spot_img
spot_img

ರಾಜಕಾರಣಿಗಳು ಒಂದೇ ವೇದಿಕೆಯಲ್ಲಿ ಚರ್ಚೆ ನಡೆಸಲಿ

Must Read

- Advertisement -

ಚುನಾವಣೆಗಳಲ್ಲಿ ಆಡಳಿತ ಹಾಗೂ ವಿರೋಧ ಪಕ್ಷಗಳು ಪರಸ್ಪರ ಆರೋಪ ಪ್ರತ್ಯಾರೋಪ ಮಾಡುವುದು ಒಂದು ಸಹಜ ಪ್ರಕ್ರಿಯೆ ಎಂಬಂತಾಗಿದೆ. ಇತ್ತೀಚೆಗಂತೂ ಈ ಪ್ರಕ್ರಿಯೆ ನೇರವಾಗಿ ವೈಯಕ್ತಿಕ ಮಟ್ಟಕ್ಕೆ ಇಳಿದು ತನ್ನ ನೈತಿಕತೆ ಕಳೆದುಕೊಂಡಿದೆಯೆನ್ನಬಹುದು. ಇದಕ್ಕೆ ಉದಾಹರಣೆಗಳನ್ನು ಸಾಕಷ್ಟು ಕೊಡಬಹುದು. ಮುಖ್ಯವಾಗಿ ನೋಡುವುದಾದರೆ ಕಾಂಗ್ರೆಸ್ ಪಕ್ಷದ ರಾಹುಲ್ ಗಾಂಧಿ ಹಾಗೂ ಬಿಜೆಪಿಯ ನರೇಂದ್ರ ಮೋದಿ ಯವರು ಪರಸ್ಪರ ಮಾಡಿಕೊಂಡ ಆರೋಪ ಪ್ರತ್ಯಾರೋಪಗಳು.

ರಾಹುಲ್ ಗಾಂಧಿಯಂತೂ ಹೋದಲ್ಲಿ ಬಂದಲ್ಲಿ ಮೋದಿಯವರನ್ನು ತೆಗಳುತ್ತಾ, ಮೋದಿಯವರು ಅಂಬಾನಿ ಅದಾನಿಗಳ ಕೈಗೊಂಬೆಯಾಗಿದ್ದಾರೆ, ಸರ್ವಾಧಿಕಾರಿಯಾಗಿದ್ದಾರೆ, ಇವರು ಮತ್ತೆ ಅಧಿಕಾರಕ್ಕೆ ಬಂದರೆ ಸಂವಿಧಾನವನ್ನೇ ಬದಲಾಯಿಸುತ್ತಾರೆ, ದೇಶದಲ್ಲಿ ಭ್ರಷ್ಟಾಚಾರ, ನಿರುದ್ಯೋಗ ಮಿತಿ ಮೀರಿದೆ…..ಎಂದೆಲ್ಲ ಆರೋಪಿಸುತ್ತಾರೆ.

