spot_img
spot_img

ಫೆ.8 ರಿಂದ 10 ರವರೆಗೆ ಪುರಂದರ ದಾಸರ ಆರಾಧನಾ ಮಹೋತ್ಸವ

Must Read

- Advertisement -

ಶ್ರೀನಿವಾಸ ಉತ್ಸವ ಬಳಗದಿಂದ ಬೆಂಗಳೂರು ಬಸವನಗುಡಿ ಉತ್ತರಾದಿ ಮಠದ ಆವರಣದಲ್ಲಿ ಫೆಬ್ರವರಿ 08 ರಿಂದ 10ರವರೆಗೆ  ಪುರಂದರ ದಾಸರ ಆರಾಧನಾ ಮಹೋತ್ಸವ ಗಾನ- ಜ್ಞಾನ ಯಜ್ಞ;

ಖ್ಯಾತ ವಿದ್ವಾಂಸ ಡಾ. ವ್ಯಾಸನಕೆರೆ ಪ್ರಭಂಜನಾಚಾರ್ಯರವರಿಗೆ ‘ಮಧ್ವ ಪುರಂದರ’ ಪ್ರಶಸ್ತಿ ಮತ್ತು ಖ್ಯಾತ ಹಿಂದೂಸ್ತಾನಿ ಗಾಯಕ ಡಾ. ಪಂ. ನಾಗರಾಜರಾವ್ ಹವಾಲ್ದಾರ್ ಅವರಿಗೆ ‘ಪುರಂದರ ಸಂಗೀತ ರತ್ನ’ ಪ್ರಶಸ್ತಿ ಹಾಗೂ ಸಾಧಕರಿಗೆ ‘ಹರಿದಾಸಾನುಗ್ರಹ ’ಪ್ರಶಸ್ತಿ ಪ್ರದಾನ

ದಾಸ ಸಾಹಿತ್ಯ ಪ್ರಚಾರ ಮಾಧ್ಯಮ – ಶ್ರೀನಿವಾಸ ಉತ್ಸವ ಬಳಗದಿಂದ ಶ್ರೀ ಉತ್ತರಾದಿ ಮಠಾಧೀಶರಾದ ಪೂಜ್ಯ ಶ್ರೀ ಸತ್ಯಾತ್ಮತೀರ್ಥ ಶ್ರೀಪಾದರ ಅನುಗ್ರಹದೊಂದಿಗೆ ದಾಸಸಾಹಿತ್ಯದ ಪಿತಾಮಹ ಶ್ರೀಪುರಂದರದಾಸರ ಬೃಹತ್ ಏಕಶಿಲಾ ವಿಗ್ರಹವನ್ನು ಬೆಂಗಳೂರು ನಗರದ ಬಸವನಗುಡಿಯ ನ್ಯಾಷನಲ್ ಕಾಲೇಜು ಎದುರಿನ ಶ್ರೀಮದ್ ಉತ್ತರಾದಿಮಠದ  ಶ್ರೀ ದಿಗ್ವಿಜಯ ಲಕ್ಷ್ಮೀನರಸಿಂಹ ದೇವಸ್ಥಾನದ ಆವರಣದಲ್ಲಿ ಪ್ರತಿಷ್ಠಾಪಿಸಲಾಗಿದೆ.

- Advertisement -

ಇದೀಗ ಪ್ರತಿಷ್ಠಾಪನೆಯ ನಾಲ್ಕನೇ ವರ್ಷದ ಸಂಭ್ರಮದಲ್ಲಿ ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕಲರ್ಬುಗಿಯ ದಾಸ ಸೌರಭ, ಶ್ರೀಮದ್ವಾದಿರಾಜ ಆರಾಧನಾ ಟ್ರಸ್ಟ್; ನಾದವೈಭವ ಸಂಗೀತ ವಿದ್ಯಾಲಯ, ಶಿವಮೊಗ್ಗದ ಶ್ರೀ ಗುರುಗುಹ ಸಂಗೀತ ಮಹಾವಿದ್ಯಾಲಯ ಮತ್ತು ಅನುಗ್ರಹ ಸಂಗೀತ ಮಹಾವಿದ್ಯಾಲಯದ ಸಹಯೋಗದಲ್ಲಿ ಇದೇ ಫೆಬ್ರವರಿ 08ರಿಂದ 10ರವರೆಗೆ ‘ಪುರಂದರದಾಸರ ಆರಾಧನಾ ಮಹೋತ್ಸವ’ವನ್ನು ಗಾನ-ಜ್ಞಾನ ಯಜ್ಞದೊಂದಿಗೆ ಆಚರಿಸಲಾಗುವುದು.

ಫೆಬ್ರವರಿ 08 ಗುರುವಾರದಂದು ಬೆಳಿಗ್ಗೆ 9.00ರಿಂದ ವಿದ್ವಾನ್ ಆರ್.ಕೆ.ಪದ್ಮನಾಭ ಮತ್ತು ಶಿಷ್ಯವೃಂದದಿಂದ ಪುರಂದರದಾಸರ ಕೃತಿಗಳ ಗೋಷ್ಠಿ ಗಾಯನದೊಂದಿಗೆ ಪುರಂದರ ದಾಸರ ಬೃಹತ್ ಶಿಲಾ ವಿಗ್ರಹಕ್ಕೆ  ವಿಶೇಷ ಅಭಿಷೇಕದೊಂದಿಗೆ ಚಾಲನೆ.

