spot_img
spot_img

ತೋಂಟದ ಸಿದ್ಧಲಿಂಗ ಶ್ರೀಗಳ ವ್ಯಕ್ತಿತ್ವ ದರ್ಶನದ ಅಮೂಲ್ಯ ಕೃತಿ

Must Read

- Advertisement -

ಹಗಲಿನಲ್ಲಿಯೆ ಸಂಜೆಯಾಯಿತು (ಡಾ. ತೋಂಟದ ಸಿದ್ಧಲಿಂಗ ಸ್ವಾಮಿಗಳವರ ಸ್ಮರಣೀಯ ಘಟನೆಗಳು)

ಲೇಖಕರು : ಪ್ರೊ. ಸಿದ್ದು ಯಾಪಲಪರ್ವಿ
ಪ್ರಕಾಶಕರು : ಸಾಂಗತ್ಯ ಪ್ರಕಾಶನ, ಕಾರಟಗಿ, ೨೦೨೪
ಪುಟ : ೨೧೬ ಬೆಲೆ: ರೂ.೨೦೦
(ಲೇಖಕರ ಸಂಪರ್ಕ ನಂ: ೯೪೪೮೩೫೮೦೪೦)
———————————————————-
[ಹಗಲಿನಲ್ಲಿಯೆ ಸಂಜೆಯಾಯಿತು ಕೃತಿ ನಾಲ್ಕು ಮುದ್ರಣಗಳನ್ನು ಕಂಡಿದ್ದು ನಿಜಕ್ಕೂ ಹೆಮ್ಮೆ ಮತ್ತು ಅಭಿಮಾನವೆನಿಸುತ್ತದೆ. ಯಾವುದೇ ಲೇಖಕನ ಒಂದು ಕೃತಿಯ ಒಂದು ಸಾವಿರ ಪ್ರತಿ ಮಾರಾಟವಾಗುವುದು ತುಂಬ ಕಷ್ಟದ ಕೆಲಸ. ಇಂತಹ ಸಂದರ್ಭದಲ್ಲಿ ಸಿದ್ದು ಅವರ ಪ್ರಸ್ತುತ ಕೃತಿ ನಾಲ್ಕು ಮುದ್ರಣಗಳನ್ನು ಕಂಡಿದೆ. ಇತ್ತೀಚೆಗೆ ದಿನಾಂಕ ೨-೬-೨೦೨೪ರಂದು ಗದುಗಿನಲ್ಲಿ ಈ ಕೃತಿ ಲೋಕಾರ್ಪಣೆಯಾಯಿತು.]

ಪ್ರೊ. ಸಿದ್ದು ಯಾಪಲಪರ್ವಿ ಅವರು ಮೂಲತಃ ಇಂಗ್ಲಿಷ್ ಪ್ರಾಧ್ಯಾಪಕರು. ಅತ್ಯುತ್ತಮ ಭಾಷಣಕಾರರು. ವ್ಯಕ್ತಿತ್ವ ವಿಕಸನ ಕುರಿತು ಅವರು ನೀಡಿದ ಭಾಷಣಗಳು ನಾಡವರ ಗಮನ ಸೆಳೆದಿವೆ. ಭಾಷಣ ಮಾಡುವವರಿಗೆ ಬರೆಯಲು ಬರುವುದಿಲ್ಲ, ಬರೆಯುವವರಿಗೆ ಭಾಷಣ ಮಾಡಲು ಬರುವುದಿಲ್ಲ ಎಂಬುದು ಸಾಮಾನ್ಯ ಅಭಿಪ್ರಾಯ. ಆದರೆ ಪ್ರೊ. ಸಿದ್ದು ಯಾಪಲಪರ್ವಿ ಅವರು ಶ್ರೇಷ್ಠ ಭಾಷಣಕಾರರು ಆದಂತೆ, ಅತ್ಯುತ್ತಮ ಬರಹಗಾರರು ಆಗಿದ್ದಾರೆ. ಕವಿ ಹೃದಯದ ನೇರ ನಿಷ್ಠುರ ನುಡಿಯ ಸಿದ್ದು ಅವರು ಈಗಾಗಲೇ ತಮ್ಮ ‘ಅಸಂಗತ ಬರಹಗಳು’ ಎಂಬ ಕೃತಿಯ ಮೂಲಕ ಜನಮನ್ನಣೆ ಪಡೆದಿದ್ದಾರೆ. ಈಗ ‘ಹಗಲಿನಲ್ಲಿಯ ಸಂಜೆಯಾಯಿತು’ ಎಂಬ ಮತ್ತೊಂದು ಮಹತ್ವದ ಕೃತಿಯನ್ನು ಸಾರಸ್ವತ ಪ್ರಪಂಚಕ್ಕೆ ನೀಡಿದ್ದಾರೆ.

