ಜೂನ್ ೧೦ ರಂದು ಮುನವಳ್ಳಿ ಸೋಮಶೇಖರ ಮಠದ ಪೀಠಾಧಿಪತಿಗಳಾದ ಶ್ರೀ.ಮ.ನಿ.ಪ್ರ.ಸ್ವ.ಮುರುಘೇಂದ್ರ ಮಹಾಸ್ವಾಮಿಗಳ ೫೦ನೇ ಜನ್ಮದಿನ.ಇದನ್ನು ಭಕ್ತರು ವೈಶಿಷ್ಟ್ಯಪೂರ್ಣ ಚಟುವಟಿಕೆಗಳನ್ನು ಹಮ್ಮಿಕೊಳ್ಳುವ ಮೂಲಕ ಸಂಘಟಿಸಿರುವರು. ಪೂಜ್ಯರ ಜನ್ಮದಿನ ಬಂದರೆ ಸಾಕು ಸಮಾಜಮುಖಿ ಮಹತ್ವದ ಕಾರ್ಯಗಳನ್ನು ಹಮ್ಮಿಕೊಳ್ಳುವ ಮೂಲಕ ಸಕಲ ಸದ್ಬಕ್ತರು ಜನ್ಮ ದಿನಾಚರಣೆಯನ್ನು ಆಚರಿಸುತ್ತ ಬಂದಿದ್ದು.ಮಾತೃ ಹೃದಯದ ಮುರುಘೇಂದ್ರ ಮಹಾಸ್ವಾಮಿಗಳು ನಿಜಕ್ಕೂ ತಮ್ಮ ಸಮಾಜಮುಖಿ ಚಟುವಟಿಕೆಗಳ ಮೂಲಕ ಬದುಕನ್ನು ಸಾರ್ಥಕಪಡಿಸಿಕೊಳ್ಳುತ್ತಿರುವುದು ಮಾದರಿಯಾಗಿದೆ
ಇಲ್ಲಿನ ಸೋಮಶೇಖರ ಮಠ ತನ್ನದೇ ಆದ ಮುನಿ ಪರಂಪರೆ ಹೊಂದಿದ್ದು ಈ ಮಠಕ್ಕೆ ೧೬ ನೇ ಪೀಠಾಧಿಪತಿಗಳಾಗಿ ಪೂಜ್ಯಶ್ರೀ ಮುರುಘೇಂದ್ರ ಮಹಾಸ್ವಾಮಿಗಳು ದಯಮಾಡಿಸಿದ ಮೇಲೆ ಈ ಭಾಗದಲ್ಲಿ ನವ ಮನ್ವಂತರವೇ ಕಾಲಿಟ್ಟಿತು.ಪೂಜ್ಯರು ಪ್ರತಿವರ್ಷ ಪೂಜ್ಯಶ್ರೀ ಲಿಂಗೈಕ್ಯ ಬಸವಲಿಂಗ ಮಹಾಸ್ವಾಮಿಗಳವರ ಪುಣ್ಯಸ್ಮರಣೋತ್ಸವ ಅಂಗವಾಗಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಧಾರ್ಮಿಕ ಪರಂಪರೆಯಲ್ಲಿ ವಿನೂತನ ಹೆಜ್ಜೆಯನ್ನಿರಿಸಿದರು.
ಇಂಥ ಮಠ ಹಮ್ಮಿಕೊಂಡಿರುವ ಧಾರ್ಮಿಕ ಚಟುವಟಿಕೆಗಳು ನಿಜಕ್ಕೂ ಅಭೂತಪೂರ್ವ.ಶ್ರೀ ಮಠವು ಪುರಾತನವಾದುದು. ಈ ಮಠದ ಮುಂಭಾಗ ಹಳೆಯ ಕಲ್ಲುಗಳಿಂದ ಮಹಾದ್ವಾರ ಒಳಗೊಂಡಿದ್ದು ಒಳ ಪ್ರಾಂಗಣದಲ್ಲಿ ಕರ್ತೃ ಗದ್ದುಗೆ.ಪಕ್ಕದಲ್ಲಿ ಮಹಡಿ ಒಳಗೊಂಡಿದ್ದು ಹಳೆಯ ಕಾಲದ ಕಟ್ಟಿಗೆಯ ಬಳಸಿ ನಿರ್ಮಿಸಲಾಗಿದ್ದು,ಪಕ್ಕದಲ್ಲಿ ಸಭಾಭವನ ಹೊಂದಿದ್ದು ಪುರಾತನ ಇತಿಹಾಸದ ಜೊತೆಗೆ ಆಧುನಿಕ ಸ್ಪರ್ಶದ ಕಟ್ಟಡದೊಂದಿಗೆ ಮೇಳೈಸಿರುವ ಸೋಮಶೇಖರ ಮಠ ಮುನವಳ್ಳಿಯಲ್ಲಿ ಒಂದು ಮಾದರಿ ಮಠವಾಗಿ ಕಂಗೊಳಿಸುತ್ತಿದೆ.
