spot_img
spot_img

ಹೊಸ ಪುಸ್ತಕ ಓದು

Must Read

- Advertisement -

ಸಮಗ್ರ ಒಳನೋಟದ ವಿಮರ್ಶಾ ಕೃತಿ

ಪುಸ್ತಕದ ಹೆಸರು : ಡಾ. ರಾಗೌ ಸಾಹಿತ್ಯ ಮಂಥನ (ಡಾ. ರಾಗೌ ಸಮಗ್ರ ಸಾಹಿತ್ಯ ವಿಮರ್ಶೆ)
ಲೇಖಕರು : ಡಾ. ಗುರುಪಾದ ಮರಿಗುದ್ದಿ
ಪ್ರಕಾಶಕರು : ಕರ್ನಾಟಕ ಸಂಘ, ಮಂಡ್ಯ, ೨೦೨೩
ಪುಟ : ೨೧೦ ಬೆಲೆ : ರೂ. ೨೫೦
ಲೇಖಕರ ಸಂಪರ್ಕವಾಣಿ : ೯೪೪೯೪೬೫೬೧೭
* * * * * * *

ಆಧುನಿಕ ಕನ್ನಡ ವಿಮರ್ಶಾ ಸಾಹಿತ್ಯಕ್ಕೆ ಭರ್ತಿ ನೂರು ವಸಂತಗಳ ಸಂಭ್ರಮ. ೧೯೨೪ರಲ್ಲಿ ಮಾಸ್ತಿಯವರು ‘ಸಾಹಿತ್ಯ ವಿಮರ್ಶೆ’ ಕುರಿತು ಮೊದಲ ಬಾರಿಗೆ ಬರೆದು, ಕನ್ನಡ ವಿಮರ್ಶಾ ಪ್ರಪಂಚಕ್ಕೆ ದಾರಿ ತೋರಿದರು. ನವೋದಯ ಕಾಲಘಟ್ಟದಲ್ಲಿ ಕುವೆಂಪು ಮೊದಲುಗೊಂಡು ಅನೇಕ ಮಹಾನ್ ವಿಮರ್ಶಕರು ಕನ್ನಡ ಸಾಹಿತ್ಯಕ್ಕೆ ಕೊಟ್ಟ ಕಾಣಿಕೆ ಅಪೂರ್ವ-ಅನನ್ಯ. ೧೯೬೦ರ ದಶಕದ ನಂತರ ನವ್ಯ ಕಾಲಘಟ್ಟದಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರ ಒಂದು ವಿಮರ್ಶಾ ಪಡೆ ಕನ್ನಡ ನೆಲದಲ್ಲಿ ಕನ್ನಡ ಭಾಷೆಯಲ್ಲಿ ಬರೆಯತೊಡಗಿತು. ಜಿ. ಎಸ್. ಆಮೂರ, ಗಿರಡ್ಡಿ. ಕುರ್ತಕೋಟಿ, ಸಿ. ಎನ್. ರಾಮಚಂದ್ರನ್, ಶಾಂತಿನಾಥ ದೇಸಾಯಿ, ಚಂಪಾ ಹೀಗೆ ಬಹುತೇಕರು ಇಂಗ್ಲಿಷ್ ಪ್ರಾಧ್ಯಾಪಕರಾಗಿ, ಕನ್ನಡ ವಿಮರ್ಶಾ ಪ್ರಪಂಚವನ್ನು ಸಿರಿವಂತಗೊಳಿಸಿದರು. ಬಹುತೇಕ ವಿಮರ್ಶಕರು ಯಾವುದೋ ಒಂದು ಪ್ರಕಾರವನ್ನು, ಅಥವಾ ಆಯಾ ಸಾಹಿತಿಗಳ ಒಂದು ಕೃತಿಯನ್ನು ಮುಂದಿಟ್ಟುಕೊಂಡು ವಿಮರ್ಶೆ ಬರೆದಿದ್ದಾರೆ. ಜಿ. ಎಸ್. ಆಮೂರ ಅವರು ಮಾತ್ರ ಬೇಂದ್ರೆಯವರ ಸಮಗ್ರ ಕಾವ್ಯ ಕುರಿತು ‘ಭುವನದ ಭಾಗ್ಯ’, ಶ್ರೀರಂಗರ ಸಮಗ್ರ ಸಾಹಿತ್ಯ ಕುರಿತು ‘ಶ್ರೀರಂಗ ಸಾರಸ್ವತ’, ಕುವೆಂಪು ಸಮಗ್ರ ಸಾಹಿತ್ಯ ಕುರಿತು ‘ಕುವೆಂಪು ಯುಗದ ಕವಿ’ ಕೃತಿಗಳನ್ನು ರಚಿಸಿದ್ದಾರೆ. ಹೀಗೆ ಒಬ್ಬ ವಿದ್ವಾಂಸರ ಸಮಗ್ರ ಸಾಹಿತ್ಯವನ್ನು ಕುರಿತು ಜಿ. ಎಸ್. ಆಮೂರ ಅವರನ್ನು ಹೊರತು ಪಡಿಸಿದ ಉಳಿದವರು ಯಾರೂ ಇಂತಹ ಪ್ರಯತ್ನ ಮಾಡಿಲ್ಲವೆಂಬುದು ನನ್ನ ಗ್ರಹಿಕೆ. ಆದರೆ ಇದಕ್ಕೆ ಅಪವಾದವೆಂಬಂತೆ ಡಾ. ಗುರುಪಾದ ಮರಿಗುದ್ದಿ ಅವರು ರಾಗೌ ಅವರ ಸಮಗ್ರ ಸಾಹಿತ್ಯವನ್ನು ತಲಸ್ಪರ್ಶಿಯಾಗಿ ಅಧ್ಯಯನ ಮಾಡಿ ರಚಿಸಿದ ಒಂದು ಮಾದರಿ ಕೃತಿ ‘ಡಾ. ರಾಗೌ ಸಾಹಿತ್ಯ ಮಂಥನ’.

