ಹಾಸನ ನಗರದ ಪೌರಾಣಿಕ ರಂಗ ಚಟುವಟಿಕೆಯಲ್ಲಿ ಜೆ..ಓ.ಮಹಾಂತಪ್ಪರವರದು ನೇಪಥ್ಯದ ಧನ ಸಹಾಯದ ಪಾತ್ರ. ಹಿಂದೊಮ್ಮೆ ವಾಲ್ಮೀಕಿ ಜಯಂತಿ ಅಂಗವಾಗಿ ದಿವಂಗತ ದೊಡ್ಡಗೇಣಿಗೆರೆ ರಂಗಪ್ಪದಾಸರು ಇವರಿಗಾಗಿಯೇ ವಾಲ್ಮೀಕಿ ಪಾತ್ರ ಸೃಷ್ಟಿಸಿ ವಾಲ್ಮೀಕಿ ಪಾತ್ರದಲ್ಲಿ ರಂಗದ ಮೇಲೆ ಇವರನ್ನು ತಂದಿದ್ದರು. ವಾಲ್ಮೀಕಿ ಜನಾಂಗದ ಜಿಲ್ಲಾಧ್ಯಕ್ಷರಾಗಿ, ವಾಲ್ಮೀಕಿ ಮಠದ ಟ್ರಸ್ಟಿಯಾಗಿದ್ದ ಇವರು ಹಾಸನದಲ್ಲಿ ವಿಶ್ವ ಮಾನವ ಬಂಧುತ್ವ ಕಛೇರಿ ತೆರೆದು ಆ ಮೂಲಕ ಸಂಘ ಸಂಸ್ಥೆಗಳಿಗೆ ಉಚಿತವಾಗಿ ಸಭೆ ಸಮಾರಂಭ ನಡೆಸಲು ಅನುಕೂಲ ಕಲ್ಪಿಸಿದ್ದರು. ಇವರ ಸಮಾಜ ಸೇವೆಯ ಹಿಂದೆ ತಾವು ಬಾಲ್ಯದಲ್ಲಿ ಕಂಡ ಬಡತನ ಬದುಕಿನ ನೋವಿನ ಸೆಲೆಯಿತ್ತು. ಮೂಲತ: ಚಿತ್ರದುರ್ಗ ತಾಲೂಕಿನ ಚಿಕ್ಕಗೊಂಡನಹಳ್ಳಿಯ ಕೂಲಿ ಕುಟುಂಬದಲ್ಲಿ ಜನಿಸಿದ ಇವರ ತಂದೆ ಗಟ್ಟಿಓಬಯ್ಯ. ತಾಯಿ ತಿಪ್ಪಮ್ಮ. ಇವರ ಬಾಲ್ಯದ ವಿದ್ಯಾಭ್ಯಾಸ ಹುಟ್ಟೂರಿನಲ್ಲಿ. ಪ್ರೌಢಶಾಲೆ ಜಗಳೂರಿನಲಿ ಮತ್ತು ಕಾಲೇಜು ವ್ಯಾಸಂಗ ದಾವಣಗೆರೆಯಲ್ಲಿ ಆಗಿದೆ.
