spot_img
spot_img

ಕನ್ನಡ ಸಹಾಯಕ ಪ್ರಾಧ್ಯಾಪಕರ ಆಯ್ಕೆ ಪರೀಕ್ಷೆ ಪ್ರಶ್ನೆ ಪತ್ರಿಕೆಯಲ್ಲಿ ಅಪಾರ ದೋಷಗಳು-ಕನ್ನಡ ನಾಡು-ನುಡಿಗೆ ಅಪಮಾನ

Must Read

- Advertisement -

ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಡಾ.ಭೇರ್ಯ ರಾಮಕುಮಾರ್ ದೂರು

ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (ಕೆ.ಇ.ಎ) ಅನೇಕ ಕಟ್ಟುನಿಟ್ಟುಗಳ ನಡುವೆ ದಿನಾಂಕ ೧೨ ಮಾರ್ಚ್ ೨೦೨೨ ರಿಂದ ೧೬ ಮಾರ್ಚ್ ೨೦೨೨ವರೆಗೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿನ ಸಹಾಯಕ ಪ್ರಾಧ್ಯಾಪಕರ ನೇಮಕಾತಿಗೆ ಸಂಬಂಧಿಸಿದಂತೆ ಸ್ಪರ್ಧಾತ್ಮಕ ಪರೀಕ್ಷೆಯನ್ನು ನಡೆಯಿಸಿತು.ಈ ಸಂದರ್ಭದಲ್ಲಿ ಕನ್ನಡ ಸಹಾಯಕ ಪ್ರಾಧ್ಯಾಪಕರ ಆಯ್ಕೆ ಪರೀಕ್ಷೆಯಲ್ಲಿ ನೀಡಲಾದ ಪ್ರಶ್ನೆ ಪತ್ರಿಕೆಯಲ್ಲಿ ಅಪಾರ ತಪ್ಪುಗಳು, ಕವಿಗಳು ಹಾಗೂ ಕನ್ನಡ ನಾಡುನುಡಿ ಕುರಿತ ಪ್ರಶ್ನೆಗಳಲ್ಲಿ ಅಪಾರ ದೋಷಗಳಿದ್ದು ಇದರಿಂದ ಕನ್ನಡ ನಾಡು-ನುಡಿ, ಕವಿಗಳು ಹಾಗೂ ಅವರ ಕೃತಿಗಳಿಗೆ ಅಪಮಾನ ಉಂಟಾಗಿದೆ ಎಂದು ಹಿರಿಯ ಸಾಹಿತಿ, ಪತ್ರಕರ್ತರು ಹಾಗೂ ಮೈಸೂರು ಜಿಲ್ಲಾ ಕನ್ನಡ ಜಾಗೃತಿ ಸಮಿತಿ ಸದಸ್ಯರಾದ ಡಾ.ಭೇರ್ಯ ರಾಮಕುಮಾರ್ ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ದೂರು ನೀಡಿದ್ದಾರೆ.

ಈ ಬಗ್ಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಟಿ.ಎಸ್.ನಾಗಾಭರಣ ಅವರಿಗೆ ಹಾಗೂ ಸಂಸ್ಥೆಯ ಕಾರ್ಯದರ್ಶಿ ಗಳಾದ ಡಾ.ಸಂತೋಷ್ ಹಾನಗಲ್ ಅವರಿಗೆ ದೂರು ನೀಡಿರುವ ಅವರು ಸಹಾಯಕ ಪ್ರಾಧ್ಯಾಪಕರ ಆಯ್ಕೆ ಪರೀಕ್ಷೆಯಲ್ಲಿ ನೀಡಲಾದ ಪ್ರಶ್ನೆಪತ್ರಿಕೆಯಲ್ಲಿ ಇರುವ ದೋಷಗಳನ್ನು ವಿವರಿಸಿ , ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವಿರುದ್ದ ಕ್ರಮ ಕೈಗೊಳ್ಳಲು ಒತ್ತಾಯಿಸಿದ್ದಾರೆ.

