spot_img
spot_img

ಜಾಲಿಕಟ್ಟೆ ಬಸವೇಶ್ವರ ದೇವಾಲಯ

Must Read

- Advertisement -

ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಜಾಲಿಕಟ್ಟೆ ಸವದತ್ತಿ ತಾಲೂಕಾ ಕ್ಷೇತ್ರದಿಂದ ೨೮ ಕಿ.ಮೀ., ಯರಗಟ್ಟಿ ಹಾಗೂ ಮುನವಳ್ಳಿಗಳಿಂದ ೧೨ ಕಿ.ಮೀ.ಅಂತರದಲ್ಲಿರುವ ಪುಟ್ಟ ಗ್ರಾಮ. ಈ ಗ್ರಾಮದ ಬಸವೇಶ್ವರ ದೇವಾಲಯ ಪ್ರಸಿದ್ಧವಾಗಿದ್ದು ಗ್ರಾಮದ ಅಷ್ಟೇ ಅಲ್ಲ ತಾಲೂಕಿನ ಜಿಲ್ಲೆಯ ಅನೇಕ ಸ್ಥಳಗಳ ಭಕ್ತಜನರ ಆರಾಧ್ಯ ದೈವ ಕೂಡ. ಶ್ರಾವಣ ಮಾಸದ ಕೊನೆಯ ಸೋಮವಾರ ಇಲ್ಲಿ ಜಾತ್ರೆ ಜರುಗುತ್ತದೆ.

ಕಪ್ಪು ಕಲ್ಲಿನಲ್ಲಿ ಸುಂದರವಾದ ಕೆತ್ತನೆಯುಳ್ಳ ಎತ್ತರವಾದ ಕುಳಿತ ನಂದಿಯೇ ಶ್ರೀ ಬಸವೇಶ್ವರ. ಇದು ಹಲವು ದೇವಾಲಯಗಳನ್ನು ಹೊಂದಿದ ಸಮುಚ್ಚಯ. ಇಲ್ಲಿ ಶಿವಪಾರ್ವತಿ ದೇವಾಲಯ, ನೀಲಾಂಬಿಕಾ ದೇವಾಲಯಗಳು, ಬೆಟ್ಟದಲ್ಲಿ ಒಂದ ನೂರಾ ಹದಿನೇಳು ಬೆಟ್ಟಗಳನ್ನೇರಿ ಬಂದರೆ ಕಾಣಸಿಗುವ “ಕೂಗುವ ಬಸವಣ್ಣ” ಎಂಬ ಪುಟ್ಟ ದೇವಾಲಯ, ಸಮುದಾಯ ಭವನ, ನೀರಿನ ವ್ಯವಸ್ಥೆಗಾಗಿ ಬಾವಿ, ಬೆಟ್ಟದಲ್ಲಿ ನೀರಿನ ಸಂಗ್ರಹಕ್ಕಾಗಿ ಒಂದು ಚೆಕ್ ಡ್ಯಾಂ ಇತ್ಯಾದಿ ಹೊಂದಿದೆ. 

ದೇವಾಲಯದವರೆಗೂ ಬರಲು ವ್ಯವಸ್ಥಿತವಾದ ರಸ್ತೆ ಇದ್ದು ಬಸ್ ಸಂಚಾರ ಮಾತ್ರ ಕೊರತೆಯಿದೆ, ಇನ್ನುಳಿದಂತೆ ಖಾಸಗಿ ವಾಹನಗಳು ಸಾಕಷ್ಟು ಸಂಚರಿಸುತ್ತವೆ.ಈ ದೇವಾಲಯ ಕುರಿತಂತೆ ಶರಣರ ಕಾಲದ ಕಥೆಯೊಂದು ಜನರ ಬಾಯಲ್ಲಿ ರೂಢಿಯಲ್ಲಿದೆ.

