ಸಿಂದಗಿ; ಕಲ್ಕತ್ತಾದ ಆರ್. ಜಿ.ಕರ್ ಮೆಡಿಕಲ್ ಕಾಲೇಜ್‌ನಲ್ಲಿ ಆಗಸ್ಟ್ ೯ ರಂದು ಮುಂಜಾನೆ, ಕರ್ತವ್ಯ ನಿರತ ಸ್ನಾತಕೋತ್ತರ ವೈದ್ಯೆಯ ಮೇಲೆ ಅತ್ಯಾಚಾರ ಮತ್ತು ಕೊಲೆ ಮಾಡಿದನ್ನು ಖಂಡಿಸಿ ಭಾರತೀಯ ವೈದ್ಯಕೀಯ ಸಂಘವು ವೈದ್ಯಕೀಯ ಸೇವೆಯನ್ನು ಹಿಂದೆತೆಗೆದು ಪ್ರತಿಭಟನೆ ನಡೆಸಿ ತಹಶೀಲ್ದಾರ ಪ್ರದೀಪಕುಮಾರ ಹಿರೇಮಠ ಅವರ ಮೂಲಕ ಪ್ರಧಾನ ಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಅಧ್ಯಕ್ಷ ಡಾ. ಗಿರೀಶ ಕುಲಕರ್ಣಿ, ಪ್ರಧಾನ ಕಾರ್ಯದರ್ಶಿ ಡಾ.ಸಂಗಮೇಶ ಪಾಟೀಲ ಮಾತನಾಡಿ, ಕಲ್ಕತ್ತಾದ ಆರ್. ಜಿ.ಕರ್ ಮೆಡಿಕಲ್ ಕಾಲೇಜ್‌ನಲ್ಲಿ ಆಗಸ್ಟ್ ೯ ರಂದು ಮುಂಜಾನೆ, ಕರ್ತವ್ಯ ನಿರತ ಸ್ನಾತಕೋತ್ತರ ವೈದ್ಯೆಯ ಮೇಲೆ ಅತ್ಯಾಚಾರ ಮತ್ತು ಕೊಲೆ ನಡೆದಿದೆ. ಈ ಘಟನೆ ದೇಶದ ವೈದ್ಯಕೀಯ ಸಮೂಹವನ್ನೇ ಆಘಾತಕ್ಕೀಡು ಮಾಡಿದೆ. ಇದು ನಡೆದ ದಿನದಿಂದಲೇ ಕಾಲೇಜಿನ ವೈದ್ಯ ವಿದ್ಯಾರ್ಥಿಗಳು ಮುಷ್ಕರ ನಡೆಸುತ್ತಿದ್ದಾರೆ, ಭಾರತೀಯ ವೈದ್ಯಕೀಯ ಸಂಘ ಕ್ಯಾಂಡಲ್ ಮಾರ್ಚ್ ಮೂಲಕ ಪ್ರತಿಭಟನೆಯನ್ನು ನಡೆಸಿತು. ಮೊದಲನೆಯ ದಿನವೇ ಕಾಲೇಜಿನ ಆಡಳಿತ ಮಂಡಳಿ ಹಾಗೂ ಪೊಲೀಸರು ಅಪರಾಧವನ್ನು ಅತ್ಯಂತ ನಿಕೃಷ್ಟವಾಗಿ ತನಿಖೆ ನಡೆಸಿ, ಆ ಬಳಿಕ ತನಿಖೆಯಲ್ಲಿ ಸ್ಥಗಿತಗೊಳಿಸಿದ್ದಾರೆ. ಕಲ್ಕತ್ತಾ ಹೈಕೋರ್ಟ್, ನಡೆಸಿದ ತನಿಖೆಯಲ್ಲಿ ಅಸಮಾಧಾನವನ್ನು ವ್ಯಕ್ತಪಡಿಸಿ, ಸಿಬಿಐಗೆ ಪ್ರಕರಣವನ್ನು ವರ್ಗಾಯಿಸಿದೆ. ರಾಜ್ಯದ ಪೊಲೀಸ್ ಅಧಿಕಾರಿಗಳು ಸಾಕ್ಷಿಯನ್ನು ನಾಶಗೊಳಿಸುವ ಸಾಧ್ಯತೆಗಳನ್ನು ಊಹಿಸಿದ್ದಾರೆ.
