ಚರ್ಮ ಕಪ್ಪಿದ್ದವರ ಕರಿಯರೆಂದೆನ್ನುವರು
ಬೆಳ್ಳಗಿರುವವರನ್ನು ಬಿಳಿಯರೆಂದು
ಚರ್ಮದೊಳಗಡೆ ಹರಿವ ರಕ್ತ ಕೆಂಪಾಗಿಹುದು
ವರ್ಣ ಭೇದಗಳ ಬಿಡು – ಎಮ್ಮೆತಮ್ಮ
ಶಬ್ಧಾರ್ಥ
ವರ್ಣ= ಬಣ್ಣ, ದೇಹದ ಬಣ್ಣ
ತಾತ್ಪರ್ಯ
ಮನುಷ್ಯರ ಮೈಬಣ್ಣ ಕಪ್ಪಿದ್ದರೆ ಕರಿಯರೆಂದು ಕೀಳಾಗಿ
ಕಾಣುವರು. ಹಾಗೆ ಮೈಬಣ್ಣ ಬೆಳ್ಳಗಿದ್ದರೆ ಬಿಳಿಯರೆಂದು
ಮೇಲಾಗಿ ಕಾಣುವರು. ಹೇಗೆ ಅರಳಿದ ಗುಲಾಬಿ ಹೂವಿನಲ್ಲಿ ಬಿಳಿ, ಕೆಂಪು, ನೀಲಿ, ಕೇಸರಿ, ಹಳದಿ, ಹೀಗೆ ಹಲವಾರು ಬಣ್ಣಗಳಿದ್ದರು ಅವುಗಳ ಪರಿಮಳ ಮಾತ್ರ ಒಂದೆಯಿರುತ್ತದೆ. ಹಾಗೆ ಮಾನವರ ಮೈಬಣ್ಣ ಕಪ್ಪು, ಕೆಂಪು, ಬಿಳುಪು, ಗೋಧಿ
ಬಣ್ಣ ಯಾವುದಿದ್ದರು ಅವರ ಮೈಯಲ್ಲಿ ಹರಿಯುವ ರಕ್ತ ಕೆಂಪಾಗಿರುತ್ತದೆ. ಸಮಾಜದಲ್ಲಿ ಈ ವರ್ಣಭೇದನೀತಿ ತರವಲ್ಲ.
ಜಗತ್ತಿನಲ್ಲಿರುವ ಮಾನವರೆಲ್ಲ ಸಮಾನರೆಂದು ಭಾವಿಸಬೇಕು. ಯುರೋಪಿಯನ್ನರು ಬಿಳಿಯರಾಗಿದ್ದು ತಾವು ಶ್ರೇಷ್ಠವೆಂದು ಆಫ್ರಿಕನ್ನರು ಕಪ್ಪಾಗಿದ್ದು ಅವರನ್ನು ಕರಿಯರೆಂದು ಕೀಳಾಗಿ ಕಾಣುವುದು ಮಾನವೀಯತೆಯಲ್ಲ. ಕೋಗಿಲೆ ಕಪ್ಪಿದ್ದರು ಅದರ ಕಂಠ ಬಹಳ ಮಧುರವಿರುತ್ತದೆ. ನವಿಲಿನ ಬಣ್ಣ ಸುಂದರವಾಗಿದ್ದರು ಅದರ ಧ್ವನಿ ಕರ್ಕಶವಾಗಿರುತ್ತದೆ. ಒಂದೊಂದಕ್ಕೆ ಒಂದೊಂದು ವಿಶೇಷತೆ ಮತ್ತು ನ್ಯೂನ್ಯತೆ ಇರುತ್ತದೆ.ಬರಿಯ ಸಿರಿವಂತಿಕೆ ಇದ್ದರೆ ಸಾಲದು ಎಲ್ಲರನ್ನು ಸಮವಾಗಿ ಕಾಣುವ ಹೃದಯವಂತಿಕೆ ಇರಬೇಕು.ಮೈಬಣ್ಣ ಮುಖ್ಯವಲ್ಲ ಒಳಗಿರುವ ಸದ್ಗುಣ ಪ್ರಾಮುಖ್ಯ ಆದಕಾರಣ ವರ್ಣನೀತಿಯ ತಾರತಮ್ಯವೆಣಿಸದೆ ಎಲ್ಲರನ್ನು ಗೌರವದಿಂದ ಕಾಣುವ ಸದ್ಭಾವ ನಮ್ಮದಾಗಬೇಕು.
ರಚನೆ ಮತ್ತ ವಿವರಣೆ
ಎನ್.ಶರಣಪ್ಪ ಮೆಟ್ರಿ
ಮೊ: 944903099