ದೋಸ್ತ್ ಅಂಗಿಮ್ಯಾಗ ಬೆನ್ನಾಗ ಹಿಂದ್ ಎನೋ ಹೊಲಸ್ ಹತ್ತೆತಿ ನೋಡು ಅಂದ ರಾಮ್ಯಾ… ಅದೆನ್ ಐತಿ ನೋಡೋ ಪಾ ಅಂದ ಮತ್ತೊಬ್ಬ ಗೆಳೆಯ ಪಕ್ಕ್ಯಾ… ಹೀಗೆ ಇಬ್ಬಿಬ್ಬರು ಗೆಳೆಯರು ಒಂದೇ ರೀತಿ ಹೇಳಿದ ಮೇಲೆ ಯಾಕೋ ಸುಬ್ಯಾ ಪಟಕ್ಕನೆ ಅಂಗಿಯ ಗುಂಡಿಗಳನ್ನು ಬಿಚ್ಚಿ ಶಾಲೆಯ ಯುನಿಫಾರ್ಮಿನ ನೀಲಿ ಅಂಗಿ ಕಳಚಿ ಅದರ ಹಿಂಭಾಗದ ಕಡೆಗೆ ಮಹೇಶ್ ನೋಡುತ್ತಿದ್ದಂತೆಯೇ ಇಬ್ಬರು ಗೆಳೆಯರೂ ಮುಸಿ-ಮುಸಿ ನಗುತ್ತ ಏ ಏಪ್ರಿಲ್ ಫೂಲ್ ಅಂತ ಚಪ್ಪಳೆ ತಟ್ಟುತ್ತ ಟಾರು ರಸ್ತೆಯಲ್ಲೇ ಕಪ್ಪೆಗಳಂತೆ ಕುಪ್ಪಳಿಸತೊಡಗಿದ್ದರು.
ಹಲೋ ಅಪ್ಪಿ ಎಲ್ಲಿ ಇದಿಯಾ ಕಣೋ….ಅಂದಳು ಅತ್ತ ಕಡೆಯಿಂದ ಬೇಬಿ ಡಾಲ್…ಯಾಕಲೇ ಪಾ ಏನಾಯ್ತು….ಅನ್ನುತ್ತಿದ್ದಂತೆಯೇ ಬಿಕ್ಕಿ ಬಿಕ್ಕಿ ಅಳತೊಡಗಿದ ಬೇಬಿ ಡಾಲ್ ನಿಷಾ…ಏನಿಲ್ಲ ಕಣೋ ನನ್ನ ಸ್ಕೂಟಿ ಆಕ್ಸಿಡೆಂಟ್ ಆಗಿದೆ ಆ ಲೋಫರ್ ನಿಲ್ಲದೆ ಹೋಗ್ ಬಿಟ್ಟಾ ನನ್ನ ಬಲಗಾಲು ಕಾಲು ತುಂಬಾ ನೋಯ್ತಾ ಇದೆ ಬಂಗಾರಾ ಡಾಕ್ಟರ್ ಕಾಲಿಗೆ ಫ್ರಾಕ್ಚರ್ ಆಗಿದೆ ಅಂದ್ರು ಅಂದಾಗ ಈಗ ಎಲ್ಲಿದಿಯಾ ಹೇಳು ಅಲ್ಲೇ ಬರ್ತಿನಿ ಅಂದವನಿಗೆ ನಾನೀಗ ಪಾಟೀಲ್ ಹಾಸ್ಪಿಟಲ್ಲಿಗೆ ಬಂದೀದಿನಿ ಕಣೋ ಅನ್ನುತ್ತ ಆಕೆ ಪೋನ್ ಕಟ್ ಮಾಡಿದ್ದಳು.
ಹತ್ತು ನಿಮಿಷದಲ್ಲೇ ಆಸ್ಪತ್ರೆಗೆ ತಲುಪಿ ಮೊದಲ ಮಹಡಿ ಎರಡನೆ ಮಹಡಿ ಜನರಲ್ ವಾರ್ಡು,ಸ್ಪೆಷಲ್ ವಾರ್ಡು, ರಿಷೆಪ್ಷನ್ ಹೀಗೆ ಎಲ್ಲ ಕಡೆ ಹುಡುಕಿದ ಸುಜೀತ್ ಕೊನೆಗೆ ಅನಿವಾರ್ಯವಾಗಿ ನಿಷಾಳ ನಂಬರಿಗೆ ಕಾಲ್ ಮಾಡಿದರೆ ಎಪ್ರೀಲ್ ಫೂಲ್ ಕಣೋ ಅಂತ ಜೋರಾಗಿ ನಕ್ಕ ವಾಯ್ಸ್ ಮೇಲ್ ಒಂದು ಮೊಬೈಲಿನ ವಾಟ್ಸಪ್ಪಿಗೆ ಬಂದು ಬಿದ್ದಿತ್ತು.
