spot_img
spot_img

ಹೀಗೊಂದು ಜಂತರ್-ಮಂತರ್ ಮತ್ತೊಂದು ಛೂ ಮಂತರ್

Must Read

- Advertisement -

ಇದು ಜನಸಾಮಾನ್ಯನ ಮನ್ ಕಿ ಬಾತ್

ಬಸ್ ನಂಬರ 252 ಎಫ್ ಮೆಜೆಸ್ಟಿಕ್ ನಿಂದ ರಾಜಾಜಿನಗರಕ್ಕೆ ಹೊರಡುವ ಬಸ್ಸಿನ ಎದುರು ಬದುರು ಸೀಟಿನಲ್ಲಿ ಎಂದಿನಂತೆ ಅವರಿಬ್ಬರೂ ಬಂದು ಕುಳಿತರು.ಅವಳು ಕಪ್ಪು ವ್ಯಾನಿಟಿ ಬ್ಯಾಗಿನ ಕಿತ್ತು ಹೋದ ಚೈನಿಗೆ ಬಳೆಗೆ ಸಿಕ್ಕಿಸಿದ್ದ ಪಿನ್ನೊಂದನ್ನು ತೆಗೆದು ಹಾಕಿದಳು….

ಇವನು ಕಿಟಕಿಯ ಗ್ಲಾಸು ಸರಿಸಿ ಬಾಯಲ್ಲಿ ಇದ್ದ ಎಲೆ ಅಡಿಕೆಯನ್ನ ಅತ್ತಿತ್ತ ನೋಡಿ ಹ್ರ‌್ಯಾಕ್ ಥೂ ಅಂತ ಹೊರಗೆ ಚಿಮುಕಿಸಿದ ಮೆಜೆಸ್ಟಿಕ್ಕಿನ ಗೌಜು ಗದ್ದಲದ ನಡುವೆಯೂ ಅವರಿಬ್ಬರಲ್ಲೂ ಎಂದಿನಂತೆಯೇ ಆವರಿಸಿದ ಗಾಢವಾದ ಮೌನ.

- Advertisement -

ಬಸ್ಸು ಚಲಿಸುತ್ತಿದ್ದಂತೆಯೇ ಚೀಟಿ ಯಾರ ನೋಡಿ ಚೀಟಿ ಅನ್ನುತ್ತ ಬಂದ ಕಂಡಕ್ಟರ್ ಇವರಿಬ್ಬರನ್ನೂ ನೋಡಿ ನಾ ತುಮ್ ಬೇವಫಾ ಹೋ ನಾ ಹಮ್ ಬೇವಫಾ ಹೈ ಅಂತ ಆಗಷ್ಟೆ ಎಪ್ ಎಮ್ ನಲ್ಲಿ ಹಾಡು ತೇಲಿ ಬರುತ್ತಿದ್ದಂತೆಯೆ ನಸುನಗುತ್ತ ಮುಂದಿನ ಸೀಟುಗಳತ್ತ ಚಲಿಸಿದ.

