ಹೆಮ್ಮೆಯ ಕರುನಾಡು
ಕರುನಾಡು ಕರುನಾಡು
ಹೆಮ್ಮೆಯ ಸಿರಿನಾಡು
ಗಿರಿ ಗಂಧದ ಹಸಿರುಸಿರಲಿ
ಮೆರೆಯುವ ಸಿರಿನಾಡು //ಪ//
ನದಿ ಪರ್ವತ ಝರಿ ತೊರೆಗಳು ಹರಿಯುವಾ
ಸುಂದರ ಬೆಟ್ಟ-ಗುಡ್ಡಗಳ ಎಲ್ಲೆಲ್ಲೂ ಹಸಿರು
ಹೊತ್ತು ಮೆರೆಯುವ ಗಂಧದಾ ನಾಡು
ಉಸಿರ ನೀಡುವಾ ನಾಡಿದು ನಮ್ಮದು//
ಕೃಷ್ಣದೇವರಾಯ ಪುಲಿಕೇಶಿ ವಿಷ್ಣುವರ್ಧನ
ಮಯೂರರಂತ ಶೂರ ಧೀರರಾಳಿದ ನಾಡು
ಸಂಪದ್ಭರಿತ ಮುತ್ತುರತ್ನ ಅಳೆದ ಸಿರಿನಾಡು
ಯುಗ ಯುಗದಲ್ಲೂ ಮೆರೆದ ಕನ್ನಡ ನಾಡು//
ಶ್ರೀಗಂಧ ತೇಗು ಹೊನ್ನೆ ಬೀಟೆ
ನೀಲಗಿರಿ ಬೆಟ್ಟಗಳ ಪರಿಮಳ ಹರಡುತ
ಎಲ್ಲರ ಕೈಬೀಸಿ ಕರೆಯುವ ಬೆಡಗಿನ ಸೊಬಗಿನ
ಸುಂದರ ಕರುನಾಡಿದು ನಮ್ಮದು ಸಿರಿನಾಡು//
ನುಡಿ ಚೆಂದ ,ನಡೆ ಚಂದ ಮುತ್ತುಮಣಿ
ಹವಳದಂತಾ ಕನ್ನಡ ಅಕ್ಷರಗಳು ಚಂದವಾ,
ಹಾಡಿದರೆ ಸಂಗೀತ ,ಹೇಳಿದರೆ ಆಧ್ಯಾತ್ಮ
ಹರಡುವುದು ಕನ್ನಡದ ಸವಿ ಕಂಪನು ಎಲ್ಲೆಲ್ಲೂ//
ವೀರರಾಣಿ ಚೆನ್ನಮ್ಮ ಶೂರ ರಾಯಣ್ಣ
ಒನಕೆ ಓಬವ್ವ ಕರಾವಳಿ ಕೇಸರಿ ಅಬ್ಬಕ್ಕ
ಶಾಂತಲಾ ಶಕುಂತಲಾ ಗಾನಕೋಗಿಲೆಗಳ
ಹೆತ್ತು ಹೊತ್ತ ಪುಣ್ಯಭೂಮಿಯಿದು ನಮ್ಮ ಕರುನಾಡು//
ಡಾ ಅನ್ನಪೂರ್ಣ ಹಿರೇಮಠ ಶಿಕ್ಷಕಿ ಬೆಳಗಾವಿ