ಮೈಸೂರು – ನಗರದ ಹಿನಕಲ್‍ನಲ್ಲಿರುವ ಹಿರಿಯ ಜೀವಿಗಳ ಆಶ್ರಯತಾಣ ವಾತ್ಸಲ್ಯ ಸೇವಾ ಫೌಂಡೇಶನ್ ಹಾಗೂ ರೋಟರಿ ಕ್ಲಬ್ ಆಫ್ ಮೈಸೂರು ಸ್ಟಾರ್ಸ್ ವತಿಯಿಂದ ಇಂದು (ಏ.1) ವಿಶ್ವ ಮಹಿಳಾ ದಿನಾಚರಣೆಯನ್ನು ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಮಾಜಿ ಜಿಲ್ಲಾ ರೋಟರಿ ರಾಜ್ಯಪಾಲರು ಹಾಗೂ ಉದ್ಯಮಿಗಳಾದ ರೊ.ಪ್ರಕಾಶ್ ಕಾರಂತ್ ಅವರು ಜ್ಯೋತಿ ಬೆಳಗಿಸಿ, ಮಾತನಾಡುತ್ತಾ ಜೀವನದಲ್ಲಿ ಸಾಧಿಸಬೇಕಾದರೆ ಸದೃಢವಾದ ಛಲವಿರಬೇಕು ಎಂದ ಅವರು ವಿಶ್ವದಾದ್ಯಂತ ಮಹಿಳಾ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸುತ್ತಿದ್ದು, ಮಹಿಳೆಯರು ಒಂದೇ ಕ್ಷೇತ್ರಕ್ಕೆ ಮೀಸಲಿರದೇ ರಾಜಕೀಯ, ಸಾಂಸ್ಕೃತಿಕ, ಶೈಕ್ಷಣಿಕ, ಧಾರ್ಮಿಕ ಕ್ಷೇತ್ರಗಳಲ್ಲಿ ತಮ್ಮದೇ ಆದ ವಿಶಿಷ್ಟವಾದ ಸಾಧನೆಯನ್ನು ಮಾಡಿರುವುದು ಶ್ಲಾಘನೀಯ ವಿಚಾರ ಎಂದು ತಿಳಿಸಿದರು. ಒನಕೆ ಓಬವ್ವ, ಕಿತ್ತೂರು ರಾಣಿ ಚೆನ್ನಮ್ಮ, ಅಬ್ಬಕ್ಕ ದೇವಿ, ಬೆಳವಾಡಿ ಮಲ್ಲಮ್ಮ ಇವರ ತ್ಯಾಗ ಬಲಿದಾನವನ್ನು ಸ್ಮರಿಸಿದರು. ಮಹಿಳೆಯರಿಗೆ ಇನ್ನೂ ಹೆಚ್ಚು ಅವಕಾಶ ಸಿಗುವಂತಾಗಬೇಕೆಂದು ಸಮಾನತೆಯೊಂದಿಗೆ ಪ್ರೀತಿ, ವಿಶ್ವಾಸದೊಂದಿಗೆ ಅವರನ್ನು ಗೌರವಿಸಬೇಕೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಹಿರಿಯ ನಾಗರಿಕ ಹಗಲು ಯೋಗಕ್ಷೇಮ ಕೇಂದ್ರದ ಅಧ್ಯಕ್ಷರಾದ ಪ್ರಭುಸ್ವಾಮಿ ಅವರು ಮಾತನಾಡಿ, ಸ್ವಾತಂತ್ರ್ಯಪೂರ್ವದಲ್ಲಿ ಶೇ.14ರಷ್ಟು ಮಹಿಳೆಯರು ವಿದ್ಯಾಭ್ಯಾಸವನ್ನು ಪಡೆದಿದ್ದರು. ಆದರೆ, ಪ್ರಸ್ತುತ ವರ್ಷಗಳಲ್ಲಿ ಶೇ.80ರಷ್ಟು ಮಹಿಳೆಯರು ಶೈಕ್ಷಣಿಕವಾಗಿ ಪ್ರಗತಿ ಹೊಂದಿ ಎಲ್ಲಾ ಕ್ಷೇತ್ರಗಳಲ್ಲೂ ಗಣನೀಯವಾಗಿ ಸಾಧನೆ ಮಾಡುತ್ತಿರುವುದು ಹರ್ಷದಾಯಕ ಸಂಗತಿ ಎಂದರು.
ಮಹಿಳೆಯರ ಸಾಧನೆಗಳನ್ನು ಗೌರವಿಸಲು ಸಮಾಜಕ್ಕೆ ಅವರ ಕೊಡುಗೆಗಳನ್ನು ಸ್ಮರಿಸಲು ಮತ್ತು ಲಿಂಗ ಸಮಾನತೆ ಪ್ರತಿಪಾದಿಸಲು ವಿಶ್ವ ಮಹಿಳಾ ದಿನಾಚರಣೆ ಅತ್ಯಗತ್ಯ. ಇದು ನಿತ್ಯನೂತನವಾಗಬೇಕೆಂದು ಅಭಿಪ್ರಾಯಿಸಿದರು
ವೇದಿಕೆಯಲ್ಲಿ ರೊ.ಡಾ.ಚಂದ್ರ, ರೋಟರಿ ಕ್ಲಬ್ ಆಫ್ ಮೈಸೂರು ಸ್ಟಾರ್ಸ್ ನ ಅಧ್ಯಕ್ಷರಾದ ರೊ.ಸಂತೋಷ್ ಎಸ್.ಗೌಡ, ವಾತ್ಸಲ್ಯ ಸೇವಾ ಫೌಂಡೇಶನ್‍ನ ಅಧ್ಯಕ್ಷರಾದ ರವಿಕುಮಾರ್ ಎ.ಸಿ., ಕಾರ್ಯದರ್ಶಿ ನಾಗರತ್ನ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿರುವ ಸಾಧಕ ಮಹಿಳೆಯರಾದ ಡಾ.ಪುಷ್ಪ, ಕವಿಯತ್ರಿ ನಾಗಮ್ಮ, ವನಜಾಕ್ಷಿ, ಶುಶ್ರೂಷಕಿ ನಾಗರತ್ನ, ಪ್ರಭಾಮಣಿ, ಶೆಟ್ಟಿ ದೀಪಾ ಶ್ರೀನಿವಾಸ್, ರೊ.ತುಳಸಿ, ರೊ.ಭವ್ಯಕುಮಾರಿ, ರೊ.ಅನಿತಾ, ರೊ.ಮಾದಲಾಂಬಿಕಾ, ರೊ.ಮಮತಾ ಶ್ರೀಧರ್, ಮಂಗಳಮ್ಮ, ಪುಷ್ಪಲತಾ ಇನ್ನಿತರರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮಕ್ಕೆ ವಿದುಷಿ ವಿಜಯಕುಮಾರಿ ಪ್ರಾರ್ಥನೆ ಸಲ್ಲಿಸಿದರೆ, ರೊ.ಸಂತೋಷ್ ಎಸ್.ಗೌಡ ಸ್ವಾಗತಿಸಿ, ವಂದಿಸಿದರು.