ಸವಿ ಮನ
ನಾನೇಕೆ ಹಚ್ಚಿಕೊಳ್ಳಲಿ ?
ಮೊಗಕೆ ಬಣ್ಣ !
ಅಳಿಸುವೆ ಹಚ್ಚಿದ ಬಣ್ಣವನು
ಬದುಕ ಬವಣೆಯನು
ದೂಡಿ
ಏರಲಾರೆ ನೀ ಏರಿದ ಆನೆಗೆ
ನಾನೇಕೆ ಆಸೆ ಪಡಲಿ ?
ನಿಂತು ನೋಡುವೆ
ನೀ ಹತ್ತಿ ಸಾಗುವ ಅಂಬಾರಿಯನು
ದೂರದಿ ನಿಂತು ತಟ್ಟುವೆ ಚಪ್ಪಾಳೆ
ನಾನೆಂದೂ ಕಚ್ಚಾಡಿದವಳಲ್ಲ
ನಾಯಿಕುನ್ನಿಯಂತೆ !
ಹರಿದು ಹಂಚಿ ತಿನ್ನುವುದನು
ಕಲಿಸಿರುವ ನನ್ನ ಹೆತ್ತಪ್ಪ
ಸ್ವಾಭಿಮಾನದ ಬದುಕು
ಬೊಗಳುವ ನಾಯಿಗೂ
ಬಿಚ್ಚಿ ಹಾಕಿದ ನನ್ನಪ್ಪ !
ನನ್ನವ್ವ ಕಟ್ಟಿದ ರೊಟ್ಟಿ ಬುತ್ತಿ
ನಾನೆಂದೂ ಕರುಬಿದವಳಲ್ಲ
ಬದುಕಿನ ಪಥವ ತೋರುವಳು
ತಿರುಗಿ ನಿಂತವರಿಗೂ! ಕೈ ಮುಗಿದು
ದೂರ ಸರಿದು ದುಃಖಿಸಿದವಳು
ನಾನೆಂದೂ ಸುಮ್ಮ ಸುಮ್ಮನೇ
ಸಿಟ್ಟಿಗೆ ಬಂದವಳಲ್ಲ
ನನ್ನ ಸಹನೆಯ ಮಿತಿಯನು
ಪರೀಕ್ಷಿಸಿದವರಿಗೆ ಎದುರು ನಿಂತು
ಉತ್ತರಿಸಿದವಳು
ನಾನೆಂದೂ ಕಾಡಿದವಳಲ್ಲ
ಒಲುಮೆಗೆ ತುಂಬಾ ಹತ್ತಿರ
ಬೆನ್ನು ಹತ್ತಿದ ಬೇತಾಳ !
ಅಲ್ಲವೇ ಅಲ್ಲ
ಕಂದನಂತೆ ಮುಗ್ಧ ನಗೆಯ ಬೀರುವಳು
ಮನದ ಕಾಮನೆಗೆ ತಡೆಯೊಡ್ಡಿ
ಬದುಕು ಕಟ್ಟಿಕೊಂಡವಳು
ನೂರಾರು ಅವಮಾನಗಳಿಗೆ
ಸೋತು ಸಣ್ಣಾದವಳು
ಹಸಿವೆಗಾಗಿ ನಾನೆಂದೂ ಅತ್ತವಳಲ್ಲ
ಹೆತ್ತವ್ವಳ ಒಡಲಲ್ಲಿ
ಮುತ್ತು ಮಾಣಿಕ್ಯದ
ಸಿರಿ ಸುಖವ ಕಂಡವಳು
ನಾನೆಂದೂ ಅವಮಾನಕ್ಕೆ
ಅಂಜಿ ಓಡಿದವಳಲ್ಲ
ಸೆಡ್ಡು ಹೊಡೆದು ನಿಂತವಳೂ ಅಲ್ಲ
ನಮ್ಮ ಅನ್ನ ಉಂಡು
ನಮ್ಮ ಮೇಲೆ ದ್ವೇಷ ಕಾರಿದವರಿಗೂ
ಸಹಾಯ ಮಾಡುವಳು
ಒದ್ದಾಡುವ ವೃದ್ದ ಜೀವಗಳ ಕಂಡು
ಮಮ್ಮಲ ಮರುಗುವಳು
ಅನಾಥ ಚಿಕ್ಕ ಮಕ್ಕಳಿಗೆ
ತಾಯಿ ಸ್ವರೂಪ ಆಗಿ
ಅಪ್ಪಿಕೊಂಡವಳು
ನೂಕಿದರೂ, ಬೈದರೂ,
ನನ್ನೆದೆಗೆ ಚೂರಿ ಹಾಕಿದರೂ
ದೇವರ ಹತ್ತಿರ
ಬೇಡಿಕೊಂಡವಳು
ಸಕಲರಿಗೂ ಲೇಸು
ಬಯಸುವ
ಸವಿ ಮನದವಳು
( ‘ಸವಿ ಮನ’ ಕವನ ಸಂಕಲನದಿಂದ )
ಡಾ.ಸಾವಿತ್ರಿ ಮಹಾದೇವಪ್ಪ ಕಮಲಾಪೂರ