ಹೊಸ ಪುಸ್ತಕ ಓದು: ನಮನಾಂಜಲಿ

Must Read

ಲೇಖಕಿ ಜಯಶ್ರೀ ಅಬ್ಬಿಗೇರಿಗೆ ವಿಶ್ವೇಶ್ವರಯ್ಯ ರಾಷ್ಟ್ರೀಯ ಸಾಹಿತ್ಯ ಪ್ರಶಸ್ತಿಯ ಗರಿ

ಬೆಳಗಾವಿ: ಭಾರತರತ್ನ ಸರ್ ಎಂ. ವಿಶ್ವೇಶ್ವರಯ್ಯ ಇಂಜನೀಯರಿಂಗ್ ಪ್ರತಿಷ್ಠಾನ ಟ್ರಸ್ಟ ನೀಡುವ ವಿಶ್ವೇಶ್ವರಯ್ಯ ರಾಷ್ಟ್ರೀಯ ಸಾಹಿತ್ಯ ಪ್ರಶಸ್ತಿಗೆ ಸ.ಪ.ಪೂ.ಕಾಲೇಜು ಹಿರೇಬಾಗೇವಾಡಿಯ ಉಪನ್ಯಾಸಕಿ, ಲೇಖಕಿ, ಅಂಕಣಕಾರ್ತಿ ಜಯಶ್ರೀ...

ಮಲ್ಲಪ್ಪ ಕಂಕಣವಾಡಿ ಅವರಿಗೆ ಪಿಎಚ್‍ಡಿ

ಮೂಡಲಗಿ: ಇಲ್ಲಿಯ ಮೂಡಲಗಿ ಶಿಕ್ಷಣ ಸಂಸ್ಥೆ ದೈಹಿಕ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ಮಲ್ಲಪ್ಪ ಕೆಂಚಪ್ಪ ಕಂಕಣವಾಡಿ ಅವರು ದೈಹಿಕ ಶಿಕ್ಷಣ ವಿಷಯದಲ್ಲಿ ಡಾ: ಹೆಚ್.ಎಸ್.ಜಂಗೆ ಅವರ...

ಪೋಸ್ಟ್ ಕಾರ್ಡಗಳಲ್ಲಿ ಪ್ರಧಾನಿಗೆ ಶುಭಾಶಯ

ಸಿಂದಗಿ: ಭಾರತೀಯ ಜನತಾ ಪಾರ್ಟಿ ಸಿಂದಗಿ ಮಂಡಲ ವತಿಯಿಂದ ನಗರದ ಭಾರತೀಯ ಜನತಾ ಪಾರ್ಟಿ ಕಾರ್ಯಾಲಯದಲ್ಲಿ ವಿಶ್ವ ನಾಯಕ ನಮ್ಮ ಭಾರತದ ಹೆಮ್ಮೆಯ ಪ್ರಧಾನಮಂತ್ರಿ ಮೋದೀಜಿ...

ನಮನಾಂಜಲಿ

ಲೇಖಕರು : ಶ್ರೀ ಮೃತ್ಯುಂಜಯಸ್ವಾಮಿ ಹಿರೇಮಠ
ಪ್ರಕಾಶಕರು : ರಾಜಗುರು ಪ್ರಕಾಶನ, ಗಂದಿಗವಾಡ-೨೦೨೧
ಮೊ: ೯೯೪೫೦೧೨೦೩೭

(ಪ್ರಸ್ತುತ ಕೃತಿಯು ಇನ್ನೂ ಬಿಡುಗಡೆ ಆಗಿಲ್ಲ. ಈ ಕೃತಿಗೆ ಶ್ರೀ ಮೃತ್ಯುಂಜಯ ಸ್ವಾಮಿಗಳವರ ಪ್ರೀತಿಯ ಒತ್ತಾಸೆಯ ಮೇರೆಗೆ ಮುನ್ನುಡಿ ರೂಪದ ನಾಲ್ಕು ಸದಾಶಯದ ನುಡಿಗಳನ್ನು ನಾನು ಬರೆದಿರುವೆ. ಅದನ್ನೇ ಇಲ್ಲಿ ಪ್ರಸ್ತುತಪಡಿಸುತ್ತಿರುವೆ.)