ಸುಮಾರು ಇಪ್ಪತ್ತು ವರ್ಷಗಳ ಹಿಂದಿನ ಮಾತಿರಬಹುದು. ವಿಜಯಪುರದ ಕಾಲೇಜೊಂದರಲ್ಲಿ ಒಂದೇ ಕ್ಲಾಸಿನಲ್ಲಿ ಕಲಿತದ್ದು ಅನ್ನುವದರಿಂದ ಹಿಡಿದು ಆರಂಭವಾಗಿದ್ದ ಕಣ್ಣ ನೋಟ,ಒಂದಷ್ಟು ಸೆಳೆತ,ಪ್ರಸ್ತಾಪಿಸದೇ ಉಳಿದ ಪ್ರೀತಿ ಇಬ್ಬರಿಗೂ ಅರ್ಥವಾಗುವ ವೇಳೆಗಾಗಲೇ ಬರ ಬಿದ್ದ ಕಾರಣಕ್ಕೆ ಗುಳೆ ಹೊರಟು ದುಡಿಯಲು ಬಂದ ಎರಡು ಕುಟುಂಬಗಳ ಕುಡಿ ಜೀವಗಳವು.ಆಕೆಯದ್ದು ಮೇಲ್ಜಾತಿ ಅನ್ನುವ ಕಾರಣಕ್ಕೆ ಈತ ಪ್ರೀತೀಯ ಪ್ರಸ್ತಾಪ ಮಾಡಲೇ ಇಲ್ಲ.ಅವಳಾದರೂ ಮಾಡಬಹುದಿತ್ತೋ ಎನೋ ಆದರೆ ಪಿಯುಸಿ ಮುಗಿಯುವ ಹೊತ್ತಿಗಾಗಲೇ ಮಾವನ ಮಗ ಅಂತ ಮನೆಯಲ್ಲಿ ಹಿರಿಯರು ಮಾತನಾಡಿ ಯಾದಿ ಮೇಲೆ ಶಾದಿ ಅಂತ ಅಲ್ಲೆ ಇದ್ದ ಅಕ್ಕಪಕ್ಕದ ಮನೆಯವರ ಸಮ್ಮುಖದಲ್ಲಿ ಬಾಸಿಂಗ ಕಟ್ಟಿ,ಹಾರ ಬದಲಿಸಿ,ತಾಳಿ ಕಟ್ಟಿಸಿದವರೇ ಅಕ್ಕಿಕಾಳು ಹಾಕಿ ಚುನಮುರಿ ಚುವಡಾ ಮತ್ತು ಬುಂದೆ ಲಾಡು ವಲ್ಲೇ ಮದುವೆ ಶಾಸ್ತ್ರ ಮುಗಿಸಿಬಿಟ್ಟಿದ್ದರು.

ಅವರಿವರನ್ನು ಕರೆದು,ಅರಿಸಿನ ಹಚ್ಚಿ,ಹೊಸ ಬಟ್ಟೆ ತಂದು,ಬಳೆ ಉಡಿಸಿ,ಕಂಕಣ ಕಟ್ಟಿ,ಹೀಗೆ ಶಾಸ್ತ್ರೋಕ್ತವಾಗಿ ಮಾಡಬೇಕಿದ್ದ ಮದುವೆ ಮನೆಯಲ್ಲಿ ತಾಂಡವ ಆಡುತ್ತಿದ್ದ ಬಡತನದ ಕಾರಣಕ್ಕೆ ಬಡಂಗ್ ಮತ್ತು ಬುಂದಿ ಲಾಡುವಿನ ಖಾರಾ ಬುಂದಿ ಹೆಸರಲ್ಲಿ ಮುಗಿದು ಹೋಗಿತ್ತು.

- Advertisement -

ಆ ನಂತರದಲ್ಲಿ ದುಡಿಯಲು ಬಂದ ಆಕೆಯ ಗಂಡ ಕುಡಿಯಲು ಶುರುವಿಟ್ಟು ಪ್ಲೈ ಓವರ್ ಮೇಲಿನಿಂದ ಬಿದ್ದು ಸತ್ತ ಮೇಲೆ ಅತ್ತ ತವರಿಗೂ ಮರಳಲಾಗದೆ ಬೆಂಗಳೂರಿನಲ್ಲಿ ಬಡವಾಟೆಯೊಂದರ ಪಕ್ಕದ ಜಮೀನಿನಲ್ಲಿ ಉಳ್ಳವರೊಬ್ಬರು ಒತ್ತುವರಿ ಮಾಡಿದ್ದ ಜಾಗದಲ್ಲಿ ಹಾಕಿದ್ದ ತಗಡಿನ ಶೆಡ್ಡಿಗೆ ಸಾವಿರ ರೂಪಾಯಿ ಬಾಡಿಗೆ ಕೊಟ್ಟು ವಾಸವಾಗಿದ್ದವಳು ಹೊಟ್ಟೆ ಹೊರೆಯುವದಕ್ಕೆ ಅಂತ ಗಾರ್ಮೆಂಟು ಕೆಲಸಕ್ಕೆ ಹೊರಟು ನಿಂತಿದ್ದಳು.