- Advertisement -

ಸಂಜೆ 5.45ಕ್ಕೆ  ಪೂಜ್ಯ ಶ್ರೀ ಸುವಿದ್ಯೇಂದ್ರ ತೀರ್ಥ ಶ್ರೀಪಾದರು ಸಭಾ ಕಾರ್ಯಕ್ರಮವನ್ನು ಉದ್ಘಾಟಿಸುವರು. ಖ್ಯಾತ ವಿದ್ವಾಂಸ, ಶ್ರೀವ್ಯಾಸ ಮಧ್ವ ಸೇವಾ ಪ್ರತಿಷ್ಠಾನದ ನಿರ್ದೇಶಕ ಡಾ. ವ್ಯಾಸನಕೆರೆ ಪ್ರಭಂಜನಾಚಾರ್ಯರವರಿಗೆ ಪ್ರತಿಷ್ಠಿತ ಮಧ್ವ ಪುರಂದರ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುವುದು. 

ಸಮಾರಂಭದ ಮುಖ್ಯ ಅತಿಥಿಗಳಾಗಿ ಜಯತೀರ್ಥ ವಿದ್ಯಾಪೀಠದ ಕುಲಪತಿ ಪಂ.ಗುತ್ತಲ್ ರಂಗಾಚಾರ್, ಪ್ರಾಂಶುಪಾಲ ಡಾ.ಸತ್ಯಧ್ಯಾನಾಚಾರ್ ಕಟ್ಟಿ, ಶ್ರೀವಾರಿ ಫೌಂಡೇಷನ್‍ನ ಎಸ್.ವೆಂಕಟೇಶಮೂರ್ತಿ ಮತ್ತು ಖ್ಯಾತ ಗಾಯಕ ಗಾನಕಲಾಭೂಷಣ ವಿದ್ವಾನ್ ಆರ್.ಕೆ.ಪದ್ಮನಾಭರವರು ಭಾಗವಹಿಸುವರು.

ಆಧ್ಯಾತ್ಮಿಕ ಮತ್ತು ಸಮಾಜಸೇವೆಗಾಗಿ ವಟ್ಟಂಗಾಡ್ ಕೃಷ್ಣಾಚಾರ್ಯ; ಪತ್ರಿಕೋದ್ಯಮ-ಹಿರಿಯ ಪತ್ರಕರ್ತ ಶೇಷಚಂದ್ರಿಕ ಮತ್ತು ದಾಸಸಾಹಿತ್ಯ ಪ್ರಸರಣ-ತಂತ್ರಜ್ಞ ದಂಡಿನ್ ಅನಂತರಾವ್‍ರವರಿಗೆ ಹರಿದಾಸ ಅನುಗ್ರಹ ಪ್ರಶಸ್ತಿ ನೀಡಿ ಪುರಸ್ಕರಿಸಲಾಗುವುದು. ಖ್ಯಾತ ಹಿಂದೂಸ್ತಾನಿ ಗಾಯಕ ನಿವೃತ್ತ ಐಎಎಸ್ ಅಧಿಕಾರಿ ಡಾ. ಪಂ. ಮುದ್ದುಮೋಹನ್‍ರವರಿಂದ ದಾಸವಾಣ  ನಡೆಯಲಿದೆ.

ಫೆಬ್ರವರಿ 09 ಶುಕ್ರವಾರ ಬೆಳಿಗ್ಗೆ 9.00ರಿಂದ ಮಧ್ಯಾರಾಧನಾ ಮಹೋತ್ಸವದ ಅಂಗವಾಗಿ ಪುರಂದರದಾಸರ ಕುರಿತು ವಿಶೇಷ ಉಪನ್ಯಾಸ ಖ್ಯಾತ ವಾಗ್ಮಿ ಮತ್ತು ಆಧ್ಯಾತ್ಮ ಚಿಂತಕ ಡಾ. ಪಂ. ಆತನೂರು ಭೀಮಸೇನಾಚಾರ್ಯ ನಡೆಸಿಕೊಡುವರು ಮತ್ತು ಖ್ಯಾತ ಗಾಯಕ ಡಾ. ರಾಯಚೂರು ಶೇಷಗಿರಿದಾಸ್‍ರವರಿಂದ ದಾಸರ ಪದಗಳ ಗಾಯನ ಆಯೋಜಿಸಿದೆ. ಪುರಂದರದಾಸರ ವಿಗ್ರಹದ ವೈಭವದ ಮರೆವಣಿಗೆ ನಡೆಯಲಿದೆ.

ಸಂಜೆ 6.00ರಿಂದ ಸಭಾ ಕಾರ್ಯಕ್ರಮದಲ್ಲಿ ದಾಸರ ಚಿಂತನೆಯ ಉಪನ್ಯಾಸ ಉತ್ತರಾಧಿಮಠದ ಕಾರ್ಯ ನಿರ್ವಹಣಾಧಿಕಾರಿಗಳಾದ ಪಂಡಿತ ವಿದ್ಯಾಧೀಶಾಚಾರ್ಯ ಗುತ್ತಲ್ ನಡೆಸಿಕೊಡುವರು. ಮುಖ್ಯ ಅತಿಥಿಗಳಾಗಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಡೋಜ ಡಾ. ಮಹೇಶ ಜೋಶಿ ಮತ್ತು ಗಾಯನ ಸಮಾಜದ ಅಧ್ಯಕ್ಷ ಡಾ. ಎಂ.ಆರ್.ವಿ. ಪ್ರಸಾದ್ ಭಾಗವಹಿಸುವರು. ಖ್ಯಾತ ಹಿಂದೂಸ್ತಾನಿ ಗಾಯಕ ಡಾ. ಪಂ. ನಾಗರಾಜರಾವ್ ಹವಾಲ್ದಾರ್ ಅವರಿಗೆ ‘ಪುರಂದರ ಸಂಗೀತ ರತ್ನ’ ಪ್ರಶಸ್ತಿ ನೀಡಿ ಗೌರವಿಸಲಾಗುವುದು.

