ದಿನಕ್ಕೊಂದು‌ ಎಮ್ಮೆತಮ್ಮನ‌ ಕಗ್ಗದ ತಾತ್ಪರ್ಯ

0
107

 

ರಾಮನಡವಿಗೆ‌ ಹೋದ ಕೃಷ್ಣ ದನಗಳ ಕಾದ
ಕರದಿ ಕಪ್ಪರ ಹಿಡಿದು‌ ಶಿವ ಬೇಡಿದ
ಜಿನ ದಿಗಂಬರನಾದ ಬುದ್ಧ ತಲೆಬೋಳಿಸಿದ
ವಿಧಿಯ ಕೈವಾಡವಿದು – ಎಮ್ಮೆತಮ್ಮ

ಶಬ್ಧಾರ್ಥ
ಕಪ್ಪರ‌ = ತಲೆಯೋಡು ಭಿಕ್ಷಾಪಾತ್ರೆ

ತಾತ್ಪರ್ಯ
ದಶರಥ ಹಿರಿಯ ಮಗನಾದ ರಾಮನಿಗೆ ಪಟ್ಟಕಟ್ಟಲು
ಏರ್ಪಾಡು‌ ಮಾಡುತ್ತಾನೆ. ಇದನ್ನು ಕೇಳಿದ‌ ದಾಸಿಯಾದ ಮಂಥರೆ ಕೈಕೇಯಿಗೆ ನಿನ್ನ ಮಗ‌ ಭರತನಿಗೆ ಪಟ್ಟವಾಗಲಿ
ಎಂದು ಕಿವಿಯೂದುತ್ತಾಳೆ. ಆಗ‌ ಕೈಕೇಯಿ‌ ದಶರಥನಲ್ಲಿ
ಎರಡು ವರ ಕೇಳುತ್ತಾಳೆ . ರಾಮ ವನವಾಸಕ್ಕೆ‌ ಹೋಗಲಿ
ಭರತ ಸಿಂಹಾಸನವೇರಲಿಯೆಂದು ಬೇಡುತ್ತಾಳೆ. ಹೀಗಾಗಿ
ರಾಮ ತಂದೆಯ ವಾಕ್ಯ ಪರಿಪಾಲಿಸಲು ವನವಾಸ ಹೋಗುತ್ತಾನೆ. ಇದಕ್ಕೆಲ್ಲ‌ ಕಾರಣ‌ ಮಂಥರೆ ಕೈಕೇಯಿಯರಲ್ಲ
ಆ ವಿಧಿಯ ವಿಲಾಸ. ಹಾಗೆ ವಸುದೇವ ದೇವಕಿಯರನ್ಮು
ಕಂಸ ಸೆರೆಯಲ್ಲಿಟ್ಟಾಗ‌ ಎಂಟನೆಯ‌‌ ಮಗನಾಗಿ‌ ಕೃಷ್ಣ
ಜನಿಸುತ್ತಾನೆ.ಅವನನ್ನು‌ ಬದುಕಿಸಲೋಸುಗ‌‌ ನಂದ
ಗೋಕುಲಕ್ಕೆ ತಂದು‌ ಸಾಕುತ್ತಾನೆ. ಅಲ್ಲಿ ಕೃಷ್ಣ ಬಾಲ್ಯದಲ್ಲಿ ಗೋವುಗಳನ್ನು ಕಾಯುತ್ತಾನೆ‌.ಅದಕ್ಕೆ‌ ಕಾರಣ‌ ಕಂಸನಲ್ಲ.
ವಿಧಿಯ‌ ಚಮತ್ಕಾರ.ಲೋಕಪಾಲಕನಾದ‌‌ ಶಿವ‌‌ ಬ್ರಹ್ಮನ
ಐದನೆ ತಲೆ‌ಕತ್ತರಿಸಿದಾಗ ತಲೆಡೋಬಿ ಕೈಗಂಟುತ್ತದೆ. ಅದನ್ನೆ
ಹಿಡಿದು‌ ಭಿಕ್ಷೆಬೇಡಿದ. ರಾಜನಾದ ಮಹಾವೀರ ಬೆತ್ತಲೆಯಾಗಿ
ತಪಸ್ಸು ಮಾಡಿದ. ಹಾಗೆ ರಾಜನಾದ ಬುದ್ಧ ತಲೆಯನ್ಮು
ಬೋಳಿಸಿಕೊಂಡು ತಪವನ್ನಾಚರಿಸಿದ. ಇದಕ್ಕೆಲ್ಲ ಕಾರಣ
ವಿಧಿಯ‌ ಕೈವಾಡವೇ ಸರಿ. ವಿಧಿಲಿಖಿತ ತಪ್ಪಿಸಲು‌ ಅಸಾಧ್ಯ.

ರಚನೆ ಮತ್ತು ವಿವರಣೆ
ಎನ್.ಶರಣಪ್ಪ ಮೆಟ್ರಿ
ಗಂಗಾವತಿ
9449030990

LEAVE A REPLY

Please enter your comment!
Please enter your name here