spot_img
spot_img

ಕನ್ನಡದಲ್ಲಿಯೇ ಮೊದಲ ಪ್ರಯೋಗ: ನೂರೊಂದು ಲಘು ಕಥೆಗಳು

Must Read

- Advertisement -

ಲೇಖಕರು: ಶಂಭು ಮೇರವಾಡೆ

(ನವದೆಹಲಿಯ ಗಾಂಧಿ ಶಾಂತಿ ಪ್ರತಿಷ್ಠಾನ ಸಭಾಂಗಣದಲ್ಲಿ ದಿನಾಂಕ 10-03-2023 ರಂದು ‘ಭಾರತೀಯ ಭಾಷೆಗಳ ಸಮ್ಮೇಳನದಲ್ಲಿ, ನೂರೊಂದು ಲಘು ಕಥೆಗಳು ಕೃತಿಯು ಬಿಡುಗಡೆಯಾಗಲಿದೆ. ಈ ನಿಮಿತ್ತ ಕೃತಿಯ ಕುರಿತು ಕೆಲವು ಚಿಂತನೆಗಳು)

ಡಾ. ಎಸ್. ಬಿ. ಮೇರವಾಡೆ ಅವರು ಬರೆದ ಈ ಲಘುಕಥಾ ಸಂಕಲನಕ್ಕೆ ನಾಲ್ಕು ಮಾತು ಬರೆಯುವ ಅವಕಾಶ ದೊರೆತದ್ದು ನನಗೆ ಅತೀವ ಸಂತೋಷವನ್ನುಂಟು ಮಾಡಿದೆ. ಡಾ. ಮೇರವಾಡೆ ಗುರುಗಳ ಅಭಿನಂದನ  ಗ್ರಂಥಕ್ಕೆ ನನ್ನಿಂದ ಲೇಖನ ಬರೆಯಿಸಿದ ಡಾ. ಡೆಂಗನವರ ಗುರುಗಳ ಮೂಲಕ ಪರಿಚಿತರಾದ ಡಾ. ಮೇರವಾಡೆ  ಸರ್ ಅವರು ಹಿಂದಿ ಸಾಹಿತ್ಯವನ್ನು ಆಳವಾಗಿ ಅಧ್ಯಯನ ಮಾಡಿದವರು. ಮೈಥಿಲಿ ಶರಣ ಗುಪ್ತ ಮತ್ತು ಕುವೆಂಪು ಇಬ್ಬರು ಮಹಾಕವಿಗಳನ್ನು ಕುರಿತು ತೌಲನಿಕವಾಗಿ ಅಧ್ಯಯನ ಮಾಡಿ, ಹಿಂದಿ-ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಒಂದು ಸಂಚಲನವನ್ನುಂಟು ಮಾಡಿದವರು. ಜ್ಞಾನಯೋಗಿ ಪೂಜ್ಯ ಶ್ರೀ ಸಿದ್ಧೇಶ್ವರ ಮಹಾಸ್ವಾಮಿಗಳವರು ಈ ಕೃತಿಯನ್ನು ಕುರಿತು ತುಂಬ ಮೆಚ್ಚುಗೆಯ ಮಾತುಗಳನ್ನಾಡಿದ್ದು ಅವರ ಅಧ್ಯಯನ ವಿಚಕ್ಷಣತೆಗೆ ಸಾಕ್ಷಿಯಾಗಿದೆ.

