ಯಾರಿಲ್ಲದೇಕಾಂತ ಸ್ಥಳದಲ್ಲಿ ತಿನ್ನೆಂದು
ಗುರುಕೊಟ್ಟ ಶಿಷ್ಯರಿಗೆ ಬಾಳೆಹಣ್ಣು
ಶ್ರೀಕಾಂತನಿಹನೆಂದು ಕನಕ ತಿನ್ನದೆ ಬಂದ
ಹರಿಯಿರದ ಸ್ಥಳವಿಲ್ಲ – ಎಮ್ಮೆತಮ್ಮ
ಶಬ್ಧಾರ್ಥ
ಗುರು = ಕನಕದಾಸರ ಗುರು ವ್ಯಾಸರಾಯರು.
ಶ್ರೀಕಾಂತ = ವಿಷ್ಣು, ಕೃಷ್ಣ. ಕನಕ = ಕನಕದಾಸ. ಹರಿ = ಕೃಷ್ಣ
ತಾತ್ಪರ್ಯ
ವ್ಯಾಸರಾಯರ ದಾಸಕೂಟದಲ್ಲಿ ಪ್ರಮುಖರಾದವರು
ಪರಂದರದಾಸರು ಮತ್ತು ಕನಕದಾಸರು. ಕನಕದಾಸರ
ಜಾತಿಯನ್ನು ನೋಡಿ ಇತರ ಶಿಷ್ಯರು ಕೀಳಾಗಿ ಕಾಣುತಿದ್ದರು.
ಅದಕ್ಕಾಗಿ ಒಂದು ದಿನ ಗುರುಗಳು ಎಲ್ಲ ಶಿಷ್ಯರಿಗೆ ಒಂದೊಂದು ಬಾಳೆಹಣ್ಣು ಕೊಟ್ಟು ಯಾರಿಲ್ಲದ ಏಕಾಂತ ಜಾಗದಲ್ಲಿ ತಿಂದು ಬನ್ನಿರೆಂದು ಹೇಳುತ್ತಾರೆ. ಒಬ್ಬ ತಮ್ಮ ಕೋಣೆಯಲ್ಲಿ, ಮತ್ತೊಬ್ಬ ಪಾಕಶಾಲೆಯಲ್ಲಿ ಮಗುದೊಬ್ಬ
ಶೌಚಗೃಹದಲ್ಲಿ ಹೀಗೆ ತಿಂದು ಬಂದು ಗುರುಗಳಿಗೆ ಹೇಳುತ್ತಾರೆ.
ಆದರೆ ಕನಕದಾಸರು ಹಣ್ಣು ತಿನ್ನದೆ ಹಾಗೆ ಬರುತ್ತಾರೆ. ಆಗ
ಗುರುಗಳು ಏಕೆ ತಿನ್ನಲಿಲ್ಲವೆಂದು ಪ್ರಶ್ನಿಸುತ್ತಾರೆ. ಅದಕ್ಕೆ
ಕನಕದಾಸರು ಎಲ್ಲಿ ನೋಡಿದರು ನನ್ನ ಕಣ್ಣಿಗೆ ಕೃಷ್ಣ ಕಂಡ
ಕಾರಣ ನನಗೆ ಏಕಾಂತವೆನಿಸಲಿಲ್ಲ. ಆದಕ್ಕಾಗಿ ನಾನು ಹಣ್ಣು
ತಿನ್ನದೆ ಬಂದೆನೆಂದು ಉತ್ತರಿಸುತ್ತಾನೆ. ಆಗ ಗುರುಗಳು
ಕನಕದಾಸನ ಭಕ್ತಿ ಮತ್ತು ಬುದ್ಧಿವಂತಿಕೆಯನ್ನು ಶಿಷ್ಯರಿಗೆ
ತಿಳಿಸಿ ಆತನನ್ನು ಮೆಚ್ಚಿಕೊಳ್ಳುತ್ತಾರೆ.
ಈ ಪ್ರಸಂಗದಿಂದ ನಮಗೆ ತಿಳಿಯುವುದೇನೆಂದರೆ ದೇವರು ಇರದ ಜಾಗವಿಲ್ಲ. ಅವನು ಸರ್ವವ್ಯಾಪಿ ಮತ್ತು ನಾವು ಏಕಾಂತದಲ್ಲಿ ಏನೇ ಮಾಡಿದರು ನೋಡುತ್ತಾನೆ . ಆದಕಾರಣ ನಾವು ಕೆಟ್ಟ ಕೆಲಸಗಳನ್ನು ಮಾಡದೆ ಒಳ್ಳೆಯ ಕೆಲಸಗಳನ್ನು ಮಾಡಬೇಕು.
ರಚನೆ ಮತ್ತು ವಿವರಣೆ ಎನ್.ಶರಣಪ್ಪ ಮೆಟ್ರಿ
ಮೊ. 9449030990