ಗುಲಬರ್ಗಾದ ಸಂಶೋಧಕರಾದ ಶ್ರೀಮತಿ ಸುಮಿತ್ರ ಜಯತೀರ್ಥ ಪ್ರತಿನಿಧಿ, ಅಂಕಣಕಾರ ಶ್ರೀಧರ ರಾಯಸಂ ಮತ್ತು ಹಾರ್ಮೋನಿಯಂ ವಾದಕ ಪಂ. ಕೃಷ್ಣ ಹುನಗುಂದರವರಿಗೆ ಹರಿದಾಸ ಅನುಗ್ರಹ ಪ್ರಶಸ್ತಿ ನೀಡಿ ಪುರಸ್ಕರಿಸಲಾಗುವುದು.

ಶ್ರೀ ಗುರುಗುಹ ಸಂಗೀತ ಮಹಾವಿದ್ಯಾಲಯ, ಬೆಂಗಳೂರು ಮತ್ತು ಶಿವಮೊಗ್ಗ ಶ್ರೀ ಅನುಗ್ರಹ ಸಂಗೀತ ಮಹಾವಿದ್ಯಾಲಯ, ಬೆಂಗಳೂರು ಮತ್ತು ತುಮಕೂರು ವಿದ್ಯಾರ್ಥಿಗಳಿಂದ ವಿದ್ವಾನ್ ಶೃಂಗೇರಿ ಹೆಚ್.ಎಸ್. ನಾಗರಾಜ್ ಮತ್ತು ವಿದ್ವಾನ್ ಜೆ.ಎಸ್. ಶ್ರೀಕಂಠಭಟ್ ನೇತೃತ್ವದಲ್ಲಿ ಪುರಂದರದಾಸರ ನವರತ್ನಮಾಲಿಕ ಕೃತಿಗಳ ಗೋಷ್ಠಿ ಗಾಯನ ಪಕ್ಕವಾದ್ಯದಲ್ಲಿ ವಯೋಲಿನ್ ವಿದ್ವಾನ್ ವೆಂಕಟೇಶ್ ಜೋಷಿಯಾರ್ ಮತ್ತು ಮೃದಂಗ ಪಿ.ಎಸ್. ಶ್ರೀಧರ್ ಸಾಥ್ ನೀಡಲಿದ್ದಾರೆ.

ಫೆಬ್ರವರಿ 10 ಶನಿವಾರ ಸಂಜೆ 5.30ರಿಂದ ಸಭಾ ಕಾರ್ಯಕ್ರಮ ಮುಖ್ಯ ಅತಿಥಿಗಳಾಗಿ ಕೋಣನಕುಂಟೆ ಶ್ರೀನಿಧಿ ಶ್ರೀನಿವಾಸ ದೇವಸ್ಥಾನದ ಧರ್ಮದರ್ಶಿ, ಖ್ಯಾತ ಶಿಕ್ಷಣ ತಜ್ಞ ಡಾ. ಕೆ.ಎಸ್. ಸಮೀರ್ ಸಿಂಹ, ಸೇಡಂನ ಹರಿದಾಸ ಸಂಶೋಧಕ ಡಾ. ವಾಸುದೇವ ಅಗ್ನಿಹೋತ್ರಿ ಮತ್ತು ಖ್ಯಾತ ಹೃದ್ರೋಗ ತಜ್ಞ ಡಾ. ವೇಣುಗೋಪಾಲ ರಾಮರಾವ್ ಭಾಗವಹಿಸುವರು. ಶ್ರೀನಿವಾಸ ಲೋಕ ಕಲ್ಯಾಣ ಟ್ರಸ್ಟ್ ಅಧ್ಯಕ್ಷ ಬಿ.ಎನ್. ರಾಜೇಂದ್ರರವರಿಗೆ ಹರಿದಾಸ ಅನುಗ್ರಹ ಪ್ರಶಸ್ತಿ ಪ್ರದಾನ, ಶಶಿಕಲ ನಾಗರಾಜನ್ ನಿರೂಪಣೆಯಲ್ಲಿ ವಿದುಷಿ ಶ್ರೀಮತಿ ಪವಿತ್ರ ವೈಭವರಾವ್‍ರವರಿಂದ ಭರತನಾಟ್ಯ ಖ್ಯಾತ ಸಂಗೀತ ವಿದುಷಿ ಶ್ರೀಮತಿ ಶುಭ ಸಂತೋಷ್‍ರವರ ಗಾಯನ ಮತ್ತು ಖ್ಯಾತ ಉಪನ್ಯಾಸಕಾರ ವಿದ್ವಾನ್ ಶ್ರೀ ಕಲ್ಲಾಪುರ ಪವಮಾನಾಚಾರ್ಯರವರಿಂದ ಸಂಪ್ರವಚನವನ್ನು ಏರ್ಪಡಿಸಲಾಗಿದೆ ಎಂದು ಕಾರ್ಯಕ್ರಮದ ಆಯೋಜಕರಾದ ಶ್ರೀನಿವಾಸ ಉತ್ಸವ ಬಳಗದ ಅಧ್ಯಕ್ಷ ಡಾ. ಟಿ. ವಾದಿರಾಜ್ ತಿಳಿಸಿರುತ್ತಾರೆ.