- Advertisement -

ನಿವೃತ್ತಿಯ ನಂತರವೂ ಸೃಜನ ಪತ್ರಿಕೆ ಮೂಲಕ ಸದಾ ಕ್ರಿಯಾಶೀಲರಾಗಿರುವ ಡಾ. ಮೇರವಾಡೆ ಗುರುಗಳು ಇಂದಿನ ಅಧ್ಯಾಪಕ ಸಮೂಹಕ್ಕೆ ಆದರ್ಶಪ್ರಾಯರು. ನಿವೃತ್ತಿಯ ನಂತರವೂ ಪ್ರವೃತ್ತಿ ಮಾರ್ಗದಲ್ಲಿ ಸಾಗುತ್ತಿರುವ ಅವರ ಸಾಹಿತ್ಯ ಕೃಷಿ ನಿಜಕ್ಕೂ ಅಭಿನಂದನಾರ್ಹವಾದುದು. ಹಿಂದಿಯಲ್ಲಿರುವ ಅತ್ಯುತ್ತಮ ಕೃತಿಗಳನ್ನು ಕನ್ನಡ ಭಾಷೆಗೆ ತರುವ ಮಹಾಮಣಿಹದಲ್ಲಿ ಅವರು ಸರ್ವಾರ್ಪಣ ಮನೋಭಾವದಿಂದ ತೊಡಗಿಸಿಕೊಂಡಿದ್ದಾರೆ. ಇದರಿಂದ ಉಭಯ ಭಾಷಾ ಬಾಂಧವ್ಯ ಸೌಹಾರ್ದತೆ-ಭಾವೈಕ್ಯತೆಗಳು ಇಮ್ಮಡಿಗೊಳ್ಳುವುದರಲ್ಲಿ ಎರಡು ಮಾತಿಲ್ಲ.

ಹಿಂದಿ ಭಾಷೆಯಲ್ಲಿ ಅತ್ಯಂತ ಪ್ರವರ್ಧನಮಾನವಾಗಿರುವ ಲಘು ಕಥಾ ಸಾಹಿತ್ಯ ಕನ್ನಡದಲ್ಲಿ ಬೆಳೆದು ಬರಲಿಲ್ಲ ಎಂಬ ಕೊರಗು ಅವರನ್ನು ಕಾಡಿದ ಪರಿಣಾಮವೇ ಪ್ರಸ್ತುತ ಪ್ರಕಟವಾಗುತ್ತಿರುವ ಕಥಾ ಸಂಕಲನ.

ಕನ್ನಡಕ್ಕೆ ಸಾವಿರಾರು ವರ್ಷಗಳ ಪ್ರಾಚೀನ ಇತಿಹಾಸವಿದ್ದರೂ ವರ್ತಮಾನದಲ್ಲಿ ಸೃಜನಶೀಲತೆಯನ್ನು ಕಳೆದುಕೊಂಡು ಒಂದು ಬಗೆಯ ನಿರ್ವಾತ ಸ್ಥಿತಿಯಲ್ಲಿದೆ. ನವೋದಯ, ಪ್ರಗತಿಶೀಲ, ನವ್ಯ, ದಲಿತ ಬಂಡಾಯ ಮೊದಲಾದ ಸಾಹಿತ್ಯ ಚಳವಳಿಗಳು ಇಂದು ನಿಷ್ಕ್ರಿಯವಾಗಿ ಕನ್ನಡದಲ್ಲಿ ಹೊಸ ಬೆಳೆ ಬರುತ್ತಿಲ್ಲವೆಂಬ ಶೂನ್ಯಸ್ಥಿತಿ ನಿರ್ಮಾಣವಾಗಿದೆ. ಇಂಥ ಸಂಕ್ರಮಣ ಘಟ್ಟದಲ್ಲಿ ಡಾ. ಮೇರವಾಡೆ ಗುರುಗಳು ಹಿಂದಿಯ ಲಘುಕಥಾ ಸಾಹಿತ್ಯವನ್ನು ಕನ್ನಡದ ಜನತೆಗೆ ನೀಡುವ ಮೂಲಕ, ಕನ್ನಡದಲ್ಲಿಯೂ ಇಂಥದೊಂದು ಪ್ರಕಾರವನ್ನು ಸಮೃದ್ಧವಾಗಿ ಬೆಳೆಯಬಹುದು ಎಂದು ತೋರಿಸಿಕೊಟ್ಟಿದ್ದಾರೆ. 