ಗದುಗಿನ ಜಗದ್ಗುರು ಡಾ. ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳು ಆಧುನಿಕ ಕರ್ನಾಟಕದ ನಿರ್ಮಾಪಕರಲ್ಲಿ ಒಬ್ಬರು. ತಮ್ಮ ಭಾಷಣ-ಹೋರಾಟಗಳ ಮೂಲಕ ಕನ್ನಡ ನಾಡು ನುಡಿಗೆ ಅನನ್ಯವಾದ ಕಾಣಿಕೆಯನ್ನು ನೀಡಿದವರು. ಶ್ರೀಗಳ ಬದುಕನ್ನು ಅತ್ಯಂತ ಹತ್ತರದಿಂದ ಕಂಡ ಸಿದ್ದು ಯಾಪಲಪರ್ವಿ ಅವರು ಅವರೊಂದಿಗೆ ತಮ್ಮ ನಾಲ್ಕು ದಶಕದ ಒಡನಾಟದ ಕ್ಷಣಗಳನ್ನು ನೆನಪಿಸಿಕೊಳ್ಳುವ ಮೂಲಕ ಶ್ರೀಗಳ ಘನವ್ಯಕ್ತಿತ್ವದ ದರ್ಶನ ಮಾಡಿಸಿದ್ದಾರೆ.

- Advertisement -

ಕರೋನಾ ಕಾಲದ ಸಂಕಷ್ಟದಲ್ಲಿ ಮನುಷ್ಯ ಗೃಹಬಂಧಿಯಾಗಿದ್ದ. ಯಾವುದೇ ಚಟುವಟಿಕೆಗಳು ಇಲ್ಲದ ಕಾರಣವಾಗಿ ಒಂದು ರೀತಿಯ ಅಯೋಮಯ ಸ್ಥಿತಿ ನಿರ್ಮಾಣವಾಗಿತ್ತು. ಇಂಥ ಕಾಲದಲ್ಲಿ ಸಿದ್ದು ಯಾಪಲಪರ್ವಿ ಅವರು ಶ್ರೀಗಳ ಕುರಿತು ಕೃತಿ ರಚನೆ ಮಾಡಿರುವುದು ಅವರ ಕ್ರಿಯಾಶೀಲ ವ್ಯಕ್ತಿತ್ವಕ್ಕೆ ಸಾಕ್ಷಿಯೆನಿಸಿದೆ.

ಒಂದು ತಿಂಗಳ ಅವಧಿಯಲ್ಲಿ ಹಗಲು ರಾತ್ರಿ ಗದುಗಿನ ಶ್ರೀಗಳ ಕುರಿತು ಚಿಂತನೆ ಮಾಡಿ, ಈ ಕೃತಿರತ್ನವನ್ನು ರಚಿಸಿದ್ದಾರೆ. ಲೇಖಕರ ಮಾತಿನಲ್ಲಿ ಅವರೇ ಹೇಳುವಂತೆ, “ಹಳೆಯ ನೆನಪುಗಳನ್ನು ಧೇನಿಸಿ ಹೆಕ್ಕಿ ತೆಗೆದು, ಸರಿಸುಮಾರು ಒಂದು ತಿಂಗಳು ಹಗಲು ರಾತ್ರಿ ಅದೇ ಗುಂಗಿನಲ್ಲಿ ಅಲೆದಾಡಿದ್ದೇನೆ. ಹಾಗಂತ ಇದು ಜೀವನ ಚರಿತ್ರೆ ಅಲ್ಲ, ನನ್ನ ವೈಯಕ್ತಿಕ ಅನುಭವಗಳಿಗೆ ಸಾರ್ವತ್ರಿಕ ಸ್ವರೂಪ ನೀಡಿದ್ದೇನೆ. ‘I have impersonalized my personal feelings and experiences.’ಇದು ತನ್ನದೇ ಆದ ಹೊಸ ಪ್ರಕಾರ, ಪೂಜ್ಯರೊಂದಿಗೆ ಒಡನಾಟ ಮತ್ತು ಅವರ ಮೂಲಕ ಕೇಳಿದ ಸಂಗತಿಗಳನ್ನು ಮಾತ್ರ ಬರೆದಿದ್ದೇನೆ. “ ಹೌದು, ಇದು ನಿಜವಾಗಿಯೂ ಒಂದು ಹೊಸ ಪ್ರಕಾರ. ಈ ಹಿಂದೆ ಪೂರ್ಣಚಂದ್ರ ತೇಜಸ್ವಿ ಅವರು ತಮ್ಮ ತಂದೆ ಕುವೆಂಪು ಅವರನ್ನು ಕುರಿತು ‘ಅಣ್ಣನ ನೆನಪು’ ಎಂಬ ಕೃತಿಯನ್ನು ರಚಿಸಿದ್ದರು. ಇದೇ ಮಾದರಿಯ ಕೃತಿಯಾಗಿ ‘ಹಗಲಿನಲ್ಲಿಯ ಸಂಜೆಯಾಯಿತು’ ರಚನೆಗೊಂಡಿದೆ.