ಇತ್ತ ಮದುವೆಯ ಬಗ್ಗೆ ಆಸಕ್ತಿಯನ್ನೆ ಕಳೆದುಕೊಂಡು ಕಾಲೇಜು ಪ್ರೀತಿಯನ್ನೆ ಮನಸ್ಸಿನಲ್ಲಿ ಇಟ್ಟುಕೊಂಡು ಯವ್ವಾ ನಾನೂ ಕೆಲಸಕ್ಕ ಹೋಗ್ತಿನಿ ಅಂತ ರಾಮ್ಯಾ ತಿಕೋಟಾದ ಮನೆಯಲ್ಲಿ ವಿಧವೆಯಾಗಿದ್ದ ಅವ್ವನನ್ನ ಅಕ್ಕ ಪಕ್ಕದವರ ಉಸ್ತುವಾರಿಗೆ ಬಿಟ್ಟು ತ್ವಾಡೆ ದಿನದಾಗ ಅಲ್ಲೇ ಬೆಂಗಳೂರಾಗ ಮನಿ ಮಾಡಿ ಅವ್ವಾ ಕರಕೊಂಡ್ ಹೋಗ್ತೀನಿ ಅಂತ ಬಂದವನು ಕೋವಿಡ್ ಲಾಕ್ ಡೌನ ಸಮಯದಲ್ಲಿ ಅಜಾರಿ ಬಿದ್ದ ಅವ್ವನ ಆರೋಗ್ಯ ನೋಡಿಕೊಳ್ಳುವದಕ್ಕೂ ಹೋಗಲಾಗದೆ ಅವನ ತಾಯಿ ಭೀಮವ್ವ ಬಿಜಾಪೂರದ ಜಿಲ್ಲಾ ಆಸ್ಪತ್ರೆಯಲ್ಲಿ ತೀರಿಕೊಂಡಾಗ ಅಕ್ಕಪಕ್ಕದವರೂ ಅಂತ್ಯಕ್ರಿಯೆಗೆ ಬರದೆ ಮಹಾನಗರ ಪಾಲಿಕೆಯವರೇ ಮಣ್ಣು ಮಾಡಿದ ಸುದ್ದಿಯನ್ನು ಆಗಾಗ ನೆಟ್ವರ್ಕು ಕೈಕೊಡುವ ತನ್ನ ಡಿಸ್ಪ್ಲೇ ಸೀಳಿದ ಮೊಬೈಲನ್ನು ದಿಟ್ಟಿಸಿ ನೋಡಿಯೇ ನಂಬರು ಒತ್ತುತ್ತಿದ್ದ ರಾಮ್ಯಾ ಕೀಪ್ಯಾಡ್ ಮೊಬೈಲಿನಲ್ಲಿ ಅವ್ವನ ಸಾವಿನ ಸುದ್ದಿ ಕೇಳುವಷ್ಟರಲ್ಲೇ ಇನ್ನು ತನಗೆ ಯಾರು ಇಲ್ಲ ಅನ್ನುವದನ್ನ ಅರಿತು ಸೆಕ್ಯೂರಿಟಿ ಗಾರ್ಡ ಕೆಲಸಕ್ಕೆ ಸೇರಿಕೊಂಡು ಅಪಾರ್ಟಮೆಂಟಿನ ಎದುರು ಕಂಪೌಂಡಿನ ಒಳಗೂ ಅಲ್ಲದ ಇತ್ತ ಹೊರಗೂ ಅಲ್ಲದ ರೀತಿ ಕಟ್ಟಿದ ಪಿರ‌್ಯಾಮಿಡ್ಡಿನಂತಿದ್ದ ಹತ್ತು ಬೈ ಹತ್ತರ ಕೋಣೆಯಲ್ಲಿ ಉಳಿದುಕೊಂಡಿದ್ದವನು ನಾಳೆಯಿಂದ ಬೇರೆಯವರು ಬರ್ತಾರೆ ರಾಮಣ್ಣ ನೀನು ಕೆಲಸಕ್ಕ ಬರ್ಬೇಡ ನಿನ್ನಿಂದ ನಮಗೆ ಸೆಕ್ಯುರಿಟಿ ಕೊಡೋಕ್ ಆಗಲ್ಲ ಅಂದವರಿಗೆ ಮರು ಮಾತನಾಡದೆ ಅನ್ನದ ಋಣ ಇಲ್ಲಿಗೆ ತೀರಿತು ಅಂದುಕೊಳ್ಳುತ್ತ ಆಗ್ಲಿ ಸರ್ ಅಂತ ಇದ್ದ ಒಂದು ಜೊತೆ ಬಟ್ಟೆಯ ಜೊತೆಗೆ ಸೆಕ್ಯುರಿಟಿಯ ಬಣ್ಣ ಮಾಸಿದ ಯುನಿಫಾರ್ಮ್ ಮತ್ತು ಟವೆಲ್ಲೊಂದನ್ನ ಕೈ ಚೀಲಕ್ಕೆ ಹಾಕಿ ಹೊರಟು ನಿಂತಿದ್ದ ರಾಮ್ಯಾ ಅಕ್ಷರಶಃ ಅನಾಥ ಭಾವ ಅನುಭವಿಸುತ್ತ ಬಸ್ಸಿಗೆ ಹತ್ತಿ ಕುಳಿತಾಗಲೇ ಅವನ ಕನಸಿನ ಕನ್ಯೆ ರೂಪಾಬಾಯಿ ಹೀಗೆ ಎದುರಿಗೆ ಸಿಕ್ಕಿಬಿಟ್ಟಿದ್ದಳು.