- Advertisement -

ಕನ್ನಡದಲ್ಲಿ ೧೬ನೇ ಶತಮಾನದಲ್ಲಿಯೇ ಶಾಂತಲಿಂಗ ದೇಶಿಕ ಎಂಬ ಕವಿ ‘ಭೈರವೇಶ್ವರ ಕಾವ್ಯದ ಕಥಾಮಣಿ ಸೂತ್ರ ರತ್ನಾಕರ’ ಎಂಬ ಕೃತಿಯನ್ನು ರಚಿಸಿ, ಕೇವಲ ಒಂದು ಸೂತ್ರದಲ್ಲಿ ಇಡೀ ಕಥೆಯನ್ನು ಹೇಳುವ ಪ್ರಯೋಗ ಮಾಡಿರುವುದು ನಿಜಕ್ಕೂ ಕನ್ನಡಿಗರು ಅಭಿಮಾನ ಪಡುವ ಸಂಗತಿ.   ಇದು ನನ್ನ ದೃಷ್ಟಿಯಲ್ಲಿ ಕನ್ನಡದ ಮೊಟ್ಟ ಮೊದಲ ಲಘು ಕಥಾಸಾಹಿತ್ಯವೆಂದು ತಿಳಿದಿರುವೆ. ಆದರೆ ಮುಂದೆ ಇಂಥ ಪ್ರಯೋಗಗಳು ನಡೆಯಲಿಲ್ಲ. 

ಸಣ್ಣ ಕಥಾ ಸಾಹಿತ್ಯದ ಇತಿಹಾಸದ ಅವಲೋಕನ ಕುರಿತು ಡಾ. ಮೇರವಾಡೆ ಗುರುಗಳು ಪ್ರಸ್ತುತ ಕೃತಿಯ ಪ್ರಸ್ತಾವನೆಯಲ್ಲಿ ಸುದೀರ್ಘವಾಗಿ ವಿವೇಚಿಸಿದ್ದಾರೆ. ಅವರ ಪ್ರಸ್ತಾವನೆಗೆ ಪೂರಕವಾಗಿ ನಾನು ಕಥಾ ಸಾಹಿತ್ಯದ ಪ್ರಾಚೀನತೆಯ ಕುರಿತು ಕೆಲವು ಚಿಂತನೆಗಳನ್ನು ಇಲ್ಲಿ ಪ್ರಸ್ತಾಪಿಸುತ್ತಿರುವೆ.

ಭಾರತೀಯ ಸಾಹಿತ್ಯ ಇತಿಹಾಸದಲ್ಲಿ ಅತ್ಯಂತ ಮಹತ್ವದ ಪಾತ್ರ ವಹಿಸಿದ ಪ್ರಕಾರವೆಂದರೆ-ಕಥಾಸಾಹಿತ್ಯ ಪ್ರಕಾರ. ಪ್ರಾಚೀನ ಕಾಲದಿಂದಲೂ ಕಥಾಕಾಲಕ್ಷೇಪ ಕಾರಣವಾಗಿ ಹುಟ್ಟುತ್ತಲೇ ಇರುವ ಕಥಾ ಸಾಹಿತ್ಯ ಅದು ಅಜಾರಮರವಾದುದು. ಮನುಷ್ಯಕುಲದ ಮನರಂಜನೆಯ ಮಾಧ್ಯಮವಾಗಿ ಮೂರ್ತಸ್ವರೂಪ ಪಡೆದ ಕಥೆಗಳು ಬರಬರುತ್ತ ಮಾನವನ ಭಾವನಾಲೋಚನೆಗಳ ವಾಹಕವಾಗಿ ಪರಿಣಮಿಸಿದವು. ಮನುಷ್ಯನು ತನ್ನ ನಿಜಜೀವನದಲ್ಲಿ ಕಾಣಲಾಗದ್ದನ್ನು, ಸಾಧಿಸಲಾಗದ್ದನ್ನು, ಆಶೆ ಆಕಾಂಕ್ಷೆಗಳನ್ನೂ ಬೇಕು ಬೇಡಗಳನ್ನು, ಹಿಂಗಿಸಿಕೊಳ್ಳಲಾಗದ ಬೌದ್ಧಿಕ ಮತ್ತು ಕಲ್ಪನಾ ಕ್ಷುಧೆಗಳನ್ನು ಕಥಾಲೋಕದ ವಿಹಾರ ಯಾತ್ರೆಯ ಮೂಲಕ ನೀಗಿಕೊಂಡನು. 