ಮುನವಳ್ಳಿ ಸೋಮಶೇಖರ ಮಠಕ್ಕೆ ಬಹುದೊಡ್ಡ ಪರಂಪರೆಯಿದೆ.ಈ ಮಠಕ್ಕೆ ೧೫ ಜನ ಮಹಾಸ್ವಾಮಿಗಳು ಆಗಿ ಹೋಗಿದ್ದಾರೆ.ಇಂತಹ ಸತ್ಪರಂಪರೆ ಹೊಂದಿದ ಮಠಕ್ಕೆ ೧೬ ನೇ ಪೀಠಾಧಿಕಾರಿಗಳಾಗಿ ಬಂದವರು ಶ್ರೀ ಮ.ನಿ.ಪ್ರ.ಮುರುಘೇಂದ್ರ ಮಹಾಸ್ವಾಮಿಗಳು,ಮಠಕ್ಕೆ ಬಂದ ಕೆಲವೇ ದಿನಗಳಲ್ಲಿ ಭಕ್ತರ ಪ್ರೀತಿಯನ್ನು ಸಂಪಾದಿಸಿ ತಮ್ಮ ಪೂಜಾಬಲ,ಹಾಗೂ ಕಾಯಕದಿಂದ ಮುನವಳ್ಳಿಯ ನಡೆದಾಡುವ ದೇವರೆಂದು ಜನರಿಂದ ಬಿಂಬಿತವಾದವರು. ಮುನವಳ್ಳಿಯ ಸುತ್ತಮುತ್ತಲಿನ ಅನೇಕ ಸ್ಥಳಗಳಲ್ಲಿ ಹಾಗೂ ಮುನವಳ್ಳಿಯಲ್ಲಿ ಯಾವುದೇ ಕರ‍್ಯಕ್ರಮಗಳಿರಲಿ,ಯಾವುದೇ ಜಾತಿ ಜನಾಂಗದ ಸಭೆ ಸಮಾರಂಭಗಳಿರಲಿ ಅಲ್ಲಿ ಪೂಜ್ಯರ ಸಾನಿಧ್ಯೆ ಇದ್ದದ್ದೇ.ಯಾವುದೇ ಸತ್ಕರ್ಮ ಕಾರ್ಯಗಳಿದ್ದರೂ ಪೂಜ್ಯರ ಸಲಹೆ ಕೇಳುವ ಮೂಲಕ ಮುಂದಡಿಯಿಡುವ ಮಟ್ಟಿಗೆ ಜನರಲ್ಲಿ ಪೂಜ್ಯರು ನೆಲೆಸಿರುವರು.
ಶ್ರೀ.ಮ.ನಿ.ಪ್ರ.ಸ್ವ.ಮುರುಘೇಂದ್ರ ಮಹಾಸ್ವಾಮಿಗಳು
ಮುರುಘೇಂದ್ರ ಶರಣರು ಮೂಲತ: ಸವದತ್ತಿ ತಾಲೂಕಿನ ಕುಶಲಾಪುರ ಎಂಬ ಗ್ರಾಮದ ಶರಣ ದಂಪತಿಗಳಾದ ಲಿಂ.ವೀರಯ್ಯಾ ಮತ್ತು ಸಿದ್ದಮ್ಮನವರ ಉದರದಲ್ಲಿ ೧೦ ಜೂನ್ ೧೯೭೪ ರಲ್ಲಿ ಜನ್ಮ ತಾಳಿದರು.ಇವರ ಮನೆಯಲ್ಲಿ ಮೊದಲಿನಿಂದಲೂ ಅಥಣಿಯ ಮುರುಘೇಂದ್ರ ಸ್ವಾಮಿಗಳ ಬಗ್ಗೆ ಅಪಾರ ಭಕ್ತಿ,ಮಮತೆ,ಹೀಗಾಗಿ ಇವರಿಗೆ ಮುರುಘೇಂದ್ರ ಎಂಬ ನಾಮಕರಣ ಮಾಡುವ ಮೂಲಕ ಇವರ ಮಾತಾಪಿತರು ಮುರುಘೇಂದ್ರರ ಹೆಸರು ಕರೆದರು. ಬೆಳೆಯ ಸಿರಿ ಮೊಳಕೆಯಲ್ಲಿ ಎಂಬಂತೆ ಬಾಲ್ಯದಲ್ಲಿನ ಇವರ ತೇಜಸ್ಸು ಮುಂದೊಂದು ದಿನ ಈ ವ್ಯಕ್ತಿ ಸಮಾಜದಲ್ಲಿ ಹೆಸರುವಾಸಿಯಾಗುತ್ತಾನೆ ಎಂಬಂತಿತ್ತು.ಪ್ರಾಥಮಿಕ ಶಿಕ್ಷಣವನ್ನು ಸ್ವಗ್ರಾಮದಲ್ಲಿ ಕಲಿತು ಮುಂದೆ ಪ್ರೌಢ ಶಿಕ್ಷಣವನ್ನು ಯಕ್ಕುಂಡಿ ಗ್ರಾಮದಲ್ಲಿ ಪೂರೈಸಿದರು.ಬೆಳಗಾವಿಯ ಶ್ರೀ ಶಿವಬಸವ ಮಹಾಸ್ವಾಮಿಗಳು ಹಾಗೂ ಯಕ್ಕುಂಡಿಯ ಶ್ರೀ ವಿರುಪಾಕ್ಷ ಪೂಜ್ಯರ ಅನುಗ್ರಹದ ಮೇರೆಗೆ ಮತ್ತು ಗ್ರಾಮದ ಗುರುಹಿರಿಯರು ಹಿತೈಷಿಗಳು ಇವರನ್ನು ಧಾರ್ಮಿಕ ಶಿಕ್ಷಣ ಪಡೆಯಲು ಶಿವಯೋಗ ಮಂದಿರಕ್ಕೆ ಕಳುಹಿಸಿದರು.ಶಿವಯೋಗಮಂದಿರದ ಪ್ರಭೆಯಲ್ಲಿ ಮಿಂದ ಇವರು ವಚನ ಸಾಹಿತ್ಯದ ದೀರ್ಘ ಅಧ್ಯಯನ, ಶಾಸ್ತ್ರ,ಅಧ್ಯಾತ್ಮ ಯೋಗ,ಸಂಸ್ಕೃತವನ್ನು ಸತತ ಮೂರು ವರ್ಷಗಳವರೆಗೆ ಅಧ್ಯಯನಗೈದರು.