ಬಾರೋ ಮನೆಗೆ ಗೋವಿಂದಾ…

‘ಬಾರೋ ಮನೆಗೆ ಗೋವಿಂದ’ ಎಂಬ ಶೀರ್ಷಿಕೆಯಿಂದ ಶ್ರೀ ಶ್ರೀನಿವಾಸ ಉತ್ಸವ ಬಳಗವು 2012ರಲ್ಲಿ ನಾಡಿನಾದ್ಯಂತ ಅಧ್ಯಾತ್ಮಿಕ, ಸಾಂಸ್ಕೃತಿಕ, ಸಾಹಿತ್ಯ, ಸಂಗೀತಗಳನ್ನು ಪಸರಿಸುವ ಕೈಂಕರ್ಯದ ಧ್ಯೇಯದಿಂದ ಉದಯವಾಯಿತು. ಆಂದಿನಿಂದ ಇಂದಿನ ಕಾಲಘಟ್ಟದವರೆಗೆ ಉತ್ಸವ ಬಳಗವು ಹರಿದಾಸ ಸಾಹಿತ್ಯ ಪ್ರಚಾರ ಹಾಗೂ ಅದಕ್ಕೆ ಪೂರಕವಾದ ವಿವಿಧ ಚಟುವಟಿಕೆಗಳನ್ನು ಆಭಿಮಾನಿಗಳ ಹಾಗೂ ಹಿತೈಷಿಗಳ ಸಹಕಾರದಿಂದ ಬಹುಯಶಸ್ವಿಯಾಗಿ ನಡೆಸುವ ಸೌಭಾಗ್ಯ ಇವರದ್ದಾಗಿದೆ. ಪ್ರತೀ ವರ್ಷವೂ ದಾಸಶ್ರೇಷ್ಠ ಶ್ರೀ ಪುರಂದರದಾಸರ ಪುಣ್ಯದಿನದ ಸಂದರ್ಭದಲ್ಲಿ ಮೂರು ದಿನಗಳ ಕಾಲ ನಿರಂತರವಾಗಿ ನಡೆಯುವ ಸಂಗೀತ ವಿದ್ವಾಂಸರುಗಳ ಉಪನ್ಯಾಸಗಳು ದಾಸವಾಣ , ಹರಿದಾಸ ಗೋಷ್ಠಿ, ಭಜನೆ, ಪ್ರತಿಭಾನ್ವಿತ ಗಣ್ಯರಿಗೆ ‘ಹರಿದಾಸ ಆನುಗ್ರಹ’ ಪ್ರಶಸ್ತಿ ಸಮಾರಂಭಗಳು ನಾಡಿನಾದ್ಯಂತ ಜನಪ್ರಿಯವಾಗಿವೆ.

ದಾಸ ಸಾಹಿತ್ಯ ಪ್ರಚಾರವಲ್ಲದೇ ಈ ಉತ್ಸವ ಬಳಗವು ವೈಭವೋಪೇತವಾಗಿ ದೇಶದ ಉದ್ದಗಲಕ್ಕೂ ನಡೆಸುವ ಕಾರ್ಯಕ್ರಮ ಶ್ರೀ ಶ್ರೀನಿವಾಸ ಕಲ್ಯಾಣೋತ್ಸವ ಮತ್ತು ಊಂಜಲೋತ್ಸವ’. ತಿರುಮಲೆಯಲ್ಲಿ ಸಾಂಪ್ರದಾಯಕವಾಗಿ ಮತ್ತು ವಿಧಿವತ್ತಾಗಿ ನಡೆಯುವ ಎರಡು ವರ್ಣರಂಜಿತ ಉತ್ಸವಗಳನ್ನು ಸಂದರ್ಭಕ್ಕೆ ಸೂಕ್ತವಾದ ದಾಸರ ಪದಗಳು, ದೇವರ ನಾಮಗಳನ್ನು ಆಳವಡಿಸಿಕೊಂಡು ಪ್ರಸ್ತುತಗೊಳಿಸುವ ಈ ಬಳಗದ ಕಾರ್ಯಕ್ರಮ ಭಕ್ತಜನರ ಮನಸೂರೆಗೊಂಡಿದೆ.

ಶ್ರೀನಿವಾಸ ಬಳಗವು ನಾಡಿನ ಸಂಗೀತ, ಸಾಹಿತ್ಯ, ಸಾಂಸ್ಕøತಿಕ ಪರಂಪರೆಯ ಪ್ರತೀಕವಾಗಿ ‘ಶ್ರೀ ಪುರಂದರದಾಸರ’ ಹತ್ತೊಂಬತ್ತು ಆಡಿ ಎತ್ತರದ ಏಕಶಿಲಾ ಪ್ರತಿಮೆಯನ್ನು ಶ್ರೀಮದ್ ಉತ್ತರಾದಿ ಮಠಾಧೀಶರಾದ ಶ್ರೀ ಶ್ರೀ 1008 ಸತ್ಯಾತ್ಮತೀರ್ಥ ಶ್ರೀಪಾದಂಗಳವರ ಆನುಗ್ರಹದಿಂದ ಬೆಂಗಳೂರು ನಗರದಲ್ಲಿರುವ ಉತ್ತರಾದಿ ಮಠದÀ ಶ್ರೀದಿಗ್ವಿಜಯ ಲಕ್ಷ್ಮೀನರಸಿಂಹ ದೇವಸ್ಥಾನದ ಅವರಣದಲ್ಲಿ 2020ರಲ್ಲಿ ನಾಡಿಗೆ ಈ ಬಳಗದ ವತಿಯಿಂದ ಸಮರ್ಪಣೆ ಮಾಡಲಾಯಿತು. ಈ ಮಹತ್ತರವಾದ ಕಾರ್ಯವನ್ನು ಕಾರ್ಯರೂಪಕ್ಕೆ ತಂದ ಹೆಮ್ಮೆ ಈ ಬಳಗಕ್ಕೆ ಸಲ್ಲುತ್ತದೆ.

