ಕಾಂಗ್ರೆಸ್ ಸರ್ಕಾರ ಜವಾಬ್ದಾರಿಯಿಂದ ನಡೆದುಕೊಳ್ಳಬೇಕು
‘ನುಡಿದಂತೆ ನಡೆದಿದ್ದೇವೆ, ಖಜಾನೆ ಭರ್ತಿಯಾಗಿದೆ’ ಎಂಬ ಮುಖ್ಯ ಸುದ್ದಿಯ ತಲೆಬರಹ ನೋಡಿ ನನ್ನಲ್ಲಿ ರೋಷವುಕ್ಕಿತು. ಈ ಕಾಂಗ್ರೆಸ್ ನವರು ಅಧಿಕಾರಕ್ಕೆ ಬರಲು ಕೆಲವು ಗ್ಯಾರಂಟಿಗಳನ್ನೇನೋ ಕೊಟ್ಟಿದ್ದಾರೆ ಆದರೆ ಅದಕ್ಕೆ ಬದಲಾಗಿ ‘ನುಡಿದಂತೆ ನಡೆದಿದ್ದೇವೆ’ ಎಂದು ಲಜ್ಜಾಹೀನರಾಗಿ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಜಾಹೀರಾತು ಕೊಡುವುದನ್ನು ನೋಡಿ ನಗಬೇಕೋ ಅಳಬೇಕೋ ತಿಳಿಯಲಿಲ್ಲ. ನುಡಿದಂತೆ ನಡೆಯುವುದರ ಅರ್ಥ ಸಾರ್ಥಕ ಮಾಡುವುದು ಈ ಕಾಂಗ್ರೆಸ್ ನವರ ಜಾಯಮಾನದಲ್ಲಿ ಇದ್ದಿದ್ದರೆ ೧೯೭೭ ರಲ್ಲಿ ಇವರು ಘೋಷಣೆ ಮಾಡಿದ್ದ ‘ ಗರೀಬಿ ಹಟಾವೋ’ ಎಂಬ ಘೋಷಣೆಯನ್ನು ಅರುವತ್ತು ವರ್ಷಗಳ ನಂತರವೂ ಹಮ್ ಗರೀಬಿ ಕೊ ಹಟಾದೇಂಗೆ…ಖಟಾ ಖಟ್ ಖಟಾ ಖಟ್ ಎಂಬ ನಾಚಿಕೆಯಿಲ್ಲದ ಹೇಳಿಕೆ ಕೊಡುವ ಪ್ರಸಂಗ ಬರುತ್ತಿರಲಿಲ್ಲ.
ಇನ್ನು ಖಜಾನೆ ತುಂಬಿದೆಯೆಂದು ಇವರು ಹೇಳುವುದು ಯಾವ ಆಧಾರದ ಮೇಲೆ? ಖಜಾನೆ ತುಂಬಿದ್ದರೆ ಮೊನ್ನೆ ಬಜೆಟ್ ನಲ್ಲಿ ೯೫೦೦೦ ಕೋಟಿ ಸಾಲ ಎತ್ತಲಾಗುವುದು ಎಂದು ಹೇಳುತ್ತಿದ್ದರೆ ಈ ಬಡಾಯಿ ಮುಖ್ಯಮಂತ್ರಿ ಸಿದ್ಧರಾಮಯ್ಯ ? ಹೌದು, ನಾನು ಒಂದು ಜವಾಬ್ದಾರಿಯುತ ಪತ್ರಿಕೆಯಲ್ಲಿ ಸಾಮಾಜಿಕ ಜಾಲತಾಣದ ಭಾಷೆಯನ್ನು ಬಳಸಬೇಕಾಗಿದೆ. ಇವರ ಬೊಗಳೆಗಳನ್ನು ಕೇಳುತ್ತಿದ್ದರೆ ಒಬ್ಬ ಮಧ್ಯಮ ವರ್ಗದ ಪ್ರಜೆಯಾಗಿ ನನ್ನಲ್ಲಿ ರೋಷ ಉಕ್ಕುತ್ತಿದೆ. ಅಧಿಕಾರಕ್ಕೆ ಬರಲೇಬೇಕೆಂಬ ಇವರ ತೆವಲಿಗೆ ಇವರು ಘೋಷಣೆ ಮಾಡಿದ ಉಚಿತ ಗ್ಯಾರಂಟಿಗಳಿಗೆ ಬೆಲೆ ತೆರುತ್ತಿರುವುದು ಕಡು ಬಡವರೂ ಅಲ್ಲ ಅತಿ ಶ್ರೀಮಂತರೂ ಅಲ್ಲ. ಬದುಕಿಗಾಗಿ ಹತ್ತು ಹಲವು ಕನಸುಗಳನ್ನು ಕಟ್ಟಿಕೊಂಡು ನೆಮ್ಮದಿಯಾಗಿ ಬದುಕಲು ಆಗದೆ ಏಗುತ್ತಿರುವ ನಮ್ಮಂಥ ಮಧ್ಯಮ ಮತ್ತು ಮೇಲ್ಮಧ್ಯಮ ವರ್ಗದ ಜನರು !
ಈ ಕಾಂಗ್ರೆಸ್ ನವರ ಗ್ಯಾರಂಟಿಗಳನ್ನು ಒಂದೊಂದಾಗಿ ನೋಡೋಣ ;
ಚುನಾವಣೆಯ ಮುಂಚೆ ಇವರು ಹೇಳಿದ್ದು ಪ್ರತಿಯೊಬ್ಬರಿಗೂ ಇನ್ನೂರು ಯೂನಿಟ್ ಕರೆಂಟ್ ಬಿಲ್ ಉಚಿತವೆಂದು. ಆರಿಸಿ ಬರುತ್ತಲೇ ( ಈ ಸಲದ ಚುನಾವಣೆಯಲ್ಲಿ ಅಧಿಕಾರಕ್ಕೆ ಬರುವ ಗ್ಯಾರಂಟಿ ಕಾಂಗ್ರೆಸ್ ನವರಿಗೇ ಇರಲಿಲ್ಲ ! ) ಅದಕ್ಕೆ ಏನೆನೋ ಕಂಡಿಷನ್ಸ್ ಹಾಕಿ ಒಂದು ರೀತಿಯಲ್ಲಿ ಹಲವು ನಿಬಂಧನೆಗಳನ್ನು ಹಾಕಿ ಯಾವ ಲೆಕ್ಕದಲ್ಲಿ ಕರೆಂಟ್ ಯೂನಿಟ್ ಗಳ ಮಿತಿ ಹಾಕಿದರೋ ಏನೋ. ಮಿತಿಯಂತೂ ಹಾಕಿದರು ೨೦೦ ಯುನಿಟ್ ಉಚಿತ ಆಗಲಿಲ್ಲ. ಅದರ ಬದಲಾಗಿ ಏನಾಯಿತು ? ಕರೆಂಟ್ ದರದಲ್ಲಿ ವಿಪರೀತ ಹೆಚ್ಚಳ. ನೀವು ಒಂದು ಕರೆಂಟ್ ಬಿಲ್ ನೋಡಿ. ಅದರಲ್ಲಿ ನಿಗದಿತ ಶುಲ್ಕ ( ತೀರಾ ಹೆಚ್ಚಳವಾಗಿದೆ ), ಇ ವಿ ಖ ವೆ ಹೊಂ ಶುಲ್ಕ (!), ಪಿ ಎಫ್ ದಂಡ, ಅಧಿಕ ಪ್ರಮಾಣ ದಂಡ !, ಹಾಗೂ ಇತರೆ ( ಏನಿದು ?) ಅಂತ ಹಲವಾರು ಖರ್ಚುಗಳನ್ನು ಹಾಕಿಕೊಂಡು ಕರೆಂಟ್ ಬಿಲ್ ಸಿಕ್ಕಾಪಟ್ಟೆ ಹೆಚ್ಚಾಗಿದೆ. ಇನ್ನು ಕಮರ್ಷಿಯಲ್ ಇದ್ದರಂತೂ ಮಾಲೀಕ ನೇಣು ಹಾಕಿಕೊಳ್ಳಬೇಕು. LT – 5 ದರದಲ್ಲಿ ಹೆಚ್ಚಳ, ಹೋದ ತಿಂಗಳತನಕ LT-3a-U ಮೀಟರಿಗೆ ನಿಗದಿತ ಶುಲ್ಕ ರೂ. ೨೦೦ ಇದ್ದದ್ದು ಈ ತಿಂಗಳು ರೂ. ೨೧೦ ಆಗಿದೆ ! ಬಾಯಿ ಬಾಯಿ ಬಡಕೋಬೇಕು.