ಇನ್ನೂ ಹೆಚ್ಚಿನ ಅಧ್ಯಯನ ಮಾಡಬೇಕೆಂಬ ಹಂಬಲದಿಂದ ಕಮತಗಿಯ ಪೂಜ್ಯರಾದ ಶ್ರೀ ಹುಚ್ಚೇಶ್ವರ ಸ್ವಾಮಿಗಳ ಹಾಗೂ ಅಲ್ಲಿಯ ಭಕ್ತರ ಬಳಿ ಬಂದಾಗ ಮೈಸೂರಿನ ಸುತ್ತೂರು ಮಠಕ್ಕೆ ಸಂಸ್ಕೃತದಲ್ಲಿ ಹೆಚ್ಚಿನ ವ್ಯಾಸಾಂಗ ಪಡೆಯಲು ಕಳುಹಿಸಿದರು,ಇಲ್ಲಿಯ ಜೆ,ಎಸ್,ಎಸ್,ಗುರುಕುಲ ವಿದ್ಯಾಪೀಠದಲ್ಲಿದ್ದುಕೊಂಡು ಶಕ್ತಿವಿಶಿಷ್ಟಾದ್ವೈತವನ್ನು ಮಹಾರಾಜ ಸಂಸ್ಕೃತ ಮಹಾವಿದ್ಯಾಲಯದಲ್ಲಿ ಪೂರೈಸಿದರು.ಸುತ್ತೂರು ಮಠ ಅಧ್ಯಾತ್ಮಿಕ ಒಲವಿನ ತಾಣ.ಮೈಸೂರು ರಾಜ ಮನೆತನದ ಗುರುಗಳಾದ ಲಿಂ.ಶಿವರಾತ್ರೀಶ್ವರರ ಭಕ್ತಿಯ ಬಿಲ್ವವೇ ಈ ಮಠ.ಇಂತಹ ಮಠದಲ್ಲಿ ಜ್ಞಾನ ಸಂಪಾದನೆ ಕೂಡ ವಿಶಿಷ್ಟವೇ ಅದು ಮುರುಘೇಂದ್ರ ಮಹಾಸ್ವಾಮೀಜಿಯವರಿಗೆ ಸಿದ್ದಿಸುವ ಜೊತೆಗೆ ಜ್ಞಾನದ ಪ್ರಸರಣಕ್ಕೂ ಪ್ರೇರಣೆ ನೀಡಿತು,
೧೯೯೯ ನೇ ಜನವರಿ ೨೪ ರಂದು ಮುನವಳ್ಳಿಯ ಸೋಮಶೇಖರ ಮಠಕ್ಕೆ ಪರಮಪೂಜ್ಯ ಹಾನಗಲ್ಲ ಕುಮಾರ ಸ್ವಾಮಿಗಳ ಅಪ್ಪಣೆಯ ಮೇರೆಗೆ ಹಾಗೂ ಇದೇ ಮಠದ ೧೫ ನೆಯ ಪೀಠಾಧಿಪತಿಗಳಾಗಿದ್ದ ಶ್ರೀ ಚನ್ನಬಸವ ಮಹಾಸ್ವಾಮಿಗಳ ಸದಿಚ್ಚೆಯ ಮೇರೆಗೆ ಹಾನಗಲ್ಲ ಪರಮಪೂಜ್ಯರಾದ ಶ್ರೀ ಕುಮಾರ ಸ್ವಾಮಿಗಳು ಅಂದರೆ ಈಗಿನ ಹುಬ್ಬಳ್ಳಿಯ ಮೂರುಸಾವಿರ ಮಠದ ಜಗದ್ಗುರುಗಳಾದ ಶ್ರೀಮನ್ ಮಹಾರಾಜ ನಿರಂಜನ ಜಗದ್ಗುರು ಗುರುಸಿದ್ದ ರಾಜಯೋಗೀಂದ್ರ ಮಹಾಸ್ವಾಮಿಗಳ ಅವರಿಂದ ಅಧಿಕಾರ ಪಡೆದು ಮುನವಳ್ಳಿಯ ಸೋಮಶೇಖರ ಮಠಕ್ಕೆ ಪೀಠಾಧಿಪತಿಗಳಾದರು.
ಸತ್ಪರಂಪರೆ ಹೊಂದಿದ ಶ್ರೀಮಠಕ್ಕೆ ಆಗಮಿಸಿದ ಸ್ವಾಮೀಜಿ ಗ್ರಾಮದ ಎಲ್ಲ ಹಿರಿಯರು, ಯುವಕರು, ಮಕ್ಕಳು,ಅಕ್ಕನ ಬಳಗದ ಮಾತೆಯರು ಹೀಗೆ ಎಲ್ಲರನ್ನು ಗಮನಕ್ಕೆ ತೆಗೆದುಕೊಂಡು ಕಾಯಕ ದಾಸೋಹದ ಅರಿವು ಮೂಡಿಸುವ ಜೊತೆಗೆ ಯಾವ ಜಾತಿ ಜಂಜಾಟಕ್ಕೆ ಸಿಲುಕದೇ ಎಲ್ಲ ಸಮಾಜದವರೊಂದಿಗೆ ಬೆರೆತು ಸಮಾಜದ ಸ್ವಾಸ್ಥ್ಯ ಕಾಪಾಡುವ ನಿಟ್ಟಿನಲ್ಲಿ ಜನಹಿತ ಧಾರ್ಮಿಕ ಚಿಂತನೆಗಳನ್ನು ಮಾಡುತ್ತ ಮುನವಳ್ಳಯಲ್ಲಿ ಶ್ರೀ ಮುರುಘರಾಜೇಂದ್ರ ಯೋಗ ವಿದ್ಯಾ ಕೇಂದ್ರ,ಶ್ರೀ ಅನ್ನದಾನೇಶ್ವರ ಸ್ವತಂತ್ರಪೂರ್ವ ಹಾಗೂ ಪದವಿ ಮಹಾವಿದ್ಯಾಲಯ,ಶ್ರೀ ಅನ್ನದಾನೇಶ್ವರ ಗ್ರಾಮೀಣ ಅಭಿವೃದ್ದಿ ಸಂಘ,ಶ್ರೀ ಅಕ್ಕನ ಬಳಗ,ಶ್ರೀ ಶರಣ ಬಳಗ,ಬೈಲಹೊಂಗಲದಲ್ಲಿ ಶ್ರೀ ವಿರುಪಾಕ್ಷ ಸ್ವಾಮಿ ವಿದ್ಯಾರ್ಥಿನಿಲಯ, ಭಂಡಾರಹಳ್ಳಿಯಲ್ಲಿ ಶ್ರೀಮತಿ ಅಂದಾನೆಮ್ಮ ಯಕ್ಕುಂಡಿಮಠ ಕನ್ನಡ ಪೂರ್ವಪ್ರಾಥಮಿಕ ಹಾಗೂ ಪ್ರಾಥಮಿಕ ಶಾಲೆ ಅನ್ನದಾನೇಶ್ವರ ಗ್ರಾಮೀಣ ಅಭಿವೃದ್ದಿ ಸಂಘ ಸ್ಥಾಪಿಸುವ ಮೂಲಕ ಅನ್ನದಾಸೋಹ. ಜ್ಞಾನದಾಸೋಹ ಕಾರ‍್ಯಗಳಿಗೆ ಚಾಲನೆ ನೀಡಿರುವರು
ಶ್ರೀ ಸೋಮಶೇಖರ ಮಠ ಪೀಠ ಪರಂಪರೆ
ಮಠ ಎಂಬ ಪರಂಪರೆ ಮೊಟ್ಟ ಮೊದಲು ಪ್ರತಿಪಾದನೆಗೊಂಡಿರುವುದು ಮೂರನೆಯ ಶತಮಾನದ ಅಶ್ವಘೋಷನ ಬುಧ್ಧಚರಿತೆಯಲ್ಲಿ. ಮಢ ಪದವನ್ನು ಕುರಿತು ಅದರ ಲಕ್ಷಣ ಸ್ವರೂಪ ಕುರಿತು ಆತ ಹೀಗೆ ಹೇಳುತ್ತಾನೆ.
ಬ್ರಹ್ಮ ಘೋಷೋ ಭವೇತ್ಯ ತ್ರಯತ್ರ ಬ್ರಹ್ಮಾಶ್ರಯೀಸ್ಥತಃ
ದೇವಸ್ಯ ಪೂಜನಂ ದಾನಂ ಮಠ ಮಿತ್ಯಭಿಯತೇ
ಎಲ್ಲಿ ವೇದಾಧ್ಯಯನ,ದೇವರಪೂಜೆ,ದಾನಗಳು ನಡೆಯುತ್ತವೆಯೋ ಯಾವುದು ಬ್ರಹ್ಮಜ್ಞಾನಿಗಳಾದ ಸನ್ಯಾಸಿಗಳಿಗೆ ಆಶ್ರಯತಾಣವೋ ಅದುವೇ ಮಠ.
ಮಠಃ ಛಾತ್ರಾದಿ ನಿಲಯಃ ಎಂದು ಸಂಸ್ಕೃತ ನಿಘಂಟುಕಾರ ಅಮರಸಿಂಹನು ತನ್ನ ಅಮರ ಕಥಾಕೋಶದಲ್ಲಿ ತಿಳಿಸಿದ್ದಾನೆ.ಒಟ್ಟಿನಲ್ಲಿ ಮಠಗಳೆಂದರೆ ಗುರುಗಳ ಮತ್ತು ವಿದ್ಯಾರ್ಥಿಗಳ ವಾಸಸ್ಥಾನ ಅದೊಂದು ವಿದ್ಯಾಕೇಂದ್ರ.ಪವಿತ್ರ ಸ್ಥಳ.