ತುಂಬಿದ ಬಸ್ಸಿನಲ್ಲಿ ಇಬ್ಬರ ನಡುವೆ ಆವರಿಸಿದ್ದ ಮೌನ ಸಣ್ಣದೊಂದು ನಗೆಯೊಂದಿಗೆ ಹಳೆಯ ನೆನಪುಗಳನ್ನು ಕೆದುಕತೊಡಗಿದ್ದಾಗಲೇ ಅವರವರ ಸ್ಟಾಪುಗಳಿಗೆ ಇಳಿಯುವ ಅನಿವಾರ್ಯತೆಯ ನಡುವೆ ಅವಳ ಕಣ್ಣ ಕೆಳಗೆ ಮೈಯ್ಯಲ್ಲಿ ಒಣಗಿ ಹೋದ ರಕ್ತದ ಗುರುತಾಗಿ ಮೂಡಿದ್ದ ಕಪ್ಪು ಕಲೆಗಳು ಮತ್ತು ಈಗಷ್ಟೇ ಇವನ ಹುಬ್ಬಿನ ಮೇಲೆ ಮೂಡತೊಡಗಿದ್ದ ನೀರಿಗೆಗಳು ಹಾಗೂ ಅರೆ ಬರೆ ಬಿಳಿ ಬಣ್ಣಕ್ಕೆ ತಿರುಗಿದ್ದ ಇಬ್ಬರ ತಲೆಯ ಕೂದಲುಗಳು ಆಗಾಗ ಕಿಟಕಿಯಿಂದ ಬೀಸಿ ಬರುವ ಬಿಸಿ ಗಾಳಿಯ ನಡುವೆಯೇ ತೇಲಿ ಬರುತ್ತಿದ್ದ ಯಾರದೋ ಮುಡಿಯಲ್ಲಿ ಆಗಷ್ಟೇ ಮುಡಿದರೂ ಹೆಚ್ಚಿದ ಬಿಸಿಲಿನ ಝಳಕ್ಕೆ ಬಾಡತೊಡಗಿದ್ದ ಮಲ್ಲಿಗೆಯ ಪರಿಮಳದೊಂದಿಗೆ ಮಾತನಾಡಿಕೊಳ್ಳತೊಡಗಿದ್ದವು…