ಆಧುನಿಕ ಯುಗದಲ್ಲಿ ನಾನಾ ಶಾಖೋಪಶಾಖೆಗಳಾಗಿ ಸರ್ವವ್ಯಾಪಕವಾಗಿ ಹರಡಿಕೊಂಡಿರುವ ಜ್ಞಾನವೃಕ್ಷದ ತಾಯಿ ಬೇರು ಕಥಾಗರ್ಭದಲ್ಲಿ ಹುದುಗಿಕೊಂಡಿದೆ. ಚರಿತ್ರೆ, ಭೂಗೋಳ, ತತ್ವ, ವಿಜ್ಞಾನ ಎಲ್ಲಕ್ಕೂ ಅದೇ ಉಸಿರಾಗಿ, ಅದೇ ನೆಲೆಯಾಗಿ ಇದ್ದಂಥ ಕಾಲವೊಂದಿತ್ತು. ಕಾಲಕ್ರಮೇಣ ಧರ್ಮೋಪದೇಶಕ್ಕೆ ಮತೀಯ ತತ್ವಗಳ ಪ್ರಸಾರಕ್ಕೆ ಮತ್ತು ಶೈಕ್ಷಣಿಕ ವ್ಯವಸ್ಥೆಗೆ ಅದು ಸಮರ್ಥ ಸಾರ್ಥಕ ಮಾಧ್ಯಮವಾಯಿತು. ನಾಡಿನ ಕಲ್ಯಾಣಕ್ಕಾಗಿ ಜನತೆಯ ಶ್ರೇಯಸ್ಸಿಗಾಗಿ ಸತ್ಯಧರ್ಮಗಳ ದಾರಿಯನ್ನು ತೋರಿಸಿ, ತಾವೂ ಅದೇ ಮಾರ್ಗದಲ್ಲಿ ನಡೆದ ಬುದ್ಧ-ಮಹಾವೀರಾದಿ ಮತಾಚಾರ್ಯರು ತಾವು ಕಂಡ ತತ್ವಗಳ ಪ್ರಸಾರಕ್ಕಾಗಿ ಸಾಮಾಜಿಕ ಶಿಕ್ಷಣಕ್ಕಾಗಿ ಕಥೆಯನ್ನಾಶ್ರಯಿಸಿದರು. ಮಂತ್ರ ಮಾಟ ಯಕ್ಷಿಣೀ ವಿದ್ಯೆ ಮೊದಲಾದ ಚಮತ್ಕಾರ ಜನಕವೂ ಅಮಾನುಷವೂ ಆದ ಅದ್ಭುತ ವಾತಾವರಣದಿಂದ ಕೂಡಿದ ಬಹುಜನಪ್ರಿಯವಾದ ಜಾನಪದ ಕಥೆಗಳನ್ನೂ, ಅವುಗಳ ಅನುಕರಣೆಯಿಂದ ಮತ್ತು ಸ್ವಕಪೋಲ ಕಲ್ಪನೆಯಿಂದ ಮೂಡಿದ ಕಥೆಗಳನ್ನೂ ಅವರು ತಮ್ಮ ಧ್ಯೇಯ ಸಾಧನೆಗೆ ಸಫಲವಾಗಿ ಬಳಸಿಕೊಂಡರು. ಈ ಕಥೆಗಳಲ್ಲಿ ಕಲ್ಪನಾಂಶ ಯಥೇಚ್ಛವಾಗಿರುವುದಾದರೂ ವಾಸ್ತವ ಸಂಗತಿಗಳೂ, ವ್ಯಕ್ತಿವಿಚಾರಗಳೂ, ಸಮಕಾಲೀನ ಸಾಮಾಜಿಕ ಚಿತ್ರಗಳೂ ಅಲ್ಲಿ ಗೈರುಹಾಜರೆಂದು ಹೇಳುವಂತಿಲ್ಲ. ನಡೆದ ಸಂಗತಿಗಳ ನೆಲಗಟ್ಟಿನ ಮೇಲೆ ಕಲ್ಪನೆಯ ಮಾಯಾಮಂಟಪವನ್ನು ನಿರ್ಮಿಸಿದರು. ತಾನು ಪೂಜಿಸುವ ದೇವರು ದೊಡ್ಡವನಾದಷ್ಟು ತನ್ನ ದೊಡ್ಡಸ್ತಿಕೆ ಏರುವುದಾದ್ದರಿಂದ, ಜನರು ಆ ದೇವರ ಸುತ್ತ ಅನೇಕ ಕಥೆಗಳನ್ನು ಹೆಣೆಯುತ್ತ ಬಂದರು.

