸಂಪಾದನ ಶಾಸ್ತ್ರಕ್ಕೂ ಭಂಗ ಬರದಂತೆ, ಈ ತ್ರಿಶೂಲ ಸಾಕ್ಷಿಯಾಗಿ ನಾವು ಪರಿಷ್ಕರಣ ಕಾರ್ಯವನ್ನು ನಿರ್ವಹಿಸಿದ್ದೇವೆ.’

ಹೀಗೆ ಶ್ರದ್ಧೆ-ಶ್ರಮಗಳಿಂದ ಈ ಕೃತಿಯನ್ನು ಡಾ. ಕಲಬುರ್ಗಿ ಅವರು ಸಂಪಾದಿಸಿದ್ದಾರೆ. ಅನ್ಯಆವೃತ್ತಿಗಳಲ್ಲಿ ಲಭ್ಯವಾದ ಯೋಗ್ಯಪಾಠವನ್ನು ಸ್ವೀಕರಿಸಿ, ಮೂಲದಲ್ಲಿಲ್ಲದ ಆದರೆ ಅನ್ಯ ಆವೃತ್ತಿಗಳಿಂದ ಸ್ವೀಕರಿಸಿದ ಅಧಿಕ ಪಾಠವನ್ನು ಇಟ್ಟುಕೊಂಡಿದ್ದಾರೆ. ಸಂಸ್ಕೃತ ಉದ್ಧರಣೆಗಳನ್ನು ತಕ್ಕಮಟ್ಟಿಗೆ ಶುದ್ದಗೊಳಿಸಿ ಕೊಟ್ಟಿದ್ದಾರೆ. ಅಂಕಿತಗಳು ಪಲ್ಲಟಗೊಂಡಿರುವುದನ್ನು ಶೋಧಿಸಿ, ಸರಿಪಡಿಸಿದ್ದಾರೆ. ಪ್ರಕ್ಷಿಪ್ತ ಎನ್ನಿಸುವ ವಚನಗಳನ್ನು ಅಡಿಟಿಪ್ಪಣಿ ರೂಪದಲ್ಲಿ ಪ್ರಕಟಿಸಿದ್ದಾರೆ. ಅನುಬಂಧ ಇಡೀ ಕೃತಿ ಸೌಧವನ್ನು ಶಿಖರಸದೃಶ್ಯವಾಗಿಸಿದೆ. ವಚನಕಾರರ ಹೆಸರು, ಮುದ್ರಿಗಳ ಪಟ್ಟಿಯನ್ನು ತಿದ್ದುಪಡಿ ಮಾಡಿ ಪ್ರಕಟಿಸಿದ್ದಾರೆ. ವಚನಗಳ ಅಕಾರಾದಿಯನ್ನು ಕೊಟ್ಟಿದ್ದಾರೆ. ಕೊನೆಯಲ್ಲಿ ಆಯಾ ವಚನಕಾರನ ವಚನಗಳ ಮೊತ್ತವನ್ನು ಕ್ರಮಸಂಖ್ಯೆಯೊಂದಿಗೆ ಹೊಸದಾಗಿ ಸಿದ್ಧಪಡಿಸಿ, ಜೋಡಿಸಿದ್ದಾರೆ. ಕೃತಿಯನ್ನು ಹಲವಾರು ಬಾರಿ ಸೂಕ್ಷ್ಮವಾಗಿ ಕಣ್ಣಲ್ಲಿ ಕಣ್ಣಿಟ್ಟು ಸಿದ್ಧಪಡಿಸಿದ್ದರೂ ಅಲ್ಲಲ್ಲಿ ಉಳಿದ ಯೋಗ್ಯಪಾಠಗಳ ಅಭಾವ, ಅನವಧಾನ, ಅನ್ಯಥಾಜ್ಞಾನ, ಅಜ್ಞಾನಗಳಿಂದಾಗಿ ಇನ್ನೂ ದೋಷಗಳು ಉಳಿದುಕೊಂಡಿರುವುದು ಸ್ವಾಭಾವಿಕ. ಹೀಗಿದ್ದೂ ಈ ಆವೃತ್ತಿ ಹಿಂದಿನ ಎಲ್ಲ ಆವೃತ್ತಿಗಳಿಗಿಂತ ಎಷ್ಟೋ ಪಾಲು ಶುದ್ಧವಾಗಿ ಪ್ರಕಟಗೊಂಡಿದೆ.

