ರಕ್ಷಾಬಂಧನದ ಶುಭಾಶಯಗಳು

Must Read

ಕುಡಿಯುವ ನೀರು ವ್ಯತ್ಯಯ ಆಗದಂತೆ ನೋಡಿಕೊಳ್ಳುವ ಭರವಸೆ ನೀಡಿದ ರುದ್ರೇಶ ಘಾಳೆ

ಬೆಳಗಾವಿ - ಕಾರ್ಮಿಕರು ತಮ್ಮ ಬೇಡಿಕೆಗಳನ್ನು ಈಡೇರಿಸಲು ನಡೆಸಿದ ಮುಷ್ಕರದಿಂದಾಗಿ ಬೆಳಗಾವಿ ಜನತೆಗೆ ಕುಡಿಯುವ ನೀರಿನ ವ್ಯವಸ್ಥೆಯಲ್ಲಿ ತೊಂದರೆ ಉಂಟಾಗಿದ್ದು ವಿಷಾದನೀಯವಾಗಿದೆ ವ್ಯವಸ್ಥೆಯನ್ನು ಸಂಪೂರ್ಣವಾಗಿ ಸರಿ...

ಹೆಣ್ಣು ಮಕ್ಕಳು ಪೌಷ್ಠಿಕ ಆಹಾರ ಸೇವನೆ ಮಾಡಬೇಕು – ಡಾ.ನಯನಾ ಭಸ್ಮೇ

ಸವದತ್ತಿ - “ಹೆಣ್ಣು ಮಕ್ಕಳು ಮಾನಸಿಕವಾಗಿ ಹಾಗೂ ದೈಹಿಕವಾಗಿಯೂ ಸದೃಢವಾಗಿರಬೇಕು ಅವರು ಹದಿ ಹರೆಯದ ವಯಸ್ಸಿಗೆ ಬಂದಾಗ ಅವರಲ್ಲಿ ನೈಸರ್ಗಿಕವಾದ ಬದಲಾವಣೆಗಳು ಆಗುತ್ತವೆ ಅಂತಹ ಸಂದರ್ಭದಲ್ಲಿಯೂ...

ಪ್ರೊ.ಅಲಕಾ ಕುರಣೆ ಯವರಿಗೆ ‘ ಶಿಕ್ಷಕ ಶ್ರೀ ‘ ರಾಜ್ಯ ಮಟ್ಟದ ಪ್ರಶಸ್ತಿ

ಬೆಳಗಾವಿ: ಅಕ್ಷರ ದೀಪ ಸಾಹಿತ್ಯ ಮತ್ತು ಸಾಂಸ್ಕೃತಿಕ ಕಲಾ ವೇದಿಕೆ, ಧಾರವಾಡ ಬೆಂಗಳೂರು ಘಟಕದಿಂದ ನೀಡಲಾಗುವ ರಾಜ್ಯ ಮಟ್ಟದ ಶಿಕ್ಷಕ ಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಬೆಳಗಾವಿಯ...

ಸ್ವಾಮಿ ವಿವೇಕಾನಂದರು ಅಮೇರಿಕಾದ ಭಾಷಣವನ್ನು ಪ್ರಾರಂಭ ಮಾಡಿದ್ದೇ “ನನ್ನಪ್ರೀತಿಯ ಸಹೋದರ ಸಹೋದರಿಯರೆ “ಎಂದು. ಅದೀಗಲೂ ಪ್ರಸಿದ್ದವಾಗಿದೆ ಎಂದರೆ ಭಾರತೀಯತೆ ಅಡಗಿರುವುದೆ ಈ ದೊಡ್ಡ ಸಂಬಂಧದಲ್ಲಿ.

ಈಗಿನ ಸ್ಥಿತಿಯಲ್ಲಿ ಯಾರೇ ಒಂದು ವಿಚಾರ ತಿಳಿಸಿದರೂ ಅವರ ಜಾತಿ, ಧರ್ಮ, ತತ್ವ,ಪಂಗಡ, ಸಂಘ, ಕುಲ ಗೋತ್ರ, ಹೆಸರು,‌ ಹಣ, ಅಧಿಕಾರವನ್ನಳೆದು ತೂಗಿ ಬೇಕೋ ಬೇಡವೋ ಎಂದು ತೀರ್ಮಾನ ಮಾಡುವಷ್ಟು ಸಂಕುಚಿತ ಸ್ವಭಾವ ನಮ್ಮಲ್ಲಿದೆ.