- Advertisement -

ಡಾ. ಗುರುಪಾದ ಮರಿಗುದ್ದಿ ಅವರು ಉತ್ತರ ಕರ್ನಾಟಕದ ಒಬ್ಬ ಬಹುಶ್ರುತ ವಿಮರ್ಶಕರು. ಡಾ. ರಾಗೌ ಅವರು ದಕ್ಷಿಣ ಕರ್ನಾಟಕದ ಮೈಸೂರು ಭಾಗದ ಹಿರಿಯ ವಿದ್ವಾಂಸರು. ಆ ಭಾಗದ ಹಿರಿಯ ವಿದ್ವಾಂಸರ ಕೃತಿಗಳನ್ನು ಈ ಭಾಗದ ವಿದ್ವಾಂಸರು ಅಧ್ಯಯನ ಮಾಡಿ, ಅವುಗಳ ಸತ್ವ ಸಾಮರ್ಥ್ಯಗಳನ್ನು ವಿಮರ್ಶೆಯ ಒರೆಗಲ್ಲಿಗೆ ಹಚ್ಚಿ, ಅಳೆದು ತೂಗಿ ನೋಡುವ ದೃಷ್ಟಿಕೋನವೇ ವಿನೂತನವಾಗಿದೆ. ಇಂತಹ ಒಂದು ಅಪರೂಪದ ಪ್ರಯತ್ನವನ್ನು ಡಾ. ಗುರುಪಾದ ಮರಿಗುದ್ದಿ ಅವರು ಮಾಡಿರುವುದು ಗಮನಾರ್ಹವಾದುದು. ಇದು ಉತ್ತರ-ದಕ್ಷಿಣದ ಸಮನ್ವಯಕ್ಕೆ ದಾರಿ ಮಾಡಿಕೊಡುವ ಉಪಕ್ರಮವೆಂದೇ ಹೇಳಬೇಕು. ಈ ಮೂಲಕ ಸಮಗ್ರ ಕರ್ನಾಟಕ ಏಕೀಕರಣವೂ ಸಾಧ್ಯವೆಂಬುದನ್ನು ಗಮನಿಸಬೇಕು. ಮೂರು ದಶಕಗಳ ಹಿಂದೆ ಡಾ. ಮರಿಗುದ್ದಿ ಅವರು ಕುವೆಂಪು ಕಾದಂಬರಿಗಳು ಸಾಂಸ್ಕೃತಿಕ ಅಧ್ಯಯನ ಎಂಬ ವಿಷಯ ಕುರಿತು ಸಂಶೋಧನೆ ಮಾಡಿ, ಕರ್ನಾಟಕ ವಿಶ್ವವಿದ್ಯಾಲಯದಿಂದ ಪಿಎಚ್.ಡಿ. ಪದವಿ ಪಡೆದ ನಂತರ, ಕುವೆಂಪು ಅಧ್ಯಯನ-ಅನುಸಂಧಾನ ನಿತ್ಯ ನಿರಂತರವಾಗಿ ನಡೆದಿತ್ತು. ಕುವೆಂಪು ಅವರ ಸಾಹಿತ್ಯವನ್ನು ಕುರಿತು ಡಾ. ಗುರುಪಾದ ಮರಿಗುದ್ದಿ ಅವರು ಎಂಟು ಕೃತಿಗಳನ್ನು ರಚಿಸಿದ್ದಾರೆ. ಹೀಗೆ ಮೈಸೂರಿನ ನಂಟು ಕಾರಣವಾಗಿ ಈಗ ಡಾ. ರಾಗೌ ಅವರ ಸಾಹಿತ್ಯ ಮಂಥನ ಕೃತಿಯ ಮೂಲಕ ಒಂದು ಅತ್ಯುತ್ತಮ ವಿಮರ್ಶಾ ಕೃತಿಯನ್ನು ಕನ್ನಡ ಸಾರಸ್ವತ ಲೋಕಕ್ಕೆ ಕೊಟ್ಟಿದ್ದಾರೆ.
ಡಾ. ರಾಗೌ ಅವರ ಕಾವ್ಯ ಕುರಿತು ವಿಚಾರ ಸಂಕಿರಣವೊಂದರಲ್ಲಿ ಪ್ರಬಂಧ ಮಂಡಿಸಲು ಮೈಸೂರಿಗೆ ಹೋದ ಸಂದರ್ಭದಲ್ಲಿ ಮಂಡ್ಯದ ಕರ್ನಾಟಕದ ಸಂಘದ ಅಧ್ಯಕ್ಷರು ಡಾ. ರಾಗೌ ಅವರ ಕಾವ್ಯ ಕುರಿತು ಒಂದು ಪುಸ್ತಕ ಬರೆದುಕೊಡಲು ವಿನಂತಿಸಿದಾಗ, ರಾಗೌ ಅವರ ಸಮಗ್ರ ಸಾಹಿತ್ಯವನ್ನೇ ಒಂದು ವರ್ಷಗಳ ಕಾಲ ಅಧ್ಯಯನ ಮಾಡಿ, ಆಳವಾದ ಒಳನೋಟಗಳನ್ನು ಒಳಗೊಂಡ ಪ್ರಸ್ತುತ ಕೃತಿಯನ್ನು ಬರೆದರು. ರಾಗೌ ಅವರ ಹೆಸರಿನ ಪ್ರಶಸ್ತಿಯನ್ನು ಕರ್ನಾಟಕ ಸಂಘದವರು ಡಾ. ಮರಿಗುದ್ದಿ ಅವರಿಗೆ ಪ್ರದಾನ ಮಾಡಿದ್ದು ಇನ್ನೂ ವಿಶೇಷ.ಒಬ್ಬ ವ್ಯಕ್ತಿಯ ಬಗ್ಗೆ ಪ್ರೀತಿ ಇದ್ದಾಗ, ಬರವಣಿಗೆ ತನ್ನಿಂದ ತಾನೇ ಸಾಗುತ್ತದೆ. ಡಾ. ಮರಿಗುದ್ದಿ ಅವರಿಗೆ ಡಾ. ರಾಗೌ ಅವರ ಸಾಹಿತ್ಯದ ಬಗ್ಗೆ ಅಪಾರ ಪ್ರೀತಿ ಮತ್ತು ಗೌರವ ಇರುವ ಕಾರಣವಾಗಿ, ಇಂತಹ ಉತ್ಕೃಷ್ಟ ವಿಮರ್ಶಾಕೃತಿಯೊಂದು ರೂಪುಗೊಂಡಿದೆ.

