spot_img
spot_img

ವೀರ ಅಭಿಮನ್ಯು

Must Read

- Advertisement -

ಮಹಾಭಾರತದ ಅತಿ ಕಿರಿಯ ಶೂರನ ವೀರಗಾಥೆ

ಸ್ನೇಹಿತರೇ,
ನಿಮಗೆಲ್ಲ ನಮ್ಮ ಮಹಾಭಾರತ ತುಂಬಾ ಚೆನ್ನಾಗಿ ಗೊತ್ತಿದೆ. ನನ್ನ ಅಭಿಪ್ರಾಯದಲ್ಲಿ ಮಹಾಭಾರತದಲ್ಲಿ ಒಂದೊಂದು ಪಾತ್ರವೂ ಒಂದೊಂದು ನೈಪುಣ್ಯವನ್ನು ಬಿಂಬಿಸುತ್ತದೆ.
ಇಲ್ಲಿ ವಿವೇಚನೆಗೆ ಧರ್ಮರಾಯನಾದರೆ, ಬಿಲ್ವಿದ್ಯೆಗೆ ಅರ್ಜುನ.
ಬಲಪರಾಕ್ರಮಕ್ಕೆ ಭೀಮನಾದರೆ, ಪ್ರತಿಜ್ಞೆಗೆ ಭೀಷ್ಮ ಪಿತಾಮಹರನ್ನು ಉದಾಹರಿಸಲಾಗುತ್ತದೆ. ಕಪಟತನಕ್ಕೆ ಶಕುನಿಯಾದರೆ, ಶೌರ್ಯಕ್ಕೆ ಅಭಿಮನ್ಯು ಹೆಸರುವಾಸಿಯಾಗಿದ್ದಾರೆ.

ಆದರೆ ಇಡಿಯ ಮಹಾಭಾರತದಲ್ಲಿ ಸೌಂದರ್ಯಕ್ಕೆ ಯಾವುದೇ ಮಹತ್ವ ಕಂಡುಬರುವುದಿಲ್ಲ. ಏಕೆಂದರೆ ಐವರು ಸಹೋದರರಲ್ಲಿ ನಕುಲ ಅತ್ಯಂತ ಸ್ಪುರದ್ರೂಪಿಯಾಗಿದ್ದ. ಆದರೆ ಆತನ ಸೌಂದರ್ಯವನ್ನು ಕೇವಲ ಒಂದು ಸಾಲಿನಲ್ಲಿ ಹೇಳಲಾಗಿದೆಯೇ ಹೊರತು ಎಲ್ಲೂ ಇತರ ವರ್ಣನೆಯೇ ಇಲ್ಲ. ಇದು ನಮಗೆ ಮನುಷ್ಯನ ಬಾಹ್ಯರೂಪಕ್ಕಿಂತಲೂ ಆಂತರಿಕ ಗುಣಕ್ಕೆ ಹೆಚ್ಚಿನ ಮಹತ್ವ ನೀಡಬೇಕೆಂದು ಮಹಾಭಾರತ ಕಲಿಸುವ ಸತ್ಯಪಾಠ.

- Advertisement -

ಎಲ್ಲವನ್ನೂ ಬಲ್ಲವ ಶ್ರೀಕೃಷ್ಣ
ಮಹಾಭಾರತದ ಸಮಯದಲ್ಲಿ ದೇಶದಲ್ಲಿ ಬಹುಪತ್ನಿತ್ವ ಮತ್ತು ಬಹುಪತಿತ್ವ ಜಾರಿಯಲ್ಲಿತ್ತು. ಅಂತೆಯೇ ಅರ್ಜುನನಿಗೆ ದ್ರೌಪದಿಯ ಹೊರತಾಗಿ ಕೃಷ್ಣನ ಸಹೋದರಿಯಾದ ಸುಭದ್ರೆಯೂ ಮಡದಿಯಾಗಿದ್ದಳು. ಅರ್ಜುನನಿಗೆ ಒಟ್ಟು ಏಳು ಜನ ಪತ್ನಿಯರಿದ್ದರೆಂದು ಕೆಲವೆಡೆ ದಾಖಲಾಗಿದೆ. ಗುರುಕುಲದಲ್ಲಿದ್ದಾಗಲೇ ಅರ್ಜುನನಿಗೆ ಕೃಷ್ಣನ ತಂಗಿ ಸುಭದ್ರೆಯತ್ತ ಒಲವು ಮೂಡಿತ್ತು. ಆದುದರಿಂದಲೇ ತನ್ನ ಮನದಾಳದ ಕೆಲವು ಮಾತುಗಳನ್ನು ಆತ ಕೇವಲ ಸುಭದ್ರೆಯೊಂದಿಗೆ ಮಾತ್ರ ಹಂಚಿಕೊಳ್ಳುತ್ತಿದ್ದ. ಹಾಗೆಯೇ ಸುಭದ್ರೆಯ ಸಹೋದರ ಶ್ರೀ ಕೃಷ್ಣ ಕೂಡ ಅತ್ಯಂತ ಗೌಪ್ಯವಾದ ಯುದ್ಧದ ವಿವರಗಳನ್ನೂ ಸಹ ಸುಭದ್ರೆ ಜೊತೆ ಹಂಚಿಕೊಳ್ಳುತ್ತಿದ್ದ

