ಹೊಸ ಪುಸ್ತಕದ ಓದು; ತೋಂಟದ ಶ್ರೀಗಳ ದರ್ಶನ-ಸಂದರ್ಶನ

Must Read

ಮೂಡಲಗಿ ತಾಲೂಕಾ ಪತ್ರಕರ್ತರ ಸಂಘದ ಕಚೇರಿ ಉದ್ಘಾಟನೆ

ಮೂಡಲಗಿ - ಹಲವಾರು ಯುವ ಪತ್ರಕರ್ತರ ಉತ್ಸಾಹ ಹಾಗೂ ಕಾರ್ಯಶೀಲತೆಯ ಪ್ರತೀಕವಾಗಿ ರಚನೆಗೊಂಡ ಮೂಡಲಗಿ ತಾಲೂಕಾ ಪತ್ರಕರ್ತರ ಸಂಘದ ಕಚೇರಿಯನ್ನು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿಯವರ...

ಲೋಳಸೂರ ಹೊಸ ಸೇತುವೆ ನಿರ್ಮಿಸುವಂತೆ ನೂತನ ಸಿಎಂ ಅವರಿಗೆ ಕಡಾಡಿಯವರಿಂದ ಮನವಿ

ಮೂಡಲಗಿ: ಗೋಕಾಕ ನಗರಕ್ಕೆ ಸಂಪರ್ಕ ಕಲ್ಪಿಸುವ ಜತ್ತ ಜಾಂಬೋಟಿ ರಾಜ್ಯ ಹೆದ್ದಾರಿ-31 ರ ಲೋಳಸೂರ ಗ್ರಾಮದ ಹತ್ತಿರ ಘಟಪ್ರಭಾ ನದಿಗೆ ಅಡ್ಡಲಾಗಿ ಹೊಸ ಸೇತುವೆ ನಿರ್ಮಿಸುವಂತೆ...

ಭಾರತ ಮಾತೆಯ ಜ್ಞಾನ ಶಕ್ತಿ ಭಾರತೀಯ ಸ್ತ್ರೀಯಲ್ಲಿದೆ

ಪತಿವ್ರತೆಗೂ ಧರ್ಮ ಪತ್ನಿಗಿರುವ ವ್ಯತ್ಯಾಸವಿಷ್ಟೆ. ಪತಿವ್ರತೆ ಪತಿಯ ದಾರಿಯಲ್ಲಿ ತಾನೂ ನಡೆಯೋದು. ಧರ್ಮಪತ್ನಿ ಪತಿಯನ್ನು ಧರ್ಮದ ಹಾದಿಯಲ್ಲಿ ನಡೆಸೋದು. ಭೂಮಿ ಮೇಲೆ ಧರ್ಮ ನೆಲೆಸಬೇಕಾದರೆ ಸ್ತ್ರೀ...

ತೋಂಟದ ಶ್ರೀಗಳ ದರ್ಶನ-ಸಂದರ್ಶನ

ಕನ್ನಡ ಸಾಹಿತ್ಯದಲ್ಲಿ ಸಂದರ್ಶನ ಕೃತಿಗಳು ಪ್ರಕಟವಾದುದು ಅಪರೂಪವೆಂದೇ ಹೇಳಬೇಕು. ಕುವೆಂಪು ಸಂದರ್ಶನ, ದೇಜಗೌ ಸಂದರ್ಶನ, ಚೆನ್ನವೀರ ಕಣವಿ ಸಂದರ್ಶನ, ಎಂ. ಎಂ. ಕಲಬುರ್ಗಿ ಸಂದರ್ಶನ ಮೊದಲಾದ ಬೆರಳೆಣಿಕೆಯ ಕೃತಿಗಳು ಮಾತ್ರ ಪ್ರಕಟವಾಗಿದ್ದವು. ಇವುಗಳ ಸಾಲಿಗೆ ನೂತನ ಕೃತಿಯೊಂದು ಸೇರ್ಪಡೆಯಾಗುತ್ತಿದೆ, ಅದೇ ಶ್ರೀ ಶಿವನಗೌಡ ಗೌಡರ ಅವರು ಸಂಪಾದಿಸಿದ ‘ತೋಂಟದ ಶ್ರೀಗಳ ದರ್ಶನ-ಸಂದರ್ಶನ’.

