spot_img
spot_img

ಕಾವೇರಿ ತೀರದ ಕಪ್ಪಡಿ ಕ್ಷೇತ್ರ ದರ್ಶನ-ಜಾತ್ರೋತ್ಸವ

Must Read

- Advertisement -

ಮೈಸೂರು ಜಿಲ್ಲೆಯ ಈಗ ಸಾಲಿಗ್ರಾಮ ತಾಲ್ಲೂಕಿಗೆ ಸೇರಿರುವ ಮಿರ್ಲೆ ಗ್ರಾಮದಲ್ಲಿ ಸುತ್ತಲ ಒಂಬತ್ತೂರಿನ ಗ್ರಾಮಗಳು ಸೇರಿ ಆಚರಿಸುವ ಹುಣಸಮ್ಮನ ಹಬ್ಬ ಮತ್ತು ಜಾತ್ರೆ ವೈಶಿಷ್ಟ್ಯಪೂರ್ಣವಾಗಿದೆ. ಮಹಾಶಿವರಾತ್ರಿ ಕಳೆದು ಬರುವ 2ನೇ ಶುಕ್ರವಾರ ಮತ್ತು ಶನಿವಾರ ಸುತ್ತಲ ಒಂಬತ್ತೂರಿನಲ್ಲಿ ಈ ಹಬ್ಬ ಆಚರಿಸಲಾಗುತ್ತದೆ. ನಾಟನಹಳ್ಳಿ, ಶಾಬಾಳ್, ಹಳೆ ಮಿರ್ಲೆ, ನರಚನಹಳ್ಳಿ, ಮಿರ್ಲೆ, ಬೀಚನಹಳ್ಳಿಯ ಆರು ಸಿಡಿಗಳು, ಹನುಮನಹಳ್ಳಿ, ಕೋಡಿಹಳ್ಳಿ ಮಾಳನಾಯಕನಹಳ್ಳಿಯ ಮೂರು ತೇರುಗಳು ಶುಕ್ರವಾರ ರಾತ್ರಿ ಮಿರ್ಲೆಗೆ ಬಂದು ನಿಲ್ಲುತ್ತವೆ. ಮಾರನೇ ದಿನ  ಶನಿವಾರ ಸಂಜೆ ಆರರ ಹೊತ್ತಿಗೆ ಇವು ಒಂದರ ಹಿಂದೆ ಒಂದರಂತೆ ಮಿರ್ಲೆಯ ಹುಣಸಮ್ಮ ದೇವಾಲಯವನ್ನು ಮೂರು ಸುತ್ತು ಸುತ್ತಿ ಹಿಂತಿರುಗುವ ಜಾತ್ರೆಗೆ ಸಾವಿರಾರು ಜನ ಸೇರುತ್ತಾರೆ.