ಕನ್ನಡ ನಾಡು ಅಧ್ಯಾತ್ಮದ ತವರೂರು.ಈ ನಾಡಿನಲ್ಲಿ ಅನೇಕ ಮಠ ಮಾನ್ಯಗಳು ಧಾರ್ಮಿಕ ಶೈಕ್ಷಣಿಕ ಸಾಮಾಜಿಕ ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿವೆ.ಇವುಗಳಿಗೆ ನೂರಾರು ವರ್ಷಗಳ ಐತಿಹಾಸಿಕ ಹಿನ್ನಲೆ ಇದೆ.ಧಾರ್ಮಿಕ ಜಾಗೃತಿ ಹಾಗೂ ಲೋಕಕಲ್ಯಾನಕ್ಕಾಗಿ ಅವಿರತವ ಆಗಿ ಶ್ರಮಿಸುತ್ತಿರುವ ಮಠಗಳು ಸಮಾನತೆಯನ್ನು ಒಡಮೂಡಿಸುವ ಶಕ್ತಿಕೇಂದ್ರಗಳಾಗಿವೆ.ಭಕ್ತರ ಬೇಕು-ಬೇಡಿಕೆಗಳನ್ನು ಪೂರೈಸುವುದರೊಂದಿಗೆ ಜಾತಿ-ಮತ,ಪಂಥಗಳನೆನ್ನದೇ ಸಕಲ ಜೀವಾತ್ಮರಿಗೆ ಲೇಸನ್ನೇ ಬಯಸಿ ಮಾನವೀಯ ಸಂಬಂಧಗಳನ್ನು ಗಟ್ಟಿಗೊಳಿಸಿವೆ.ನಾಡಿನ ಅನೇಕ ಸ್ವಾಮಿಗಳು ಸಾರ್ವತ್ರಿಕವಾಗಿ ಪ್ರಗತಿ ಸಾಧಿಸಿ ನಾಡಿಗೆ ಅಂಟಿದ ಕತ್ತಲೆಯನ್ನು ಹೊಡೆದೋಡಿಸಿದ್ದಾರೆ ಅಂತಹ ಮಠಗಳಲ್ಲಿ ಮುನವಳ್ಳಿ ಸೋಮಶೇಖರ ಮಠವು ಒಂದಾಗಿದೆ.
ಇದು ನೂರಾರು ವರ್ಷಗಳ ಪ್ರಾಚೀನತೆ ಹೊಂದಿದ ಮಠವಾಗಿದೆ, ಪೂಜ್ಯ ಅನ್ನದಾನೇಶ್ವರರು,ಪೂಜ್ಯ ಬಸವಲಿಂಗಸ್ವಾಮಿಗಳು ಭಕ್ತರೇ ನಿಜವಾದ ಆಸ್ತಿ ಎಂಬಂತೆ ಮಠ ಜೀರ್ಣೋದ್ಧಾರ ಮಾಡಬೇಕೆಂದು ಭಕ್ತರಲ್ಲಿ ಬಯಕೆ ಇಟ್ಟಾಗ. ಅನೇಕರು ಸಹಾಯ ಹಸ್ತ ಕಲ್ಪಿಸಿದರು. ಅದರಲ್ಲಿ ಬಾಳಿ ಕುಟುಂಬದವರು. ಹುಬ್ಬಳ್ಳಿಯ ಮುಸ್ಲಿಂ ಸಮುದಾಯದ ಭಕ್ತ ಮಹಬೂಬಸಾಬ ಹುಸೇನಸಾಬ ಹೆಬಸೂರ ಹಾಗೂ ಬಂಧುಗಳು.ದೇವಣಗಾವಿ ಅವರ ಸಹಾಯ ಅದ್ವಿತೀಯವಾದು ಅಂದು ಜೀರ್ಣೋದ್ದಾರಗೊಂಡರೂ ಕೂಡ ಹಳೆಯ ಕಟ್ಟಡ ಕಲ್ಲಿನಿಂದ ಕೂಡಿದ್ದು ಮುರುಘೇಂದ್ರ ಸ್ವಾಮೀಜಿಯವರು ದಯಪಾಲಿಸಿದ ಬಳಿಕ ಇಲ್ಲಿನ ಚಿತ್ರಣವೇ ಬದಲಾಗಿದೆ.
ಶ್ರೀ ಮಠದ ಪರಂಪರೆ
೧) ಅನ್ನದಾನೇಶ್ವರ ಮಹಾಸ್ವಾಮಿಗಳು, ನಿರ್ವಿಕಲ್ಪ ಸಮಾಧಿಸ್ಥರು
೨)ಶ್ರೀ ಸೋಮಶೇಖರ ಮಹಾ ಸ್ವಾಮಿಗಳು
೩) ೨ನೇ ಅನ್ನದಾನೇಶ್ವರ ಮಹಾ ಸ್ವಾಮಿಗಳು
೪) ೩ ನೇ ಅನ್ನದಾನೇಶ್ವರ ಮಹಾ ಸ್ವಾಮಿಗಳು
೫)೪ ನೇ ಅನ್ನದಾನೇಶ್ವರ ಮಹಾಸ್ವಾಮಿಗಳು
೬) ಚನ್ನಬಸವ ಮಹಾಸ್ವಾಮಿಗಳು
೭)ಬಸವಲಿಂಗ ಮಹಾಸ್ವಾಮಿಗಳು
೮) ೫ನೇ ಅನ್ನದಾನೇಶ್ವರ ಮಹಾಸ್ವಾಮಿಗಳು
೯) ೬ ನೇ ಅನ್ನದಾನೇಶ್ವರ ಮಹಾಸ್ವಾಮಿಗಳು
೧೦)ಬಸವಲಿಂಗ ಸ್ವಾಮಿಗಳು
೧೧)ಸೋಮಶೇಖರ ಸ್ವಾಮಿಗಳು
೧೨)ಚನ್ನಬಸವ ಸ್ವಾಮಿಗಳು
೧೩)ಬಸವಲಿಂಗ ಸ್ವಾಮಿಗಳು