- Advertisement -

ಕಲ್ಯಾಣ ಕ್ರಾಂತಿಯ ನಂತರ ಶರಣರ ದಂಡು ದೊರೆ ಬಿಜ್ಜಳನ ಉಪಟಳ ತಾಳದೇ ರಾಜ್ಯದ ಮೂಲೆ ಮೂಲೆಯಲ್ಲಿ ಸಂಚರಿಸಿದ ಘಟನೆ ಜಾಲಿಕಟ್ಟೆಗೂ ಸಂಬಂಧ ಕಲ್ಪಿಸಿದೆ. ಮಡಿವಾಳ ಮಾಚಯ್ಯ ಹಾಗೂ ಇನ್ನಿತರ ಶರಣರ ದಂಡು ಇಲ್ಲಿಗೆ ಸಮೀಪದ ಸ್ಥಳಗಳಾದ ಗೊಡಚಿ, ಕಟಕೋಳ, ಚುಂಚನೂರ ಮಾರ್ಗವಾಗಿ ಜಾಲಿಕಟ್ಟೆಯ ಬೆಟ್ಟ ಪ್ರದೇಶದಲ್ಲಿ ತಂಗಿದ್ದರಂತೆ. ಇಲ್ಲಿರುವ ಕಡಿದಾದ ಬೆಟ್ಟ ಅಲ್ಲಿ ಬೆಳೆದು ನಿಂತ ಸಸ್ಯ ಸಂಕುಲ, ಸದಾ ಹರಿಯುವ ನೀರಿನ ಝರಿ, ಶರಣರ ಇರುವಿಕೆಗೆ ಸೂಕ್ತವಾಗಿರಲು, ಮಾಚಿದೇವ(ಮಾಚಯ್ಯ)ನ ಅನುಚರರೆಲ್ಲ ಕೆಲವು ಕಾಲ ಇಲ್ಲಿ ತಂಗಿದ್ದರೆಂದು ಪ್ರತೀತಿ.

ಇಂಥ ಸಂದರ್ಭ ಈ ಸ್ಥಳದಲ್ಲಿ “ಬಸವೇಶ್ವರ”ರ ನೆನಪಲ್ಲಿ “ನಂದಿ”ಯನ್ನು ಪೂಜಿಸಿದರು. ಎಂಬುದು ಕೂಡ. ಅಷ್ಟೇ ಅಲ್ಲ ಇಲ್ಲಿರುವ ಬೆಟ್ಟದಲ್ಲಿ ಬೆಳಗಿನ ಜಾವ “ನಂದಿ” ಯೊಂದು ಜೋರಾಗಿ ಕೂಗತೊಡಗಿತಂತೆ. ಯಾವತ್ತೂ ಈ ರೀತಿ ಕೂಗದ ನಂದಿ ಈಗ ಕೂಗಲು ಕಾರಣ ಏನು ಎಂದು ಆ ಬೆಟ್ಟವನ್ನೇರಿ ನಂದಿ ಯಾವ ದಿಕ್ಕಿನತ್ತ ಮುಖ ಮಾಡಿ ಕೂಗುತ್ತಿತ್ತೋ ಆ ದಿಕ್ಕಿನತ್ತ ದೃಷ್ಟಿ ಹಾಯಿಸಲು ಅದು ಇಲ್ಲಿಂದ ಸುಮಾರು ೨೫ ಕಿ.ಮೀ.ಅಂತರದ “ಚುಂಚನೂರ” ಗ್ರಾಮದ ಸ್ಥಳದಿಂದ “ಕೆಂಧೂಳಿ” ಕಾಣತೊಡಗಿತು. ಆ ಕೆಂಧೂಳಿ ಬಿಜ್ಜಳ ಅರಸರ ಸೈನಿಕರ ಕುದುರೆಗಳ ಕಾಲ್ತುಳಿತದಿಂದ ಎದ್ದು  ಚಿಮ್ಮಿದ್ದು ಕಂಡ ಶರಣರು ದೇವತಾ ಸ್ವರೂಪಿ ಬಸವಣ್ಣನೇ ನಮಗೆ ಎಚ್ಚರಿಸಿದನೆಂದು ಆ ನಂದಿ ಕೂಗಿದ ಸ್ಥಳದಲ್ಲಿ “ಕೂಗುವ ಬಸವಣ್ಣ” ದೇವಾಲಯ ಪ್ರತಿಷ್ಠಾಪನೆ ಮಾಡಿದರೆಂದು ಕೂಡ ಹೇಳುವರು.