ಪ್ರಸ್ತುತ ಕೃತಿಯಲ್ಲಿ ೨೫ ಅಪರೂಪದ ಸಂದರ್ಶನಗಳಿವೆ. ಮಾಧ್ಯಮ ಪ್ರತಿನಿಧಿಗಳು ಸಮಯ ಸಂದರ್ಭ ಸಿಕ್ಕಾಗಲೆಲ್ಲ ಶ್ರೀಗಳನ್ನು ಸಂದರ್ಶನ ಮಾಡಿದ್ದಾರೆ. ಕೆಲವು ವೈಯಕ್ತಿಕ ನೆಲೆಯ ಸಂದರ್ಶನಗಳೆನಿಸಿದರೂ ಅವು ಸಮಷ್ಟಿ ಹಿತದ ಮೌಲ್ಯಗಳನ್ನೇ ಸಾರುತ್ತವೆ.

ಡಾ. ಬಸವರಾಜ ಸಾದರ ಅವರ ಮೊದಲ ಸಂದರ್ಶನ ‘ಸಮಾಜಮುಖಿ ಸಂಚಲನೆ, ಸಮಾನ ಪ್ರಗತಿಯ ಮುಂಚಲನೆ’ ಮಹಾಮನೆ ಪತ್ರಿಕೆಗೆ ನೀಡಿದ ಸಂದರ್ಶನ. ಡಾ. ಸಾದರ ಅವರು ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಹೊಸದರಲ್ಲಿ ಮಹಾಮನೆ ಪತ್ರಿಕೆಗೆ ಒಂದು ಹೊಸರೂಪ ನೀಡಬೇಕೆಂದು ಬಯಸಿ, ಅದರ ರೂಪ-ಸ್ವರೂಪವನ್ನೇ ಬದಲಾಯಿಸಿದರು. ಈ ಹಿನ್ನೆಲೆಯಲ್ಲಿ ನಮ್ಮ ಮಧ್ಯದಲ್ಲಿರುವ ತೋಂಟದ ಶ್ರೀಗಳ ಬಸವ ತತ್ವ ಪ್ರಯೋಗದ ಆವಿಷ್ಕಾರ-ಅನುಷ್ಠಾನದ ಸಲುವಾಗಿ ಮಾಡಿದ ಹೋರಾಟದ ಕಥನವನ್ನು ಸ್ವತಃ ಶ್ರೀಗಳೇ ತುಂಬ ಆಪ್ತವಾಗಿ ನಿರೂಪಿಸುತ್ತಾ ಹೋಗಿರುವುದು ಈ ಸಂದರ್ಶನದ ಹೆಚ್ಚುಗಾರಿಕೆ ಎನಿಸಿದೆ.

- Advertisement -

ಅಮರೇಗೌಡ ಗೋನವಾರ ಅವರು ಮಾಡಿದ ಸಂದರ್ಶನ ‘ಕಬ್ಬಿಣ ಕಾದಾಗಲೇ ಬಡಿಯಬೇಕು’ ಸ್ವತಂತ್ರ ಲಿಂಗಾಯತ ಧರ್ಮದ ಹೋರಾಟ ನಡೆದ ಸಂದರ್ಭದಲ್ಲಿ ನೀಡಿದ್ದು. ಕಾಲ ಪಕ್ವವಾದಾಗಲೇ ಹೋರಾಟ ನಡೆಯಬೇಕು, ಆಗ ಮಾತ್ರ ಆ ಹೋರಾಟ ಒಂದು ತಾರ್ಕಿಕ ನೆಲೆಯನ್ನು ಕಾಣಬಹುದೆಂಬ ಆಶಯ ಶ್ರೀಗಳವರದು. ಇದೇ ಆಶಯದ ಇನ್ನೊಂದು ಸಂದರ್ಶನವನ್ನು ಎಸ್.ವಿ. ಶಿವಪ್ಪಯ್ಯನಮಠ ಅವರು ಮಾಡಿದ್ದಾರೆ.

