ಮೂಡಲಗಿ:- ಸಂವಿಧಾನಶಿಲ್ಪಿ ಅಂಬೇಡ್ಕರ್ ಪರಿನಿರ್ವಾಣ ದಿನಾಚರಣೆ ಕೇವಲ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಸಾಂಕೇತಿಕ ಕಾರ್ಯಕ್ರಮವಾಗಬಾರದು. ಬದಲಾಗಿ ಭವಿಷ್ಯದ ಪ್ರಜೆಗಳಿಗೆ ವಿಶ್ವಜ್ಞಾನಿ ಅಂಬೇಡ್ಕರ್ ದೇಶಕ್ಕೆ ನೀಡಿರುವ ಕೊಡುಗೆಗಳನ್ನು ತಿಳಿಸುವ ಕಾರ್ಯ ಆದಲ್ಲಿ ಕಾರ್ಯಕ್ರಮ ಸಾರ್ಥಕತೆ ಪಡೆದುಕೊಳ್ಳಲು ಸಾಧ್ಯ ಎಂದು ಪುರಸಭೆ ಮುಖ್ಯಾಧಿಕಾರಿ ತುಕಾರಾಮ ಮಾದರ ಹೇಳಿದರು.
ಪಟ್ಟಣದ ರುದ್ರ ಭೂಮಿಯಲ್ಲಿ ನಿಸರ್ಗ ಫೌಂಡೇಶನ್ ವತಿಯಿಂದ ಆಯೋಜಿಸಲಾದ, ಸಂವಿಧಾನಶಿಲ್ಪಿ ಅಂಬೇಡ್ಕರ್ ಪರಿನಿರ್ವಾಣ ದಿನಾಚರಣೆಗೆ ಸಸಿ ನೆಡುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು, ಭಾರತರತ್ನ ಡಾ.ಭೀಮರಾವ್ ಅಂಬೇಡ್ಕರ್ ಅವರು ಭಾರತದ ಸಂವಿಧಾನಶಿಲ್ಪಿ ಮಾತ್ರವಲ್ಲದೇ, ನ್ಯಾಯಶಾಸ್ತ್ರಜ್ಞರಾಗಿ, ಅರ್ಥಶಾಸ್ತ್ರಜ್ಞರಾಗಿ, ಸಮಾಜ ಸುಧಾರಕರಾಗಿ, ಮಹಿಳೆಯರು, ದಲಿತರು, ಅಲ್ಪಸಂಖ್ಯಾತರು ಸೇರಿದಂತೆ, ಅಸ್ಪೃಶ್ಯತೆ, ಅಸಮಾನತೆಯ ವಿರುದ್ಧ ದಿಟ್ಟತನದಿಂದ ಹೋರಾಡಿ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಸಿಗುವಂತೆ ಮಾಡಿದ ಮಹಾನ್ ಮಾನವತಾವಾದಿ ಎಂದರು.
ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪೂಜಿಸಲ್ಲಿಸಿ, ಪುಷ್ಪ ನಮನ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ನಿಸರ್ಗ ಫೌಂಡೇಶನ್ ಅಧ್ಯಕ್ಷ ಈರಪ್ಪ ಢವಳೇಶ್ವರ, ಉಪಾಧ್ಯಕ್ಷ ಮಲ್ಲು ಬೋಳನವರ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಹಾಸ್ಟೆಲ ವಾರ್ಡನ್ ಯಲ್ಲಪ್ಪ ಭಜಂತ್ರಿ, ದಲಿತ ಮುಖಂಡರಾದ ಮರೆಪ್ಪ ಮರೆಪ್ಪಗೋಳ, ರವೀಂದ್ರ ಸಣ್ಣಕಿ, ಯಶವಂತ ಮಂಟೂರ, ಪ್ರಭು ಮಂಟೂರ, ವಿಲ್ಸನ್ ಢವಳೇಶ್ವರ, ವಿಜಯ ಮೂಡಲಗಿ, ಅನ್ವರ ನದಾಫ್, ಬಸು ಝoಡೆಕುರುಬರ, ಹಣಮಂತ ಸತರಡ್ಡಿ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಹಾಸ್ಟೆಲ್ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.