ಇದು ಕರೆಂಟ್ ಬಿಲ್ ಕತೆಯಾದರೆ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಕತೆಯಲ್ಲಿ ಅಪಸವ್ಯಗಳದ್ದೇ ಒಂದು ಕಾದಂಬರಿಯಾದೀತು ! ಹಾಗೆ ನೋಡಿದರೆ ಕಾಂಗ್ರೆಸ್ ನ ಎಲ್ಲ ಗ್ಯಾರಂಟಿಗಳಲ್ಲಿ ನೂರಕ್ಕೆ ನೂರು ಜಾರಿಯಾಗಿದ್ದೆಂದರೆ ಇದೊಂದೇ. ಬಸ್ ಉಚಿತ ಮಾಡಿದ್ದರಿಂದ ಮಹಿಳೆಯರು ದಾರಿ ತಪ್ಪಿದ್ದಾರೆ ಎಂದು ಹೇಳಿದ ವಿರೋಧಿ ನಾಯಕರೊಬ್ಬರ ಹೇಳಿಕೆಯನ್ನು ಮಹಿಳಾ ವಿರೋಧಿಯೆಂದು ಬಿಂಬಿಸಿ ಅವರ ವಿರುದ್ಧ ಎತ್ತಿ ಕಟ್ಟಿದ ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ಮಹಿಳೆಯರು ಸುರಕ್ಷಿತವಾಗಿದ್ದಾರಾ ? ಎಂಬುದೊಂದು ಪ್ರಶ್ನೆ. ಇಲ್ಲವೇ ಇಲ್ಲ ಎಂಬುದು ಒಂದೇ ಉತ್ತರ. ಇನ್ನು ಈ ಉಚಿತ ಬಸ್ ಪ್ರಯಾಣದ ಗದ್ದಲದಲ್ಲಿ ಪುರುಷರು ಬಸ್ ಹತ್ತಲಾರದ ಪರಿಸ್ಥಿತಿ, ವೃದ್ಧರು ಬಸ್ ಹತ್ತ ಬೇಕಾದರೆ ಕಣ್ಣಿಗೆ ಚುಕ್ಕೆ ಕಾಣಿಸುತ್ತವೆ, ಶಾಲಾ ಮಕ್ಕಳು ಕಣ್ಣೀರು ಹಾಕುತ್ತಿವೆ. ಇನ್ನು ಮನೆ ಮನೆಗಳಲ್ಲಿ ಗಂಡಂದಿರು ದಿಕ್ಕು ತಪ್ಪಿದ ಕರುಗಳಂತೆ ಅಲೆದಾಡುತ್ತಿದ್ದಾರೆ ಎಂದು ಹೇಳಿದರೆ ನನಗೂ ಮಹಿಳಾ ವಿರೋಧಿ ಪಟ್ಟ ಕಟ್ಟಿಬಿಡುತ್ತಾರೆ ಈ ಕಾಂಗ್ರೆಸ್ ನವರು !