ಇಂತಹ ಹೃದಯವನ್ನು ಅರಳಿಸುವ ಸಾಹಿತ್ಯವನ್ನು ತಮ್ಮ ಜೀವನದ ಉಸಿರಾಗಿಸಿಕೊಂಡು, ವೈದಿಕ ಪರಂಪರೆಯಲ್ಲಿರುವ ತತ್ವ ಸಿದ್ದಾಂತಗಳನ್ನು ಮೈಗೂಡಿಸಿಕೊಂಡು ಸಾತ್ವಿಕ ಮಾರ್ಗದಲ್ಲಿ ನಡೆಯುತ್ತ ಶ್ರೀನಿವಾಸನ ಅನುಗ್ರಹಕ್ಕೆ ಪಾತ್ರರಾಗಿ ಶ್ರೀ ಶ್ರೀನಿವಾಸ ಉತ್ಸವ ಬಳಗದ ಪ್ರಮುಖ ರೂವಾರಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಸನ್ಮಾನ್ಯ ಶ್ರೀ ಟಿ. ವಾದಿರಾಜರವರು ಈಗಾಗಲೇ ‘ವೇದರತ್ನ’ ಮುಂತಾದ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡು ಕಳೆದ ಹತ್ತು ವರ್ಷಗಳಿಂದ ‘ಶ್ರೀ ಶ್ರೀನಿವಾಸ ಉತ್ಸವ ಬಳಗ (ರಿ) ದಾಸಸಾಹಿತ್ಯ ಪ್ರಚಾರ ಮಾಧ್ಯಮ ಸಂಘಟನೆಯ ಮೂಲಕ ‘ಶ್ರೀ ಪುರಂದರದಾಸರ ಆರಾಧನಾ ಮಹೋತ್ಸವ’ವನ್ನು ಮಾಡುತ್ತ ಜನಹಿತಕಾರ್ಯ ಮಾಡುತ್ತಿರುವುದು ತುಂಬಾ ಶ್ಲಾಘನೀಯ ವಿಚಾರ.

ವಿದ್ವದ್ವರೇಣ್ಯ, ರಾಷ್ಟ್ರಪತಿ ಪ್ರಶಸ್ತಿ ಪುರಸ್ಕೃತ ವಿದ್ವಾನ್ ಡಾ.ವ್ಯಾಸನಕೆರೆ ಪ್ರಭಂಜನಾಚಾರ್ಯ, ಬೆಂಗಳೂರು

ಮಾಧ್ವಸಮಾಜದ ಅತ್ಯಂತ ಪ್ರಸಿದ್ಧ ವಿದ್ವಾಂಸರಾದ ಶ್ರೀಯುತರು ದ್ವೈತವೇದಾಂತ ವಾಙ್ಮಯ ಪ್ರಪಂಚಕ್ಕೆ ಜಾಗತಿಕ ಮಟ್ಟದಲ್ಲಿ ಸಲ್ಲಿಸಿದ ಅಮೂಲ್ಯ ಸೇವೆ ಅನುಪಮ ಹಾಗೂ ಅಸದೃಶವಾದದ್ದು. ಕರ್ನಾಟಕ ಸರಕಾರದ ಉನ್ನತ ಮಹಾವಿದ್ಯಾಲಯದಲ್ಲಿ ಉತ್ತಮ ಪ್ರಾಚಾರ್ಯರಾಗಿ ಅತ್ಯುತ್ತಮ ಉಪನ್ಯಾಸಕರಾಗಿ ಆದರ್ಶ ಸಂಸ್ಕøತ ಶಿಕ್ಷಕರಾಗಿ ಸಲ್ಲಿಸಿದ ಅನುಪಮ ಸೇವೆಗೆ ರಾಜ್ಯ ಸರಕಾರದ ರಾಜ್ಯೋತ್ಸವ ಪ್ರಶಸ್ತಿ- “ಅತ್ಯುತ್ತಮ ವಿದ್ವಾಂಸರು” ಮುಂತಾದ ಪ್ರತಿಷ್ಠಿತ ಪ್ರಶಸ್ತಿಗಳಿಂದ ಪುರಸ್ಕೃತರಾಗಿರುವುದೇ ಸಾಕ್ಷಿ. 

ತಮ್ಮ ವಿದ್ವತ್ಪೂರ್ಣ ಮಾರ್ಗದರ್ಶದಿಂದ ಅನೇಕ ಯುವಕರು ಪ್ರಭಾವಿತರಾಗಿ ಪ್ರತಿಭಾಶಾಲಿಗಳಾಗಿರುವರು. ಮಾಧ್ವಸಮಾಜದ ಅತ್ಯಂತ ಅಭಿಮಾನದ ಪ್ರತಿಷ್ಠಿತ ಸಂಸ್ಥೆಗಳಾದ ಶ್ರೀವ್ಯಾಸ-ಮಧ್ವ ಸಂಶೋಧನ ಪ್ರತಿಷ್ಠಾನ, ಶ್ರೀಗೋವರ್ಧನ ಪ್ರತಿಷ್ಠಾನ, ಶ್ರೀಜಯತೀರ್ಥ ಸಂಸ್ಕøತ ಹಸ್ತಪ್ರತಿ ಗ್ರಂಥಾಲಯ, ಶ್ರೀರಾಘವೇಂದ್ರ ವೇದಾಂತ ಪಾಠಶಾಲಾ ಮುಂತಾದ ಸಂಸ್ಥೆಗಳನ್ನು ಸ್ಥಾಪಿಸಿ “ವಿಷ್ಣೋಃ ಸರ್ವೋತ್ತಮತ್ವಂ ಚ ಸರ್ವದಾ ಪ್ರತಿಪಾದಯ” ಎಂಬ ಆಚಾರ್ಯರ ಮಾತಿನಂತೆ ನಿರಂತರ ಪಾಠ-ಪ್ರವಚನ-ಸಂಶೋಧನೆ-ಪ್ರಕಾಶನ-ಸಮ್ಮೇಳನ-ಕಾರ್ಯಾಗಾರಗಳಿಂದ ಅದ್ವಿತೀಯವಾದ ವಾಙ್ಮಯ ಸೇವೆಯನ್ನು “ತದ್ಧಿ ತಪಃ ತದ್ಧಿ ತಪಃ” ಎಂಬಂತೆ ನಡೆಸುತ್ತಿರುವರು.

