ಸಿಂದಗಿ- ಶೃಂಗೇರಿ ಶಾರದಾ ಪೀಠದ ೩೭ ನೇ ಜಗದ್ಗುರು ಶ್ರೀ ಶ್ರೀ ವಿಧುಶೇಖರ ಭಾರತೀ ಮಹಾಸ್ವಾಮೀಜಿ ಅವರು ಕೈಗೊಂಡಿದ್ದ ವಿಜಯಯಾತ್ರೆಯಲ್ಲಿ ಮಾ.೨೦ ಮತ್ತು ೨೧ ರಂದು ಸಿಂದಗಿ ನಗರಕ್ಕೆ ಆಗಮಿಸಲಿದ್ದಾರೆ ಎಂದು ಸ್ಥಳೀಯ ಭೀಮಾಶಂಕರ ಮಠದ ಶ್ರೀ ಸದ್ಗುರು ದತ್ತಪ್ಪಯ್ಯ ಸ್ವಾಮಿಗಳು ತಿಳಿಸಿದರು.
ಪಟ್ಟಣದ ಶ್ರೀ ಭೀಮಾಶಂಕರ ಮಠದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಅಂದು ಶ್ರೀಮಠದಲ್ಲಿ ಪೂಜ್ಯರ ಅಮೃತ ಹಸ್ತದಿಂದ ಸುವರ್ಣ ಭಾರತೀಭವನದ ಶಿಲಾನ್ಯಾಸ ನೆರವೇರಲಿದೆ. ಮಾ. ೨೦ ರಂದು ಸಂಜೆ ೫ ಗಂಟೆಗೆ ಜಗದ್ಗುರುಗಳ ಪುರಪ್ರವೇಶ ವಿಜಯಪುರ ಬೈಪಾಸ್ ರಸ್ತೆಯಿಂದ ಶ್ರೀ ಸಂಗಮೇಶ್ವರ ದೇವಸ್ಥಾನದವರೆಗೆ ಬೈಕ್ ರ‍್ಯಾಲಿ ಮೂಲಕ ಜಗದ್ಗುರುಗಳಿಗೆ ಸ್ವಾಗತ ಸಂಜೆ ೬ ಗಂಟೆಗೆ ಶ್ರೀ ಸಂಗಮೇಶ್ವರ ದೇವಸ್ಥಾನದಿಂದ ಶ್ರೀಮಠದವರೆಗೆ ಶೋಭಾಯಾತ್ರೆ, ೬.೩೦ ಗಂಟೆಗೆ ಶ್ರೀಮಠದಲ್ಲಿ ಶ್ರೀ ಜಗದ್ಗುರುಗಳಿಗೆ ಪೂರ್ಣಕುಂಭ ಸ್ವಾಗತ, ೭ ಗಂಟೆಗೆ ಶ್ರೀಗಳಿಗೆ ಧೂಳಿ ಪಾದಪೂಜೆ ಹಾಗೂ ಭಿನ್ನವತ್ತಳೆ ಸಮರ್ಪಣೆ ಮತ್ತು ಅನುಗ್ರಹ ಭಾಷಣ ರಾತ್ರಿ ೮.೩೦ ಗಂಟೆಗೆ ಶ್ರೀಗಳಿಂದ ಶ್ರೀ ಶಾರದಾ ಚಂದ್ರಮೌಳೇಶ್ವರ ಪೂಜೆ ನಂತರ ಪ್ರಸಾದ ವಿತರಣೆ ಮಾ.೨೧ ರಂದು ಬೆಳಗ್ಗೆ ೭ ಗಂಟೆಗೆ ಸುಂದರಕಾಂಡ ಪಾರಾಯಣ ಪ್ರಾರಂಭ, ಬೆಳಗ್ಗೆ ೧೦ ಗಂಟೆಗೆ ಶ್ರೀಮಠದಲ್ಲಿ ನೂತನವಾಗಿ ನಿರ್ಮಾಣಗೊಳ್ಳಲಿರುವ ಸುವರ್ಣ ಭಾರತೀಭವನದ ಶಿಲಾನ್ಯಾಸ ಮತ್ತು ಭವನದ ನೀಲನಕ್ಷೆ ಅನಾವರಣ ಬೆಳಗ್ಗೆ ೧೧ ಗಂಟೆಗೆ ಶ್ರೀಗಳ ಉಪಸ್ಥಿತಿಯಲ್ಲಿ ಆಂಜನೇಯ ಮೂಲಮಂತ್ರ ಹೋಮ ಮತ್ತು ಪೂರ್ಣಾಹುತಿ, ಬೆಳಗ್ಗೆ ೧೨ ಗಂಟೆಗೆ ಶ್ರೀಮಠದಿಂದ ಜಗದ್ಗುರುಗಳ ಪಾದುಕಾ ಪೂಜೆ ಮತ್ತು ಗೌರವಾರ್ಪಣೆ ನಂತರ ಮಧ್ಯಾಹ್ನ ೧.೩೦ ಗಂಟೆಗೆ ಪಟ್ಟಣದ ಅನಂತಲಕ್ಷ್ಮಿ ಕಲ್ಯಾಣ ಮಂಟಪದಲ್ಲಿ ಮಹಾಪ್ರಸಾದ ನೆರವೆರಲಿದೆ. ಕಾರಣ ಶ್ರೀಮಠದ ಭಕ್ತ ವರ್ಗ ಮತ್ತು ಸಿಂದಗಿಯ ಮಹಾಜನತೆ ಎರಡು ದಿನಗಳ ಕಾರ್ಯಕ್ರಮದಲ್ಲಿ ಭಾಗಹಿಸಿಬೇಕು ಎಂದು ಕರೆ ನೀಡಿದರು.
ಪತ್ರಿಕಾ ಗೋಷ್ಠಿಯಲ್ಲಿ ಶ್ರೀನಿವಾಸ ಜೋಷಿ, ಶ್ರೀಧರ ಕುಲಕರ್ಣಿ ಸೇರಿದಂತೆ ಇತರರು ಇದ್ದರು.