ನವ್ಯ ಕಾವ್ಯದ ಪ್ರವರ್ತಕರಾದ ಗೋಪಾಲಕೃಷ್ಣ ಅಡಿಗರು ತಮ್ಮ ಒಂದು ಕಾವ್ಯ ಸಂಕಲನಕ್ಕೆ, ತಮ್ಮ ಪ್ರೀತಿಯ ಶಿಷ್ಯ ಡಾ. ಯು. ಆರ್. ಅನಂತಮೂರ್ತಿ ಅವರಿಂದ ಮುನ್ನುಡಿ ಬರೆಯಿಸಿದ್ದರು. ಹಿರಿಯರಾದವರು ಮುನ್ನುಡಿ ರೂಪದಲ್ಲಿ ಹಾರೈಸುವ ಪರಂಪರೆಯನ್ನು ಮುರಿದು, ತಮ್ಮ ಶಿಷ್ಯನ ಕೈಯಲ್ಲಿ ಆ ಕಾರ್ಯವನ್ನು ಅಡಿಗರು ಮಾಡಿಸಿದ್ದು ಇಂದು ಸಾಹಿತ್ಯ ಲೋಕದಲ್ಲಿ ಇತಿಹಾಸವಾಗಿ ಉಳಿದಿದೆ. ಇಂದು ಅಂತಹದೇ ಒಂದು ಪ್ರಸಂಗ ಎದುರಾಗಿದೆ. ಹಿರಿಯರಾದ ಪೂಜ್ಯ ಶ್ರೀ ಮೃತ್ಯುಂಜಯ ಸ್ವಾಮಿಗಳವರ ಪ್ರಸ್ತುತ ಕೃತಿಗೆ ಸಣ್ಣವನಾದ ನನ್ನಿಂದ ಎರಡು ಮಾತುಗಳನ್ನು ಅಪೇಕ್ಷಿಸಿರುವುದು ನನ್ನ ಸೌಭಾಗ್ಯವೆಂದು ಭಾವಿಸಿದ್ದೇನೆ.