ಚಕ್ರವ್ಯೂಹದ ಬಗ್ಗೆ ತಿಳಿಸುತ್ತಿದ್ದ ಕೃಷ್ಣ
ಒಮ್ಮೆ ಸುಭದ್ರೆ ಹಾಗೂ ಕೃಷ್ಣ ಇಬ್ಬರೂ ರಥದಲ್ಲಿ ಕುಳಿತು ಪ್ರಯಾಣ ಮಾಡುತ್ತಿದ್ದರು. ಆ ಸಮಯದಲ್ಲಿ ಸುಭದ್ರೆ ತುಂಬು ಗರ್ಭಿಣಿ. ಅಂತಹ ವೇಳೆಯಲ್ಲಿ ಸುಭದ್ರೆಯು ಅಭಿಮನ್ಯುವನ್ನಿನ್ನೂ ಗರ್ಭದಲ್ಲಿಟ್ಟುಕೊಂಡಿದ್ದಾಗ ಕೃಷ್ಣನು ಯುದ್ಧದ ಅತ್ಯಂತ ಕ್ಲಿಷ್ಟಕರವಾದ ಚಕ್ರವ್ಯೂಹದ ಬಗ್ಗೆ ವಿವರ ನೀಡುತ್ತಿದ್ದ. ಈ ಚಕ್ರವ್ಯೂಹದಲ್ಲಿ ಸೈನಿಕರು ವೃತ್ತಾಕಾರದಲ್ಲಿ ನಿಂತು ಸೈನ್ಯ ವ್ಯೂಹ ರಚಿಸುವುದು, ಅದರೊಳಗೆ ನುಸುಳುವುದು ಎಷ್ಟು ಕಷ್ಟವೋ ಅದರಿಂದ ಜೀವಸಹಿತ ಹೊರಬರುವುದು ಇನ್ನೂ ಕಷ್ಟ ಎಂಬುದಾಗಿ ವಿವರಿಸುತ್ತಿದ್ದನು. ಕೃಷ್ಣನು ಚಕ್ರವ್ಯೂಹದೊಳಗೆ ನುಗ್ಗುವ ಪರಿಯನ್ನು ಹೇಳುತ್ತಿದ್ದಂತೆಯೇ ಸುಭದ್ರೆಯ ಗರ್ಭದಲ್ಲಿದ್ದ ಅಭಿಮನ್ಯು ಇದನ್ನು ಕೇಳಿಸಿಕೊಂಡು ಚಕ್ರವ್ಯೂಹವನ್ನು ಭೇದಿಸುವ ವಿದ್ಯೆಯನ್ನು ತನ್ನ ಮನದಾಳದಲ್ಲಿ ಆಗಲೇ ಸ್ಥಾಪಿಸಿಕೊಂಡಿದ್ದ. ಈ ಎಲ್ಲವನ್ನೂ ಬಲ್ಲ ಕೃಷ್ಣನು ಸುಭದ್ರೆಯು ನಿದ್ರೆ ಹೋದ ಕಾರಣ ಕಥೆಯನ್ನು ಅರ್ಧದಲ್ಲೇ ನಿಲ್ಲಿಸಿದ ….

ಮಾತನ್ನು ಅರ್ಧದಲ್ಲಿಯೇ ನಿಲ್ಲಿಸಿದ ಕೃಷ್ಣ
ಆದರೆ ಅಷ್ಟು ಹೊತ್ತಿಗೆ ದಣಿವಿನಿಂದ ನಿದ್ದೆಗೆ ಜಾರಿದ ಸುಭದ್ರೆ ಮುಂದಿನ ಮಾತುಗಳನ್ನು ಕೇಳಿಸಿಕೊಳ್ಳಲಿಲ್ಲ. ಸುಭದ್ರೆ ನಿದ್ದೆಹೋದುದನ್ನು ತಿಳಿದ ಕೃಷ್ಣನು ತನ್ನ ಮಾತುಗಳನ್ನು ಅಲ್ಲಿಗೇ ನಿಲ್ಲಿಸಿದ. ಇದರಿಂದ ಸುಭದ್ರೆಯ ಗರ್ಭದಲ್ಲಿದ್ದ ಅಭಿಮನ್ಯುವಿಗೆ ಚಕ್ರವ್ಯೂಹದಿಂದ ಹೊರಬರುವ ಮಾಹಿತಿ ಸಿಗದೇ ಹೋಯಿತು. ಮುಂದಿನ ಮಾಹಿತಿ ಸಿಗದೇ ಚಡಪಡಿಸಿದ ಅಭಿಮನ್ಯು ಸುಭದ್ರೆಯನ್ನು ಎಚ್ಚರಿಸಲು ಗರ್ಭದಲ್ಲಿಯೇ ಒದ್ದಾಗ ಸುಭದ್ರೆಗೆ ಎಚ್ಚರವಾದರೂ ಅಷ್ಟರಲ್ಲಿ ತಡವಾಗಿತ್ತು. ಕಾರಣ ಅಷ್ಟರಲ್ಲಿ ಕೃಷ್ಣನು ತನ್ನ ಮಾತುಗಳನ್ನು ನಿಲ್ಲಿಸಿಯಾಗಿತ್ತು !!!