೨೫ ಅಧ್ಯಾಯಗಳಲ್ಲಿ ರೂಪಗೊಂಡ ಪ್ರಸ್ತುತ ಕೃತಿ ಗದುಗಿನ ಶ್ರೀಗಳ ಸೇವಾಕಾರ್ಯಗಳ ಪರಿಚಯದ ಜೊತೆಗೆ, ಲೇಖಕರ ಆತ್ಮಕತೆಯೂ ಆಗಿ ರೂಪುಗೊಂಡಿದೆ. ಅದಕ್ಕಾಗಿ ಅವರು ಬೇರೆ ಆಕರಗಳನ್ನು ಬಳಸಿಕೊಳ್ಳದೆ, ತಮ್ಮ ಇಷ್ಟು ವರ್ಷದ ಒಡನಾಟದ ನೆನಪುಗಳನ್ನು ಇಲ್ಲಿ ದಾಖಲಿಸಿದ್ದಾರೆ. “ಅಜ್ಜಾ ಅವರ ಕುರಿತು ಬರೆಯಲು ನನಗೆ ಯಾವ ಆಧಾರಗಳು, ಆಕರಗಳು ಬೇಕಿಲ್ಲ. ನಿರಂತರ ನಾಲ್ಕು ದಶಕಗಳ ಒಡನಾಟ, ನೂರಾರು ತಾಸುಗಳ ಚರ್ಚೆ ಮನದಲ್ಲಿ ದಾಖಲಾಗಿದೆ. ಮಠದ ಭಕ್ತರಾಗಿ ನಮ್ಮ ತಂದೆ ಮತ್ತು ಇಡೀ ಕುಟುಂಬದ ಎಲ್ಲರೂ ಅವರ ಆಶೀರ್ವಾದ ಪಡೆದು, ಪ್ರೀತಿ ಅನುಭವಿಸಿ ಕೃತಾರ್ಥರಾಗಿದ್ದೇವೆ. ವೈಯಕ್ತಿಕವಾಗಿ ನಾನು ಅವರ ಕೈ ತುತ್ತು ತಿಂದು ಬೆಳೆದಿದ್ದೇನೆ. ಅತಿ ಹೆಚ್ಚು ಸಮಯ ಆರಾಧಿಸಿದ್ದೇನೆ.” ಎಂಬ ಅವರ ನುಡಿಗಳು ಅಕ್ಷರಶಃ ನಿಜವಾಗಿವೆ. ತಾವು ಕಂಡು-ಕೇಳಿದ, ಶ್ರೀಗಳೊಂದಿಗೆ ಸಂವಾದಿಸಿದ ಘಟನೆಗಳನ್ನು ಮಾತ್ರ ಇಲ್ಲಿ ಪ್ರಸ್ತಾಪಿಸಿದ್ದಾರೆ. ತಮಗೆ ಗೊತ್ತಿಲ್ಲದ ಸಂಗತಿಗಳ ಬಗ್ಗೆ ಅವರು ಪ್ರಸ್ತಾಪಿಸಲು ಹೋಗಿಲ್ಲ.

