ಎಲ್ಲರಿಗೂ ವಿಶ್ವ ಆರೋಗ್ಯ ದಿನದ ಶುಭಾಶಯಗಳು
ಆತ್ಮೀಯರೇ, ಪ್ರತಿವರ್ಷ ಏಪ್ರಿಲ್ 7ರಂದು ಪ್ರಪಂಚದಾದ್ಯಂತ ವಿಶ್ವ ಆರೋಗ್ಯ ದಿನವನ್ನು ಆಚರಿಸಲಾಗುತ್ತದೆ.
ಮೊದಲಿಗೆ ಏಪ್ರಿಲ್ 7, 1950 ರಲ್ಲಿ ವಿಶ್ವ ಆರೋಗ್ಯ ದಿನವನ್ನು ಆಚರಿಸಲಾಯಿತು. ಆರೋಗ್ಯದ ಬಗ್ಗೆ ಕಾಳಜಿ ಮತ್ತು ಅದರ ಬಗ್ಗೆ ಅರಿವು ಮೂಡಿಸಲು ವಿವಿಧ ಕಾರ್ಯಕ್ರಮಗಳನ್ನು ಏರ್ಪಡಿಸಿ ಜಾಗೃತಿ ಮೂಡಿಸುವುದು ಇದರ ಮುಖ್ಯ ಉದ್ದೇಶವಾಗಿದೆ. ನೀವೂ ಸಹ ಆರೋಗ್ಯದ ಬಗ್ಗೆ ಅರಿವು ಮೂಡಿಸಿ ಹಾಗೂ ವಿಶ್ವ ಆರೋಗ್ಯ ದಿನದ ಶುಭಾಶಯಗಳನ್ನು ಕೋರಿ.
ಈ ಹಿನ್ನೆಲೆಯಲ್ಲಿ ನಾನು ಸಹ ಶಾಲಾ ಶಿಕ್ಷಕರ ಹಾಗುಮಕ್ಕಳ ತಿಳುವಳಿಕೆಗಾಗಿ ಸರಳ ಪ್ರಬಂಧವನ್ನು ರಚಿಸುವ ಪ್ರಯತ್ನ ಮಾಡಿದ್ದೇನೆ.
ಆರೋಗ್ಯ ಎನ್ನುವುದು ಪ್ರತಿಯೊಂದು ಜೀವಿಗೂ ಅವಶ್ಯ.
ಜೀವಿ ಆರೋಗ್ಯದಿಂದಿದ್ದಾಗ ಮಾತ್ರ ಉತ್ಸಾಹದಿಂದ ಇರಲು ಸಾಧ್ಯ. ಆರೋಗ್ಯಕರ ಸಮಾಜದ ನಿರ್ಮಾಣಕ್ಕಾಗಿ ಪ್ರತಿಯೊಬ್ಬ ನಾಗರಿಕನೂ ಆರೋಗ್ಯದ ತಿಳುವಳಿಕೆಯನ್ನು ಹೊಂದಿರುವುದು ಅತ್ಯವಶ್ಯಕವಾಗಿದೆ.
ಆರೋಗ್ಯ ಶಿಕ್ಷಣವು ಶೈಕ್ಷಣಿಕವಾದಂತಹ ಮಹತ್ವವನ್ನು ಪಡೆದಿದೆ.
ಆರೋಗ್ಯ ಎಂದರೇನು?
ಆರೋಗ್ಯ ಎಂದರೇನು ಎಂದು ತಿಳಿಯಲು ಈ ಕೆಳಗಿನ ವಾಖ್ಯೆಗಳನ್ನು ಅರ್ಥಮಾಡಿಕೊಳ್ಳೋಣ:
ಆಂಗ್ಲ ಪದದ ಪ್ರಕಾರ “ಸುರಕ್ಷತೆ ಮತ್ತು ಸ್ವಸ್ಥಸ್ಥಿತಿಯಲ್ಲಿ ಇರುವುದೇ ಆರೋಗ್ಯ”.
ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ* “ಕೇವಲ ರೋಗರುಜಿನಗಳ ಅನುಪಸ್ಥಿತಿಯಾಗಿರದೇ ಸಾಮಾಜಿಕ, ಮಾನಸಿಕ, ದೈಹಿಕ ಪರಿಪೂರ್ಣತೆಯೇ ಆರೋಗ್ಯ”
ಈ ಮೇಲಿನ ಮಾತುಗಳನ್ನು ಗಮನಿಸಿದಾಗ “ಉತ್ತಮ ದೈಹಿಕ ಸಾಮರ್ಥ್ಯ ಅಲ್ಲದೆ ಮಾನಸಿಕ ಸಮತೋಲನವನ್ನು ಅಗತ್ಯ ಪ್ರಮಾಣದಲ್ಲಿ ಕಾಯ್ದುಕೊಳ್ಳುವುದೇ ಆರೋಗ್ಯ”ಎಂದು ಅರ್ಥೈಸಿಕೊಳ್ಳಬಹುದಾಗಿದೆ.
ಆರೋಗ್ಯವೇ ಭಾಗ್ಯ
ಆರೋಗ್ಯವೇ ಮಹಾಭಾಗ್ಯ ಎಂದು ದೊಡ್ಡವರು ಹೇಳುತ್ತಾರೆ. ಆದುದರಿಂದ ನಾವು ಆರೋಗ್ಯವನ್ನು ಕಾಪಾಡಿಕೊಳ್ಳಲು ಆರೋಗ್ಯದ ಮಹತ್ವಗಳನ್ನು ತಿಳಿಯಬೇಕಾಗಿದೆ.
- ವಯಸ್ಸಿಗೆ ಅನುಗುಣವಾಗಿ ಅಂಗಗಳ ಬೆಳವಣಿಗೆ ಸಾಧ್ಯ.
- ಉತ್ತಮ ಕಾರ್ಯ ನಿರ್ವಹಣೆ ಸಾಧ್ಯ. ರೋಗ ನಿರೋಧಕ ಶಕ್ತಿ ವೃದ್ದಿ.
- 4 ದೈನಂದಿನ ಕೆಲಸ ಕಾರ್ಯಗಳನ್ನು ಸಾಧನೆ ಮಾಡಲು ಸಾಧ್ಯ.
- ದೈಹಿಕ ನ್ಯೂನತೆ ಮತ್ತು ಅಂಗವಿಕಲತೆಯನ್ನು ದೂರವಿಟ್ಟು ದೇಹದ ಉತ್ತಮ ನಿಲುವನ್ನು ಹೊಂದಲು ಸಾಧ್ಯ. 6.ಸರ್ವಾಂಗೀಣ ಅಭಿವೃದ್ಧಿ ಹೊಂದಿ ಉತ್ತಮ ನಾಗರಿಕರಾಗಲು ಸಾಧ್ಯ.
ಆರೋಗ್ಯವಂತ ಪ್ರಜೆ ದೇಶದ ಆಸ್ತಿ ಇದ್ದಂತೆ.
“ದೇಶದ ಆರೋಗ್ಯವಂತ ಪ್ರಜೆ ದೇಶದ ಆಸ್ತಿಯಿದ್ದಂತೆ” ಈ ಹಿನ್ನಲೆಯಲ್ಲಿ ವೈಯಕ್ತಿಕ ಆರೋಗ್ಯ ಮತ್ತು ಸ್ವಚ್ಚತೆ ಹೊಂದಿರುವಂತಹ ವ್ಯಕ್ತಿಗಳು ದೇಶದ ಆಸ್ತಿ.
ಹಾಗಾಗಿ ವೈಯಕ್ತಿಕ ಆರೋಗ್ಯ ಮತ್ತು ಸ್ವಚ್ಚತೆ ಬಗ್ಗೆ ತಿಳಿಯೋಣ.
ವೈಯಕ್ತಿಕ ಎಂದರೆ ಸ್ವತಃ ಅಥವಾ ಒಬ್ಬನಿಗೆ ಸಂಬಂಧಿಸಿದ ಎಂದು ಅರ್ಥ.
ವೈಯಕ್ತಿಕ ಸ್ವಚ್ಛತೆಯ ಮೂಲಕ ವೈಯಕ್ತಿಕ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯ. ಸ್ವಚ್ಛತೆ ಮತ್ತು ಆರೋಗ್ಯ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ.