೧೪)ಬಸವಲಿಂಗ ಸ್ವಾಮಿಗಳು(ಅಂದು ಶ್ರೀ ಮಠದ ಜೀರ್ಣೊದ್ಧಾರಕ್ಕೆ ಶ್ರಮಿಸಿದವರು)
೧೫) ಚನ್ನಬಸವ ಸ್ವಾಮಿಗಳು(ಸ್ವಾತಂತ್ರö್ಯ ಹೋರಾಟಗಾರರು)
೧೬) ಮುರುಘೇಂದ್ರ ಮಹಾಸ್ವಾಮಿಗಳು(ಪ್ರಸ್ತುತ ಪೂಜ್ಯರು)
ಬಸವಲಿಂಗ ಸ್ವಾಮಿಗಳು ಮೂಲತಃ ಹುಬ್ಬಳ್ಳಿಯ ದುರ್ಗದಬೈಲ ಹತ್ತಿರದ ಯಕ್ಕುಂಡಿಮಠದವರು. ಇವರು ಮುನವಳ್ಳಿಯ ಮಠಕ್ಕೆ ೧೪ ನೇ ಪೀಠಾಧಿಪತಿಗಳಾಗಿ ಬಂದ ನಂತರ ಮೊದಲು ವಾಸಿಸುತ್ತಿದ್ದುದು ಪಂಚಲಿಂಗೇಶ್ವರ ಕ್ರಾಸ್ ಮುಂದೆ ಯರಗಟ್ಟಿಗೆ ಹೋಗುವ ದಾರಿ ಅಂದರೆ ಈಗಿನ ಅನ್ನದಾನೆಶ್ವರ ಕಾಲೇಜು ಇರುವ ಸ್ಥಳ. ಇಲ್ಲಿ ಅವರು ಸತತ ೨೫ ವರ್ಷ ಕಾಲ ಬೇವಿನ ರಸ ಸೇವಿಸುವ ಮೂಲಕ ತಪೋನುಷ್ಟಾನಗೈದದ್ದು ಇಂದಿಗೂ ಇತಿಹಾಸವಾಗಿದೆ. ಭಕ್ತರ ಪಾಲಿಗೆ ಇವರು ಮಹಾತ್ಮರೆನಿಸಿಕೊಂಡಿದ್ದರು. ಊರಿನಲ್ಲಿರುವ ಪಾಳುಬಿದ್ದ ಸೋಮಶೇಖರ ಮಠವನ್ನು ಅಂದು ಇವರ ಇಚ್ಚಾನುಸಾರ ಜೀರ್ಣೋದ್ದಾರಗೈಯಲಾಯಿತು.
ತದನಂತರ ೧೫ ನೇ ಪೀಠಾಧಿಪತಿಗಳಾಗಿ ಬಂದವರು ಚನ್ನಬಸವ ಮಹಾಸ್ವಾಮಿಗಳು. ಇವರು ಕೃಷಿಕರೂ,ಸ್ವಾತಂತ್ರ್ಯ ಹೋರಾಟಗಾರರು ಆಗಿದ್ದರು.ಭಾರತದ ಸ್ವತಂತ್ರ ಹೋರಾಟದಲ್ಲಿ ಕ್ರಿ.ಶ.೧೯೦೬ ರಿಂದ ೧೯೨೦ ರ ವರೆಗಿನ ಕಾಲವನ್ನು ತಿಲಕ್ ಯುಗವೆಂದು ಕರೆಯಲಾಗಿದೆ. ಲೋಕಮಾನ್ಯ ಬಾಲಗಂಗಾಧರ ತಿಲಕರೇ ಈ ಯುಗದ ಆದ್ಯ ಪ್ರವರ್ತಕರು.ಅವರಿಗೆ ಹಿಂಬಾಲಕರಾಗಿ ಲಾಲಾ ಲಜಪತರಾಯ್.ಬಿಪಿನ್ ಚಂದ್ರಪಾಲ್,ಸುರೇಂದ್ರನಾಥ ಬ್ಯಾನರ್ಜಿ ಮೊದಲಾದವರು ಸಹಾಯಕರಾಗಿದ್ದರು.ಈ ತಿಲಕ್ ಯುಗದ ಸಮಯದಲ್ಲಿ ಬೆಳಗಾವಿ ಜಿಲ್ಲೆ ಸ್ವಾತಂತ್ರ್ಯ ದ ಹೋರಾಟದ ಕೇಂದ್ರವಾಗಿತ್ತು.
ತಿಲಕರು ತಮ್ಮ ಹೋರಾಟದ ಫಲವಾಗಿ ಬ್ರಿಟಿಷರಿಗೆ ಸಂಶಯ ಮೂಡದ ಹಾಗೆ ಶಿವಾಜಿ ಉತ್ಸವ,ಗಣೇಶ ಉತ್ಸವ ಹಬ್ಬಗಳ ಆಚರಿಸುವ ಮೂಲಕ ಸ್ವಾತಂತ್ರ್ಯ ಹೋರಾಟ ನಡೆಸಿದರು. ೧೯೩೧ ರಲ್ಲಿ ಮುನವಳ್ಳಿಯಲ್ಲಿ ಗಜಾನನ ಉತ್ಸವ ಆಚರಿಸಿ ಗಜಾನನ ಮೂರ್ತಿಗೆ ಗಾಂಧಿ ಟೋಪಿಯನ್ನು ಹಾಕಿದರು.ಈ ಉತ್ಸವಕ್ಕೆ ಕರ್ನಾಟಕದ ಗಾಂಧಿಯೆಂದು ಹೆಸರುವಾಸಿಯಾದ ಹರ್ಡೇಕರ ಮಂಜಪಪ್ಪನವರು ಆಗಮಿಸಿದ್ದರು.ಈ ರೀತಿ ತಿಲಕ್ ರ ಸ್ವಾತಂತ್ರ್ಯ ಹೋರಾಟದ ಪ್ರಭಾವ ಇಲ್ಲಿನ ಜನರ ಮೇಲಾಯಿತು. ನಂತರದ ದಿನಗಳಲ್ಲಿ ಇದು ಉಗ್ರ ಸ್ವರೂಪ ಪಡೆಯುತ್ತ ಸಾಗಿತು.