- Advertisement -

‘ಮೊದಲ ದರ್ಶನದ ಪುಳಕ’, ತೋಂಟದಾರ್ಯ ಮಠದ ಜಾತ್ರೆ, ಪಾದಯಾತ್ರೆಯ ಫಲಶ್ರುತಿ, ಕವಿ-ಸಾಹಿತಿ-ಸಂತ, ಸಾವಿರದ ಶಿವಾನುಭವಗಳು, ಬದಲಾವಣೆಯ ಪರ್ವ, ಅಧ್ಯಯನ ಸಂಸ್ಥೆಯ ಅಭ್ಯುದಯ, ಮಠದ ಬೌದ್ಧಿಕ ಚೇತನ ಡಾ. ಕಲಬುರ್ಗಿ, ಕನ್ನಡ ಕಾನ್ವೆಂಟ್ ಶಾಲೆಗಳು, ಜನಪರ ಹೋರಾಟಗಳು, ಭಕ್ತರೇ ಮಠದ ಸಂಪತ್ತು, ನನಸಾಗಲಿ, ಕನಸುಗಳು, ಧರ್ಮ ರಾಜಕಾರಣ, ಕಾರೇ ಇಲ್ಲದ ಜಗದ್ಗುರುಗಳು, ಅಸಾಮಾನ್ಯ ಕಕ್ಕುಲತೆ, ಮಠಗಳ ರಕ್ಷಣೆ, ಕಾರಟಗಿಯ ಕಾಮಧೇನು, ವಾತ್ಸಲ್ಯದ ಕಡಲು, ಸಮಕಾಲೀನ ಮಠಾಧೀಶರು, ವಿವಾದಗಳ ವಿಷಾದ, ಅನಂತ ಅನುಸಂಧಾನ, ಸರ್ವಧರ್ಮ ಸಮನ್ವಯತೆ, ಸಂಡೂರು ದೊರೆಗಳು ಮತ್ತು ಪೂಜ್ಯರು, ವಿದೇಶ ಪಯಣದ ನೆಮ್ಮದಿ, ಹಗಲಿನಲ್ಲಿಯ ಸಂಜೆಯಾಯಿತು ಇವಿಷ್ಟು ಈ ಕೃತಿಯಲ್ಲಿ ಅಧ್ಯಾಯಗಳು.

೨೦೨೦ ಮೇ ೨೦ರಂದು ಸಿದ್ದು ಯಾಪಲಪರ್ವಿ ಅವರು ಈ ಕೃತಿಯ ಮೊದಲ ಅಧ್ಯಾಯವನ್ನು ನನಗೆ ಓದಲು ಕಳಿಸಿದ್ದರು. ಪ್ರತಿನಿತ್ಯ ಒಂದೊಂದು ಅಧ್ಯಾಯವನ್ನು ಬರೆಯುತ್ತ ಹೋದರು. ಪ್ರಾರಂಭದ ನಾಲ್ಕು ಅಧ್ಯಾಯಗಳನ್ನು ಓದಿ ನಾನು ರೋಮಾಂಚನಗೊಂಡೆ. ಶ್ರೀಗಳ ಕುರಿತು ಈವರೆಗೆ ಸುಮಾರು ೩೦ಕ್ಕೂ ಹೆಚ್ಚು ಕೃತಿಗಳು ರಚನೆಗೊಂಡಿವೆ. ಸಮಕಾಲೀನ ಸಂದರ್ಭದಲ್ಲಿ ಒಬ್ಬ ವ್ಯಕ್ತಿಯ ಕುರಿತು ಇಷ್ಟು ಸಂಖ್ಯೆಯ ಕೃತಿಗಳು ಪ್ರಕಟಗೊಂಡಿರುವುದು ವಿರಳ. ಮೂವತ್ತು ಜನ ಲೇಖಕರು ತಮ್ಮ ದೃಷ್ಟಿಗೋಚರವಾದ ಶ್ರೀಗಳ ಘನ ವ್ಯಕ್ತಿತ್ವವನ್ನು ತಮ್ಮದೇ ಆದ ರೀತಿಯಲ್ಲಿ ಅಭಿವ್ಯಕ್ತಿಸುವ ಪ್ರಯತ್ನ ಮಾಡಿದ್ದಾರೆ. ಒಬ್ಬೊಬ್ಬ ಲೇಖಕರದು ಒಂದೊಂದು ಅನುಭವ. ಶ್ರೀಗಳ ವ್ಯಕ್ತಿತ್ವವೆಂದರೆ ಅದೊಂದು ಮಹಾಸಾಗರ ಇದ್ದಂತೆ, ಈ ಸಾಗರವನ್ನು ವರ್ಣಿಸುವುದು, ವಿಶ್ಲೇಷಿಸುವುದು ಕಷ್ಟಸಾಧ್ಯ. ಈ ಹಿನ್ನೆಲೆಯಲ್ಲಿ ಹಿಂದಿನ ಎಲ್ಲ ಲೇಖಕರ ಅನುಭವಗಳಿಗಿಂತ ಭಿನ್ನವಾದ ಅನುಭವಗಳನ್ನು ಸಿದ್ದು ಯಾಪಲಪರ್ವಿ ಅವರು ಇಲ್ಲಿ ದಾಖಲಿಸಿದ್ದಾರೆ.

