ಮೂಡಲಗಿ – ಪಟ್ಟಣದ ಪುರಸಭೆ ಆವರಣದಲ್ಲಿ ಶುಕ್ರವಾರ ತಾಲ್ಲೂಕು ಸ್ವೀಪ್ ಸಮಿತಿ ವತಿಯಿಂದ ಮತದಾನ ಜಾಗೃತಿಗಾಗಿ ರಂಗೋಲಿ ಸ್ಪರ್ಧೆ ಹಮ್ಮಿಕೊಳ್ಳಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ತಾಲ್ಲೂಕು ಸ್ವೀಪ್ ಸಮಿತಿ ಅಧ್ಯಕ್ಷರೂ ಆಗಿರುವ ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳು ನವೀನಪ್ರಸಾದ್ ಕಟ್ಟಿಮನಿ ಅವರು, ಮತದಾನ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ರಂಗೋಲಿ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಎಲ್ಲರೂ ಲೋಕಸಭೆ ಚುನಾವಣೆಯಲ್ಲಿ ಮತದಾನದ ಮಾಡುವ ಮೂಲಕ ಮತದಾನ ಪ್ರಮಾಣ ಹೆಚ್ಚಿಸಲು ಸಹಕಾರ ನೀಡಬೇಕು. ಸ್ಪರ್ಧೆಯಲ್ಲಿ ಭಾಗವಹಿಸಿದವರು ತಮ್ಮ ಊರು ಮತ್ತು ಆಯಾ ಪ್ರದೇಶದಲ್ಲಿ ಮತದಾರರಲ್ಲಿ ಜಾಗೃತಿ ಮೂಡಿಸಬೇಕು ಎಂದು ತಿಳಿಸಿದರು.
ಸ್ಪರ್ಧೆಯಲ್ಲಿ 18 ವಿವಿಧ ತಂಡಗಳು ಭಾಗವಹಿಸಿದವು. ಈ ಸ್ಪರ್ಧೆಯಲ್ಲಿ ವಡೇರಹಟ್ಟಿಯ ಮಹಿಳಾ ಸ್ತ್ರೀ ಶಕ್ತಿ ಸಂಘ ಪ್ರಥಮ ಸ್ಥಾನ, ಗ್ರಾಮ ಕಾಯಕ ಮಿತ್ರ ತಂಡ ದ್ವಿತೀಯ, ಯಾದವಾಡದ ಮಹಿಳಾ ಸ್ವಸಹಾಯ ಸಂಘ ತೃತೀಯ ಬಹುಮಾನ ಪಡೆದುಕೊಂಡಿತು. ಕಾರ್ಯನಿರ್ವಾಹಕ ಅಧಿಕಾರಿಗಳು ಅವರು ಬಹುಮಾನ ವಿತರಿಸಿದರು.
ಈ ವೇಳೆ ಸಹಾಯಕ ನಿರ್ದೇಶಕರಾದ (ಗ್ರಾಉ) ಸಂಗಮೇಶ ರೊಡ್ಡನ್ನವರ , ಸಹಾಯಕ ನಿರ್ದೇಶಕರಾದ ಚಂದ್ರಶೇಖರ್ ಬಾರ್ಕಿ , ತಾಪಂ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.