ಹೀಗಾಗಿ ಸಂಬಂಧಗಳೂ ಇದರ ಆಧಾರದ ಮೇಲೆ ಬೆಳೆಸಿಕೊಂಡು ತಾತ್ಕಾಲಿಕತೆಯ ಅಂತ್ಯವಾಗುತ್ತಿದೆ. ಯಾಕೆ ಹೀಗೆ? ಹಿಂದಿನ ಪವಿತ್ರತೆ ಇಂದು ಮಾನವನಿಗೆ ಯಾಕೆ ಬರುತ್ತಿಲ್ಲವೆಂದರೆ, ನಾವು ನಮ್ಮ ಮಕ್ಕಳಿಗೆ ಮಹಿಳೆಯರಿಗೆ ಒಂದು ಸಣ್ಣ ಚೌಕಟ್ಟಿನಲ್ಲಿ ಇಟ್ಟು ಸ್ವಾರ್ಥ ದ ಜೀವನಕ್ಕೆ  ಒಗ್ಗಿಕೊಂಡಿರುವುದು. ಅತಿಯಾದ ಸ್ವಾರ್ಥವೂ ಉತ್ತಮವಲ್ಲ.

- Advertisement -

ನಿಸ್ವಾರ್ಥವೂ ಒಳ್ಳೆಯದಲ್ಲ.ಕಾಲ ಹಾಗಿದೆ. ದೇಶದ ಪ್ರಶ್ನೆ ಬಂದಾಗ ದೇಶದೊಳಗೆ ಇರುವ ನಮ್ಮವರನ್ನೇ ಸಹೋದರ ಸಹೋದರಿ ಭಾವನೆಯಲ್ಲಿ ನೋಡಲಾಗದ ಅಜ್ಞಾನದಿಂದ ಜೀವನದಲ್ಲಿ ಸಾಕಷ್ಟು ಸಮಸ್ಯೆಗಳನ್ನು ಮೈ ಮೇಲೆಳೆದುಕೊಂಡರೆ ಇದಕ್ಕೆ ಪರಿಹಾರ ಹೊರಗಿರೋದಿಲ್ಲ.ಒಳಗಿರುವ ಸಂಬಂಧಗಳು ಗಟ್ಟಿಯಾಗಿರಬೇಕಾದರೆ ಹೊರಗಿನವರ ಸಹಕಾರವೂ ಇರುತ್ತದೆ.

ಹೀಗಾಗಿ ಇಬ್ಬರ ಸಂಬಂಧವೂ ಸಾತ್ವಿಕವಾಗಿದ್ದರೆ ಮಾತ್ರ ರಕ್ಷಾಬಂಧನಕ್ಕೆ ಅರ್ಥ ವಿದೆ. ದೇಶವಾಳೋರಷ್ಟೇ ಜನಸಾಮಾನ್ಯರನ್ನು ರಕ್ಷಣೆ ಮಾಡಬೇಕೆಂಬುದು ರಾಜಕೀಯವಾಗುತ್ತದೆ.ಅವರವರ ಸುತ್ತಮುತ್ತಲಿನ ,ಸಮಾಜದ ರಕ್ಷಣೆಗೆ ನಮ್ಮಲ್ಲಿ ಉತ್ತಮ ಜ್ಞಾನವಿರಬೇಕು. ವ್ಯವಹಾರದಿಂದ ಸಂಬಂಧ ಹಾಳು.

ರಕ್ಷಾಬಂಧನ ಭಾರತೀಯರ ಸಹೋದರ,ಸಹೋದರಿಯರ ಪವಿತ್ರ ಸಂಬಂಧವನ್ನು ಸೂಚಿಸುವ ಹಬ್ಬವಾಗಿದೆ. ರಕ್ಷಣೆ ಯಾರಿಗೆ ಬೇಡ? ಅದರಲ್ಲಿಯೂ ಸ್ತ್ರೀ ಕುಲದ ರಕ್ಷಣೆ ಭೂಮಿಯಲ್ಲಿ ಯಾರು ಮಾಡುವರೋ‌ ಅವರೆ ನಿಜವಾದ ಮಾನವರು.‌ ಭೂಮಿ ಮೇಲಿರುವ ಎಲ್ಲಾ ಸ್ತ್ರೀಶಕ್ತಿಯೊಳಗಿರುವ ಆ ಭೂ ತಾಯಿಯನ್ನು ಗೌರವದಿಂದ, ಪ್ರೀತಿ, ವಿಶ್ವಾಸದಿಂದ ಕಂಡಷ್ಟೂ ಪುರುಷರ ಜ್ಞಾನಶಕ್ತಿ ಹೆಚ್ಚುತ್ತದೆ.