ನಮ್ಮ ಅಕ್ಕ ಬಾವನವರು ಈ ವರ್ಷ ನಾಟನಹಳ್ಳಿ ಗ್ರಾಮದ ಲಕ್ಷ್ಮಿದೇವಿ ದೇವತೆಗೆ ಪೂಜೆ ಅಭಿಷೇಕ ಏರ್ಪಡಿಸಿ ನಾವು ಹೊರಟ್ಟಿದ್ದವು. ನನ್ನ ಪತ್ನಿಯ ಊರು ಕೂಡ ಇದೇ ಆಗಿತ್ತಾಗಿ ನಾವು ಶುಕ್ರವಾರ ಬೆಳಿಗ್ಗೆ ಆರಕ್ಕೆ ಎದ್ದು ಸ್ನಾನ ಮಾಡಿ ಹಾಸನದಿಂದ ಹೊಳೆನರಸೀಪುರಕ್ಕೆ ಹೋಗಿ ಅಲ್ಲಿ ತಿಂಡಿ ತಿಂದೆವು.  ಸಾಲಿಗ್ರಾಮ  ಬಸ್ ಹಿಡಿದು ಅಲ್ಲಿಂದ ಮಿರ್ಲೆ ಮಾರ್ಗ ಕೆ.ಆರ್.ನಗರಕ್ಕೆ ಹೋಗುವ ಬಸ್ ಹತ್ತಿ  ನಾಟನಹಳ್ಳಿಯಲ್ಲಿ ಇಳಿಯುವಷ್ಟರಲ್ಲಿ ಹನ್ನೊಂದಾಗಿತ್ತು. ಅಭಿಷೇಕದ ಸಿದ್ಧತೆ ನಡೆದಿತ್ತು. ನಾನು ಹಾಗೇ ಊರನ್ನು ಒಂದು ರೌಂಡ್ ಹಾಕಿ ಬಂದೆ. ನಾಟನಹಳ್ಳಿ ಗ್ರಾಮಕ್ಕೆ ಶಾಬಾಳ್ ಎಂಬ  ಗ್ರಾಮವು ಸೇರಿಕೊಂಡಿದೆ. ಸಾಲಿಗ್ರಾಮ ಮಿರ್ಲೆ ರಸ್ತೆ ನಾಟನಹಳ್ಳಿಯನ್ನು ಸೀಳಿಕೊಂಡು ಹೋಗಿದೆ. ಅಂತೆಯೇ ಊರಿನಲ್ಲಿ ಸೀಳು ನಾಲೆ  ಹರಿದುಬಂದಿದೆ. ಭತ್ತ ಕಬ್ಬು ಬೆಳೆಯುವ ಇದು ಸಮೃದ್ಧಿ ತಾಣ. ನಮ್ಮ  ಅಕ್ಕ ಕಾಂತಾಮಣಿಯ ಮದುವೆ ಇಲ್ಲಿಯ  ಪಾಪಣ್ಣಶೆಟ್ಟರೊಂದಿಗೆ ನಡೆದು 45 ವರ್ಷ ಕಳೆದಿವೆ. ಆಗೆಲ್ಲಾ ಇಲ್ಲಿ ನಡೆಯುತ್ತಿದ್ದ ಹುಣಸಮ್ಮನ ಜಾತ್ರೆಗೆ ಬರುತ್ತಿದ್ದೆ. ಜಾತ್ರೆ ಕುರಿತ್ತಾಗಿ  ಲೇಖನ ಕೂಡ ಬರೆದಿದ್ದು ಅದು ನನ್ನ ಸಂಗಮ ಕೃತಿಯಲ್ಲಿದೆ. ಇರಲಿ ಈಗ ನಾವು ಹೋದ ವೇಳೆ ರಸ್ತೆ ಬದಿ ಸಿಡಿ ಕಟ್ಟುತ್ತಿದ್ದರು. ಅದು ಹೊಸ ಸಿಡಿಯೆಂದು ಹೇಳಿದರು. ನಂತರ ಸಿಡಿಯನ್ನು ತಂದು ದೇವಸ್ಥಾನದ ಮುಂದೆ ನಿಲ್ಲಿಸಿದರು. ಒಂದು ಪೋಟೋ ತೆಗೆದೆ. ಅಷ್ಟೊತ್ತಿಗೆ ಒಂದು ಗಂಟೆ ಆಗಿತ್ತು. ಅಭಿಷೇಕ ಮುಗಿದು ಪ್ರಸಾದ ಸ್ವೀಕರಿಸಿ ಮಿರ್ಲೆಗೆ  ಬಂದೆವು. ಅಲ್ಲಿ ಕೂಡ ಹುಣಸಮ್ಮ ತಾಯಿಗೆ ಅಭಿಷೇಕಾದಿ  ಪೂಜಾ ಕಾರ್ಯ ನಡೆಯುತ್ತಿತ್ತು.