- Advertisement -

ಮತ್ತೊಂದು ದುರಂತವೆಂದರೆ ಕನ್ನಡ ಐಚ್ಚಿಕ ಪ್ರಶ್ನೆ ಪತ್ರಿಕೆಗೆ ಕನ್ನಡದಲ್ಲಿ ಮುದ್ರಿತವಾಗಿರುವ ಪ್ರಶ್ನೆಗಳ ಬಗ್ಗೆ ಏನಾದರೂ ಸಂದೇಹವಿದ್ದಲ್ಲಿ ಇಂಗ್ಲೀಷ್ ಆವೃತ್ತಿಯ ಪ್ರಶ್ನೆ ಪತ್ರಿಕೆಯನ್ನು ನೋಡಬಹುದು. ಏನಾದರೂ ವ್ಯತ್ಯಾಸ ಕಂಡುಬಂದಲ್ಲಿ ಇಂಗ್ಲೀಷ್ ಆವೃತ್ತಿಯನ್ನು ಅಂತಿಮ ಎಂದು ಪರಿಗಣಿಸಲಾಗುವುದು ಎಂದು ಈ ಪ್ರಶ್ನೆ ಪತ್ರಿಕೆಯಲ್ಲಿ ಸೂಚನೆ ಕೊಟ್ಟಿದ್ದಾರೆ. ಇವರ ಸೂಚನೆಯಂತೆ ಕನ್ನಡ ಭಾಷಾ ಪತ್ರಿಕೆಗಳಲ್ಲಿ ಇಂಗ್ಲೀಷ್ ಆವೃತ್ತಿ ಮುದ್ರಣವಾಗಿರಲಿಲ್ಲ. ಬಹುಮುಖ್ಯ ಪ್ರಶ್ನೆ ಎಂದರೆ ಐಚ್ಚಿಕ ಕನ್ನಡಕ್ಕೆ ಇಂಗ್ಲೀಷ್ ಆವೃತ್ತಿಯ ಅವಶ್ಯಕತೆ ಇದೆಯಾ ಎಂಬುದು. ಈ ಬಗ್ಗೆ ಕನ್ನಡ ಅಭಿಮಾನಿಗಳೆಲ್ಲರೂ ಯೋಚಿಸಬೇಕಿದೆ.

A4 ಸರಣಿಯ ಪತ್ರಿಕೆಯಲ್ಲಿರುವ ದೋಷಗಳ ಪಟ್ಟಿ ಕೆಳಕಂಡಂತಿದೆ:

  1. ಪ್ರಶ್ನೆಸಂಖ್ಯೆ ೨ರಲ್ಲಿ ಎಚ್.ಎಲ್. ನಾಗೇಗೌಡರ ‘ಪದವವೆ ನಮ್ಮ ಎದೆಯಲ್ಲಿ’ ಕೃತಿಯ ಹೆಸರನ್ನು ’ಪದವಿವೆ ನನ್ನ ಎದೆಯಲ್ಲಿ’ ಎಂದು ಮಾಡಲಾಗಿದೆ.
  2. ಪ್ರಶ್ನೆಸಂಖ್ಯೆ ೯ರಲ್ಲಿ ಷ. ಶೆಟ್ಟರ್ ಅವರ “Memorial stones : a study of their origin, significance, and variety” ಎಂಬ ಸಂಪಾದಿತ ಕೃತಿಯ ಹೆಸರನ್ನು ‘Memorial stones in South India’ಎಂದು ಬದಲಾಯಿಸಿ, ಇದನ್ನೇ ಸರಿಯಾದ ಆಯ್ಕೆಯನ್ನಾಗಿ ಗುರುತಿಸಲು ಹೇಳಲಾಗಿದೆ! ‘South Indian ‘Memorial stones’ ಕೆ. ರಾಜನ್ ಅವರ ಕೃತಿ. ಇದನ್ನೆ ಉಲ್ಟಾಪಲ್ಟಾ ಮಾಡಿದಂತಿದೆ.
  3. ಪ್ರಶ್ನೆಸಂಖ್ಯೆ ೧೨ರಲ್ಲಿ ಯಾವುದು ಹೊಂದಾಣಿಕೆ ಆಗುತ್ತದೆ? ಒಂದನ್ನು ಮಾತ್ರ ಗುರುತಿಸಬೇಕು. ಆದರೆ ಕೊಟ್ಟಿರುವ ಎರಡು ಆಯ್ಕೆಗಳೂ ಸರಿಯಾಗಿವೆ. ಅವು ಜಿ.ಎಸ್. ಆಮೂರರ ’ಸೀಮೋಲ್ಲಂಘನ’, ಓ.ಎಲ್.ನಾಗಭೂಷಣ ಸ್ವಾಮಿ ಅವರ ’ಇಂದಿನ ಹೆಜ್ಜೆ’. ಇಂತಹ ಪ್ರಶ್ನೆಗಳಿಗೆ ’ಗ್ರೇಸ್’ ಅಂಕಗಳನ್ನು ಕೊಡುವುದಾದರೆ ಪರೀಕ್ಷೆ ಏಕೆ ಮಾಡಬೇಕು ?
  4. ಪ್ರಶ್ನೆಸಂಖ್ಯೆ ೧೮ರ ಆಯ್ಕೆಗಳಲ್ಲಿ ಕೊಟ್ಟಿರುವ ಕೃತಿಯ ಹೆಸರಾದ ’ವಿಮರ್ಶೆಯ ನರಿಭಾಷೆ’ಯ ಕರ್ತೃ ಯಾರೆಂಬುದನ್ನು ಕಲಿಸದ ಕನ್ನಡ ಸಾಹಿತ್ಯ ಮೇಷ್ಟ್ರುಗಳು ವಿದ್ಯಾರ್ಥಿಗಳಿಗೆ ಮೋಸಮಾಡಿದ್ದಾರೆ! ’ನರಿಭಾಷೆ’ಯ ಶೀರ್ಷಿಕೆಯುಳ್ಳ ಪುಸ್ತಕವನ್ನು ಪರಿಚಯಿಸಿದ್ದಕ್ಕೆ ಪ್ರಾಧಿಕಾರಕ್ಕೆ ಧನ್ಯವಾದಗಳು. ಪ್ರಾಧಿಕಾರವು ಈ ’ನರಿಭಾಷೆ’ ಕೃತಿಯನ್ನು ಆದಷ್ಟು ಬೇಗ ಪ್ರಕಟಿಸಬೇಕು. ಇಂತಹ ಕೃತಿಯನ್ನು ಪ್ರಶ್ನೆಯಾಗಿಸಿದ ಗುಳ್ಳೆನರಿಗಳ ಗೂಳಿನೊಳಗೆ ನಮ್ಮಂತವರ ಆರ್ತನಾದ ಪ್ರಾಧಿಕಾರಕ್ಕೆ ಕೇಳುವುದೆ?
  5. ಪ್ರಶ್ನೆಸಂಖ್ಯೆ ೧೯ರಲ್ಲಿ ಕೆ.ವಿ. ತಿರುಮಲೇಶರ ವಿಮರ್ಶಾ ಕೃತಿ ’ಸಮ್ಮುಖ’ವನ್ನು ’ಸರ್ಮುಖ’ಗೊಳಿಸಿ, ಲೇಖಕರ ಮುಖಕ್ಕೆ ಹೊಡೆಯಲಾಗಿದೆ.