ಕಡು ಬಡತನದ ಬೇಗೆಯಲ್ಲಿ ಬಳಲಿದ್ದ ಇವರು ೧೯೭೨ರಲ್ಲಿ ಹಾಸನಕ್ಕೆ ಬಂದು ಪರಿಚಯಸ್ಥರಿಲ್ಲದ ಊರಿನಲ್ಲಿ ಕೂಲಿ ಕೆಲಸ ಮಾಡಿದರು. ಅಂಬಾಸಿಡರ್‌ನಲ್ಲಿ ಟೈಲರಿಂಗ್ ಬಟ್ಟೆ ಹೊಲಿದರು. ಲಕ್ಷ್ಮಿ ರೇಡಿಯೋಸ್‌ನಲ್ಲಿ ರೇಡಿಯೋ ರಿಪೇರಿ, ಸತ್ಯ ವಾಚ್ ವಕ್ಸ೯ನಲ್ಲಿ ವಾಚ್ ರಿಪೇರಿ, ದರ್ಶನ್ ಡ್ರೈನ್ ಕ್ಲೀನಿಂಗ್‌ನಲ್ಲಿ ಜಿಗ್ ಜಾಗ್ ಕೆಲಸ ಮಾಡಿದರು. ನೂರ್ ಆರ್ಟ್ಸ ನಲ್ಲಿ ಗೋಡೆಗೆ ನಾಮಫಲಕ ಬರೆದರು. ಅಂದಿನ ದಿನಗಳಲ್ಲಿ ಇವರ ದಿನನಿತ್ಯದ ಆಹಾರ ಬೀದಿ ಬದಿಯ ಹಲಸಿನ ತೊಳೆ, ಕಾಕಾ ಅಂಗಡಿಯ ಟೀ ಬೋಂಡಾ. ಮಲಗುತ್ತಿದ್ದಿದ್ದು ಯಾವುದೋ ಶಾಲೆಯ ಜಗುಲಿಯಲ್ಲಿ. ಹಳೆಯ ನ್ಯೂಸ್ ಪೇಪರ್ ಇವರಿಗೆ ಹಾಸಿಗೆ. ಎರಡು ಕೈಗಳೇ ದಿಂಬು. ಇದು ಅಂದಿನ ಮೂರು ತಿಂಗಳ ಇವರ ವಾಸ್ತವೈದ ವಾಸ್ತವ ಜೀವನ. ನಂತರದಲ್ಲಿ ಇವರು ಸಣ್ಣ ಕೈಗಾರಿಕೋದ್ಯಮಿಯಾಗಿ ಬೆಳೆದಿದ್ದು ಬದುಕು ಅರಿಯುವವರಿಗೆ ಪಠ್ಯದಲ್ಲಿ ಲಭ್ಯವಿಲ್ಲದ ಇವರ ಬದುಕೇ ಒಂದು ಜೀವನ ಪಾಠ.
ಹಾಸನಕ್ಕೆ ಬಂದು ಮೂರು ತಿಂಗಳು ಪುಟ್‌ಪಾತ್ ಬದುಕು ನಡೆಸಿ ನಂತರ ಅಶೋಕ ಹೋಟೆಲ್‌ನಲ್ಲಿ ದಿನಕ್ಕೆ ೪ ರೂ. ಸಂಬಳಕ್ಕೆ ದಿನಗೂಲಿಯಾಗಿ ಕೆಲಸಕ್ಕೆ ಸೇರುತ್ತಾರೆ. ಅಲ್ಲಿ ಐಎನ್‌ಟಿಯುಸಿ ಉಪಾಧ್ಯಕ್ಷರಾಗಿ ನಂತರ ಅಧ್ಯಕ್ಷರಾಗಿ ಕಾರ್ಮಿಕ ಕಲ್ಯಾಣ ನಿರ್ದೇಶಕರಾಗಿ ಸಾಮಾಜಿಕ ಸೇವೆಗೆ ತೊಡಗಿಸಿಕೊಳ್ಳುತ್ತಾರೆ. ಇಲ್ಲಿಯ ಕಾರ್ಮಿಕರಿಗೆ ಅಡಿಗೆ ಅನಿಲ, ಮಕ್ಕಳಿಗೆ ಪುಸ್ತಕ, ಆಟಿಕೆ ಪರಿಕರಗಳು, ಸಾಂಸ್ಕೃತಿಕ ಕಾರ್ಯಕ್ರಮ ರೂಪಿಸಿ ಕಾರ್ಮಿಕರಿಗಾಗಿ ಅಶೋಕ ಕಾಲೋನಿ ಎಂಬ ಸಂಸ್ಥೆ ಹುಟ್ಟು ಹಾಕಿ ೫೦ x ೩೦ ಅಡಿ ನಿವೇಶನವನ್ನು ೨೧ ಸಾವಿರ ರೂ. ನೀಡಿ ಖರೀದಿಸಿ ನೀಡಿದ್ದ ಹೆಗ್ಗಳಿಕೆ ಇವರದು.