ಇನ್ನು ಮಹಿಳೆಯರಿಗೆ ಪ್ರತಿ ತಿಂಗಳೂ ರೂ.೨೦೦೦ ಕೊಡುವ ಯೋಜನೆ ಕನಿಷ್ಠ ಶೇ. ೫೦ ರಷ್ಟೂ ಕೂಡ ಜಾರಿಯಾಗಿಲ್ಲ. ನಿಸ್ಸಂಶಯವಾಗಿ ಈ ಯೋಜನೆ ದಿಕ್ಕಿಲ್ಲದವರಿಗೆ, ಕಡು ಬಡ ಮಹಿಳೆಯರಿಗೆ ಅನುಕೂಲವಾಗಿದೆ. ಆದರೆ ಇದರ ಹೆಸರಿನಲ್ಲಿ ಅಂಥ ಮಹಿಳೆಯರ ಶೋಷಣೆ ನಡೆದಿದ್ದು ಈ ಬಗ್ಗೆ ಸರ್ಕಾರಕ್ಕೆ ಅರಿವಿಲ್ಲ. ನನಗೂ ಫ್ರೀ, ನಿಮಗೂ ಫ್ರೀ ಈ ಕಾಕಾ ಪಾಟೀಲನಿಗೂ ಫ್ರೀ ಎಂದು ತುಂಬಿದ ಸಭೆಯಲ್ಲಿಯೇ ಬೊಗಳೆ ಬಿಟ್ಟ ಮುಖ್ಯಮಂತ್ರಿ ಗಳು ರಾಜ್ಯದ ಎಲ್ಲಾ ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆಯ ಹಣ ಮುಟ್ಟುತ್ತಿಲ್ಲವೆಂದರೆ ನಂಬಲಾರರು. ಯಾಕೆಂದರೆ ವಾಸ್ತವ ಪರಿಸ್ಥಿತಿ ಅವರು ಮುಟ್ಟಿ ನೋಡಿಕೊಳ್ಳವಂತಿದೆ. ರಾಜ್ಯದ ಮಹಿಳೆಯರಿಗೆ ಹಣವೇನೋ ಬಂದಿದೆ ಇನ್ನೂ ಕೆಲವರಿಗೆ ಬಂದಿಲ್ಲ. ಯಾರಿಗೆ ಈ ತಿಂಗಳು ಬಂದಿತೋ ಅವರಿಗೆ ಮುಂದಿನ ತಿಂಗಳು ಬರಲಿಲ್ಲ.( ಯಾರೋ ಒಬ್ಬ ಮಹಿಳೆ ಈ ಗೃಹಲಕ್ಷ್ಮಿ ಹಣದಲ್ಲಿ ಫ್ರಿಡ್ಜ್ ಕೊಂಡರಂತೆ ! ಪಾಪ, ಅವರಿಗೆ ಕರೆಂಟ್ ಬಿಲ್ ಯಾವ ಪ್ರಮಾಣದಲ್ಲಿ ಹೆಚ್ಚಾಗಿದೆ ಎಂಬುದರ ಅರಿವಿಲ್ಲ. ಅದನ್ನು ತುಂಬ ಬೇಕಾದ ಮನೆಯ ಯಜಮಾನನ ಕೊರಳಿಗೆ ಈ ಹೆಚ್ಚಾದ ದರದ ಪಾಶ !), ಇನ್ನೊಂದು ಪ್ರಕರಣದಲ್ಲಿ ಬಡ ಮಹಿಳೆಯೊಬ್ಬರು ಗೃಹಲಕ್ಷ್ಮಿ ಹಣವನ್ನು ೧೦ ತಿಂಗಳು ಕೂಡಿಸಿ ಕಣ್ಣಿನ ಆಪರೇಶನ್ ಮಾಡಿಸಿಕೊಂಡರಂತೆ ( ಬಡವರಿಗೆ ಉಚಿತ ಚಿಕಿತ್ಸೆ, ಶಸ್ತ್ರಚಿಕಿತ್ಸೆ ಎಂದು ಬಡಾಯಿ ಕೊಚ್ಚುವ ಸರ್ಕಾರದಲ್ಲಿ ಒಬ್ಬ ಮಹಿಳೆ ಕಣ್ಣಿನ ಆಪರೇಶನ್ ಮಾಡಿಸಿಕೊಳ್ಳಲು ಹತ್ತು ತಿಂಗಳು ಕಾಯಬೇಕಾಯಿತೆನ್ನುವುದು ಯಾವುದರ ಸಂಕೇತ ?)