ರವಿ…. ಸ್ವಾರಿ ಟು ಸೇ ದಿಸ್ ನಿಮ್ ಕಜಿನ್ ಬ್ರದರ್ ಸಂದಿಪ್ ತೀರೋಗ್ ಬಿಟ್ರು ಅಂತ ಡಾಕ್ಟರ್ ಪರಮೇಶಿ ಪೋನ್ ಮಾಡಿ ಹೇಳುತ್ತಿದ್ದಂತೆಯೇ ಕುಸಿದು ಬಿದ್ದ ರವಿಗೆ ಮತ್ಯಾರೋ ಮೊಬೈಲ್ ಎತ್ತಿಕೊಟ್ಟರೆ ಕುಟುಕು ಜೀವ ಹಿಡಿದಿದ್ದ ಮೊಬೈಲಿನ ಡಿಸ್ಪ್ಲೆಯಲ್ಲಿ ಡಾಕ್ಟರ್ ಪರಮೇಶಿಯ ಮೊಬೈಲಿನ ಮೊದಲ ಮೂರು ನಂಬರ್ ಗಳಷ್ಟೇ ಕಾಣುತ್ತಿದ್ದವು.ಶಾಕ್ ಆದ್ರಾ ರವಿ?? ಜಸ್ಟ ಕಿಡ್ಡಿಂಗ್ ಎಪ್ರಿಲ್ ಫೂಲ್ ನಿಮ್ ಬ್ರದರ್ರೇ ಪೋನ್ ಮಾಡೋಕೆ ಹೇಳಿದ್ರು ಎಕ್ಸಟ್ರೇಮ್ಲಿ ಸ್ವಾರಿ ಪಾ… ಅಂತ ಪೋನ್ ಕಟ್ ಆದರೆ ಮೊದಲೇ ಡಿಸ್‌ಪ್ಲೇ ಒಡೆದು ಹೋಗಿದ್ದ ಮೊಬೈಲನ್ನ ರವಿ ಪಕ್ಕದ ಗೋಡೆಗೆ ಜೋರಾಗಿ ಎಸೆದು ತನ್ನ ಸಿಟ್ಟನ್ನ ತಾನೇ ಕಂಟ್ರೋಲ್ ಮಾಡಿಕೊಳ್ಳತೊಡಗಿದ್ದ
ಆತ್ಮೀಯರೇ, ಹೀಗೆ ಎಷ್ಟೋ ಸಲ ನಮ್ಮವರನ್ನು ಫೂಲ್ ಮಾಡಿ ಅದೆನೋ ಸಾಧಿಸಿಬಿಟ್ಟವರಂತೆ ನಾವೆಲ್ಲ ಬೀಗುತ್ತಿದ್ದರೆ ಅತ್ತ ಕಡೆಯ ಸಂಬಂಧ ವೊಂದು ನಮ್ಮ ಮೇಲಿನ ನಂಬಿಕೆಯನ್ನೇ ಕಳೆದುಕೊಂಡು ಅಗಾಧ ನೋವು ಅಥವಾ ಯಾತನೆಯನ್ನ ಅನುಭವಿಸುತ್ತ ಇರುತ್ತದೆ.
ಕಾಗೆಯೊಂದು ಮನುಷ್ಯರ ತಲೆ ಮುಟ್ಟಿದಾಗ ಅವರು ತೀರಿಹೋದರು ಅನ್ನುವಂತಹ ಸುಳ್ಳು ಸುದ್ದಿಗಳನ್ನ ಹತ್ತಿರದ ಬಂಧುಗಳಿಗೆ ಮತ್ತು ಅವರ ಆಪ್ತರಿಗೆ ಮುಟ್ಟಿಸುವ ಮೂಲಕವೋ ಹಾವುಗಳ ಸರಸವನ್ನು ನೋಡಿದಾಗ ಏನೋ ಕೇಡು ಕಾದಿದೆ ಅಂತ ಭಯ ಬಿದ್ದು ಅದನ್ನು ನೋಡಿದವರ ಬದುಕಿನಲ್ಲಿ ಏನೋ ಒಂದು ದುರ್ಘಟನೆ ನಡೆದಂತೆ ಸಂಬಂಧಿಕರು ಮತ್ತು ಹತ್ತಿರದವರಿಗೆ ಸುಳ್ಳು ಹೇಳಿಯೋ ಆಗುವ ಪೀಡೆ ತೊಲಗಿ ಹೋಯಿತು ಅಂತ ಸಮಾಧಾನ ಮಾಡಿಕೊಳ್ಳುತ್ತಿದ್ದ ದಿನಗಳು ಮಾಯವಾಗಿ ಹೋಗಿವೆ ಆದರೂ… ಎಪ್ರಿಲ್ ಮೊದಲನೆಯ ತಾರೀಖು ಮತ್ಯಾರಿಗೋ ಯಾವುದೋ ಒಂದು ಸುಳ್ಳು ಹೇಳಿ ಅವರನ್ನ ಗೋಳು ಹುಯ್ದುಕೊಳ್ಳುವ ಜನರ ನಡುವಿನಿಂದಲೇ ಒಂದಷ್ಟು ಗಂಭೀರ ವಿಷಯವನ್ನ ನಿಮ್ಮ ಮುಂದೆ ಇಡುತ್ತಿದ್ದೇನೆ.