ಶ್ರೀಮಧ್ವಾಚಾರ್ಯರ ಸಮಗ್ರ ಸರ್ವಮೂಲ ಗ್ರಂಥಗಳ ಮತ್ತು ಪುರಾಣಗಳ ಸ್ತೋತ್ರಗಳ ಪ್ರಕಾಶನಕ್ಕಾಗಿ ಸುಮಾರು 200ಕ್ಕೂ ಹೆಚ್ಚಿನ ಉದ್ಗ್ರಂಥಗಳ ಸಂಪಾದನೆ-ಭಾಷಾಂತರಗಳ ಬೃಹದ್ಯೋಜನೆಗಳನ್ನು  ಕೈಗೆತ್ತಿಕೊಂಡು ನಿರಂತರವಾದ ಪರಿಶ್ರಮದಿಂದ ಸರ್ವಮೂಲಗ್ರಂಥ ಮುಂತಾದ ಉದ್ಗ್ರಂಥಗಳ ಪ್ರಕಾಶನ ಕಾರ್ಯವನ್ನು ಅತ್ಯಂತ ಶುದ್ಧವಾಗಿ ಅಚ್ಚುಕಟ್ಟಾಗಿ ನಿರ್ವಹಿಸಿ ವಿಶ್ವವಿದ್ಯಾಲಯದಿಂದ  ಡಿ.ಲಿಟ್ ಪದವಿಯನ್ನು ಪಡೆದು ಎಲ್ಲ ಪೀಠಾಧಿಪತಿಗಳ ಪರಮಾನುಗ್ರಹಕ್ಕೆ ಪಾತ್ರರಾಗಿರುವರು.

ತರ್ಕ-ವೇದಾಂತ-ಮೀಮಾಂಸಾ-ವ್ಯಾಕರಣ ಶಾಸ್ತ್ರಗಳಲ್ಲಿ ಪಾಂಡಿತ್ಯವನ್ನು ಪಡೆದ ಶ್ರೀಯುತರು ಅತ್ಯುತ್ತಮ ಪ್ರವಚನಕಾರರೂ ಆಗಿರುವರು. ದೇಶದ ಉದ್ದಗಲದಲ್ಲಿ ನಿರಂತರವಾದ  ಸಂಚರಿಸುತ್ತ ತಾವು ವಿದ್ವತ್ಪೂರ್ಣವಾದ ಪ್ರವಚನಗಳ ಮೂಲಕ ಏಕಾದಶೀ ಉಪವಾಸ-ಚಾತುರ್ಮಾಸ್ಯ ಆಚರಣೆ-ಅನುಷ್ಠಾನಗಳ ಬಗ್ಗೆ ಜಾಗೃತಿಯನ್ನು ಮೂಡಿಸಿ ಜನರು ಸನ್ಮಾರ್ಗದಲ್ಲಿ ನಡೆಯುವಂತೆ ಮಾಡಿದ ಕಾರ್ಯ ಅತ್ಯಂತ ಪ್ರಶಂಸನಾರ್ಹವಾಗಿದೆ. ಇವರ ಸಂಪರ್ಕದ ಪ್ರಭಾವದಿಂದ ಇಂದಿಗೂ ಅತ್ಯುನ್ನತ ಹುದ್ದೆಯಲ್ಲಿರುವ ಅನೇಕ ಸದ್ಭಕ್ತರು ಅನುಷ್ಠಾನಶೀಲರಾಗಿರುವುದನ್ನು ಕಾಣುತ್ತಿದ್ದೇವೆ. 

ಅಖಿಲ ಭಾರತ ಮಾಧ್ವಮಹಾಮಂಡಲ ಮುಂತಾದ ದೇಶದ ಅನೇಕ ಪ್ರತಿಷ್ಠಿತ ಸಂಸ್ಥೆಗಳು ಹಾಗೂ ವಿಶ್ವವಿದ್ಯಾಲಯಗಳು ಆಯೋಜಿಸಿದ್ದ ಅಂತಾರಾಷ್ಟ್ರೀಯ ಸಮ್ಮೇಳನಗಳಲ್ಲಿ ಅಧ್ಯಕ್ಷಸ್ಥಾನವನ್ನು ಅಲಂಕರಿಸಿ ಇವರು ನೀಡಿದ ಸಂದೇಶಗಳು ಸಲಹೆಗಳು ಮುಂದಿನ ಜನಾಂಗದವರಿಗೂ ದಾರಿದೀಪವಾಗಿವೆ.

