spot_img
spot_img

ಎಷ್ಟು ಸಲ ಬಿದ್ದೆವು ಎನ್ನುವುದು ಮುಖ್ಯವಲ್ಲ

Must Read

- Advertisement -

ನ್ಯೂಟನ್‍ನ ಮೂರನೇ ನಿಯಮ ಎಲ್ಲರಿಗೂ ಗೊತ್ತು. ಕ್ರಿಯೆಗೆ ಪ್ರತಿಕ್ರಿಯೆ ಯಾವಾಗಲೂ ಸಮ ಹಾಗೂ ವಿರುದ್ಧವಾಗಿರುತ್ತದೆ. ಅಚ್ಚರಿಯೆನಿಸಿದರೂ ನಿಜ ಸಂಗತಿ ಏನು ಗೊತ್ತೆ? ನಾವೆಲ್ಲ ಬದುಕಿನ ಸಂತಸದ ಅಮೂಲ್ಯ ಕ್ಷಣಗಳನ್ನು ಬೇಗನೆ ಮರೆತು ದುಃಖ ದುರಂತ ಘಟನೆಗಳಿಗೆ ಭಾವ ಪರವಶರಾಗಿ ಅತಿಯಾಗಿ ಸ್ಪಂದಿಸುವ ಸ್ವಭಾವ ಹೊಂದಿದ್ದೇವೆ.

ಸಣ್ಣ ಪುಟ್ಟ ಸಮಸ್ಯೆಗಳು, ಚಿಕ್ಕ ಚಿಕ್ಕ ನೋವುಗಳು ಸಾಲು ಸಾಲು ಸೋಲುಗಳು ನಮ್ಮ ಮೃದು ಮನಸ್ಸಿನ ಮೇಲೆ ಆಳವಾದ ಪ್ರಭಾವ ಬೀರಿ ಬಹು ಕಾಲದವರೆಗೆ ಬೇರೆ ಯಾವ ಚಟುವಟಿಕೆಗಳಲ್ಲಿ ತೊಡಗಿಕೊಳ್ಳದಂತೆ ನಮ್ಮನ್ನು ಹಿಡಿದಿಟ್ಟುಕೊಳ್ಳುತ್ತವೆ. ನಮ್ಮ ಬದುಕಿನ ದಿಕ್ಕನ್ನೇ ಬದಲಿಸಿಬಿಡುತ್ತವೆ. ಯಾವುದೇ ಉತ್ತಮ ಕೆಲಸ ನನ್ನಿಂದಾಗದು. ನಾನೆಂದೂ ಅಂದುಕೊಂಡದ್ದನ್ನು ಸಾಧಿಸಲು ಸಾಧ್ಯವಿಲ್ಲ ಎಂದೇ ಯೋಚಿಸುತ್ತೇವೆ. ಪ್ರತಿಯೊಂದು ಸನ್ನಿವೇಶದಲ್ಲೂ ಹೆಚ್ಚು ನಕಾರಾತ್ಮಕತೆಯಿಂದಲೇ ಪ್ರತಿಕ್ರಿಯಿಸುತ್ತೇವೆ.

ಅವುಗಳಿಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದಷ್ಟು ನಮ್ಮಲ್ಲಿ ಅಸಂತಸದ ಮೂಟೆಯ ಗಾತ್ರವನ್ನು ಹೆಚ್ಚಿಸುತ್ತವೆ. ಅನೀಸ್ ನಿನ್ ಹೇಳಿದಂತೆ ನಾವು ವಸ್ತುಗಳನ್ನು ಅವು ಇರುವಂತೆ ನೋಡುವುದಿಲ್ಲ.ನಾವಿರುವಂತೆ (ನಮ್ಮ ಭಾವದಂತೆ)ಅವುಗಳನ್ನು ನೋಡುತ್ತೇವೆ. ಅಂದರೆ ನಮ್ಮ ಆಲೋಚನೆಗಳು ನಮ್ಮ ಜೀವನವನ್ನು ನಿರ್ಧರಿಸುತ್ತವೆ ಎಂದಂತಾಯಿತು.