ಇದನ್ನು ನಾವು ಪುರಾಣ ಕಥೆಗಳಲ್ಲಿಯೂ ಕಾಣುತ್ತೇವೆ. ಯಾವ ಪುರುಷ ಸ್ತ್ರೀ ಯನ್ನು ದುರ್ಬಳಕೆ ಮಾಡಿಕೊಂಡನೋ ಅವನ ವಿನಾಶವಾಗಿದೆ. ಸಂಬಂಧಗಳಲ್ಲಿ ಪ್ರಮುಖವಾಗಿರುವ‌ ಸಹೋದರ, ಸಹೋದರಿ, ಗೆಳತಿ, ಗೆಳೆಯರಲ್ಲಿ ನಿಷ್ಕಲ್ಮಶ ಪ್ರೀತಿ,ಗೌರವ,ವಿಶ್ವಾಸದಿಂದ ಕಾಣುವ ಹಿಂದೂ ಧರ್ಮ ಇಂದು ಸಂಸಾರದಲ್ಲಿ ನಾವಿಬ್ಬರು ನಮಗೊಬ್ಬರು ಎನ್ನುವ ಸ್ಥಿತಿಗೆ ಬಂದಿದೆ. ನಾವಿಬ್ಬರು ನಮಗಿಬ್ಬರಿದ್ದರೂ ಭೌತಿಕಾಸಕ್ತಿ ಹೆಚ್ಚಾಗುತ್ತಿದ್ದಂತೆ ಕೆಲವೆಡೆ ನಾನೊಬ್ಬನೆ ಇದ್ದಿದ್ದರೆ? ಎಂದು ಚಿಂತನೆ ನಡೆಸುವಷ್ಟು ಮನಸ್ಸು ಕೆಟ್ಟುಹೋಗಿದೆ.

ಆದರೂ, ಮೊದಲಿನಿಂದಲೂ ಈ ಹಬ್ಬ ಹರಿದಿನಗಳು, ಶಾಸ್ತ್ರ, ಪುರಾಣಗಳನ್ನು ಬೆಳೆಸಿಕೊಂಡು ಬಂದಂತಹ ಸಂಸಾರದಲ್ಲಿ ತ ಮಕ್ಕಳನ್ನೂ ಸಹೋದರ ಸಹೋದರಿಯರಂತೆ ಕಾಣುವ
ಸಂಸ್ಕಾರವಂತರಿದ್ದಾರೆ. ಹೀಗಾಗಿ ಇಂದಿಗೂ ಈ ರಕ್ಷಾಬಂಧನ ನಡೆದಿದೆ.‌ ಯಾವುದೇ ಆಚರಣೆಯಾದರೂ ಅದರಲ್ಲಿ ಸಾತ್ವಿಕ ಬಾವನೆ ಇದ್ದರೆ ಮಾತ್ರ ‌ಆತ್ಮಶಕ್ತಿ ಹೆಚ್ಚುತ್ತದೆ. ಇತ್ತೀಚಿನ ದಿನಗಳಲ್ಲಿ ಯುವಕ ಯುವತಿಯರ ಸಂಬಂಧ ವ್ಯವಹಾರದ ರೂಪ ತಳೆದಿರೋದು ಸಮಸ್ಯೆಗಳಿಗೆ ಕಾರಣ.‌ ಕೊಟ್ಟು ಪಡೆಯುವುದರಲ್ಲಿ ಯಾವುದೇ ರೀ ವಿಶ್ವಾಸ, ಗೌರವ ಶಾಶ್ವತವಾಗಿರುವುದಿಲ್ಲ. ಆಂತರಿಕ ವಾಗಿ ಬೆಳೆಸಿಕೊಳ್ಳುವ ಗುಣಕ್ಕೂ ‌ಹೊರಗಿನ ಹಣಕ್ಕೂ ಎಷ್ಟೋ ವ್ಯತ್ಯಾಸವಿದೆ.

ಹಣಸಂಪಾದನೆಯಲ್ಲಿ ಭ್ರಷ್ಟಾಚಾರ ವಿದ್ದರೆ ಅದನ್ನು ಪಡೆದವರಿಗೂ ಕಷ್ಟ ನಷ್ಟ. ಈ ವಿಚಾರದಿಂದಾಗಿ ಭಾರತೀಯತೆ ಹಿಂದುಳಿದಿರುವುದು ಎಲ್ಲರಿಗೂ ಸಮಸ್ಯೆಗಳನ್ನು ಹೆಚ್ಚಿಸುತ್ತಿದೆ. ಸಂಬಂಧ ಗಳು ವ್ಯವಹಾರಿಕ ರೂಪ ತಾಳಿದಾಗಲೇ ರಕ್ಷಣೆಯಿಲ್ಲದೆ ಜೀವನ ನಡೆಸಬೇಕಾಗುತ್ತದೆ.  ರಕ್ಷಾಬಂಧನದಲ್ಲಿ ಕಟ್ಟುವ ‘ರಾಕಿ’ ದಾರದಲ್ಲಿಯೇ ಹೆಚ್ಚು ಆಕರ್ಷಣೆ ಬೆಳೆಯುತ್ತಿದೆ. ಅದಕ್ಕಾಗಿ ಹೆಚ್ಚು ಹೆಚ್ಚು ಹಣ ಬಳಸಿಕೊಂಡು ಕಟ್ಟಿ‌ಎಸೆಯೋ ಬದಲಾಗಿ ಅದೇ ಹಣ ಬಡವರಿಗೆ ,ಉತ್ತಮ ಕಾರ್ಯಕ್ಕೆ ಬಳಸಿ ಸರಳವಾಗಿ ಆಚರಣೆ ಮಾಡಬಹುದು. ಇದನ್ನು ಶ್ರೀಮಂತ ಜನರಿಗೆ ತಿಳಿಸಲಾಗದು. ಅಚರಣೆಯ ಉದ್ದೇಶ ಜೀವನವಿಡೀ ನಿನ್ನ ರಕ್ಷಣೆಗೆ‌ನಾನಿರುತ್ತೇನೆಂಬುದಾಗಿತ್ತು.