ವೈಯಕ್ತಿಕ ಸ್ವಚ್ಚತೆ ಎಂದರೇನು?
ವ್ಯಕ್ತಿಯು ಸ್ವತಃ ತಾನೇ ಮಾಡಿಕೊಳ್ಳಬಹುದಾದ ಸ್ವಚ್ಚತೆಯನ್ನು ವೈಯಕ್ತಿಕ ಸ್ವಚ್ಛತೆ ಎನ್ನಬಹುದು.
“ಆರೋಗ್ಯವಂತ ಶರೀರದಲ್ಲಿ ಆರೋಗ್ಯಯುತ ಮನಸ್ಸು ಇರುತ್ತದೆ.”
ಎಂದು ದೊಡ್ಡವರು ಹೇಳುತ್ತಾರೆ. ಹಾಗಾಗಿ ವಿದ್ಯಾರ್ಥಿಗಳಾದ ನಾವು ಉತ್ತಮ ಆರೋಗ್ಯವನ್ನು ಹೊಂದಲು ಈ ಕೆಳಗಿನ ನಿಯಮಗಳನ್ನು ಪಾಲನೆ ಮಾಡಬೇಕು.
- ಉಗುರುಗಳ ಪಾಲನೆ
- ಹಲ್ಲುಗಳ ಪಾಲನೆ
- ಚರ್ಮದ ಪಾಲನೆ
- ಕಣ್ಣುಗಳ ಪಾಲನೆ
- ಮೂಗಿನ ಪಾಲನೆ ಮತ್ತು
- ಕಿವಿಗಳ ಪಾಲನೆ
1. ಉಗುರುಗಳ ಪಾಲನೆ:
ಉಗುರುಗಳು ಬೆರಳು ಕೊನೆಯ ಭಾಗವಾಗಿದ್ದು ಇವುಗಳ ಸಂದುಗಳಲ್ಲಿ ಕಲ್ಮಶ ಸಂಗ್ರಹವಾಗುವ ಸಾಧ್ಯತೆಗಳು ಹೆಚ್ಚು.ಈ ಕಲ್ಮಶವು ಆಹಾರದ ಮೂಲಕ ದೇಹವನ್ನು ಸೇರಿದರೆ ವ್ಯಕ್ತಿಯ ಅನಾರೋಗ್ಯಕ್ಕೆ ಕಾರಣವಾಗುತ್ತದೆ.ಅಲ್ಲದೆ ಊರುಗಳು ಯಾರಿಗಾದರು ತಗುಲಿದರೆ ಗಾಯವನ್ನು ಉಂಟುಮಾಡುತ್ತದೆ.
2. ಹಲ್ಲುಗಳ ಪಾಲನೆ:
ಆರೋಗ್ಯಪೂರ್ಣ ಹಲ್ಲುಗಳು ನಮ್ಮ ವೈಯಕ್ತಿಕ ಸಂಪತ್ತು ಇದ್ದಂತೆ. ಶಬ್ದಗಳ ಸ್ಪಷ್ಟ ಉಚ್ಚಾರಣೆಗೆ ಮತ್ತು ಆಹಾರವನ್ನು ಅಗಿದು ಜೀರ್ಣಕ್ರಿಯೆಗೆ ಸಹಾಯ ಮಾಡಲು ಇದು ಅತ್ಯವಶ್ಯ.
‘ಕ್ಯಾಲ್ಸಿಯಂ‘ ಅಥವಾ ವಿಟಮಿನ್ ಸಿ’ ಅಂಶಗಳನ್ನು ಒಳಗೊಂಡ ಆಹಾರ ಪದಾರ್ಥಗಳ ನಿಯಮಿತ ಸೇವನೆ ಹಾಗೂ ಸ್ವಚ್ಛತೆಯಿಂದ ಉತ್ತಮ ಗುಣಗಳನ್ನು ಹೊಂದಲು ಸಾಧ್ಯ.