ಬುದ್ಧ-ಮಹಾವೀರರ ಕಾಲಕ್ಕೆ ಅವರ ತತ್ವೋಪದೇಶವನ್ನು ಪ್ರಸಾರ ಮಾಡುವ ಉದ್ದೇಶದಿಂದ ಹುಟ್ಟಿಕೊಂಡ ಒಂದು ವಿಶಿಷ್ಟ ಪ್ರಕಾರವೇ ಕಥಾ ಸಾಹಿತ್ಯ. ವೇದ ಉಪನಿಷತ್ತುಗಳಲ್ಲಿ ಹುಟ್ಟಿಕೊಂಡ ಇಂಥ ಕಥೆಗಳು ರಾಮಾಯಣ ಮಹಾಭಾರತಗಳಲ್ಲಿ ವಿಜೃಂಭಿಸುತ್ತವೆ. ಮಹಾಭಾರತವಂತೂ ಒಂದು ಬೃಹತ್ಕಥಾಕೋಶವೇ ಆಗಿದೆ. ವ್ಯಾಸಕವಿಯು ತನ್ನ ಕಿವಿಯ ಮೇಲೆ ಬಿದ್ದ ಕಥೆಗಳನ್ನೆಲ್ಲ ಅದರಲ್ಲಿ ಸೇರಿಸುತ್ತ ಹೋಗಿದ್ದಾನೆ. ಅಥವಾ ಕಾಲಘಟ್ಟದಲ್ಲಿ ಉಳಿದವರು ಸೇರಿಸುತ್ತ ಬಂದಿದ್ದಾರೆ. ಅವುಗಳಲ್ಲಿ ಹಲವು ಕಥೆಗಳು ಜನಪದೀಯವಾದುವು. ರಮ್ಯ ಅದ್ಭುತವಾದ ಸಂಗತಿಗಳನ್ನು ಒಳಗೊಂಡಿರುವಂಥವುಗಳು. ಅವಿಚ್ಛಿನ್ನವಾದ ಕಥಾಪ್ರವಾಹ ಮಹಾಕಾವ್ಯದ ಒಂದು ಪ್ರಮುಖ ಲಕ್ಷಣವಾಗಿದೆ. ಕಥೆಗಳ ಜೋಡಣೆಯಿಂದ ಮಹಾಭಾರತ, ರಾಮಾಯಣ ಕೃತಿಗಳು ಇಂದಿಗೂ ಲಕ್ಷಾಂತರ ಓದುಗರ ಮನಸೆಳೆಯುತ್ತವೆ. ಅನುಪಲಬ್ಧವಾದ ಪೈಶಾಚೀ ಭಾಷೆಯ ಗುಣಾಢ್ಯನ ಬೃಹತ್ಕಥೆಯಂತು ಆಗಿನ ಕಾಲದ ಭಾರತದ ಮೂಲೆ ಮೂಲೆಗಳಲ್ಲಿ ನಾನಾ ಭಾಷೆಗಳಲ್ಲಿ ಪ್ರಚಲಿತವಾಗಿದ್ದ ಕಥೆಗಳ ಸಂಕಲನವಾಗಿತ್ತು. ಮುಂದಿನ ಕವಿಗಳಿಗೆ, ನಾಟಕಕಾರರಿಗೆ ಈ ಮೂರೂ ಮಹಾಕೃತಿಗಳು ಅಕ್ಷಯ ಆಕರಗಳಾಗಿವೆ.  