ಹೃದಯ ದೌರ್ಬಲ್ಯ ಇದ್ದವರು ಮತ್ತು ಯಾರನ್ನೋ ಅತಿಯಾಗಿ ಹಚ್ಚಿಕೊಂಡವರು ಇಂತಹ ಆಘಾತಕಾರಿ ಸುಳ್ಳು ವಿಷಯಗಳನ್ನು ಕೇಳಿ ಅಲ್ಲಿಯೇ ಹ್ಞಾಂ… ಅಂತ ಕುಸಿದು ಬಿದ್ದವರು ಮತ್ತೆಂದೂ ಎದ್ದು ನಿಂತಿಲ್ಲ ಅನ್ನುವದರಿಂದ ಹಿಡಿದು ತಮಾಷೆಗೆ ಹೇಳಿದ ಅದೆಷ್ಟೋ ಸುಳ್ಳು ಸಂಗತಿಗಳೇ ವಿಕೋಪಕ್ಕೆ ಹೋಗಿ ಸಂಸಾರಗಳು ಕೂಡ ಒಡೆದು ಹೋಗಿವೆ…
ಬಹಳಷ್ಟು ಸಂಬಂಧಗಳಲ್ಲಿ ತಮಾಷೆಗೆ ಅಂತ ಹೇಳಿದ ಒಂದೇ ಒಂದು ಸುಳ್ಳು ಶಾಶ್ವತವಾದ ಬಿರುಕುಗಳನ್ನ ಮೂಡಿಸಿದ್ದೂ ಕೂಡ ಅಷ್ಟೇ ನಿಜ..
ಅಂದಮೇಲೆ ತಮಾಷೆಗಾಗಿ ಎಪ್ರಿಲ್ ಒಂದನೇ ತಾರೀಖು ಯಾರಾದರೂ ನಮ್ಮನ್ನು ಫೂಲ್ ಮಾಡಿದರೆ ಪರವಾಗಿಲ್ಲ ಆದರೆ ವರ್ಷದ ಉದ್ದಕ್ಕೂ,ಅಥವಾ ಬದುಕಿನ ಉದ್ದಕ್ಕೂ ಫೂಲ್ ಆಗುತ್ತಿರುವ ಮುಗ್ದ ಜನರ ಮುಗ್ಧತೆಯನ್ನ ದುರುಪಯೋಗ ಮಾಡಿಕೊಳ್ಳುವ ಜನರಿಂದ ನಾವು ನೀವೆಲ್ಲ ಹುಷಾರಾಗಿ ಬದುಕಬೇಕಿದೆ.