- Advertisement -

 ಇದನ್ನು ಕಂಡ ಶರಣರು ಈ ಸ್ಥಳದಿಂದ ತಲ್ಲೂರ ಮಾರ್ಗವಾಗಿ ಕಾರೀಮನಿ, ಮುರಗೋಡ, ಬೈಲಹೊಂಗಲ ಮಾರ್ಗವಾಗಿ “ಉಳವಿ” ಕ್ಷೇತ್ರದತ್ತ ಪಯಣಿಸಿದರು ಎಂಬ ಬಗ್ಗೆ ಮಾಹಿತಿ ಹೇಳುವರು. ಇದನ್ನು ಪುಷ್ಟೀಕರಿಸುವಂತೆ ಮಾಚಯ್ಯನವರ ಸಮಾಧಿ ಸ್ಥಳ  ಎಂದು ಕರೆಯಲಾಗುವ ಕಾರೀಮನಿ ಎಂಬ ಊರು ಕೂಡ ಇಲ್ಲಿಂದ ಹತ್ತಿರವಿದೆ.

ಶರಣರು ವಾಸಿಸಿದ್ದ ಸ್ಥಳವಾದ “ಜಾಲಿಕಟ್ಟೆ” ಇಲ್ಲಿನ ಬಸವೇಶ್ವರ ದೇವಾಲಯ ನಿಜವಾಗಿ ಪವಾಡ ಪುರುಷ “ಕೂಗು ಬಸವಣ್ಣ”ನಿಂದ ಗ್ರಾಮದ ಆರಾಧ್ಯ ದೈವವಾಗಿಹುದು.

ಈ ದೇವಾಲಯ ಕುರಿತು ಇನ್ನೂ ಎರಡು ದೃಷ್ಟಾಂತಗಳನ್ನು ಹಿರಿಯ ತಲೆಮಾರಿನ ಮುದುಕರು(ವಯೋವೃದ್ಧರು) ಹೇಳುತ್ತಾರೆ. ಇಲ್ಲಿ ಬೇಡರ ಸಮುದಾಯ ಬೆಟ್ಟದಲ್ಲಿ ವಾಸಿಸುತ್ತಿತ್ತಂತೆ, ದಾರಿಹೋಕರ ಹಣ ಸುಲಿಗೆ, ಕಳ್ಳತನ ಇವರ ವೃತ್ತಿ. ಹಾಗೆಯೇ ಬೆಟ್ಟದಲ್ಲಿ ಪ್ರಾಣಿ ಬೇಟೆ ಇವರ ದೈನಂದಿನ ಆಹಾರ. ಇದನ್ನು ಪುಷ್ಟೀಕರಿಸುವಂತೆ ಸುಬ್ಬ, ರಾಮ, ಎಂಬ ಇಬ್ಬರು ಈ ಸ್ಥಳದಲ್ಲಿ ಇದ್ದರಂತೆ. 

ಸೋಮ ಎಂಬ ಬೇಡರ ನಾಯಕ ನೆಲೆಸಿದ ಸ್ಥಳ ಸೋಮಾಪುರ. ಸುಬ್ಬ ಎಂಬಾತ ನೆಲೆಸಿದ ಸ್ಥಳ ಸುಬ್ಬಾಪುರ,ಇಂದಿಗೂ ಇರುವುದು. ರಾಮಾಪುರ,  ಸೋಮಾಪುರ ಎಂಬ ಹೆಸರಿನಿಂದ “ಜಾಲಿಕಟ್ಟೆ” ಸ್ಥಳದಿಂದ ಹತ್ತಾರು ಕಿ.ಮೀ. ಅಂತರದಲ್ಲಿವೆ. ಇಂಥ ಬೇಡರು ತಾವು ಬೇಟೆಯಾಡಿದ್ದು “ಪ್ರಾಣಿ”ಯೊಂದನ್ನು ಅದು ಕೂಡ ತಮ್ಮ ಗದ್ದೆಗಳನ್ನು ಹಾಳು ಮಾಡಿ ತಮಗೆ ಉಪಟಳ ನೀಡುತ್ತಿತ್ತಂತೆ. ಅದನ್ನು ಈ ಬೆಟ್ಟದಲ್ಲಿ ಗಿಡಗಂಟೆಗಳ ಮಧ್ಯದಲ್ಲಿ ಸುಟ್ಟು ಹೊರಟು ಹೋದರು. ಕೆಲವು ದಿನಗಳ ನಂತರ ಇದೇ ಮಾರ್ಗದಲ್ಲಿ ಓರ್ವ ನಿರಪರಾಧಿ ವ್ಯಕ್ತಿ ಮಧ್ಯಮ ವರ್ಗದ ಸಂಭಾವಿತರು ಮುಂಬೈ ಕೋರ್ಟಲ್ಲಿ ತಮ್ಮ ಮೇಲಿನ ಮೊಕದ್ದಮೆ ಎದುರಿಸಲು ಕಾಲ್ನಡಿಗೆಯಿಂದ ಹೊರಟು ಬಂದು ಈ ಬೆಟ್ಟದಲ್ಲಿ ಸಂಜೆ ಹೊತ್ತಿಗೆ ವಿರಮಿಸಿದರು. ಆಗ ಅವರ ಕಣ್ಣಿಗೆ ಸುಟ್ಟಿರುವ ಬೂದಿಯಲ್ಲಿ “ಪ್ರಾಣಿ”ಯ ಬುರುಡೆ, ಎಲಬುಗಳು ಗೋಚರಿಸಲು “ಎಂಥ ಕ್ರೂರ ಜನ ಅಮಾಯಕ ಪ್ರಾಣಿ ಸುಟ್ಟು ಹೋಗಿರುವರಲ್ಲ”