ಉತ್ತರ ಕರ್ನಾಟಕದ ಪರಿಸರ ಸಂರಕ್ಷಣೆ ಹೋರಾಟದಲ್ಲಿ ಶ್ರೀಗಳವರ ಪಾತ್ರ ಅಪಾರ. ಅದರಲ್ಲೂ ಕಪ್ಪತಗುಡ್ಡದ ಸಂರಕ್ಷಣೆ ವಿಷಯದಲ್ಲಿ ಶ್ರೀಗಳು ತೆಗೆದುಕೊಂಡ ನಿಲುವು ಅನನ್ಯವಾಗಿತ್ತು. ಕಪ್ಪತಗುಡ್ಡದ ಹೋರಾಟ ನಡೆದ ಸಂದರ್ಭದಲ್ಲಿ ಶೇಷ ಕೃಷ್ಣ, ಜೋಮನ್ ವರ್ಗೀಸ್, ಸುಭಾಷ ಹೂಗಾರ ಮೊದಲಾದವರು ಮಾಡಿದ ಸಂದರ್ಶನಗಳು ಇಲ್ಲಿವೆ. ಶೇಷ ಕೃಷ್ಣ ಅವರು ಬಿ.ಟಿವಿಗಾಗಿ ಮಾಡಿದ ವಿಡಿಯೋ ಸಂದರ್ಶನವನ್ನು ಬರಹರೂಪಕ್ಕಿಳಿಸಿದ್ದು ಸಾರ್ಥಕವೆನಿಸಿದೆ.

ಮಠಗಳ ವಿಷಯವಾಗಿ ಶ್ರೀಗಳು ತಮ್ಮ ನೇರ ನಿಷ್ಠುರ ಅಭಿಪ್ರಾಯಗಳನ್ನು ನೀಡುತ್ತ ಬಂದವರು. ಸಿದ್ಧಯ್ಯ ಹಿರೇಮಠ ಅವರ ‘ಜನರು ಮಠಗಳಿಂದ ದೂರ ಉಳಿದಾರು’, ಮಲ್ಲಿಕಾರ್ಜುನ ಸಿದ್ದಣ್ಣವರ ಅವರ ‘ಮಠಾಧೀಶರು ಒಂದೊಂದು ಪಕ್ಷದ ವಕ್ತಾರರಂತಾಗಿದ್ದಾರೆ’ ಎಂಬ ಸಂದರ್ಶನಗಳು ಮಠಗಳು-ಮಠಾಧೀಶರು ಸಾಗಬೇಕಾದ ದಾರಿಯನ್ನು ತೋರುತ್ತವೆ.

ಕೋಮು ಸೌಹಾರ್ದತೆ ವಿಷಯವಾಗಿ ಶ್ರೀಗಳ ಅಭಿಪ್ರಾಯವನ್ನು ಅನೇಕ ಪತ್ರಕರ್ತರು ಪಡೆದಿರುವುದು ಇಲ್ಲಿ ದಾಖಲಾಗಿದೆ. ಹಾಗೆಯೇ ಮಂದಿರ-ಮಸೀದಿಗಳ ಸಲುವಾಗಿ ನಡೆಯುತ್ತಿರುವ ಕ್ಷೋಭೆಯ ಕುರಿತು ಶ್ರೀಗಳ ನೇರ ನಿಷ್ಠುರ ಅಭಿಪ್ರಾಯಗಳು ಇಲ್ಲಿ ಪ್ರಕಟವಾಗಿವೆ. ಇಂದುಧರ ಹೊನ್ನಾಪುರ ಅವರ ಸಂದರ್ಶನದಲ್ಲಿ ‘ಭಯೋತ್ಪಾದನೆ ಯಾವ ಧರ್ಮದಲ್ಲಿದ್ದರೂ ಸಲ್ಲದು’ ಎಂಬ ಅಭಿಪ್ರಾಯವನ್ನು ಶ್ರೀಗಳು ತಾಳಿದ್ದಾರೆ.