ಪ್ರಸ್ತುತ ಕೃತಿಯಲ್ಲಿ ಒಟ್ಟು ಹನ್ನೆರಡು ಅಧ್ಯಾಯಗಳಿವೆ. ಎಲ್ಲವೂ ರಾಗೌ ಅವರ ಸಾಹಿತ್ಯದ ವಿವಿಧ ಆಯಾಮಗಳನ್ನು ಕುರಿತಾಗಿವೆ. ಕಾವ್ಯ-ವಿಮರ್ಶೆ-ಸಂಶೋಧನೆ-ಜಾನಪದ-ಜೀವನ ಚರಿತ್ರೆ-ನಾಟಕ-ಗ್ರಂಥ ಸಂಪಾದನೆ ಮೊದಲಾದ ಪ್ರಕಾರಗಳಲ್ಲಿ ಡಾ. ರಾಗೌ ಅವರು ಸಾಹಿತ್ಯ ಕೃಷಿ ಮಾಡಿದ್ದಾರೆ. ಈ ಎಲ್ಲ ಪ್ರಕಾರಗಳನ್ನು ಅಧ್ಯಯನದ ಕಕ್ಷೆಗೆ ಒಳಗು ಮಾಡಿಕೊಂಡು ಡಾ. ಮರಿಗುದ್ದಿ ಅವರು ತುಂಬ ಸುಂದರವಾದ ಕೃತಿಚೌಕಟ್ಟನ್ನು ಒದಗಿಸಿಕೊಟ್ಟಿದ್ದಾರೆ.
ಈ ಕೃತಿ ರಚನೆಯ ಶಿಲ್ಪವನ್ನು ಕುರಿತು ಡಾ. ಮರಿಗುದ್ದಿ ಅವರೇ ಹೇಳುವಂತೆ- “ಆಯಾ ಕೃತಿಗಳ ಸ್ವರೂಪ, ಸಾರಸತ್ವಗಳನ್ನು ನಾನು ವಿಚಾರ, ಸಂದೇಶ, ಆಶಯಗಳ ಹಿನ್ನೆಲೆಯಲ್ಲಿ ವಿಮರ್ಶಿಸಿದ್ದು ಅವುಗಳ ಪರಿಚಯ ಓದುಗರಿಗೆ ಒದಗಬೇಕು ಎಂಬುದು ನನ್ನ ಬಯಕೆ. ಎರಡು ತೆರನಲ್ಲಿ ವಿಮರ್ಶೆಗೆ ತೊಡಗಿರುವುದನ್ನು ಇಲ್ಲಿ ಕಾಣಬಹುದು. ಇಡೀ ಕೃತಿಯನ್ನು ಇಲ್ಲವೆ ಪ್ರಕಾರವನ್ನು ಇಡಿಯಾಗಿ ಗಮನಿಸಿ ಅದರ ವಿಶ್ಲೇಷಣೆಗೆ ತೊಡಗುವ ಒಂದು ಮಾದರಿ ಇಲ್ಲಿದೆ. ರಾಗೌ ಅವರ ಸಮಗ್ರ ಕಾವ್ಯ, ಕಾವ್ಯತತ್ವ, ಚಿಂತನೆ, ಸಂಶೋಧನಾ ಮಹಾಪ್ರಬಂಧ ಕುರಿತಾಗಿ ಒಟ್ಟು ನೋಟದ ಗ್ರಹಿಕೆಯಿಂದ ವಿಮರ್ಶೆ ಬಂದಿದೆ. ರಾಗೌ ಅವರ ವಿಮರ್ಶಾ ಕೃತಿ, ಜಾನಪದ ಕೃತಿ, ಜೀವನ ಚರಿತ್ರೆಗಳನ್ನು ಒಂದೊAದಾಗಿ ಎಂದರೆ ಬಿಡಿ ಬಿಡಿಯಾಗಿ ವಿಮರ್ಶಿಸಲಾಗಿದೆ. ಹಾಗೆ ಮಾಡುವಾಗ ಆ ಕೃತಿಗಳ ಪ್ರಕಟಣೆಯ ಕಾಲಕ್ರಮವನ್ನು ಗಮನಿಸಲಾಗಿದೆ….ಅಧ್ಯಯನದ ಒಂದು ಏಕರೂಪತೆಗಾಗಿ ಮತ್ತು ಶಿಸ್ತಿಗಾಗಿ ಮಾಡಿಕೊಂಡಿರುವೆನು”(ಅರಿಕೆ ಪು. ೧೧)

ಹೀಗೆ ಎರಡು ಬಗೆಯಲ್ಲಿ ಒಟ್ಟು ಸಾಹಿತ್ಯವನ್ನು ಪರಾಮರ್ಶಿಸುವ, ಪರಿಶೀಲಿಸುವ ಕಾರ್ಯವನ್ನು ಡಾ. ಮರಿಗುದ್ದಿ ಅವರು ತುಂಬ ಅರ್ಥಪೂರ್ಣವಾಗಿ ಇಲ್ಲಿ ಮಾಡಿದ್ದಾರೆ.
‘ರಾಗೌ ಕಾವ್ಯದ ಹಲವು ಮುಖಗಳು-೧’ ಎಂಬ ಮೊದಲ ಬರಹದಲ್ಲಿ ರಾಗೌ ಅವರ ಯಾತ್ರೆ ಕವನ ಸಂಕಲನದಿಂದ ನಿರಾಭರಣ ದವರೆಗಿನ ಒಟ್ಟು ೧೩ ಕವನ ಸಂಕಲನಗಳನ್ನು ವಿಮರ್ಶಾಕಕ್ಷೆಗೆ ತೆಗೆದುಕೊಂಡಿದ್ದಾರೆ. ಆರು ದಶಕಗಳ ಅವರ ಕಾವ್ಯ ಪಯಣದ ಹಲವು ಮಜಲುಗಳನ್ನು ತುಂಬ ವಾಸ್ತವ ನೆಲೆಯಲ್ಲಿ ಗುರುತಿಸಿದ್ದಾರೆ. ಅದರಲ್ಲೂ ಮುಖ್ಯವಾಗಿ ರಾಗೌ ಕಾವ್ಯದ ಜೊತೆಗೆ ವಿಮರ್ಶೆ, ಸಂಪಾದನೆ, ನಾಟಕ, ಜಾನಪದ ಅಧ್ಯಯನ, ಕಾವ್ಯಮೀಮಾಂಸೆ, ಸಂಶೋಧನೆ ಮೊದಲಾದ ಪ್ರಕಾರಗಳಲ್ಲಿ ಉಲ್ಲೇಖನೀಯ ಕೃತಿಗಳನ್ನು ನೀಡಿದ್ದು, ಇನ್ನೊಂದು ನವೋದಯ, ನವ್ಯ, ದಲಿತ, ಬಂಡಾಯ ಕಾಲಘಟ್ಟಗಳಲ್ಲಿ ಬರೆದರೂ ಅವರ ಕಾವ್ಯದಲ್ಲಿ ಪ್ರಯೋಗಶೀಲತೆ, ಬದಲಾವಣೆ ಬಂದರೂ ಅನ್ಯಾಗ್ರಹಕ್ಕೆ ಅನುವರ್ತಿಯಾಗಲಿಲ್ಲ ಎಂಬ ಎರಡು ಅಂಶಗಳತ್ತ ನಮ್ಮ ಗಮನ ಸೆಳೆಯುತ್ತಾರೆ. ರಾಗೌ ಅವರು ಬಸವಣ್ಣನವರನ್ನು ಕುರಿತು ಬರೆದ ಒಂದು ಕವಿತೆಯನ್ನು ಕುರಿತು ಡಾ. ಮರಿಗುದ್ದಿ ಅವರು ವಿಶ್ಲೇಷಿಸಿದ ರೀತಿ ತುಂಬ ಅನನ್ಯವಾಗಿದೆ.

