spot_img
spot_img

ಸಮಾಜ ಸುಧಾರಕ ಬಸವಣ್ಣ

Must Read

- Advertisement -

ಸಮಾಜ ಸುಧಾರಕನಾಗಿದ್ದ ಭಕ್ತಿ ಭಂಡಾರಿ ಬಸವಣ್ಣ ಭಕ್ತಿ ಚಳವಳಿಯಲ್ಲಿ ಕನ್ನಡ ಕವಿಯಾಗಿದ್ದರು. ಬಸವಣ್ಣ ವಚನಗಳ ಮೂಲಕ ಸಾಮಾಜಿಕ ಅರಿವು ಮೂಡಿಸಲು ಮುಂದಾದರು. ಬಸವಣ್ಣನವರು ಲಿಂಗ ತಾರತಮ್ಯ, ಸಾಮಾಜಿಕ ತಾರತಮ್ಯ ಮೂಢನಂಬಿಕೆಗಳನ್ನು ನಿರಾಕರಿಸಿದರು. ಸಮಾಜದಲ್ಲಿ ಇಷ್ಟಲಿಂಗ ಹಾರವನ್ನು ಪರಿಚಯಿಸಿದರು (ಶಿವ ಲಿಂಗ) ಶಿವನ ಒಂದು ಭಕ್ತಿ ಒಂದು ನಿರಂತರ ಜ್ಞಾಪನೆ ಎಂದು ಇದನ್ನು ಎಲ್ಲರು ಧರಿಸಿ ಪೂಜಿಸಬಹುದು ಎಂದರು.

ಬಸವಣ್ಣನ ಪ್ರಕಾರ ಲಿಂಗಾಧರಣೆ ಯಾವುದೋ ಜಾತಿಗೆ ಸೀಮಿತವಾದುದಲ್ಲ, ಭಯ, ಭಕ್ತಿ ಇದ್ದವರ ಪಾಲಿಗೆ ಒಡವೆ ಎಂದು ಭಾವಿಸಿ ಶಿವಭಕ್ತನಾದ ಬಸವಣ್ಣನು ಶಿವನಿಗೆ ಆಕಾರವಿಲ್ಲ. ಅವನು ನಿರಾಭರಣ ಹಾಗಾಗಿ ಭೂಮಿಯಂತೆ ಆತನು ಎಂದು ಭಾವಿಸಿ ಭೂಮಿ ಗುಂಡಾಗಿ ಇರುವ ಕಾರಣ ಲಿಂಗವನ್ನು ಭೂಮಿ ಎಂದು ಭಾವಿಸಿ ಸಕಲ ಜೀವರಾಶಿಗಳೂ ಅದರಲ್ಲಿ ಅಡಗಿದೆ ಅದನ್ನು ಪೂಜಿಸುವುದರಿಂದ, ಪ್ರೀತಿಸುವುದರಿಂದ ಎಲ್ಲದರಲ್ಲಿಯೂ ಒಳಿತು ಕಾಣಬಹುದೆಂದು ತಿಳಿಹೇಳಿ, ಲಿಂಗಾಧರಣೆ ಮಾಡಿದರು. ಇಡೀ ತನ್ನ ಸಾಮ್ರಾಜ್ಯದ ಮುಖ್ಯಮಂತ್ರಿಯಾಗಿ, ಅವರು ಅನುಭವ ಮಂಟಪ( ಅಥವಾ, ‘ಆಧ್ಯಾತ್ಮಿಕ ಅನುಭವ) ಕಟ್ಟಿ ಇಲ್ಲಿ ಎಲ್ಲಾ ಸಾಮಾಜಿಕ-ಆರ್ಥಿಕ ಹಿನ್ನೆಲೆಯ ಪುರುಷ ಮತ್ತು ಮಹಿಳೆಯರು ಆಧ್ಯಾತ್ಮಿಕ ಮತ್ತು ಪ್ರಾಪಂಚಿಕ ನೆಲೆಗಳನ್ನು, ಪ್ರಶ್ನೆಗಳನ್ನು ಮುಕ್ತವಾಗಿ ಚರ್ಚಿಸಲು ಅವಕಾಶವಿದೆ ಎಂದು ಮುಕ್ತವಾಗಿ ಸ್ವಾಗತಿಸಿದರು.