- Advertisement -

ಕನ್ನಡ ಸಾಹಿತ್ಯದಲ್ಲಿ ಪ್ರಾಚೀನ ಕಾಲದಿಂದಲೂ ಸೂತ್ರರೂಪದಲ್ಲಿ ಕೃತಿಗಳನ್ನು ರಚಿಸುವುದು, ನಂತರ ಆ ಸೂತ್ರಗಳಿಗೆ ವ್ಯಾಖ್ಯಾನ ಬರೆಯುವ ಪದ್ಧತಿ ಬೆಳೆದು ಬಂದಿದೆ. ಕೇಶಿರಾಜನ ಶಬ್ದಮಣಿ ದರ್ಪಣ ಮೊದಲಗೊಂಡು ಕನ್ನಡದಲ್ಲಿ ಸೂತ್ರ ರೂಪದ ಕೃತಿಗಳು ನೂರಾರು ಬೆಳಕು ಕಂಡಿವೆ. ಅದರಲ್ಲೂ ಶರಣ ಸಾಹಿತ್ಯದಲ್ಲಿ ಈ ಬಗೆಯ ಕೃತಿಗಳ ಒಂದು ದೊಡ್ಡ ಪರಂಪರೆಯೇ ಇದೆ. ಪ್ರಾರಂಭದ ಘಟ್ಟದಲ್ಲಿ ಇಂಥ ಸೂತ್ರರೂಪದ ಕೃತಿಯ ಅರ್ಥ-ಭಾವ-ಉದ್ದೇಶಗಳನ್ನು ವಿವರಿಸಿ ಹೇಳುವುದಕ್ಕಾಗಿ ಸಂಸ್ಕೃತ ಸಾಹಿತ್ಯದಲ್ಲಿ ವ್ಯಾಖ್ಯಾನ, ಭಾಷ್ಯ, ವಾರ್ತಿಕ, ಅದಿಕರಣ, ಕೃತಕ, ತಾತ್ಪರ್ಯ ನಿರ್ಣಯಗಳೆಂಬ ವಿವಿಧ ಪ್ರಕಾರಗಳನ್ನು ರೂಪಿಸಲಾಗಿದೆ. ಆದರೆ ಕನ್ನಡ ಕೃತಿಗಳಿಗೆ ವ್ಯಾಖ್ಯಾನ ಬರೆದ ವೀರಶೈವ ಲಿಂಗಾಯತ ವ್ಯಾಖ್ಯಾನಕಾರರು ಇದಕ್ಕಾಗಿ ಟೀಕೆ, ವ್ಯಾಖ್ಯಾನ, ಟಿಪ್ಪಣಿ, ಸಾರಾರ್ಥ, ಸಾರಾಮೃತ, ವಾಚ್ಯ, ವಚನಾರ್ಥ, ನುಡಿ ಮುಂತಾದ ಪದಗಳನ್ನು ಬಳಸಿದ್ದರೂ ಇವೆಲ್ಲ ವಿವಿಧ ಪ್ರಕಾರಗಳಲ್ಲ, ‘ಟೀಕೆ’ಯನ್ನು ಸೂಚಿಸುವ ಪರ್ಯಾಯ ಪದಗಳು. ಕನ್ನಡ ಸಾಹಿತ್ಯದಲ್ಲಿ ‘ಟೀಕೆ’ ಅಥವಾ ‘ಟೀಕು’ ಪದವೇ ಅಧಿಕವಾಗಿ ಬಳಕೆಗೊಂಡಿರುವುದು ಕಂಡುಬರುತ್ತದೆ. ವಿಜಯನಗರ ಸಾಮ್ರಾಜದ ಪ್ರಸಿದ್ಧ ದೊರೆ ಪ್ರೌಢದೇವರಾಯ ಕಾಲದಲ್ಲಿ ಈತನ ಮಂತ್ರಿಗಳಾದ ಲಕ್ಕಣ-ಜಕ್ಕಣರ ರಾಜರಕ್ಷೆ ಹಾಗೂ ನೂರೊಂದು ವಿರಕ್ತರ ಧರ್ಮರಕ್ಷೆಗಳಲ್ಲಿ ಈ ಕೆಲಸ ವ್ಯಾಪಕವಾಗಿ ಮುನ್ನಡೆಯುವಂತಾಯಿತು. ಆಮೇಲೆ ಏಳುನೂರೊಂದು ವಿರಕ್ತರ ಸಮಯದಲ್ಲಿ ಈ ವ್ಯಾಖ್ಯಾನ ಕಾರ್ಯಕ್ಕೆ ಪವನವೇಗ ಸಂಪ್ರಾಪ್ತವಾಯಿತು. ಏಳುನೂರೊಂದು ವಿರಕ್ತರ ಅಧಿಪತಿ ತೋಂಟದ ಸಿದ್ಧಲಿಂಗದೇವ, ಆತನ ಶಿಷ್ಯ-ಪ್ರಶಿಷ್ಯರಾದ ಚೆನ್ನದೇವ, ಕಟ್ಟಿಗೆಹಳ್ಳಿ ಸಿದ್ಧಲಿಂಗ, ಎಳಂದೂರು ಪರ್ವತ ಶಿವಯೋಗಿ, ಸೋಮಶೇಖರ ಶಿವಯೋಗಿ ಮೊದಲಾದವರು ಹಾಗೂ ಇತರರು ಈ ವ್ಯಾಖ್ಯಾನ ರಚನಾಕರ್ಯವನ್ನು ಮುಂದುವರಿಸಿ, ಅದನ್ನು ಕಾಯಕ’ದ ಮಟ್ಟಕ್ಕೆ ಮುಟ್ಟಿಸಿದರು. ಇದಲ್ಲದೆ ವ್ಯಾಖ್ಯಾನ ಮಾಡುವುದನ್ನೇ ಪ್ರಮುಖ ವೃತ್ತಿಯನ್ನಾಗಿಸಿಕೊಂಡ ಟೀಕಿನ ಗುರುಪಾದ ಸ್ವಾಮಿ’ಯಂಥವರಿಗೂ ವ್ಯಾಖ್ಯಾನದ ಕಾರ್ಯಾಗಾರ’ಗಳೆನಿಸಿದ ಟೀಕಿನಮಠ’ಗಳೂ ಈ ವ್ಯಾಖ್ಯಾನ ಸಾಹಿತ್ಯದ ಬೆಳವಣಿಗೆಗೆ ಬೆಂಬಲವಾಗಿ, ಬೆಳಕಾಗಿ ನಿಂತವು. ಇದು ವೀರಶೈವ ವ್ಯಾಖ್ಯಾನಗಳ ಸಹಾಯವಿಲ್ಲದೆ ಶಾಸ್ತ್ರ ಕೃತಿಗಳ ಅಧ್ಯಯನ ಬಹಳ ಕಷ್ಟವಾಗಿ ಪರಿಣಮಿಸಿದುದರಿಂದ ಇವುಗಳ (ವ್ಯಾಖ್ಯಾನದ) ರಚನಾಕಾರ್ಯ ಕಾಲದಿಂದ ಕಾಲಕ್ಕೆ ಅನಿವಾರ್ಯವಾಗಿ ಬೆಳೆಯುವಂತಾಯಿತು. ಈ ಪರಂಪರೆಯನ್ನು ಆಧುನಿಕ ಯುಗದಲ್ಲಿ ಮುಂದುವರಿಸಿದ ಶ್ರೇಯಸ್ಸು ಪೂಜ್ಯ ಶ್ರೀ ಮೃತ್ಯುಂಜಯಸ್ವಾಮಿಗಳವರಿಗೆ ಸಲ್ಲುತ್ತದೆ.

ನಿರಾಕಾರ ಪರಬ್ರಹ್ಮ ಸ್ವರೂಪಿ ಪರಶಿವನ ಸ್ವರೂಪ, ಲಕ್ಷಣ, ವೈಭವ, ವೈವಿಧ್ಯ-ವೈಶಿಷ್ಟ್ಯಗಳನ್ನು ಪ್ರಸ್ತುತ ಕೃತಿಯಲ್ಲಿ ಮೃತ್ಯುಂಜಯ ಸ್ವಾಮಿಗಳು ಸಾದ್ಯಂತವಾಗಿ ತಲಸ್ಪರ್ಶಿಯಾಗಿ ಮೊದಲಬಾರಿಗೆ ವಿವೇಚನೆಗೆ ಒಳಪಡಿಸಿರುವುದರಿಂದ ವ್ಯಾಖ್ಯಾನ ಕ್ಷೇತ್ರಕ್ಕೆ ಇದೊಂದು ಅಪೂರ್ವ ಉತ್ತಮ ಕೊಡುಗೆಯಾಗಿದೆ.