ಉಪ್ಪಿನ ಸತ್ಯಾಗ್ರಹವು ಸ್ವಾತಂತ್ರ್ಯ ಚಳವಳಿಯ ಪ್ರಥಮ ಹಂತವಾಗಿದ್ದು ಸ್ವಾತಂತ್ರ್ಯ ದೊರೆಯುವವರೆಗೂ ಈ ಸತ್ಯಾಗ್ರಹ ವಿವಿಧ ರೂಪಗಳಲ್ಲಿ ಮುಂದುವರಿಯಿತು.ಈ ಉಪ್ಪಿನ ಸತ್ಯಾಗ್ರಹವನ್ನು ಮುನವಳ್ಳಿಯಲ್ಲಿ ಚನ್ನಬಸವ ಮರಿದೇವರು ಜಾಹೀರ ಸಭೆಯಲ್ಲಿ ಉಪ್ಪು ಲೀಲಾವು ಮಾಡಿದರು.ಅದನ್ನು ಇಲ್ಲಿನ ಇನ್ನಿತರ ಸ್ವಾತಂತ್ರ್ಯ ಹೋರಾಟಗಾರು ಜನರೂ ಕೊಂಡು ಕೊಂಡರು. ಈ ಸುದ್ದಿ ತಿಳಿದ ಬ್ರಿಟಿಷರು ಇವರನ್ನು ಬಂಧಿಸಿದರು,ಬಂಧಿತರಾದ ಸ್ವಾಮಿಗಳು ಜೈಲಿನಲ್ಲಿಯೂ ಕೂಡ ಇವರ ಪೂಜಾ ಕೈಂಕರ್ಯ,ತಪೋನಿಷ್ಠೆ ಮಾಡತೊಡಗಿದಾಗ ಇದನ್ನು ಕಂಡು ಬ್ರಿಟಿಷರು ಇವರನ್ನು ಸನ್ಮಾನ ಮಾಡಿ ಕಳುಹಿಸಿದರೆಂದು ಇತಿಹಾಸದಿಂದ ತಿಳಿಯಬಹುದಾಗಿದೆ..ದೇಶಭಕ್ತಿ ಸ್ವಾವಲಂಬನೆ,ಪರೋಪಕಾರಿ,ಜಂಗಮ ದಾಸೋಹ ಪರಿಕಲ್ಪನೆ ಮೈಗೂಡಿಸಿಕೊಂಡಿದ್ದ ಇವರಿಗೆ ಕೇಂದ್ರ ಸರ್ಕಾರ ಸ್ವಾತಂತ್ರ್ಯ ಯೋಧರೆಂದು ಗುರುತಿಸಿ ತಾಮ್ರಪತ್ರ ನೀಡಿ ಗೌರವಿಸಿತು.ರಾಜ್ಯ ಸಕಾರವೂ ಕೂಡ ¸ಸನ್ಮಾನಿಸಿ ಕೃತಾರ್ಥವಾಗಿದೆ.ಈ ಮಠದ ಪೀಠಾಧಿಪತಿಗಳಾಗಿ ಮುರುಘೇಂದ್ರ ಶ್ರೀ ಗಳು ಆಗಮಿಸಿದ ನಂತರ ಶೈಕ್ಷಣಿಕ ಕ್ರಾಂತಿಯ ದೆಸೆ ಆರಂಭವಾಯಿತೆಂದರೆ ಅತಿಶಯೋಕ್ತಿ ಯಲ್ಲ
ಶ್ರೀ ಮಠದ ಸಂಸ್ಥೆಗಳು
೧) ಶ್ರೀ ಮುರುಘರಾಜೇಂದ್ರ ಯೋಗ ವಿದ್ಯಾಕೇಂದ್ರ ಮುನವಳ್ಳಿ
೨) ಶ್ರೀ ಅನ್ನದಾನೇಶ್ವರ ಸ್ವತಂತ್ರ ಪದವಿ ಪೂರ್ವ ಮಹಾವಿದ್ಯಾಲಯ ಮುನವಳ್ಳಿ
೩) ಶ್ರೀಮತಿ ಅಂದಾನೆಮ್ಮ ಯಕ್ಕುಂಡಿಮಠ ಕನ್ನಡ ಪೂರ್ವ ಪ್ರಾಥಮಿಕ ಹಾಗೂ ಪ್ರಾಥಮಿಕ ಶಾಲೆ ಭಂಡಾರಹಳ್ಳಿ
೪) ಶ್ರೀ ಚನ್ನ ಬಸವ ಮಹಾಸ್ವಾಮೀಜಿ ಕಲಾ ಹಾಗೂ ವಾಣಿಜ್ಯ ಪದವಿ ಮಹಾವಿದ್ಯಾಲಯ ಮುನವಳ್ಳಿ
೫) ಶ್ರೀ ವಿರೂಪಾಕ್ಷಸ್ವಾಮಿ ವಿದ್ಯಾರ್ಥಿ ನಿಲಯ ಬೈಲಹೊಂಗಲ
೬) ಶ್ರೀ ಅನ್ನದಾನೇಶ್ವರ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಮುನವಳ್ಳಿ
೭) ಶ್ರೀ ಅಕ್ಕನ ಬಳಗ ಹಾಗೂ ಶರಣರ ಬಳಗ ಮುನವಳ್ಳಿ.