ಮೊದಲ ದರ್ಶನದ ಪುಳಕ ಎಂಬ ಮೊದಲ ಅಧ್ಯಾಯದಲ್ಲಿ ಶ್ರೀಗಳನ್ನು ಮೊದಲ ಬಾರಿಗೆ ಕಂಡದ್ದು, ತಮ್ಮ ತಂದೆಯವರ ಜೊತೆಗೆ ಅವರು ಹೊಂದಿದ ಆತ್ಮೀಯತೆ ಸಂಬAಧಗಳನ್ನು ಅರ್ಥಪೂರ್ಣವಾಗಿ ಚಿತ್ರಿಸಿದ್ದಾರೆ. ಆಗರ್ಭ ಶ್ರೀಮಂತ ಮನೆತನದಲ್ಲಿ ಹಟ್ಟಿದ ಸಿದ್ದು ಅವರಿಗೆ ತಿಳುವಳಿಕೆ ಬರುವ ಹೊತ್ತಿಗೆ, ಶ್ರೀಮಂತಿಕೆಯೆಲ್ಲ ಹೋಗಿ ಭಯಂಕರ ಬಡತನ ಆವರಿಸಿಕೊಂಡದ್ದು, ಇಂಥ ಬಡತನದಲ್ಲಿ ಏನನ್ನಾದರೂ ಸಾಧಿಸಬೇಕೆಂಬ ಹಂಬಲದಿಂದ ಶ್ರೀಗಳನ್ನು ಭೇಟಿಯಾದದ್ದು ಮೊದಲಾದ ಘಟನೆಗಳು ತುಂಬ ಹೃದಯಸ್ಪರ್ಶಿಯಾಗಿ ಮೂಡಿಬಂದಿವೆ. ಬಾಲ್ಯದಲ್ಲಿಯೇ ಲೇಖಕರು ಕೇಳುವ ಪ್ರಶ್ನೆಗಳಿಗೆಲ್ಲ ಶ್ರೀಗಳು ಸಹನೆಯಿಂದ ಸಮಾಧಾನದಿಂದ ಉತ್ತರ ನೀಡಿ, ಅವರ ಮನದಲ್ಲಿ ಮೂಡಿದ ಸಂಶಯಗಳಿಗೆಲ್ಲ ಪರಿಹಾರ ಹೇಳುತ್ತಿದ್ದ ಘಟನೆಗಳು ರಸಾರ್ದ್ರವಾಗಿ ಮೂಡಿವೆ.

ಬಂಡಾಯ ಮನೋಧರ್ಮದ ಸಿದ್ದು ಅವರು ಶ್ರೀಗಳನ್ನು ಕೇವಲ ವೈಭವೀಕರಣ ಮಾಡಲು ಹೋಗಿಲ್ಲ, ಶ್ರೀಗಳ ಸುತ್ತ ಮುತ್ತ ಇರುವ ಜನರಿಂದ ಅನುಭವಿಸಿದ ಯಾತನೆ, ಆತಂಕಗಳನ್ನು, ಶ್ರೀಗಳ ಕೆಲವು ನಿಲುವುಗಳನ್ನು ಪ್ರಶ್ನಿಸಿದ್ದಾರೆ. ಜನಪರ ಹೋರಾಟಗಳು ಎಂಬ ಅಧ್ಯಾಯದಲ್ಲಿ- ಗೋಕಾಕ ಚಳುವಳಿ, ಫೋಸ್ಕೋ ಚಳುವಳಿ, ಕಪ್ಪತ್ತಗುಡ್ಡ ರಕ್ಷಣಾ ಚಳುವಳಿ ಮೂರು ಚಳುವಳಲ್ಲಿಗಳಲ್ಲಿ ಶ್ರೀಗಳು ಹೋರಾಟದ ಧ್ವನಿಯನ್ನು ಸಶಕ್ತವಾಗಿ ಮೂಡಿಸಿದ್ದಾರೆ. “ಶ್ರೀಗಳ ಈ ಹೋರಾಟದ ಕಿಚ್ಚು ಆಡಳಿತ ಮಾಡುವುದರಲ್ಲಿ ಇರಲಿಲ್ಲ” ಎಂಬ ಸಂಗತಿಯನ್ನೂ ಸೂಚ್ಯವಾಗಿ ಪ್ರತಿಪಾದಿಸಿದ್ದಾರೆ.