ಪಾಪ ಹಣ ಬರದ ಮಹಿಳೆಯರು ಬಿಸಿಲಲ್ಲಿ ಒನ್ ಕೇಂದ್ರಗಳಿಗೆ ಅಲೆದಾಡಿದ್ದೇ ಬಂತು. ಆದರೆ ಈ ಸರ್ಕಾರದವರು, ನಾವು ನುಡಿದಂತೆ ನಡೆದಿದ್ದೇವೆ ಎಂದು ಜಾಹೀರಾತು ಹಾಕುತ್ತಲೇ ಇದ್ದಾರೆ.
ಇನ್ನೊಂದು ಗ್ಯಾರಂಟಿಯಾದ ಹತ್ತು ಕೇಜಿ ಅಕ್ಕಿ ! ( ಇದನ್ನು ಸಿದ್ಧರಾಮಯ್ಯನವರ ಸ್ಟೈಲ್ ನಲ್ಲಿ ಓದಿಕೊಳ್ಳಬಹುದು ) ಎಲ್ಲರಿಗು ಹತ್ತು ಕೆಜಿ ಅಕ್ಕಿ ಕೊಡುತ್ತೇವೆ ಅಂತ ಹೇಳಿದ ಸಿದ್ದ್ರಾಮಯ್ಯನವರಿಗೆ ತಾವು ಅಧಿಕಾರಕ್ಕೆ ಬರುವ ಗ್ಯಾರಂಟಿಯೇ ಇರಲಿಲ್ಲ. ಯಾವಾಗ ೧೩೬ ಸೀಟು ಬಂದು ಅಧಿಕಾರಕ್ಕೇರಿದ ಮರುಕ್ಷಣದಿಂದ ಅಕ್ಕಿ ಕೊಡಬೇಕಾದ ಪರಿಸ್ಥಿತಿ ಬಂತೋ ಆವಾಗ ಸತ್ಯ ಬಾಯಿಬಿಟ್ಟರು ! ಮೋದಿಯವರಿಂದ ಐದು ಕೆಜಿ ಅಕ್ಕಿ ಬರುತ್ತಿದೆ, ಇನ್ನು ತಾವು ಕೊಡುವುದು ಕೇವಲ ಐದು ಕೆಜಿ ಅದನ್ನೂ ಕೇಂದ್ರ ಸರಿಯಾಗಿ ಕೊಡುತ್ತಿಲ್ಲ ಎಂದು ಕೇಂದ್ರದ ಮೇಲೆ ಗೂಬೆ ಕೂರಿಸಿ, ಐದು ಕೆಜಿ ಅಕ್ಕಿಯಷ್ಟು ಹಣವನ್ನು ಫಲಾನುಭವಿಗಳ ಖಾತೆಗೆ ಹಾಕುವುದಾಗಿ ಹೇಳಿದರು, ಒಂದೆರಡು ತಿಂಗಳು ಖಾತೆಗೆ ಜಮಾ ಆದ ಹಣ ಈಗ ಬಂದ್ ಆಗಿದೆಯಂತೆ. ಐದು ಕೆಜಿ ಕೇಂದ್ರದಿಂದ ಬರುತ್ತಿದೆ ! ಇವರು ನುಡಿದಂತೆ ನಡೆದರೆ ?