“ದೇವರೇ, ಈ ಅಮಾಯಕ ಪ್ರಾಣಿಯಂತೆ ಇನ್ನಾವ ಪ್ರಾಣಿಗೂ ಇಂಥ ಘೋರ ಸಾವು ಈ ಸ್ಥಳದಲ್ಲಿ  ಸಂಭವಿಸದಿರಲಿ.. ನಾನೀಗ ಮುಂಬೈ ಕೋರ್ಟಿಗೆ ಹೊರಟಿರುವೆ. ನಾನು ಮಾಡದ ತಪ್ಪಿಗಾಗಿ ನನ್ನ ಮೇಲೆ ಆಪಾದನೆ ಬಂದಿದೆ. ನಿನ್ನ ಅನುಗ್ರಹದಿಂದ ನನ್ನ ಮೇಲಿನ 

ಆಪಾದನೆಯಿಂದ ಮುಕ್ತನಾಗಿ, ನನ್ನ ಪ್ರಾಮಾಣಿಕತೆಗೆ ಜಯ ದೊರೆತು ಆರೋಪದಿಂದ ಮುಕ್ತನಾಗಿ ಮರಳಿ ಬಂದರೆ ಈ ಸ್ಥಳದಲ್ಲಿ ದೇವಾಲಯ ನಿರ್ಮಿಸುವೆ” ಎಂದುಕೊಂಡು ಮುಂಬೈಗೆ ತೆರಳಿದರಂತೆ. ಆ ವ್ಯಕ್ತಿ “ನಿರ್ದೋಷಿ” ಎಂದು ಕೋರ್ಟಿನಲ್ಲಿ ತೀರ್ಪು ಹೊರಬಂದು ಸಂತಸದಿಂದ ಮರಳಿದನು

ಆತ ಈ ಸ್ಥಳದಲ್ಲಿ “ನಂದಿ” ವಿಗ್ರಹದ ಬಸವಣ್ಣ ಮೂರ್ತಿ ಪ್ರತಿಷ್ಠಾಪಿಸಿ ದೇವಾಲಯ ನಿರ್ಮಾಣಕ್ಕೆ ಕಾರಣರಾದರು ಎಂದು ಹೇಳುತ್ತಾರೆ. ಆದರೆ ಆ ವ್ಯಕ್ತಿ, ಆತನ ಹೆಸರು, ಆತ ಯಾವ ವೃತ್ತಿ ಮಾಡುತ್ತಿದ್ದ ಇತ್ಯಾದಿ ಯಾರಿಗೂ ಗೊತ್ತಿಲ್ಲ. ಇಂಥ ದೃಷ್ಠಾಂತ ಕೂಡ ಈ ದೇವಾಲಯ ನಿರ್ಮಾಣದ ಹಿಂದಿರುವ ಸಂಗತಿ ಎಂದು ಕೇಳಿಬರುತ್ತದೆ. ಇದು ಬ್ರಿಟಿಷ್ ಆಳ್ವಿಕೆಯ ಕಾಲದ ಘಟನೆ. ಮೊದಲ ದೃಷ್ಠಾಂತ ಬಿಜ್ಜಳ ದೊರೆಯ ಆಳ್ವಿಕೆ. ಶರಣರ ಕ್ರಾಂತಿ ದಿನಗಳಿಗೆ ಸಂಬಂಧ ಕಲ್ಪಿಸಿದರೆ, ನಂತರದ್ದು ಆಧುನಿಕ ಕಾಲದ್ದು.

