- Advertisement -
ಮೂರು ತಲೆಮಾರಿನ ಗೌಡರ ಮನೆ ನೋಡ. ಸುಂದರ ಕೆತ್ತನೆಯ ಇಪ್ಪತ್ತಡಿಯ ತೊಲಬಾಗಿಲ. ಒಳಗ ಕಾಲಿಟ್ಟರ ಎಡಬಲ ದೊಡ್ಡ ಹಜಾರ(ಜಗಲಿ ಕಟ್ಟೆ) ಬಗೆಹರಿಸುವ ನ್ಯಾಯ ಗೌಡರ ನ್ಯಾಯಾಲಯ
ಗಂಧದ ಕಟ್ಟಿಗೆಯ ಹದಿನಾರು ಕೋಣೆಗಳ ಮಧ್ಯೆ ಕಂಬಗಳ ಸಾಲ
ಬಾಗಿ ನಡೆವ ಚಿಕ್ಕ ಬಾಗಿಲುಗಳಿಗೆ ಕೈ ಮುಗಿದ ಗೌರವ
ದೇವರ ಮನೆಯಲ್ಲಿ ಚಂದದಿ ನಿಂತ ಲಕ್ಷ್ಮಿಯ ಕಂಬ
ಸಾಲು ಸಾಲು ಅಡಕಲ ಗಡಿಗೆಯ ಒನಪುಗಳ ಚಂದ
ಹತ್ತು ಬಿಳಿಯ ಜೊಡೆತ್ತುಗಳ ಒಕ್ಕಲುತನ ಸಿರಿಯು
ಗೌಡರು ಪಯಣಿಸಲು ಕುದುರೆಗಳ ಪಾಗ (ಲಾಯ)
ಕರು ಗೋ ಮಾತೆಗಳು ತುಳಸಿಯ ಅಂಗಳದಾಗ
ದನಗಳ ಕೊಟಿಗೆಯ ತುಂಬಾ ಬಸವಣ್ಣನ ನೋಡ
- Advertisement -
ಹಿರಿಯರಾಳಿದ ಮನೆಯಲ್ಲಿ ಧನಧಾನ್ಯಗಳ ಕಣಜ
ಕೂಡ್ಯಾವು ಕುಟುಂಬದ ಮನಸುಗಳೆಲ್ಲ ಹಾಲಜೇನಿನಂಗ
ಮುಸ್ಸಂಜೆ ಹೊತ್ತ ಹಚ್ಚಿದ ನಂದಾ ದೀಪದ ಬೆಳಕ
ಹರಡಿತ್ತು ಬೆಳಕ ಗೌಡರ ಮನೆಯ ಅಂಗಳದ ತುಂಬ
ಶ್ರೀಮತಿ ಸುಲೋಚನಾ ಮಾಲಿಪಾಟೀಲ ಧಾರವಾಡ.