  6. ಪ್ರಶ್ನೆಸಂಖ್ಯೆ ೧೯ರಲ್ಲಿರುವ ’ಬುದ್ಧಡ್ಡಿ ಹಿಂಗಮಿರೆ’ ಇವರು ಯಾರು ಎಂಬುದು ತಿಳಿದಿಲ್ಲ. ನಮಗೆ ಬುದ್ಧಣ್ಣ ಹಿಂಗಮಿರೆ ಗೊತ್ತಿದೆ.
  7. ಪ್ರಶ್ನೆಸಂಖ್ಯೆ ೧೯ರಲ್ಲಿರುವ ’ರಸೀದು ಟಿಕೆಟ್ಟು’ ಅಲ್ಲ. ’ರಸೀದಿ ತಿಕೀಟು’
  8. ಪ್ರಶ್ನೆಸಂಖ್ಯೆ ೩೫ರಲ್ಲಿ ಹಲ್ಮಿಡಿ ಶಾಸನದಲ್ಲಿ ಕಂಡುಬರುವ ಸ್ಥಳನಾಮ ’ನರಿದಾವಿಳೆ ನಾಡು’ ಎಂಬುದು. ಪ್ರಶ್ನೆ ಪತ್ರಿಕೆಯಲ್ಲಿ ’ನಂದಾವಿಳೆ ನಾಡು’ ಎಂದು ಕೊಟ್ಟಿದ್ದಾರೆ. ಪ್ರಶ್ನೆ ಪತ್ರಿಕೆ ಮಾಡಿದವರು ಶಾಸನದೊಳಗಿರುವ ಹೊಸ ಸ್ಥಳನಾಮವನ್ನು ಶೋಧಿಸಿದ್ದಾರೆ. ಈ ಮಹಾನ್ ಸಂಶೋಧನೆಗೆ ಅಭಿನಂದನೆಗಳನ್ನು ಹೇಳಲೇಬೇಕು.
  9. ಪ್ರಶ್ನೆಸಂಖ್ಯೆ ೪೫ರಲ್ಲಿ ವಚನಕಾರ ಅಲ್ಲಮ ಪ್ರಭು ಅವರ ಇಂದು ಸಾವ ಹೆಂಡತಿಗೆ ನಾಳೆ ಸಾವ ಗಂಡನವ್ವಾ ಎಂಬ ವಚನವನ್ನು ಇಂದು ಸಾವ ಹೆಂಡತಿಗೆ ನಾಳೆ ಸಾವ ಗಂಡ ನೋಡವ್ವಾ ಎಂದು ಕೊಡಲಾಗಿದೆ. ಬಿ.ವಿ. ಮಲ್ಲಾಪುರರ ಸಂಪಾದಕತ್ವದಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರ ಪ್ರಕಟಿಸಿದ ಅಲ್ಲಮ ಪ್ರಭುದೇವರ ವಚನ ಸಂಪುಟ-೨ರಲ್ಲಿ ಮತ್ತು ಇದೇ ಪ್ರಾಧಿಕಾರವು ಎಂ.ಎಂ. ಕಲಬುರ್ಗಿಯವರು ಪ್ರಧಾನ ಸಂಪಾದಕತ್ವದಲ್ಲಿ ಸಿದ್ಧಪಡಿಸಿದ ಸಂಪುಟಗಳಲ್ಲಿಯೂ ’ಗಂಡನವ್ವಾ’ ಎಂದೇ ಇದೆ.
  10. ಪ್ರಶ್ನೆಸಂಖ್ಯೆ ೫೨ರ ಹೊಂದಾಣಿಕೆಯಲ್ಲಿ ನೀಡಲಾದ ವಚನಕಾರ್ತಿಯರು ಮತ್ತವರ ವಚನಗಳಲ್ಲಿ ಅಕ್ಕಮಹಾದೇವಿಯ ವಚನದ ಬದಲಿಗೆ ಅಕ್ಕಮ್ಮಳ ವಚನವನ್ನು ಕೊಡಲಾಗಿದೆ. ಅಕ್ಕಮಹಾದೇವಿಯ ಹೆಸರಿನೊಂದಿಗೆ ಬೇರೆಯಾವ ಆಯ್ಕೆಯೂ ಹೊಂದಾಣಿಕೆ ಆಗುವುದಿಲ್ಲ. ಇದಕ್ಕೆ ಪ್ರಾಧಿಕಾರ ಯಾವ ಉತ್ತರಕೊಡುತ್ತದೆಯೋ ಕಾಯಬೇಕು. ಆದರೆ ತಪ್ಪಾಗಿ ಕೊಟ್ಟಿರುವುದರ ಬಗ್ಗೆ ಆಕ್ಷೇಪಣೆ ಎತ್ತಲೇ ಬೇಕು. ಏಕೆಂದರೆ ಈ ಥರದ ಸಣ್ಣಪುಟ್ಟ ಗೊಂದಲಗಳು ಅಭ್ಯರ್ಥಿ ಪ್ರಶ್ನೆಯನ್ನು ಅಟೆಂಡ್ ಮಾಡದಂತೆ ತಡೆಯುತ್ತವೆ. ಮಾಡಿದರೆ ಅಂಕಗಳನ್ನು ಕಳೆದುಕೊಳ್ಳುವ ಆತಂಕ ಬೇರೆ!