‘ಶಿಥಿಲವಾದ ವಚನಮಂಟಪವೊಂದನ್ನು ಜೀರ್ಣೋದ್ಧಾರ ಮಾಡಿದ, ವಚನ ಪಿತಾಮಹ ಡಾ. ಹಳಕಟ್ಟಿಯವರ ಸೇವೆ ಮಾಡಿದ ಧನ್ಯತೆ ನಮಗುಂಟಾಗಿದೆ. ಹೀಗೆ ಶ್ರಮ-ಭಕ್ತಿಗಳಿಂದ ಕೆಲಸ ಮಾಡಿದರೂ ಉಳಿದಿರಬಹುದಾದ ದೋಷಗಳಿಗೆ ಸಹೃದಯರು ನಮ್ಮನ್ನು ಮನ್ನಿಸಬೇಕೆಂದು’ ವಿನಂತಿಸಿಕೊಂಡಿರುವುದು ಡಾ. ಕಲಬುರ್ಗಿ ಅವರ ವಿದ್ವತ್ತಿನ ವಿನಯಕ್ಕೆ ಪರಮ ನಿದರ್ಶನವೆನಿಸಿದೆ.

ವಚನಶಾಸ್ತ್ರ ಸಾರ ಕೃತಿಯನ್ನು ೧೯೯೯ರಲ್ಲಿ ಪೂಜ್ಯ ಶ್ರೀಗಳ ಪೀಠಾರೋಹಣ ರಜತಮಹೋತ್ಸವ ಸವಿನೆನಪಿಗಾಗಿ ಮತ್ತೊಮ್ಮೆ ಪುನರ್ಪ್ರಕಟಿಸಿದರು. ಈ ಕೃತಿಯ ಐದನೆಯ ಆವೃತ್ತಿ ವಿಜಯಪುರ ಬಿ.ಎಲ್.ಡಿ.ಇ. ಸಂಸ್ಥೆಯ ಡಾ. ಹಳಕಟ್ಟಿ ಸಂಶೋಧನ ಕೇಂದ್ರದಿಂದ ೨೦೦೭ರಲ್ಲಿ ಪ್ರಕಟಗೊಂಡಿದೆ. ಡಾ. ತೋಂಟದ ಸಿದ್ಧಲಿಂಗ ಸ್ವಾಮೀಜಿಯವರು ಹಳಕಟ್ಟಿಯವರ ಉಳಿದ ವಚನಶಾಸ್ತ್ರಸಾರ ಕೃತಿಗಳನ್ನು ಇತರ ವಿದ್ವಾಂಸರ ನೆರವಿನಿಂದ ಪರಿಷ್ಕರಿಸಿ, ಲಿಂಗಾಯತ ಅಧ್ಯಯನ ಸಂಸ್ಥೆಯಿಂದ ೧೯೯೯ರಲ್ಲಿ ಪ್ರಕಟಿಸುವ ಏರ್ಪಾಟು ಮಾಡಿದರು.
ನೂರು ವರ್ಷಗಳ ಹಿಂದೆ ಪ್ರಕಟವಾದ ವಚನ ಶಾಸ್ತ್ರಸಾರ ಕೃತಿಯ ಶತಮಾನೋತ್ಸವ ಸಂದರ್ಭದಲ್ಲಿ ಈ ಕೃತಿಯ ಮಹತ್ವವನ್ನು ನಾಡಿನ ಜನತೆಗೆ ತೋರಿಸಿದ ಕೀರ್ತಿ ಶ್ರೀ ಬಸವರಾಜ ವೆಂಕಟಾಪುರ ಶರಣರು ಅವರಿಗೆ ಸಲ್ಲುತ್ತದೆ. ವೆಂಕಟಾಪುರ ಶರಣರು ನಮ್ಮ ದಿನಮಾನದ ಅಪರೂಪದ ಶರಣರು.

