- Advertisement -
ಸಿಡುಕದಿರು ಪರರೊಡನೆ ಚಡಪಡಿಸುವೆಯೊ ಕೊನೆಗೆ ಕೆಡುಕಿಗೂ ಕಾರಣವು ಮನದೊಳಿನ ಸಿಡುಕು ಒಡಕು ಮೂಡಿಸಬಹುದು ಬೆಸೆದ ನಂಟಿನ ನಡುವೆ ತಡೆ ಮನದ ಕಡುಕೋಪ ಈಶತನಯ
ಅಂತರಂಗದ ಕದವ ತೆರೆದು ಮಂಥನ ಮಾಡು
ಚಿಂತೆಯನು ಸರಿಸುತ್ತ ಚಿಂತನೆಯ ಮಾಡು
ಅಂತರಾಳವನರಿತು ಮನದ ಮಾಯೆಯನಳಿಸಿ
ಸಂತವಿಸು ಮನವನ್ನು ಈಶತನಯ
ಮನವೆಂಬ ಮರ್ಕಟವ ಅನವರತ ಪಳಗಿಸುವ
ಚಣಕೊಮ್ಮೆ ಎಲ್ಲೆಲ್ಲೊ ಅಲೆದಾಡದಂತೆ
ಘನತಪವನಿರಿಸುತ್ತ ಮನವ ನಿಶ್ಚಲಗೊಳಿಸಿ
ಅನುಭಾವ ಗಳಿಸೋಣ ಈಶತನಯ
- Advertisement -
ಶರಾವತಿ ಪಟಗಾರ
ಭಟ್ಕಳ
ಉತ್ತರ ಕನ್ನಡ