ಆರ್ಯರು ಭಾರತಕ್ಕೆ ಬರುವುದಕ್ಕೆ ಮೊದಲೇ ಭರತಖಂಡದಲ್ಲಿ ಉತ್ಕೃಷ್ಟವಾದ ಒಂದು ಸಂಸ್ಕೃತಿ ವಿಕಾಸಗೊಂಡಿತ್ತು, ವಿಶಿಷ್ಟವಾದ ಮತ ಧರ್ಮಗಳು ರೂಢಿಯಲ್ಲಿದ್ದವು, ವೈರಾಗ್ಯ ಅವುಗಳ ಪ್ರಮುಖ ಮೂಲ ಲಕ್ಷಣವಾಗಿತ್ತೆಂದು ವಿದ್ವಾಂಸರು ಅಭಿಪ್ರಾಯ ಪಡುತ್ತಾರೆ.  ಕರ್ಮ ಮತ್ತು ಜನ್ಮಾಂತರ ತತ್ವಗಳು ಈ ವೈರಾಗ್ಯಪರ ಕಥೆಗಳ ಉಗಮಕ್ಕೆ ಪ್ರಧಾನ ಕಾರಣವಾಗಿವೆ. ಆ ಸಮಯದಲ್ಲಿ ಬಹು ಜನಪ್ರಿಯವಾಗಿದ್ದ ಕತೆಗಳನ್ನು ತಾವು ಬೋಧಿಸಬೇಕಾಗಿದ್ದ ತತ್ವಗಳಿಗನುಗುಣವಾಗುವಂತೆ  ಬುದ್ಧ ಮಹಾವೀರರು ಅಥವಾ ಅವರ ಶಿಷ್ಯರು ಬದಲಾಯಿಸುತ್ತ ಬಂದಿದ್ದಾರೆ ಅಷ್ಟೇ ಅಲ್ಲ ಹೊಸ ಕಥೆಗಳನ್ನೂ ಸೃಷ್ಟಿಸಿದ್ದಾರೆ. ಕೆಲವು ಸಲ ಉಪಮಾನಗಳೇ ಕಥೆಗಳ ಉಗಮಕ್ಕೆ ಕಾರಣವಾಗುತ್ತವೆ. 

ಬುದ್ಧನ ಜಾತಕ ಕಥೆಗಳು, ಝೆನ್ ಕಥೆಗಳು ಲಘು ಕಥಾ ಸಾಹಿತ್ಯದ ಅಪರೂಪದ ಉದಾಹರಣೆಗಳಾಗಿ ನಮ್ಮ ಕಣ್ಣು ಮುಂದಿವೆ. ಕನ್ನಡದಲ್ಲಿ ಮಾತ್ರ ಈ ಪರಂಪರೆ ಬೆಳೆದು ಬರಲಿಲ್ಲ. ಈ ಕೊರತೆಯನ್ನು ನೀಗಿಸುವ ಹಿನ್ನೆಲೆಯಲ್ಲಿ ಡಾ. ಮೇರವಾಡೆ ಗುರುಗಳು ಈ ಕೃತಿಯ ಮೂಲಕ ಮೊದಲ ಪ್ರಯೋಗ ಮಾಡಿದ್ದಾರೆ. ಅವರ ಈ ಪ್ರಯತ್ನ ಮುಂದಿನ ಕನ್ನಡ ಲಘು ಕಥಾ ಸಾಹಿತ್ಯಕ್ಕೆ ನಾಂದಿ ಹಾಡಲಿ ಎಂದು ಆಶಿಸುವೆ. 