- Advertisement -

ಅಭಿಮನ್ಯುವಿನ ಬಾಲ್ಯದ ಜೀವನ
ತನ್ನ ಬಾಲ್ಯವನ್ನು ಅಭಿಮನ್ಯು ದ್ವಾರಕೆಯಲ್ಲಿ ತನ್ನ ತಾಯಿಯ ಆರೈಕೆಯಲ್ಲಿಯೇ ಕಳೆದ. ಆಗ ಪಾಂಡವರು ಹದಿನಾಲ್ಕು ವರ್ಷದ ವನವಾಸದಲ್ಲಿದ್ದರು. ಅದರಲ್ಲೂ ಕಡೆಯ ಒಂದು ವರ್ಷವನ್ನು ಅಜ್ಞಾತವಾಸದಲ್ಲಿ ಕಳೆಯಬೇಕಿತ್ತು. ಇದಕ್ಕಾಗಿ ಅವರು ವಿರಾಟರಾಜನ ರಾಜ್ಯದಲ್ಲಿ ಆಶ್ರಯ ಪಡೆದರು. ಈ ಅವಧಿ ಕಳೆದ ಬಳಿಕ ತನ್ನ ಬಳಿ ಅದುವರೆಗೆ ಇದ್ದವರು ಪಾಂಡವರೇ ಎಂದು ಅರಿತು ಸಂತುಷ್ಟನಾದ ವಿರಾಟ ರಾಜ ತನ್ನ ಮಗಳಾದ ಉತ್ತರೆಯನ್ನು ಅರ್ಜುನನಿಗೆ ವಿವಾಹಮಾಡಿಕೊಡಲು ಮುಂದಾದ. ಆದರೆ ಆ ಹೊತ್ತಿಗೆ ಬಹಳಷ್ಟು ವಯಸ್ಕನಾಗಿದ್ದ ಅರ್ಜುನ ಉತ್ತರೆಯನ್ನು ಮಗಳಂತೆ ಕಂಡು ಆ ಕೊಡುಗೆಯನ್ನು ತನ್ನ ಬದಲಿಗೆ ತನ್ನ ಮಗ ಅಭಿಮನ್ಯುವಿಗಾಗಿ ಸ್ವೀಕರಿಸಿದ.

ಉತ್ತರೆಯನ್ನು ಪತ್ನಿಯಾಗಿ ಸ್ವೀಕರಿಸಿದ ಅಭಿಮನ್ಯು
ತಂದೆಯ ಅಣತಿಯಂತೆ ಅಭಿಮನ್ಯು ಉತ್ತರೆಯನ್ನು ಅತಿ ಕಡಿಮೆ ವಯಸ್ಸಿನಲ್ಲಿ ಪತ್ನಿಯಾಗಿ ಸ್ವೀಕರಿಸಿದ. ಆದರೆ ವಿಧಿಯಾಟವೇ ಬೇರೆಯಾಗಿತ್ತು. ಏಕೆಂದರೆ ಆತನ ವಿವಾಹದ ಕೆಲವೇ ದಿನಗಳಲ್ಲಿ ಪಾಂಡವರ ಮತ್ತು ಕೌರವರ ನಡುವೆ ಕುರುಕ್ಷೇತ್ರ ಯುದ್ದ ಪ್ರಾರಂಭವಾಗಿತ್ತು. ಆಗ ಅಭಿಮನ್ಯುವಿಗೆ ತಂದೆ ಅರ್ಜುನನೊಂದಿಗಾಗಲೀ ಪತ್ನಿ ಉತ್ತರೆಯೊಂದಿಗಾಗಲೀ ಮಾತನಾಡುವಷ್ಟು ವ್ಯವಧಾನವಾಗಲೀ ಕಾಲಾವಕಾಶವಾಗಲೀ ಅಭಿಮನ್ಯುವಿನಲ್ಲಿ ಇರಲಿಲ್ಲ. ಕಾರಣ ಚಿಕ್ಕ ಹುಡುಗ ಅಭಿಮನ್ಯು ಯುದ್ಧಕ್ಕೆ ಹೋಗಲು ಹೊರಟು ನಿಂತಿದ್ದ. ಇನ್ನೂ ಎಳೆಯ ವಯಸ್ಸಿನ ಅಭಿಮನ್ಯುವನ್ನು ಯುದ್ಧದಿಂದ ವಿಮುಖನನ್ನಾಗಿಸಲು ಎಲ್ಲರೂ ಪ್ರಯತ್ನಪಟ್ಟರೂ ಜನ್ಮತಃ ಶೂರನಾಗಿದ್ದ ಅಭಿಮನ್ಯು ಯಾರ ಮಾತನ್ನೂ ಕೇಳದೇ ಯುದ್ಧಕ್ಕೆ ತೆರಳಲು ಸಿದ್ಧನಾಗಿದ್ದ. ರಣರಂಗದಲ್ಲಿ ಇದ್ದವರಾರೂ ಇವನ ವಯಸ್ಸಿನವರಾಗಿರಲಿಲ್ಲ. ಇವನಿಗಿಂತ ವಯಸ್ಸಿನಲ್ಲಿ – ಅನುಭವದಲ್ಲಿ ಸಾಕಷ್ಟು ಹಿರಿಯರೂ ಮತ್ತು ಯುದ್ಧದ ಸೂಕ್ಷ್ಮ ವಿಷಯಗಳನ್ನು ಅರಿತ ಪರಾಕ್ರಮಿಗಳೇ ಇದ್ದರು. ಇದನ್ನು ಅರಿತೂ ಮನೆಯಲ್ಲಿರಲು ಇಚ್ಛಿಸದ ಅಭಿಮನ್ಯು ವೀರಾವೇಶದಿಂದ ರಣರಂಗಕ್ಕೆ ಹೊರಟೇಬಿಟ್ಟ.

