spot_img
spot_img

ನಮ್ಮಲ್ಲಿ ಹುಟ್ಟಿದ ಜೈನ ಧರ್ಮ ಜಗತ್ತಿಗೆ ಶಾಂತಿ ಸಂದೇಶ ನೀಡುತ್ತಿದೆ – ಡಾ. ಜಿ. ಪರಮೇಶ್ವರ

Must Read

- Advertisement -

ಬೆಂಗಳೂರು: ನಮ್ಮ ದೇಶ ನಾಲ್ಕು ಧರ್ಮಗಳ ಹುಟ್ಟನ್ನು ಕಂಡಿದೆ. ಹಿಂದು, ಬೌದ್ದ. ಜೈನ ಹಾಗೂ ಸಿಖ್ ಧರ್ಮಗಳು ಹುಟ್ಟಿದ್ದು ನಮ್ಮ ದೇಶದಲ್ಲಿಯೇ. ವಿಶ್ವಕ್ಕೆ ಈ ನಾಲ್ಕೂ ಧರ್ಮಗಳು ವಿಶೇಷ ಸಂದೇಶ ನೀಡುತ್ತಿವೆ. ಜೈನ ಧರ್ಮ ನೀಡಿರುವ ಶಾಂತಿಯ ಸಂದೇಶ ಸರ್ವಕಾಲಕ್ಕೂ ಪ್ರಸ್ತುತ ಎಂದು ಗೃಹ ಸಚಿವರಾದ ಡಾ. ಜಿ. ಪರಮೇಶ್ವರ ಅಭಿಪ್ರಾಯ ವ್ಯಕ್ತ ಪಡಿಸಿದರು.

ಚಾಮರಾಜಪೇಟೆಯಲ್ಲಿರುವ  ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀ ಕೃಷ್ಣರಾಜ ಪರಿಷತ್ತಿನ ಮಂದಿರದಲ್ಲಿ ಹಮ್ಮಿಕೊಂಡ ʻಚಾವುಂಡರಾಯʼ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿ, ಧರ್ಮದ ಕುರಿತ ಅಧ್ಯಯನ ನಮ್ಮಲ್ಲಿ ಕೇವಲ ಅಕಾಡಮಿಕ್ ನೆಲೆಯಲ್ಲಿ ನಡೆಯುತ್ತಿದೆಯೇ ಹೊರತು ಅದರ ಅಂತಃಸತ್ವ ಹಿಡಿಯುವ ಕೆಲಸವಾಗುತ್ತಿಲ್ಲ, ಪ್ರೊ.ಕೆ.ಇ.ರಾಧಾಕೃಷ್ಣ ಅವರು ಇಂತಹ ಮಹತ್ವದ ಕೆಲಸವನ್ನು ಮಾಡಿದ್ದಾರೆ ಎಂದು ಅವರು ಮೆಚ್ಚಿಗೆ ಸೂಚಿಸಿದರು.

ಜೈನ ಧರ್ಮ ನಮ್ಮ ದೇಶದಲ್ಲಿ ಹುಟ್ಟಿಕೊಂಡು ಪ್ರಪಂಚಕ್ಕೆ ಶಾಂತಿಯ ಸಂದೇಶವನ್ನು ನೀಡುತ್ತ ಬಂದಿದೆ. ಇಂತಹ ಅರ್ಥಪೂರ್ಣ ಕಾರ್ಯಕ್ರಮಗಳನ್ನು ಮಾಡುವುದರ ಜೊತೆಗೆ ಯೋಗ್ಯರನ್ನು ಹುಡುಕಿ ಅವರನ್ನು ಗೌರವಿಸುವ ಕಾರ್ಯ ಮಾಡುತ್ತ ಬಂದಿರುವ ಪರಿಷತ್ತಿನ ಬಗ್ಗೆ ಹೆಮ್ಮೆ ವ್ಯಕ್ತ ಪಡಿಸಿದರು.