ಸಹೋದರಿ ಮದುವೆಯ ನಂತರದ ದಿನಗಳಲ್ಲಿ ಗಂಡನ ಮನೆಯಲ್ಲಿ ಎಷ್ಟು ಸುರಕ್ಷಿತಳಾಗಿದ್ದಾಳೆನ್ನುವ ಬಗ್ಗೆ ತಿಳಿದುಕೊಂಡು ಅವಳ ಸಮಸ್ಯೆಗಳಿಗೆ ಉತ್ತಮ ಧಾರ್ಮಿಕ ಪರಿಹಾರ ನೀಡುತ್ತಾ, ಮಾಡುವುದೂ ಸಹೋದರನ ಧರ್ಮವೆ. ಆದರೆ, ಹಿಂದೆ ಕೊಟ್ಟ ಹೆಣ್ಣು ಕುಲಕ್ಕೆ ಹೊರಗೆ ಎನ್ನುತ್ತಾ ಮದುವೆಯ ನಂತರದ ದಿನಗಳಲ್ಲಿ ಅವಳ ಕಡೆ ತಿರುಗಿ ನೋಡದೆ ತನ್ನ ರಕ್ಷಣೆ ತನ್ನ ಸಂಸಾರವೆಂದು ನಡೆದವರು ಇದ್ದರು. ಏನೇ ಇರಲಿ ಅಂದಿನ ಕಾಲದಲ್ಲಿದ್ದ ಸ್ತ್ರೀ ಸ್ವಾತಂತ್ರ್ಯ ಕೇವಲ ನಾಲ್ಕು ಗೋಡೆಗೆ ಸೀಮಿತವಾಗಿತ್ತು.

ಈಗ ಮನೆಯಿಂದ ಹೊರಬಂದು ತನ್ನ ಸ್ವಾತಂತ್ರ್ಯವನ್ನು ಬಳಸಿಕೊಂಡು ಸ್ವಾವಲಂಬನೆ ಯಲ್ಲಿದ್ದರೂ ಅವಳ ರಕ್ಷಣೆಯ ಕಾರ್ಯ ಅನಿವಾರ್ಯ ಆಗುತ್ತಿದೆ. ಸಮಾನತೆಯ ವಿಚಾರ ಬಂದಾಗ ಸ್ತ್ರೀ ಶಕ್ತಿಯನ್ನು ರಕ್ಷಣೆ ಮಾಡಲು ಅವಳಿಗೆ ಧಾರ್ಮಿಕ ಕ್ಷೇತ್ರದಲ್ಲಿ ಸರಿಯಾದ  ಗೌರವಾದರವಿರಬೇಕು. ಅವಳ ಜ್ಞಾನಕ್ಕೆ ಧಾರ್ಮಿಕ ಶಿಕ್ಷಣ ನೀಡುವ ಗುರು ಹಿರಿಯರ ಸಹಕಾರವಿರಬೇಕು. ಆದರೆ, ಭಾರತದಂತಹ ಪವಿತ್ರ ದೇಶವನ್ನೇ ಹಿಂದುಳಿಸಿದ ಶಿಕ್ಷಣ ಕ್ಷೇತ್ರವನ್ನು ಸರ್ಕಾರಕ್ಕೆ ಬಿಟ್ಟು, ವಿದೇಶಿ  ಶಿಕ್ಷಣದಿಂದ ಮಕ್ಕಳನ್ನು ಬೆಳೆಸುತ್ತಾ ಅದನ್ನು ಸ್ತ್ರೀ ಯೂ ಪಡೆಯುತ್ತಾ ಬೌತಿಕದಲ್ಲಿ ಸಾಧನೆ ಮಾಡುತ್ತಾ ಹೆಸರು ಹಣ,ಅಧಿಕಾರ ಪಡೆದಿದ್ದರೂ ರಕ್ಷಣೆಯ ವಿಚಾರದಲ್ಲಿ ಸೋಲುತ್ತಿರುವ ಸಮಾಜಕ್ಕೆ ಈಗಲಾದರೂ ಆಧ್ಯಾತ್ಮಿಕ ಸತ್ಯ ಅರ್ಥವಾದರೆ ಉತ್ತಮ. ಆಚರಣೆಗಳ ಹಿಂದಿನ ಉದ್ದೇಶ ಮನರಂಜನೆಯಲ್ಲ.ಆತ್ಮರಕ್ಷಣೆ.