ಬಸವಣ್ಣನವರು ಹನ್ನೆರಡನೆಯ ಶತಮಾನದಲ್ಲಿಯೇ ಪ್ರಜಾಪ್ರಭುತ್ವ ಕಟ್ಟುವ ಕೆಲಸ ಮಾಡಿದ್ದರು. ಪ್ರಜೆಗಳು ಎಂದರೆ ಜನರು ಪ್ರಭು ಎಂದರೆ ನಮ್ಮನ್ನ ಆಳುವವನು ಹಾಗಾಗಿ ಪ್ರಭುವಿನ ಆಯ್ಕೆ ಪ್ರಜೆಗಳ ಮೇಲೆಯೇ ನಿಂತಿರುತ್ತದೆ ಎಂಬುದನ್ನು ತಮ್ಮದೇ ದಾಟಿಯಲ್ಲಿ ಬಸವಣ್ಣನವರು ಮತ್ತು ಕಾಯಕ ಜೀವಿಗಳು ವಚನಗಳ ಮೂಲಕ ಸಾರಿದರು. ಹೆಣ್ಣು ಮನೆಯ ಹೊಸ್ತಿಲು ದಾಟಿದರೆ ತಪ್ಪೆಂದು ಭಾವಿಸುವ ಆ ಕಾಲದಲ್ಲಿ ಹೆಣ್ಣಿನ ನೋವುಗಳನ್ನರಿತು ಆಕೆಯ ವಿಚಾರಗಳನ್ನು ಗೌರವಿಸಿ ಮುಕ್ತವಾಗಿ ಆಕೆ ಅವುಗಳನ್ನು ಹಂಚಿಕೊಳ್ಳಲು ವೇದಿಕೆ ರೂಪಿಸಿಕೊಟ್ಟದ್ದು, ಅನುಭವಗಳ ಬುತ್ತಿಗಂಟನ್ನು ಬಿಚ್ಚಿಡಲು ಅನುಭವ ಮಂಟಪದಂತಹ ಮಹಾಮನೆಯನ್ನು ಪರಿಚಯಿಸಿದ್ದು ಬಸವಣ್ಣ ಎಂದು ಹೇಳಬಹುದು. ಯಾವುದೇ ಮೇಲು-ಕೀಳೆಂಬ ಭೇದ- ಭಾವವಿಲ್ಲದೆ ಎಲ್ಲ ಕಾಯಕ ಜೀವಿಗಳನ್ನು ಒಟ್ಟುಗೂಡಿಸಿ ಜಾತಿಸಂಕೋಲೆ ಮುರಿದು, ಕಾಯಕ ತತ್ವ ದೊಡ್ಡದೆಂದು ವಿಶ್ವಕ್ಕೆ ಸಾರಿದ್ದು ಬಸವಣ್ಣ, ಬ್ರಾಹ್ಮಣರಂತಹ ಸಮುದಾಯದಲ್ಲಿ ಜನಿಸಿದ್ದರೂ ಸಹ ಕೇವಲ ಜನಿವಾರ ಧರಿಸುವ ವಿಷಯಕ್ಕೆ ತನ್ನಕ್ಕನಿಗೆ ನೀಡದ ಜನಿವಾರ ನನಗೇಕೆ, ಗಂಡು-ಹೆಣ್ಣೆಂಬ ಭೇದ-ಭಾವವೇಕೆ ಎಂಬ ಪ್ರಶ್ನೆಯನ್ನಿಟ್ಟು ಹುಟ್ಟು ಮನೆತೊರೆದು ಧರ್ಮದ ಮೂಲ ಹುಡುಕಿದರು.

- Advertisement -

ಬಸವಣ್ಣ. ಬಸವಣ್ಣ ಎಂದೊಡನೆ ಲಿಂಗಾಯತ ‘ಧರ್ಮಕ್ಕೆ ಬಸವಣ್ಣನನ್ನು ಆತನ ನಿಲುವನ್ನು ನೋಡುವ ಮನಸ್ಥಿತಿಗಳಿವೆ ಆದರೆ ನಿಜವಾಗಿಯೂ ‘ಧರ್ಮ’ ಎಂದರೆ ‘ದಯೆ’ ದಯೆಯೇ ಧರ್ಮದ ಮೂಲವಯ್ಯ ಎಂದು ಸಾರುವ ಮೂಲಕ ಜನರನ್ನು ಜಾಗೃತಗೊಳಿಸುವ ಕಾಯಕ ಮಾಡಿದರು. ಇಂತಹ ಬಸವಣ್ಣನನ್ನು ಪ್ರಜ್ಞಾವಂತರು ಯಾವುದೋ ಧರ್ಮಕ್ಕೋ, ಜಾತಿಗೋ ಸೀಮಿತ ಮಾಡಿ ನೋಡುವುದನ್ನು ಬಿಟ್ಟು ಮಾನವ ಒಳಿತಿಗಾಗಿ ಮಿಡಿದ ಬಸವಣ್ಣನನ್ನು ಮಾನವತಾವಾದಿಯಾಗಿ ನೋಡಬೇಕಿದೆ. ಆ ನಿಟ್ಟಿನಲ್ಲಿ ಇತ್ತೀಚೆಗೆ ಕರ್ನಾಟಕ ಸರ್ಕಾರ ಇದೆಲ್ಲವನ್ನು ಸ್ಮರಿಸಿ ಬಸವಣ್ಣನನ್ನು ಕರುನಾಡಿನ ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದೆ. ಬಹುಶಃ ಬಸವಣ್ಣನನ್ನು ಸಾಂಸ್ಕೃತಿಕ ನಾಯಕ ಎಂದು ಕರೆಯುವ ಕಾರ್ಯ ಹಿಂದೆಯೇ ಆಗಬೇಕಿದ್ದು ತಡವಾಗಿಯಾದರೂ ಆಯಿತಲ್ಲ ಎಂಬುದು ನಮ್ಮ ಕರುನಾಡಿನ ಹೆಮ್ಮೆ ಎಂದು ನನಗನಿಸುತ್ತದೆ.

ಇಂತಹ ಬಸವಣ್ಣನನ್ನು, ಅವರ ವಿಚಾರಗಳನ್ನು ನಮ್ಮೊಳಗಿಳಿಸಿಕೊಳ್ಳಬೇಕಿದೆ. ವಚನ ಚಳವಳಿ ಮೂಲಕ ಸಮಾಜ ತಿದ್ದುವ ಕೆಲಸ ಮಾಡಿದ ಬಸವಣ್ಣನನ್ನು ಅವರ ವಿಚಾರಗಳನ್ನು ಪೂಜಿಸುವುದರ ಜೊತೆಗೆ ಗೌರವಿಸಬೇಕು. ಹಾಗೂ ನಮ್ಮ ಮನೆಯ ಮಕ್ಕಳು ಮತ್ತು ಮುಂದಿನ ಪೀಳಿಗೆಗೆ ಇಂತಹ ಮಹನೀಯರ ವಿಚಾರಗಳನ್ನು ಅವರ ಮಸ್ತಕದೊಳಗೆ ತುಂಬುವ ಕೆಲಸ ಮಾಡಬೇಕಿದೆ.
ಬಸವಣ್ಣ ಚಿಕ್ಕಂದಿನಿಂದಲೂ ವೈದಿಕ ಸಂಸ್ಕೃತಿಯ ಕರ್ಮಾಚರಣೆಗಳ ವಿರೋಧಿಯಾಗಿದ್ದರು ಎಂಬುದು ನಮ್ಮೆಲ್ಲರಿಗೂ ತಿಳಿದಿರುವ ಸಂಗತಿಯಾಗಿದೆ.