ಬೆಚ್ಚಿ ಬಿದ್ದ ಕೌರವರು
ಅಭಿಮನ್ಯುವಿನಂತಹ ಎಳೆಚಿಗರೆಯನ್ನು ನಿರೀಕ್ಷಿಸಿರದ ಕೌರವರು ಈ ಚಿಕ್ಕ ಹುಡುಗ ನಮ್ಮಂತಹ ಪರಾಕ್ರಮಿಗಳನ್ನು ಏನು ತಾನೇ ಮಾಡಲು ಸಾಧ್ಯ ಎಂಬ ಉಡಾಫೆಯಿಂದ ಬೇರೆ ಪರಾಕ್ರಮಿಗಳತ್ತ ತಮ್ಮ ಚಿತ್ತ ಹರಿಸಿದ್ದೇ ಅವರಿಗೆ ಭಾರಿಯಾಗಿತ್ತು. ಏಕೆಂದರೆ ನುರಿತ ಪರಾಕ್ರಮಿಗಳಿಗೆ ಯಾವುದೇ ರೀತಿಯಲ್ಲಿ ಕಡಿಮೆಯಿಲ್ಲದಂತೆ ಹೋರಾಡುತ್ತಾ ಕೊಂಚ ಹೊತ್ತಿನಲ್ಲಿಯೇ “ಈತ ಸಾಮಾನ್ಯ ಪೋರನಲ್ಲ, ವೀರಾಧಿವೀರ” ಎಂಬುದನ್ನು ಕೌರವರಿಗೆ ಮನದಟ್ಟು ಮಾಡಿಸಿಬಿಟ್ಟ ಆ ಪುಟಾಣಿಪೋರ.

ಚಕ್ರವ್ಯೂಹವನ್ನು ಭೇದಿಸುವ ರಹಸ್ಯ
ಕುರುಕ್ಷೇತ್ರ ಯುದ್ಧದ ಹದಿಮೂರನೆಯ ದಿನ, ಅರ್ಜುನ ತನ್ನ ಯುದ್ಧದ ತಯಾರಿಯಲ್ಲಿ ವ್ಯಸ್ತನಾಗಿದ್ದ. ಇತ್ತ ವಿರೋಧಿಪಡೆಯಲ್ಲಿ ಕೌರವರ ಸೇನಾಧಿಪತಿಯಾಗಿದ್ದ ದ್ರೋಣಾಚಾರ್ಯರು ಅಂದು ಚಕ್ರವ್ಯೂಹವನ್ನು ರಚಿಸುವ ಬಗ್ಗೆ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದರು. ಈ ಚಕ್ರವ್ಯೂಹವನ್ನು ಭೇದಿಸಲು ಕೇವಲ ಅರ್ಜುನನಿಗೊಬ್ಬನಿಂದ ಮಾತ್ರ ಸಾಧ್ಯ ಎಂಬ ವಿಷಯವನ್ನು ಅವರು ಚೆನ್ನಾಗಿ ಅರಿತಿದ್ದರು. ಗುರುಗಳು ಚಕ್ರವ್ಯೂಹ ರಚಿಸುತ್ತಿರುವ ಬಗ್ಗೆ ಮಾಹಿತಿ ಪಡೆದ ಯುಧಿಷ್ಟಿರ ಕೊಂಚ ಅಧೀರನಾದ. ಏಕೆಂದರೆ ಆ ಹೊತ್ತಿನಲ್ಲಿ ಅರ್ಜುನ ಚಕ್ರವ್ಯೂಹ ಭೇದಿಸಲು ಪಾಂಡವರಿಗೆ ಅಲಭ್ಯನಾಗಿದ್ದ. ಅಂದರೆ ಆ ದಿನ ಅರ್ಜುನ ರಣಾಂಗಣದ ಬೇರೆ ಕಡೆ ಯುದ್ಧನಿರತನಾಗಿದ್ದ. ಇದರಿಂದ ಚಿಂತಾಕ್ರಾಂತನಾದ ಯುಧಿಷ್ಟಿರ ಬೇರೆ ಉಪಾಯವಿಲ್ಲದೇ ಅಭಿಮನ್ಯುವಿನತ್ತ ತಿರುಗಿ ಚಕ್ರವ್ಯೂಹ ಭೇದಿಸಲು ಸಹಾಯ ಮಾಡುವೆಯಾ ಎಂದು ಯಾಚಿಸಿದ.