ಭಾರತದ ಸರ್ವೋತ್ಕೃಷ್ಟ ಪ್ರಶಸ್ತಿಯಾದ ರಾಷ್ಟ್ರಪತಿ ಪುರಸ್ಕಾರ ಹಾಗೂ ಅನೇಕ ಪೀಠಾಧಿಪತಿಗಳಿಂದ ಪರಮಾನುಗ್ರಹ ರೂಪದ ಪ್ರತಿಷ್ಠಿತ ಪ್ರಶಸ್ತಿಗಳು ಲಭಿಸಿರುವುದು ಅಧ್ಯಾತ್ಮ ಬಂಧುಗಳಿಗೆ ಸಂತಸದ ವಿಚಾರವಾಗಿದೆ. ಭಾರತೀಯ ಆಧ್ಯಾತ್ಮಿಕ ಸಾಂಸ್ಕೃತಿಕ ಜಗತ್ತಿನ ರಾಯಭಾರಿಗಳಾದ, ನಲೆದಾಡುವ ವೇದಾಂತ ಗ್ರಂಥಾಲಯವಾಗಿರು ಶ್ರೀಯುತರು ಅನೇಕ ಮುಖಗಳಿಂದ ಶ್ರೀವ್ಯಾಸ-ಮಧ್ವರ ಸೇವೆಯನ್ನು ಸಲ್ಲಿಸುತ್ತಿರುವರು. ಹಿರಿಯ ವಿದ್ವಾಂಸರ ಸಂರಕ್ಷಣೆಯ ಪ್ರಧಾನ ಯೋಜನೆಯನ್ನು ಸಾಕಾರಗೊಳಿಸುತ್ತಿರುವ ಆದರ್ಶ ವಿದ್ವಾಂಸರಾಗಿರುವ ಶ್ರೀಯುತರಿಗೆ ದಾಸಶ್ರೇಷ್ಠರಾದ ಶ್ರೀಪುರಂದರದಾಸರ ಆರಾಧನಾ ಪರ್ವಕಾಲದಲ್ಲಿ “ಮಧ್ವ-ಪುರಂದರ ಪ್ರಶಸ್ತಿ”ಯನ್ನು ಪರಮಪೂಜ್ಯ ಶ್ರೀ ಶ್ರೀ ಸುವಿದ್ಯೇಂದ್ರತೀರ್ಥ ಶ್ರೀಪಾದಂಗಳವರ ಅಮೃತ ಹಸ್ತದಿಂದ ನೀಡಿ ಸನ್ಮಾನಿಸಲಾಗುತ್ತಿದೆ.

ಖ್ಯಾತ ಹಿಂದೂಸ್ತಾನಿ ಸಂಗೀತ ಕಲಾಕಾರ, ಕರ್ನಾಟಕ ಕಲಾಶ್ರೀ, ಸ್ವರನಿಧಿ, ಪಂಡಿತ್ ಡಾ.ನಾಗರಾಜರಾವ್ ಹವಾಲ್ದಾರ್

ಶ್ರೀಯುತರು ಇತಿಹಾಸ ಮತ್ತು ಪ್ರಾಕ್ತನ ಶಾಸ್ತ್ರದಲ್ಲಿ ಸ್ವರ್ಣಪದಕದೊಂದಿಗೆ ಸ್ನಾತಕೋತ್ತರ ಪದವಿ, ‘ಮೈಸೂರು ಒಡೆಯರ ಕಾಲದಲ್ಲಿ ಕರ್ನಾಟಕ ಸಂಗೀತದ ಅಭಿವೃದ್ಧಿʼ ವಿದ್ವತ್ಪೂರ್ಣ ಸಂಶೋಧನಾ ಮಹಾಪ್ರಂಬಂಧ ರಚನೆಗೆ ಡಾಕ್ಟರೇಟ್ ಪದವಿ ಪಡೆದು ಕರ್ನಾಟಕ ವಿಶ್ವವಿದ್ಯಾನಿಲಯದಲ್ಲಿ ನಾಡಿನ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಮೇರುಶಿಖರಗಳಾದ ಪಂಡಿತ್ ಮಲ್ಲಿಕಾರ್ಜುನ ಮನ್ಸೂರ್, ಪಂಡಿತ್ ಬಸವರಾಜ ರಾಜಗುರು, ಪಂಡಿತ್ ಸಂಗಮೇಶ್ವರ ಗುರುವ ಮುಂತಾದ ಕಿರಾಣಾ ದಿಕ್ಕರಿಗಳ ನಿರಂತರ ಮಾರ್ಗದರ್ಶನದಲ್ಲಿ ‘ಸಂಗೀತರತ್ನʼ ಪದವಿಗ್ರಹಿತರಾಗಿ ಹುಬ್ಬಳ್ಳಿಯ ಸಂಗೀತ ಭಂಡಾರ, ಬೆಂಗಳೂರಿನ ಬಾನುಲಿಗಳಿಗೆ ವಿಶಿಷ್ಟ ಕೊಡುಗೆ ನೀಡಿರುತ್ತಾರೆ.

ಹಿಂದೂಸ್ತಾನಿ ಸಂಗೀತ ಸಾಮ್ರಾಜ್ಯದ ನಿರ್ಮಕುಟ ಸಾಮ್ರಾಟರೆನಿಸಿದ ಪಂಡಿತ್ ಮಾಧವಗುಡಿ, ಪಂಡಿತ್ ಪಂಚಾಕ್ಷರಸ್ವಾಮಿ ಮತ್ತಿಗಟ್ಟಿ ಅವರ ಶಿಷ್ಯಪ್ರಮುಖರಾಗಿ, ಜೈಪುರ – ಅತ್ರೌಲಿ ಶೈಲಿಯ ಕೋಮಲತೆ-ಗಾಂಭೀರ್ಯಗಳನ್ನು ದೈವದತ್ತ ಸಿರಿಕಂಠದಲ್ಲಿ ಮೇಳೈಸಿಕೊಂಡು ತಮ್ಮ ಸಮುನ್ನತ ಗಾಯನಸಾರ ಸುಧಾರಸಗಂಗಾಸಲಿಲದಲ್ಲಿ ಕಲಾರಸಿಕ ಸಮುದಯವನ್ನು ಸಮ್ಮೋಹನಗೊಳಿಸಿ, ದೇಶವಿದೇಶಗಳ ಘನ ವೇದಿಕೆಗಳಲ್ಲಿ ಅಂತಾರಾಷ್ಟ್ರೀಯ ಸಂಗೀತೋತ್ಸವಗಳಲ್ಲಿ ವಿಸ್ಮಯ ಗಾನವಿಭವದಿಂದ ರಸಾಭಿಜ್ಞತೆಯ ದ್ರಾಕ್ಷಾಪಾಕದ ಸವಿಯುಣ ಸುವ ಮೂಲಕ ಸಂಗೀತ ರಸಜ್ಞರ ಮನೋಲ್ಲಾಸಗೊಳಿಸಿ ಕನ್ನಡ ವಚನ, ದಾಸಪದ, ನವ್ಯ ನವೋದಯ ಕವಿತೆಗಳನ್ನೂ ಖ್ಯಾಲ್ ಶೈಲಿಗೆ ಅಳವಡಿಸಿದ ಪ್ರಯೋಗಶೀಲರಾಗಿರುತ್ತಾರೆ.