ನಾನು ೨೦೦೬ರಿಂದ ಹತ್ತು ವರ್ಷಗಳ ಕಾಲ ಪ್ರತಿ ತಿಂಗಳು ಲಿಂಗಾಯತ ಪತ್ರಿಕೆ ಪ್ರಕಟಣೆಗಾಗಿ ಗದುಗಿನ ತ್ವರಿತ ಮುದ್ರಣಾಲಯಕ್ಕೆ ಹೋಗುತ್ತಿದ್ದೆ. ಆ ಸಂದರ್ಭದಲ್ಲಿ ಸಹಜವಾಗಿಯೇ ತೋಂಟದಾರ್ಯಮಠಕ್ಕೆ ಹೋಗಿ ಪೂಜ್ಯ ಜಗದ್ಗುರುಗಳ ದರ್ಶನ ಪಡೆಯುತ್ತಿದ್ದೆ. ಆಗ ಪೂಜ್ಯರು ಪ್ರಸಾದ ಮಾಡಲು ಅಪ್ಪಣೆ ಮಾಡುತ್ತಿದ್ದರು. ದಾಸೋಹ ಮನೆಯಲ್ಲಿ ನೂರಾರು ಜನರಿಗೆ ಅನ್ನದಾಸೋಹ ಮಾಡುವ ಮಹಾಕೈಂಕರ್ಯದಲ್ಲಿ ಒಬ್ಬ ಖಾದಿ ಬಿಳಿ ಬಟ್ಟೆ ತೊಟ್ಟ ಸರಳ ಜೀವಿ ನನಗೆ ಕಂಡರು. ಅವರೇ ಪೂಜ್ಯ ಶ್ರೀ ವೆಂಕಟಾಪುರ ಶರಣರು. ಪೂರ್ವಾಶ್ರಮದ ಬದುಕಿನಲ್ಲಿ ಅವರು ಬಹಳಷ್ಟು ನೋವು ಅನುಭವಿಸಿ, ಶ್ರೀಗಳ ಆಶ್ರಯಕ್ಕೆ ಬಂದಿದ್ದರು. ಆಗ ಅವರು ಮೈಲಾರ ಬಸವಲಿಂಗ ಶರಣರ ‘ಬಸವಲಿಂಗವೆಂಬೈದಕ್ಷರಗಳು’ ಎಂಬ ಒಂದೇ ಪದ್ಯವನ್ನು ವಿಶ್ಲೇಷಿಸಿ ಒಂದು ಕಿರುಕೃತಿಯನ್ನೇ ಬರೆದಿದ್ದರು. ಅದು ನನಗೆ ಅತ್ಯಂತ ಆಶ್ಚರ್ಯವನ್ನುಂಟು ಮಾಡಿತು. ಬಸವಲಿಂಗ ಶರಣರು ಆದಿ ಪ್ರಾಸ-ಅಂತ್ಯಪ್ರಾಸ ಬಳಸಿ ಬರೆದ ಈ ಪದ್ಯ ಅದ್ಭುತವಾಗಿದೆ. ಈ ಪದ್ಯದದ ಒಂದೊಂದು ಶಬ್ದವನ್ನು ವೆಂಕಟಾಪುರ ಶರಣರು ವಿಶ್ಲೇಷಿಸಿದ ರೀತಿ ಅನನ್ಯವಾಗಿತ್ತು. ತದನಂತರ ಶರಣರು ಚಾಮರಸನ ಪ್ರಭುಲಿಂಗಲೀಲೆಗೆ ಅಪ್ರತಿಮವಾದ ವ್ಯಾಖ್ಯಾನವನ್ನು ಬರೆದರು. ತದನಂತರ ಡಾ. ಹಳಕಟ್ಟಿಯವರ ವಚನ ಶಾಸ್ತ್ರಸಾರ ಭಾಗ-೧ ರಲ್ಲಿ ಇರುವ ವಚನಗಳಿಗೆ ವ್ಯಾಖ್ಯಾನ ಬರೆಯುವ ಮಹಾಮಣಿಹ ಕೈಕೊಂಡರು. ಪ್ರಥಮ ಸಂಪುಟ ಗದುಗಿನ ತೋಂಟದಾರ್ಯಮಠದಿಂದಲೇ ಪ್ರಕಟಗೊಂಡಿತು. ಈಗ ಮೂರನೆಯ ಸಂಪುಟ ಪ್ರಕಟವಾಗುತ್ತಿದೆ.