- Advertisement -

ಮತವಲ್ಲ ಮಾನವಗೆ ಮನವೆಂಬುದು ತೋರಿಸಿಕೊಟ್ಟೆನ್ನ ದೇವ ಗುರುವೆ
ಮೇಲು ಕೀಳುಗಳ ಕಂದರಗಳ ನಡುವೆ ಸೇತುಗಟ್ಟಿದಂಥ ಶಿವಶರಣ
ವಚನವೇದದ ತುಂಬ ಬಾಳ ಭಗವದ್ಗೀತೆಯನೊರೆದ ಭಗವಂತ
ಅಂತ್ಯಗೊಳ್ಳುವುದೆಂತೀ, ಯುದ್ಧ ಕ್ರೋಧಗಳ ವಿಷಾದ ಗ್ಲಾನೀ ಭಾರತ

ಈ ಸಾಲುಗಳನ್ನು ಉಲ್ಲೇಖಿಸಿ, ಡಾ. ಮರಿಗುದ್ದಿ ಅವರು ಹೇಳುವ ನುಡಿಗಳು ಹೀಗಿವೆ : “ಇಲ್ಲಿ ಬಸವಣ್ಣನವರಿಗೆ ಕವಿ ಕೇವಲ ಗೌರವವನ್ನು ಮಾತ್ರ ಸೂಚಿಸಿಲ್ಲ. ಅವರ ಕಾರ್ಯಸಾಧನೆಗಳಿಗೆ ಕೂಡ ಗೌರವಾದರ ತೋರಿದ್ದಾರೆ. ಇಲ್ಲಿ ‘ದೇವಗುರು’, ‘ಶಿವಶರಣ’, ‘ವಚನವೇದ’, ‘ಬಾಳಭಗವದ್ಗೀತೆ’ ಎಂಬ ರೂಪಕಗಳ ಮೂಲಕ ಹೊಸ ದರ್ಶನವನ್ನು ಬಿಂಬಿಸಲಾಗಿದೆ. ಜಗತ್ತು, ಭಾರತಗಳು ಯುದ್ಧ ಮತ್ತು ಕ್ರೋಧದಿಂದ ಹೊರಬರಲು ಬಸವತತ್ವಗಳ ಅಗತ್ಯ ಇಂದಿಗೂ ಇರುವುದನ್ನು ಇಲ್ಲಿ ಕವಿತೆ ಧ್ವನಿಸುತ್ತದೆ. ಬಸವಣ್ಣನವರ ಬಗ್ಗೆ ಬಂದಿರುವ ಆಧುನಿಕ ಕನ್ನಡ ಭಾವಗೀತೆಗಳಲ್ಲಿ, ಸ್ಮರಣ ಗೀತೆಗಳಲ್ಲಿ ಈ ಕವಿತೆಗೆ ಪ್ರಮುಖ ಸ್ಥಾನವಿದೆ”(ಪು.೧೫) ಹೀಗೆ ರಾಗೌ ಅವರ ಕಾವ್ಯದ ಒಟ್ಟು ಒಳನೋಟಗಳನ್ನು ಎಲ್ಲ ಸಂಕಲನಗಳನ್ನು ಸೂಕ್ಷ್ಮವಾಗಿ ಗಮನಿಸಿ ವಿವರಿಸಿದ್ದಾರೆ.
‘ರಾಗೌ ಕಾವ್ಯದಲ್ಲಿ ದಾರ್ಶನಿಕತೆಯ ಸ್ವರೂಪ’ ಎಂಬ ಎರಡನೆಯ ಲೇಖನದಲ್ಲಿ ರಾಗೌ ಅವರು ಕಾವ್ಯದಲ್ಲಿ ಅಭಿವ್ಯಕ್ತಿಸಿದ ದಾರ್ಶನಿಕತೆಯ ಚಿಂತನೆಗಳನ್ನು ಶೋಧಿಸಿದ್ದಾರೆ. ಕುವೆಂಪು ಅವರ ಪ್ರಭಾವವಲಯದಲ್ಲಿ ಬೆಳೆದ ರಾಗೌ ಅವರು ಸಹಜವಾಗಿಯೇ ಧರ್ಮ-ದರ್ಶನಗಳ ಸೂಕ್ಷ್ಮ ವ್ಯತ್ಯಾಸಗಳನ್ನು ಅರಿತವರು. ಧರ್ಮವನ್ನೂ ಮೀರಿ ದಾರ್ಶನಿಕತೆ ಬೆಳೆಯುತ್ತದೆ ಎಂಬುದರ ಅರಿವು ಅವರಿಗಿರುವುದರಿಂದ ಅವರ ಕಾವ್ಯದ ಸ್ಥಾಯೀಭಾವ ಕೂಡ ದರ್ಶನದ ಹುಡುಕಾಟವೇ ಆಗಿದೆ ಎಂಬುದನ್ನು ಡಾ. ಮರಿಗುದ್ದಿ ಅವರು ಗುರುತಿಸುವ ಪ್ರಯತ್ನ ಮಾಡಿದ್ದಾರೆ. ಜೀವ-ಜಗತ್ತು-ಈಶ್ವರ ಮೊದಲಾದ ಫಿಲಾಸಫಿಯ ಕುರಿತು ಒಬ್ಬ ತತ್ವಜ್ಞಾನಿ ಪ್ರತಿಪಾದಿಸುವ ಪ್ರಮೇಯಗಳು ಬೇರೆ, ಒಬ್ಬ ಅನುಭಾವಿ ನೋಡುವ ದೃಷ್ಟಿಯೇ ಬೇರೆ. ರಾಗೌ ಅವರು ತತ್ವಜ್ಞಾನಿ ದೃಷ್ಟಿಗಿಂತ, ಅನುಭಾವಿಕ ದೃಷ್ಟಿಯಿಂದ ತಮ್ಮ ಕಾವ್ಯದ ಮೂಲಕ ದರ್ಶನದ ಹೊಳಹನ್ನು ತೋರಿಸುತ್ತಾರೆ ಎಂಬುದನ್ನು ಅವರ ‘ನೆಲದ ಮರೆಯ ನಿಧಾನ’ ಮತ್ತು ‘ಅನಾಗತ’ ಕಾವ್ಯ ಸಂಕಲನಗಳಿಂದ ಅನೇಕ ಉದಾಹರಣೆಗಳನ್ನು ಉಲ್ಲೇಖಿಸಿ ವಿವರಿಸುತ್ತಾರೆ.