- Advertisement -

ದೇಗುಲದ ವರಾಂಡದಲ್ಲಿ  ದೇವರ ಸಹಸ್ರನಾಮ  ಭಕ್ತಿ ಗೀತೆ ಹಾಡುತ್ತಿದ್ದರು. ಯಾರೋ ಭಕ್ತರು ದೇವತೆಗೆ ಬೆಳ್ಳಿ ಕವಚ ಅರ್ಪಿಸಿದರು.  ಮಹಾ ಮಂಗಳಾರತಿ ಮುಗಿಯುವ ಹೊತ್ತಿಗೆ ಮೂರೂವರೆ ಆಗಿತ್ತು. ಇದಾಗಿ ನಾವು ಮಿರ್ಲೆ ಮಾರ್ಗ ಚುಂಚನಕಟ್ಟೆಗೆ ಹೋದೆವು. ಬಾಗಿಲು ಹಾಕಿತ್ತು. ಇನ್ನೇನು ಅರ್ಚಕರು ಬರುತ್ತಾರೆ ಸ್ವಲ್ಪ ಕಾಯಿರಿ ಎಂದು ಕೆಳಗೆ ಹೂವು ಮಾರುತ್ತಿದ್ದ ಮಹಿಳೆ ತಿಳಿಸಿದರು. ಅರ್ಚಕರು ಬಂದರು. ಬಾಗಿಲು ತೆಗೆಯಲು ಇನ್ನೂ ಸಮಯವಿದೆ ಎಂದು ಮೆಟ್ಟಿಲು ಮೇಲೆ ಕುಳಿತರು. ನಮ್ಮಕ್ಕ ಈ ಕ್ಷೇತ್ರದ ಪರಿಚಯ ಹೇಳಬೇಕೆಂದು ಕೇಳಿ ಅವರು ಇಷ್ಟಾರ್ಥ ನೆರವೇರಿಸಿದರು. ಆಗ ಅಲ್ಲಿಗೆ ಖಾಸಗಿ ಬಸ್ ಒಂದರಲ್ಲಿ ಪ್ರವಾಸಿಗರು ಬಂದರು.  ಅವರು ಆಂದ್ರ ಪ್ರದೇಶದಿಂದ ಬಂದವರಾಗಿ ಮೇಲುಕೋಟೆಗೆ ಹೋಗಿ ಅಲ್ಲಿ ರಾತ್ರಿ ವೈರಮುಡಿ ಉತ್ಸವ ನೋಡಿ ಇಲ್ಲಿಗೆ ಬಂದಿದ್ದರು. ನಾವು ಅವರೊಂದಿಗೆ  ದೇವರ ದರ್ಶನ ಮಾಡಿ  ಕೆ.ಆರ್.ನಗರ ರಸ್ತೆಯಲ್ಲಿ ಹೊರಟು ಹೆಬ್ಬಾಳು  ತಲುಪಿದೆವು. ಹೆಬ್ಬಾಳು ಗ್ರಾಮದ ಉತ್ತರಕ್ಕೆ ಐದೂವರೆ ಕಿ.ಮೀ. ದೂರದಲ್ಲಿದೆ ಕಪ್ಪಡಿ. ಶ್ರೀ ಕ್ಷೇತ್ರ ಕಪ್ಪಡಿ ಎಂಬ ಕಮಾನಿನಾಕಾರದಲ್ಲಿ ಸ್ವಾಗತದ ನಾಮಫಲಕವಿದೆ. ಇಲ್ಲಿಗೆ ಜಾತ್ರೆ ದಿನಗಳಲ್ಲಿ ಕೆ.ಆರ್.ನಗರದಿಂದ ವಿಶೇಷ ಬಸ್ ಬಿಡುತ್ತಾರೆ. ಬಾಕಿ ದಿನಗಳಲ್ಲಿ ಇಲ್ಲಿಗೆ ಬಸ್ ವ್ಯವಸ್ಥೆ ಇರುವ ಬಗ್ಗೆ ಮಾಹಿತಿ ಇಲ್ಲದೇ  ನಾವು ಕಳೆದ ತಿಂಗಳು ಸಂಕ್ರಾಂತಿ ಹಬ್ಬದ ಹಿಂದಿನ ದಿನ ಚುಂಚನಕಟ್ಟೆಗೆ ಹೋಗಿದ್ದು, ಕಪ್ಪಡಿಗೆ ಹೋಗಲು ಬಸ್ಸಿನಲ್ಲಿ ಹೆಬ್ಬಾಳಿಗೆ ಬಂದಿಳಿದವು.