  11. ಪ್ರಶ್ನೆಸಂಖ್ಯೆ ೫೩ರಲ್ಲಿ ’ಚಾಮುಂಡರಾಯ ಪುರಾಣ’ ಎಂದು ಬರೆಯಲಾಗಿದೆ. ಈ ಕೃತಿಯನ್ನು ನಮಗೆ ’ಚಾವುಂಡರಾಯ ಪುರಾಣ’ವೆಂದು ಓದಿಸಿದ್ದು ಮತ್ತು ನಾವು ಓದಿದ್ದು.
  12. ಪ್ರಶ್ನೆಸಂಖ್ಯೆ ೫೪ ಮತ್ತು ೫೫ ರಲ್ಲಿ ವಚನ ಮತ್ತು ಕೀರ್ತನೆಕಾರರ ಸಾಲುಗಳನ್ನು ತಮಗೆ ಬೇಕಾದಂತೆ ಬರೆದುಕೊಂಡಿದ್ದಾರೆ. ’ಲಿಂಗಾರ್ಪಿತ’, ಇದು ’ಲಿಂಗಾರ್ಪಿತವ’ ಆಗಬೇಕು. ’ಮನಸು’ ಇದು ’ಮನವ’ ಆಗಬೇಕು.
  13. ಪ್ರಶ್ನೆಸಂಖ್ಯೆ ೫೭ ’ನೆಪೋಲಿಯನ್ ಮತ್ತು ನಾಯಿ’ ಇದು ಇವರ ಕವನ ಎಂದು ಕೇಳಲಾಗಿದೆ. ಇದಕ್ಕೆ ಉತ್ತರದ ಆಯ್ಕೆ ಕುವೆಂಪು. ಈ ಕವಿತೆಯ ಶೀರ್ಷಿಕೆ ಪ್ರಶ್ನೆಪತ್ರಿಕೆಯಲ್ಲಿರುವಂತೆ ಇಲ್ಲ. ’ಕೋಗಿಲೆ ಮತ್ತು ಸೋವಿಯಟ್ ರಷ್ಯಾ’ ಕವನ ಸಂಕಲನದಲ್ಲಿ ’ವೀರನ ಕನಿಕರ (ನಾಯಿ-ನೆಪೋಲಿಯನ್)’ ಎಂದಿದೆ. ಪ್ರಶ್ನೆ ಮಾಡಿದವರು ಶೀರ್ಷಿಕೆಯನ್ನೇ ಬದಲಾಯಿಸಿದ್ದಾರೆ. ಇಂತಹ ’ಮತ್ತು’ಗಳನ್ನು ಪ್ರಶ್ನೆಯಲ್ಲಿ ಸೇರಿಸಿ, ಓದಿದವರನ್ನು ವಂಚಿಸುವ ಹುನ್ನಾರ ಪ್ರಶ್ನೆಪತ್ರಿಕೆಯನ್ನು ಸಿದ್ಧಪಡಿಸಿದವರಿಗೆ ಇದ್ದಂತಿದೆ.
  14. ಪ್ರಶ್ನೆಸಂಖ್ಯೆ ೬೩ರ ಹೊಂದಿಸಿ ಬರೆಯಿರಿಯಲ್ಲಿ ಕನ್ನಡ ಸಾಹಿತ್ಯಕ್ಕೆ ಹೊಸ ಕವಿಯೊಬ್ಬರನ್ನು ಪರಿಚಯಿಸಿದ್ದಾರೆ. ಆ ಕವಿಯ ಹೆಸರೇ ’ಕೆ.ಎಸ್. ನರಸಿಂಹವರ್ಮ’! ಇಲ್ಲಿಯವರೆಗೂ ಇಂಥ ಪ್ರಸಿದ್ಧ ಕವಿಯೊಬ್ಬರ ಹೆಸರನ್ನು ಅಲಕ್ಷಿಸಿದ ಶಾಲಾ, ಕಾಲೇಜು, ವಿಶ್ವವಿದ್ಯಾಲಯಗಳ ಪಠ್ಯಪುಸ್ತಕ ಕಮಿಟಿಗಳಿಗೆ, ವಿಮರ್ಶಕರಿಗೆ ಧಿಕ್ಕಾರಗಳು. ಇತಿಹಾಸದಲ್ಲಿ ’ಶರ್ಮ’ ’ವರ್ಮ’ ಆಗಿದ್ದನ್ನು ಓದಿದ್ದೆವು. ’ಸ್ವಾಮಿ’ ’ವರ್ಮ’ ಆಗಿ ಬದಲಾಗಿದ್ದನ್ನು ಕಂಡು ದಿಗಿಲುಗೊಂಡಿದ್ದೇವೆ! ಇದೇ ಪ್ರಶ್ನೆಯಲ್ಲಿ ಕೆ.ಎಸ್. ನಿಸಾರ್ ಅಹಮ್ಮದ್ ಅವರ ಹೆಸರನ್ನು ’ಕೆ.ಸ್.’ ಎಂದು ಬರೆಯಲಾಗಿದೆ. ಪ್ರಶ್ನೆಪತ್ರಿಕೆಯನ್ನು ಸರಿಯಾಗಿ ಬರೆದುಕೊಡದೇ ಇರುವವರಿಗೆ ಮೊದಲು ಪರೀಕ್ಷೆ ನಡೆಸಬೇಕಿದೆ.