ಒಂದು ಸಣ್ಣ ಘಟನೆಯನ್ನು ಕುರಿತು, ಕೆಲವೆ ಶಬ್ದಗಳಲ್ಲಿ ಹೇಳುವುದು ಈ ಲಘು ಕಥಾ ಸಾಹಿತ್ಯದ ವೈಶಿಷ್ಟ್ಯವಾಗಿದೆ. ಡಾ. ಮೇರವಾಡೆ ಗುರುಗಳು ಹಿಂದಿಯಲ್ಲಿಯ ಅನೇಕ ಕಥೆಗಳ ಪ್ರೇರಣೆ ಪಡೆದು, ಕನ್ನಡದ ಹೊಸ ಸೃಷ್ಟಿಯೆನ್ನುವ ರೀತಿಯಲ್ಲಿ ಈ ಕಥೆಗಳನ್ನು ಹೆಣೆದಿದ್ದಾರೆ. ಒಂದು ನಿಮಿಷ ಅಥವಾ ಎರಡು ನಿಮಿಷದಲ್ಲಿ ಓದಬಹುದಾದ ಕಥೆಗಳಿವು. ಪ್ರಾರಂಭದಲ್ಲಿ ಕಥೆಯ ವಸ್ತು ಆಶಯ ನಮಗೆ ಗೋಚರವಾಗುತ್ತದೆ, ಕಥೆಯ ಓದಿನ ಕೊನೆಗೆ ಒಂದು ಬಗೆಯ ರೋಮಾಂಚನ ಅನುಭವವಾಗುತ್ತದೆ. ಕಥೆಯಲ್ಲಿ ಬರುವ ಘಟನೆಗಳೆಲ್ಲವು ನಮ್ಮ ವರ್ತಮಾನದಲ್ಲಿ ನಿತ್ಯ ನಡೆಯುವ ವಿಷಯವನ್ನೇ ಆಯ್ದುಕೊಂಡಿದ್ದರೂ, ಕಥೆಯ ಕೊನೆಯಲ್ಲಿ ಸಿಗುವ ಸಂದೇಶ ಓದುಗರಲ್ಲಿ ಒಂದು ಬಗೆಯ ಚಿಂತನೆಗೆ ತೊಡಗುವಂತೆ ಮಾಡುತ್ತದೆ. ಒಂದು ಉದಾಹರಣೆಗೆ ಹೇಳುವುದಾದರೆ, ದಂಪತಿಗಳಿಬ್ಬರೂ ಬೆಳಿಗ್ಗೆ ಹಾಲು ತೆಗೆದುಕೊಳ್ಳುವ ವಿಷಯದಲ್ಲಿ ವಿಪರೀತ ಜಗಳವಾಡಿ ಕೋರ್ಟಿಗೆ ಹೋಗಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸುತ್ತಾರೆ. ನ್ಯಾಯಾಧೀಶರು ವಿಚಾರಣೆ ಮಾಡಿ, ಆಸ್ತಿ ಭಾಗ ಮಾಡಬೇಕೆ? ಎನ್ನುತ್ತಾರೆ. ಆಗ ದಂಪತಿಗಳು ಇಬ್ಬರಿಗೂ ಸಮನಾಗಿ ಹಂಚಿ ಎನ್ನುತ್ತಾರೆ. ಹಾಗೆಯೇ ಅವರಿಗೆ ಒಬ್ಬ ಮಗನಿರುತ್ತಾನೆ. ಮಗನನ್ನು ಹೇಗೆ ಮಾಡುವುದು ಎಂದು ನ್ಯಾಯಾಧೀಶ ಕೇಳಿದಾಗ, ದಂಪತಿಗಳು ನಾವು ಮುಂದಿನ ವರುಷ ಬರುತ್ತೇವೆ ಎಂದು ಹೇಳಿ ಹೋಗುತ್ತಾರೆ. ಮುಂದಿನ ವರ್ಷದ ಹೊತ್ತಿಗೆ ಅವರಿಗೆ ಅವಳಿ ಜವಳಿ ಮಕ್ಕಳಾಗುತ್ತವೆ. ಹೀಗೆ ಅವರಿಗೆ ಒಟ್ಟು ಮೂರು ಮಕ್ಕಳಾಗುತ್ತವೆ. 