ಶ್ರೀ ಮೃತ್ಯುಂಜಯ ಸ್ವಾಮಿಗಳು ರಾಜಗುರು ಹಿರೇಮಠ ಗಂದಿಗವಾಡ ಅವರು ಮೂಲತಃ ಅಧ್ಯಾತ್ಮ ಸಂಸ್ಕಾರವನ್ನು ಮೈಗೂಡಿಸಿಕೊಂಡು ಬೆಳೆದವರು. ವೃತ್ತಿಯಿಂದ ಶಿಕ್ಷಕರು. ವಿಜಯ ಕರ್ನಾಟಕ ಪತ್ರಿಕೆಯ ‘ಸತ್ಸಂಗ’ ಅಂಕಣ ಬರಹದಲ್ಲಿ ನೂರಾರು ಲೇಖನಗಳನ್ನು ಬರೆದು, ಅವುಗಳ ಸಂಕಲನ ‘೧೦೮ ಸತ್ಸಂಗ’ ಎಂಬ ಕೃತಿಯನ್ನು ಪ್ರಕಟಿಸಿ ಈಗಾಗಲೇ ನಾಡವರ ಗಮನ ಸೆಳೆದಿದ್ದಾರೆ. ಇತ್ತೀಚೆಗೆ ‘ಸದ್ಯೋನ್ಮುಕ್ತೆ’ ಎಂಬ ನಾಟಕವೊಂದನ್ನು ರಚಿಸಿ ಸೃಜನಶೀಲ ಕ್ಷೇತ್ರದಲ್ಲೂ ಕೃಷಿ ಮಾಡಿದವರು. ತಮ್ಮ ಪ್ರವಚನಗಳಿಂದ ತಾವು ನಿಂತ ನೆಲವನ್ನು ಪವಿತ್ರಗೊಳಿಸಿದವರು. ಇತ್ತೀಚೆಗೆ ಗೋಕಾಕ ಶೂನ್ಯಸಂಪಾದನಾ ಮಠದಲ್ಲಿ ಅವರು ನೀಡಿದ ‘ಶೂನ್ಯಸಂಪಾದನೆ’ ಪ್ರವಚನ ಅಮೋಘವಾಗಿತ್ತು. ಬಸವಾದಿ ಶಿವಶರಣರ ಸಮಗ್ರ ಮೌಲ್ಯಗಳ ಪ್ರತಿರೂಪವಾಗಿರುವ ಶೂನ್ಯಸಂಪಾದನೆಯ ಒಳತಿರುಳನ್ನು ಅತ್ಯಂತ ಸರಳವಾಗಿ ಜನಸಾಮಾನ್ಯರಿಗೂ ತಿಳಿಯುವಂತೆ ಪ್ರಸ್ತುತ ಪಡಿಸಿದ ಶ್ರೀ ಮೃತ್ಯುಂಜಯ ಸ್ವಾಮಿಗಳವರ ಪ್ರವಚನ ಕೇಳಿ ನೂರಾರು ಜನ ಪ್ರಭಾವಿತರಾದರು. ತಮ್ಮ ಆಧ್ಯಾತ್ಮಿಕ ಪ್ರವಚನಗಳಿಂದ ಸುತ್ತಲ ಪರಿಸರದಲ್ಲಿ ಶರಣತತ್ವ ಗಂಧಗಾಳಿ ಸೂಸುವಂತೆ ಮಾಡಿದವರು. ಜನಮನದ ನೋವು ನಲಿವುಗಳಿಗೆ ಅಧ್ಯಾತ್ಮದಲ್ಲಿ ಪರಿಹಾರವಿದೆ ಎಂದು ತೋರಿಸಿಕೊಟ್ಟವರು. ಸಮಾಜದ ಅಂತರAಗ ಬಹಿರಂಗದಲ್ಲಿ ನಡೆಯುವ ಆಗು-ಹೋಗುಗಳನ್ನು ತೆರೆದ ಕಣ್ಣಿನಿಂದ ನೋಡುತ್ತ ಅವುಗಳಿಗೆ ಪ್ರತಿಕ್ರಿಯೆ ತೋರುತ್ತ ಬಂದವರು. ನಮ್ಮ ನಾಡಿನ ಸಾಹಿತ್ಯ-ಸಂಸ್ಕೃತಿ-ಪರಂಪರೆಯನ್ನು ಆಳವಾಗಿ ಅಧ್ಯಯನ ಮಾಡಿದವರು. ಶರಣ ಸಾಹಿತ್ಯವನ್ನು ಕುರಿತು ವಿಶೇಷ ಪ್ರೀತಿಯಿಂದ ಅಧ್ಯಯನ, ಚಿಂತನ-ಚರ್ಚೆಯಲ್ಲಿ ನಿರಂತರವಾಗಿ ತಮ್ಮನ್ನು ತೊಡಗಿಸಿಕೊಳ್ಳುತ್ತ ಬಂದವರು. ಅವರದು ಶಿಕ್ಷಕವೃತ್ತಿ-ಪ್ರವಚನ-ಗ್ರಂಥ ರಚನೆ ಧರ್ಮ-ಸಾಹಿತ್ಯ-ಇತಿಹಾಸ ಹೀಗೆ ಹಲವು ಕ್ಷೇತ್ರಗಳ ಅರಿವಿನಿಂದ ಮಾಗಿದ ಮನಸ್ಸು. ಹೀಗಾಗಿ ಇಲ್ಲಿನ ಬರೆಹಗಳೆಲ್ಲಿ ಈ ಎಲ್ಲ ವಿಷಯಗಳು ಸಹಜವಾಗಿ ಪ್ರತಿಬಿಂಬಿತವಾಗಿವೆ.

