ಧರಿಸಿ ಬಿಡು ಮೌನದೊಡವೆ
ಮೌನದೊಡವೆ ತೊಟ್ಟು ಬಿಡು
ಶಂಕಿಸಿ ಹೀಯಾಳಿಸುವರ ಮುಂದೆ
ಬಿಂಕ ಬಿಗುಮಾನ ಬದಿಗಿಟ್ಟು
ಕೊಂಕು ಮಾತು ಕೇಳದೆ
ಸುಮ್ಮನೆ ಇದ್ದು ಬಿಡು.
ತಾಳ್ಮೆಯ ಸ್ಥಿತಿಯಲಿ
ದೂಡಿದವರ ತಹಬದಿಗೆ ತರಲು
ಗುದ್ದಾಡಿ ದೂರವಾಗುವ ಬದಲು
ಮುದ್ದಾಡಿ ಕೇಡು ಬಗೆಯುವರ ತೊರೆದು
ನೋಡಿಯೂ ನೋಡದಂತೆ ಇರಲು.
ಮಾತಿಗೆ ಮಾತು ಬೆರೆಸದೆ
ಮತಿಗೆ ಕೆಲಸ ಕೊಟ್ಟು
ಭೀತಿಗೆ ನಲುಗದೆ
ತಿಳಿದರೂ ತಿಳಿಯದ ರೀತಿಯಲಿ
ತಿಳಿ ಮುಗಿಲ ಹೊಕ್ಕು.
ಕಾಲದ ಮಹಿಮೆ ತಿಳಿದು
ಕಲರವದ ಗೊಡವೆಗೆ ಹೋಗದೆ
ಮಾಗಿದ ಹಣ್ಣಂತೆ
ಕೂಗುವ ಕಾಗೆಯ ಕಿವಿಗೊಡದೆ
ಮೌನದ ಆಭರಣ ಧರಿಸಿಬಿಡು.
ರೇಷ್ಮಾ ಕಂದಕೂರ, ಶಿಕ್ಷಕಿ
ಸಿಂಧನೂರು