- Advertisement -

ಕನ್ನಡ ಸಾಹಿತ್ಯ ಆರಂಭವಾಗಿದ್ದೇ ಜೈನ ಬರಹಗಾರರಿಂದ ಎಂದು ಬಣ್ಣಿಸಿದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ ಮಹೇಶ ಜೋಶಿಯವರು `ಜೈನರ ಕಾವ್ಯದ ಶರಣರ ವಚನದ ದಾಸರ ಹಾಡಿನ ಈ ನಾಡುʼ ಎಂಬ ಅಂಬಿಕಾತನಯದತ್ತರ ಕವಿವಾಣಿಯನ್ನು ಪ್ರಾಸಂಗಿಕವಾಗಿ ನೆನೆಪು ಮಾಡಿಕೊಂಡರು. ಕನ್ನಡ ಸಾರಸ್ವತ ಲೋಕಕ್ಕೆ ಜೈನರ ಕೊಡುಗೆ ಅಪಾರ. ೧೦ನೆಯ ಶತಮಾನದಲ್ಲಿಯೇ ಕನ್ನಡ ಸಾಹಿತ್ಯ ಲೋಕವನ್ನು ಉತ್ತುಂಗಕ್ಕೆ ಏರಿಸಿದವರು ಇವರೆ. ಕನ್ನಡ ಸಾಹಿತ್ಯ ಪರಿಷತ್ತು ಜೈನರ ಕೊಡುಗೆಗಳನ್ನು ನಿತ್ಯವೂ ಸ್ಮರಿಸಿಕೊಳ್ಳಲಾಗುವುದು. ಪರಿಷತ್ತಿನ ಮುಂಭಾಗದಲ್ಲಿ ಇರುವ ಪಂಪ ಮಹಾಕವಿ ರಸ್ತೆಯಲ್ಲಿ ಪಂಪನ  ಪುತ್ಥಳಿ ಇರಲಿಲ್ಲ. ಅದಕ್ಕೆ ಪರಿಷತ್ತು ಪಂಪನ ಪುತ್ಥಳಿಯನ್ನು ಸ್ಥಾಪಿಸಿ ಅವರ ಜೊತೆ  ʻಮನುಷ್ಯ ಜಾತಿ ತಾನೊಂದೆ ವಲಂʼ ಎಂಬ ವಿಶ್ವ ಮಾನವ ಸಂದೇಶದ ಧ್ಯೇಯವಾಕ್ಯವನ್ನು ಗೌರವ ಪೂರ್ವಕವಾಗಿ ಪರಿಷತ್ತು ಬಳಸಿಕೊಳ್ಳಲಿದೆ, ಈ ಕಾರ್ಯ ಈಗಾಗಲೇ ಪ್ರಗತಿಯಲ್ಲಿದೆ ಎಂದು ಡಾ. ಜೋಶಿ ಸ್ಪಷ್ಟ ಪಡಿಸಿದರು.

ನಾಡಿನ ಬಹುಶ್ರುತ ವಿದ್ವಾಂಸರಾದ ಪ್ರೊ.ಕೆ.ಇ.ರಾಧಾಕೃಷ್ಣ ಅವರಿಗೆ ಕನ್ನಡ ಸಾಹಿತ್ಯ ಪರಿಷತ್ತು ನೀಡುವ ೨೦೨೩ನೆಯ ಸಾಲಿನ ಚಾವುಂಡರಾಯ ಪ್ರಶಸ್ತಿಯನ್ನು ಪ್ರದಾನಮಾಡಿ ಮಾತನಾಡಿದ ಡಾ. ಮಹೇಶ ಜೋಶಿ ಅವರು, ಚಾವುಂಡರಾಯ ೧೦ನೇ ಶತಮಾನಕ್ಕೆ ಸೇರಿದ ಜೈನ ಕವಿ ಮತ್ತು ಮಹಾಯೋಧ.