ಇತ್ತ ಮೋದಿಯವರು ರಾಹುಲ್ ಗಾಂಧಿಯವರನ್ನು ಯುವರಾಜ ಎಂದು ಸಂಬೋಧಿಸುತ್ತ, ಆತನಿಗೆ ತಿಳಿವಳಿಕೆಯ ಮಟ್ಟ ಕಡಿಮೆ ಎನ್ನುತ್ತಾರೆ. ಆತ್ಮ ನಿರ್ಭರ ಭಾರತ ಯೋಜನೆಯಲ್ಲಿ ಭಾರತ ಸಾಕಷ್ಟು ಅಭಿವೃದ್ಧಿ ಹೊಂದಿದೆಯೆನ್ನುತ್ತಾರೆ, ಭಾರತದ ಬಗ್ಗೆ ರಾಹುಲ್ ಗಾಂಧಿ ವಿದೇಶಕ್ಕೆ ಹೋಗಿ ಟೀಕೆ ಮಾಡುತ್ತಾ ದೇಶದ ಮಾನ ತೆಗೆಯುತ್ತಾರೆ ಎನ್ನುತ್ತಾರೆ, ಉದ್ಯೋಗವೆಂದರೆ ಕೇವಲ ಸರ್ಕಾರಿ ನೌಕರಿಯಲ್ಲ ಸ್ವಯಂ ಉದ್ಯೋಗ ಸೃಷ್ಟಿ ಮಾಡುವುದೂ ಒಂದು ಯಶಸ್ವಿ ಯೋಜನೆ ಇದರ ಬಗ್ಗೆ ರಾಹುಲ್ ಮಾತನಾಡುವುದಿಲ್ಲ ಎನ್ನುತ್ತಾರೆ ಈಗ ತೀರಾ ಹೊಸದು ಎಂದರೆ, ಚುನಾವಣೆ ಬಂದ ಮೇಲೆ ರಾಹುಲ್ ಅದಾನಿ ಅಂಬಾನಿ ಬಗ್ಗೆ ಮಾತೇ ಆಡಿಲ್ಲ ಎಷ್ಟು ಮಾಲು ರಾಹುಲ್ ಜೇಬಿಗೆ ಸೇರಿದೆ ಎಂದು ಮೋದಿಯವರು ನೇರ ಆರೋಪ ಪ್ರಶ್ನೆ ಮಾಡಿದ್ದಾರೆ.

- Advertisement -

ಈ ಎಲ್ಲ ಆರೋಪ ಪ್ರತ್ಯಾರೋಪ ಆಯಿತು ಆದರೆ ಈ ರಾಜಕೀಯ ನಾಯಕರು ತಮ್ಮ ಮೇಲಿನ ಆರೋಪಗಳಿಗೆ ಉತ್ತರ ಕೊಡಬೇಕಾದುದು ಅವರ ಉತ್ತದಾಯಿತ್ವ. ಯಾರೇ ಆರೋಪ ಮಾಡಬೇಕಾದರೆ ಅದಕ್ಕೆ ಏನಾದರೂ ಹಿನ್ನೆಲೆ ಇರುತ್ತದೆ. ಅದಕ್ಕೆ ಪ್ರತಿಯಾಗಿ ಆರೋಪಿತರು ಉತ್ತರ ಕೊಡಬೇಕು ಆದರೆ ಭಾರತೀಯ ರಾಜಕಾರಣದ ಒಂದು ವೈಶಿಷ್ಟ್ಯವೆಂದರೆ, ತುಂಬಿದ ಸಭೆಯಲ್ಲಿ ಒಬ್ಬ ವ್ಯಕ್ತಿಯ ಮೇಲೆ ಏನಾದರೂ ಗಂಭೀರ ಆರೋಪ ಮಾಡಿ ಜನರಿಂದ ಚಪ್ಪಾಳೆ ಗಿಟ್ಟಿಸಿಕೊಳ್ಳುವುದು ಅಥವಾ ಆತನ ವಿರುದ್ಧ ತೀರಾ ಕಳಪೆ ಶಬ್ದಗಳಿಂದ ಟೀಕೆ ಮಾಡಿ ಜನರಿಂದ ಜೈ ಅನಿಸಿಕೊಳ್ಳುವುದು ಸಭೆ ಮುಗಿದ ಮೇಲೆ ಓಡಿ ಹೋಗಿ ಬಿಲ ಸೇರುವುದು. ಇದು ಮೊದಲಿನಿಂದಲೂ ನಡೆದು ಬಂದಿದೆ. ವಿಚಿತ್ರವೆಂದರೆ ಜನರೂ ಇಂಥ ಆರೋಪಗಳನ್ನು ಗಂಭಿರವಾಗಿ ತೆಗೆದುಕೊಳ್ಳುವುದಿಲ್ಲ. ಯಾವುದೇ ಆರೋಪ, ಬೈಗಳು, ಟೀಕೆ ಚುನಾವಣೆಯ ಸಂದರ್ಭದಲ್ಲಿ ಸಹಜ ಪ್ರಕ್ರಿಯೆ ಎಂಬಂತೆ ಮತದಾರ ಸುಮ್ಮನೆ ಇದ್ದುಬಿಡುತ್ತಾನೆ. ಅತ್ತ ರಾಜಕೀಯ ನಾಯಕರು ನೈತಿಕವಾಗಿ ಮತ್ತಷ್ಟು ಜಾರಿಹೋಗಿ ರಾಜ್ಯ, ದೇಶ ಮತ್ತಷ್ಟು ನೈತಿಕ ದಿವಾಳಿಯತ್ತ ಸಾಗುತ್ತದೆ !