ಕನ್ನಡ ಪ್ರಭದಲ್ಲಿ ಮಂಜುನಾಥ ಬಮ್ಮನಕಟ್ಟಿ ಅವರು ಮಾಡಿದ ಸಂದರ್ಶನ ಒಂದಿಷ್ಟು ವಿವಾದಕ್ಕೆ ಕಾರಣವಾಗಿತ್ತು. ‘ಕರ್ನಾಟಕದ ಮೂಲ ನಿವಾಸಿಗಳು ಬೇಡರು-ಕುರುಬರು’ ಎಂಬ ಅಭಿಪ್ರಾಯಕ್ಕೆ ತೀವ್ರತರದ ಪ್ರತಿಕ್ರಿಯೆಗಳು ಬಂದವು. ಆದರೆ ಶ್ರೀಗಳು ಹೇಳಿದ ಮಾತುಗಳನ್ನು ತಪ್ಪಾಗಿ ಗ್ರಹಿಸಿದ್ದೇ ಇದಕ್ಕೆ ಕಾರಣವೆಂದು ನಂತರ ಎಲ್ಲರಿಗೂ ತಿಳಿಯುವಂತಾಯಿತು.

ಇಲ್ಲಿಯ ಸಂದರ್ಶನಗಳನ್ನು ಮಾಡಿದವರು ಬಹುತೇಕ ಜನ ಪತ್ರಕರ್ತರೆಂಬುದು ಗಮನಿಸುವ ಅಂಶ. ಗಣೇಶ ಅಮೀನಗಡ, ಸಂಗಮೇಶ ಮೆಣಸಿನಕಾಯಿ, ಆರೂರ್ ಲಕ್ಷ್ಮಣ ಶೇಟ್, ಸೂರ್ಯಪ್ರಕಾಶ, ಸರಜೂ ಕಾಟ್ಕರ್ ಮೊದಲಾದವರ ಮಹತ್ವದ ಸಂದರ್ಶನಗಳು ಒಂದೆಡೆ ದಾಖಲಾಗಿರುವುದು ವಿಶೇಷ.

ಕೃತಿಯ ಎರಡನೆಯ ಭಾಗದಲ್ಲಿ ಶ್ರೀಗಳ ದರ್ಶನ ಭಾಗ ಪ್ರಕಟವಾಗಿದೆ. ಇಲ್ಲಿ ಶ್ರೀಗಳ ಕವಿತೆ-ಭಾಷಣ-ಲೇಖನಗಳನ್ನು ಸಂಗ್ರಹಿಸಲಾಗಿದೆ. ೧೯೬೭ರಲ್ಲಿ ಶ್ರೀಗಳು ಇನ್ನೂ ಅಧ್ಯಯನ ಮಾಡುತ್ತಿದ್ದ ಸಂದರ್ಭದಲ್ಲಿ ಬರೆದ ‘ಗಾಂಧಿ’ ಎಂಬ ಪದ್ಯ ಓದುಗರ ಗಮನ ಸೆಳೆಯುತ್ತದೆ.

‘ಗುಂಡು ಹಾರಿಸಲಿಲ್ಲ | ದಂಡು ಕಟ್ಟಲು ಇಲ್ಲ | ಆದರೂ ಅವನೊಬ್ಬ ಬಂಡುಗಾರ! ಚಂಡ ಪ್ರತಾಪದಿ ಚಕ್ರವರ್ತಿಗಳನ್ನು | ತಳಮಳಿಸಿ ಬಿಟ್ಟ | ಅಂವ ಧೀರ|’

ಇದು ಗಾಂಧೀಜಿಯವರ ಘನವ್ಯಕ್ತಿತ್ವವನ್ನು ಕಟ್ಟಿಕೊಡುತ್ತದೆ. ೧೯೮೦ರಲ್ಲಿ ತಮ್ಮ ಗುರುಗಳಾಗಿದ್ದ ಸಿಂದಗಿ ಪಟ್ಟಾಧ್ಯಕ್ಷರು ಲಿಂಗೈಕ್ಯರಾದ ಸಂದರ್ಭದಲ್ಲಿ ಬರೆದ ಕವಿತೆ ‘ಹಗಲಿನಲ್ಲಿ ಸಂಜೆಯಾಯಿತು’ ಒಂದು ಭಾವನಾತ್ಮಕವಾಗಿ ಹಿಡಿದಿಡುವ ಅಪರೂಪದ ಪದ್ಯವಾಗಿದೆ.