ಕನ್ನಡ ಜೈನ ಸಾಹಿತ್ಯ ರಚನೆಕಾರನಾಗಿ, ಅನೇಕ ಕವಿಗಳಿಗೆ ಪೋಷಕನಾಗಿ, ದಾನ-ಧರ್ಮಗಳಿಗೆ ಹೆಸರುವಾಸಿಯಾಗಿ ಮೆರೆದವನು. ‘ಚಾವುಂಡರಾಯ ಪುರಾಣ’ ಎಂದು ವಾಡಿಕೆಯಾಗಿ ಹೇಳುವ ‘ತ್ರಿಷಷ್ಟಿ ಲಕ್ಷಣ ಮಹಾ ಪುರಾಣ’ ಎಂಬ ಮಹಾಪುರಾಣವನ್ನು ರಚಿಸಿದವನು. ಕನ್ನಡ ನಾಡಿನ ಪ್ರಸಿದ್ಧ ಜೈನಕ್ಷೇತ್ರ ಶ್ರವಣಬೆಳಗೊಳದಲ್ಲಿ ಭಕ್ತಿ, ಜ್ಞಾನ, ವೈರಾಗ್ಯಮೂರ್ತಿ ‘ಗೊಮ್ಮಟೇಶ್ವರ’ ಎಂದು ಕರೆಯುವ ಬಾಹುಬಲಿ ಸ್ವಾಮಿಯ ಮಹೋನ್ನತ ಶಿಲಾಮೂರ್ತಿಯನ್ನು ಪ್ರತಿಷ್ಠಾಪಿಸಿದ ಧೀಮಂತ ವ್ಯಕ್ತಿ ಚಾವುಂಡರಾಯ. ಚಾವುಂಡರಾಯನು ಸ್ವತಃ ಕವಿಯಾಗಿದ್ದುದಲ್ಲದೆ, ಕವಿಜನ ಪೋಷಕನೂ ಆಗಿದ್ದನು. ರನ್ನ ಮಹಾಕವಿಯು ಅವರ ಆಶ್ರಯದಲ್ಲಿ ಇದ್ದು, ಅಜಿತಸೇನಾಚಾರ್ಯರ ಬಳಿ ವಿದ್ಯಾಭ್ಯಾಸ ಮಾಡಿದ್ದನು. ಅದರ ಪರಿಣಾಮವೇ ರನ್ನ ತನ್ನ ‘ಅಜಿತ ಪುರಾಣ’ದಲ್ಲಿ ಚಾವುಂಡರಾಯನ ಶೌರ್ಯ, ಔದಾರ್ಯಗಳನ್ನು ವರ್ಣಿಸಿದ್ದಾನೆ ಎಂದು ನೆನಪಿಸಿಕೊಂಡರು.

- Advertisement -

ಮುಖ್ಯ ಅತಿಥಿಗಳಾಗಿ ಭಾಗವಹಿದ ಕರ್ನಾಟಕ ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿಗಳಾದ ನ್ಯಾಯಮೂರ್ತಿ ಎಂ.ಐ. ಅರುಣ್ ಅವರು ಮಾತನಾಡಿ, ಕನ್ನಡ ಸಾಹಿತ್ಯಕ್ಕೆ ಜೈನರ ಕೊಡುಗೆ ಅರ್ಥಪೂರ್ಣವಾಗಿದೆ. ಪಂಪ ರನ್ನನ ಕಾಲವನ್ನು ನಮ್ಮ ನಾಡಿನ ಸಾಹಿತ್ಯದ ಸುವರ್ಣಯುಗ ಎಂದು ಕರೆಯುತ್ತಿದ್ದರು. ಪ್ರಪಂಚಕ್ಕೆ ಜೈನ ಮತವು ಏಕ ರೂಪತೆಯ ನಡತೆಯನ್ನು ತೋರಿಸಿಕೊಟ್ಟಿದೆ. ಆದರೆ ನಮ್ಮ ಪಠ್ಯದಲ್ಲಿ ಮಕ್ಕಳಿಗೆ ಇಂಥ ಮಹತ್ವದ ಸಂಗತಿಗಳು ಇಲ್ಲದಿರುವುದು ವಿಷಾದನೀಯ ಎಂದು ಹೇಳಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ಶಿವರಾಜ ತಂಗಡಗಿ ಅವರು ಮಾತನಾಡಿ, ಬೆಂಗಳೂರಿನಲ್ಲಿ ಇಂದು ಶೇ. ೬೦ರಷ್ಟು ಜನರು ಕನ್ನಡ ಬಾರದವರಿದ್ದಾರೆ. ಇನ್ನೂ ಶೇ. ೪೦ ರಷ್ಟು ಜನರಿಗೆ ಕನ್ನಡ ಬಂದರೂ ಬೇರೆ ಭಾಷೆಯನ್ನು ಸೇರಿಸಿಯೇ ಕನ್ನಡವನ್ನು ಮಾತನಾಡುತ್ತಿದಾರೆ.