ಈ ಕೃತಿಗೆ ನಾನು ಬೆನ್ನುಡಿ ಬರೆಯಬೇಕೆಂದು ಶ್ರೀ ವೆಂಕಟಾಪುರ ಶರಣರು ನನ್ನನ್ನು ಕೇಳಿಕೊಂಡಾಗ, ನಿಜಕ್ಕೂ ನಾನು ಮುಜುಗರಪಟ್ಟೆ. ನನ್ನಂತಹ ಸಣ್ಣವನಿಂದ ಬೆನ್ನುಡಿ ಬರೆಸುತ್ತಿರುವ ಅವರ ಪ್ರೀತಿ ಅಂತಃಕರಣಕ್ಕೆ ಕರಗಿ ಹೋದೆ. ನಾನು ಬರೆದ ಬೆನ್ನುಡಿಯ ನುಡಿಗಳು ಹೀಗಿವೆ:

೧೨ನೇ ಶತಮಾನದಲ್ಲಿ ಬಸವಾದಿ ಶಿವಶರಣರಿಂದ ರಚನೆಗೊಂಡ ‘ವಚನಗಳು’ ಲೋಕದ ಜನರ ಬದುಕಿಗೆ ಬೆಳಕು ತೋರುವ ಅಪೂರ್ವ ಶಬ್ದಸೋಪಾನಗಳು. ವಿಶ್ವಸಾಹಿತ್ಯಕ್ಕೆ ಕನ್ನಡದ ಕೊಡುಗೆ ಏನು ಎಂಬ ಪ್ರಶ್ನೆ ಬಂದಾಗ, ‘ವಚನ ಸಾಹಿತ್ಯ’ ಎಂದು ಹೆಮ್ಮೆ ಮತ್ತು ಅಭಿಮಾನದಿಂದ ಹೇಳಲಾಗುತ್ತದೆ. ಇಂತಹ ಲೋಕೋತ್ತರ ಸಾಹಿತ್ಯವು ಕಾಲಗರ್ಭದಲ್ಲಿ ಒಮ್ಮೆ ಬೆಳಗುತ್ತ, ಒಮ್ಮೆ ನೇಪಥ್ಯಕ್ಕೆ ಸರಿಯುತ್ತ ಬಂದಿತ್ತು. ಡಾ. ಫ.ಗು.ಹಳಕಟ್ಟಿ ಅವರು ಈ ಸಾಹಿತ್ಯವನ್ನು ಕತ್ತಲೆಯಿಂದ ಬೆಳಕಿಗೆ ತಂದರು. ಇಂದಿಗೆ ನೂರೊಂದು ವರ್ಷಗಳ ಹಿಂದೆ ೧೯೨೩ರಲ್ಲಿ ವಚನಶಾಸ್ತ್ರ ಸಾರ ಕೃತಿಯನ್ನು ಪ್ರಕಟಿಸುವ ಮೂಲಕ ವಚನ ಸಾಹಿತ್ಯದ ಬೆಳಕನ್ನು ಪಸರಿಸಿದರು.
‘ವಚನ ಶಾಸ್ತ್ರಸಾರ’ ಲಿಂಗಾಯತ ಅಧ್ಯಾತ್ಮ ಸಾಧಕರ ಪಾಲಿಗೆ ಕಾಮಧೇನು-ಕಲ್ಪವೃಕ್ಷ. ಇಂತಹ ಮಹಾನ್ ಕೃತಿ ಪ್ರಕಟವಾಗಿ ನೂರು ವರ್ಷಗಳ ತರುವಾಯ ಪೂಜ್ಯ ಶ್ರೀ ಬಸವರಾಜ ವೆಂಕಟಾಪೂರ ಶರಣರು ‘ಶೂನ್ಯಲಿಂಗ ವಿವೇಚನೆ’ ಹೆಸರಿನಲ್ಲಿ ವ್ಯಾಖ್ಯಾನ ಮಾಡುತ್ತಿರುವುದು ಭುವನದ ಭಾಗ್ಯವೆನಿಸಿದೆ. ಪ್ರತಿ ಸಂಪುಟದಲ್ಲಿ ತಲಾ ಐದು ನೂರು ವಚನಗಳನ್ನು ವ್ಯಾಖ್ಯಾನಕ್ಕೆ ಒಳಗು ಮಾಡಿರುವ ವೆಂಕಟಾಪೂರ ಶರಣರ ಅನುಭಾವದ ಅಭಿವ್ಯಕ್ತಿ ಅನನ್ಯ-ಅಪರೂಪ. ಪ್ರತಿಯೊಂದು ವಚನದಲ್ಲಿರುವ ಕಠಿಣ ಪದಗಳ ವಿವರಣೆ, ಆ ವಚನದ ಒಟ್ಟು ಸಾರವನ್ನು ಸರಳ ಸುಭಗ ಭಾಷೆಯಲ್ಲಿ ನಿರೂಪಿಸಿರುವುದು ಅವರ ಬಹುಶ್ರುತ ಜ್ಞಾನಕ್ಕೆ ನಿದರ್ಶನವಾಗಿದೆ. ಹೃದ್ಯವಾದ ಭಾಷೆಯಲ್ಲಿ ವಚನಾನುಭಾವದ ರಸಪಾನ ಮಾಡಿಸುವ ಅವರ ವಿನೂತನ ದೃಷ್ಟಿ ಅಪ್ಯಾಯಮಾನ.
ಶ್ರೀ ಬಸವರಾಜ ವೆಂಕಟಾಪೂರ ಶರಣರು ವಚನ ಸಾಹಿತ್ಯವನ್ನು ಅನುಭಾವಿಕ ದೃಷ್ಟಿಯಿಂದ ಅಧ್ಯಯನ ಮಾಡಿ, ನಿಜವಾದ ಅನುಭಾವದ ಎತ್ತರಕ್ಕೆ ಏರಿದ್ದಾರೆ. ಅವರನ್ನು ಕಂಡಾಗಲೆಲ್ಲ ಪದ್ಮಪತ್ರದ ಜಲಬಿಂದು ನೆನಪಾಗುತ್ತದೆ. ‘ಹಳಕಟ್ಟಿಯಂತವರು ಹಗಲೆಲ್ಲ ಹುಟ್ಟುವರೆ, ಶತಕ ಸುಕೃತದ ಸಾಹಿತ್ಯ ಕೊಟ್ಟವರು’ ಎಂಬ ಕವಿವಾಣಿ ವೆಂಕಟಾಪೂರ ಶರಣರಿಗೂ ಅನ್ವಯಿಸುತ್ತದೆ. ಹಳಕಟ್ಟಿಯವರು ಪ್ರಕಟಿಸಿದ ವಚನ ಶಾಸ್ತ್ರಸಾರ ಕೃತಿಯ ಶತಮಾನೋತ್ಸವದ ಸಂದರ್ಭದಲ್ಲಿ ಆ ಕೃತಿಯ ಪುನರ್ ವ್ಯಾಖ್ಯಾನ ಮಾಡುವ ಮೂಲಕ, ವಚನ ಸಾಹಿತ್ಯಾಭ್ಯಾಸಿಗಳಿಗೆ ಹೊಸದೊಂದು ಲೋಕವನ್ನೆ ತೆರೆದು ತೋರಿಸುತ್ತಿರುವ ವೆಂಕಟಾಪೂರ ಶರಣರು ಕೂಡ ಶತಕ ಸುಕೃತದ ಸಾಹಿತ್ಯ ಕೊಟ್ಟವರು. ಅಂತೆಯೆ ಅವರು ಅಭಿನಂದನಾರ್ಹರು.