ಯಾರು ಯಾರನ್ನು ರಕ್ಷಣೆ ಮಾಡೋದು? ಭಾರತಮಾತೆ ಯೊಳಗಿರುವ‌ಪ್ರಜೆಗಳಾದವರು ಭಾರತಕ್ಕೆ ವಿರುದ್ದ ನಡೆದರೆ‌ರಕ್ಷಣೆ ಆಗುವುದೆ? ಹಾಗೆ ದೈವತ್ವವನ್ನು ಒಳಗಿಟ್ಟುಕೊಂಡು ಅಸುರರಿಗೆ ಸಹಕರಿಸಿದರೆ ಯಾರ ರಕ್ಷಣೆ ಆಗುತ್ತದೆ? ಹೀಗೇ ಸ್ತ್ರೀ ಯಿಂದಲೇ ಭೂಮಿಗೆ ಬಂದ ಜೀವ ಸ್ತ್ರೀ ವಿರುದ್ದ ಜೀವನ ನಡೆಸಿದರೆ ಸ್ತ್ರೀ ರಕ್ಷಣೆ‌ ಮಾಡೋರು ಯಾರು? ಇಲ್ಲಿ ಪ್ರತಿಯೊಂದು ವಿಚಾರದಲ್ಲೂ‌ಪುರುಷ ತನ್ನ ಲಾಭ ನಷ್ಟವನ್ನು ವ್ಯವಹಾರಕ್ಕೆ ಮಾತ್ರ ಬಳಸಿಕೊಂಡು ಧಾರ್ಮಿಕವಾಗಿ ಹಿಂದುಳಿದಿರುವುದರಿಂದ ಎಷ್ಟೇ ಆಚರಣೆಗಳಿದ್ದರೂ ಅದರ ಪ್ರತಿಫಲ ನಿರರ್ಥಕ ವಾಗುತ್ತಿದೆ.

ಮಾನವನಿಗೆ ಬೇಕಾದ ಜ್ಞಾನ ಸಂಪಾದನೆ ಮಾಡದೆ ಹಣ ಸಂಪಾದನೆಗಾಗಿ ಜ್ಞಾನ ದುರ್ಬಳಕೆ ಮಾಡಿಕೊಂಡರೆ ಸ್ತ್ರೀ ತನ್ನ ರಕ್ಷಣೆಗಾಗಿ ತಾನೇ ಹೊರಗೆ ಹೋರಾಟ ನಡೆಸುವ ಸ್ಥಿತಿಗೆ ತಲುಪುತ್ತಾಳೆ. ಒಲಿದರೆ ನಾರಿ ಮುನಿದರೆ ಮಾರಿ ಎಂದ ಹಾಗೆ ಭಾರತೀಯರಿಗೆ ಈಗ ಮಾರಿಯ ದ ಇಡೀ ವಿಶ್ವಕ್ಕೆ ತನ್ನ ಉಗ್ರರೂಪ ತೋರಿಸಿದ ಕೊರೊನ ದಂತಹ ಮಹಾಮಾರಿಯ ಉದ್ದೇಶ ಧರ್ಮ ರಕ್ಷಣೆಯಾಗಿತ್ತು. ಎಂತೆಂತಹ ಮಹಾಗುರು ಹಿರಿಯರು,ಕಲಾವಿದರು,ದೊಡ್ಡ ವ್ಯಕ್ತಿಗಳು,ರಾಜಕಾರಣಿ ಇ ಉಗ್ರರನ್ನು ತಡೆಯಲಾಗಿಲ್ಲ ಹಾಗೆಯೇ ಈ ಉಗ್ರರೂಪದ ಮಹಾಮಾರಿಯನ್ನೂ ತಡೆಯಲಾಗಿಲ್ಲ.