ಆಗಸ್ಟ್ ೧೫ರಂದು ದೊಡ್ಡ ಗುಂಪಿನಲ್ಲಿ ಜನರು ಆಸ್ಪತ್ರೆಯ ಆವರಣವನ್ನು ಪ್ರವೇಶಿಸಿ ದಾಂಧಲೆ ಎಬ್ಬಿಸಿದ್ದು ಮಾತ್ರವಲ್ಲ, ಅಪರಾಧಿ ಓಡಾಡಿದ ಸ್ಥಳಗಳಲ್ಲಿ ಸಾಕ್ಷಿಗಳನ್ನು ನಾಶಪಡಿಸಿದ್ದಂತೆ ತೋರುತ್ತದೆ. ಪ್ರತಿಭಟನೆ ನಡೆಸಿದ ಕಿರಿಯ ವೈದ್ಯಾಧಿಕಾರಿಗಳ ಮೇಲು ದಾಳಿ ಮಾಡಿದ್ದಾರೆ, ವೈದ್ಯ ವೃತ್ತಿಯಲ್ಲಿ ಸಹಜವಾಗಿ ಆಗುವ ತೊಂದರೆಯ ಜೊತೆಗೆ, ಅದರಲ್ಲೂ ಪ್ರಕೃತಿ ಸಹಜವಾಗಿ ತೊಂದರೆಗೆ ಒಳಗಾಗುವ ಹೆಣ್ಣು ಮಕ್ಕಳು ಬಲಿಯಾಗುವುದನ್ನು ನೋಡುತ್ತಿದ್ದೇವೆ, ಆಸ್ಪತ್ರೆ ಆವರಣದಲ್ಲಿ ವೈದ್ಯರಿಗೆ ರಕ್ಷಣೆ ಒದಗಿಸಿ ಕೊಡಲು ಆಸ್ಪತ್ರೆಯ ಆಡಳಿತ ಮಂಡಳಿಯ ಜವಾಬ್ದಾರಿ ಇರುತ್ತದೆ, ಆಸ್ಪತ್ರೆಯ ಆಡಳಿತ ಮಂಡಳಿಯ ಉದಾಸಿನ ಮತ್ತು ಸಂವೇದನಾಶೀಲತೆಯ ಕೊರತೆಯ ಪರಿಣಾಮವೇ ವೈದ್ಯರ ಹಾಗೂ ಆರೋಗ್ಯ ಸಿಬ್ಬಂದಿಗಳ ಮೇಲೆ ಅಕ್ರಮಣ ನಡೆಯುತ್ತಿರುವುದಕ್ಕೆ ಕಾರಣ, ಆರ್ ಜಿ. ಕರ್ ಕಾಲೇಜಿನಲ್ಲಿ ನಡೆದ ಈ ಕ್ರೂರ ಘಟನೆಯ ಬಳಿಕ ಪ್ರತಿಭಟನೆ ನಡೆಸುತ್ತಿದ್ದ ವೈದ್ಯರ ಮೇಲೆ, ಸ್ವಾತಂತ್ರೋತ್ಸವದ ದಿನವೇ ನಡೆದ ಗುಂಡಾಗಿರಿಯನ್ನು ಪ್ರತಿಭಟಿಸಿ ಭಾರತೀಯ ವೈದ್ಯಕೀಯ ಸಂಘವು ಆ.೧೭ ಮುಂಜಾನೆ ಆರು ಗಂಟೆಯಿಂದ ೧೮ರ ಮುಂಜಾನೆ ಆರು ಗಂಟೆಯವರೆಗೆ ದೇಶದಾದ್ಯಂತ ಸೇವೆಯನ್ನು ಹಿಂತೆಗೆದುಕೊಳ್ಳಲು ನಿರ್ಧರಿಸಿದೆ. ತುರ್ತು ಚಿಕಿತ್ಸೆಗಳು ಲಭ್ಯವಿರುತ್ತವೆ, ಹಾಗೂ ಕ್ಯಾಶುಯಲ್ಸಿಯಲ್ಲಿ ವೈದ್ಯರ ಸೇವೆ ಲಭ್ಯವಿರುತ್ತದೆ, ಸೇವೆಯ ಹಿಂದೆಗೆತವು ಆಧುನಿಕ ವೈದ್ಯ ಪದ್ಧತಿಯ ವೈದ್ಯರಿಗೆ ಅನ್ವಯಿಸುತ್ತದೆ. ಭಾರತೀಯ ವೈದ್ಯಕೀಯ ಸಂಘವು ವೈದ್ಯರಿಗಾಗಿ ದೇಶದ ಸಹಾನುಭೂತಿಯನ್ನು ಅಪೇಕ್ಷಿಸುತ್ತದೆ ಎಂದರು.
ಈ ಸಂದರ್ಭದಲ್ಲಿ ಡಾ.ಶಾರದಾ ನಾಡಗೌಡ, ಡಾ.ಶಾರದಾ ದಾನಗೊಂಡ, ಡಾ. ಸೀಮಾ ವಾರದ, ಡಾ. ಸುನೀಲ ಪಾಟೀಲ, ಡಾ.ಸಿ.ಸಿ.ಹಿರೇಗೌಡರ, ಡಾ. ಶಿವಾನಂದ ಹೊಸಮನಿ, ಡಾ.ಚಿದಾನಂದ ಅರಳಗುಂಡಗಿ, ಡಾ. ಮಹೇಶ ಕುಲಕರ್ಣೀ, ಡಾ.ಅಬುಬಕರ ಮುಲ್ಲಾ, ಡಾ ಇಲಿಯಾಸ ಜಾಲವಾದಿ, ಡಾ.ಹಬೀಬ ನಾಗರಳ್ಳಿ, ಡಾ.ವಿಶ್ವರಾಧ್ಯ ಲೋಣಿ, ಡಾ. ಅನೀಲ ಹೂಗಾರ, ಡಾ. ಶ್ರೀಮತಿ ಚೆನ್ನೂರ, ಡಾ. ಶ್ರೀಮತಿ ಸಾಲಿಮಠ ಸೇರಿದಂತೆ ನೂರಾರು ವೈದ್ಯರು ಇದ್ದರು.