ಇಂಥ ವ್ಯವಸ್ಥೆ ಮುಂದುವರೆಯಬಾರದೆಂದರೆ ಆರೋಪ ಮಾಡಿದವರು ತಮ್ಮ ಆರೋಪಕ್ಕೆ ಸ್ಪಷ್ಟೀಕರಣ ಕೊಡಬೇಕು, ಆರೋಪ ಹೊತ್ತವರೂ ತಮ್ಮ ಉತ್ತರ ಕೊಡಬೇಕು. ಕೊನೆಗೆ ಜನರ ನ್ಯಾಯಾಲಯದಲ್ಲಿ ತೀರ್ಮಾನವಾಗಬೇಕು. ಈ ನಿಟ್ಟಿನಲ್ಲಿ ಸಾರ್ವಜನಿಕರೆದುರು ಚರ್ಚೆಯಾಗಬೇಕು.
ಇಂಥದೊಂದು ಮಹತ್ವದ ಹೆಜ್ಜೆ ಆರಂಭವಾಗಿದೆ !

ಸುಪ್ರೀಮ್ ಕೋರ್ಟಿನ ನಿವೃತ್ತ ನ್ಯಾಯಮೂರ್ತಿ ಮದನ ಬಿ. ಲೋಕೂರ್, ದೆಹಲಿ ಹೈಕೋರ್ಟ್ ನಿವೃತ್ತ ಮುಖ್ಯ ನ್ಯಾಯಮೂರ್ತಿ ಅಜಿತ್ ಪಿ. ಶಾ ಹಾಗೂ ಹಿರಿಯ ಪತ್ರಕರ್ತ ಹಿಂದೂ ಪತ್ರಿಕೆಯ ಮಾಜಿ ಸಂಪಾದಕ ಎನ್ ರಾಮ್ ಅವರು ಇಂಥ ಒಂದು ಪ್ರಮುಖ ಹೆಜ್ಜೆ ಇಟ್ಟಿದ್ದು ಪ್ರಧಾನಿ ಹಾಗೂ ಕಾಂಗ್ರೆಸ್ ಸಂಸದನಿಗೆ ಪತ್ರ ಬರೆದು ಚರ್ಚೆಗೆ ಆಹ್ವಾನಿಸಿದ್ದಾರೆ. ಅದರ ಪ್ರತಿಯನ್ನು ‘ಲೈವ್ ಲಾ ಇಂಡಿಯಾ’ಎಕ್ಸ್ ಖಾತೆಯಲ್ಲಿ ಪ್ರಕಟಪಡಿಸಲಾಗಿದೆ.
ನಾವು ಇಷ್ಟು ದಿನ ನಿಮ್ಮ ಎರಡೂ ಪಕ್ಷಗಳ ಆರೋಪ ಪ್ರತ್ಯಾರೋಪ ಅಷ್ಟೇ ಕೇಳಿಸಿಕೊಂಡಿದ್ದೇವೆ ಆದರೆ ಉತ್ತರಗಳನ್ನು ಕೇಳಿಸಿಕೊಂಡಿಲ್ಲ ಹಾಗಾಗಿ ದೇಶದ ನಾಗರಿಕರಾಗಿ ನಿಮ್ಮಗಳಲ್ಲಿ ಮನವಿ. ಇದೇ ವಿಚಾರಗಳನ್ನು ಇಟ್ಟುಕೊಂಡು ಎರಡೂ ಪಕ್ಷಗಳ ಪ್ರಮುಖರಾದ ನರೇಂದ್ರ ಮೋದಿ ಮತ್ತು ರಾಹುಲ್ ಗಾಂಧಿ ಸಾರ್ವಜನಿಕ ಚರ್ಚೆ ನಡೆಸಬೇಕು ಎಂದು ಆಹ್ವಾನಿಸುತ್ತಿದ್ದೇವೆ ಎಂದು ಪತ್ರ ಬರೆದಿದ್ದಾರೆ.