3. ಚರ್ಮದ ಪಾಲನೆ:
ಚರ್ಮವು ನಮಗೆ ಸ್ಪರ್ಶ ಜ್ಞಾನ ನೀಡುವ ಜ್ಞಾನೇಂದ್ರಿಯವಾಗಿದ್ದು ಇದು ದೇಹದ ಆಂತರಿಕ ಅಂಗಾಂಗಗಳನ್ನು ರಕ್ಷಿಸುತ್ತದೆ. ಹಾಗೂ ದೇಹದಲ್ಲಿನ ನಿರುಪಯುಕ್ತ ದ್ರವವನ್ನು ಬೆವರಿನ ಮೂಲಕ ಹೊರ ಹಾಕುತ್ತದೆ ಆರೋಗ್ಯವಂತ, ಹೊಳಪಾದ ಚರ್ಮವು ವ್ಯಕ್ತಿಯ ಸೌಂದರ್ಯವನ್ನು ಹೆಚ್ಚಿಸುತ್ತದೆ.
ವಾತಾವರಣದಲ್ಲಿನ ಧೂಳಿನ ಕಣಗಳು, ರೋಗಾಣುಗಳು, ಕ್ರಿಮಿಕೀಟಗಳಿಂದ ಚರ್ಮದ ಮೇಲೆ ಆಘಾತವಾಗಿ ವ್ಯಕ್ತಿಯ ಆರೋಗ್ಯ ಹದಗೆಡುವ ಸಾಧ್ಯತೆ ಇರುತ್ತದೆ. ಅದ್ದರಿಂದ ಚರ್ಮದ ಸ್ವಚ್ಚತೆ,ರಕ್ಷಣೆ ನಮ್ಮ ಆದ್ಯ ಕರ್ತವ್ಯವಾಗಿದೆ. ಸೂರ್ಯನ ಬೆಳಕಿನ ಕಿರಣಗಳಲ್ಲಿರುವ ‘ವಿಟಮಿನ್ ಡಿ‘ ಇದು ಚರ್ಮದ ಆರೋಗ್ಯಕ್ಕೆ ಅತ್ಯುತ್ತಮವಾದುದಾಗಿದೆ. ಚರ್ಮದ ಕಾಂತಿಗೆ ನಿಂಬೆ ರಸ ಮತ್ತು ‘ವಿಟಮಿನ್ ಎ‘ ಯನ್ನು ಒಳಗೊಂಡ ಸ್ವಾಭಾವಿಕ ಅವಶ್ಯವಾದ ದ್ದಾಗಿದೆ.
4. ಕಲ್ಲುಗಳ ಪಾಲನೆ
ಇದು ನೋಡುವ ಜ್ಞಾನೇಂದ್ರಿಯ. ಇದು ನೈಸರ್ಗಿಕ ಸೌಂದರ್ಯ ಹಾಗೂ ಜಗತ್ತನ್ನು ಕಾಣಲು ಅತ್ಯವಶ್ಯ. ಇದು ಬಾಹ್ಯ ಪರಿಸರದ ದೃಶ್ಯ ಮಾಹಿತಿಗಳನ್ನು ಪಡೆಯುವ ಸಾಧನವಾಗಿದೆ. ದೃಷ್ಟಿ ಇಲ್ಲದ ಜೀವನ ಊಹಿಸಿಕೊಳ್ಳಲು ಅಸಾಧ್ಯ. ಇಂತಹ ಕಣ್ಣನ್ನು ಸೋಂಕು ಹಾಗೂ ಗಾಯಗಳಿಂದ ರಚಿಸಿಕೊಳ್ಳಲು ಮತ್ತು ದೃಷ್ಟಿ ಸಾಮರ್ಥ್ಯವನ್ನು ಉಳಿಸಿಕೊಳ್ಳಲು ಸಾಧ್ಯವಿರುವ ಎಲ್ಲ ಕಾಳಜಿಗಳನ್ನು ವಹಿಸುವುದು ಅತ್ಯಗತ್ಯ. ‘ವಿಟಮಿನ್ ಎ‘ ಹೊಂದಿರುವ ಆಹಾರಪದಾರ್ಥಗಳು ನಿಯಮಿತವಾದ ಸೇವನೆಯಿಂದ ದೃಷ್ಟಿ ಸಾಮರ್ಥ್ಯವನ್ನು ಕಾಪಾಡಿಕೊಳ್ಳಲು ಸಹಾಯವಾಗುವುದು.