ಈ ಚಿಂತನೆಗಳೆಲ್ಲ ಕೇವಲ ಭಾವುಕತೆಯಿಂದ ಮೂಡಿಬಂದುವಾಗಿರದೆ, ತರ್ಕ, ವೈಚಾರಿಕತೆ, ವಸ್ತುನಿಷ್ಠತೆಗಳಿಂದ ಕೂಡಿ ಚಿಂತನಪರವೆನಿಸಿವೆ. ವಿವರಣೆ, ವಿಶ್ಲೇಷಣೆಗಳು ಇಲ್ಲಿ ಬೆರೆತುಕೊಂಡಿವೆ.

ಕೇವಲ ನಾಮಪಠಣ ಮಾಡಿ ಬಿಡಬಹುದಾಗಿದ್ದ ಈ ಅಷ್ಟೋತ್ತರ ಶತನಾಮ ಪಂಚಾಕ್ಷರಿಯ ಪ್ರತಿಯೊಂದು ಶಬ್ದಗಳನ್ನು ತುಂಬಾ ಆಸಕ್ತಿಯಿಂದ ಸಮಗ್ರ ಅಧ್ಯಯನ ಕೈಕೊಂಡು, ಅದರ ನೆಲೆ-ಬೆಲೆಗಳನ್ನು ವಸ್ತುನಿಷ್ಠವಾಗಿ ಕಟ್ಟಿಕೊಡಲು ಪ್ರಯತ್ನಿಸಿ ಯಶಸ್ವಿಯಾಗಿದ್ದಾರೆ. ಅವರ ಅಧ್ಯಯನದ ವ್ಯಾಪ್ತಿ, ವಿಷಯ ಸಂಗ್ರಹದಲ್ಲಿ ತೋರಿದ ಆಸಕ್ತಿ, ಭಾಷೆಯ ಬಳಕೆಯಲ್ಲಿ, ನಿರೂಪಣಾ ವಿಧಾನದಲ್ಲಿ ಅನುಸರಿಸಿದ ನೇರ-ಸರಳತೆ ಇವೆಲ್ಲ ಕೃತಿಯ ಸಮಷ್ಟಿ ಪರಿಣಾಮಕ್ಕೆ ಕಾರಣವಾಗಿವೆ. ನಿರಲಂಕೃತ ಭಾಷೆಯ ಬಳಕೆ, ನೇರ ನಿರೂಪಣೆ, ಸಂಹನಶೀಲತೆ ಮೊದಲಾದ ಅಂಶಗಳು ಒಟ್ಟಾಗಿ ಸೇರಿರುವ ಕಾರಣ ಕೃತಿಯು ಅನೇಕ ಒಳನೋಟಗಳನ್ನು ಬೀರುತ್ತ ಓದುಗರ ಮನದಲ್ಲಿ ಆಧ್ಯಾತ್ಮಿಕ ಮೌಲ್ಯವನ್ನು ಬಿತ್ತುತ್ತದೆ.