- Advertisement -

ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇದೊಂದು ತುಂಬಾ ಮಹತ್ವದ ಹೆಜ್ಜೆ. ನಿವೃತ್ತ ನ್ಯಾಯಮೂರ್ತಿಗಳಂಥವರು, ಮಾಧ್ಯಮದ ಜನರು ದೇಶದ ರಾಜಕಾರಣಿಗಳಿಂದ ಇಂಥದೊಂದು ಚರ್ಚೆ ಮಾಡಿಸುವುದು ಪ್ರಜಾಪ್ರಭುತ್ವದ ಹಿತದೃಷ್ಟಿಯಿಂದ ಒಳ್ಳೆಯದು ಇಂಥ ಚರ್ಚೆಯಿಂದ ಆರೋಪ ಮಾಡುವವರ ಸೋಗಲಾಡಿತನ ಹಾಗೂ ಆರೋಪಿತರ ಸತ್ಯಸಂಧತೆ ಗೊತ್ತಾಗುತ್ತದೆ. ಜನರಿಗೆ ಒಂದು ರೀತಿಯಲ್ಲಿ ಸತ್ಯಾಸತ್ಯತೆ ತಿಳಿದು ಸಮಾಧಾನ ಕೂಡ ಆಗುತ್ತದೆ. ಮುಂದಿನ ದಿನಗಳಲ್ಲಿ ಯಾರನ್ನು ತಮ್ಮ ನಾಯಕನನ್ನಾಗಿ ನೋಡಬೇಕು ಎಂಬ ಪ್ರಜ್ಞೆ ಜಾಗೃತವಾಗುತ್ತದೆ.

ಪರಸ್ಪರ ಆರೋಪಿಸುವವರನ್ನು ಒಂದೇ ವೇದಿಕೆಯಲ್ಲಿ ಕರೆತಂದು ಮುಖಾಮುಖಿ ಮಾಡಿ ಒಂದು ಆರೋಗ್ಯಕರ ಚರ್ಚೆಗೊಳಪಡಿಸಿ ಜನರ ಮನದಲ್ಲಿ ಇರುವ ಪೂರ್ವಗ್ರಹ ಭಾವನೆಯನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಈ ಮಹಾನುಭಾವರು ಕೈಗೊಂಡಿರುವ ಕ್ರಮಕ್ಕೆ ಪ್ರತಿಯೊಬ್ಬ ಭಾರತೀಯ ಬೆಂಬಲ ನೀಡುವುದು ಅಗತ್ಯವಾಗಿದೆ.

ಉಮೇಶ ಬೆಳಕೂಡ, ಮೂಡಲಗಿ

- Advertisement -
- Advertisement -

Latest News

ಸಿಂದಗಿ ಅಧ್ಯಕ್ಷರಾಗಿ ಶಾಂತವೀರ, ಉಪಾಧ್ಯಕ್ಷರಾಗಿ ರಾಜಣ್ಣಿ ಆಯ್ಕೆ

ಸಿಂದಗಿ; ಪಟ್ಟಣದ ಪುರಸಭೆಯ ಅಧ್ಯಕ್ಷ, ಉಪಾದ್ಯಕ್ಷರ ಅವಧಿ ಮುಗಿದು ಹಲವು ವರ್ಷಗಳು ಕಳೆದಿತ್ತು ಅದು ಅ. ೨೮ ರಂದು ಚುನಾವಣೆ ಪ್ರಕ್ರಿಯೆ ಪ್ರಾರಂಭಿಸಿ ಸೆ.೯ ದಿನಾಂಕ...
- Advertisement -

More Articles Like This

- Advertisement -
close
error: Content is protected !!
Join WhatsApp Group