ನಿನ್ನ ಜೊತೆ ನಾವು ಇದ್ದೇವೆ…!
ಅಭಿಮನ್ಯುವು ತನ್ನ ತಂದೆ ಅರ್ಜುನನಿಂದ ಹಾಗೂ ಮಾವ ಕೃಷ್ಣನಿಂದ ಚಕ್ರವ್ಯೂಹ ಭೇದಿಸುವ ರಹಸ್ಯವನ್ನು ಪಡೆದುಕೊಂಡಿದ್ದುದು ಯುಧಿಷ್ಟಿರನಿಗೆ ಗೊತ್ತಿತ್ತು. ಆದರೆ ತಾನು ಚಕ್ರವ್ಯೂಹವನ್ನು ಭೇದಿಸಿ ಒಳಹೋಗುವ ರಹಸ್ಯವನ್ನು ಮಾತ್ರ ಬಲ್ಲೆನೆಂದೂ ಹೊರಬರುವ ರಹಸ್ಯ ತನಗೆ ಗೊತ್ತಿಲ್ಲವೆಂದೂ ಅಭಿಮನ್ಯು ದೊಡ್ಡಪ್ಪನಿಗೆ ತಿಳಿಸಿದ. ಆದರೆ ನಿರ್ವಾಹವಿಲ್ಲದೇ ಯುಧಿಷ್ಟಿರ ನೀನು ಒಮ್ಮೆ ಚಕ್ರವ್ಯೂಹವನ್ನು ಭೇದಿಸಿ ಒಳನುಗ್ಗು, ನಿನ್ನ ಹಿಂದೆಯೇ ನಾವೆಲ್ಲಾ ಬರುತ್ತೇವೆ, ಎಲ್ಲರೂ ಸೇರಿ ಈ ಚಕ್ರವ್ಯೂವಹನ್ನೇ ಧೂಳೀಪಟ ಮಾಡಿಬಿಡೋಣ, ಆಗ ಹೊರಬರಲು ಯಾವುದಾದರೂ ದಾರಿ ಸಿಕ್ಕೇ ಸಿಗುತ್ತದೆ ಎಂದ.

ಚಕ್ರವ್ಯೂಹವನ್ನು ಲೀಲಾಜಾಲವಾಗಿ ಭೇದಿಸಿದ ಅಭಿಮನ್ಯು
ತನ್ನ ದೊಡ್ಡಪ್ಪ ಯುಧಿಷ್ಟಿರನ ಈ ಮಾತುಗಳಿಂದ ಪ್ರೇರಿತನಾದ ಅಭಿಮನ್ಯು ತಕ್ಷಣ ಪಾಂಡವರ ಸೇನಾ ತುಕಡಿಯ ನೇತೃತ್ವ ವಹಿಸಿ ದ್ರೋಣಾಚಾರ್ಯರ ಚಕ್ರವ್ಯೂಹದತ್ತ ಧಾವಿಸಿದ. ಆದರೆ ದ್ರೋಣಾಚಾರ್ಯರು ಈ ಯುಕ್ತಿಯನ್ನು ಮೊದಲೇ ಊಹಿಸಿದ್ದರು. ಚಕ್ರವ್ಯೂಹದ ಮೊದಲ ವ್ಯೂಹವನ್ನು ಲೀಲಾಜಾಲವಾಗಿ ಅಭಿಮನ್ಯು ಭೇದಿಸಿ ಒಳನುಗ್ಗುತ್ತಿದ್ದಂತೆಯೇ ದ್ರೋಣಾಚಾರ್ಯರು ಇತ್ತ ಬೇರೆ ಯಾರೂ ಒಳಗೆ ನುಗ್ಗದಂತೆ ಚಕ್ರವ್ಯೂಹವನ್ನು ಪುನಃ ಮುಚ್ಚಿಬಿಡಲು ಸಫಲರಾದರು.

ಒಬ್ಬಂಟಿಯಾಗಿ ಸಿಕ್ಕಿ ಬಿದ್ದ ಅಭಿಮನ್ಯು
ಇತ್ತ ಚಕ್ರವ್ಯೂಹದೊಳಗೆ ಒಬ್ಬಂಟಿಯಾದ ಅಭಿಮನ್ಯು ಕೌರವರಿಗೆ ಸುಲಭವಾಗಿ ಸಿಕ್ಕಿಬಿದ್ದ. ಅತ್ತ ತಮ್ಮ ಮಾತಿನಂತೆ ಒಳನುಗ್ಗಲು ಅಸಹಾಯಕರಾದ ಯುಧಿಷ್ಟಿರ ಮತ್ತು ಪಾಂಡವಸೈನ್ಯ ಏನೂ ಮಾಡಲಾಗದೇ ಕೈ ಕೈ ಹಿಸುಕಿಕೊಳ್ಳುವ ಸ್ಥಿತಿಯಲ್ಲಿತ್ತು. ಒಳಗೆ ಅಭಿಮನ್ಯುವನ್ನು ಕೌರವರ ಪ್ರಮುಖರಾದ ಕರ್ಣ, ದುರ್ಯೋಧನ, ದುಃಶಾಸನ, ದ್ರೋಣಾಚಾರ್ಯರು, ಅಶ್ವತ್ಥಾಮ ಮೊದಲಾದ ಮಹಾ ಪರಾಕ್ರಮಿಗಳು ಸುತ್ತುವರೆದರು.