ಆಟೋ ವಿಚಾರಿಸಿದರೆ ಒಂದು ಕಡೆಗೆ ನೂರೈವತ್ತು ರೂ. ಕೇಳಿದ್ದರು. ಹತ್ತು ನಿಮಿಷ ಕಾಯ್ದು ವಾಪಸ್ಸು ಕರೆದುಕೊಂಡು ಬರುವುದಾದರೇ ಇನ್ನೂರೈವತ್ತು ಎಂದರು. ಸ್ಥಳ ಪರಿಚಯ ಇಲ್ಲದೇ ತರಾತುರಿಯಲ್ಲಿ ಹೋಗಿ ಬರುವ ರಿಸ್ಕ್ ತೆಗೆದುಕೊಳ್ಳದೇ ಮತ್ತೆ ಯಾವಾಗಲಾದರೂ ಬಂದರೇ ಅದಿತೆಂದು ಹೆಬ್ಬಾಳಿನಿಂದ ಹಾಗೆಯೇ ವಾಪಸ್ಸಾಗಿದ್ದೆವು. ಈ ಅವಕಾಶ ಒಂದೇ ತಿಂಗಳ ಅಂತರದಲ್ಲಿ ಮತ್ತೇ ಒದಗಿ ಬಂದಿತ್ತು. ಇರಲಿ ಕಾವೇರಿ ನದಿ ದಂಡೆಯ ಕಪ್ಪಡಿ ಕ್ಷೇತ್ರವು ಕರ್ನಾಟಕದ ಪ್ರಸಿದ್ಧ ಪುಣ್ಯ ಕ್ಷೇತ್ರಗಳಲ್ಲಿ ಒಂದಾಗಿದೆ. ಸತ್ಯದ ಮಹಿಮೆ ಸಾರುವ ಈ ಕ್ಷೇತ್ರ ಆಣೆ ಪ್ರಮಾಣಕ್ಕೆ  ಹೆಸರುವಾಸಿಯಾಗಿದೆ. ಕೋರ್ಟು ಕಛೇರಿ ವ್ಯಾಜ್ಯಗಳು ಇಲ್ಲಿ ಬಗೆಹರಿದಿವೆಯಂತೆ! ಇಲ್ಲಿ ಅಣೆ ಪ್ರಮಾಣ ಮಾಡಿ ಸುಳ್ಳು ಹೇಳಿದರೆ ಅವರಿಗೆ ಮುಂದೆ ಪ್ರತ್ಯಕ್ಷವಾಗಿಯೋ ಇಲ್ಲಾ ಪರೋಕ್ಷವಾಗಿಯೋ ತೊಂದರೆ ಎದುರಾಗುವುದಾಗಿ ನಂಬಿಕೆ ಇರಲು  ಸುಳ್ಳು ಹೇಳಲು ಜನ ಹೆದರುತ್ತಾರೆ ಎಂಬುದು ಪ್ರಚಲಿತವಿದೆ.  ಇಲ್ಲಿ ಯಾವುದೇ ದೇವರ ಪೂಜಾ ಮೂರ್ತಿ ವಿಗ್ರಹಗಳಿಲ್ಲ. ಈ ಕ್ಷೇತ್ರದಲ್ಲಿ ರಾಚಪ್ಪಾಜಿ ಹಾಗೂ ಇವರ ಸಹೋದರಿ ಚೆನ್ನಾಜಮ್ಮನವರ ಗದ್ದುಗೆಗಳು ಇವೆ. ಪ್ರತಿ ಶಿವರಾತ್ರಿಯ ದಿನದಂದು ವಿಶೇಷ ಜಾತ್ರಾ ಮಹೋತ್ಸವವು ಪ್ರಾರಂಭಗೊಂಡು ಚಂದ್ರಮಾನ ಯುಗಾದಿ ಯೆಂದು ಮಾದಲಿ ಸೇವೆಯೊಂದಿಗೆ ಮುಗಿಯುವ ಜಾತ್ರೆ ಒಂದು ತಿಂಗಳು ಇರುತ್ತದೆ.  ಸಾವಿರಾರು  ಭಕ್ತರು ಬಂದು ಹೋಗುತ್ತಾರೆ. ಇಲ್ಲಿರುವ ಉರಿಗಣ್ಣು ರಾಚಪ್ಪಾಜಿಯವರ ಗದ್ದುಗೆ ಪೂಜೆಯು ಕೇಂದ್ರ ಬಿಂದುವಾಗಿದೆ. ಇದರ ಜೊತೆಗೆ ಸಿದ್ಧಪ್ಪಾಜಿ ಮತ್ತು ಚನ್ನಾಜಮ್ಮನವರ ಗದ್ದುಗೆಗಳು ಕ್ಷೇತ್ರದ ಶಕ್ತಿ ಕೇಂದ್ರಗಳಾಗಿವೆ. ಜಾತ್ರೆಯ ಸಂದರ್ಭದಲ್ಲಿ ಭಕ್ತರು ನೀಲಗಾರ ದೀಕ್ಷೆಯಿಂದ ಹಿಡಿದು ವಿವಿಧ ಸೇವೆಗಳನ್ನು ಸಲ್ಲಿಸುತ್ತಾರೆ. ಕ್ಷೇತ್ರಕ್ಕೆ ಬಂದು ಪೂಜೆ ಸಲ್ಲಿಸಿ ಹರಸಿಕೊಂಡರೆ ತಮ್ಮ ಇಷ್ಟಾರ್ಥಗಳು ನೆರವೇರುತ್ತವೆ ಎಂಬ ನಂಬಿಕೆ ಇದೆ.