ವ್ಯಕ್ತಿ ಸಾಧನೆಯ ಹಂತವನ್ನು ಮೀರಿ ಬೆಳೆಯುತ್ತ ಹೋದಂತೆ, ದೊಡ್ಡವರಾಗುತ್ತಾ ಸಾಗುತ್ತಾರೆ. ಇಂಥ ದೊಡ್ಡವರ ಬದುಕು ಸ್ವಾತಂತ್ರ್ಯವಿಲ್ಲದೆ, ಪರಾವಲಂಬಿಯಾಗಿ ಅನೇಕ ಘಟನೆಗಳಿಗೆ ಸಾಕ್ಷಿಯಾಗುತ್ತದೆ. ಅದಕ್ಕಾಗಿ ಲೇಖಕರು “ಪ್ರತಿಯೊಬ್ಬ ಇತಿಹಾಸ ಪುರುಷರು ಕೊನೆಗೆ ಏಕಾಂಗಿಗಳಾಗಿ ಬಿಡುತ್ತಾರೆ ಎಂದು ಕೇಳಿದ್ದೆ. ದೊಡ್ಡ ದೊಡ್ಡ ಸೆಲೆಬ್ರಿಟಿಗಳು ವೈಯಕ್ತಿಕ ಬದುಕಿನ ಸ್ವಾತಂತ್ರ್ಯ ಕಳೆದುಕೊಂಡು ಪರಾವಲಂಬಿಗಳಾಗುತ್ತಾರೆ ಎಂಬ ವಾದಕ್ಕೆ ಯಾರೂ ಹೊರತಲ್ಲ. ಅದನ್ನು ಮೀರಿ ಬದುಕಲು ಬಹಳಷ್ಟು ಸಮಯಾವಕಾಶ ಬೇಕು. ಆ ಅವಕಾಶ ಪಡೆಯುವ ಮೊದಲೇ ಪೂಜ್ಯರು ತುಂಬಾ ಅನಿರೀಕ್ಷಿತವಾಗಿ ಹೋಗಿ ಬಿಟ್ಟರು.” ಎಂದು ಹೇಳುವ ಮಾತುಗಳು ತುಂಬ ಗಂಭೀರವಾಗಿ ಆಲೋಚನೆ ಮಾಡುವಂತವುಗಳಾಗಿವೆ.

ಮಠದ ಭಕ್ತರೇ ಸಂಪತ್ತು- ಎಂಬ ಅಧ್ಯಾಯ ವಿಶೇಷವಾಗಿದೆ. ಶ್ರೀಗಳ ಸಾಧನೆಯ ಬೆನ್ನ ಹಿಂದಿನ ಶಕ್ತಿಯಾಗಿದ್ದ ವಿಶ್ವನಾಥ ಬುಳ್ಳಾ ಅವರ ಕುರಿತು ಲೇಖಕರು ಹೇಳಿದ ವಿಚಾರ ಹೊರಗಿನ ಜನಕ್ಕೆ ಗೊತ್ತಿಲ್ಲ. ವಿಶ್ವನಾಥ ಬುಳ್ಳಾ ಅವರ ನಿಸ್ವಾರ್ಥ, ನಿರಪೇಕ್ಷ ಭಾವದ ಸೇವೆ ಕಾರಣವಾಗಿ ತೋಂಟದಾರ್ಯಮಠ ಇಷ್ಟೆಲ್ಲ ಅಭಿವೃದ್ಧಿ ಸಾಧಿಸಲು ಸಾಧ್ಯವಾಯಿತು. ವಿಶ್ವನಾಥ ಬುಳ್ಳಾ ಮತ್ತು ತೋಂಟದ ಶ್ರೀಗಳ ಹಾಲು-ಜೇನಿನಂಥ ಬಾಂಧವ್ಯಕ್ಕೆ ಕೆಲವರು ಹುಳಿ ಹಿಂಡಿ, ಆ ಸಂಬAಧಗಳನ್ನು ಕೆಡಿಸಿ, ಇಬ್ಬರನ್ನೂ ದೂರ ಮಾಡಿದ ಘಟನೆಯನ್ನು ಲೇಖಕರು ಅತ್ಯಂತ ಭಾವನಾತ್ಮಕವಾಗಿ ನಿರೂಪಿಸಿದ್ದಾರೆ. ಶ್ರೀಗಳ ಸಾಧನೆಯ ಹಿಂದೆ ಕೆಲಸ ಮಾಡಿದ ಅನೇಕ ಜನ ಮಠದ ಭಕ್ತರ ಹೆಸರುಗಳನ್ನು ದಾಖಲಿಸಿದ್ದು ಇನ್ನೂ ವಿಶೇಷ. ಮಠದ ಆಂತರಿಕ ಆಡಳಿತದ ಆಯಾಮಗಳನ್ನು ವಸ್ತುನಿಷ್ಠವಾಗಿ ವಿವರಿಸುವ ಪ್ರಯತ್ನ ಇಲ್ಲಿದೆ.