‘ಹಗಲಿನಲ್ಲಿಯೆ ಸಂಜೆಯಾಯಿತು | ತಮವು ಕವಿಯಿತು ಒಮ್ಮೆಲೆ| ಸಿಂದಗಿಯ ಶ್ರೀ ಶಾಂತವೀರರು | ಶಿವನ ಸೇರಿದರೆನ್ನಲೆ| ಏನಿದವಸರ ಎಷ್ಟಿದವಸರ | ಹೊರಟು ಬಿಟ್ಟಿರಿ ಆಗಲೇ | ಮಕ್ಕಳಾಟದ ಮನೆಯ ಕಟ್ಟುತ | ಬಿಟ್ಟು ಓಡಿದ ತೆರನವೆ|’

ಇಡೀ ಪದ್ಯ ಸಿಂದಗಿ ಪಟ್ಟಾಧ್ಯಕ್ಷರ ಮಾನವೀಯ ವ್ಯಕ್ತಿತ್ವವನ್ನು ಎತ್ತಿ ತೋರಿಸುತ್ತದೆ. ಈ ಪದ್ಯಕ್ಕೆ ಸಿಂದಗಿ ಗುರುಗಳು ಎಷ್ಟು ಅನ್ವರ್ಥಕರಾಗಿ ಬದುಕಿದ್ದರೋ, ಅಷ್ಟೇ ಅನ್ವರ್ಥಕರಾಗಿ ಗದುಗಿನ ಜಗದ್ಗುರುಗಳು ಬದುಕಿದರು ಎಂಬುದು ಸೋಜಿಗದ ಸಂಗತಿ.

ಈ ಸಂಕಲನದಲ್ಲಿ ಆದರ್ಶ ಗುರುಗಳು, ತ್ರಿಶೂಲ, ಲೋಕಗುರು, ನಮ್ಮ ಮೇಷ್ಟ್ರು ಮೊದಲಾದ ಕವನಗಳಿವೆ. ಶ್ರೀಗಳು ಕೊಪ್ಪಳದ ಅಗಡಿ ಸಂಗಣ್ಣನವರನ್ನು ಕುರಿತು ಬರೆದ ‘ಕೋಪಣಾಚಲದ ಸಂಗಣ್ಣ’ ಎಂಬ ಪದ್ಯವೊಂದು ಇದರಲ್ಲಿ ಸೇರಬೇಕಾಗಿತ್ತು. ಅದೊಂದು ಚಿಕ್ಕ ಕೊರತೆ ಇಲ್ಲಿ ಕಾಣುತ್ತದೆ.

ಶ್ರೀಗಳು ಇತಿಹಾಸ ಅಕಾಡೆಮಿಯ ಸಮ್ಮೇಳನವನ್ನು ಉದ್ಘಾಟಿಸಿ ಮಾಡಿದ ‘ಇತಿಹಾಸ ಅಧ್ಯಯನ-ಅಂದು-ಇಂದು’ ಎಂಬ ಭಾಷಣ ತುಂಬ ಮೌಲಿಕವಾಗಿದೆ. ಶ್ರೀಗಳ ಆಳವಾದ ಅಧ್ಯಯನಕ್ಕೆ ಸಾಕ್ಷಿಯಾಗಿದೆ.

ಕೆಲವು ವ್ಯಕ್ತಿಚಿತ್ರಗಳು ಇಲ್ಲಿವೆ. ಹಿರೇಮಲ್ಲೂರ ಈಶ್ವರನ್, ಎಂ. ಎಂ. ಕಲಬುರ್ಗಿ, ಸಿದ್ಧಲಿಂಗ ಪಟ್ಟಣಶೆಟ್ಟಿ ಮೊದಲಾದವರು ಶ್ರೀಗಳೊಂದಿಗೆ ಹೊಂದಿದ ಒಡನಾಟದ ಕ್ಷಣಗಳು ಇಲ್ಲಿ ದಾಖಲಾಗಿವೆ. ಒಟ್ಟು ೨೮ ಕವನ ಲೇಖನಗಳು ಇಲ್ಲಿ ಪ್ರಕಟವಾಗಿವೆ.