ನಾವು ಕನ್ನಡ ನಾಡಿನಲ್ಲಿ ಭಾಷೆ ಸಂಸ್ಕೃತಿ, ಕಲೆ, ಸಾಹಿತ್ಯ ಬೆಳೆಸುವ ಕೆಲಸ ಮಾಡಬೇಕಿದೆ. ಸರಕಾರ ನನಗೆ ಕನ್ನಡ ನಾಡಿನ ನೆಲ ಮೂಲವನ್ನು ಉಳಿಸಿ ಬೆಳೆಸುವ ಜವಾಬ್ದಾರಿಯನ್ನು ನೀಡಿದೆ. ಅದನ್ನು ಸಮರ್ಥವಾಗಿ ನಿಭಾಯಿಸುತ್ತೇನೆ ಎಂಬ ಭರವಸೆಯನ್ನು ನೀಡುವ ಜೊತೆಗೆ ಕನ್ನಡ ಸಾಹಿತ್ಯ ಪರಿಷತ್ತಿನ ಚಟುವಟಿಕೆಗಳಿಗೆ ಸರ್ಕಾರ ಎಲ್ಲಾ ರೀತಿಯಲ್ಲಿಯೂ ಸಹಕಾರ ನೀಡುವುದಾಗಿ ತಿಳಿಸಿದರು.

೨೦೨೩ನೆಯ ಸಾಲಿನ ಚಾವುಂಡರಾಯ ಪ್ರಶಸ್ತಿಯನ್ನು ಪಡೆದ  ಬಹುಶ್ರುತ ವಿದ್ವಾಂಸರಾದ ಪ್ರೊ.ಕೆ.ಇ.ರಾಧಾಕೃಷ್ಣ ಅವರು ಮಾತನಾಡಿ, ಭಾಷೆಗೊಂದು ಮನೋಧರ್ಮವಿರುತ್ತದೆ. ಆ ಮನೋಧರ್ಮದ ಮೂಲಕವೇ ಜ್ಞಾನದ ಬೆಳವಣಿಗೆಯಾಗುವುದು, ಜ್ಞಾನಕ್ಕೂ ಜೀವನಕ್ಕೂ ಅವಿನಾಭಾವ ಪವಿತ್ರ ಸಂಬಂಧವಿದೆ. ಈ ಮಧ್ಯೆ ನಮ್ಮ ಮೂಲ ಭಾಷೆ ಸಂಸ್ಕೃತದಲ್ಲಿ ಇದೆಲ್ಲವೂ ಇದೆ ಆದರೆ ಸಾಮಾನ್ಯರಿಂದ ಸಂಸ್ಕೃತವನ್ನು ದೂರ ಮಾಡಿರುವುದು ನಮ್ಮತನವನ್ನು ಅರಿಯಲು ಸಾಧ್ಯವಾಗದೇ ಇರುವುದಕ್ಕೆ ಮೂಲ ಕಾರಣವಾಗಿದೆ. ಶಂಕರ ಭಗವತ್ಪಾದರು ಆತ್ಮ ಎನ್ನುವ ಶಬ್ಧಕ್ಕೆ ಅವರದೇ ರೀತಿಯಲ್ಲಿ ಅದ್ಭುತವಾಗಿ ವಾಖ್ಯಾನ ಮಾಡಿದ್ದರು. ಆದರೆ ಅದರ ತತ್ವಾರ್ಥವನ್ನು ಅರಿತುಕೊಳ್ಳಲು ಜೈನ ಗ್ರಂಥಗಳು  ಸಹಾಯ ಮಾಡುತ್ತವೆ ಎಂದು ಅಭಿಪ್ರಾಯ ಪಟ್ಟರು.

ಕರ್ನಾಟಕ  ಜೈನ್ ಅಸೋಸಿಯೇಶನ್ ಮಾಜಿ ಅಧ್ಯಕ್ಷರಾದ  ಎಸ್. ಜಿತೇಂದ್ರ ಕುಮಾರ, ಪರಿಷತ್ತಿನ ಗೌರವ ಕಾರ್ಯದರ್ಶಿಗಳಾದ ನೇ.ಭ. ರಾಮಲಿಂಗ ಶೆಟ್ಟಿ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕೋಶಾಧ್ಯಕ್ಷರಾದ ಡಾ. ಬಿ.ಎಮ್.ಪಟೇಲ್ ಪಾಂಡು ಅವರು ಸ್ವಾಗತಿಸಿ ಕಾರ್ಯಕ್ರಮವನ್ನು ನಿರೂಪಿಸಿದರು. ಪರಿಷತ್ತಿನ ಗೌರವ ಕಾರ್ಯದರ್ಶಿ ಡಾ. ಪದ್ಮಿನಿ ನಾಗರಾಜು ಅವರು ವಂದಿಸಿದರು.