ಇವರ ನನ್ನ ಪರಿಚಯ ಸುಮಾರು ೧೫ ವರ್ಷಗಳ ಹಿಂದಕ್ಕೆ ಸರಿಯುತ್ತದೆ. ಇವರ ಬಗ್ಗೆ ಕೊಂಚ ಕೇಳಿ ತಿಳಿದಿದ್ದ ನಾನು ನಾಯಕರಹಳ್ಳಿ ಮಂಜೇಗೌಡರಿಗೆ ಪರಿಚಯಿಸಿದ್ದೆ. ಆ ವೇಳೆ ಮಂಜೇಗೌಡರು ವಚನ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರಾಗಿ ಹೈದರಾಬಾದಿನಲ್ಲಿ ವಚನ ಸಮ್ಮೇಳನ ಸಂಘಟಿಸಿದ್ದರು. ಸಮ್ಮೇಳನಾಧ್ಯಕ್ಷರು ಸಾಹಿತ್ಯ ಪರಿಚಾರಕ ದಿವಂಗತ ತಿ.ರಾಮಕೃಷ್ಣಯ್ಯ ನವರು
ಇಲ್ಲಿಗೆ ನಾವು ಹಾಸನದಿಂದ ನೂರಾರು ಸಾಹಿತಿ ಕಲಾವಿದರು ರೈಲಿನಲ್ಲಿ ಪಯಣಿಸಿದೆವು. ಅಲ್ಲಿ ಇವರಿಗೆ ಭಾರತ ಜ್ಯೋತಿ ಪ್ರಶಸ್ತಿ ಪ್ರದಾನ ಮಾಡಿ ಅಲ್ಲಿಂದ ಈಚೆಗೆ ಜೆ.ಓ.ಮಹಾಂತಪ್ಪ ಹಾಸನದ ಆಶಾ ಜ್ಯೋತಿಯಾಗಿ ಬೆಳಗಿದ್ದಾರೆ. ಕಲಾಭವನದಲ್ಲಿ ನಡೆಯುತ್ತಿದ್ದ ಪೌರಾಣಿಕ ನಾಟಕಗಳ ಕರಪತ್ರದಲ್ಲಿ ಇವರ ಹೆಸರು ಇರುತ್ತಿತ್ತು. ಕಲಾ ಸಂಸ್ಥೆಗಳಿಗೆ ತಮ್ಮ ಕೈಲಾದ ಧನಸಹಾಯ ನೀಡಿ ಪ್ರೋತ್ಸಾಹಿಸುತ್ತಿದ್ದರು. ಇವರ ಕನಸಿನ ಮಾನವ ಬಂಧುತ್ವ ವೇದಿಕೆ ಕಛೇರಿಗೆ ಪ್ರಾರಂಭದಲ್ಲಿ ಸಾರ್ವಜನಿಕರಿಗೆ ಓದಲು ಪತ್ರಿಕೆ ತರಿಸುತ್ತಿದ್ದರು. ಇಲ್ಲಿ ಲೈಬ್ರರಿ ಸ್ಥಾಪಿಸಬೇಕೆಂದು ಆಸೆ ವ್ಯಕ್ತಪಡಿಸಿ ಅನಂತರಾಜು, ನಿಮ್ಮಲ್ಲಿರುವ ಪುಸ್ತಕಗಳನ್ನು ಎರವಲು ಕೊಡಿ ಎಂದರು. ನಾನು ನೂರು ಪುಸ್ತಕಗಳನ್ನು ನೀಡಿದ್ದೆ. ಇಲ್ಲಿ ಅವಾರ್ಡ್ ಸಿನಿಮಾ ಕೌದಿ ಪ್ರದರ್ಶಿಸಿದ್ದೆವು. ಹಾಸನ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದ ಇವರ ಅವಧಿಯಲ್ಲಿ ಯಲಗುಂದ ಗ್ರಾಮದಲ್ಲಿ ೫ನೇ ತಾಲ್ಲೂಕು ಸಾಹಿತ್ಯ ಸಮ್ಮೇಳನ ೨೦೧೮ರಲ್ಲಿ ನಡೆದಿತ್ತು. ಈ ಸಮ್ಮೆಳನದ ಅಧ್ಯಕ್ಷನಾಗುವ ಸೌಭಾಗ್ಯ ನನಗೆ ದೊರಕಿತ್ತು. ಗ್ರಾಮೀಣ ಭಾಗದಲ್ಲಿ ಸಾವಿರಾರು ಜನಸಾಮಾನ್ಯರ ಕನ್ನಡ ಜಾತ್ರೆಯಂತೆ ಸಮ್ಮೇಳನ ನಡೆದಿತ್ತು. ಹಾಸನ ನಗರ ಕೇಂದ್ರ ಗ್ರಂಥಾಲಯ ಸಮಿತಿಗೆ ಇವರನ್ನು ಸದಸ್ಯರನ್ನಾಗಿ ಮಾಡಿಕೊಳ್ಳಲು ಹಿಂದೊಮ್ಮೆ ನಾನು ನೀಡಿದ್ದ ಸಲಹೆ ಕಾರ್ಯಗತವಾಗಿ ಇವರ ಅವಧಿಯಲ್ಲಿ ಹಾಸನ ನಗರ ೨೯ನೇ ವಾರ್ಡಿನಲ್ಲಿ ೮೦ ಅಡಿ ರಸ್ತೆಯಲ್ಲಿ ಅಬ್ದುಲ್ ಕಲಾಂ ಪಾರ್ಕ್ ಸಮೀಪ ನಗರ ಸಭೆ ನಿರ್ಮಿಸಿದ್ದ ಕಟ್ಟಡವನ್ನು ಲೈಬ್ರರಿ ಸ್ಥಾಪನೆಗೆ ಗ್ರಂಥಾಲಯ ಇಲಾಖೆಗೆ ಹಸ್ತಾಂತಸಲು ಮನವಿ ಮಾಡಿದ್ದವು. ಹಾಲಿ ಈ ಖಾಲಿ ಕಟ್ಟಡ ಯಾವುದಕ್ಕೂ ಬಳಕೆಯಾಗದೇ ಹಾಳು ಬೀಳುತ್ತಿದ್ದು ಈಗಾಲಾದರೂ ಗ್ರಂಥಾಲಯ ಇಲಾಖೆಗೆ ಹಸ್ತಾಂತರಿಸಿ ಲೈಬ್ರರಿ ಸ್ಥಾಪಿಸಬೇಕಿದೆ. ಮಹಾಂತಪ್ಪನವರ ಸಮಾಜ ಸೇವೆ ಗುರುತಿಸಿ ಜಿಲ್ಲಾಡಳಿತ ರಾಜ್ಯೋತ್ಸವ ಪ್ರಶಸ್ತಿ ನೀಡಿ ಸನ್ಮಾನಿಸಿದೆ. ರಾಜ್ಯ ಸರ್ಕಾರ ಕಳೆದ ವರ್ಷ ವಾಲ್ಮೀಕಿ ಪ್ರಶಸ್ತಿ ನೀಡಿ ಗೌರವಿಸಿದೆ. ಇಂದು ನಮ್ಮನ್ನು ಅಗಲಿರುವ ಮಹಾಂತಪ್ಪನವರ ಸಮಾಜಮುಖಿ ಚಿಂತನೆಗಳು ನಮಗೆಲ್ಲಾ ಮಾದರಿಯೇ ಸರಿ.
ಗೊರೂರು ಅನಂತರಾಜು.
ಹಾಸನ.
ಮೊ: ೯೪೪೯೪೬೨೯೭೯.
ವಿಳಾಸ: ಹುಣಸಿನಕೆರೆ ಬಡಾವನೆ, ೨೯ನೇ ವಾರ್ಡ್,
ಶ್ರೀ ಶನೀಶ್ವರ ದೇವಸ್ಥಾನ ರಸ್ತೆ, ಹಾಸನ-೫೭೩೨೦೧.