ಶ್ರೀ ಶಿವನಗೌಡ ಗೌಡರ ಅವರು ಇವೆಲ್ಲವುಗಳನ್ನು ಅನೇಕ ಮೂಲಗಳಿಂದ ಸಂಗ್ರಹಿಸಲು ತುಂಬ ಶ್ರಮಪಟ್ಟಿದ್ದಾರೆ. ಅವರ ಶ್ರಮ ಸಾರ್ಥಕವಾಗಿದೆ. ಕೃತಿಗೆ ಬೆನ್ನುಡಿ ಬರೆದ ಪ್ರೊ. ಚಂದ್ರಶೇಖರ ವಸ್ತ್ರದ ಅವರ ನುಡಿಗಳು ಕೃತಿಯ ಮಹತ್ವವನ್ನು ಹೀಗೆ ಹೇಳುತ್ತವೆ : “ಪೂಜ್ಯರನ್ನು ತೀರ ಹತ್ತಿರದಿಂದ ಬಲ್ಲ, ನಿತ್ಯ ಅವರ ದರ್ಶನ ಭಾಗ್ಯ ಪಡೆಯುತ್ತಿದ್ದ ಶ್ರೀಗಳ ಆಪ್ತಕಾರ್ಯದರ್ಶಿ ಶ್ರೀ ಶಿವನಗೌಡ ಗೌಡರ ಅವರು ಶ್ರೀಗಳ ಸೃಜನಶೀಲ ಬರೆಹದ ದರ್ಶನ ಹಾಗೂ ಶ್ರೀಗಳೊಂದಿಗೆ ಮಾಧ್ಯಮದ ಬಂಧುಗಳು, ಸಾಂಸ್ಕೃತಿಕ ವಕ್ತಾರರು ನಡೆಯಿಸಿದ ಸಂದರ್ಶನಗಳನ್ನೊಳಗೊಂಡ ‘ದರ್ಶನ-ಸಂದರ್ಶನ’ ಕೃತಿಯನ್ನು ಕನ್ನಡಿಗರ ಕೈಗಿಡುತ್ತಿದ್ದಾರೆ….ಶ್ರೀಗಳು ಅಕ್ಷರರೂಪದಲ್ಲಿ ದರ್ಶನವಿತ್ತಿದ್ದಾರೆ. ಇದನ್ನು ಆಗು ಮಾಡಿದ ಸಂಪಾದಕರು ಅಭಿನಂದನಾರ್ಹರು’’.

ಒಟ್ಟಾರೆ, ತೋಂಟದ ‘ಶ್ರೀಗಳ ದರ್ಶನ-ಸಂದರ್ಶನ’ ಕೃತಿಯು ಗದುಗಿನ ಗುರುಗಳ ಆಲೋಚನೆಯ ಸೌಧಶಿಲ್ಪವನ್ನು ಕಟ್ಟಿಕೊಡುತ್ತದೆ. ಶ್ರೀಗಳು ವರ್ತಮಾನದ ತವಕ ತಲ್ಲಣಗಳಿಗೆ ಪ್ರತಿಸ್ಪಂದಿಸುತ್ತಿದ್ದ ರೀತಿಯ ಅನೇಕ ಆಯಾಮಗಳನ್ನು ಇಲ್ಲಿಯ ಸಂದರ್ಶನಗಳಲ್ಲಿ ಕಾಣಬಹುದಾಗಿದೆ. ಹೀಗಾಗಿ ಇದೊಂದು ಇತ್ತೀಚೆಗೆ ಬಂದ ಒಂದು ಅಪರೂಪದ ಕೃತಿಯೆಂದು ಹೇಳಬೇಕು.


ಪ್ರಕಾಶ ಗಿರಿಮಲ್ಲನವರ
ಬೆಳಗಾವಿ
ಮೊ: ೯೯೦೨೧೩೦೦೪೧

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಮೂಡಲಗಿ ತಾಲೂಕಾ ಪತ್ರಕರ್ತರ ಸಂಘದ ಕಚೇರಿ ಉದ್ಘಾಟನೆ

ಮೂಡಲಗಿ - ಹಲವಾರು ಯುವ ಪತ್ರಕರ್ತರ ಉತ್ಸಾಹ ಹಾಗೂ ಕಾರ್ಯಶೀಲತೆಯ ಪ್ರತೀಕವಾಗಿ ರಚನೆಗೊಂಡ ಮೂಡಲಗಿ ತಾಲೂಕಾ ಪತ್ರಕರ್ತರ ಸಂಘದ ಕಚೇರಿಯನ್ನು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿಯವರ...
- Advertisement -

More Articles Like This

- Advertisement -
close
error: Content is protected !!