ಹೊನ್ನಳ್ಳಿಯಾಕಿ
ಇನ್ನು ಯಾಕ ಬರಲಿಲ್ಲಯ್ಯೋ ಹೊನ್ನಳ್ಳಿಯಾಕಿ !
ವಾರದಾಗ ಬರ್ತಿನಂತ ಹೇಳಿ ಹೋದಾಕಿ
ಭಾರಿ ಜರಿಯ ರೇಷ್ಮೆ ಸೀರಿ ಉಟ್ಟುಕೊಂಡಾಕಿ
ಕರಿಯ ಹುಬ್ಬು ತಿದ್ದಿಕೋತ ಕಣ್ಣ ಹೊಡೆಯಾಕಿ ಮಾತುಮಾತಿನಲ್ಲಿ ಹಾಸ್ಯ ಉಕ್ಕಿಸುವಾಕಿ
ಏನೋ ಅಂದರ ಏನೋ ಅಂದು ನಕ್ಕು ನಗಿಸಾಕಿ
ಇನ್ನು ಯಾಕ ಬರಲಿಲ್ಲಯ್ಯೋ ಹೊನ್ನಳ್ಳಿಯಾಕಿ !
ವಾರದಾಗ ಬರ್ತಿನಂತ ಹೇಳಿ ಹೋದಾಕಿ
ತಾಳಿ ಸರಕ ಚಿನ್ನದ ಗುಂಡು ಕೊಡಿಸು ಎಂದಾಕಿ
ಕೈಗೆ ಚಿನ್ನದಬಳಿ ನಾಲ್ಕು ತೊಡಿಸು ಎಂದಾಕಿ
ಪ್ಯಾಟಿಗಿ ಬಂದು ಏಟು ಮಾತು ಕಲಿತುಕೊಂಡಾಕಿ
ಸ್ವಾಟಿ ತಿರುವಿ ಗಲ್ಲ ಚೂಟಿ ಮಳ್ಳ ಮಾಡಾಕಿ
ಇನ್ನು ಯಾಕ ಬರಲಿಲ್ಲಯ್ಯೋ ಹೊನ್ನಳ್ಳಿಯಾಕಿ !
ವಾರದಾಗ ಬರ್ತಿನಂತ ಹೇಳಿ ಹೋದಾಕಿ
ಬಾರೆ ಅಂದರ ಬರ್ತಿನಂತ ಬಂದುಬಿಡಾಕಿ
ಕೇಳಿದ್ದನ್ನ ಕೊಡಿಸದಿದ್ರ ಹೊರಟು ನಿಲ್ಲಾಕಿ
ಸೀರಿಕುಬುಸ ತಂದುಕೊಟ್ರ ಖುಷಿಯಾಗಾಕಿ
ಎಂಥ ಚೆಲುವ ಚೆನ್ನಿಗಂತ ತಬ್ಬಿಕೊಳ್ಳಾಕಿ
ಇನ್ನು ಯಾಕ ಬರಲಿಲ್ಲಯ್ಯೋ ಹೊನ್ನಳ್ಳಿಯಾಕಿ !
ವಾರದಾಗ ಬರ್ತಿನಂತ ಹೇಳಿ ಹೋದಾಕಿ
ನೀನೆ ನನ್ನ ಸರದಾರಂತ ಮೆಚ್ಚಿಕೊಂಡಾಕಿ
ನೀನೆ ನನ್ನ ಮನ್ಮಥಂತ ನೆಚ್ಚಿಕೊಂಡಾಕಿ
ಕೊರಳಿನ್ಯಾಗ ಕರಿಮಣಿಸರ ಕಟ್ಟಿಕೊಂಡಾಕಿ
ಬೆರಳಿನ್ಯಾಗ ಒಲವಿನುಂಗರ ಇಟ್ಟುಕೊಂಡಾಕಿ
ಇನ್ನು ಯಾಕ ಬರಲಿಲ್ಲಯ್ಯೋ ಹೊನ್ನಳ್ಳಿಯಾಕಿ !
ವಾರದಾಗ ಬರ್ತಿನಂತ ಹೇಳಿ ಹೋದಾಕಿ
ಮಾರಿಯಲ್ಲಿ ನಗೀಮಲ್ಲಿಗೆ ಮುಡಿದುಕೊಂಡಾಕಿ
ಕಣ್ಣಿನಲ್ಲಿ ಚಿಕ್ಕಿಬೆಳಕ ತುಂಬಿಕೊಂಡಾಕಿ
ಏಳು ಜಲ್ಮಕ ಹೆಣ್ತಿಯಾಗಿ ಬರ್ತಿನಂದಾಕಿ
ಉಸಿರಿನಲ್ಲಿ ನನ್ನ ಹೆಸರು ಇರಿಸಿಕೊಂಡಾಕಿ
ಇನ್ನು ಯಾಕ ಬರಲಿಲ್ಲಯ್ಯೋ ಹೊನ್ನಳ್ಳಿಯಾಕಿ !
ವಾರದಾಗ ಬರ್ತಿನಂತ ಹೇಳಿ ಹೋದಾಕಿ
ಮಲ್ಲ ! ಕಲ್ಲ ! ಈರ ! ಬೀರ ! ಬಂದಾಳೇನಾಕಿ ?
ಸಂಗ್ಯ ! ನಿಂಗ್ಯ ಸಿದ್ದಲಿಂಗ್ಯ ! ಎಲ್ಲಿ ನನ್ನಾಕಿ ?
ಸಿಟ್ಟು ಸೆಡವು ಮಾಡಿಕೊಂಡು ಹೋದಾಳ ಜ್ಞಾಕಿ
ದಾರಿ ಕಾದು ನಾನಾಗೀನಿ ಜಾತಕಪಕ್ಷಿ
ಇನ್ನು ಯಾಕ ಬರಲಿಲ್ಲಯ್ಯೋ ಹೊನ್ನಳ್ಳಿಯಾಕಿ !
ವಾರದಾಗ ಬರ್ತಿನಂತ ಹೇಳಿ ಹೋದಾಕಿ
(ದ.ರಾ ಬೇಂದ್ರೆಯವರ ಕವನ “ಹುಬ್ಬಳ್ಳಿಯಾಂವಾ” “ಇನ್ನೂ ಯಾಕ ಬರಲಿಲ್ಲವ್ವಾ ಹುಬ್ಬಳ್ಳಿಯಾಂವಾ ವಾರದಾಗ ಮೂರು ಸರತಿ ಬಂದುಹೋಗಾಂವಾ’ ಧಾಟಿಯಲ್ಲಿ)
ಎನ್.ಶರಣಪ್ಪ ಮೆಟ್ರಿ