‘ಕಾವ್ಯ ತತ್ವ ಚಿಂತನೆಗಳು’ ಎಂಬ ಲೇಖನ ರಾಗೌ ಅವರ ಬಹುಮುಖ್ಯ ಕೃತಿ ‘ಕಾವ್ಯದ ನಡಿಗೆ ಹೊಸದಿಕ್ಕಿನೆಡೆಗೆ’ ಎಂಬ ಕೃತಿಯ ವಿಮರ್ಶೆಯನ್ನು ಒಳಗೊಂಡಿದೆ. ಭಾರತೀಯ ಕಾವ್ಯಮೀಮಾಂಸೆ ಎಂಬುದೊಂದು ಸಿದ್ಧಮಾದರಿಯ ಜೊತೆಗೆ ಕನ್ನಡದೇ ಆದ ಒಂದು ಕಾವ್ಯಮೀಮಾಂಸೆ ಇದೆ, ಕನ್ನಡದೇ ಆದ ಕೆಲವು ಕಾವ್ಯ ಚಿಂತನೆಗಳಿವೆ ಎಂಬುದನ್ನು ಗುರುತಿಸುವ ಒಂದು ಗಂಭೀರ ಕೃತಿ ‘ಕಾವ್ಯದ ನಡಿಗೆ ಹೊಸದಿಕ್ಕಿನೆಡೆಗೆ’. ಒಟ್ಟು ೩೬ ಲೇಖನಗಳನ್ನು ಒಳಗೊಂಡಿರುವ ಈ ಕೃತಿಯನ್ನು ಕುರಿತು ತಲಸ್ಪರ್ಶಿಯಾದ ಚಿಂತನೆಗಳನ್ನು ನೀಡಿದ್ದಾರೆ. ಪ್ರತಿಯೊಂದು ಬರಹವನ್ನು ತೌಲನಿಕವಾಗಿ ಗುರುತಿಸುತ್ತ, ಜಿ.ಎಸ್.ಎಸ್. ಅವರ ಕಾವ್ಯತತ್ವ ಚಿಂತನಗಳಿಗೂ ರಾಗೌ ಅವರ ಚಿಂತನೆಗಳಿಗೂ ಎಷ್ಟೊಂದು ಸಾಮ್ಯಗಳಿವೆ ಎಂಬುದನ್ನು ತಿಳಿಸುತ್ತರೆ. ಜಿ.ಎಸ್.ಎಸ್. ಅವರು ಈಗ ಕನ್ನಡ ಸಾಹಿತ್ಯ ನಿಂತ ನೀರಾಗಿದೆ. ನವೋದಯ, ನವ್ಯ, ಪ್ರಗತಿಶೀಲ, ದಲಿತ-ಬಂಡಾಯ ಮೊದಲಾದ ಸಾಹಿತ್ಯ ಘಟ್ಟಗಳು ಮುಗಿದು, ಈಗ ಕನ್ನಡ ಸಾಹಿತ್ಯದಲ್ಲಿ ಒಂದು ರೀತಿಯಲ್ಲಿ ನಿರ್ವಾತ ಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳಿದ್ದರು. ಆದರೆ ರಾಗೌ ಅವರ ದೃಷ್ಟಿ ಬೇರೆಯಾಗಿರುವುದನ್ನು ಡಾ. ಮರಿಗುದ್ದಿ ಅವರು ಹೀಗೆ ವಿವರಿಸುತ್ತಾರೆ- “ಈಗ ಕಾವ್ಯ ಸ್ಥಗಿತಗೊಂಡಿದೆ ಎಂಬ ಹೇಳಿಕೆ ಬರಹಗಳು ಈಚೆಗೆ ಬರುವುದನ್ನು ಕಂಡು ಗಂಭೀರವಾಗಿ ಚಿಂತಿಸಿದ ರಾಗೌ ‘ಸ್ಥಗಿತವಲ್ಲ; ಸ್ಥಿತ್ಯಂತರ’ ಎಂದು ಕರೆದ” ಬಗೆಯನ್ನು ವಿವರಿಸಿದ್ದಾರೆ.

ರಾಗೌ ಅವರ ವಿಮರ್ಶಾ ಸಾಹಿತ್ಯವನ್ನು ಎರಡು ಭಾಗಗಳಲ್ಲಿ ವಿವರಿಸುವ ಪ್ರಯತ್ನ ಮಾಡಿದ್ದಾರೆ. ‘ವಿಮರ್ಶಾ ಪ್ರಜ್ಞೆ ಭಾಗ-೧’ ಲೇಖನದಲ್ಲಿ ರಾಗೌ ಅವರ ಐದು ವಿಮರ್ಶಾ ಕೃತಿಗಳ ಪರಿಶೀಲನೆ ಮಾಡಿದ್ದಾರೆ. ‘ಕಾವ್ಯಾನುಶೀಲನ’, ‘ಅವಗಾಹನ’, ‘ಪ್ರಾಸ್ತಾವಿಕ’, ‘ಸಮಾಕೀರ್ಣ’, ‘ಷಷ್ಠಿಸಂಪದ’ ಈ ಐದು ಕೃತಿಗಳಲ್ಲಿ ಅಡಕವಾದ ನೂರಾರು ಲೇಖನಗಳನ್ನು ಓದಿ ರಾಗೌ ಅವರ ವಿಮರ್ಶೆಯ ಪಾಂಡಿತ್ಯ, ಔಚಿತ್ಯಗಳ ಕುರಿತು ಸೂಕ್ಷ್ಮಗ್ರಹಿಕೆಯ ವಿಚಾರಗಳನ್ನು ತಿಳಿಸಿದ್ದಾರೆ. ರಾಗೌ ಅವರು ಉತ್ತರ ದಕ್ಷಿಣ ಭೇದವಿಲ್ಲದೆ ಅನೇಕ ವಿದ್ವಜ್ಜನರ ಕೃತಿಗಳನ್ನು ಕುರಿತು ನಿಷ್ಪಕ್ಷವಾದ ವಿಮರ್ಶೆಯ ಚಿಂತನೆಗಳನ್ನು ಕೊಟ್ಟಿರುವ ಬಗೆಯನ್ನು ಇಲ್ಲಿ ಕೊಟ್ಟಿದ್ದಾರೆ. ವಿಶೇಷವಾಗಿ ಕಟ್ಟೀಮನಿಯವರ ಎರಡು ಕಾದಂಬರಿಗಳ ಕುರಿತು ರಾಗೌ ಅವರ ವಿಚಾರಧಾರೆ ಏನಿತ್ತು ಎಂಬುದನ್ನು ಡಾ. ಮರಿಗುದ್ದಿ ಅವರು ವಿಶ್ಲೇಷಿಸಿದ ಕ್ರಮ ಅಪ್ಯಾಯಮಾನವಾಗಿದೆ.