ಅಭಿಮನ್ಯುವಿನ ಪರಾಕ್ರಮವನ್ನು ಕೊಂಡಾಡಿದ ದ್ರೋಣಾಚಾರ್ಯರು
ತನಗಿಂತಲೂ ವಯಸ್ಸಿನಲ್ಲಿಯೂ, ಶೌರ್ಯದಲ್ಲಿಯೂ, ಯುದ್ಧದ ಅನುಭವದಲ್ಲಿಯೂ ಸಾಕಷ್ಟು ಹಿರಿಯರಾಗಿದ್ದ ಎಲ್ಲರ ಎದುರು ಅಭಿಮನ್ಯು ಧೃತಿಗೆಡದೇ ವೀರಾವೇಶದಿಂದ ಹೋರಾಡಿದ. ತನ್ನ ವಯಸ್ಸಿಗೂ ಮಿಗಿಲಾದ ಪರಾಕ್ರಮವನ್ನೂ ಶೌರ್ಯವನ್ನೂ ಮೆರೆದ. ತನ್ನ ಮಾವ ಕೃಷ್ಣನಿಂದ ಕಲಿತ ಎಲ್ಲಾ ವರಸೆ ವಿದ್ಯೆಗಳನ್ನು ಆ ಸಮಯದಲ್ಲಿ ಉಪಯೋಗಿಸಿಕೊಂಡ. ಈ ಪುಟಾಣಿಯ ಶೌರ್ಯವನ್ನು ಕಂಡು ಅಂದು ಇಡಿಯ ಕೌರವ ಸೇನೆಯೇ ದಂಗಾಗಿತ್ತು. ಸ್ವತಃ ದ್ರೋಣಾಚಾರ್ಯರೇ ವೀರಅಭಿಮನ್ಯುವಿನ ಪರಾಕ್ರಮವನ್ನು ಹಾಡಿಹೊಗಳಿ ಕೊಂಡಾಡಿದರು.

ದುರ್ಯೋಧನನ ಕೋಪ ನೆತ್ತಿಗೇರಿತು
ಚಕ್ರವ್ಯೂಹದೊಳಗಿದ್ದೂ, ತನ್ನ ಹಾಗೂ ತನ್ನ ಕಡೆಯ ಮಹಾ ಘಟಾನುಘಟಿಗಳ ಎದುರು ನಿಂತು ಘರ್ಜಿಸುತ್ತಿರುವ ಪಾಂಡವರ ಕಡೆಯ ಕೇವಲ ಒಬ್ಬ ಬಾಲಕನನ್ನು ಸೋಲಿಸಲಾಗದುದನ್ನು ಕಂಡ ದುರ್ಯೋಧನ ಕೋಪಾವಿಷ್ಟನಾದ. ಅದರಲ್ಲೂ ದ್ರೋಣಾಚಾರ್ಯರೇ ವಿರೋಧಿಪಡೆಯ ಹುಡುಗನನ್ನು ಹೊಗಳುತ್ತಿರುವುದನ್ನು ಕೇಳಿ ಉರಿಯುವ ಬೆಂಕಿಗೆ ತುಪ್ಪ ಸುರಿದಂತಾದ. ತಕ್ಷಣ ದ್ರೋಣಾಚಾರ್ಯರತ್ತ ತೆರಳಿ
“ಈ ಹೊತ್ತು ಹುಡುಗನ ಪರಾಕ್ರಮವನ್ನು ಕೊಂಡಾಡುವುದಲ್ಲ, ಬದಲಿಗೆ ಯುದ್ದವನ್ನು ಜಯಿಸುವುದಾಗಿದೆ, ನಿಮ್ಮ ಧರ್ಮವನ್ನು ನಿಭಾಯಿಸಿ” ಎಂದು ಅಪ್ಪಣೆ ನೀಡಿದ. ಇನ್ನೂ ಎಳೆಯನಾಗಿದ್ದ ಅಭಿಮನ್ಯುವಿನತ್ತ ಕೊಂಚ ಕರುಣೆಯ ಭಾವ ಮೂಡಿದರೂ ಮರುಕ್ಷಣ ತಮ್ಮ ಧರ್ಮವನ್ನು ನೆನಪಿಸಿಕೊಂಡ ದ್ರೋಣಾಚಾರ್ಯರು ತಡಮಾಡದೇ ಚಕ್ರವ್ಯೂಹದೊಳಗೆ ಸಿಕ್ಕಿಬಿದ್ದದ್ದ ವೈರಿಯ ತೊಡೆಯನ್ನು ಮುರಿಯುವತ್ತ ತಮ್ಮ ಚಿತ್ತವನ್ನು ಹರಿಸಿದರು.