ಬಸವಣ್ಣನಿಗೆ ತನ್ನ ೮ನೇ ವಯಸ್ಸಿನಲ್ಲಿ ಬ್ರಾಹ್ಮಣ ಸಂಪ್ರದಾಯದಂತೆ ಜನಿವಾರ ಹಾಕಲು ಬಂದಾಗ, ಬಸವಣ್ಣನವರು ತನಗಿಂತ ಹಿರಿಯಳಾದ ಅಕ್ಕ ನಾಗಮ್ಮನಿಗೆ ಮೊದಲು ಕೊಡಲು ಕೇಳುತ್ತಾರೆ. ಆಗ ತಂದೆ, ತಾಯಿ ಅಲ್ಲಿ ನೆರೆದವರೆಲ್ಲರೂ ಇದು ಪುರುಷರಿಗೆ ಮಾತ್ರ ಕೊಡುವಂತಹುದು ಆದ್ದರಿಂದ ಅಕ್ಕನಿಗೆ ಕೊಡಲು ಬರುವುದಿಲ್ಲ ಎಂದು ಹೇಳಿದಾಗ, ಬಸವಣ್ಣ ಪುರುಷ-ಮಹಿಳೆ ಎಂಬ ಅಸಮಾನತೆಯನ್ನು ನಾನು ವಿರೋಧಿಸುತ್ತೇನೆ ಎನ್ನುತ್ತಾರೆ. ತನ್ನ ೨೧ ನೇ ವಯಸ್ಸಿನಲ್ಲಿ ಗುರುಕುಲದಲ್ಲಿ ಶಿಕ್ಷಣವನ್ನು ಮುಗಿಸುತ್ತಾರೆ. ಸಮಾಜದಲ್ಲಿ ನುಸುಳಿದ್ದ ಅಜ್ಞಾನ, ಅಂಧಕಾರ, ಜಾತಿವಾದ, ಅತ್ಯಾಧುನಿಕತೆ ಮತ್ತು ಅಸ್ಪೃಶ್ಯತೆಯನ್ನು ಕಂಡು ಬಸವಣ್ಣನವರು ತೀವ್ರ ದುಃಖಿತರಾಗುತ್ತಾರೆ. ಅವರು ಸಮಾಜದ ಕುರಿತಾಗಿ ಕಾಳಜಿ ಹೊಂದಿದವರಾಗಿದ್ದು ಅಳವಾದ ಚಿಂತಕರಾಗಿದ್ದರು. ಅವರು ಸಾಮಾಜಿಕ ಹೊಂದಾಣಿಕೆ ಮತ್ತು ಚಿಂತನೆಯಲ್ಲಿ ಪ್ರಮುಖ ಬದಲಾವಣೆಗಳನ್ನು ತರಲು ನಿರ್ಧರಿಸಿ ಕೂಡಲಸಂಗಮಕ್ಕೆ ಹೊರಡುತ್ತಾರೆ. ರಾಜ ಬಿಜ್ಜಳರ ಆಸ್ಥಾನದಲ್ಲಿ ಮುಖ್ಯಮಂತ್ರಿಯಾಗಿದ್ದ ಬಸವಣ್ಣನವರು ಜನಪ್ರಿಯ ಮಂತ್ರಿಯಾಗಿದ್ದರು. ಧೈರ್ಯಶಾಲಿ, ಕರುಣಾಮಯಿ, ಉದಾತ್ತ, ಸಾಧಾರಣ, ಸರಳ ಸಜ್ಜನಿಕೆಯ ವ್ಯಕ್ತಿತ್ವ ಮತ್ತು ತುಂಬಾ ಪ್ರೀತಿಯಿಂದ ಎಲ್ಲರನ್ನು ಕಾಣುತ್ತಿದ್ದರು.

