ಜೊತೆ ಇರನೆಂದು ಬಿಟ್ಟು , , ,
ಹೊಣೆಗಾರಿಕೆಯಿಂದ ನುಣಚಿಕೊಂಡ
ಹೊತ್ತವರ ಹೆತ್ತವರ ತಪ್ಪಿಗಾಗಿ
ತಲೆ ಎತ್ತಿ ನಡೆಯದಂತೆ ಅಸ್ತಿತ್ವ ಮರೆಸಿದ
ಚಿಗುರುವ ಹೊತ್ತಲಿ ಉದುರುವ ಚಿಗುರು ಕಂಡು
ಕತ್ತು ಹಿಸುಕಿದಂತಾಗುವುದು
ನಾ ಹೆಚ್ಚೆಂದು ನೀ ಕೀಳೆಂದು
ಜೊತೆ ಇರನೆಂದು ಬಿಟ್ಟು
ಮರೆತಿದ್ದೇವೆಂದು ಅದೇ ಜಗಳದ ಸುತ್ತ ಗಿರಕಿ ಹೊಡೆಯುತ್ತ
ಇದ್ದೂ ಇಲ್ಲದಂತಿರುವ ಅಪ್ಪ ಅಮ್ಮನ ಕಂಡು
ಮಗುಮನದಿ ಹಿಂಸೆಯಾಗುವುದು.
ಎದುರಾದಾಗ ಚೆಂದದ ನಗು ಚೆಲ್ಲದೆ
ರಣಹೇಡಿಯಂತೆ ಮುಖ ನೋಡದೆ
ಮರೆತ ಕುರುಹು ನೀಡುವವರ ಕಂಡು
ಕಲ್ಲುಬೆಂಚಲಿ ಕೂಡಿಕೂತು ಹೂಬನದಿ ಆಡಿದ್ದು ನೆನೆದು
ಎಳೆ ಕಾಲಿಗೆ ಮುಳ್ಳುಚುಚ್ಚಿದಂತಾಗುವುದು
ಎಲ್ಲಿಗೆ ಅಟ್ಟಿದರೂ
ಅಲ್ಲಿಗೆ ಹೋಗುವ ಮಗು ಕಂಡು
ಮನಸ್ಸು ಮಮ್ಮಲ ಮರಗುವುದು
ಇನ್ನೊಂದು ಜೀವಕೆ
ಜೀವ ನೀಡುವ ಜೀವ ಕಣ್ಮುಚ್ಚುವುದು ಕಂಡು
ಜೀವ ವಿಲವಿಲ ಒದ್ದಾಡುವುದು
ದೇವರ ಮನೆಯಲಿ
ನಂದಾ ದೀಪವಾಗುವುದು ಬಿಟ್ಟು
ಗಾಳಿಗೊಡ್ಡಿದ ದೀಪವಾಗುವುದು ಕಂಡು
ನೋವಿನಲಿ ಕಣ್ಣ ಕೊಳ ತುಂಬಿ ತುಳುಕುವುದು
ಚಿಗುರನು ಚಿಗುರಲು ಬಿಟ್ಟರೆ
ಮೊಗ್ಗನು ಹಿಗ್ಗಲು ಬಿಟ್ಟರೆ ಸ್ವರ್ಗವು ಜೀವನಧರೆ
ಜಯಶ್ರೀ.ಜೆ. ಅಬ್ಬಿಗೇರಿ ಬೆಳಗಾವಿ ೯೪೪೯೨೩೪೧೪೨