ಭೂಮಿಯ ಮೇಲಿರುವ ಅತಿಯಾದ ಸ್ವಾರ್ಥ ಅಹಂಕಾರದ ರಾಜಕೀಯತೆಯೇ ಮಾನವನ ದೊಡ್ಡ ಸಮಸ್ಯೆಗಳ ಮೂಲ. ಅದನ್ನು ಸ್ತ್ರೀಯಾದವಳು ತಿಳಿದು ತನ್ನ ಸಂಸಾರದೊಳಗಿದ್ದೇ ತಡೆಯೋ ಶಕ್ತಿ ಪಡೆದು ತನ್ನ ಸಾತ್ವಿಕತೆಯ ರಕ್ಷಣೆ ಮಾಡಿಕೊಂಡರೆ ಉತ್ತಮ. ಆಚರಣೆಗಳಲ್ಲಿ ಶುದ್ದತೆಗೆ ಪ್ರೀತಿ,ವಿಶ್ವಾಸಕ್ಕೆ, ಗೌರವಕ್ಕೆ ಹೆಚ್ಚು ಬೆಲೆ ಕೊಟ್ಟರೆ ಆತ್ಮಜ್ಞಾನ ಹೆಚ್ಚುತ್ತದೆ. ಹಣವನ್ನು ದಾನ ಧರ್ಮ ಕಾರ್ಯಕ್ಕೆ ಬಳಸಿ, ಸತ್ಪಾತ್ರರಿಗೆ ಸಹಾಯ, ಸಹಕಾರ ನೀಡಿದಾಗಲೆ ಭೂಮಿಯ ರಕ್ಷಣೆ. ಭಾರತಮಾತೆಯೊಳಗಿರುವ ಅಸಂಖ್ಯಾತ ವಿದೇಶಿಗಳ ಅವರದೇ ಆ ವ್ಯವಹಾರದಿಂದ ದೇಶದ ರಕ್ಷಣೆ ಮಾಡಲಾಗುವುದೆ? ಹೋಗಲಿ ಅವರ ಕೈಕೆಳಗೆ ದುಡಿದು ಮನೆಯೊಳಗಿದ್ದೇ ಕೆಲಸಮಾಡಿದರೂ ಲಕ್ಷ ಕೊಡುವ ಕಂಪನಿಯ ಉದ್ದೇಶ ತಿಳಿಯಬಹುದೆ? ಒಂದು ಸಂಸಾರದಲ್ಲಿ ಕೇವಲ ಒಂದೋ ಎರಡೋ ಮಕ್ಕಳಿದ್ದರೂ ಅವರ ಶಿಕ್ಷಣಕ್ಕೆ ಪೋಷಕರು ಸಾ ಪರಿಸ್ಥಿತಿಯನ್ನು ಎದುರಿಸುತ್ತಿರುವುದನ್ನು ನಾವೀಗ ನೋಡುತ್ತಿದ್ದೇವೆಂದರೆ  ನಾವೆಲ್ಲಿ ಎಡವಿರೋದು? ಎಷ್ಟೊಂದು ದೇವಸ್ಥಾನ,  ಮಠ, ಮಂದಿರ, ಆಚರಣೆ, ಶಾಸ್ತ್ರ, ಪುರಾಣ,ದೇವತೆಗಳು ದೇಶದೊಳಗಿದ್ದರೂ ಕೊರೊನ ಸಮಯದಲ್ಲಿ ಎಲ್ಲಾ ಮುಚ್ಚಿ ಕೂರುವ ಹಾಗಾಯಿತು.

ಮನೆ ಮನೆಯೊಳಗೆ ಬಂಧನಕ್ಕೆ ಒಳಗಾದ ಜನತೆಗೆ ಆ ಸಮಯದಲ್ಲಿ ಗೃಹಿಣಿ ಅಥವಾ ಸ್ತ್ರೀ ಯರ ಪಾತ್ರ ಎಷ್ಟು ಮಹತ್ವದ್ದಾಗಿದೆ ಎಂಬ  ಸದ್ವಿಚಾರ ಎಷ್ಟು ಜನರಿಗೆ ಅರ್ಥ ವಾಯಿತೋ ಗೊತ್ತಿಲ್ಲ ಕಾರಣ ಆ ಸಮಯದಲ್ಲಿ ಆರ್ಥಿಕ ಪರಿಸ್ಥಿತಿ ಉತ್ತಮ ಆಗಿಲ್ಲದ ಕಾರಣ  ಇರುವುದರಲ್ಲಿಯೇ ಸಂಸಾರ ನಡೆಸಲು ಸ್ತ್ರೀ ಮುಂದಾಗಬೇಕಿತ್ತು.‌ ಹಣವನ್ನು ಉಳಿಸಿ ಬೆಳೆಸಿ ಅದನ್ನು ಸದ್ಬಳಕೆ ಮಾಡಿಕೊಳ್ಳುವುದೂ ಕಲೆಯೆ. ಅದು ಸ್ತ್ರೀ ಯರಿಗೆ ಅತಿಮುಖ್ಯ. ಬೇಡೋದಕ್ಕಿಂತ ನೀಡುವ ಶಕ್ತಿ  ದೊಡ್ಡದು. ಮನುಕುಲಕ್ಕೆ ಭೂಮಿ ಒಂದು ಜೀವಕೊಟ್ಟು ಸಾಕಿ,‌ಸಲಹಿ, ಜೀವನ ನಡೆಸೋ ಸೌಭಾಗ್ಯ ಕೊಟ್ಟಾಗ ಅದನ್ನು ಅರ್ಥ ಮಾಡಿಕೊಳ್ಳಲು ಜ್ಞಾನವೇ ಇಲ್ಲವಾದರೆ ವ್ಯರ್ಥ ಪ್ರಯತ್ನ.