ಇಲ್ಲಿಯ ಕೆಲವು ಪದಗಳು ಸರಳವೆನಿಸಿದರೂ ವ್ಯಾಖ್ಯಾನಿಸುವುದು ತುಂಬ ಕಷ್ಟ. ಇನ್ನೂ ಕೆಲವು ಪದಗಳ ಅರ್ಥವನ್ನು ನಿಘಂಟುವಿನಲ್ಲಿಯೇ ಹುಡುಕಬೇಕು. ಹೀಗಾಗಿ ಇಂಥ ಕಠಿಣ ಪದಗಳಿಗೆ ಪೂಜ್ಯ ಶ್ರೀ ಮೃತ್ಯುಂಜಯ ಶ್ರೀಗಳು ತುಂಬ ಸರಳವಾದ ವ್ಯಾಖ್ಯಾನವನ್ನು ಮಾಡಿ, ಓದುಗರಿಗೆ ಮಹದುಪಕಾರ ಮಾಡಿದ್ದಾರೆ. ಉದಾ: ‘ಅವಿನಾಶಾದ್ಯ ನಮಃ ಶಿವಾಯ’ ಎಂಬ ಪದಕ್ಕೆ ಅವರು ನೀಡುವ ವ್ಯಾಖ್ಯಾನ ಹೀಗಿದೆ- “ಜಗತ್ತಿನ ಮೂಲಕಣವಾದ ‘ದೇವಗಣ’ಕ್ಕೆ ಸಾವಿಲ್ಲ. ಅಂತೆಯೇ ಅದು ಅವಿನಾಶ. ಅದರಲ್ಲಿಯೇ ವಿಶ್ವದ ರಹಸ್ಯ ಅಡಗಿದೆ. ಇದು ಇಂದಿನ ವಿಜ್ಞಾನಿಗಳು ಕಂಡುಕೊಂಡ ವಿಷಯ. ಆದರೆ, ಅದು ಮೊದಲಿನಿಂದಲೂ ಇದ್ದ ಸಂಗತಿಯೇ. ಅಂತೆಯೇ ಶಿವ ಈ ಸೃಷ್ಟಿ ಸಂಕುಲದ ಕೇಂದ್ರಬಿಂದು. ಅವನೇ ಮೊದಲು, ಅವನೇ ಕೊನೆ. ಅಂತೆಯೇ ಅವಿನಾಶಾದ್ಯ (ಅವಿನಾಶ+ಆದ್ಯ) ಎಂಬ ಹೆಸರು”. ಇಷ್ಟು ಸರಳಾಗಿ ಒಂದು ಪದವನ್ನು ಇಲ್ಲಿ ಬಿಡಿಸಿದ್ದಾರೆ. ಈ ಸ್ತೋತ್ರಗಳಲ್ಲಿ ಬರುವ ‘ಕಾಂಕ್ಷಾರಹಿತ’, ‘ಆಪಚ್ಛೇದ’, ‘ಕಾಲಾಬಾಧ್ಯ’, ‘ಜನ್ಮವಿದೂರ’, ‘ತ್ರೈಮಲಶೂಲ’, ‘ಧರ್ಮಸಪಕ್ಷ’, ‘ನಯನಿರ್ಲೇಪ’, ‘ನಿಗಮಾಭೇದ್ಯ’, ‘ನಿಯತಿನಯಂತಾ’, ‘ನಿರ್ಜರವಂದ್ಯ’, ‘ನಿರ್ಜಿತಮೋಹ’, ‘ಬಾಧಕಶೂನ್ಯ’, ‘ಬುದ್ಧಿವಿಗಮ್ಯ’, ‘ಯಮಿಜನ್ಯಸೇವ್ಯ’, ‘ವಿಮಲ ಗುಣಾಢ್ಯ’, ‘ಶೋಕಾದ್ರಿಪವಿ’, ‘ಸಾರಸಮೋದ’, ‘ಸುಖಕೂಪಾರ’ ‘ಸೌಮ್ಯಶರನಿಧಿ’ ಮೊದಲಾದ ಪದಗಳ ಅರ್ಥಗಳು ಮೇಲುನೋಟಕ್ಕೆ ಆಗುವುದಿಲ್ಲ. ಈ ಎಲ್ಲ ಪದಗಳಿಗೆ ಶ್ರೀ ಮೃತ್ಯುಂಜಯ ಶ್ರೀಗಳು ನೀಡಿದ ವ್ಯಾಖ್ಯಾನ ತುಂಬ ಅರ್ಥಗರ್ಭಿತವಾಗಿದೆ. ಆಳವಾದ ಅಧ್ಯಯನ, ವ್ಯಾಪಕವಾದ ಚಿಂತನೆ, ಇಲ್ಲಿಯ ಪ್ರತಿಯೊಂದು ಶಬ್ದಗಳ ವ್ಯವಸ್ಥಿತವಾದ ವಿಭಜನೆ, ನಿರ್ದಿಷ್ಟವಾದ, ಉದ್ವೇಗ-ಉತ್ಪ್ರೇಕ್ಷೆ ರಹಿತವಾದ ನಿರೂಪಣೆ, ವಸ್ತು ವಿಷಯಕ್ಕನುಗುಣವಾದ ಭಾಷೆಯ ಬಳಕೆ, ಶ್ರದ್ಧೆ-ಶ್ರಮ-ಆಲೋಚನೆಗಳ ಫಲವಾಗಿ ಕೃತಿಯು ಮೈದುಂಬಿ ನಿಂತಿದೆ.