  15. ಪ್ರಶ್ನೆಸಂಖ್ಯೆ ೭೪ರ ಸರಿಯಾದ ಹೊಂದಾಣಿಕೆಯನ್ನು ಗುರುತಿಸಲು ಸೂಚಿಸಿದ್ದಾರೆ. ದುರಂತ ಅಂದರೆ ಸರಿ ಉತ್ತರದ ಆಯ್ಕೆಯಲ್ಲಿನ ಲೇಖಕರೆ ಹೆಸರೇ ತಪ್ಪಾಗಿದೆ. ನಮಗೆ ಲೇಖಕ ರಾಘವೇಂದ್ರ ಖಾಸನೀಸ ಗೊತ್ತಿತ್ತು. ’ನಾಘವೇಂದ್ರ ಖಾಸನೀಸ’ ಗೊತ್ತಿರಲಿಲ್ಲ.
  16. ಪ್ರಶ್ನೆಸಂಖ್ಯೆ ೧೦೦ರಲ್ಲಿ ಆರ್.ಎಸ್.ಕಿಟಿಲ್ ಎಂದು ಕೊಡಲಾಗಿದೆ. ಇದು ಸರಿಯೆ? ಇದು ಪ್ರಸಿದ್ಧ ಸಂಶೋಧಕರ ಹೆಸರಿಗೆ ಮಾಡುವ ಅಪಚಾರವಲ್ಲವೇ?
  17. ಪ್ರಶ್ನೆಸಂಖ್ಯೆ ೧೦೬ರಲ್ಲಿ ನಾಗವರ್ಮನ ಛಂದೋಂಬುಧಿಯ ಛಂದಮನರಿಯದೆ ಕವಿತೆಯ ದುಂದುಗದೊಳ್ ತೊಳಲಿ ಸುಳಿವ ಕುಕವಿಯೆ ಕುರುಡಂ ಎಂಬ ವಾಕ್ಯವನ್ನು ಛಂದಮನರಿಯದೆ ಕವಿತೆಯ ದುಂದುಗದೊಳ್ ನುಡಿವ ಕುಕವಿಯೆ ಕುರುಡಂ ಎಂದು ಬದಲಾಯಿಸಲಾಗಿದೆ. ಇದು ತಮಗೆ ಬೇಕಾದಂತೆ ಬರೆದು ಪ್ರಶ್ನೆಪತ್ರಿಕೆ ಸಿದ್ಧಪಡಿಸಿದ ವಿದ್ವಾಂಸರ ಸಾಹಿತ್ಯಿಕ ಜ್ಞಾನ ಎಷ್ಟರ ಮಟ್ಟಿಗೆ ಇದೆ ಎಂಬುದನ್ನು ತೋರಿಸುತ್ತದೆ
  18. ಪ್ರಶ್ನೆಸಂಖ್ಯೆ ೧೨೧ರಲ್ಲಿ ಜೀ.ಶಂ.ಪರಮಶಿವಯ್ಯನವರ ಹೆಸರನ್ನು ’ಜೀ.ಕಂ.ಪರಮಶಿವಯ್ಯ’ ಬರೆದಿದ್ದಾರೆ. ಈ ಜೀ.ಕಂ. ಪರಮಶಿವಯ್ಯನವರು ಬೇರೆ ಇರಬಹುದೇನೊ? ಕೊಟ್ಟ ಪಠ್ಯಕ್ರಮದಲ್ಲಿಯೂ ಇವರ ಹೆಸರಿರಲಿಲ್ಲ.
  19. ಸಾಕಷ್ಟು ಕಾಗುಣಿತ ದೋಷಗಳಿರುವುದರಿಂದ ಪ್ರಶ್ನೆಪತ್ರಿಕೆಯಲ್ಲಿದ್ದ ಹೇಳಿಕೆ-ವಿವರಣೆ ಪ್ರಶ್ನೆಗಳಿಗೆ ಉತ್ತರಿಸುವುದಕ್ಕೆ ಸಾಧ್ಯವಾಗಿಲ್ಲ. ಹೇಳಿಕೆಗಳಲ್ಲಿಯೂ ವ್ಯಾಕರಣದೋಷ, ವಿವರಣೆಯಲ್ಲಿಯೂ ದೋಷ ಇದ್ದಾಗ ಅಭ್ಯರ್ಥಿ ಏನು ಮಾಡಬೇಕು. ಇದಕ್ಕೆ ಹೊಣೆ ಯಾರು?