ಇನ್ನೊಂದು ಗ್ಯಾರಂಟಿ ಯೋಜನೆ ‘ಯುವನಿಧಿ’ ನಿರುದ್ಯೋಗಿ ಯುವಕರ ಖಾತೆಗೆ ರೂ. ೩೦೦೦ ಹಾಕುವ ಯೋಜನೆ. ಇದೂ ಕೂಡ ಒಂದು ಸಮಾರಂಭದಲ್ಲಿ ಜಾರಿಯಾಗಿದೆ. ಆದರೆ ಎಷ್ಟು ಜನರಿಗೆ ಬರುತ್ತಿದೆ ಎಂಬ ಲೆಕ್ಕವಿಲ್ಲ. ಅಷ್ಟಕ್ಕೂ ಮಾತೆತ್ತಿದರೆ ನಿರುದ್ಯೋಗ ಹೆಚ್ಚಾಗಿದೆ ಎನ್ನುವ ಕಾಂಗ್ರೆಸ್ ನಾಯಕರು ಯುವಕರಿಗೆ ತಿಂಗಳಿಗೆ ರೂ. ೩೦೦೦ ಕೊಟ್ಟರೆ ನಿರುದ್ಯೋಗ ಮಾಯವಾಗುತ್ತದೆಯೇ ಎಂಬುದನ್ನು ಅವರೇ ಹೇಳಬೇಕು. ಯಾವುದೇ ಜವಾಬ್ದಾರಿಯುತ ಸರ್ಕಾರ ಉದ್ಯೋಗ ಸೃಷ್ಟಿ ಮಾಡಬೇಕೇ ಹೊರತು ನಿರುದ್ಯೋಗಿಗಳಿಗೆ ಪುಕ್ಕಟ್ಟೆ ಹಣ ಕೊಟ್ಟು ಯುವಕರನ್ನು ಮತ್ತಷ್ಟು ಸೋಮಾರಿಗಳನ್ನಾಗಿ ಮಾಡಬಾರದು. ಇವರು ಎಷ್ಟು ತಿಂಗಳು ಈ ಹಣ ಕೊಡುತ್ತಾರೆ ? ಆ ನಂತರ ಆ ಯುವಕರು ಏನು ಮಾಡಬೇಕು ? ಎಂಬ ಪ್ರಶ್ನೆಗೆ ಉತ್ತರ ಹೇಳಿದೆಯೇ ಕಾಂಗ್ರೆಸ್ ಸರ್ಕಾರ ?
ಮದ್ಯದ ದರ ಮುಗಿಲು ಮುಟ್ಟಿದೆ, ಜಮೀನು ಖರೀದಿ ನೋಂದಣಿ ದರ ಹೆಚ್ಚಿದೆ, ಛಾಪಾ ಕಾಗದ ದರ ಹೆಚ್ಚಿದೆ, ಕರೆಂಟ್ ದರ ಹೆಚ್ಚಿದೆ, ರೈತರ ಟಿಸಿ ಖರ್ಚು ಹೆಚ್ಚಿದೆ, ಬರಗಾಲ ಬಂದಿದೆ, ಆದಾಯ ಕಡಿಮೆ- ಖರ್ಚು ಹೆಚ್ಚು…ಆದರೂ ಸರ್ಕಾರ ಹೇಳುತ್ತಿದೆ ‘ ನುಡಿದಂತೆ ನಡೆದಿದ್ದೇವೆ, ಖಜಾನೆ ತುಂಬಿದೆ ! ಒಂದು ಸರ್ಕಾರದ ವಿಷಯದಲ್ಲಿ ಜನಸಾಮಾನ್ಯರ ತಲೆ ಕೆಡಲು ಇನ್ನೇನು ಬೇಕು ?