ಈ ಚಿಕ್ಕ ಕಥೆಯನ್ನು ಹೇಗೇ ಬೇಕಾದರೂ ವಿಶ್ಲೇಷಣೆಗೆ ಕೈಗೆತ್ತಿಕೊಳ್ಳುವ ವಿಮರ್ಶೆ ಮಾಡುವ ಅವಕಾಶಗಳು ಸಾಕಷ್ಟಿವೆ ಎಂಬುದನ್ನು ಗಮನಿಸಬೇಕು. ಇಷ್ಟು ಚಿಕ್ಕ ಕಥೆಯಲ್ಲಿ ದಂಪತಿಗಳು ನಿತ್ಯ ಜಗಳವಾಡುವ ಕಿರಿಕಿರಿ ಇದ್ದದ್ದೇ, ಇಂಥ ಜಗಳವಾಡುವ ದಂಪತಿಗಳಿಗೆ ಆಸ್ತಿಯಲ್ಲಿ ಸಮಪಾಲು ಬೇಕು, ಹಾಗೇ ಮಕ್ಕಳ ವಿಷಯದಲ್ಲಿಯೂ ಸಮಪಾಲು ಬೇಕಾಗಿದೆ. ಆದರೆ ಇದ್ದ ಒಬ್ಬ ಮಗನಿಗೆ ಬದಲಾಗಿ, ಇನ್ನೊಂದು ಮಗುವಾಗಲಿ ಎಂದು ಮರಳಿ ಸಂಸಾರ ಮಾಡಿದಾಗ, ಅವಳಿ ಜವಳಿ ಮಕ್ಕಳಾಗುವುದು, ಮಕ್ಕಳ ಸಂಖ್ಯೆ ಮೂರಾಗುವುದು, ಹೀಗೆ ಬದುಕಿನುದ್ದಕ್ಕೂ ಜಗಳಾಡುತ್ತಲೆ, ಸಂಸಾರ ಸಾಗರದಲ್ಲಿ ಸಾಗುವ ಈ ಜೀವನ ಯಾತ್ರೆಯ ಕುರಿತಾಗಿ ತುಂಬ ಸ್ವಾರಸ್ಯವಾದ ಅನುಭವ ಓದುಗರಿಗೆ ಆಗುತ್ತದೆ. 

ಇಂಥ ಅಪರೂಪದ ನೂರು ಕಥೆಗಳನ್ನು ಡಾ. ಮೇರವಾಡೆ ಗುರುಗಳು ಇಲ್ಲಿ ಕಟ್ಟಿಕೊಟ್ಟಿದ್ದಾರೆ. ಅವರ ಈ ಪ್ರಯತ್ನ ಸಮಸ್ತ ಕನ್ನಡಿಗರನ್ನು ತಲುಪಲಿ, ಈ ಲಘು ಕಥಾ ಸಾಹಿತ್ಯ ಪ್ರಪಂಚ ವಿಸ್ತಾರೋನ್ನತವಾಗಿ ಬೆಳೆಯಲಿ, ಇದರಿಂದ ಕನ್ನಡ ಸಾರಸ್ವತ ಲೋಕ ಸಿರಿವಂತಗೊಳ್ಳಲಿ ಎಂದು ಆಶಿಸುವೆ.


ಪ್ರಕಾಶ ಗಿರಿಮಲ್ಲನವರ

- Advertisement -
- Advertisement -

Latest News

ದಿನಕ್ಕೊಬ್ಬ ಶರಣ ಮಾಲಿಕೆ

ಕಿನ್ನರಿ ಬ್ರಹ್ಮಯ್ಯ ........................................... 12ನೇ ಶತಮಾನದ ಬಸವಾದಿ ಶಿವಶರಣರ ಕೀರ್ತಿವಾರ್ತೆಯನ್ನು ಕೇಳಿ ಪ್ರಭಾವಿತರಾಗಿ ನಾಡು ಹೊರನಾಡಿನಿಂದ ಅನೇಕ ಜನ ಶರಣರು ಕಲ್ಯಾಣಕ್ಕೆ ಬರಹತ್ತಿದರು. ಬಸವಣ್ಣನವರ ಸಮಕಾಲೀನರಾಗಿದ್ದ ಶರಣರಾದ ಗುಜರಾತದಿಂದ...
- Advertisement -

More Articles Like This

- Advertisement -
close
error: Content is protected !!
Join WhatsApp Group