ಅಲ್ಲದೆ ಬೆಟ್ಟದ ನಲ್ಲಿಕಾಯಿಯೂ ಸಹ ದೃಷ್ಟಿ ಸಾಮರ್ಥ್ಯಗಳ ವೃದ್ಧಿಗೆ ಸಹಕಾರಿ.
5. ಮೂಗಿನ ಪಾಲನೆ
ಮೂಗು ವಾಸನೆಯನ್ನು ಗ್ರಹಿಸುವ ಜ್ಞಾನೇಂದ್ರಿಯವಾಗಿದ್ದು ಉಸಿರಾಟ ಕ್ರಿಯೆ ಪ್ರವೇಶ ದ್ವಾರವಾಗಿದೆ. ಅಲ್ಲದೆ ಮುಖದ ಸೌಂದರ್ಯಕ್ಕೆ ಕಿರೀಟವಿದ್ದಂತೆ.
ಮೂಗಿನ ಮೂಲಕ ಉಸಿರಾಡುವಾಗ ವಾತಾವರಣದಲ್ಲಿನ ಧೂಳಿನ ಕಣಗಳು ರೋಗಾಣುಗಳನ್ನು ಮೂಗಿನ ಒಳಭಾಗ ದಲ್ಲಿರುವ ಸೂಕ್ಷ್ಮ ರೋಮಗಳು ತಡೆದು ಶುದ್ಧ ಗಾಳಿಯನ್ನು ಒಳಗೆ ಸೇರಲು ಸಹಾಯ ಮಾಡುತ್ತದೆ. ಕೆಲವೊಮ್ಮೆ ಮೂಗಿನ ತೊಂದರೆ ಉಂಟಾದಾಗ ಬಾಯಿಯ ಮೂಲಕ ಉಸಿರಾಡುತ್ತೇವೆ.ಆಗ ವಾತಾವರಣದಲ್ಲಿನ ಕಲ್ಮಶಗಳು ನಮ್ಮ ದೇಹವನ್ನು ಪ್ರವೇಶಿಸಿ ಅನೇಕ ಕಾಯಿಲೆಗಳನ್ನು ಉಂಟು ಮಾಡುತ್ತವೆ. ಆದ್ದರಿಂದ ಶುದ್ಧ ಗಾಳಿಯನ್ನು ದೇಹಕ್ಕೆ ಒದಗಿಸಲು ಸಹಾಯಮಾಡುವ ಮೂಗನ್ನು ಕಾಪಾಡಿಕೊಳ್ಳುವುದು ನಮ್ಮೆಲ್ಲರ ಮುಖ್ಯ ಕರ್ತವ್ಯವಾಗಿದೆ.
6. ಕಿವಿಗಳ ಪಾಲನೆ:
ಕಿವಿಯು ಶಬ್ದವನ್ನು ಗ್ರಹಿಸುವ ಜ್ಞಾನೇಂದ್ರಿಯ ವಾಗಿದೆ. ಇದು ಅತ್ಯಂತ ಸೂಕ್ಷ್ಮ ಅಂಗವಾಗಿರುವುದರಿಂದ ಬೇಗನೆ ಸೋಂಕು ತಗಲುವ ಸಾಧ್ಯತೆ ಹೆಚ್ಚು.ಇದರಿಂದ ಕಿವಿ ಸೋರುವಿಕೆ ಹಾಗೂ ಕಿವುಡುತನ ಬರಬಹುದು. ಚಿಕ್ಕ ಮಕ್ಕಳಲ್ಲಿ ಈ ಸೋಂಕು ಬಹುಬೇಗನೆ ವ್ಯಾಪಿಸುತ್ತವೆ. ಕಿವಿಯೂ ನಿಯಮಿತ ಸ್ವಚ್ಚತೆ ಮತ್ತು ಕರ್ಕಶ ಶಬ್ದಗಳಿಂದ ದೂರ ಇರುವುದರಿಂದ ಕಿವಿಯ ಸಂಬಂಧ ರೋಗಿಗಳನ್ನು ತಡೆಯಲು ಸಾಧ್ಯ.