ಅಧಿಕಾರಕ್ಕೆ ಬರುವುದಕ್ಕೆ ಪ್ರಣಾಳಿಕೆಗಳನ್ನು ನೀಡುವುದೇನೋ ಸರಿ ಆದರೆ ಒಂದು ವ್ಯವಸ್ಥೆಯನ್ನೇ ಬುಡಮೇಲು ಮಾಡುವ ಯೋಜನೆಗಳನ್ನು ಘೋಷಣೆ ಮಾಡುವುದು ಒಂದು ಜವಾಬ್ದಾರಿಯುತ ಪಕ್ಷದ ನಡೆ ಅಲ್ಲ. ಇದು ರಾಜ್ಯವಾಯಿತು. ಇನ್ನು ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ಪ್ರತಿ ಮಹಿಳೆಯರಿಗೆ ವರ್ಷಕ್ಕೆ ಒಂದು ಲಕ್ಷ ರೂ. ಅಂದರೆ ತಿಂಗಳಿಗೆ ೮೫೦೦ ಸಾವಿರ ರೂ. ಕೇಂದ್ರ ರಾಜ್ಯ ಎರಡೂ ಸೇರಿ ಹತ್ತು ಸಾವಿರ, ಮೇಲಾಗಿ ಬಸ್ ಫ್ರೀ, ಉಚಿತ ಕರೆಂಟ್……ತಗೊಳ್ಳಪ್ಪಾ… ಮಹಿಳಾ ಕಾರ್ಮಿಕರ ಆಧಾರಿತ ಸಣ್ಣ ಕೈಗಾರಿಕೆಗಳಿಗಾಗಿ ಈಗಲೇ ಗೋದ್ರೆಜ್ ಬೀಗಗಳನ್ನು ತರಿಸಿಟ್ಟುಕೊಂಡರೆ ಒಳ್ಳೆಯದು ಯಾಕೆಂದರೆ ಆಗ ಅವುಗಳ ದರವೂ ಹೆಚ್ಚಾಗಬಹುದು. ಹೊಲಗಳಲ್ಲಿ ಅರಿಷಿಣ ಕೀಳಲು, ಗೊಂಜಾಳ ಮುರಿಯಲು, ಹತ್ತಿ ಬಿಡಿಸಲು, ಕಸ ತೆಗೆಯಲು…..ಇಂಥ ಕೃಷಿ ಕಾರ್ಯಗಳಿಗೆ ಮಹಿಳೆಯರು ಯಾಕೆ ಬರುತ್ತಾರೆ ? ತಿಂಗಳಿಗೆ ಹತ್ತು ಸಾವಿರ ಸರ್ಕಾರವೇ ಕೊಡುತ್ತದಲ್ಲ ! ಕೃಷಿ ಎಕ್ಕುಟ್ಟಿ ಹೋಗಲಿ, ಸಣ್ಣ ಕೈಗಾರಿಕೆ ಮುಂಡಾ ಮೋಚಲಿ, ಸಾರಾಯಿಗೆ ಎಷ್ಟೇ ಹಣ ಹೋಗಲಿ ಆಸ್ತಿ ಮಾರಿಯಾದರೂ ಕುಡಿಯಲೇ ಬೇಕು ಇಲ್ಲದಿದ್ದರೆ ತಾತ್ಕಾಲಿಕ ನೆಮ್ಮದಿಯನ್ನೂ ಕಳೆದುಕೊಳ್ಳಬೇಕಾಗುತ್ತದೆ.