ಬ್ಯಾಂಕೊಂದರಿಂದ ಹೊರಗೆ ಬಂದ ವ್ಯಕ್ತಿಯ ಕಾರು ಅಥವಾ ಬೈಕಿನ ಹತ್ತಿರ ಚಿಲ್ಲರೆ ಕಾಸುಗಳನ್ನ ಎಸೆದು, ಸರ್ ನಿಮ್ಮ ದುಡ್ಡು ಬಿದ್ದೋಯ್ತು ನೋಡಿ ಅಂತ ಯಾಮಾರಿಸಿ ಅವರು ಚಿಲ್ಲರೆ ನೋಟುಗಳನ್ನು ಆಯ್ದು ಕೊಳ್ಳುತ್ತಿರುವಾಗಲೇ ಆಗಷ್ಟೇ ಅವರು ವಿಥ್ ಡ್ರಾ ಮಾಡಿ ತಂದಿದ್ದ ಲಕ್ಷಗಟ್ಟಲೆ ಹಣವನ್ನು ಕದ್ದು ಪರಾರಿಯಾಗುವವರು, ರೈಲು,ಬಸ್ಸು,ಬಸ್ ಸ್ಟ್ಯಾಂಡ್ ಮತ್ತು ಜಾತ್ರೆಗಳಲ್ಲಿ ಕುಡಿಯುವ ಅಥವಾ ತಿನ್ನುವ ಆಹಾರ ಪದಾರ್ಥಗಳಲ್ಲಿ ಮತ್ತಿನ ಔಷಧಿ ಬೆರೆಸಿ ನಮಗೆ ಕೊಟ್ಟು ನಾವು ಪ್ರಜ್ಞೆ ತಪ್ಪುವಂತೆ ಮಾಡಿ ನಮ್ಮ ಬೆಲೆಬಾಳುವ ವಸ್ತುಗಳನ್ನ ಕದಿಯುವವರು, ಇಂಡಿಯನ್ ಆಯಿಲ್, ಭಾರತ ಪೆಟ್ರೋಲಿಯಂ ಸೆಂಟರ್ ಗಳಲ್ಲಿ ಪೆಟ್ರೋಲ್ ಹಾಕಿಸಿದವರ ಲಕ್ಕಿ ಡ್ರಾದಲ್ಲಿ ನಿಮಗೆ ಬಹುಮಾನ ಬಂದಿದೆ ಈಗ ಓಟಿಪಿ ಬರುತ್ತೆ ಅದನ್ನ ಹೇಳಿದ್ರೆ ನೇರವಾಗಿ ನಿಮ್ಮ ಖಾತೆಗೆ ಬಹುಮಾನದ ಮೊತ್ತ ಜಮೆಯಾಗುತ್ತೆ ಅಂತ ಯಾಮಾರಿಸಿ ನಮ್ಮ ಬ್ಯಾಂಕ್ ಖಾತೆಗಳಿಗೆ ಕನ್ನ ಹಾಕುವವರು ಮತ್ತು ಇವರೆಲ್ಲರಂತೆಯೇ ನಮ್ಮೊಂದಿಗೆ ನಿತ್ಯವೂ ಮೃದುವಾಗಿ ವ್ಯವಹರಿಸುತ್ತ ನಮ್ಮನ್ನು ಸಂತೈಸಿದಂತೆ,ಸಮಾಧಾನಿಸಿದಂತೆ ನಾಟಕ ಮಾಡುತ್ತ ನಮ್ಮ ನೋವುಗಳಿಗೆ ಪರೋಕ್ಷವಾಗಿ ಕಾರಣವಾಗುವ ಮತ್ತು ನಮ್ಮನ್ನು ಹೊರಬರಲಾಗದ ಇಕ್ಕಟ್ಟುಗಳಿಗೆ ಸಿಲುಕಿಸಿ ವಿಕೃತ ಸುಖ ಅನುಭವಿಸುವ ಅದೆಷ್ಟೋ ಜನರಿಂದ ನಾವು ನಿತ್ಯವೂ ಫೂಲ್ ಆಗುತ್ತಲೇ ಇರುತ್ತೇವೆ.
ಎಲ್ಲಿಯವರೆಗೆ ನಾವು ಎಲ್ಲ ಅನಗತ್ಯ ವಿಷಯಗಳನ್ನ ಮತ್ತು ಎಲ್ಲರನ್ನ ಬಹಳ ಸುಲಭವಾಗಿ ನಂಬುತ್ತೇವೋ ಅಲ್ಲಿಯವರೆಗೂ ನಮ್ಮನ್ನು ಯಾಮಾರಿಸುವವರು ಇದ್ದೇ ಇರುತ್ತಾರೆ.
ತಮ್ಮ ಮಡದಿಯನ್ನ ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸುವಂತೆ ನಟಿಸುತ್ತಲೇ ಮತ್ತೊಂದು ಅಫೇರ್ ಇಟ್ಟುಕೊಳ್ಳುವ ಗಂಡಸರಿಂದ ಹಿಡಿದು, ಹಾಯ್ ಮೇರಿ ಜಾನ್ ನಿನ್ನ ಬಿಟ್ಟು ನನಗಾದರೂ ಯಾರಿದ್ದಾರೆ ನೀನಿಲ್ಲ ಅಂದ್ರೆ ಸತ್ತೋಗ್ತೀನಿ ಅನ್ನುವ ಗರ್ಲ್ ಫ್ರೆಂಡಿನ ತನಕ ನಮ್ಮ ಕಣ್ಣಿಗೆ ಸತ್ಯದ ದರ್ಶನವಾಗುವ ತನಕ ನಮ್ಮೊಂದಿಗೆ ಫ್ಲರ್ಟ್ ಮಾಡುತ್ತಲೇ ಇರುವ ಅದೆಷ್ಟೋ ಸಂಬಂಧಗಳು ಕೊನೆಗೊಮ್ಮೆ ನಮ್ಮ ಮನಸ್ಸಿಗೆ ಆರದ ಗಾಯವೊಂದನ್ನ ಮಾಡಿಯೇ ತೀರುತ್ತವೆ ಆದ್ದರಿಂದ ಸುಲಭವಾಗಿ ಯಾರನ್ನೋ ನಂಬಿದ ಕಾರಣಕ್ಕೆ ನಾವು ಎಪ್ರಿಲ್ ಫೂಲ್ ಗಳಾಗದಿರೋಣ.