ಈ ಕೃತಿ ಬಸವ ಜಯಂತಿ ದಿನ ಶಿರಗುಪ್ಪದಲ್ಲಿ ಲೋಕಾರ್ಪಣೆಯಾಗುತ್ತಿದೆ. ಪ್ರತಿಯೊಬ್ಬ ಲಿಂಗಾಯತನು ಇಂತಹ ಅಮೂಲ್ಯ ಕೃತಿಯನ್ನು ಓದಿದರೆ, ನಿಜವಾಗಿಯೂ ಲಿಂಗಾಯತ ಧರ್ಮದ ಪರಿಪಕ್ವ ಅನುಭವವಾಗುವುದರಲ್ಲಿ ಸಂದೇಹವಿಲ್ಲ.

ಪ್ರಕಾಶ ಗಿರಿಮಲ್ಲನವರ
ಬೆಳಗಾವಿ
ಮೊ. 9902130041

- Advertisement -
- Advertisement -

Latest News

ಕವಿ ಸಿದ್ಧಲಿಂಗಯ್ಯಾ ಹಿರೇಮಠ ಅವರಿಗೆ ಸನ್ಮಾನ

ಗೋಕಾಕ - ಬಸವ ಸಮಿತಿ 2024 ನೇ ಸಾಲಿನ ವಿಶ್ವಬಸವ ಜಯಂತಿ ಪ್ರಯುಕ್ತ ಆಯೋಜಿಸಿದ್ದ ರಾಜ್ಯ ಮಟ್ಟದ ಕವನ ಸ್ಪರ್ದೆಯಲ್ಲಿ ಭಾಗವಹಿಸಿದ ಬೆಳಗಾವಿ ಜಿಲ್ಲೆಯ ಗೋಕಾಕ...
- Advertisement -

More Articles Like This

- Advertisement -
close
error: Content is protected !!
Join WhatsApp Group