ಶ್ರೀಗಳ ಕನಸುಗಳು
ಪೂಜ್ಯರು ತಮ್ಮ ೫೦ ನೆಯ ವರ್ಷದ ಜನ್ಮ ದಿನಾಚರಣೆಯ ಈ ಸಂದರ್ಭದಲ್ಲಿ ಹತ್ತು ಹಲವು ಕನಸುಗಳನ್ನು ಹೊಂದಿರುವರು.ಮುಖ್ಯವಾಗಿ ಸವದತ್ತಿ ತಾಲೂಕು ಇತಿಹಾಸ ಸಾಹಿತ್ಯ ಸಂಸ್ಕೃತಿ ಪರಂಪರೆಯ ಕುರಿತು ಕಿರು ಹೊತ್ತಿಗೆಗಳನ್ನು ಪ್ರಕಟಿಸಬೇಕು ನಮ್ಮ ತಾಲೂಕು ನಮ್ಮ ಹಿರಿಮೆ ಪ್ರತಿಯೊಬ್ಬರಿಗೂ ತಿಳಿಯಬೇಕು ಎನ್ನುವ ದಿಸೆಯಲ್ಲಿ ಸವದತ್ತಿ ತಾಲೂಕಿನ ಸಾಹಿತ್ಯ ಬಳಗವನ್ನು ಕಟ್ಟಿಕೊಂಡು ಕಿರು ಹೊತ್ತಿಗೆಗಳನ್ನು ಶ್ರೀಮಠದ ಪ್ರಕಾಶನದ ಮೂಲಕ ಪ್ರಕಟಿಸಬೇಕು ಎಂಬ ಮಹದಾಸೆ ಹೊಂದಿರುವರು. ಈಗಾಗಲೇ ಶ್ರೀ ಮಠದ ಪ್ರಕಾಶನದಲ್ಲಿ ತಲ್ಲೂರು ರಾಯನಗೌಡರು ಕುರಿತು ಕಾದಂಬರಿಯನ್ನು ಸವದತ್ತಿಯ ಸಾಹಿತಿ ಯ.ರು.ಪಾಟೀಲರು ಬರೆದಿರುವರು. ಮುನಿಪುರಾಧೀಶರು ಕೃತಿ ಕೂಡ ರಂಗನಾಥ ಕಮತರ ಅವರ ಸಂಪಾದಕತ್ವದಲ್ಲಿ ನಂತರ ರಮೇಶ ಮುರಂಕರ ಸಂಪಾದಕತ್ವದಲ್ಲಿ ಮುನವಳ್ಳಿ ಸಿರಿ ಕೃತಿ ಕೂಡ ಶ್ರೀಮಠದ ಕುರಿತು ಪ್ರಕಟವಾಗಿದ್ದು ಮುಂದಿನ ದಿನಗಳಲ್ಲಿ ಸವದತ್ತಿ ತಾಲೂಕಿನ ಇತಿಹಾಸ ಸಾಹಿತ್ಯ ಸಂಸ್ಕೃತಿ ಪರಂಪರೆಯನ್ನು ಕುರಿತು ಕೃತಿಗಳನ್ನು ಶ್ರೀ ಮಠದ ಪ್ರಕಾಶನದಿಂದ ಹೊರತರಬೇಕು.ಅವುಗಳು ಶಾಲಾ ವಿದ್ಯಾರ್ಥಿಗಳಿಗೆ ತಲುಪಬೇಕು.ಸವದತ್ತಿ ಇತಿಹಾಸ ಎಲ್ಲೆಡೆ ಪಸರಿಸಬೇಕು ಎಂಬ ಶ್ರೀಗಳ ಕನಸು ಶೀಘ್ರದಲ್ಲಿ ಚಾಲನೆಗೆ ಬರಲಿದೆ.೨೦೨೪ ಶ್ರೀಗಳ ೫೦ ನೆಯ ಹುಟ್ಟು ಹಬ್ಬ ಮಾತ್ರವಲ್ಲ ಅದೊಂದು ಸಾಹಿತ್ಯ ಕ್ಷೇತ್ರದ ನೂತನ ಕೃತಿಗಳ ಅನಾವರಣದ ವೇದಿಕೆ ಆಗಲಿದೆ ಎಂಬ ಹಿರಿದಾಸೆ ನನ್ನದು.ಪೂಜ್ಯರ ಹುಟ್ಟು ಹಬ್ಬ ಹತ್ತು ಹಲವು ರಚನಾತ್ಮಕ ಚಟುವಟಿಕೆಗಳಿಗೆ ಕಾರಣವಾಗುವ ಜೊತೆಗೆ ಅವರು ಕಂಡ ಕನಸುಗಳು ಸಾಕಾರಗೊಳ್ಳಲಿವೆ ಎಂದು ಅಭಿಮಾನದಿಂದ ಹೇಳಬಲ್ಲೆ., ಶ್ರೀಗಳ ಮಾತೃ ಹೃದಯಕ್ಕೆ ನನ್ನ ಪ್ರಣಾಮಗಳನ್ನು ಅರ್ಪಿಸುವ ಜೊತೆಗೆ ಹುಟ್ಟು ಹಬ್ಬದ ಶುಭಾಶಯಗಳನ್ನು ಭಕ್ತಿಯಿಂದ ಸಮರ್ಪಿಸುವೆ.
ವೈ.ಬಿ.ಕಡಕೋಳ(ಶಿಕ್ಷಕರು) ಮಾರುತಿ ಬಡಾವಣೆ ಸಿಂದೋಗಿ ಕ್ರಾಸ್.ಮುನವಳ್ಳಿ
ತಾಲೂಕ:ಸವದತ್ತಿ ಜಿಲ್ಲೆ: ಬೆಳಗಾವಿ *೯೪೪೯೫೧೮೪೦೦*