- Advertisement -

ದೇವಸ್ಥಾನದ  ಹೊರವಲಯದಲ್ಲಿ ದೇವರಿಗೆ ಹರಕೆ ಕುರಿ ಕೋಳಿ ಅರ್ಪಿಸಿ ನೆಂಟರಿಸ್ಟರಿಗೆ  ಅಡಿಗೆ ಮಾಡಿ ಬಡಿಸುತ್ತಾರೆ. ಅಡಿಗೆಗೆ ಬೇಕಾದ ಪಾತ್ರೆಗಳು ಬಾಡಿಗೆಗೆ ಸಿಗುತ್ತವೆ. ಮಸಾಲೆ ರುಬ್ಬಲು ಗ್ರೈಂಡರ್‍ಗಳು ದೊರೆಯುತ್ತವೆ. ಭಕ್ತಾದಿಗಳು ತಮ್ಮ ಹರಕೆಗಳನ್ನು ತೀರಿಸಿ ತಳಿಗೆ ಮಾಡಿ ಸಂಭ್ರಮಿಸುತ್ತಾರೆ. ಸುಮಾರು 300 ವರ್ಷಗಳ ಹಿಂದೆ 16ನೇ ಶತಮಾನದಲ್ಲಿ ಮೂಲತ: ಗುಲ್ಬರ್ಗ ಜಿಲ್ಲೆಯ ಯಾದಗಿರಿ ತಾಲ್ಲೂಕಿನವರಾದ  ಶ್ರೀ ರಾಚಪ್ಪಾಜಿ ಸಂತರು ದಕ್ಷಿಣದತ್ತ ಆಗಮಿಸಿ ತಮ್ಮ ಅಂತಿಮ ದಿನಗಳನ್ನು ಇಲ್ಲಿ ಕಳೆದು ಐಕ್ಯರಾಗಿದ್ದಾರೆ. ಇಲ್ಲಿ ಮಂಟೇಸ್ವಾಮಿ ಬಸವಪ್ಪ  ಎಂಬ ಪವಿತ್ರ ಗೂಳಿ, ಸಂತ ಸಿದ್ದಪ್ಪಾಜಿ ಸರಳ ದೇಗುಲ, ಕಡೇ ಬಾಗಿಲು, ಶ್ರೀಮಠದ ಪ್ರವೇಶ ದ್ವಾರ, ಪಾದ ಗದ್ದಿಗೆ, ಉರಿಯುವ ಗದ್ದಿಗೆಗಳಿವೆ. ಇಲ್ಲಿ  ಕೆಲವರು ಉರುಳು ಸೇವೆ ಸಲ್ಲಿಸಿದರೇ ಮತ್ತೆ  ಕೆಲವರು ಬಸವಪ್ಪ ಗೂಳಿಯ ಮುಂದೆ ಮಲಗಿ ಅದು ಯಾರನ್ನೂ ತುಳಿಯದೇ ದಾಟುವುದು ವಿಶೇಷವಾಗಿದೆ.   