ಮೇಲಿನ ಎಲ್ಲಾ ವಿಷಯಗಳನ್ನೂ ಸಂಪೂರ್ಣವಾಗಿ ಪರಿಶೀಲಿಸಿ, ಕನ್ನಡ ನಾಡು-ನುಡಿ , ಕವಿ-ಕಾವ್ಯಗಳ ಬಗ್ಗೆ ತಪ್ಪು ಮಾಹಿತಿ ನೀಡಿರುವ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವಿರುದ್ದ ಕಠಿಣ ಕಾನೂನು ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಲಾಗಿದೆ.


ಡಾ.ಭೇರ್ಯ ರಾಮಕುಮಾರ್
ಸಾಹಿತಿಗಳು, ಪತ್ರಕರ್ತರು
ಮೈಸೂರು ಜಿಲ್ಲಾ ಕನ್ನಡ ಜಾಗೃತಿ ಸಮಿತಿ ಸದಸ್ಯರು, ಮೈಸೂರು

- Advertisement -
- Advertisement -

Latest News

ಇದು ಇಂದಿನ ಹಾಸ್ಟೆಲ್ ಹುಡುಗ ಹುಡುಗಿಯರಿಗೆ ನಾವೆಲ್ಲ ಹೇಳಬೇಕಾದ ಖಾಸ್ ಬಾತ್

ಸರ್... ಓ ಸರ್...ಕಾಂಬಳೆ ಸರ್  ... ಸರ್ ನಮಸ್ಕಾರ್ರಿ ಆರಾಮ ಅದೀರಿ?? ನಾ ಯಾರ್ ಹೇಳ್ರಿ ಅನ್ನುತ್ತಿದ್ದಂತೆಯೇ ನಿವೃತ್ತಿ ಹೊಂದಿ ಐದಾರು ವರ್ಷ ಆಗಿದ್ದ ಬಿಸಿಎಮ್...
- Advertisement -

More Articles Like This

- Advertisement -
close
error: Content is protected !!
Join WhatsApp Group