ಹೋಗಲಿ, ಈ ಸರ್ಕಾರಕ್ಕೆ ಒಂದು ವರ್ಷ. ರಾಜ್ಯದಲ್ಲಿ ಒಂದಾದರೂ ಅಭಿವೃದ್ಧಿ ಕಾರ್ಯಗಳಾದವೆ ? ಹಳ್ಳಿಯ ರಸ್ತೆಗಳು ಹದಗೆಟ್ಟು ಹೋಗಿವೆ, ಕುಡಿಯಲು ನೀರು ಸಿಗುತ್ತಿಲ್ಲ, ಬೆಂಗಳೂರಿನಂಥ ಸಿಟಿಯಲ್ಲಿ ನೀರಿನ ಟ್ಯಾಂಕರ್ ಮಾಫಿಯಾ ನಡೆಯುತ್ತಲಿದೆ, ಶಿಕ್ಷಣ ಕ್ಷೇತ್ರ ಭ್ರಷ್ಟರಿಂದ ತುಳುಕುತ್ತಿದೆ, ಫಲಿತಾಂಶ ಕೆಳಮಟ್ಟಕ್ಕೆ ಇಳಿದಿದೆ, ಅಪರಾಧ ಪ್ರಮಾಣ ಹೆಚ್ಚಾಗಿದೆ, ಮಾತೆತ್ತಿದರೆ ಜಾತಿ- ಧರ್ಮದ ಬಗ್ಗೆ ಮಾತನಾಡುತ್ತದೆ ಕಾಂಗ್ರೆಸ್ ಸರ್ಕಾರ ( ಮತ್ತೆ ತನ್ನದು ಜಾತ್ಯತೀತ ಪಕ್ಷ ಎಂದು ಹೇಳುತ್ತದೆ ! ) ಈಗಷ್ಟೇ ಮಳೆಗಾಲ ಆರಂಭವಾಗಿದೆ ಬೆಂಗಳೂರಿನ ಬಣ್ಣ ತೊಳೆದುಹೋಗಲಿದೆ !
ಇನ್ನೂ ಕಾಲ ಮಿಂಚಿಲ್ಲ ಕಾಂಗ್ರೆಸ್ ಸರ್ಕಾರ ಇನ್ನಾದರೂ ತನ್ನ ನೀತಿಗಳನ್ನು ಬದಲಿಸಿಕೊಳ್ಳಲಿ. ಅತ್ಯಂತ ಹಳೆಯದಾದ ಒಂದು ಪಕ್ಷ ಅಧಿಕಾರಕ್ಕೆ ಬರಲು ಜನರನ್ನು ಸೋಮಾರಿಗಳನ್ನಾಗಿ ಮಾಡುವ, ರಾಜ್ಯ-ದೇಶವನ್ನು ದಿವಾಳಿಯಂಚಿಗೆ ತಂದು ನಿಲ್ಲಿಸುವ ಯೋಜನೆಗಳನ್ನು ಘೋಷಿಸುವುದು ಮೂರ್ಖತನದ ಪರಮಾವಧಿ.
ಕಾಂಗ್ರೆಸ್ಸಿಗರೇ, ನೀವೇನು ನುಡಿದಂತೆ ನಡೆದಿಲ್ಲ ಆದರೆ ಈ ಯೋಜನೆಗಳಿಂದ ರಾಜ್ಯದ ಅಭಿವೃದ್ಧಿ ಕಾರ್ಯ ಸ್ಥಗಿತಗೊಳ್ಳಬಾರದು ಇನ್ನಾದರೂ ವಿವೇಚನೆಯಿಂದ ವರ್ತಿಸಿ, ರಾಜ್ಯ ಹಾಳಾಗುವ ಮುಂಚೆಯೇ ರಕ್ಷಿಸಿ. ಯಾಕೆಂದರೆ ಇಂಥ ಪುಕ್ಕಟ್ಟೆ ಯೋಜನೆ ಘೋಷಿಸಿದ ಯಾವುದೇ ರಾಜ್ಯವಾಗಲಿ, ದೇಶವಾಗಲಿ ಸುಭಿಕ್ಷವಾಗಿಲ್ಲ. ಇದಕ್ಕೆ ಸಾಕಷ್ಟು ಉದಾಹರಣೆಗಳಿವೆ ಅವುಗಳನ್ನು ನೋಡಿ ಕಲಿಯಿರಿ, ಜವಾಬ್ದಾರಿಯಿಂದ ವರ್ತಿಸಿ. ಇದು ನನ್ನೊಬ್ಬನ ಅಳಲಲ್ಲ ನನ್ನಂಥ ಕೋಟ್ಯಂತರ ಪ್ರಜೆಗಳ ಅಳಲು.
ಉಮೇಶ ಬೆಳಕೂಡ, ಮೂಡಲಗಿ