ಮಾನಸಿಕ ಒತ್ತಡ ನಿವಾರಣೆಗೆ ಸಿದ್ಧೌಷಧವೆನಿದ ಈ ನೆಲದ ಸಂಗೀತ ಪ್ರಾತ್ಯಕ್ಷಿಕೆಗಳನ್ನು ಜಗತ್ತಿನ ಹಲವೆಡೆ ಪ್ರಚುರಗೊಳಿಸಿ, ದೂರದರ್ಶನದಲ್ಲಿ ಬಿತ್ತರಗೊಂಡ ವೈಶಿಷ್ಟ್ಯಪೂರ್ಣ ರಾಗಧಾರೆ, ಸ್ವರಧಾರೆ ಸಂಗೀತ ಸಂಭ್ರಮಗಳ ಪರಿಕಲ್ಪನೆ, ಸಂಶೋಧನೆ, ನಿರೂಪಣೆಗಳ ರೂವಾರಿಯಾಗಿ, ಹಿಂದೂಸ್ತಾನಿ ಸಂಗೀತ ಪಠ್ಯಪುಸ್ತಕ ಸಮಿತಿಯ ಅಧ್ಯಕ್ಷರಾಗಿರುತ್ತಾರೆ.

ಭಾರತೀಯ ಸಂಗೀತ ಕ್ಷೇತ್ರದ ಮಹಾಮಹಿಮರನ್ನು ಪರಿಚಯಿಸಿದ ಲೇಖನಗಳ ಅಂಕಣಕಾರರಾಗಿ, ‘ಸುನಾದ ಆರ್ಟ್ ಫೌಂಡೇಷನ್ʼ ಸಂಗೀತ ಸಂಸ್ಥೆಯ ಸ್ಥಾಪನೆಯ ಮೂಲಕ ಭವಿಷ್ಯದ ಸಂಗೀತ ಕಲಾಕಾರರನ್ನು ರೂಪಿಸುವ ಕನಸುಗಾರರಾಗಿ, ಸಂಗೀತೋಪಾಸಕರಾದ ಜೀವಿತ ಭಾಗಸ್ವಾಮಿನಿ, ಪುತ್ರದ್ವಯರ ಸಂತೃಪ್ತ ಕುಟುಂಬದ ಒಡೆಯರಾಗಿ, ನಿರಪೇಕ್ಷ ಮನೋಭಾವದಿಂದ ಸಂಗೀತವನ್ನೇ ಜೀವದುಸಿರಾಗಿಸಿಕೊಂಡು ಸಂಗೀತಸಾಧನೆಯ ನಿಡುದಾರಿಯಲ್ಲಿ ಮುನ್ನಡೆಯುತ್ತಿರುವ ಪಂಡಿತ್ ಡಾ.ನಾಗರಾಜರಾವ್ ಹವಾಲ್ದಾರ್ ಅವರಿಗೆ ಶ್ರೀ ಶ್ರೀನಿವಾಸ ಉತ್ಸವ ಬಳಗವು ಶ್ರೀ ಪುರಂದರದಾಸರ ಆರಾಧನಾ ಮಹೋತ್ಸವ ಶುಭ ಸಂದರ್ಭದಲ್ಲಿ ಪುರಂದರ ಸಂಗೀತರತ್ನ ಪ್ರಶಸ್ತಿ ನೀಡಿ ಅಭಿಮಾನದಿಂದ ಅಭಿನಂದಿಸಿ ಗೌರವಿಸಲಾಗುವುದು.

- Advertisement -

LEAVE A REPLY

Please enter your comment!
Please enter your name here

- Advertisement -

Latest News

Yuva Movie: ಯುವ ರಾಜ್‌ಕುಮಾರ್ ಅವರ ಚಿತ್ರದ ಕಥೆ ಲೀಕ್ ಆಯ್ತಾ?

ಕನ್ನಡ ಚಲನಚಿತ್ರ "ಯುವ" ಮಾರ್ಚ್ 2024 ರಲ್ಲಿ ಬಿಡುಗಡೆಗೆ ಸಿದ್ಧವಾಗಿದೆ. ಈ ಚಿತ್ರದಲ್ಲಿ ಪ್ರಸಿದ್ಧ ಕನ್ನಡ ನಟ ರಾಘವೇಂದ್ರ ರಾಜ್‌ಕುಮಾರ್ ಅವರ ಪುತ್ರ ಯುವ ರಾಜ್‌ಕುಮಾರ್...
- Advertisement -

More Articles Like This

- Advertisement -
close
error: Content is protected !!
Join WhatsApp Group