ಏನೇ ಇರಲಿ ಇಲ್ಲಿನ ನಂದಿ ಅದರ ಎದುರಿಗೆ ಇರುವ ಈಶ್ವರ ಲಿಂಗ, ದೇವಾಲಯ ಆವರಣದಲ್ಲಿರುವ ಶಿವಪಾರ್ವತಿ ದೇವಾಲಯ, ಶಿವಶರಣೆ ನೀಲಾಂಬಿಕಾ ದೇವಾಲಯ, ನೂರಾ ಹದಿನೇಳು ಮೆಟ್ಟಿಲುಗಳನ್ನೇರಿ ಬಂದರೆ ಬೆಟ್ಟದಲ್ಲಿರುವ ಪುಟ್ಟ “ಕೂಗು ಬಸವಣ್ಣನ” ದೇವಾಲಯ, ಸಸ್ಯಸಂಕುಲದಿಂದ ಗಮನ ಸಳೆಯುವ ಬೆಟ್ಟದ ಪ್ರಾಕೃತಿಕ ಸೌಂದರ್ಯ‍್ಯ ಭಕ್ತ ಜನರ ಮನಸೂರೆಗೊಳ್ಳದಿರದು.

ದೇವಾಲಯ ಕೂಡ ಸುಂದರವಾಗಿದ್ದು, ಶಿಖರದವರೆಗೂ ಇಲ್ಲಿ ಶರಣರ ಶಿಲ್ಪಗಳನ್ನು ಸುತ್ತಲೂ ನಿರ್ಮಿಸಲಾಗಿದೆ. ಅವುಗಳಲ್ಲಿ ಪ್ರಮುಖವಾಗಿ ಮಾಳಗಿ ಮಾರಯ್ಯ, ಇಟಗಿ ಭೀಮಾಂಬಿಕಾ, ಅಂಬಿಗರ ಚೌಡಯ್ಯ, ನವಿಲುಗುಂದ ನಾಗಲಿಂಗ ಸ್ವಾಮಿಗಳು, ಹುಬ್ಬಳ್ಳಿಯ ಸಿದ್ಧಾರೂಢರು, ದೋಹರ ಕಕ್ಕಯ್ಯ, ಹಡಪದ ರಾಚಯ್ಯ, ಗಂಗಾಂಬಿಕೆ, ಚನ್ನ ಬಸವಣ್ಣ, ಅಲ್ಲಮ ಪ್ರಭು, ನಾಗನೂರಿನ ಶಿವಬಸವ ಸ್ವಾಮಿಗಳು, ಶಿಶುನಾಳದ ಶರೀಫರು, ಮುರಗೋಡದ ಮಹಾಂತಪ್ಪನವರು, ಬಸವೇಶ್ವರ, ಗರಗದ ಮಡಿವಾಳಜ್ಜ, ಗುರುಗೋವಿಂದ ಭಟ್ಟರು,ಮಡಿವಾಳ ಮಾಚಯ್ಯ ಅಕ್ಕಮಹಾದೇವಿ, ಹೀಗೆ ಹಲವಾರು ಮೂರ್ತಿಗಳನ್ನು ಶಿಖರಗೋಪುರದ ಸುತ್ತಮುತ್ತಲೂ ನಿರ್ಮಿಸಲಾಗಿದೆ. ದೇವಾಲಯಕ್ಕೆ ಹೊಂದಿಕೊಂಡಂತೆ ಕಲ್ಯಾಣ ಮಂಟಪವಿದ್ದು,ವಿವಾಹಗಳು, ಸರ್ಕಾರದ ವಿವಿಧ ಯೋಜನೆಗಳ ಕಾರ್ಯಕ್ರಮಗಳು, ಈ ಕಲ್ಯಾಣ ಮಂಟಪದಲ್ಲಿ ಜರುಗುತ್ತವೆ.ನೀರಿನ ಕೂಡ ಇಲ್ಲಿ ಅನುಕೂಲಕರವಾಗಿದೆ.