‘ವಿಮರ್ಶಾ ಪ್ರಜ್ಞೆ ಭಾಗ-೨’ ಎಂಬ ಐದನೆಯ ಲೇಖನದಲ್ಲಿ ರಾಗೌ ಅವರು ಬರೆದ ‘ಪ್ರಾಚೀನ ಕಾವ್ಯಾಧ್ಯಯನ’, ಭಾಗದಲ್ಲಿ ‘ದುರ್ಗಸಿಂಹ’, ‘ಪ್ರಾಚೀನ ಕಾವ್ಯಚಿಂತನ’, ಕೃತಿಯಲ್ಲಿ ವಚನ ಸಾಹಿತ್ಯ, ರಾಘವಾಂಕನ ಕಾವ್ಯ, ಹರಿದಾಸ ಸಾಹಿತ್ಯ ಕುರಿತಾದ ರಾಗೌ ಅವರ ಹೊಸನೋಟದ ವಿಚಾರಧಾರೆಯನ್ನು ಪರಿಶೀಲಿಸಿದ್ದಾರೆ. ರಾಗೌ ಅವರಿಗೆ ಅತ್ಯಂತ ಪ್ರೀತಿಪಾತ್ರರಾದ ಕುವೆಂಪು ಅವರ ಸಾಹಿತ್ಯವನ್ನು ಕುರಿತು ಬರೆದ ‘ಕುವೆಂಪು ಸಾಹಿತ್ಯಾಧ್ಯಯನ’ ಕೃತಿಯ ಪರಿಶೀಲನೆ ಓದುಗರ ಗಮನ ಸೆಳೆಯುತ್ತದೆ. ಡಾ. ಮರಿಗುದ್ದಿ ಅವರು ಸ್ವತಃ ಕುವೆಂಪು ಸಾಹಿತ್ಯವನ್ನು ಮೂರು ದಶಕಗಳ ಕಾಲ ಅಧ್ಯಯನ ಮಾಡುತ್ತ ಬಂದವರು, ಹೀಗಾಗಿ ರಾಗೌ ಅವರು ಕುವೆಂಪು ಸಾಹಿತ್ಯವನ್ನು ಗುರುತಿಸುವ ನೆಲೆ-ಬೆಲೆಗಳನ್ನು ಡಾ. ಮರಿಗುದ್ದಿ ಅವರು ಸಮೃದ್ಧವಾಗಿ ಸಮೀಕ್ಷಿಸಿದ್ದಾರೆ.

‘ಜಾನಪದ ಸಂಗ್ರಹ-ಸಂಪಾದನೆಗಳು’ ಲೇಖನದಲ್ಲಿ ರಾಗೌ ಅವರು ಕೇವಲ ಕವಿ-ವಿಮರ್ಶಕ ಮಾತ್ರ ಆಗದೆ ಜಾನಪದವೂ ಅವರ ಮೂಲ ತುಡಿತವಾಗಿತ್ತು ಎಂಬುದರತ್ತ ಗಮನ ಸೆಳೆಯುತ್ತಾರೆ. ಉತ್ತರ ಕರ್ನಾಟಕದಲ್ಲಿ ಸುಂಕಾಪುರ, ಹೆಂಡಿ, ಲಠ್ಠೆ ಮೊದಲಾದವರು ಮಾಡಿದ ಕಾರ್ಯವನ್ನು ದಕ್ಷಿಣ ಭಾಗದಲ್ಲಿ ಪರಮಶಿವಯ್ಯನವರ ತರುವಾಯದ ಘಟ್ಟದಲ್ಲಿ ರಾಗೌ ಅವರು ಮಾಡಿದ ಬಗೆಯನ್ನು ನೋಡಬಹುದು. ರಾಗೌ ಅವರು ಜಾನಪದ ಸಂಗ್ರಹ ಕಾರ್ಯದಲ್ಲಿ ದುಡಿದ ಪರಿಣಾಮ ರಚಿಸಿದ ‘ನಮ್ಮ ಗಾದೆಗಳು’, ‘ಕಿಟ್ಟೆಲ್ ಕೋಶದ ಗಾದೆಗಳು’, ‘ಕರ್ನಾಟಕ ಜನಪದ ಕಥೆಗಳು’, ‘ನಮ್ಮ ಒಗಟುಗಳು’, ‘ಶಿಶು ಪ್ರಾಸಗಳು’, ‘ಜಾನಪದ ಆಟಗಳು’ ಈ ಕೃತಿಗಳ ಮೇಲೆ ಬೆಳಕು ಚೆಲ್ಲುವ ಕಾರ್ಯವನ್ನು ಮಾಡಿದ್ದಾರೆ.