- Advertisement -

“ಉಳ್ಳವರು ಶಿವಾಲಯವ ಕಟ್ಟುವರು ನಾನೇನು ಮಾಡಲಿ ಬಡವನಯ್ಯಾ, ಎನ್ನ ಕಾಲೇ ಕಂಬ, ದೇಹವೇ ದೇಗುಲ, ಶಿರ ಹೊನ್ನ ಕಲಶವಯ್ಯಾ ಕೂಡಲಸಂಗಮದೇವ ಕೇಳಾ ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ” ಎಂಬ ವಚನವು ಸರ್ವಕಾಲಕ್ಕೂ ಶ್ರೇಷ್ಠವಾದದ್ದು ಮತ್ತು ಅನ್ವಯಿಸುವಂತದ್ದು ಏಕೆಂದರೆ ಸಮಾಜವು ಅಸಮಾನತೆಯಿಂದ ನಾನು, ನಾನು ಎಂದು ಮೆರೆಯುವಾಗ, ಉಳ್ಳವರು ಬೇಕಾದದ್ದು ಮಾಡಿದರೆ ಇಲ್ಲದವರು ಅವರು ಮಾಡಿದ್ದನ್ನು ನೋಡುತ್ತಾ ನೀನೇ ಪರಮದೈವವೆಂದು ಕೈಕಟ್ಟಿ ಕುಳಿತುಕೊಳ್ಳುವ, ಉಳ್ಳವರು ಹೇಳಿದ್ದನ್ನು ಮಾಡುವ ವ್ಯವಸ್ಥೆ ಇದ್ದದ್ದನ್ನು ಕಂಡು ಬಸವಣ್ಣ ಉಳ್ಳವರು ಶಿವಾಲಯವ ಕಟ್ಟುವರು ನಾನೇನು ಮಾಡಲಿ ಬಡವನಯ್ಯಾ ಎಂದು ಕುಳಿತುಕೊಳ್ಳದೆ ನನ್ನ ಕಾಲು ಕಂಬ, ದೇಹ ದೇಗುಲ ಎಂದು ತಿಳಿದು ಶಿರವೇ ಕಲಶವೆಂದು ಭಾವಿಸಿ ಕಾಯಕದಿಂದ ಜೀವಿಸಿ ಬದುಕು ಕಟ್ಟಿಕೊಳ್ಳಬೇಕು ಮತ್ತು ಸ್ಥಾವರ ಎಂದರೆ ಜಡವಾದದ್ದು ಅದಕ್ಕೆ ಅಳಿವುಂಟು ಹಾಗಾಗಿ ಜಂಗಮಕ್ಕಳಿವಿಲ್ಲ ಎಂದರೆ ಚೈತನ್ಯ, ದೈವಸ್ವರೂಪಿ ಸತ್ಯ ಸತ್ಯವನ್ನು ಸಾರುವ, ಬೋಧಿಸುವವನಿಗೆ ಅಳಿವಿಲ್ಲ ಒಳ್ಳೆಯ ವಿಚಾರಗಳನ್ನು ಸಂಚರಿಸಿ ಬಿತ್ತುವುದಕ್ಕೆ ಆಳಿವಿಲ್ಲ ಎಂಬುದಾಗಿ ಬಸವಣ್ಣ ದುಡಿದು ತಿನ್ನುವ ಮಾರ್ಗವನ್ನು ಮತ್ತು ಸತ್ಯಕ್ಕೆ ಸಾವಿಲ್ಲ ಎಂಬುದನ್ನು ಸಾರುತ್ತಾರೆ. ಇದಾದ ನಂತರ ಅನುಭವ ಮಂಟಪದಲ್ಲಿ ಕಾಯಕ ಸಮುದಾಯಗಳಿಗೆಲ್ಲ ಆಹ್ವಾನ ನೀಡಿ ಎಲ್ಲರನ್ನು ಪ್ರೀತಿಯಿಂದ ಕಾಣುತ್ತಾರೆ. ‘ಕಾಯಕವೇ ಕೈಲಾಸ’ ಎಂದ ತಕ್ಷಣ ನೆನಪಿಗೆ ಬರುವವರು- ಬಸವಣ್ಣನವರು. ಹನ್ನೆರಡನೆಯ ಶತಮಾನದಲ್ಲಿ ಅವರು ಆಡುಭಾಷೆಯಲ್ಲಿ, ಜನಸಾಮಾನ್ಯರಿಗೂ ಅರ್ಥವಾಗುವ ದಿಸೆಯಲ್ಲಿ ರಚಿಸಿದ ಅವರ ವಚನಗಳು ಇಂದಿನ ಆಧುನಿಕ ಯುಗದಲ್ಲೂ ಪ್ರಸ್ತುತತೆ ಸಾರುತ್ತವೆ ಎನ್ನಬಹುದು.