ಇನ್ನು ನಮಗೆ ಹತ್ತಿರವಾದಂತೆ ನಟಿಸಿ ತಮ್ಮ ಮನಸ್ಸಿನಲ್ಲಿ ನಮ್ಮ ಬಗ್ಗೆ ವಿಷವೆ ತುಂಬಿದ್ದರೂ ತುಟಿಯ ಅಂಚಿನಲ್ಲಿ ನಗುವಿನ ಮಧು ಸೂಸುತ್ತ ಮಾತನಾಡಿ, ನಮ್ಮನ್ನು ಮರಳು ಮಾಡುವ ಮತ್ತು ನಮ್ಮ ಎಲ್ಲ ವೀಕನೆಸ್ಸುಗಳನ್ನ ಅರಿತುಕೊಂಡು ನಮ್ಮೊಂದಿಗೆ ಆಟವಾಡುವ ಜನರಿಂದಲೂ ಸಾಧ್ಯವಾದಷ್ಟು ಅಂತರವನ್ನು ಕಾಯ್ದುಕೊಂಡು ಬದುಕಿನ ಉದ್ದಕ್ಕೂ ಕರ್ಮ ಸಿದ್ಧಾಂತವನ್ನು ನಂಬಿ ಬದುಕುತ್ತ ಯಾರನ್ನೂ ಯಾಮಾರಿಸದೇ, ಯಾರನ್ನೂ ಫೂಲ್ ಮಾಡದೆ ಸಾಧ್ಯವಾದಷ್ಟು ಪ್ರಾಮಾಣಿಕತೆಯಿಂದ ಮತ್ತು ನೇರ-ನಿಷ್ಠೂರ ಅನ್ನಿಸಿದರೂ ತೆರೆದಿಟ್ಟ ಪುಸ್ತಕದಂತೆ, ನಿಷ್ಕಲ್ಮಷ ಮನಸ್ಸಿನಿಂದ ಬದುಕಿಬಿಡೋಣ.
ನಾವು ನೀವೆಲ್ಲ ಇಂಗ್ಲೀಷಿನ ಫೂಲ್ ಗಳಾಗದೇ ಹಿಂದಿಯ ಫೂಲ್ ಗಳಾಗಿ ನಮ್ಮ ಸುತ್ತಲಿನ ಜನರಿಗೆ ಸಾಧ್ಯವಾದಷ್ಟು ಸುಗಂಧವನ್ನೇ ಯಾವ ಪ್ರತಿಫಲದ ಅಪೇಕ್ಷೆಯೂ ಇರದೆ ಸೂಸುತ್ತ ಇರೋಣ. ಯಾಕೆಂದರೆ ಏನೇನೋ ಕನಸುಗಳನ್ನು ಕಟ್ಟಿಕೊಂಡ ಮನುಷ್ಯ ಅವುಗಳನ್ನು ಈಡೇರಿಸಿಕೊಳ್ಳಲು ಹವಣಿಸುತ್ತ ತನ್ನ ಬದುಕಿನ ಮಹತ್ತರವಾದ ಗುರಿಯೊಂದ ಕೊನೆಯ ಮೆಟ್ಟಿಲ ಮೇಲೆ ಇನ್ನೇನೂ ಒಂದೇ ಒಂದು ಹೆಜ್ಜೆಯಷ್ಟು ಸಮೀಪದಲ್ಲಿ ಇರುವಾಗಲೇ ದೇವರು ಕೂಡ ಸಾವು ಅನ್ನುವ ಚೆಕ್ ಮೇಟ್ ಇಟ್ಟು ನಮ್ಮನ್ನು ಫೂಲ್ ಮಾಡಿ ಬಿಡುತ್ತಾನೆ ಅನ್ನುವದು ಎಲ್ಲರಿಗೂ ನೆನಪಿರಲಿ.
ದೀಪಕ ಶಿಂಧೇ
9482766018