ಚಕ್ರವ್ಯೂಹದ ನಿಯಮದಂತೆ
ಚಕ್ರವ್ಯೂಹದ ನಿಯಮದಂತೆ ಒಳಗೆ ಸಿಕ್ಕಿಬಿದ್ದ ಯೋಧನನ್ನು ಹಲವರು ಸುತ್ತುವರೆದು ನಿಧಾನವಾಗಿ ಆತನ ಮೇಲೆ ಹತೋಟಿಯನ್ನು ಸಾಧಿಸಬೇಕು. ಆದರೆ ಅವರಿಗೆ ಅವಕಾಶ ಕೊಡದೇ ಅಭಿಮನ್ಯು ಇನ್ನಷ್ಟು ಪರಾಕ್ರಮದಿಂದ ಹೋರಾಡಿದ. ಆಗ ಕುಟಿಲತೆಯಿಂದ ಹಿಂದಿನಿಂದ ಬಂದ ದ್ರೋಣಾಚಾರ್ಯರು ಮತ್ತು ಕೃಪ ಆತನ ಕುದುರೆಗಳನ್ನು ಮತ್ತು ಸಾರಥಿಯನ್ನು ಕೊಂದು, ಆತನ ರಥವನ್ನು ಹಾಳುಗೆಡವಿ ಉರುಳಿಸಿದ ಬಳಿಕ ಅಭಿಮನ್ಯು ನೆಲದ ಮೇಲೆ ಇಳಿದು ಕೆಳಗೆ ನಿಂತೇ ಹೋರಾಟವನ್ನು ಮುಂದುವರೆಸಿದ.
ಆಗ ಕರ್ಣ ಯುದ್ಧ ನಿಯಮವನ್ನು ಮೀರಿ ಅಭಿಮನ್ಯುವಿನ ಧನಸ್ಸನ್ನು ತುಂಡರಿಸಿದ. ಆದರೂ ಛಲಬಿಡದ ಅಭಿಮನ್ಯು ಖಡ್ಗದಿಂದ ಹೋರಾಟ ಮುಂದುವರೆಸಿದ. ಕಡೆಗೊಂದು ಹೊತ್ತಿನಲ್ಲಿ ಕೌರವರಿಂದ ಆತನ ಖಡ್ಗವೂ ಮುರಿಯಿತು.
ಬಳಿಕ ಹೆಚ್ಚೂ ಕಡಿಮೆ ಅವನಷ್ಟೇ ತೂಕವಿದ್ದ ಗದೆಯಿಂದ ಹೋರಾಟ ಮುಂದುವರೆಸಿದ.

ಅಭಿಮನ್ಯುವಿನ ಆರ್ಭಟಕ್ಕೆ ಬೆಚ್ಚಿ ಬಿದ್ದ ಕೌರವಪಡೆ
ಅಭಿಮನ್ಯುವು ದುಃಶಾಸನನ ಮಗ ದುರ್ಮಾಸನನೊಡನೆ ಭೀಕರ ಗದಾಕಾಳಗ ನಡೆಸಿದ. ಈ ಕಾಳಗದಲ್ಲಿ ಇಬ್ಬರೂ ತೀರಾ ದಣಿದು ಕೆಳಕ್ಕೆ ಬಿದ್ದರು. ಆದರೆ ಮೊದಲು ಮೇಲೆದ್ದ ದುರ್ಮಾಸನ ಇನ್ನೂ ಮೇಲೇಳುತ್ತಿದ್ದ ಅಭಿಮನ್ಯುವಿನ ತಲೆಗೆ ಹೊಡೆದು ಕಿರೀಟವನ್ನು ಬೀಳಿಸಿದ. ಆದರೂ ಎದೆಗುಂದದ ಅಭಿಮನ್ಯು ತನ್ನೆಲ್ಲಾ ಉಳಿದ ಶಕ್ತಿಯನ್ನು ಉಪಯೋಗಿಸಿ ಗದೆಯನ್ನು ಬೀಸಿ ದುರ್ಮಾಸನನನ್ನು ವಧಿಸಿದ. ಆಗ ಕೋಪೋದ್ರಿಕ್ತರಾದ ಕೌರವರು ಪುತ್ರ ಅಭಿಮನ್ಯುವಿನ ಗದೆಯನ್ನೂ ಮುರಿದರು.
ಬಳಿಕ ಆ ಬಾಲಕ ಈಟಿಯಿಂದ ಹೋರಾಡಿದ.
ಕಡೆಗೆ ಈಟಿಯೂ ಮುರಿದು ಚೂರಾದ ಬಳಿಕ ಯಾವುದೇ ಆಯುಧ ಆತನಲ್ಲಿ ಉಳಿಯಲಿಲ್ಲ. ಕಡೇ ಗಳಿಗೆಯಲ್ಲಿ ಆ ವೀರಪುತ್ರ ಅಲ್ಲೇ ಮುರಿದು ಬಿದ್ದಿದ್ದ ರಥದ ಗಾಲಿಯನ್ನೇ ಆಯುಧದಂತೆ ಉಪಯೋಗಿಸಿ ಮೇಲೆತ್ತಿ ಗರಗರನೆ ತಿರುಗಿಸುತ್ತಾ ಹಲವು ಕೌರವರನ್ನು ವಧಿಸಿಬಿಟ್ಟ