ಹೀಗೆಯೇ ಮಷೀನುಗಳು ಹೋಗದ ಜಾಗದಲ್ಲಿ ಇಳಿದು ಗಾರೆ ಕೆಲಸ ಮಾಡುವ ಮತ್ಯಾರದೋ ಬಟ್ಟೆಗಳನ್ನು ಲಾಂಡ್ರಿಯಿಂದ ಮನೆಗೆ ತಂದು ಕೊಡುವ,ಬಹುಮಹಡಿಗಳಲ್ಲಿ ಕೆಟ್ಟು ನಿಂತ ಲಿಪ್ಟ ಬಗ್ಗೆ ಯಾವ ಬೇಸರವೂ ಇಲ್ಲದೆ ಎರಡುಮೂರು ಪ್ಲೋರ್ ಸ್ಟೆಪ್ ಏರಿಕೊಂಡು ಬಂದು ಊಟ ಪಾರ್ಸಲ್ಲು ಕೊಡುವ ಮತ್ತು ಯಾರದೊ ಮನೆಯ ಗಾರ್ಡನ್ನಿನ ಗಿಡಗಳಿಗೆ ನೀರು ಹುಯ್ಯುವ,ಅಷ್ಟೇ ಯಾಕೆ ಅಪಾರ್ಟ್ಮೆಂಟ್ ನಿಂದ ಹೊರಡುವ ಪ್ರತಿ ಕಾರಿಗೂ ಗೇಟು ತೆರೆದು ಸೆಲ್ಯೂಟು ಕುಟ್ಟುವ ಸೆಕ್ಯೂರಿಟಿ ಗಳತನಕ ಎಲ್ಲರೂ ಅಭದ್ರ ಬದುಕನ್ನು ಭದ್ರ ಗೊಳಿಸುವದಕ್ಕೆ ಅಂತಲೇ ಬೆಂಗಳೂರು ಎಂಬ ಸಿಲಿಕಾನ್ ಸಿಟಿಗೆ ಬಂದವರಾಗಿರುತ್ತಾರೆ

ಛಿದ್ರಗೊಂಡ ಕನಸುಗಳು ಕೆಲವರ ನಿದ್ದೆ ಕದ್ದರೆ ರಾತ್ರಿ ಇಡೀ ಮೋಜು ಮಸ್ತಿ ಮಾಡಲು ಬರುವ ಸಿರಿವಂತರ ಮಕ್ಕಳಿಗೆ ಸಿಗರೇಟು,ಸರಾಯಿ ಸಪ್ಲೈ ಮಾಡುತ್ತ,ಟೇಬಲ್ ಒರೆಸುತ್ತ,ತೂರಾಡುತ್ತ ಇರುವವರನ್ನು ಅನಾಮತ್ತು ಹೊತ್ತು ತಂದು ಅವರ ಕಾರಿಗೆ ತುರುಕುವ,ಅದೆಷ್ಟೋ ಜನರ ನಿದ್ದೆ ಕೆಡುವದು ನೋಡಿದಾಗೆಲ್ಲ ಯಾವುದೋ ಮಾಯೆಯಲ್ಲಿ ನಿದ್ದೆ ಆವರಿಸಿ ಕಡೂರಿಗೆ ಇಳಿಯಬೇಕಿದ್ದ ಬಡವನೊಬ್ಬ ಬಂಧುಗಳು ಕೊಟ್ಟ ರೆಷನ್ ಅಕ್ಕಿಯ ಮೂಟೆಯೊಂದನ್ನ ಹೊರುವದಕ್ಕೂ ಚೈತನ್ಯವಿಲ್ಲದೆ ಗಡಿಬಿಡಿಯಲ್ಲೇ ಎಳೆದುಕೊಂಡು ಬೀರೂರಿಗೆ ಇಳಿಯಬೇಕಾಗಿ ಬಂದದ್ದು ನೋಡಿ ಇಂತಹದೇ ಅಸಹಾಯಕತೆಗಳನ್ನ ಒಂದು ಕಾಲದಲ್ಲಿ ಅನುಭವಿಸಿದ ನನಗೆ ಹಳೆಯದೆಲ್ಲ ನೆನಪಾಗಿ ಕಣ್ಣುಗಳು ತಾನಾಗೇ ಹನಿಗೂಡಿ ಅಯ್ಯೋ ಪಾಪ ಅನ್ನಿಸುತ್ತದೆ.