- Advertisement -

ನಕಾರಾತ್ಮಕತೆಯನ್ನು ಮನದಲ್ಲಿ ಅದುಮಿಟ್ಟುಕೊಂಡರೆ ಮುಂದೊಂದು ದಿನ ಜ್ವಾಲಾಮುಖಿಯಂತೆ ಒಮ್ಮಿಂದೊಮ್ಮೆಲೆ ಆಸ್ಪೋಟಿಸಬಹುದು. ನಕಾರಾತ್ಮಕತೆ ದೈಹಿಕ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುವುದು. ಹಾಗಾದರೆ ಮನದಲ್ಲಿ ಮೂಡುವ ಆಲೋಚನೆಗಳನ್ನು ತುಳಿದು ಬಿಟ್ಟರೆ ಖುಷಿಯಿಂದ ಇರಬಹುದೆ? ಇಲ್ಲ, ತುಳಿಯುವುದರಿಂದ ಮನದಲ್ಲಿ ಅದುಮಿಟ್ಟುಕೊಳ್ಳುವುದರಿಂದ ಮತ್ತಷ್ಟು ನೋವಾಗುತ್ತದೆ.

ಎಲ್ಲ ಸಮಯದಲ್ಲೂ ನಿಮ್ಮನ್ನು ನೀವು ಖುಷಿಯಾಗಿಯೇ ಇಟ್ಟುಕೊಳ್ಳಿ. ಸಂತಸದಿಂದ ಇರುವವರು ಯಾರೂ ನಕಾರಾತ್ಮಕತೆಯ ಆಲೋಚನೆಗಳನ್ನು ಹೊಂದಿಲ್ಲ, ಕಷ್ಟ ಸಮಸ್ಯೆಗಳನ್ನು ಎದುರಿಸುತ್ತಿಲ್ಲ ಅಂತಿಲ್ಲ. ಬದಲಾಗಿ ಅವರೆಲ್ಲ ನಕಾರಾತ್ಮಕತೆಯಲ್ಲೂ ಉತ್ತಮ ಅಂಶಗಳನ್ನು ಹೆಕ್ಕಿ ತೆಗದು ಜೀವನದಲ್ಲಿ ಬದಲಾವಣೆ ತಂದುಕೊಳ್ಳುತ್ತಾರೆ. ಗೆದ್ದವರ ಸಾಲಿನಲ್ಲಿ ಮಿಂಚುತ್ತಾರೆ.

ಆಲೋಚನೆಗಳನ್ನು ಅದುಮಿಟ್ಟರೆ ಸಂತೋಷ ದೂರ ಓಡುತ್ತದೆ. ಕೋಪ ಹತಾಶೆ ಖಿನ್ನತೆ ಹತ್ತಿರ ಸುಳಿಯುತ್ತವೆ. ನಮ್ಮೆಲ್ಲರ ಕಣ್ಣು ಕಿವಿ ಮಾಡುವ ಕಾರ್ಯ ಒಂದೇ ಆದರೂ ಅವು ಗ್ರಹಿಸುವ ವಿಚಾರ ವಿಭಿನ್ನ. ನನಗೆ ತಿಳಿದಿದ್ದೇ ಸರಿ ಎನ್ನುವುದಕ್ಕಿಂತ ಸರಿಯಾಗಿ ಯೋಚಿಸಿ ಚರ್ಚಿಸಿ ವಿಶ್ಲೇಷಿಸಿ ಒಂದು ನಿರ್ಧಾರಕ್ಕೆ ಬರುವುದು ಅತ್ಯುತ್ತಮ ವಿಧಾನ. ‘ನಮ್ಮ ಆಲೋಚನೆಯ ದಿಕ್ಕನ್ನು ಬದಲಿಸಿಕೊಂಡರೆ ಬದುಕನ್ನೇ ಬದಲಿಸಿಕೊಳ್ಳಬಹುದು.’ ಎಂದು ಹೇಳುವುದಷ್ಟೇ ಅಲ್ಲ ಆಡಿದಂತೆ ಮಾಡಿ ತೋರಿಸಿದ ಸಾಫ್ಟ್ ವೇರ್ ಮಾಂತ್ರಿಕ ಬಿಲ್ ಗೇಟ್ಸ್.. ಬಹಳಷ್ಟು ಸಲ ನಾವು ಪರಿಸ್ಥಿತಿ ಅನುಕೂಲಕರವಾಗಿಲ್ಲ ಎಂದು ದೂಷಿಸುತ್ತಲೇ ಕಾಲ ಕಳೆಯುತ್ತೇವೆ.ವಿಜಯಿಗಳಿಗೂ ಸಹ ಪರಿಸ್ಥಿತಿ ಚೆನ್ನಾಗಿರಲಿಲ್ಲ ಆದರೂ ಸಹ ಅವರು ನಿರುತ್ಸಾಹಗೊಳ್ಳಲಿಲ್ಲ. ಅವಘಡಗಳಲ್ಲೂ ನಿರಂತರವಾಗಿ ಸಕಾರಾತ್ಮಕತೆಯನ್ನು ಹುಡುಕಿ ತೆಗೆದರು. ಸಮಸ್ಯೆಗಳನ್ನು ಸುವರ್ಣ ಅವಕಾಶಗಳನ್ನಾಗಿ ಪರಿವರ್ತಿಶಿಕೊಂಡರು.