‘ಜಾನಪದ ಅಧ್ಯಯನಗಳು’ ಲೇಖನದಲ್ಲಿ ರಾಗೌ ಅವರು ಜಾನಪದ ವಿಷಯಕ್ಕೆ ಬರೆದ ಸಂಶೋಧನೆ-ವಿಮರ್ಶಾ ಕೃತಿಗಳ ಅವಲೋಕನ ಮಾಡಿದ್ದಾರೆ. ‘ಜಾನಪದ ಸಂಕೀರ್ಣ’, ‘ಜನಪದ ಸಾಹಿತ್ಯ ರೂಪಗಳು’, ‘ಜಾನಪದ ಸಂಶೋಧನ’, ‘ಜನಪದ ಮಹಾಭಾರತ ಸಮಾಲೋಚನೆ’, ‘ಜಾನಪದ ತತ್ವಾರ್ಥ ಪ್ರವೇಶ’, ಒಟ್ಟು ಐದು ಕೃತಿಗಳ ವಿಮರ್ಶೆ ಇಲ್ಲಿದೆ. ಜಾನಪದ ತತ್ವಾರ್ಥ ಪ್ರವೇಶ ಕೃತಿಯಂತೂ ಏಳು ನೂರು ಪುಟಗಳ ಬೃಹತ್ ಕೃತಿ. ಇಂತಹ ಕೃತಿಗಳನ್ನು ಆಮೂಲಾಗ್ರವಾಗಿ ಪರಿಶೀಲಿಸಿ, ರಾಗೌ ಅವರ ಸಂಶೋಧನಾ ದೃಷ್ಟಿ, ವಿಮರ್ಶಾ ದೃಷ್ಟಿಗಳನ್ನು ಗುರುತಿಸುವ ಶ್ರಮದ ಕಾರ್ಯವನ್ನು ಡಾ. ಮರಿಗುದ್ದಿ ಅವರು ತುಂಬ ಸಹನೆ-ಶ್ರದ್ಧೆಯಿಂದ ಮಾಡಿರುವುದು ಕಂಡು ಬರುತ್ತದೆ.
‘ಸಂಶೋಧನಾ ಮಹಾಪ್ರಬಂಧ’ ಎಂಟನೆಯ ಲೇಖನದಲ್ಲಿ ರಾಗೌ ಅವರ ಪಿಎಚ್.ಡಿ. ಮಹಾಪ್ರಬಂಧ ‘ಕನ್ನಡ ಕಾವ್ಯಗಳಲ್ಲಿ ಐತಿಹಾಸಿಕ ವಿಚಾರಗಳು’ ಎಂಬ ಕೃತಿಯನ್ನು ತಲಸ್ಪರ್ಶಿಯಾಗಿ ಅಧ್ಯಯನ ಮಾಡಿ, ಈ ಸಂಶೋಧನ ಮಹಾಪ್ರಬಂಧದ ಸಾರ್ಥಕ್ಯವನ್ನು ಗುರುತಿಸಿದ್ದಾರೆ. ರಾಗೌ ಅವರು ‘ಭುವನೈಕ್ಯರಾಮಾಭ್ಯುದಯ’ ಕೃತಿಯ ಕರ್ತೃ ವಿಷಯವಾಗಿ ನಡೆದ ಚಿಂತನೆಗಳ ಕುರಿತು ಬರೆದ ವಿಚಾರಕ್ಕೆ ಡಾ. ಮರಿಗುದ್ದಿ ಅವರು ಸಹಮತ ವ್ಯಕ್ತಪಡಿಸಿದ್ದಾರೆ.

ಡಿ.ಎಲ್.ಎನ್. ಬೇಂದ್ರೆ, ಎಲ್. ಆರ್. ಹೆಗಡೆ ಮೊದಲಾದವರು ರಾಷ್ಟ್ರಕೂಟರ ದೊರೆ ಮುಮ್ಮಡಿ ಕೃಷ್ಣ ಬರೆದನೆಂದು ಹೇಳಿದರೆ, ಎಂ. ಬಿ. ನೇಗಿನಹಾಳ ಅವರು ಇದನ್ನು ಬರೆದವನು ‘ಶಂಕರಗಂಡ’ ಎಂಬ ನಿಲುವಿಗೆ ಬಂದರು. ಡಿ.ಎಲ್.ಎನ್. ಅವರಂತಹ ವಿದ್ವತ್ ಪ್ರಭೃತಿಗಳ ವಿಚಾರವನ್ನು ಅಲ್ಲಗಳೆಯುವುದು ಅಷ್ಟು ಸುಲಭಸಾಧ್ಯವಲ್ಲ. ಆದರೆ ಎಂ. ಬಿ. ನೇಗಿನಹಾಳ ಅವರು ‘ಶಂಕರ ಗಂಡ’ನೇ ಭುವನೈಕ್ಯ ರಾಮಾಭ್ಯುದಯ ಕೃತಿಯ ಕರ್ತೃ ಎಂಬ ಸಂಗತಿಯನ್ನು ಡಾ. ಎಂ. ಎಂ. ಕಲಬುರ್ಗಿ ಆದಿಯಾಗಿ ಅನೇಕ ಸಂಶೋಧಕರು ಒಪ್ಪಿಕೊಂಡಿರುವುದು ಗಮನಿಸುವ ಅಂಶ. ಈ ವಿಷಯವಾಗಿ ರಾಗೌ ಅವರ ನಿಲುವು ಇಂದು ಬಿದ್ದು ಹೋಗಿದೆ. ಹಾಗಂತ ರಾಗೌ ಅವರ ಎಲ್ಲ ಅಭಿಪ್ರಾಯಗಳನ್ನು ಡಾ. ಮರಿಗುದ್ದಿ ಅವರು ಒಪ್ಪಿಕೊಂಡಿದ್ದಾರಂತೇನೂ ಅಲ್ಲ, ರಾಗೌ ಅವರು ಈ ಸಂಶೋಧನಾ ಕೃತಿಯಲ್ಲಿ ಹರಿಹರ ರಗಳೆಗಳನ್ನು ಅಧ್ಯಯನಕ್ಕೆ ಬಳಸಿಕೊಳ್ಳಬೇಕಾಗಿತ್ತು. ಅದೊಂದು ಕೊರತೆ ಎದ್ದು ಕಾಣುತ್ತದೆ ಎಂಬುದನ್ನು ನಿರ್ದಾಕ್ಷಿಣ್ಯವಾಗಿ ಕೊರತೆಗಳನ್ನೂ ಗುರುತಿಸಿದ್ದಾರೆ.

‘ಜೀವನ ಮತ್ತು ಸಾಧನೆಗಳ ಚಿತ್ರಣ’ ಲೇಖನದಲ್ಲಿ ಡಾ. ರಾಗೌ ಅವರು ಬರೆದ ‘ಹಾಮಾನಾ ಮಾದರಿ’, ಶಂಕರಗೌಡರ ಕುರಿತು ಬರೆದ ‘ಜೀವಂತ ದಂತಕಥೆ’, ‘ಕೆ.ಎಸ್. ನರಸಿಂಹಸ್ವಾಮಿ’, ‘ಬಿ.ಎಂ.ಶ್ರೀಕಂಠಯ್ಯ’, ‘ಟಿ.ಎಸ್.ವೆಂಕಣ್ಣಯ್ಯ’, ಈ ಜೀವನ ಚರಿತ್ರೆಗಳನ್ನು ಅವಲೋಕಿಸಿದ್ದಾರೆ. ‘ಗ್ರಂಥ ಸಂಪಾದನೆ’, ‘ನಾಟಕ ವಿವೇಚನೆ’ ಎಂಬ ಎರಡು ಲೇಖನಗಳಲ್ಲಿ ರಾಗೌ ಅವರ ಸಂಪಾದಿತ ಕೃತಿಗಳ ಅವಲೋಕನ ಮತ್ತು ‘ದೊರೆ ದುರ್ಯೋಧನ’ ನಾಟಕ ವಿಶ್ಲೇಷಣೆ ಮಾಡಿದ್ದಾರೆ.