ನಿರಾಯುಧನಾಗಿದ್ದ ಅಭಿಮನ್ಯುವಿನ ಮೇಲೆ ಕರ್ಣ ದಾಳಿ ಮಾಡಿಯೇ ಬಿಟ್ಟ
ಕಟ್ಟಕಡೆಗೆ ಆತನ ದುರಾದೃಷ್ಟಕ್ಕೆ ಆ ಗಾಲಿಯೂ ಮುರಿದುಹೋಯಿತು. ಈಗ ಅಭಿಮನ್ಯು ನಿರಾಯುಧನಾಗಿದ್ದ. ಬರಿಗೈಯಿಂದಲೇ ಕೌರವರ ಮೇಲೆ ಹರಿಹಾಯುತ್ತಿದ್ದ. ಯುದ್ಧ ಮಾಡಲು ಕೈಯಲ್ಲಿ ಯಾವುದೇ ಆಯುಧವಿಲ್ಲದೆ ನೆಲದ ಮೇಲೆ ಅಸಹಾಯಕನಾಗಿ ನಿಂತಿದ್ದ ವೀರಅಭಿಮನ್ಯು. ಕುರುಕ್ಷೇತ್ರ ಯುದ್ಧದ ನಿಯಮದಂತೆ ನಿರಾಯುಧನ ಮೇಲೆ ಧಾಳಿ ಮಾಡುವಂತಿಲ್ಲ. ಆದರೆ ಆ ಹೊತ್ತಿನಲ್ಲಿ ಕೌರವರಿಗೆ ಯುದ್ಧದ ನಿಯಮಕ್ಕಿಂತಲೂ ಯುದ್ಧದ ಜಯವೇ ಮುಖ್ಯವಾಗಿತ್ತು. ಆ ಕ್ಷಣಕ್ಕೆ ವೀರಅಭಿಮನ್ಯುವನ್ನು ಕೊಲ್ಲುವುದೇ ಅವರ ಮುಖ್ಯ ಗುರಿಯಾಗಿತ್ತು. ದುರ್ಯೋಧನನ ಆಜ್ಞೆಯಂತೆ ನಿರಾಯುಧನಾಗಿದ್ದ ಅಭಿಮನ್ಯುವಿನ ಮೇಲೆ ಧಾಳಿ ಮಾಡಿದ ಕರ್ಣ ಮೊದಲು ಖಡ್ಗದಿಂದ ಇರಿದ, ಮತ್ತೆಮತ್ತೆ ಆ ವೀರಪುತ್ರನ ದೇಹದಲ್ಲೆಲ್ಲಾ ತನ್ನ ಖಡ್ಗದಿಂದ ಇರಿದ ಕರ್ಣ ಪಾಂಡವರ ಅತ್ಯಂತ ಕಿರಿಯ ವೀರಯೋಧನ ಸಾವಿಗೆ ಕಾರಣವಾದ.

ಅರ್ಜುನ ಕರ್ಣನ ಮೂವರು ಮಕ್ಕಳನ್ನು ವಧಿಸಿದ್ದಕ್ಕೆ ಪ್ರತಿಯಾಗಿ ಕರ್ಣನು ಅಭಿಮನ್ಯುವನ್ನು ಕೊಂದು ಈ ರೀತಿಯಾಗಿ ಸೇಡು ತೀರಿಸಿಕೊಂಡ.

ಡಾ. ಹೇಮಂತ ಚಿನ್ನು
ಕರ್ನಾಟಕ ಶಿಕ್ಷಕರ ಬಳಗ

- Advertisement -
- Advertisement -

Latest News

ಸಮುದ್ರ ವಿಹಾರ ತಂದಿತು ಜೀವಕ್ಕೆ ಕುತ್ತು; ನೋಡನೋಡುತ್ತಲೇ ಮುಳುಗಿದ ಬೋಟ್

ಗೋವಾದಂಥ ಪ್ರವಾಸಿ ತಾಣಗಳಿಗೆ ಪ್ರವಾಸಿಗರು ಭೇಟಿ ಕೊಟ್ಟಾಗ ಅಲ್ಲಿನ ಸಮುದ್ರದಲ್ಲಿ ವಿಹಾರ ಮಾಡುವುದು ಅತ್ಯಂತ ಹೆಚ್ಚಿನ ಬೇಡಿಕೆಯಾಗಿರುತ್ತದೆ. ಹಾಗೆಯೇ ಗೋವಾದಲ್ಲಿ ನಡೆದಿದೆಯೆಂದು ಹೇಳಲಾದ ಬೋಟ್ ಪಯಣ ಅದರ...
- Advertisement -

More Articles Like This

- Advertisement -
close
error: Content is protected !!
Join WhatsApp Group