- Advertisement -

ಸಕಾರತ್ಮಕೆಯನ್ನು ಅಳವಡಿಸಿಕೊಳ್ಳುವುದು ಹೇಳಿದಷ್ಟು ಸುಲಭವಲ್ಲ ಅಂತೀರೇನು? ಕೆಲವೊಮ್ಮೆ ಸುಲಭವಾಗಿ ಮಾಡುವಂಥವು ಜಟಿಲವಾಗಿ ಕಾಣಿಸಿಕೊಳ್ಳುತ್ತವೆ. ಅದಕ್ಕೆ ಕಾರಣ ಬದುಕಿನ ಗತಿಯಲ್ಲಿ ಅಮುಖ್ಯವಾದುವುಗಳಿಗೆ ಪ್ರಾಧಾನ್ಯತೆ ನೀಡಿರುವುದು.

ಯಾವುದು ಎಷ್ಟು ಪ್ರಾಮುಖ್ಯತೆ ಹೊಂದಿದೆ ಎಂಬುದನ್ನು ಅರಿಯದೇ ಇರುವುದು. ನಕಾರಾತ್ಮಕತೆಗೆ ಎಡೆ ಮಾಡಿಕೊಡುತ್ತದೆ. ಜೀವನದಲ್ಲಿ ಎಷ್ಟು ಬಾರಿ ಬಿದ್ದೆವು ಎನ್ನುವುದು ಪ್ರಶ್ನೆಯೇ ಅಲ್ಲ. ಎಷ್ಟು ಬಾರಿ ಎದ್ದೆವು ಎನ್ನುವುದೇ ಮುಖ್ಯ. ಆದರೆ ನಮಗೆಲ್ಲ ಎಷ್ಟು ಬಾರಿ ಬಿದ್ದೆವು ಎಂಬುದೇ ಮುಖ್ಯ. ಅದೇ ನಮ್ಮ ಮನದಲ್ಲಿ ಆಳವಾಗಿ ಬೇರೂರಲು ಬಿಡುತ್ತೇವೆ.

ಟೀಕೆ ಟಿಪ್ಪಣಿಗಳಿಗೆ ಹೆಚ್ಚು ತಲೆ ಕೆಡಿಸಿಕೊಳ್ಳದೇ ಗುರಿಯತ್ತ ಮುಖ ಮಾಡಿ ಸಂದರ್ಭಾನುಸಾರ ಸಾಹಸಪೂರ್ಣವಾದ ನಿರ್ಣಯಗಳನ್ನು ಪಾಲಿಸುತ್ತಿದ್ದರೆ, ಬದುಕು ಗೆಲುವೆಂಬ ಸುಂದರವಾದ ತಿರುವಿನಲ್ಲೇ ಮನೆ ಮಾಡುತ್ತದೆ ಎಂಬುದರಲ್ಲಿ ಸಂಶಯವಿಲ್ಲ. ಹಾಗಾದರೆ ತಡವೇಕೆ ಇಂದಿನಿಂದಲೇ ಬಿದ್ದಾಗೊಮ್ಮೆ ಎದ್ದು ನಿಲ್ಲಲು ಪ್ರಯತ್ನಿಸೋಣ ಅಲ್ಲವೇ?



ಜಯಶ್ರೀ.ಜೆ. ಅಬ್ಬಿಗೇರಿ
ಬೆಳಗಾವಿ. 9449234142

- Advertisement -
- Advertisement -

Latest News

ಉಚಿತ ಕಣ್ಣು ತಪಾಸನೆ ಹಾಗೂ ಶಸ್ತ್ರಚಿಕಿತ್ಸೆ ಶಿಬಿರ

ಸಿಂದಗಿ; ಪೂಜ್ಯ ಶ್ರೀ ಚೆನ್ನವೀರಸ್ವಾಮೀಜಿ ಪ್ರತಿಷ್ಠಾನ, ಸಿಂದಗಿ, ಜಿಲ್ಲಾ ಅಂಧತ್ವ ನಿವಾರಣಾ ಸಂಸ್ಥೆ, ವಿಜಯಪುರ ಹಾಗೂ ಅನುಗ್ರಹ ವಿಜನ್ ಫೌಂಡೇಶನ್ ಟ್ರಸ್ಟ್, ವಿಜಯಪುರ, ಜಿ.ಪಿ. ಪೋರವಾಲ...
- Advertisement -

More Articles Like This

- Advertisement -
close
error: Content is protected !!
Join WhatsApp Group