ಹೀಗಾಗಿ ಇಂದು ಸ್ತ್ರೀ ರಕ್ಷಣೆ ಮಾಡೋ ಪರಿಸ್ಥಿತಿ ಹೆಚ್ಚಾಗಿದೆ.ಅಸುರರಿಗೆ‌ ಜೀವ ಕೊಟ್ಟು ಬೆಳೆಸಿದರೆ ಸ್ತ್ರೀ ಗೆ ಕಷ್ಟ ನಷ್ಟ. ಆಚರಣೆಗಳಲ್ಲಿ ಶುದ್ದ ಸತ್ಯ,ಸಾತ್ವಿಕ ಬಾವನೆ,ಪ್ರೀತಿ, ವಿಶ್ವಾಸ ಹೆಚ್ಚಾಗಲು ಬೇಕಿದೆ ಸಾತ್ವಿಕ ಶಿಕ್ಷಣ. ಧಾರ್ಮಿಕ ಶಿಕ್ಷಣವೆಂದರೆ ಪುರಾಣ,ವೇದ ಶಾಸ್ತ್ರ ಓದಿ ಪಂಡಿತರಾಗೋದಷ್ಟೆ ಅಲ್ಲ ಭೂಮಿಯ ಬಗ್ಗೆ ಸ್ತ್ರೀ ಬಗ್ಗೆ ದೇವಿಯರ ಬಗ್ಗೆ ತಿಳಿದು ಸ್ತ್ರೀ ಕುಲದ ರಕ್ಷಣೆ ಮಾಡೋದಾಗಿದೆ.ಈಗಿನ ಭಾರತೀಯರಿಗೆ ಇದು ಅಗತ್ಯವಿದೆ. ಹಿಂದಿನ ಯುಗದಂತೆ ಇಂದು ಜ್ಞಾನಿಗಳಿಲ್ಲ. ಅನುಭವದಿಂದ ಸತ್ಯ ತಿಳಿಯುವ ಅವಕಾಶವಿಲ್ಲ. ವೇತಲೆಗೆ ತುಂಬಿಕೊಂಡು ಪ್ರಚಾರಕರಾಗಿ ಮಧ್ಯೆ ನಿಂತು ವ್ಯವಹಾರಕ್ಕೆ ಸೀಮಿತಮಾಡಿ ಕೊಂಡಿರುವ ಎಷ್ಟೋ ಆಧ್ಯಾತ್ಮದ ವಿಚಾರಗಳಲ್ಲಿಯೇ ಭೇಧಭಾವದ, ದ್ವೇಷ ಅಸೂಯೆ, ಅಹಂಕಾರ,ಸ್ವಾರ್ಥ ವನ್ನು ಬೆಳೆಸಿದ್ದರೆ ಅದು ತಿರುಗಿ ಹೊಡೆಯುವಾಗ ಜೀವವೇ ಅನುಭವಿಸಬೇಕು.

ಹೀಗಾಗಿ ಸ್ತ್ರೀ ಯರು ಒಗ್ಗಟ್ಟಿನಿಂದ ಸಂಸಾರ ನಡೆಸುವುದು ಮುಖ್ಯವಾಗಿದೆ. ನಮ್ಮ ಶಕ್ತಿಯನ್ನು ನಾವೇ ದೂರಮಾಡಿಕೊಂಡು ಹೊರಗಿನ ಶಕ್ತಿಗೆ ಸಹಕಾರ ನೀಡಿ ಹೊರಗೆ ನಡೆದಂತೆಲ್ಲಾ ಅಭದ್ರತೆ ಹೆಚ್ಚಾಗುತ್ತದೆ. ಇದನ್ನು ವಿವರವಾಗಿ ತಿಳಿಸೋ ಅಗತ್ಯವಿಲ್ಲ. ಸ್ತ್ರೀ ಜ್ಞಾನವನ್ನು ಸ್ತ್ರೀ ಬೆಳೆಸಿಕೊಳ್ಳಲು ಬೇಕಾದ ಶಿಕ್ಷಣ ಮನೆಯೊಳಗೆ ನೀಡಬೇಕು. ಹೊರಗೂ ಇದಕ್ಕೆ ಅವಕಾಶ ನೀಡುವುದು ಧಾರ್ಮಿಕ ಕ್ಷೇತ್ರದವರ ಧರ್ಮ. ಪುರುಷರಿಗಷ್ಟೇ ಸೀಮಿತ ಮಾಡಿಕೊಂಡ ಎಷ್ಟೋ ಸಾತ್ವಿಕ ಜ್ಞಾನ ಸ್ತ್ರೀ ಗೆ ಕೊಡದೆ ಆಳಿದರೆ ಅಸುರರ ಜನ್ಮ ಹೆಚ್ಚಾಗುತ್ತದೆ. ರಕ್ಷಣೆ ಮಾಡಲು ಅವಳ ಜ್ಞಾನಕ್ಕೆ ಗೌರವವಿರಲಿ. ಪ್ರತಿಭೆಯನ್ನು ಪ್ರದರ್ಶನ ಮಾಡೋದಕ್ಕೆ ಬಳಸಿ ಹಣ ಸಂಪಾದನೆಯ ಮಾಧ್ಯಮ ಮಾಡಿಕೊಂಡರೆ ಸ್ತ್ರೀ ಪ್ರದರ್ಶನದ ವಸ್ತುವೆ? ಹೋಗಲಿ ಉತ್ತಮ ವಿಚಾರಗಳಿದ್ದರೆ ಸರಿ.