ಮಾನವನ ಜೀವನದ ಪರಮಗುರಿ ಮೋಕ್ಷ ಸಾಧನೆ ಅಥವಾ ಕೈವಲ್ಯಪ್ರಾಪ್ತಿ. ಇದನ್ನು ಸಂಪಾದಿಸಲು ಬಹು ಹಿಂದಿನಿ0ದಲೂ ಮಾನವನು ಪ್ರಯತ್ನಿಸುತ್ತ, ಯೋಗ ಭಕ್ತಿ ಇತ್ಯಾದಿ ಮಾರ್ಗಗಳನ್ನು ಅನುಸರಿಸುತ್ತ ಬಂದಿದ್ದಾನೆ. ಕೆಲವರಿಗೆ ಅದು ಸುಲಭಪ್ರಾಪ್ತವೆನಿಸಿದರೆ ಹಲವರಿಗೆ ಗಗನ ಕುಸುಮವಾಗಿದೆ. ಇದರಿಂದ ಮೋಕ್ಷವೆಂಬುದು ಎಲ್ಲರಿಗೂ ಸುಲಭಸಾಧ್ಯವಲ್ಲದುದು, ಅಗೋಚರವಾದುದು, ಅಳಿದ ಮೇಲೆ ಕೇವಲ ಕೆಲವರಿಗೆ ಮಾತ್ರ ದೊರಕುವಂತಹದು ಎಂಬ ಭಾವನೆ ಮೂಡಿದೆ. ಅದು ಕೇವಲ ಕೆಲವರ ಸೊತ್ತಲ್ಲ, ಅಳಿದ ಮೇಲೆ ದೊರೆಯುವುದಲ್ಲ, ಕಠಿಣ ಪರಿಶ್ರಮದಿಂದ ಸಾಧಿಸುವುದಲ್ಲ, ಇದು ಪರಮಾತ್ಮನ ನಾಮಸ್ಮರಣೆಯಿಂದ ಸುಲಭಸಾಧ್ಯ. ಇದು ಶಿವಶರಣರು ಅನುಸರಿಸಿದ ಸುವರ್ಣ ಮಾರ್ಗ. ಈ ಹಿನ್ನೆಲೆಯಲ್ಲಿ ಕುಮಾರ ನಿಜಗುಣರು ಅಷ್ಟೋತ್ತರ ಶತನಾಮ ಪಂಚಾಕ್ಷರಿ ಎಂಬ ಪ್ರಾರ್ಥನಾ ಕೃತಿಯನ್ನು ರಚಿಸಿದ್ದಾರೆ. ಈ ಕೃತಿ ಜ್ಞಾನಯೋಗಿಗಳಾದ ಪೂಜ್ಯ ಶ್ರೀ ಸಿದ್ಧೇಶ್ವರ ಮಹಾಸ್ವಾಮಿಗಳವರಿಗೆ ತುಂಬ ಪ್ರಿಯವಾಗಿದೆ. ಅದಕ್ಕಾಗಿ ಪೂಜ್ಯರು ತಮ್ಮ ಪ್ರವಚನ ನಡೆಯುವ ಕಡೆಯೆಲ್ಲೆಲ್ಲ ಪ್ರಾರಂಭದಲ್ಲಿ ಈ ಅಷ್ಟೋತ್ತರ ಶತನಾಮ ಪಂಚಾಕ್ಷರಿ ಪಠಣವನ್ನು ಕಡ್ಡಾಯಗೊಳಿಸಿದ್ದಾರೆ. ಪ್ರವಚನ ಕೇಳಲು ಬರುವ ಸಮಸ್ತರೂ ನಿತ್ಯ ಈ ಶತನಾಮ ಸ್ಮರಣೆ ಮಾಡುತ್ತಾರೆ.

ಬೆಳಗಾವಿ ಮಹಾನಗರದಲ್ಲಿ ೨೦೧೬ ಮಾರ್ಚ ತಿಂಗಳಲ್ಲಿ ಶ್ರೀ ಸಿದ್ಧೇಶ್ವರ ಮಹಾಸ್ವಾಮಿಗಳು ಒಂದು ತಿಂಗಳ ಕಾಲ ಪ್ರವಚನ ನೀಡಿದರು. ಈ ಸಂದರ್ಭದಲ್ಲಿ ಪೂಜ್ಯ ಶ್ರೀ ಮೃತ್ಯುಂಜಯ ಸ್ವಾಮಿಗಳು ಈ ಪ್ರಾರ್ಥನಾ ರೂಪದ ಈ ಶತನಾಮಗಳಿಗೆ ವ್ಯಾಖ್ಯಾನವನ್ನು ಬರೆಯಬೇಕೆಂದು ಸಂಕಲ್ಪಿಸಿದ್ದರು. ಪರಶಿವನ ಈ ನಾಮದ ಹಿಂದಿನ ಆಶಯಗಳು ಮಾನವನ ನೈತಿಕ ಬದುಕಿಗೆ ಅವು ಹೇಗೆ ದಾರಿದೀಪವಾಗಿವೆ ಎಂಬುದನ್ನು ತೋರಿಸುವ ಆಶಯ ಶ್ರೀ ಮೃತ್ಯುಂಜಯ ಸ್ವಾಮಿಗಳವರಲ್ಲಿ ಮೂಡಿದ ಕಾರಣವೇ ಈ ಕೃತಿ ರಚನೆಗೆ ಮೂಲಪ್ರೇರಣೆ ಎಂದು ನಾನು ಭಾವಿಸಿದ್ದೇನೆ.