ಕನ್ನಡ ಸಾಹಿತ್ಯ ಪರಿಷತ್ತು ಆಮೂಲಾಗ್ರ ಬದಲಾಗಿದೆ-  ಡಾ. ಜಿ. ಪರಮೇಶ್ವರ

ಕನ್ನಡ ಸಾಹಿತ್ಯ ಪರಿಷತ್ತನ್ನು ನಾನು ಹಿಂದಿನಿಂದಲೂ ಗಮನಿಸುತ್ತ ಬಂದಿದ್ದೇನೆ. ಹಿಂದೆ ಇದ್ದಂತೆ ಈಗ ಇಲ್ಲ ಸಾಕಷ್ಟು ಬದಲಾವಣೆಗಳು ಕಂಡು ಬರುತ್ತಿವೆ. ಪರಿಷತ್ತಿನಲ್ಲಿ ಆಮೂಲಾಗ್ರ ಬದಲಾವಣೆ ಬಂದಿದೆ,ಕನ್ನಡ ನಾಡು ನುಡಿ, ಭಾಷೆ ಸಾಹಿತ್ಯ ಸಂಸ್ಕೃತಿಗಾಗಿ ಕೆಲಸ ಮಾಡುತ್ತ ಬಂದಿರುವ ಪರಿಷತ್ತು ಈಗ ನವ ನವೀನವಾಗಿ ಕಂಗೊಳಿಸುತ್ತಿದೆ. ನಮ್ಮ ಕೆಲಸ ಕಾರ್ಯದಲ್ಲಿಯೂ ಅರ್ಥಪೂರ್ಣತೆಯನ್ನು ತೋರಿಸುತ್ತಿರುವುದು ಗಮನಾರ್ಹವಾಗಿದೆ. ಪರಿಷತ್ತಿನ ಜವಾಬ್ದಾರಿ ವಹಿಸಿದ ನಾಡೋಜ ಡಾ. ಮಹೇಶ ಜೋಶಿ ಅವರ ಸೇವಾತತ್ಪರತೆ ಇಲ್ಲಿ ಎದ್ದು ಕಾಣುತ್ತದೆ. ಪರಿಷತ್ತಿನಲ್ಲಿ ಸಾಕಷ್ಟು ಕೆಲಸಗಳು ಆಗುತ್ತಿವೆ. ಕನ್ನಡವನ್ನು ಉಳಿಸಿ ಬೆಳಸುವುದಕ್ಕೆ ತನ್ನನ್ನು ತೊಡಗಿಸಿಕೊಂಡ ಪರಿಷತ್ತು ಹೊಸ ನಾವೀನ್ಯಗಳನ್ನು ಹಾಗೂ ಆಧುನಿಕ ವ್ಯವಸ್ಥೆಗಳನ್ನು ಅಳವಡಿಸಿಕೊಂಡಿರುವುದು ಸ್ವಾಗತಾರ್ಹ ಎಂದು ಗೃಹ ಸಚಿವರಾದ ಡಾ. ಜಿ. ಪರಮೇಶ್ವರ ಪರಿಷತ್ತಿನ ಕುರಿತು ಸಂತಸ ವ್ಯಕ್ತ ಪಡಿಸಿದರು.

- Advertisement -
- Advertisement -

Latest News

ಸಾವಿಲ್ಲದ ಶರಣರು -ಮಹಾ ದಾಸೋಹಿ ಎಲೆ ಮಲ್ಲಪ್ಪ ಶೆಟ್ಟರು

ಎಲೆ ಮಲ್ಲಪ್ಪ ಶೆಟ್ಟರ ಅವರ ಹಿರಿಯರು ಚಿಕ್ಕಮಗಳೂರಿನ ಹತ್ತಿರ ನಂದಿಹಳ್ಳಿ ಗ್ರಾಮದವರು. ರಾಜ ಮಹಾರಾಜರಿಗೆ ಸಮಾರಂಭ ಗಳಲ್ಲಿ ವೀಳ್ಯವನ್ನು ಸರಬರಾಜು ಮಾಡುವ ಕಾಯಕದವರು. ಶರಣ ಸಂಸ್ಕೃತಿಯ...
- Advertisement -

More Articles Like This

- Advertisement -
close
error: Content is protected !!
Join WhatsApp Group