ಅನಾವಶ್ಯಕ, ಅಗೌರವ ಅಜ್ಞಾನದ ವಿಚಾರಗಳನ್ನು ಪ್ರಚಾರಮಾಡೋದಕ್ಕೆ ಸ್ತ್ರೀ ಸಹಕಾರ ಸಿಕ್ಕರೆ ಅಸುರಕ್ಷತೆ,ಅರಕ್ಷಣೆಯೇ ಹೆಚ್ಚುವುದು ಭಾರತೀಯರ ಧಾರ್ಮಿಕ ವಿಚಾರಗಳೊಳಗಿರುವ ಸತ್ಯ ಸಾತ್ವಿಕತೆ ಅರ್ಥ ಮಾಡಿಕೊಂಡರೆ ದೇಶ ಸುರಕ್ಷಿತ. ಇಲ್ಲಿ ಯಾರೂ ಯಾರನ್ನೂ ರಕ್ಷಣೆ ಮಾಡುತ್ತಿಲ್ಲ. ಅವರವರ ಧರ್ಮಕರ್ಮಕ್ಕೆ ತಕ್ಕಂತೆ ಜೀವನ ನಡೆಯುತ್ತದೆ ನಡೆಯುತ್ತಿದೆ. ಅದು ಸ್ವಚ್ಚವಾಗಿ ಇದ್ದರೆ ಉತ್ತಮ. ರಕ್ಷಾಬಂಧನ ತೋರುಗಾಣಿಕೆಯಾಗದಿರಲಿ. ಎಲ್ಲಾ ಸ್ತ್ರೀ ಭಾರತೀಯರಾಗಲಿ.ದೇವೀ ಶಕ್ತಿಯ ಪ್ರತೀಕವಾಗಿರಲಿ. ಮನೆಯೊಳಗಿರುವ ತಾಯಿ ಹಾಗು ಸಹೋದರಿಯರ ರಕ್ಷಣೆ ಮಾಡುವುದು ಧರ್ಮ.

ಆದರೆ ಸಮಾಜದಲ್ಲಿರುವ ಸ್ತ್ರೀ ರಕ್ಷಣೆ ಮಾಡೋದು ರಾಷ್ಟ್ರದ ಧರ್ಮ. ಯಾವುದು ದೊಡ್ಡದು ಚಿಕ್ಕದು ಎನ್ನುವಹಾಗಿಲ್ಲ. ಇಬ್ಬರೂ ಒಂದೇ ದೇಶದ ಎರಡು ಕಣ್ಣುಗಳು.ಇದಕ್ಕೆ ಸಹಕಾರವಾಗಿ ಸ್ತ್ರೀ ನಿಲ್ಲುವುದು ಭಾರತಮಾತೆಗೆ ನಾವು ಕೊಡುವ ಗೌರವ.


ಶ್ರೀಮತಿ ಅರುಣ ಉದಯಭಾಸ್ಕರ, ಬೆಂಗಳೂರು

- Advertisement -
- Advertisement -

Latest News

ಕುಡಿಯುವ ನೀರು ವ್ಯತ್ಯಯ ಆಗದಂತೆ ನೋಡಿಕೊಳ್ಳುವ ಭರವಸೆ ನೀಡಿದ ರುದ್ರೇಶ ಘಾಳೆ

ಬೆಳಗಾವಿ - ಕಾರ್ಮಿಕರು ತಮ್ಮ ಬೇಡಿಕೆಗಳನ್ನು ಈಡೇರಿಸಲು ನಡೆಸಿದ ಮುಷ್ಕರದಿಂದಾಗಿ ಬೆಳಗಾವಿ ಜನತೆಗೆ ಕುಡಿಯುವ ನೀರಿನ ವ್ಯವಸ್ಥೆಯಲ್ಲಿ ತೊಂದರೆ ಉಂಟಾಗಿದ್ದು ವಿಷಾದನೀಯವಾಗಿದೆ ವ್ಯವಸ್ಥೆಯನ್ನು ಸಂಪೂರ್ಣವಾಗಿ ಸರಿ...
- Advertisement -

More Articles Like This

- Advertisement -
close
error: Content is protected !!