ಈ ದೇವಾಲಯಕ್ಕೆ “ಶ್ರೀ ಬಸವೇಶ್ವರ ದೇವಸ್ಥಾನ ಸಮಿತಿ” ಜಾಲಿಕಟ್ಟೆ-ಜೀವಾಪುರ ಎಂದು ಸಮಿತಿ ೫-೧೨-೧೯೯೨ ರಿಂದ ಕಾರ‍್ಯ ನಿರ್ವಹಿಸುತ್ತಿದ್ದು. ಅದಕ್ಕಾಗಿ ಕಾರ‍್ಯಾಲಯ ದೇವಸ್ಥಾನದ ಆವರಣದಲ್ಲಿ ಇರುವದು. ದೇವಾಲಯ ಅರ್ಚಕರ ಮೂಲಕ ಪಂಚಾಮೃತ ಅಭಿಷೇಕ,ದೀಡ ನಮಸ್ಕಾರ, ಜವುಳ ಇಳಿಸುವದು. ೨೫ರೂ. ಸಾಮಾನ್ಯ 

ಅಭಿಷೇಕದಿಂದ ಹಿಡಿದು ೫೫೫ರೂ.ಗಳ ನಿರಂತರ ಅಭಿಷೇಕ(ವರ್ಷಕ್ಕೆ ಒಂದು ಸಲ ಆಜೀವ) ಸೌಲಭ್ಯ ಅರ್ಚನೆಗಳು ಇಲ್ಲಿ ನಿತ್ಯವೂ ದೇವರಿಗೆ ನೆರವೇರುತ್ತಿವೆ. ಪ್ರತಿ ಅಮವಾಸ್ಯೆಯಂದು ಭಕ್ತ ಜನರಿಂದ ಅನ್ನ ಸಂತರ್ಪಣೆ ನಡೆಯುವದು, ಶಿವರಾತ್ರಿ ಸಂದರ್ಭದಲ್ಲಿ ಏಳು ದಿನಗಳ ಕಾಲ ಹಗಲು-ರಾತ್ರಿ “ಓಂ ನಮಃ ಶಿವಾಯ” ಮಂತ್ರೋಚ್ಚಾರಣೆ ಜಾಲಿಕಟ್ಟೆ ಗ್ರಾಮಸ್ಥರಿಂದ ನಡೆಯುವದು, ಶಿವರಾತ್ರಿ ಅಮವಾಸ್ಯೆಯಂದು  ಮಂತ್ರೋಚ್ಚಾರಣೆ ಕೊನೆಗೊಳಿಸಿ ಪಲ್ಲಕ್ಕಿ ಉತ್ಸವ ನೆರವೇರಿಸಿ ಅನ್ನ ಸಂತರ್ಪಣೆ ಮಾಡಿಸುವ ಮೂಲಕ ಶಿವರಾತ್ರಿ ಆಚರಣೆ ಜರುಗುತ್ತದೆ. 

ಶ್ರಾವಣ ಮಾಸದಲ್ಲಿ ಪ್ರತಿ ಸೋಮವಾರ ಸದ್ಭಕ್ತರಿಂದ ಅನ್ನ ಸಂತರ್ಪಣೆ ನೆರವೇರುವದು, ಶ್ರಾವಣ ಮಾಸದ ಕೊನೆಯ ಸೋಮವಾರದಂದು ಸಾಯಂಕಾಲದ ಸಮಯದಲ್ಲಿ ರಥೋತ್ಸವವು ವಿಜೃಂಭಣೆಯಿಂದ ನಡೆಯುತ್ತದೆ.


ವೈ. ಬಿ. ಕಡಕೋಳ

- Advertisement -
- Advertisement -

Latest News

ಮನುಷ್ಯನಿಗೆ ಹಣ, ಆಸ್ತಿ ಬೇಕಾಗಿಲ್ಲ, ಬದುಕುವ ಛಲ ಇರಬೇಕು – ಬಸವರಾಜ ಮಡಿವಾಳ

ಮೂಡಲಗಿ: ಪಟ್ಟಣದ ಪತ್ರಿಕಾ ಕಾರ್ಯಾಲಯದಲ್ಲಿ ಮಡಿವಾಳ ಸಮಾಜ ಬಾಂಧವರಿಂದ ಎಸ್ ಎಸ್ ಎಲ್ ಸಿ ಹಾಗೂ ಪಿ ಯು ಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ...
- Advertisement -

More Articles Like This

- Advertisement -
close
error: Content is protected !!
Join WhatsApp Group