ಕೇವಲ ವಿಫಲಗೊಂಡ ಪ್ರೇಮ ಕಥೆಯೊಂದನ್ನು ಹೇಳಿ ನಿಮ್ಮ ಮನಸ್ಸು ಕರಗಿಸುವ ಯಾವ ಇರಾದೆಯೂ ಇಲ್ಲದೇ ಊಬರ್, ಓಲಾ ಕಾರುಗಳನ್ನು ಓಡಿಸುವ,ಮತ್ತು ನೀವು ಆಟೋ ಅನ್ನುತ್ತಲೇ ತುಂಬಿದ ಟ್ರಾಫಿಕ್ಕಿನಲ್ಲಿ ನಿಮ್ಮತ್ತ ನುಗ್ಗಿ ಬಂದು ಬಾಡಿಗೆ ಜಾಗಕ್ಕೆ ಸುತ್ತು ಹೊಡೆಸದೆ ಶಾರ್ಟಕಟ್ ರೂಟಿನಲ್ಲೇ ನಿಮ್ಮ ಊರಿಗೆ ಹೊರಡಲಿರುವ ಬಸ್ಸು ಅಥವಾ ಟ್ರೈನು ಮಿಸ್ಸಾಗದಂತೆ ತಲುಪಿಸಿ ಬಿಡುವ,ರೈಲು ನಿಲ್ದಾಣದಲ್ಲಿ ನಿಮ್ಮ ಹೆಣಭಾರದ ಲಗೇಜು ಹೊತ್ತುಕೊಂಡು ಟ್ರೈನು ಇನ್ನೂ ಚಲಿಸುತ್ತ ಇರುವಾಗಲೇ ಓಡಿಕೊಂಡು ಹೋಗಿ ಹತ್ತಿ ನಿಮಗೆ ಸೀಟು ಹಿಡಿದುಕೊಡುವ ಕೂಲಿಯತನಕ,ನಸುಕಿನಲ್ಲಿ ನೀವಿನ್ನೂ ಮುಸುಕು ಹಾಕಿ ಮಲಗಿರುವಾಗಲೆ ಹಾಲು ಮತ್ತು ಪೇಪರ್ ಗಳನ್ನು ಮನೆಯ ಕಂಪೌಂಡಿನೊಳಗೆ ಎಸೆದುಹೋಗುವ ಹುಡುಗರ ತನಕ ಅವರ ಕನಸುಗಳು ನನಸಾಗುವ ಕಾಲ ಕೂಡಿ ಬರಲಿ ಅನ್ನುವ ಆಶಯದೊಂದಿಗೆ…

ಹೀಗೆ ಬದುಕು ಕಟ್ಟುವದಕ್ಕೆಂದೆ ಬೆಂಗಳೂರು, ಮಂಗಳೂರು, ಮುಂಬೈ,ಪೂನಾ,
ದೆಹಲಿ, ಆಗ್ರಾದಂತಹ ಊರುಗಳಿಗೆ ಬಂದು ದೊಡ್ಡ ಕಂಪನೀಲಿ ಕೆಲಸಾ… ಕೈ ತುಂಬಾ ಸಂಬಳ ಆದ್ರೆ ಯಾವದಕ್ಕೂ ಸಾಲೋದಿಲ್ಲ…..ನಮ್ದು ಸಿಟಿ ಜೀವನಾ ಅಲ್ವಾ?? ಹಳ್ಳಿ ಜೀವನಾನೆ ಎಷ್ಟೋ ಲೇಸು?? ವಾಪಸ್ ಊರಿಗೆ ಹೋಗೋಣಾ ಅಂದ್ರೆ ಊರು ಹೋಗು ಅನ್ನುತ್ತೆ ಕಾಡು ಬಾ ಅನ್ನುತ್ತೆ ಅದಿಕ್ಕೆ ಇಲ್ಲೆ ಉಳಕೊಂಡ್ಬುಟ್ವು… ಅಂತ ಗೊಣಗುತ್ತ ಅದು ಎಂದೋ ಬಿಟ್ಟು ಬಂದ ಊರು ಕೂಡ ಈಗ ಬದಲಾಗಿರಬಹುದು ಅನ್ನುವ ಗ್ರಹಿಕೆಯೇ ಇರದೆ ಅದೆಷ್ಟು ಕಷ್ಟಪಟ್ಟು ದುಡಿದರೂ ಹೊಟ್ಟೆಗಾದರೆ ಬಟ್ಟೆಗಿಲ್ಲ ಅನ್ನುವ ಪರಿಸ್ಥಿತಿಯಲ್ಲಿ ಹಗಲಿರುಳು ದುಡಿದರೂ ತಮಗೆ ಬರುವ ಪುಡಿಗಾಸಿನಲ್ಲೇ ಬದುಕು ಕಟ್ಟಲು ಪರದಾಡುವ ಎಷ್ಟೋ ಜೀವಗಳು ನಮ್ಮ ನಿಮ್ಮ ನಡುವೆಯೇ ಇರುವದರಿಂದ…