ಗುಣಗ್ರಾಹಕ ದೃಷ್ಟಿಯುಳ್ಳ ಶ್ರೀ ಮೃತ್ಯುಂಜಯ ಸ್ವಾಮಿಗಳು ಅಪಾರ ತಾಳ್ಮೆಯನ್ನು ಬಯಸುವ ಈ ಕಾರ್ಯವನ್ನು ತುಂಬ ಶ್ರಮ-ಶ್ರದ್ಧೆಯಿಂದ ಪೂರ್ಣಗೊಳಿಸಿದ್ದಾರೆ. ವಚನ ಸಾಹಿತ್ಯದ ಸಮಸ್ತ ತಿರುಳನ್ನು ಕಡಲನ್ನು ಕೊಡದೊಳಗೆ ಹಿಡಿದಿಟ್ಟಂತಿರುವ ಈ ನುಡಿರಾಶಿ ಆಧುನಿಕ ಕನ್ನಡ ಸಾಹಿತ್ಯ ಶ್ರೀಮಂತಿಕೆಗೆ ಸಾಕ್ಷಿಯಾಗಿದೆ.

ಮೂಲ ಪಠ್ಯವನ್ನು ರಚಿಸಿದ ಕುಮಾರ ನಿಜಗುಣರು, ಈ ಪಠ್ಯವನ್ನು ಜನಸಾಮಾನ್ಯರಿಗೆ ಪರಿಚಯಿಸಿದ ಶ್ರೀ ಸಿದ್ಧೇಶ್ವರ ಸ್ವಾಮಿಗಳು ಮತ್ತು ಈ ಪಠ್ಯಕ್ಕೆ ಸೂಕ್ತವಾದ ವ್ಯಾಖ್ಯಾನ ನೀಡಿ ಈ ಕೃತಿಯ ಮೂಲಕ ವಾಗ್ದೇವಿಯ ಭಂಡಾರದ ಮುದ್ರೆಯನ್ನು ಒಡೆದು ತೋರಿಸಿದ ಪೂಜ್ಯ ಶ್ರೀ ಮೃತ್ಯುಂಜಯ ಸ್ವಾಮಿಗಳು ಈ ಮೂವರು ಮಹಾನುಭಾವರು ಸಮಸ್ತ ಕನ್ನಡಿಗರ ಗೌರವಾಭಿನಂದನೆಗಳಿಗೆ ಪಾತ್ರರಾಗಿದ್ದಾರೆ.


ಪ್ರಕಾಶ ಗಿರಿಮಲ್ಲನವರ
ಬೆಳಗಾವಿ

- Advertisement -
- Advertisement -

Latest News

ಲೇಖಕಿ ಜಯಶ್ರೀ ಅಬ್ಬಿಗೇರಿಗೆ ವಿಶ್ವೇಶ್ವರಯ್ಯ ರಾಷ್ಟ್ರೀಯ ಸಾಹಿತ್ಯ ಪ್ರಶಸ್ತಿಯ ಗರಿ

ಬೆಳಗಾವಿ: ಭಾರತರತ್ನ ಸರ್ ಎಂ. ವಿಶ್ವೇಶ್ವರಯ್ಯ ಇಂಜನೀಯರಿಂಗ್ ಪ್ರತಿಷ್ಠಾನ ಟ್ರಸ್ಟ ನೀಡುವ ವಿಶ್ವೇಶ್ವರಯ್ಯ ರಾಷ್ಟ್ರೀಯ ಸಾಹಿತ್ಯ ಪ್ರಶಸ್ತಿಗೆ ಸ.ಪ.ಪೂ.ಕಾಲೇಜು ಹಿರೇಬಾಗೇವಾಡಿಯ ಉಪನ್ಯಾಸಕಿ, ಲೇಖಕಿ, ಅಂಕಣಕಾರ್ತಿ ಜಯಶ್ರೀ...
- Advertisement -

More Articles Like This

- Advertisement -
close
error: Content is protected !!