 ನಾವು  ಕಾವೇರಿ ನದಿಯಲ್ಲಿ ಇಳಿದು ಕೈಕಾಲು ಮುಖ ತೊಳೆದುಕೊಂಡೆವು. ಕಾವೇರಿ ನದಿಯ ಪೂಜೆಗಾಗಿ  ಕಲ್ಲು ಬಂಡೆಗಳಿಗೆ ಅರಿಶಿಣ ಕುಂಕುಮ ಹಚ್ಚಿ ಕೆಂಪಾಗಿದ್ದವು. ನದಿಯಲ್ಲಿ ನೀರು ತುಂಬಾ ಇಳಿಮುಖವಾಗಿ ಅಚೆ ಬದಿಯಲ್ಲಿ ಆಲದ ಮರದ ತೋಪಿನಲ್ಲಿ ಜನ ಇಳಿದುಕೊಂಡಿರುವುದು ಕಾಣಿಸಿತು. ನಾವು ಸುಮಾರು 44 ವರ್ಷಗಳ ಹಿಂದೆ ಇದೇ ಮಿರ್ಲೆ ಜಾತ್ರೆ ಶನಿವಾರ ನಡೆದು ಭಾನುವಾರ ನಾಟನಹಳ್ಳಿಯಿಂದ ಶಿವಣ್ಣ ಎಂಬುವರ ಎತ್ತಿನ ಗಾಡಿಯನ್ನು ಮಾಡಿಕೊಂಡು ಮಿರ್ಲೆ ಗಂಧನಹಳ್ಳಿ ಮಾರ್ಗ ಬಂದು ಅದೇ ಮರದ ತೋಪಿನಲ್ಲಿ ಗಾಡಿ ನಿಲ್ಲಿಸಿ ಕಾವೇರಿ ನದಿಯನ್ನು ತೆಪ್ಪದಲ್ಲಿ ದಾಟಿ ಇತ್ತ ಕಡೆಗೆ ಕಪ್ಪಡಿಗೆ ಬಂದಿದ್ದೆವು. ಸಂಜೆ ಮತ್ತೆ ಅತ್ತ ಕಡೆಗೆ ಮರಳುವಾಗ ಕತ್ತಲಾಗಿ ತೆಪ್ಪದಲ್ಲಿ ಸಾಗುವಾಗ ನದಿಯಲ್ಲಿ ನೀರು ಹೆಚ್ಚಾದಂತೆ ಭಾಸವಾಗಿ ಭಯಪಟ್ಟಿದ್ದೆನು.  ಅಂದು ನಾವು ಸುರಕ್ಷಿತವಾಗಿ ನದಿ ದಾಟಿ ಮತ್ತೆ ಎತ್ತಿನ ಗಾಡಿ ಹತ್ತುವ ಗಡಿಬಿಡಿಯಲ್ಲಿ ನಾನು ವಾಚ್‍ನ್ನು ಅಲ್ಲಿ ಬೀಳಿಸಿಕೊಂಡಿದ್ದೆನು. ವಾಚು ಕಳೆದು ಹೋದ ನೋವಿನಲ್ಲಿ ರಾತ್ರಿ ಕಳೆದು ಮಾರನೇ ದಿನ ಬೆಳಿಗ್ಗೆ ಯಾರದೋ ಬೈಕ್‍ನಲ್ಲಿ ಮತ್ತೆ  ಅದೇ ಮರದ ಕೆಳಗೆ ಬಂದು ನೋಡಲು ವಾಚ್ ಅಲ್ಲಿಯೇ ಬಿದ್ದಿತು. ಈಗ ಆ ವಾಚ್ ನನ್ನ ಬಳಿ ಇಲ್ಲ. ಆದರೆ ಆ ಟೈಂ ನನಗೆ  ಚೆನ್ನಾಗಿ ನೆನಪಿದೆ. ತಲೆ ಕೂದಲು ಮುಡಿ ಕೊಟ್ಟವರು ನದಿಯಲ್ಲಿ ಸ್ನಾನ ಮಾಡಿ ಬಟ್ಟೆ ತೊಟ್ಟುಕೊಳ್ಳುತ್ತಿದ್ದರು.  ಮುಡಿ ಕೊಡಲು ಪ್ರತ್ಯೇಕ ಜಾಗವಿದೆ. ಧರೆಗೆ ದೊಡ್ಡವರು ಎಂದೇ ಪ್ರಸಿದ್ಧರಾಗಿರುವ ಮಂಟೇಸ್ವಾಮಿಯವರ ಶಿಷ್ಯ ಸಿದ್ದಪ್ಪಾಜಿ 16ನೇ ಶತಮಾನದಲ್ಲಿ ಇದ್ದರು ಎಂಬುದು ಐತಿಹ್ಯ. ಗುರು ಶಿಷ್ಯರು ತಮ್ಮ ಕಾಲದ ಆರ್ಥಿಕ ಸಾಮಾಜಿಕ ಪರಿವರ್ತನೆ ಮಾಡುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು. ಶರಣರು ಸೂಫಿಗಳ ದಟ್ಟ ಪ್ರಭಾವವು ಇತ್ತು. ಇವರ ಕಾಲ ಜೀವನದ ಬಗ್ಗೆ ಖಚಿತ ದಾಖಲೆಗಳಿಲ್ಲ. ಹಳೇ ಮೈಸೂರು ಪ್ರದೇಶಗಳಲ್ಲಿ ಮಂಟೇಸ್ವಾಮಿ ಸಿದ್ದಪ್ಪಾಜಿ ಪವಾಡಗಳನ್ನು ಹಾಡು ಮತ್ತು ಮಾತಿನ ಮೂಲಕ ಹೇಳುವರು. ಕೆ.ಆರ್.ನಗರ ತಾಲ್ಲೂಕಿನ ಕಪ್ಪಡಿ, ಮಳವಳ್ಳಿ ತಾಲ್ಲೂಕಿನ ಮುಟ್ಟನಹಳ್ಳಿ,  ಕೊಳ್ಳೆಗಾಲ ತಾಲ್ಲೂಕಿನ ಚಿಕ್ಕಲ್ಲೂರಿನಲ್ಲಿ ನಡೆಯುವ ಜಾತ್ರೆಗಳು ಮಂಟೇಸ್ವಾಮಿ ಸಿದ್ದಪ್ಪಾಜಿ ಅವರ ಜೀವನದ ಬಗ್ಗೆ ಬೆಳಕು ಚೆಲ್ಲುತ್ತವೆ. ನಾವು ಹೋದ ದಿನ ಕಪ್ಪಡಿಯಲ್ಲಿ ವೇದಿಕೆ ಕಾರ್ಯಕ್ರಮ ನಡೆದಿತ್ತು. ಕೆಲವು  ವಿದ್ಯಾರ್ಥಿಗಳು ಪ್ರಶಸ್ತಿ ಪತ್ರ ಹಿಡಿದಿದ್ದರು. ಮಳವಳ್ಳಿ ಹೊನ್ನಾಯಕನಹಳ್ಳಿ ಹಾಗೂ ಶ್ರೀಕ್ಷೇತ್ರ ಕಪ್ಪಡಿ ಪೀಠಾಧಿಪತಿಗಳು ವರ್ಚಸ್ವಿ ಶ್ರೀಕಂಠ ಸಿದ್ಧಲಿಂಗರಾಜೇ ಅರಸ್ ಸ್ವಾಮೀಜಿಯವರು     ವೇದಿಕೆಯಲ್ಲಿದ್ದರು. ಜಾತ್ರೆ ಪ್ರಯುಕ್ತ ಪುರಿಕಾರ, ಬಳೇ ಅಂಗಡಿ ಹೋಟೆಲ್‍ಗಳು ಇದ್ದವಾಗಿ ನಾವು ಅಲ್ಲಿ ಕಾಫಿ ಕುಡಿದು ಮುಂದೆ ಕೆ.ಆರ್.ನಗರದ ಕಡೆಗೆ ಹೊರಟೆವು.