ಯಾರದೋ ಹರಿದ ಚಪ್ಪಲಿಗೆ ಕಟ್ಟಿದ ದಾರ,ಅಥವಾ ತೇಪೆ ಹಚ್ಚಿದ ಬಟ್ಟೆ ನೋಡಿಯೋ,ಅವರೂ ಟಿಪ್ ಟಾಪ್ ಯಾಂಡ್ ಟ್ರಿಮ್ ಆಗಿ ಇಲ್ಲ ಅವರ ಬಟ್ಟೆಗಳೆಲ್ಲ ಗಲೀಜು ಅನ್ನುವ ಕಾರಣಕ್ಕೆ ಮೆಟ್ರೋ ಒಳಗೆ ಬಿಟ್ಟುಕೊಳ್ಳದ ಮನಸ್ಥಿತಿ ನಮ್ಮ ನಿಮ್ಮದಾಗದಿರಲಿ.

ಅಪರೂಪಕ್ಕೆ ಮನೆಯ ಕಾರು ಕೆಟ್ಟು ಹೋಗಿದ್ದಕ್ಕೋ,ಕಂಪನಿಯ ಡ್ರೈವರ್ ಕೆಲಸ ಬಿಟ್ಟಿದ್ದಕ್ಕೋ ಬಿ ಎಮ್ ಟಿ ಸಿ ಬಸ್ಸು ಹತ್ತಿಕೊಂಡು ಐನೂರರ ಐದು ನೋಟು ಕೊಟ್ಟಿದ್ದಾರೆ ಅಂತ ಮತ ಚಲಾಯಿಸಲು ಹೊರಟು ನಿಂತು ನೂರಿನ್ನೂರರ ಪರ್ಪ್ಯೂಮು ಪೂಸಿಕೊಂಡು ತಮ್ಮ ಬೆವರಿನ ವಾಸನೆ ಮುಚ್ಚುವ ಪ್ರಯತ್ನ ಮಾಡುತ್ತಿರುವವರು, ಮತ್ತೊಬ್ಬರ ಬೆವರ ಘಮವನ್ನು ಅಯ್ಯೋ ದರಿದ್ರದವು ಬಸ್ಸೆಲ್ಲ ತುಂಬಿಕೊಂಡಿವೆ ವ್ಯಾಕ್ ಎನ್ ಹೊಲಸು ಕಮಟು ವಾಸನೆ ಅಂತ ಹಳಿಯುತ್ತ ಪೆಸ್ ಬುಕ್ ಅಥವಾ ವಾಟ್ಸಪ್ಪಿಗೆ ತೇಲಿ ಬಿಟ್ಟು ತಿರುಪೇ ಶೋಕಿ ಮಾಡುವವರು ಇದನ್ನು ಓದಿದ ಬಳಿಕವಾದರೂ ಸ್ವಲ್ಪ ವಾದರೂ ಎಚ್ಚೆತ್ತುಕೊಳ್ಳಲಿ.