ಒಟ್ಟಾರೆಯಾಗಿ ಮನದ ಮೈಲಿಗೆಯನ್ನು ವಚನ ಕ್ರಾಂತಿಯ ಮೂಲಕ ಶುದ್ಧೀಕರಿಸಿದ ಮಹಾಪುರುಷ, ಕಾಯಕ ತತ್ವ ಸಾರಿದ ಕರ್ನಾಟಕದ ಮಾರ್ಟೀನ್ ಲೂಥರ್, ಮುರಿದ ಮನಸ್ಸುಗಳನ್ನು ಕಟ್ಟಲು ಶ್ರಮಿಸಿದ ಮಹಾಮಾನವತಾವಾದಿ…ಅನುಭವಮಂಟಪವೆಂಬ ಮಹಾಮನೆ ಕಟ್ಟಿ ಹೊಸ್ತಿಲ ಒಳಗೆ ಹೆಣ್ಣಿನ ಬದುಕು ಸೀಮಿತ ಎನ್ನುವ ಕಾಲದಲ್ಲಿ ಹೆಣ್ಣಿನ ವಿಚಾರಗಳಿಗೂ ವೇದಿಕೆ ಕಲ್ಪಿಸಿಕೊಟ್ಟ ವಿಶ್ವಗುರು. ವಚನ ಚಳವಳಿ ಮೂಲಕ ಸಮಾಜಕ್ಕೆ ಅಂಟಿದ್ದ ಕಿಲುಬು ಕಿತ್ತೆಸೆಯಲು ಶ್ರಮಿಸಿದ ಭಕ್ತಿಭಂಡಾರಿ.ಹುಟ್ಟು ಬ್ರಾಹ್ಮಣನಾದರೂ ಜನಿವಾರ ಧರಿಸುವ ವಿಚಾರಕ್ಕೆ ತನ್ನ ಅಕ್ಕನಿಗೆ ನೀಡದ ಜನಿವಾರ ನನಗೇಕೆ ? ತಾರತಮ್ಯ ಸಲ್ಲದು ಎಂದು ಜಾತಿಸಂಕೋಲೆ ಮುರಿದು ಕಾಯಕ ಮನಸ್ಸುಗಳನ್ನು ಕೂಡಿಸಿದ ತತ್ವಜ್ಞಾನಿ. ಇಂತಹ ಜ್ಞಾನಿಯನ್ನು ಜಾತಿಗೆ ಧರ್ಮಕ್ಕೆ ಸೀಮಿತ ಮಾಡುವ ಮನಸ್ಸುಗಳಿಗೆ ಅಂಟಿದ ಜಿಡ್ಡು ತೊಳೆಯಬೇಕಿದೆ.

ಧರ್ಮವೆಂದರೆ ದಯೆ ಎಂದು ಸಾರಿದ ಮಹಾಮಹಿಮನಿಗೆ ನಮನ. ಈ ದಿನ ಪಾಂಡವರಿಗೆ ಶ್ರೀಕೃಷ್ಣ ಅಕ್ಷಯ ಪಾತ್ರೆ ನೀಡಿದ ದಿನವಾಗಿದ್ದರಿಂದ ಅಕ್ಷಯ ತೃತೀಯವೆಂದು ಸಹ ಕರೆಯಲಾಗುತ್ತದೆ. ಬಸವ ಜಯಂತಿ ಮತ್ತು ಅಕ್ಷಯ ತೃತೀಯ ದಿನದ ಶುಭಾಶಯಗಳು.”ಪ್ರೀತಿಯಿಂದ ನೀವು ಹೇಳಿ ಬಸವಣ್ಣ ಕರುನಾಡಿನ ಸಾಂಸ್ಕೃತಿಕ ನಾಯಕ ಎಂದು.

ಜೈ ಬಸವಣ್ಣ.

ಡಾ ಮೇಘನ ಜಿ
ಉಪನ್ಯಾಸಕರು

- Advertisement -
- Advertisement -

Latest News

ಸಮಾಜದಲ್ಲಿ ಹೆಣ್ಣು ಮಕ್ಕಳಿಗೆ ಸಮಾನತೆ ದೊರಕಬೇಕು- ಸಿಡಿಪಿಓ ಶ್ವೇತಾ

ಮೈಸೂರು ನಗರ ವರ್ತಲ ರಸ್ತೆಯಲ್ಲಿರುವ ಮಾರ್ವೆಲ್ ಪದವಿ ಪೂರ್ವ ಕಾಲೇಜಿನಲ್ಲಿ ಇಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ...
- Advertisement -

More Articles Like This

- Advertisement -
close
error: Content is protected !!
Join WhatsApp Group