ಗೊರೂರು ಅನಂತರಾಜು, ಹಾಸನ,

ಮೊ:9449462879

ವಿಳಾಸ: ಹುಣಸಿನಕೆರೆ ಬಡಾವಣೆ, 29ನೇ ವಾರ್ಡ್, ಶ್ರೀ ಶನೀಶ್ವರ ದೇವಸ್ಥಾನ ರಸ್ತೆ, ಹಾಸನ.

- Advertisement -
- Advertisement -

Latest News

ಕವಿ ಸಿದ್ಧಲಿಂಗಯ್ಯಾ ಹಿರೇಮಠ ಅವರಿಗೆ ಸನ್ಮಾನ

ಗೋಕಾಕ - ಬಸವ ಸಮಿತಿ 2024 ನೇ ಸಾಲಿನ ವಿಶ್ವಬಸವ ಜಯಂತಿ ಪ್ರಯುಕ್ತ ಆಯೋಜಿಸಿದ್ದ ರಾಜ್ಯ ಮಟ್ಟದ ಕವನ ಸ್ಪರ್ದೆಯಲ್ಲಿ ಭಾಗವಹಿಸಿದ ಬೆಳಗಾವಿ ಜಿಲ್ಲೆಯ ಗೋಕಾಕ...
- Advertisement -

More Articles Like This

- Advertisement -
close
error: Content is protected !!
Join WhatsApp Group