ದಿನವೊಂದಕ್ಕೆ ದುಡಿದು ತರುವ ನೂರೈವತ್ತು ಇನ್ನೂರು ರೂಪಾಯಿಯಲ್ಲೇ ಬಸ್ ಟಿಕೇಟಿಗೆ ಅಂತ ನಲವತ್ತು ರೂಪಾಯಿ ಖರ್ಚು ಮಾಡುತ್ತಿದ್ದ ಹೆಣ್ಣುಮಕ್ಕಳು ಈಗ ಆಧಾರ ಕಾರ್ಡ ತೋರಿಸಿ ಉಚಿತ ಪ್ರಯಾಣ ಮಾಡಿ ಉಳಿತಾಯವಾದ ನಲವತ್ತು ರೂಪಾಯಿ ಗಳನ್ನೇ ಸೇರಿಸುತ್ತ ಹೋಗಿ ಅಪರೂಪಕ್ಕೆ ಮುನ್ನೂರು ಐನೂರರ ಸೀರೆ ಉಟ್ಟು ಜನ್ಮದಲ್ಲೇ ನೋಡಿರದ ಯಾವದೋ ಒಂದು ದೇವರ ದರ್ಶನಕ್ಕೆ ಧರ್ಮಸ್ಥಳ,ಉಡುಪಿ,ಸುಬ್ರಹ್ಮಣ್ಯ, ಸಿಗಂಧೂರು,ಅಂತೆಲ್ಲ ಧನ್ಯತಾ ಭಾವದಿಂದ ಹೊರಟು ನಿಂತಾಗ ಥೂ ಪುಕ್ಸಟ್ಟೆ ಅಲ್ಲವಾ ಅಂತ ಸೀಟಿಗಾಗಿ ಜಗಳ ಕಾಯುತ್ತ ಅವರದ್ದು ಬಿಟ್ಟಿಭಾಗ್ಯ ಅಂತ ಹಳಿಯುವ ಮನಸ್ಸು ನಮ್ಮದಾಗದಿರಲಿ.

ಅಂದಹಾಗೆ ಚುನಾವಣೆಯ ನೆಪದಲ್ಲಿ ಅವರು ಆ ಪಕ್ಷ ಇವರು ಈ ಪಕ್ಷ ಅವನು ಸಾಬಿ ಇವನು ಜನಿವಾರ ಅಂತೆಲ್ಲ ಪರಸ್ಪರ ಕೆಸರು ಎರಚಿಕೊಳ್ಳದೇ ಎದುರಾದಾಗ ನಕ್ಕು ಪರಿಚಯದ ಮಾತಾಗುವ ಮತದಾನದ ಹಕ್ಕನ್ನು ಚಲಾಯಿಸಿ ನಮಗೆ ಉತ್ತಮ ಅನ್ನಿಸಿದ ಅಭ್ಯರ್ಥಿಯ ಆಯ್ಕೆಯನ್ನು ಗೌಪ್ಯವಾಗಿ ಮತಚಲಾಯಿಸ ನೀಲಿ ಶಾಯಿಯ ಬೆರಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿದವರನ್ನೆಲ್ಲ ನಿಜ ಹೇಳಿ ಯಾರಿಗೆ ವೋಟ್ ಹಾಕಿದ್ರಿ ಅಂತ ಕೇಳಿ ಗೋಳು ಹುಯ್ಯುವ ಮತ್ತು ಈ ಸಲ ಚೊಂಬು ಅಂತ ಕುಹಕವಾಡುವ ಮನಸ್ಥಿತಿ ನಮ್ಮ ನಿಮ್ಮದಾಗಿರಲಿ ಏನಂತೀರಿ??

ದೀಪಕ ಶಿಂಧೆ, ಅಥಣಿ, 9482766108

 

 

- Advertisement -
- Advertisement -

Latest News

ಕವಿ ಸಿದ್ಧಲಿಂಗಯ್ಯಾ ಹಿರೇಮಠ ಅವರಿಗೆ ಸನ್ಮಾನ

ಗೋಕಾಕ - ಬಸವ ಸಮಿತಿ 2024 ನೇ ಸಾಲಿನ ವಿಶ್ವಬಸವ ಜಯಂತಿ ಪ್ರಯುಕ್ತ ಆಯೋಜಿಸಿದ್ದ ರಾಜ್ಯ ಮಟ್ಟದ ಕವನ ಸ್ಪರ್ದೆಯಲ್ಲಿ ಭಾಗವಹಿಸಿದ ಬೆಳಗಾವಿ ಜಿಲ್ಲೆಯ ಗೋಕಾಕ...
- Advertisement -

More Articles Like This

- Advertisement -
close
error: Content is protected !!
Join WhatsApp Group