ಕನಸುಗಳು ನನಸಾಗಲಿ ಎಂಬ ಅಧ್ಯಾಯದಲ್ಲಿ ಓಶೊ ನಂತರ ಹೆಚ್ಚು ಭಾಷಣ ಮಾಡಿದ ಕೀರ್ತಿ ತೋಂಟದಾರ್ಯ ಶ್ರೀಗಳಿಗೆ ಸಲ್ಲುತ್ತದೆ ಎಂಬ ವಿಷಯ ತುಂಬ ಗಮನ ಸೆಳೆಯುತ್ತದೆ. ಶ್ರೀಗಳ ಆಶೀರ್ವಚನಗಳ ವಿಷಯ ಗ್ರಹಣ ತುಂಬಾ ವ್ಯಾಪಕವಾಗಿತ್ತು ಎಂಬುದನ್ನು ಎಳೆಎಳೆಯಾಗಿ ತಿಳಿಸಿದ್ದಾರೆ.

ಸಮಾಜ ಸೇವಾ ಕಾರ್ಯದಲ್ಲಿ ಶ್ರೀಗಳು ಅನುಭವಿಸಿದ ನೋವು-ಆತಂಕ-ವಿಷಾಧಗಳನ್ನು ಲೇಖಕರು ಕೃತಿಯುದ್ದಕ್ಕೂ ಪ್ರಸ್ತಾಪಿಸುತ್ತ ಸಾಗಿದ್ದಾರೆ. ಅನೇಕ ಸಂದರ್ಭಗಳಲ್ಲಿ ಶ್ರೀಗಳ ಜೊತೆಗೆ ತಾವೂ ಆ ನೋವು ನಲಿವುಗಳಲ್ಲಿ ಭಾಗಿಯಾಗಿದ್ದಾರೆ. ಹೀಗಾಗಿ ಇದು ಸಿದ್ದು ಯಾಪಲಪರ್ವಿ ಅವರ ಜೀವನ ಕಥೆಯಾಗಿಯೂ ರೂಪಗೊಂಡಿದೆ.

ಪ್ರಸ್ತುತ ಕೃತಿಯನ್ನು ಡಾ. ಎಂ. ಎಂ. ಕಲಬುರ್ಗಿ ಅವರಿಗೆ ಸಮರ್ಪಿಸಿದ್ದಾರೆ. ಡಾ. ಎಂ. ಎಂ. ಕಲಬುರ್ಗಿ ಅವರ ಕುರಿತು ಒಂದು ಅಧ್ಯಾಯವೇ ಈ ಕೃತಿಯಲ್ಲಿದೆ. ಡಾ. ಕಲಬುರ್ಗಿ ಅವರು ತಮ್ಮ ಮೇಲೆ ಬೀರಿದ ಪ್ರಭಾವವನ್ನೂ ಲೇಖಕರು ಸ್ಮರಿಸಿಕೊಂಡು ಈ ಕೃತಿಯನ್ನು ಅರ್ಪಿಸಿದ್ದಾರೆ.