ಉತ್ತಮ ಆರೋಗ್ಯವನ್ನು ಹೊಂದಲು ಈ ಕೆಳಗಿನವುಗಳನ್ನು ಪಾಲಿಸುವುದು ಅವಶ್ಯಕವಾಗಿದೆ. ಜೊತೆಗೆ ದೇಶದಲ್ಲಿ ಕೊರೋನ-19 ಬಾಧಿಸಿತ್ತಿದ್ದು ನಾವೆಲ್ಲರು ಅದರ ಪಲಾನುಭವಿಗಳಾಗಿದ್ದೇವೆ.ಕರೋನಾ ಮಹಾ ಮಾರಿಯಿಂದ ರಕ್ಷಿಸಿ ಕೊಳ್ಳಲು
- ನಾವು ಕಡ್ಡಾಯವಾಗಿ ಮನೆಯಲ್ಲಿಯೇ ಹೆಚ್ಚು ಕಾಲ ಕಳೆಯಬೇಕು.
- ಅವಶ್ಯಕತೆ ಇದ್ದರೆ ಮಾತ್ರ ಹೊರ ಹೋಗಬೇಕು.
- ಸಾಮಾಜಿಕ ಅಂತರವನ್ನು ಕಡ್ಡಾಯವಾಗಿ ಪಾಲಿಸಬೇಕು.
- ಮಾಸ್ಕ್ ಕಡ್ಡಾಯವಾಗಿ ಧರಿಸಬೇಕು.
- ಸ್ಯಾನಿಟೇಷರ್ ನಿಂದ ಆಗಾಗ ಕೈಗಳನ್ನು ತೊಳೆಯಬೇಕು.
- ಸರ್ಕಾರ ನಿಗಧಿ ಪಡಿಸಿರುವ ನಿಯಮಗಳನ್ನು ಚಾಚು ತಪ್ಪದೇ ಪಾಲಿಸಬೇಕು.
- ಹತ್ತಿರದ ಆಸ್ಪತ್ರೆಗಳಿಗೆ ಬೇಟಿ ಕೊಟ್ಟು ಕರೋನಾ ವಾಕ್ಸಿನ್ ನ್ನು ತಪ್ಪದೇ ಹಾಕಿಸಿಕೊಳ್ಳಬೇಕು.
ಇತರೆ ಸಲಹೆಗಳನ್ನೂ ಪಾಲಿಸಿ
- ಕಣ್ಣಿನ ಆರೋಗ್ಯದ ದೃಷ್ಟಿಯಿಂದ ಕನಿಷ್ಠ ಹತ್ತು ಅಡಿ ದೂರದಿಂದ ದೂರದರ್ಶನ ವೀಕ್ಷಣೆ ಮಾಡಬೇಕು.
- ಸುತ್ತಲಿರುವ ಪರಿಸರ ಸ್ವಚ್ಛತೆ ಇದ್ದಲ್ಲಿ ಆರೋಗ್ಯ ಇರುತ್ತದೆ.
- ‘ವಿಟಮಿನ್ ಡಿ’* ಚರ್ಮದ ಆರೋಗ್ಯಕ್ಕೆ ಉತ್ತಮವಾದುದಾಗಿದೆ.
- ವಾರಕ್ಕೆ ಒಮ್ಮೆಯಾದರೂ ಉಗುರು ಕತ್ತರಿಸುವ ಸಾಧನ ದಿಂದ ಉಗುರನ್ನು ಕತ್ತರಿಸ ಬೇಕು.
- ಪ್ರತಿದಿನ ಎರಡು ಬಾರಿಯಾದರೂ ಹಲ್ಲುಗಳನ್ನು ಉಜ್ಜಬೇಕು
ಉತ್ತಮ ದೃಷ್ಟಿಗಾಗಿ ವಿಟಮಿನ್ ಎ’ ಹೊಂದಿರುವ ಆಹಾರ ಪದಾರ್ಥಗಳನ್ನು ಸೇವಿಸಬೇಕು. - ಬಳಪ, ಪಿನ್ ಇನ್ಯಾವುದೇ ವಸ್ತುಗಳನ್ನು ಮೂಗು ಮತ್ತು ಕಿವಿಗಳಲ್ಲಿ ಹಾಕಬಾರದು.
ಸಂಗ್ರಹ: ಎಮ್ ವೈ ಮೆಣಸಿನಕಾಯಿ
ಬೆಳಗಾವಿ