ಸಮಾರೋಪ ಎಂಬ ಕೊನೆಯ ಅಧ್ಯಾಯದಲ್ಲಿ ರಾಗೌ ಅವರ ಸಾಹಿತ್ಯದ ವೈಲಕ್ಷಣಗಳನ್ನು, ಹಳೆ ಬೇರು-ಹೊಸ ಚಿಗುರು ಎನ್ನುವಂತೆ ಜಾನಪದ-ಪ್ರಾಚೀನ ಗ್ರಂಥ ಸಂಪಾದನೆ-ಆಧುನಿಕ ಕಾವ್ಯ, ವಿಮರ್ಶೆ ಮೊದಲಾದ ಸಾಹಿತ್ಯದ ವಿಭಿನ್ನ ಕಾಲಘಟ್ಟದ ಕೃತಿ ರಚನೆಯ ಮೂಲಕ ರಾಗೌ ಅವರು ಕನ್ನಡ ಸಾರಸ್ವತ ಪ್ರಪಂಚಕ್ಕೆ ಕೊಟ್ಟ ಕಾಣಿಕೆ, ನೀಡಿದ ಸೇವೆಯನ್ನು ಸಮಗ್ರವಾಗಿ ಸಮೃದ್ಧವಾಗಿ ಗುರುತಿಸಿ, ಅವರ ಸಾಹಿತ್ಯದ ಅಧ್ಯಯನಕ್ಕೆ ಒಂದು ಗುಣಗೌರವವನ್ನು ತಂದುಕೊಟ್ಟಿದ್ದಾರೆ. ಈ ಮೂಲಕ ಡಾ. ಮರಿಗುದ್ದಿ ಅವರು ರಾಗೌ ಅವರ ಸಾಹಿತ್ಯದ ಅಧ್ಯಯನ ಮಾಡುವವರಿಗೆ ಒಂದು ದಾರಿಯನ್ನು ತೋರಿದ್ದಾರೆ. ಪ್ರಾರಂಭದಲ್ಲಿ ಅವರ ವೈಯಕ್ತಿಕ ಜೀವನ ಕುರಿತಾದ ಒಂದು ಲೇಖನ-ಕೊನೆಯಲ್ಲಿ ಅವರ ಕೃತಿ ಸೂಚಿಯನ್ನು ನೀಡಿದ್ದರೆ, ಓದುಗರಿಗೆ ತುಂಬ ಪ್ರಯೋಜವಾಗುತ್ತಿತ್ತು ಎಂಬುದು ನನ್ನ ಭಾವನೆ.
ಈ ಕೃತಿಗೆ ಖ್ಯಾತ ವಿದ್ವಾಂಸರಾದ ಡಾ. ಸಿ. ನಾಗಣ್ಣ ಅವರು ಮೌಲಿಕವಾದ ಮುನ್ನುಡಿ ತೋರಣ ಕಟ್ಟಿಕೊಟ್ಟಿದ್ದಾರೆ. “ರಾಗೌ ಅವರಂತೆಯೇ ಅಧ್ಯಯನ, ಅಧ್ಯಾಪನ ಮತ್ತು ಬರವಣಿಗೆಗೆ ತಮ್ಮನ್ನು ಸಮರ್ಪಿಸಿಕೊಂಡು ಕೃತಾರ್ಥರಾಗಿರುವ ಡಾ. ಗುರುಪಾದ ಮರಿಗುದ್ದಿ ಅವರ ‘ಡಾ. ರಾಗೌ ಸಾಹಿತ್ಯ ಮಂಥನ’ ಕೃತಿಯನ್ನು ಓದಿ ಮುಗಿಸುವಾಗ ಮನಸ್ಸಿಗೆ ಒಂದು ನವೀನ ರೀತಿಯ ಮಾರ್ದವತೆ ಪ್ರಾಪ್ತವಾಗುತ್ತದೆ. ಹೆರಾಲ್ಡ್ ಬ್ಲೂಮ್ ಹೇಳಿದಂತೆ ರಾಗೌ ನಿರ್ಮಿಸಿದ ಸಾಹಿತ್ಯೋದ್ಯಾನದ ವಿಶಿಷ್ಟ ಕುಸುಮಗಳ ಮಕರಂದವನ್ನು ಅತ್ಯಂತ ಕಾಳಜಿಯಿಂದ ಸಂಗ್ರಹಿಸಿ ನಮಗೆ ನೀಡಿ ನಮ್ಮ ಬೌದ್ಧಿಕ ಕ್ಷಿತಿಜವನ್ನು ವಿಸ್ತರಿಸುವ ಸಜ್ಜನ ವಿದ್ವಾಂಸರಾದ ಡಾ. ಗುರುಪಾದ ಮರಿಗುದ್ದಿ ಅವರನ್ನು ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆ” ಎಂದು ಡಾ. ನಾಗಣ್ಣ ಅವರು ಹೇಳಿರುವುದು ಅತ್ಯಂತ ಸಮಂಜಸವಾಗಿದೆ. ಇದರ ಮುಂದೆ ಶಬ್ದಗಳಿಲ್ಲ.

ಇಂತಹ ಅಮೂಲ್ಯ ಕೃತಿಯನ್ನು ರಚಿಸಿ ಸಾರಸ್ವತ ಪ್ರಪಂಚಕ್ಕೆ ನೀಡಿದ ಆದರಣೀಯ ವಿದ್ವಾಂಸರಾದ ಡಾ. ಗುರುಪಾದ ಮರಿಗುದ್ದಿ ಅವರಿಗೂ, ಇಂತಹ ಅಮೂಲಕ ಕೃತಿಯನ್ನು ತಮ್ಮ ಕರ್ನಾಟಕ ಸಂಘದಿಂದ ಪ್ರಕಟಿಸಿದ ಪ್ರೊ. ಜಯಪ್ರಕಾಶಗೌಡರಿಗೂ ವಂದನೆ-ಅಭಿನಂದನೆಗಳು.

ಪ್ರಕಾಶ ಗಿರಿಮಲ್ಲನವರ
ಬೆಳಗಾವಿ
ಮೊ: ೯೯೦೨೧೩೦೦೪೧

- Advertisement -
- Advertisement -

Latest News

ವಚನ ವಿಶ್ಲೇಷಣೆ : ಸ್ವಯಂಪ್ರಸಾದಿಯಾದ ಬಸವಣ್ಣ

ತನುವಿಡಿದು ದಾಸೋಹವ ಮಾಡಿ ಗುರುಪ್ರಸಾದಿಯಾದ ಬಸವಣ್ಣ ಮನವಿಡಿದು ದಾಸೋಹವ ಮಾಡಿ   ಲಿಂಗಪ್ರಸಾದಿಯಾದ ಬಸವಣ್ಣ.                   ...
- Advertisement -

More Articles Like This

- Advertisement -
close
error: Content is protected !!
Join WhatsApp Group