ಸಿದ್ದು ಯಾಪಲಪರ್ವಿ ಅವರ ಅಸಂಗತ ಬರಹಗಳು ಎಂಬ ಕೃತಿಯನ್ನು ಓದಿ ಪ್ರಭಾವಿತರಾದ ಸಂಡೂರು ಪ್ರಭುದೇವ ವಿರಕ್ತಮಠದ ಪೂಜ್ಯ ಶ್ರೀ ಪ್ರಭು ಮಹಾಸ್ವಾಮಿಗಳು ತಮ್ಮ ಜನಕಲ್ಯಾಣ ಸಂಸ್ಥೆಯಿಂದ ಸಿದ್ದು ಯಾಪಲಪರ್ವಿ ಅವರಿಂದ ಈ ಕೃತಿಯನ್ನು ಬರೆಯಿಸಿ, ಮೊದಲ ಆವೃತ್ತಿ ಪ್ರಕಟಿಸಿರುವುದು ಅತ್ಯಂತ ಸಂತೋಷದ ಸಂಗತಿಯಾಗಿದೆ.

ಈ ಕೃತಿಗೆ ಮುನ್ನುಡಿ ತಿಲಕವಿಟ್ಟ ಹೊಸತು ಪತ್ರಿಕೆ ಸಂಪಾದಕರಾದ ಡಾ. ಸಿದ್ದನಗೌಡ ಪಾಟೀಲ ಅವರು ತಮ್ಮ ಮಾತುಗಳಲ್ಲಿ ಗದುಗಿನ ಶ್ರೀಗಳು-ಡಾ.ಕಲಬುರ್ಗಿ ಅವರು ಜನಪರ ಧ್ವನಿಯಾದವರು. ಈಗ ಈ ಉಭಯತರು ಇಲ್ಲದ ಕಾರಣವಾಗಿ ‘ಮೇಟಿ ಕಿತ್ತಿದ ಸ್ಥಿತಿ’ ನಿರ್ಮಾಣವಾಗಿದೆ ಎಂದು ಹೇಳಿರುವುದು ತುಂಬ ಧ್ವನಿಪೂರ್ಣವಾಗಿದೆ.

ಯಾವುದೇ ಹೊಸತನವಿಲ್ಲದೆ, ಕನ್ನಡ ಸಾಹಿತ್ಯ ಕ್ಷೇತ್ರವು ಇಂದು ನಿರ್ವಾತ ಸ್ಥಿತಿಯನ್ನು ಅನುಭವಿಸುತ್ತಿದೆ. ಇಂಥ ಸಂದರ್ಭದಲ್ಲಿ ಸಿದ್ದು ಯಾಪಲಪರ್ವಿ ಅವರ ‘ಹಗಲಿನಲ್ಲಿಯೆ ಸಂಜೆಯಾಯಿತು’ ಕೃತಿ ಓದುಗರಲ್ಲಿ ಒಂದು ರೀತಿಯ ಸಂಚಲನವನ್ನುಂಟು ಮಾಡುವುದರಲ್ಲಿ ಸಂದೇಹವಿಲ್ಲ. ಇಂತಹ ಅತ್ಯುತ್ತಮ ಕೃತಿ ನೀಡಿದ ಪ್ರೊ. ಸಿದ್ದು ಯಾಪಲಪರ್ವಿ ಅವರಿಗೆ ವಂದನೆ-ಅಭಿನಂದನೆಗಳು.

ಪ್ರಕಾಶ ಗಿರಿಮಲ್ಲನವರ
ಬೆಳಗಾವಿ
ಮೊ: ೯೯೦೨೧೩೦೦೪

- Advertisement -
- Advertisement -

Latest News

ಮಾಜಿ ಪ್ರಧಾನಿ ಡಾ. ಮನಮೋಹನಸಿಂಗ್ ನಿಧನ

ಹೊಸದೆಹಲಿ - ಭಾರತದ ೧೩ ನೇ ಪ್ರಧಾನ ಮಂತ್ರಿಯಾಗಿದ್ದ ಆರ್ಥಿಕ ತಜ್ಞ ಡಾ. ಮನಮೋಹನ ಸಿಂಗ್ ನಿಧನರಾಗಿದ್ದಾರೆ ೧೯೭೨ ರಲ್ಲಿ ಆರ್ಥಿಕ ಸಲಹೆಗಾರ,  ೧೯೭೬ ರಿಂದ ೧೯೮೦...
- Advertisement -

More Articles Like This

- Advertisement -
close
error: Content is protected !!
Join WhatsApp Group